ಬಡಗುತಿಟ್ಟಿನ ಗತ್ತು-ಗಾಂಭೀರ್ಯದ ಮೇರು ಕಲಾವಿದ ಥಂಡಿಮನೆ ಶ್ರೀಪಾದ ಭಟ್ ವಿಧಿವಶ

ಚಿತ್ರಕೃಪೆ: ಪ್ರವೀಣ್ ಪೆರ್ಡೂರು

ಮಂಗಳೂರು: ಬಡಗುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಾಗೂ ಹಿರಿಯ ವೇಷಧಾರಿ ಥಂಡಿಮನೆ ಶ್ರೀಪಾದ ಭಟ್ (63) ಅವರು ಗುರುವಾರ (ಅಕ್ಟೋಬರ್ 15) ಬೆಳಗಿನ ಜಾವ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಕೆಲಕಾಲದಿಂದ ತೀವ್ರ ಕಾಲುನೋವು ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಪಡೆಯುತ್ತಿರುವಾಗಲೇ ಸಂಭವಿಸಿದ ಹೃದಯಾಘಾತದಿಂದ ಕೊನೆಯುಸಿರೆಳೆದರು. ಯಕ್ಷಗಾನ ರಂಗಕ್ಕೆ ಮರಳಿ ಕಲಾ ಸೇವೆ ಸಲ್ಲಿಸುವ ಮಹದಾಸೆ ಹೊಂದಿದ್ದ ಅವರ ಹಠಾತ್ ಅಗಲುವಿಕೆ ಕಲಾ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.

ಕಂಚಿನ ಕಂಠದಿಂದ ಪಾತ್ರಕ್ಕೆ ಜೀವ ತುಂಬುವ ಥಂಡಿಮನೆ ಶ್ರೀಪಾದ ಭಟ್

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಲ್ಕಣಿ ಸಮೀಪದ 'ಥಂಡಿಮನೆ'ಯವರಾದ ಶ್ರೀಪಾದ ಭಟ್ ಅವರು ಯಕ್ಷಗಾನವನ್ನೇ ಉಸಿರಾಡುತ್ತಿದ್ದ ಕುಟುಂಬ ಹಾಗೂ ಸಾಂಪ್ರದಾಯಿಕ ವಾತಾವರಣದಲ್ಲಿ ಬೆಳೆದು ಬಂದವರು. ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ಸುಮಾರು ಮೂರು ದಶಕಗಳಿಗೂ ಅಧಿಕ ಕಾಲ ಸಕ್ರಿಯರಾಗಿ ಸೇವೆ ಸಲ್ಲಿಸಿ ಕಲಾಭಿಮಾನಿಗಳ ಮನಗೆದ್ದಿದ್ದರು.

ಪೌರಾಣಿಕ ಪ್ರಸಂಗಗಳ ಯಾವುದೇ ಪಾತ್ರವನ್ನಾದರೂ ಸಮರ್ಥವಾಗಿ ನಿರ್ವಹಿಸುವ ದೈತ್ಯ ಪ್ರತಿಭೆ ಅವರದ್ದಾಗಿತ್ತು. ಆಳವಾದ ಧ್ವನಿ (ಕಂಚಿನ ಕಂಠ), ಹಿತಮಿತವಾದ ಕುಣಿತ ಹಾಗೂ ಪಾತ್ರಕ್ಕೆ ಜೀವತುಂಬುವ ಪರಿಪೂರ್ಣ ಅರ್ಥಗಾರಿಕೆ ಅವರ ವಿಶೇಷತೆಯಾಗಿತ್ತು.

ಶಿರಸಿ ತಾಲೂಕಿನ ಕೋಳಿಗಾರ ಗ್ರಾಮದ ತಿಮ್ಮಣ್ಣ ಭಟ್ಟ - ಗಿರಿಜಮ್ಮ ದಂಪತಿಯ ಪುತ್ರರಾಗಿದ್ದ ಶ್ರೀಪಾದ ಭಟ್ಟರ ತಂದೆಯೂ ಕೊಳಗಿಬೀಸ್, ಕಮಲಶಿಲೆ, ಭರತನಹಳ್ಳಿ ಮುಂತಾದ ಮೇಳಗಳಲ್ಲಿ ತಿರುಗಾಟ ಮಾಡಿದವರು. ದ್ವಿತೀಯ ಪಿಯುಸಿ ವಿದ್ಯಾಭ್ಯಾಸದ ಬಳಿಕ, ಹೊಸ್ತೋಟ ಮಂಜುನಾಥ ಭಾಗವತರ ಗರಡಿಯಲ್ಲಿ ಯಕ್ಷಗಾನ ಕಲಿತು, ರಂಗಕ್ಕೆ ಬಂದವರು. ಜನನ ದಿನಾಂಕ 20 ಜುಲೈ 1963 ಹಾಗೂ 20ನೇ ವಯಸ್ಸಿಗೆ ಯಕ್ಷಗಾನ ರಂಗಕ್ಕೆ ಕಾಲಿಟ್ಟರು.

ಶಿರಸಿ ಪಂಚಲಿಂಗ ಮೇಳ, ಶಿರಸಿ ಮಾರಿಕಾಂಬಾ ಮೇಳ, ಸಾಲಿಗ್ರಾಮ, ಮಂದಾರ್ತಿ ಹಾಗೂ ಪೆರ್ಡೂರು, ಹಟ್ಟಿಯಂಗಡಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದ ಥಂಡಿಮನೆಯವರು, ನಾಯಕ, ಪ್ರತಿನಾಯಕ ಮತ್ತು ಖಳನಾಯಕ ಪಾತ್ರಗಳಿಗೆ ಯಕ್ಷಗಾನ ರಂಗಸ್ಥಳದಲ್ಲಿ ಜೀವ ತುಂಬಿದವರು.

ಪ್ರಮುಖ ಪಾತ್ರಗಳು: ಭೀಷ್ಮ, ಸಾಲ್ವ, ಹನುಮಂತ, ರಾವಣ, ರಾಮ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಮತ್ತು ಕಂಸ ಮುಂತಾದ ನೂರಾರು ಪೌರಾಣಿಕ ಹಾಗೂ ನೂತನ ಪ್ರಸಂಗಗಳ ಪಾತ್ರಗಳಿಗೆ ಅವರು ಜೀವತುಂಬಿದ್ದಾರೆ.

ನಾಯಕ ಹಾಗೂ ಖಳನಾಯಕ: ಗತ್ತು-ಗಾಂಭೀರ್ಯದ ಅಭಿನಯದ ಮೂಲಕ ನಾಯಕ ಹಾಗೂ ಖಳನಾಯಕ ಎರಡೂ ರೀತಿಯ ಪಾತ್ರಗಳಿಗೂ ನ್ಯಾಯ ಒದಗಿಸಿ, ಬಡಗುತಿಟ್ಟು ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದರು.

ತಿರುಗಾಟ ನಡೆಸಿದ ಪ್ರಸಿದ್ಧ ಮೇಳಗಳು

ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳಗಳು ಹಾಗೂ ಬಯಲಾಟ ಮೇಳಗಳಲ್ಲಿ ಹಂತ ಹಂತವಾಗಿ ಬೆಳೆದು ಬಂದವರು ಶ್ರೀಪಾದ ಭಟ್. ಪ್ರಮುಖವಾಗಿ ಹೆಸರುವಾಸಿಯಾದ ಸಾಲಿಗ್ರಾಮ ಮೇಳ ಹಾಗೂ ಪೆರ್ಡೂರು ಮೇಳ ಸೇರಿದಂತೆ ಕರಾವಳಿಯ ಹಲವು ಪ್ರತಿಷ್ಠಿತ ಮೇಳಗಳಲ್ಲಿ ದೀರ್ಘಕಾಲ ತಿರುಗಾಟ ನಡೆಸಿ ಯಕ್ಷಗಾನ ಪ್ರಿಯರ ಮನೆಮಾತಾಗಿದ್ದರು. ವೃತ್ತಿಪರ ಮೇಳಗಳ ಜೊತೆಗೆ ವಿವಿಧ ಹವ್ಯಾಸಿ ಯಕ್ಷಗಾನ ಮತ್ತು ತಾಳಮದ್ದಲೆ ಬಳಗಗಳಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಪ್ರಶಸ್ತಿ ಹಾಗೂ ಗೌರವಗಳು

ಅವರ ಕಲಾ ಸೇವೆಯನ್ನು ಗುರುತಿಸಿ ಕರಾವಳಿಯ ವಿವಿಧ ಸಂಘ-ಸಂಸ್ಥೆಗಳು ಹಾಗೂ ಯಕ್ಷಗಾನ ವೇದಿಕೆಗಳು ಸನ್ಮಾನಿಸಿ ಗೌರವಿಸಿದ್ದವು. ಉಡುಪಿಯ ಪ್ರತಿಷ್ಠಿತ 'ಯಕ್ಷಗಾನ ಕಲಾರಂಗ' ಸೇರಿದಂತೆ ಹಲವು ಪ್ರಮುಖ ಸಂಸ್ಥೆಗಳ ಪ್ರಶಸ್ತಿಗಳು ಇವರಿಗೆ ಸಂದಿದ್ದವು.

ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಶ್ರೀಪಾದ ಭಟ್ ಅವರ ಅಂತ್ಯಕ್ರಿಯೆಯು ಅವರ ಸ್ವಗ್ರಾಮವಾದ ಶಿರಸಿ ತಾಲೂಕಿನ ಸಾಲ್ಕಣಿ ಸಮೀಪದ ಥಂಡಿಮನೆಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಇವರ ನಿಧನಕ್ಕೆ ಯಕ್ಷಗಾನ ರಂಗದ ಅನೇಕ ಹಿರಿಯ ಕಲಾವಿದರು, ಭಾಗವತರು ಹಾಗೂ ಕಲಾಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.

ಥಂಡಿಮನೆಯವರ ಬಗೆಗೆ ಅಭಿಮಾನಿಗಳ ಕಂಬನಿ
ಶ್ರೀಪಾದ ಭಟ್ಟರ ಹಠಾತ್ ನಿಧನದಿಂದ ಯಕ್ಷಗಾನ ಕ್ಷೇತ್ರವು ಆಘಾತಗೊಂಡಿದೆ. ಅಭಿಮಾನಿಗಳು ಅವರ ಸಿಂಹಸದೃಶವಾದ ಸ್ವರವನ್ನು, ಗತ್ತು ಗಾಂಭೀರ್ಯವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಯೊಬ್ಬರು ಅವರ ಬಗೆಗೆ ಬರೆದ ಕವನ ಇಲ್ಲಿದೆ:

ಥಂಡಿಭಾವಂಗೆ
ಏನು ನಿಮ್ಮ‌ ಗತ್ತು ಗಮ್ಮತ್ತು!
ಅಭಿನಯದ ಕರಾಮತ್ತು!
ಯಕ್ಷಲೋಕವ ತೆರೆವತಾಕತ್ತು!
ಪ್ರೌಢತೆಯ ಸ್ವಾತಿಮುತ್ತು!
ಪ್ರತಿ ಮಾತಲ್ಲೂ
ತೂಕವಿತ್ತು!
ಕಂಚಿನ ಕಂಠ ಕೈಬೀಸಿ ಕರೆಯುತ್ತಿತ್ತು!
ಔಚಿತ್ಯ ಮೀರದ ಸುಖವಿತ್ತು!
ಪಾತ್ರ ಚಿತ್ರಣದ ಸೊಬಗಿತ್ತು!
ಪುರಾಣದ ಪ್ರಜ್ಞೆ ತುಂಬಿತುಳುಕುತಿತ್ತು!
ಸ್ವಂತಿಕೆಯ ಚಿತ್ತಾರವಿತ್ತು!
ಒಮ್ಮೆ ಮಿಂಚಿನಂತೆ ಹೊಕ್ಕರೆ
ಮಲಗಿದವರ ಥಂಡಿ
ಓಡಿಹೋಗುತ್ತಿತ್ತು!
ಆ..ರಾಮ,ಕರ್ಣ,ಅರ್ಜುನ,ಕೌರವ,ರಾವಣ..ಒಂಥರಾ ಚಾಪಿತ್ತು!
ಶ್ರೀ..ಪಾದಕ್ಕೆ ಇಷ್ಟು ಅವಸರವೇನಿತ್ತು?

  - ಗುಣವಂತೇಶ್ವರ.
  - ನಾರಾಯಣ. ಶಾಸ್ತ್ರಿ.

1 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು