ತೆಂಕುತಿಟ್ಟು ಯಕ್ಷಗಾನದ ಭಾಗವತ 'ರಸರಾಗ ಚಕ್ರವರ್ತಿ' ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ


ಮಂಗಳೂರು: ತೆಂಕುತಿಟ್ಟಿನ ಹೆಸರಾಂತ ಭಾಗವತ, ರಸರಾಗ ಚಕ್ರವರ್ತಿ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡ ದಿನೇಶ್ ಅಮ್ಮಣ್ಣಾಯ ಅವರು ಗುರುವಾರ ಬೆಳಗ್ಗೆ ಅಲ್ಪಕಾಲದ ಅನಾರೋಗ್ಯದಿಂದಾಗಿ ನಿಧನರಾದರು. ಅವರಿಗೆ 66 ವರ್ಷ ವಯಸ್ಸಾಗಿತ್ತು.

ಯಕ್ಷಗಾನ ರಂಗಕ್ಕೆ ಸಂಗೀತವನ್ನು ಅಳವಡಿಸಿ ಪ್ರಯೋಗ ಮಾಡಿ ಹೆಸರಾದ ದಾಮೋದರ ಮಂಡೆಚ್ಚ ಅವರ ಶಿಷ್ಯರಾಗಿದ್ದ ಅಮ್ಮಣ್ಣಾಯರು, ಮಂಡೆಚ್ಚ ಪರಂಪರೆಯನ್ನು ಮುಂದುವರಿಸಿದವರು ಹಾಗೂ ತೆಂಕಿನಲ್ಲಿ, ವಿಶೇಷವಾಗಿ ತುಳು ಹಾಗೂ ಸಾಮಾಜಿಕ ಕಥಾನಕಗಳಲ್ಲಿ ತಮ್ಮ ಗಾಯನದ ವಿಶೇಷ ಛಾಪು ಒತ್ತಿದವರು.
ಪುತ್ತೂರು ಮೇಳದ ಮೂಲಕ ಕಲಾ ಜೀವನ ಆರಂಭಿಸಿದ್ದ ಅವರು ಕರ್ನಾಟಕ, ಕದ್ರಿ, ಹೊಸನಗರ, ಕುಂಟಾರು, ಎಡನೀರು ಮುಂತಾದ ಮೇಳಗಳಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ಭಾಗವತರಾಗಿ ಸೇವೆ ಜನಾನುರಾಗ ಗಳಿಸಿದ್ದರು. ವಿಶೇಷವಾಗಿ ಕರುಣರಸದ ಪದಗಳ ಗಾಯನ ವೈಖರಿಯು ಅವರಿಗೆ 'ರಸರಾಗ ಚಕ್ರವರ್ತಿ' ಎಂಬ ಬಿರುದು ನೀಡುವಲ್ಲಿ ಮಹತ್ತರ ಪಾತ್ರವಹಿಸಿತ್ತು.

ಇತ್ತೀಚೆಗಷ್ಟೇ ಅವರಿಗೆ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪುರಸ್ಕಾರ ಒಲಿದು ಬಂದಿತ್ತು. ಕೆಲ ವರ್ಷಗಳಿಂದ ವೃತ್ತಿ ಮೇಳಕ್ಕೆ ವಿದಾಯ ಹಾಡಿ, ಹವ್ಯಾಸಿ ಭಾಗವತರಾಗಿ ಕಲಾಸೇವೆ ಮುಂದುವರಿಸಿದ್ದರು. ಅತಿಥಿ ಭಾಗವತರಾಗಿ ಯಕ್ಷಗಾನ‌ ಕಾರ್ಯಕ್ರಮಗಳಲ್ಲಿ ರಾಗ ರಸಧಾರೆ ಹರಿಸುತ್ತಿದ್ದರು. ಎಡನೀರು ಮಠದ ಸ್ವಾಮೀಜಿಯವರ ಚಾತುರ್ಮಾಸ್ಯದಲ್ಲಿ ಈಚೆಗೆ  ಕೊನೆಯದಾಗಿ ಭಾಗವತಿಕೆ ನಡೆಸಿದ್ದರು. ಎರಡು ತಿಂಗಳುಗಳಿಂದ‌ ಅವರ ಆರೋಗ್ಯ ಹದಗೆಟ್ಟಿತ್ತು.

ಅಮ್ಮಣ್ಣಾಯರ ಗಾಯನದ ವೈಖರಿಯ ಸ್ಯಾಂಪಲ್ ಕೇಳಿ.
ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತಿದ್ದ ಅವರು, ತಮ್ಮ ಭಾವ ಹರಿನಾರಾಯಣ ಬೈಪಾಡಿತ್ತಾಯರಲ್ಲಿ ಮದ್ದಳೆ ವಾದನವನ್ನೂ ಕಲಿತಿದ್ದರು. ಬಳಿಕ ಬೈಪಾಡಿತ್ತಾಯರ ಮೂಲಕ ಕರ್ನಾಟಕ ಮೇಳದಲ್ಲಿ ಮಂಡೆಚ್ಚ ಭಾಗವತರಿಗೆ ಮದ್ದಳೆ ನುಡಿಸಿ, ಅವರ ಕೃಪೆಗೆ ಪಾತ್ರರಾದರು. ಆ ಬಳಿಕ ಮಂಡೆಚ್ಚರಿಂದಲೇ ಭಾಗವತಿಕೆಯ ಶೈಲಿಯನ್ನು ಕಲಿತುಕೊಂಡು, ಉತ್ತಮ ಭಾಗವತರಾಗಿ ರೂಪುಗೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು