ಭೂಮಿ ಅಗೆದವರಿಗೆ ಕೇಡು: ಸಗರ ಚಕ್ರವರ್ತಿಯ ಮಕ್ಕಳ ಕಥೆಯಿದು

ಜೋಡಾಟದ ದೃಶ್ಯ
ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ ಶೆಟ್ಟಿ, ಇರುವೈಲ್

ಪೂರ್ವದಲ್ಲಿ ಅಯೋಧ್ಯಾನಗರಿಯಲ್ಲಿ ಸಗರನೆಂಬ ಚಕ್ರವರ್ತಿ ಇದ್ದನು. ಅವನಿಗೆ ಇಬ್ಬರು ಹೆಂಡತಿಯರು. ಹಿರಿಯಳಾದ ಕೇಶಿನಿ ಧರ್ಮಿಷ್ಠೆ. ಕಿರಿಯವಳಾದ ಸುಮತಿಗೆ ಆಸೆ ಹೆಚ್ಚು.

ಸಗರ ತನ್ನ ಪತ್ನಿಯರೊಂದಿಗೆ ಸಂತಾನಾಪೇಕ್ಷಿಯಾಗಿ ತಪಸ್ಸು ಮಾಡಿದ. ಭೃಗುಮುನಿಗಳು ತೃಪ್ತರಾಗಿ ವರ ನೀಡಿದರು.  "ರಾಜಾ ನಿನ್ನ ಪತ್ನಿಯರಲ್ಲಿ ಒಬ್ಬಳಿಗೆ ವಂಶವನ್ನು ನಡೆಸುವ ಒಬ್ಬ ಮಗನಾಗುತ್ತಾನೆ, ಇನ್ನೊಬ್ಬಳಿಗೆ ಅರವತ್ತು ಸಾವಿರ ಪುತ್ರರು ಹುಟ್ಟುತ್ತಾರೆ" ಎಂದರು.

ಕೇಶಿನಿ ಒಬ್ಬ ಮಗ ಸಾಕು ಎಂದಳು, ಸುಮತಿ ಅರವತ್ತು ಸಾವಿರ ಮಕ್ಕಳನ್ನು ಬೇಡಿದಳು. ಕೇಶಿನಿಯ ಮಗ ಅಸಮಂಜ ಎಂಬಾತ ವಿಕ್ಷಿಪ್ತ ಸ್ವಭಾವದವನು, ದುಃಖಪ್ರೇಮಿ, ಬೇರೆಯವರ ತೊಂದರೆಗಳಿಗೆ ಸಂತೋಷಪಡುವವನು. ಅಸಮಂಜನಿಗೆ ಅಂಶುಮಂತನೆಂಬ ಮಗ ಜನಿಸಿದ. ಅವನು ವೀರ, ವಿನಯಿ ಮತ್ತು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ.

ಸುಮತಿ ಸೋರೆಕಾಯಿಯಂಥ ಪಿಂಡವನ್ನು ಹಡೆದಳು. ಆ ಪಿಂಡ ಒಡೆದು ಅರವತ್ತು ಸಾವಿರ ಶಿಶುಗಳು ಬಂದವು.

ಕಾಲಾನಂತರದಲ್ಲಿ, ಸಗರ ಒಂದು ಮಹಾಯಜ್ಞವನ್ನು ಮಾಡಬೇಕೆಂದು ನಿಶ್ಚಯಿಸಿ ಗುರುಗಳೊಂದಿಗೆ ಯೋಜನೆ ಮಾಡಿದ. ಯಜ್ಞ ಪ್ರಾರಂಭವಾಯಿತು. ಯಜ್ಞದ ಕುದುರೆಯನ್ನು ಅಂಶುಮಂತ ರಕ್ಷಿಸಿಕೊಂಡು ನಡೆದ. ಆಗ ಇಂದ್ರನು ಮಾಯೆಯಿಂದ ರಾಕ್ಷಸ ಶರೀರವನ್ನು ಧರಿಸಿ ಯಜ್ಞದ ಕುದುರೆಯನ್ನು ಅಪಹರಿಸಿಕೊಂಡು ಹೋದ.

ಋತ್ವಿಜರು, "ರಾಜಾ ಯಜ್ಞಾಶ್ವವನ್ನು ಯಾರೋ ಅಪಹರಿಸಿದ್ದಾರೆ. ಅದನ್ನು ಬೇಗನೇ ತರಿಸು. ಯಜ್ಞದ ಕುದುರೆ ದೊರಕದಿದ್ದರೆ ಯಜ್ಞಭಂಗವಾಗಿ ನಮ್ಮೆಲ್ಲರಿಗೂ ಕೇಡಾಗುತ್ತದೆ" ಎಂದು ಒತ್ತಾಯಿಸಿದರು.

ಸಗರ ಚಕ್ರವರ್ತಿ ತನ್ನ ಅರವತ್ತು ಸಾವಿರ ಮಕ್ಕಳಿಗೆ ಹೇಳಿದ, "ಪುತ್ರರೇ, ಇಂಥ ಪವಿತ್ರವಾದ ಯಜ್ಞಕ್ಕೆ ಅಡ್ಡವಾಗಿ ರಾಕ್ಷಸರು ಹೇಗೆ ಬಂದರೋ ತಿಳಿಯದು. ನೀವು ಹೋಗಿ ಆ ಯಜ್ಞಾಶ್ವವನ್ನು ಹುಡುಕಿ ತನ್ನಿ. ಆ ಕಾರ್ಯಕ್ಕೆ ಏನು ಬೇಕೋ ಅದನ್ನು ಮಾಡಿ. ಬೇಕಾದರೆ ನೆಲವನ್ನು ಸೀಳಿ, ಸಮುದ್ರವನ್ನು ಬರಿದು ಮಾಡಿ" ಎಂದ.

ತಂದೆಯ ಆಜ್ಞೆಯಂತೆ ಈ ಮಕ್ಕಳು ಭೂಮಿಯ ಅಂಗುಲ ಅಂಗುಲ ಶೋಧಿಸತೊಡಗಿದರು. ಹರಿತವಾದ ಆಯುಧಗಳಿಂದ, ಶೂಲಗಳಿಂದ ನೆಲವನ್ನು ಛೇದಿಸತೊಡಗಿದರು. ದೇವತೆಗಳು ಭೀತರಾಗಿ ಬ್ರಹ್ಮನ ಬಳಿಗೆ ತೆರಳಿ, "ಸಗರ ಪುತ್ರರು ಒಂದೇ ಸಮನೆ ಭೂಮಿಯನ್ನು ಅಗೆಯುತ್ತಿದ್ದಾರೆ. ಇದರಿಂದ ಭೂಮಿಗೆ ಮುಂದೆಂದೂ ತುಂಬಿಕೊಳ್ಳಲಾಗದ ನಷ್ಟವಾಗುತ್ತದೆ. ಇದನ್ನು ತಡೆಯಬೇಕು" ಎಂದರು.

ಆಗ ಬ್ರಹ್ಮ ಹೇಳಿದ ಮಾತು ಇದು.
ಪಥಿವ್ಯಾಶ್ಚಾಪಿ ನಿರ್ಭೇದೋ ದಷ್ಟ ಏವ ಸನಾತನಃ
ಸಗರಸ್ಯ ಚ ಪುತ್ರಾಣಾಂ ವಿನಾಶೋ ದೀರ್ಘಜೀವಿನಾಮ್‌
(ವಾಲ್ಮೀಕಿ ರಾಮಾಯಣ, ಸರ್ಗ 40, ಶ್ಲೋಕ 4)

ಹೀಗೆ ಭೂಮಿಯ ಛೇದನ ಕಾರ್ಯ ಪ್ರತಿ ಕಲ್ಪದಲ್ಲೂ ಸನಾತನವಾಗಿ ನಡೆಯುತ್ತಲೇ ಇದೆ. ಇದರಿಂದ ಅಲ್ಪಾಯುಗಳಾದ ಸಗರ ಪುತ್ರರ ವಿನಾಶವೂ ಆಗುತ್ತದೆ. ಅಹಂಕಾರಿಗಳಾದ ಸಗರ ಪುತ್ರರು ಕುದುರೆಯನ್ನು ಹುಡುಕುವುದಕ್ಕಾಗಿ ಭೂಮಿಯನ್ನು ಸೀಳಿ, ಸೀಳಿ ಧ್ವಂಸ ಮಾಡಿದರು.

ಕೊನೆಗೆ ಕಪಿಲಾವತಾರದಲ್ಲಿದ್ದ ಸನಾತನವಾದ ವಾಸುದೇವನನ್ನು ಕಂಡರು. ಅವನ ಪಕ್ಕದಲ್ಲೇ ಯಜ್ಞಾಶ್ವ ಮೇಯುತ್ತಿತ್ತು. ಅವನೇ ಕುದುರೆಯ ಕಳ್ಳನಿರಬೇಕೆಂದು ಅವನ ಮೇಲೆ ಆಕ್ರಮಣ ಮಾಡಲು ಹೋದಾಗ ಆ ಋಷಿಗೆ ಉಗ್ರಕೋಪ ಬಂದು ಒಮ್ಮೆ ಹೂಂಕಾರ ಮಾಡಿದ. ಆಗ ಬಂದ ಜ್ವಾಲೆಯಲ್ಲಿ ಸಗರನ ಅರವತ್ತು ಸಾವಿರ ಮಕ್ಕಳು ಸುಟ್ಟು ಬೂದಿಯಾಗಿ ಹೋದರು.

ಈ ಕಥೆ ಎಷ್ಟು ಧ್ವನಿಪೂರ್ಣವಾಗಿದೆಯಲ್ಲವೇ? ತಮ್ಮ ಸ್ವಂತ ಲಾಭಕ್ಕಾಗಿ, ಪರರ ತೊಂದರೆ ಗಮನಿಸದೇ ನೆಲವನ್ನು ಸೀಳುವವರು ಪ್ರತೀ ಕಲ್ಪದಲ್ಲಿದ್ದಂತೆ ಇಂದಿಗೂ ಇದ್ದಾರಲ್ಲವೇ? ಉದಾ: ಎತ್ತಿನಹೊಳೆ.

ಹೀಗೆ ಭೂಮಿ ಛೇದನ ಮಾಡುವವರು ಅಲ್ಪಾಯುಷಿಗಳಾಗಿ ವಿನಾಶ ಹೊಂದುತ್ತಾರೆ ಎಂದು ಬ್ರಹ್ಮ ಅಂದು ಹೇಳಿದ ಮಾತು ಈಗಲಾದರೂ ಅಂಥವರ ಗಮನಕ್ಕೆ ಬರುವುದು ಒಳ್ಳೆಯದು. ಹಾಗೆ ಮಾಡಿದವರು ಬದುಕಿನ ಪಯಣದಲ್ಲಿ, ಅಧಿಕಾರದ ಪೀಠದಲ್ಲಿ ಬಹಳ ಕಾಲ ಬದುಕದೇ ವಿನಾಶದೆಡೆಗೆ ಸಾಗುವುದನ್ನು ಕಂಡಾಗ ಪುರಾಣದ ಕಥೆಗಳು ಬರೀ ಕಥೆಗಳಾಗಿರದೇ ಸಾಂಕೇತಿಕವಾದ ಶಾಶ್ವತ ಸತ್ಯಗಳಾಗಿವೆ ಎನ್ನಿಸುತ್ತದೆ.

ಸಂ: ದಾಮೋದರ ಶೆಟ್ಟಿ, ಇರುವೈಲು
 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು