ಭೀಷ್ಮನ ಜೀವನದ ವೈರುಧ್ಯ ಬಿಚ್ಚಿಟ್ಟ ಇಚ್ಛಾಮರಣಿ ತಾಳಮದ್ದಳೆ (ವಿಡಿಯೊ ಸಹಿತ)

ಆಗಸ್ಟ್ 13ರಂದು ಸುವರ್ಣನಾಡು ಶ್ರೀ ದುರ್ಗಾಂಬಿಕಾ ಸನ್ನಿಧಿಯಲ್ಲಿ ನಡೆದ 'ಇಚ್ಛಾಮರಣಿ ಭೀಷ್ಮ' ತಾಳಮದ್ದಳೆಯನ್ನು ಆಸ್ವಾದಿಸಿ, ಅದು ಹೇಗಿತ್ತು ಎಂಬುದನ್ನು ವಿಮರ್ಶಿಸಿದ್ದಾರೆ ಕುಮಾರ ಸುಬ್ರಹ್ಮಣ್ಯ ಮುಳಿಯಾಲ.
ಕುರುಕುಲದ ಸಿ೦ಹಾಸನದ ರಕ್ಷಕನಾಗಿ, ಸಂಧಿ ವಿಗ್ರಹಿಯಾಗಿ, ಕುರುಕುಲದ ಆಗುಹೋಗಿಗೆ ಸಾಕ್ಷಿಯಾಗಿ ತನ್ನ ಜೀವಿತಾರ್ಪಣೆಯ ಸ್ವಯ೦ ನಿಯಂತ್ರಣ ಹೊ೦ದಿದವನಾಗಿ ಒಂದು ರೀತಿಯಲ್ಲಿ ಅಸಹಾಯಕನಾಗಿ ಸಂಘರ್ಷವೊಂದನ್ನು ನೋಡುತ್ತಾ ಅನುಭವಿಸುತ್ತಾ ತನ್ನನ್ನು ತಾನು ಕೃಷ್ಣಾರ್ಪಣಗೊಳಿಸುವ ಮುತ್ಸದ್ಧಿ ಭೀಷ್ಮನ ಅಂತರಂಗವನ್ನು ಅನಾವರಣ ಗೊಳಿಸಿತು 'ಇಚ್ಛಾಮರಣಿ' ತಾಳಮದ್ದಳೆ.

ಭೀಷ್ಮನ ಪಾತ್ರವೇ ಹಾಗೆ. ಒಂದು ವಂಶದ ಪ್ರಾತಿನಿಧಿತ್ವ. ಅದರ ಸಾಧಕ ಬಾಧಕಗಳ ಅರಿವನ್ನು ತಲೆಮಾರಿನಿಂದ ನೋಡುತ್ತಾ ಬಂದು ಮೊಮ್ಮಕ್ಕಳ ಕಾಲಕ್ಕೆ ಪರಸ್ಪರ ವೈರುಧ್ಯಗಳನ್ನು ನೋಡುವ ಭಾವವನ್ನು ಪ್ರತಿಪಾದಿಸುತ್ತಾ, ಧರ್ಮದ ಪರವಾಗಿ ಅಂತರಂಗದ ಒಲವನ್ನು ಪ್ರಕಟಪಡಿಸುವ ಭೀಷ್ಮನಾಗಿ ಅಶೋಕ ಭಟ್ಟರದ್ದು ಮನಮುಟ್ಟುವ ನಿರ್ವಹಣೆ.

ಇತ್ತೀಚೆಗಿನ ಯುವ ಅರ್ಥಧಾರಿಗಳಲ್ಲಿ ಭರವಸೆಯನ್ನು ಮೂಡಿಸುವ ಗಣೇಶ ಶೆಟ್ಟಿ ಕನ್ನಡಿಕಟ್ಟೆ ಕೌರವನಾಗಿ ಗಮನ ಸೆಳೆದರು. ಅಜ್ಜನೊಡನೆ ಮಾತನಾಡುವ ಕೌರವನ‌ ಸಲಿಗೆ, ಅಲ್ಲಲ್ಲಿ ವಿಷಯವನ್ನು ನಿಷ್ಕರ್ಷೆಗೊಡ್ಡುವಂತೆ ಕೆಣಕುವ ಮಾತುಗಳು, ಕೌರವನಲ್ಲಿ ಅಂತಸ್ಥವಾಗಿರುವ ಪಾಂಡವ ದ್ವೇಷದ ಸ್ಪಷ್ಟ ನಿಲುವಿನ ಪ್ರಕಟಣೆ. ಅಜ್ಜನ ಪಾಂಡವ ಪಕ್ಷಪಾತಿತ್ವದ ಅರಿವಿದ್ದೂ ತನ್ನ ಪಕ್ಷದಲ್ಲಿ ತೊಡಗಿಸಿಕೊಳ್ಳುವಿಕೆಗೆ ಒಪ್ಪಿಸಲು ಪ್ರಕಟಗೊಳಿಸುವ ಚಾಣಾಕ್ಷಮತಿತ್ವವನ್ನು ಬಹಳ ಸೊಗಸಾಗಿ ಗಣೇಶ ಶೆಟ್ಟಿಯವರು ಕಟ್ಟಿಕೊಟ್ಟರು.

ಭೀಷ್ಮ ಕೌರವ ಸಂಭಾಷಣೆ ಒಂದು ಮನೆಯಲ್ಲಿ ಸಮಸ್ಯೆ ತಲೆದೋರಿದಾಗ ಅಜ್ಜ ಮೊಮ್ಮಗ ಮಾತನಾಡುವಂತೆ ಬಹಳ ಆಪ್ತವಾಗಿ, ಸುಂದರವಾಗಿ ಆಕರ್ಷಕವಾಗಿ ಮೂಡಿ ಬಂತು.


'ಶ್ರೀ ಮನೋಹರ' ಪದ್ಯಕ್ಕೆ ಅರ್ಥವಿಸ್ತಾರ ವಿಸ್ಮೃತವಾಗಿಯೂ, ವಿಸ್ತಾರವಾಗಿಯೂ ಬಂತು. ಸೇವ್ಯ -ಸೇವಕ ಪ್ರಸ್ತುತಿ ಚೆನ್ನಾಗಿ ಬಂತು. ಅಶೋಕ ಭಟ್ಟರ ಅರ್ಥಗಾರಿಕೆಯ ಅನುಭವ ಅವರ ಪ್ರಸ್ತುತಿಯಲ್ಲಿ ಸ್ಪಷ್ಟವಾಯಿತು. 'ಇಂದಿರೇಶನು...' ಪದ್ಯಕ್ಕೆ ಭೀಷ್ಮನ ಅಂತರಂಗವನ್ನು ತೆರೆದಿಟ್ಟ ಪರಿ ಮನ ಮುಟ್ಟುವಂತಿತ್ತು. ಕುಟುಂಬದಲ್ಲಿ ಮೊಮ್ಮಕ್ಕಳ ಜಗಳಕ್ಕೆ ಅಜ್ಜನೊಬ್ಬ ಅಸಹಾಯಕನಾಗುವ ಪರಿಯನ್ನು ಅಶೋಕ ಭಟ್ಟರು ಅರ್ಥವೈಭವದಲ್ಲಿ ಬಿಡಿಸಿಡುತ್ತಾ ಹೋದರು. ಭಾವ ತುಂಬಿದ ರವಿಚಂದ್ರರ ಪದ್ಯ ಮನಮುಟ್ಟಿತು, ಹೃದಯ ತಟ್ಟಿತು.

ಕೃಷ್ಣನಾಗಿ ದಿನೇಶ್ ಶೆಟ್ಟಿ ಕಾವಳಕಟ್ಟೆ ಎಂದಿನಂತೆ ಚೆನ್ನಾಗಿ ನಿರ್ವಹಿಸಿದರು. ಉಳಿದಂತೆ ಎಲ್ಲರದ್ದೂ ಪೂರಕ ನಿರ್ವಹಣೆ.

 ಕುಮಾರ ಸುಬ್ರಹ್ಮಣ್ಯ ಮುಳಿಯಾಲ.

ಆ.13ರಂದು ನಡೆದ ತಾಳಮದ್ದಳೆಯ ವಿವರ:
ಶ್ರೀ ದುರ್ಗಾಂಬಿಕಾ ಸಿದ್ದೇಶ್ವರೀ ದೇವಸ್ಥಾನ, ಸುವರ್ಣನಾಡು, ಇದರ ಸಂಸ್ಥಾಪಕರು, ಆಡಳಿತ ಧರ್ಮದರ್ಶಿಗಳು, ಹಿರಿಯ ಯಕ್ಷಗಾನ ಕಲಾವಿದರು, ಯಕ್ಷಗುರು, ಮೇಳದ ಯಜಮಾನರು ಹಾಗೂ ಕಲಾಪೋಷಕರಾದ ಶ್ರೀ ವಿಶ್ವನಾಥ ಸ್ವಾಮೀಜಿಯವರ ಗೌರವ ಸಂಸ್ಮರಣೆ ಅಂಗವಾಗಿ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಸೇವೆ ಜರುಗಿತ್ತು. ಪ್ರಸಂಗ 'ಇಚ್ಛಾ ಮರಣಿ'.

ಭಾಗವತರು: ರವಿಚಂದ್ರ ಕನ್ನಡಿಕಟ್ಟೆ
ಚೆಂಡೆ-ಮದ್ದಳೆ: ಶಿತಿಕಂಠ ಭಟ್ ಉಜಿರೆ, ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ, ರಾಮ ಬಿ ಅರಳ.
ಮುಮ್ಮೇಳ: ಅಶೋಕ್ ಭಟ್ ಉಜಿರೆ, ಸಂಕಪ್ಪ ಶೆಟ್ಟಿ ಬಿ.ಸಿ.ರೋಡ್, ದಿನೇಶ್ ಶೆಟ್ಟಿ ಕಾವಳಕಟ್ಟೆ, ಗಣೇಶ್ ಶೆಟ್ಟಿ ಕನ್ನಡಿಕಟ್ಟೆ. ಪ್ರೇಮ್‌ರಾಜ್ ಕೊಯಿಲ.
ಸಂಯೋಜನೆ: ಬಿ.ಜನಾರ್ದನ ಅಮ್ಮುಂಜೆ
ಸಹಕಾರ: ಯಕ್ಷಾಂಬಿಕೆ ಬಳಗ ಸುವರ್ಣನಾಡು.
ತಾಳಮದ್ದಳೆ ಲಿಂಕ್
ಭಾಗ-1

ಭಾಗ-2

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು