ಎಡನೀರು ಬ್ರಹ್ಮೈಕ್ಯ ಶ್ರೀಗಳ ನೆಚ್ಚಿನ 'ಸತ್ಯಾಂತರಂಗ' ಸಮರ್ಪಕ ಸಮರ್ಪಣೆ

ಮೊದಲ ಭಾಗದ ಹರಿಶ್ಚಂದ್ರನಾಗಿ ಶಶಿಧರ ಕುಲಾಲ್ ಹಾಗೂ 3ನೇ ಹರಿಶ್ಚಂದ್ರನಾಗಿ ವಾಸುದೇವ ರಂಗ ಭಟ್
ಶನಿವಾರ ಎಡನೀರು ಮಠದಲ್ಲಿ ನಡೆದ 'ಸತ್ಯಾಂತರಂಗ' ಯಕ್ಷಗಾನ ಪ್ರದರ್ಶನ ಬಗ್ಗೆ ಕುಮಾರ ಸುಬ್ರಹ್ಮಣ್ಯ ಮುಳಿಯಾಲ ಅವರ ಅವಲೋಕನ.
ಸತ್ಯಕ್ಕೊಬ್ಬನೇ. ಆರ್ಯಾವರ್ತದ ಆದರ್ಶವಾಗಬಲ್ಲ, ಸತ್ಯಕ್ಕಾಗಿ ಸರ್ವಸ್ವವನ್ನೂ ಬಿಟ್ಟು ಸತ್ಯವೇ ಜೀವನಾದರ್ಶದಲ್ಲಿ ಸತ್ತ್ವಯುತವಾದದ್ದು ಎಂಬುದನ್ನು ಪ್ರಪಂಚಮುಖಕ್ಕೆ ಅನಾವರಣ ಮಾಡಿದ, ಸತ್ಯ ಹರಿಶ್ಚಂದ್ರನ ವಿವಿಧ ಮಜಲುಗಳ ಏಳು ಬೀಳುಗಳ ನಿರೂಪಣೆಯ ಕಥಾನಕ ಸತ್ಯಾಂತರಂಗ. ಇದು ಎಲ್ಲ ರಸ ಭಾವಗಳ ಸಮ್ಮಿಳನದೊಂದಿಗೆ, ಬ್ರಹ್ಮೈಕ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳ ಆರಾಧನಾ ದಿನವಾದ 28 -08-21 ರ ಶನಿವಾರದಂದು ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳ ಚಾತುರ್ಮಾಸ್ಯ ಸಂದರ್ಭದಲ್ಲಿ  ಸೇವಾರೂಪದಲ್ಲಿ ಹನುಮಗಿರಿ ಮೇಳದವರಿಂದ ಎಡನೀರಿನಲ್ಲಿ ಸಮರ್ಪಣೆಗೊ೦ಡಿತು.

ಇಲ್ಲೊಂದು ವಿಷಯ ಪ್ರಸ್ತಾಪಿಸದೆ ಇದ್ದರೆ ಕೊರತೆಯಾದೀತು. "ಹರಿಶ್ಚಂದ್ರ" ಕಥಾನಕ ಬ್ರಹ್ಮೈಕ್ಯರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತಿಯವರ ಅತ್ಯಂತ ಪ್ರೀತಿಯ ಪ್ರಸಂಗ. ಅವರ ಹೃದಯದ ತುಡಿತದಲ್ಲಿ ಮಿಡಿತಗೊಳ್ಳುತ್ತಿದ್ದ ಪ್ರಸಂಗ. ಅವರೇ ಒಟ್ಟು ಪ್ರಸಂಗದ ಇಡೀ ಹರಿಶ್ಚಂದ್ರನ ಕಥೆಯನ್ನು (ಗುರುಗಳು ಹರಿಶ್ಚಂದ್ರ ನಾಟಕವನ್ನು ಬರೆದಿದ್ದರು), ಪ್ರಸಂಗ ನಡೆಯನ್ನು ಬೃಂದಾವಸ್ಥರಾಗುವ ಮೊದಲೇ ಒಂದು ಕರಡು (ಸ್ಕ್ರಿಪ್ಟ್) ತಯಾರು ಮಾಡಿದ್ದರು. ಪ್ರತೀ ಸನ್ನಿವೇಶವನ್ನು ಕಲ್ಪಿಸಿ ಅದಕ್ಕೊಂದು ಪೂರ್ವಸಿದ್ಧತೆಯನ್ನೂ ಮಾಡಿದ್ದರು.


ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಹನುಮಗಿರಿ ಮೇಳದ ಬೆನ್ನೆಲುಬಾದ ಟಿ. ಶ್ಯಾಮ ಭಟ್ಟರು ಮುತುವರ್ಜಿ ವಹಿಸಿದರು. ಶ್ಯಾಮ ಭಟ್ಟರು ಗುರುಗಳ ನಿಕಟವರ್ತಿಗಳು, ಪ್ರಿಯ ಶಿಷ್ಯರು, ಗುರುಗಳ ತುಡಿತಕ್ಕೆ ಮಿಡಿಯಬಲ್ಲವರು, ಗುರುಗಳ ಹೃದಯದ ಭಾವಕ್ಕೆ ಧ್ವನಿಯಾಗಬಲ್ಲವರು ಮತ್ತು ಮನಸ್ಸಿನ ಇಂಗಿತಕ್ಕೆ ಮೂರ್ತ ರೂಪವನ್ನು ಕೊಡಬಲ್ಲವರು. ಹೀಗೆ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ಟರ ಕಥಾ ಸಂಯೋಜನೆಯಲ್ಲಿ  ರೂಪುಗೊಂಡದ್ದು "ಸತ್ಯಾಂತರಂಗ" ಪ್ರಸಂಗ.

ಹನುಮಗಿರಿ ಮೇಳದಲ್ಲಿ ಇದನ್ನು ಪ್ರದರ್ಶಿಸಿದರೂ ಗುರುಗಳ ಪ್ರಥಮ ಆರಾಧನೆಗೆ ಇದೇ ಪ್ರಸಂಗವನ್ನು ಸೇವಾರೂಪವಾಗಿ ಹನುಮಗಿರಿ ಮೇಳದ ಕಲಾವಿದರಿಂದ ಪ್ರದರ್ಶಿಸಿ, ಗುರುಗಳ ಪ್ರಥಮ ಆರಾಧನಾ ಮಹೋತ್ಸವದ ಗುರುಗಳ ಪ್ರಿಯವಾದ ಕಲಾರಾಧನೆಯ ಮೌಲ್ಯವನ್ನು ಹೆಚ್ಚಿಸಿದರು.

ಶ್ಯಾಮ ಭಟ್ಟರ ನಿನ್ನೆಯ ನುಡಿ ನಮನ ಅತ್ಯಂತ ಪ್ರಾಮಾಣಿಕವಾದದ್ದು. ಅವರ ಗುರು ಶಿಷ್ಯ ಬಾಂಧವ್ಯದ ನೆನಪುಗಳನ್ನು ಅನಾವರಣ ಮಾಡಿದರು. ಇದು ಅವರ ಸತ್ಯಾ೦ತರಂಗವೂ ಹೌದು.

ವಿಡಿಯೊ ನೋಡಿ: 

ಶ್ಯಾಮ ಭಟ್ಟರೆಂದರೆ ಕಲಾವಿದರ ಕಾಮಧೇನು, ಕಷ್ಟದಲ್ಲಿರುವವರ ಕಲ್ಪವೃಕ್ಷ ಎಂದೇ ಬಹುತೇಕರು ಕೊಂಡಾಡುತ್ತಾರೆ. ಉತ್ತಮ ಕಲೋಪಾಸಕ, ಅದ್ಭುತ ಪುರಾಣ ಜ್ಞಾನವುಳ್ಳ, ಬಹಳಷ್ಟು ಯಕ್ಷಗಾನ ಪ್ರಸಂಗಗಳ ಪದ್ಯಗಳು ಕಂಠಸ್ಥವಾಗಿರುವ, ಪ್ರಸಂಗ ನಡೆ ಮತ್ತು ಸನ್ನಿವೇಶದ ಬಗ್ಗೆ ಅನುಭವವಿರುವ, ರಂಗ ತಾಂತ್ರಿಕತೆಯ ಬಗ್ಗೆ ಮತ್ತು ಆಧುನಿಕತೆಯ ಅಳವಡಿಸುವಿಕೆಯ ಬಗ್ಗೆ ಮಾಹಿತಿಯಿರುವ, ಕಲಾವಿದರ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯದ ಬಗ್ಗೆ ಅಧಿಕಾರಯುತವಾಗಿ ಮಾತನಾಡಬಲ್ಲ ಅನುಭವಿ. ಅವರ ನಿರ್ದೇಶನದಲ್ಲೇ ರೂಪುಗೊಂಡದ್ದು ಸತ್ಯಾಂತರಂಗ.

ಸರಕಾರದ ಅತ್ಯುನ್ನತ ಹುದ್ದೆಯನ್ನಲಂಕರಿಸಿದರೂ ಅವರಲ್ಲಿದ್ದ ಸರಳತೆ, ಕಲೆ ಮತ್ತು ಕಲಾವಿದರ ಬಗ್ಗೆ ಇದ್ದ ಪ್ರೀತಿ ಅನನ್ಯ. ಆದುದರಿಂದಲೇ ವ್ಯಾವಹಾರಿಕ ದೃಷ್ಟಿಯಿಂದ ನೋಡದೆ ಮೇಳವನ್ನು ಮುನ್ನಡೆಸುತ್ತಿದ್ದಾರೆ ಆದರಣೀಯರು. ಈ ಎಲ್ಲಾ ಕಾರಣದಿಂದ ನಿನ್ನೆಯ ಯಶಸ್ವೀ ಪ್ರದರ್ಶನ ಮುಖ್ಯವಾಗುತ್ತದೆ.

ಸತ್ಯ ಹರಿಶ್ಚಂದ್ರನ ಜೀವನದ ಮೂರು ಹಂತಗಳನ್ನು ತೋರಿಸುವ ಕಥಾನಕದಲ್ಲಿ ದಿವಾಕರ ಸಂಪಾಜೆ, ಶಶಿಧರ ಕುಲಾಲ್ ಮತ್ತು ವಾಸುದೇವ ರಂಗ ಭಟ್ಟರದ್ದು ಒಳ್ಳೆಯ ನಿರ್ವಹಣೆ. ನಿರೀಕ್ಷೆಯಂತೆಯೇ ಪೆರ್ಮುದೆಯವರದ್ದು ಗತ್ತುಗಾರಿಕೆಯ ವಿಶ್ವಾಮಿತ್ರ, ಪೆರ್ಲ ಜಗನ್ನಾಥರ ವಸಿಷ್ಠ, ದಿವಾಕರರ ಚುರುಕಿನ ವೇಷಗಾರಿಕೆ ಆಕರ್ಷಿಸಿತು.

ಶಶಿಧರ ಕುಲಾಲ್ ಧರ್ಮಸ್ಥಳ ಮೇಳದ ಮತ್ತು ಎಡನೀರು ಮೇಳದ ತಿರುಗಾಟದ ಅನುಭವವಿರುವ ಕಲಾವಿದರು, ದಿ.ಶ್ರೀಧರ ಭಂಡಾರಿಯವರ ನಡೆಯನ್ನು ಇವರ ನಾಟ್ಯದಲ್ಲಿ ಕಾಣಬಹುದು. ಅವರ ಪ್ರತಿರೂಪಿನಂತೆ ಪಾತ್ರವನ್ನು ನಿರ್ವಹಿಸಬಲ್ಲ ಇವರು ಇವತ್ತು ಕೋಲು ಕಿರೀಟದ ಹರಿಶ್ಚಂದ್ರನಾಗಿ ಗಮನ ಸೆಳೆದರು. ಹಿತ ಮಿತ ಮಾತುಗಾರಿಕೆ, ಕಿರೀಟ ವೇಷದ ಗತ್ತುಗಾರಿಕೆ, ಒಳ್ಳೆಯ ರಂಗ ಚಲನೆ ಗಮನ ಸೆಳೆಯಿತು.

ಸಬಲನಾಗಿ ಜಗದಾಭಿರಾಮರು ಕಾಣಿಸಿಕೊಂಡರೆ, ಪುಲೋಮಾಸುರನಾಗಿ ಸದಾಶಿವ ಶೆಟ್ಟಿಗಾರರದ್ದು ಒಳ್ಳೆಯ ನಿರ್ವಹಣೆ. ಅನಾಮಿಕೆಯಾಗಿ ರಕ್ಷಿತಾ ಶೆಟ್ಟಿಯವರು ತಮ್ಮ ನಾಟ್ಯವೈವಿಧ್ಯಗಳಿಂದ ರಂಜಿಸಿದರು. ಹರಿಶ್ಚಂದ್ರನ ಶ್ವೇತ ಛತ್ರದ ಸೆಟ್ಟಿಂಗ್ ಗಮನ ಸೆಳೆಯಿತು. ಚಂದ್ರಮತಿಯಾಗಿ ಸಂತೋಷ್ ಕುಮಾರ್ ಹಿಲಿಯಾಣ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಭಾವ ಪ್ರಸ್ತುತಿ ಚೆನ್ನಾಗಿ ಮೂಡಿಬಂತು. ನಕ್ಷತ್ರಿಕನಾಗಿ ಸೀತಾರಾಮ ಕುಮಾರರದ್ದು ನಿರೀಕ್ಷೆಯ ಪ್ರಸ್ತುತಿ.

ಭಾವವೇ ಪಾತ್ರವಾಗುವ ವಾಸುದೇವ ರಂಗ ಭಟ್ಟರ ಹರಿಶ್ಚಂದ್ರ ಪ್ರೇಕ್ಷಕರ ಹೃದಯವನ್ನು ತಟ್ಟಿತು. ಹರಿಶ್ಚಂದ್ರನಾಗಿ ಪಾತ್ರದಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಅನನ್ಯವಾದುದು. ರಂಗದಲ್ಲಿ ತಾವಿರುವಷ್ಟೂ ಸಮಯ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡರು. ಉಳಿದಂತೆ ಶಬರೀಶ ಮಾನ್ಯರ ವೀರಬಾಹು ಹಾಗು ಇತರ ಪಾತ್ರಗಳು ಪೂರಕವಾಗಿ ಕಾರ್ಯಕ್ರಮದ ಚೆಂದವನ್ನು ಹೆಚ್ಚಿಸಿತು.

ಹಿಮ್ಮೇಳದಲ್ಲಿ ಚಿನ್ಮಯರದ್ದು ಒಳ್ಳೆಯ ಭಾಗವತಿಕೆ, ರವಿಚಂದ್ರ ಕನ್ನಡಿಕಟ್ಟೆ ಸುಶ್ರಾವ್ಯವಾಗಿ, ಕರುಣಾರಸವನ್ನು ಮನಸ್ಸಿಗೆ ನಾಟುವಂತೆ ಹಾಡಿದರು. ಚೆಂಡೆ ಮದ್ದಳೆಯಲ್ಲಿ ಪದ್ಯಾಣತ್ರಯರು ಮತ್ತು ದೇಲಂತಮಜಲು ನಿರ್ವಹಣೆ ಅತ್ಯುತ್ತಮ.

ಸಾಂಘಿಕ ಪ್ರಯತ್ನದ ಕಾರ್ಯಕ್ರಮ ಸ್ವಲ್ಪ ಧೀರ್ಘವೆನಿಸಿದರೂ ಒಟ್ಟಂದದಲ್ಲಿ ಯಶಸ್ವಿಯಾಗಿ ಪ್ರದರ್ಶಿತವಾಯಿತು ಮತ್ತು ಮನಸ್ಸಲ್ಲುಳಿಯುವಂತೆ ಮಾಡಿತು.

ಇದಕ್ಕಾಗಿ ಸಂಬಂಧಿಸಿದ ಎಲ್ಲರನ್ನೂ ವಿಶೇಷವಾಗಿ ಬಹು ಮಾನ್ಯರಾದ ಟಿ.ಶ್ಯಾಮ ಭಟ್ಟರನ್ನು ಅಭಿನಂದಿಸುತ್ತೇನೆ. 

✍ ಕುಮಾರ ಸುಬ್ರಹ್ಮಣ್ಯ, ಮುಳಿಯಾಲ

3 ಕಾಮೆಂಟ್‌ಗಳು

ನಿಮ್ಮ ಅಭಿಪ್ರಾಯ ತಿಳಿಸಿ

  1. ಹೊಸತಾಗಿ ರಚಿಸಲ್ಪಟ್ಟ ಪ್ರಸಂಗವೇ ? ಅಥವಾ ಬೇರೆ ಬೇರೆ ಕವಿಗಳ ಪ್ರಸಂಗಗಳಿಂದ ಪದ್ಯಗಳನ್ನಾರಿಸಿ ಸಂಕಲಿಸಿದ ಪ್ರಸಂಗವೇ ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಇದು ಹೊಸ ಪ್ರಸಂಗವೇ ಸರ್. ವಿದ್ವಾನ್ ಹಿರಣ್ಯರ ಕಥಾ ಸಂಯೋಜನೆ ಹಾಗೂ ಎಂ.ಕೆ.ರಮೇಶಾಚಾರ್ಯರಿಂದ ಸಾಹಿತ್ಯ (ಯಕ್ಷಗಾನ ಪದ) ರಚನೆ.

      ಅಳಿಸಿ
  2. ಸಮಯ ಸ್ವಲ್ಪ ದೀರ್ಘ ಆಯಿತು . ಕಾಲಮಿತಿ ಆಗಲಿಲ್ಲ

    ಪ್ರತ್ಯುತ್ತರಅಳಿಸಿ
ನವೀನ ಹಳೆಯದು