![]() |
ವಿಟ್ಲ ಶಂಭು ಶರ್ಮರು (ಚಿತ್ರ: ಗುರುಪ್ರಸಾದ್ ಆಚಾರ್ಯ) |
ಛಲದಿಂದಲೇ ಶ್ರಮಪಟ್ಟು ಅಧ್ಯಯನ ಮಾಡಿ, ಅತ್ಯುತ್ತಮ ತಾಳಮದ್ದಳೆ ಅರ್ಥಧಾರಿಯಾಗಿ ಮೂಡಿಬಂದವರು ವಿಟ್ಲ ಶಂಭು ಶರ್ಮ. ಅವರ ಜೀವನದ ಕೆಲವೊಂದು ಘಟನೆಗಳೊಂದಿಗೆ ಸಾಧನೆಗಳನ್ನು ನೆನಪಿಸಿಕೊಂಡಿದ್ದಾರೆ ಎಂ.ಶಾಂತಾರಾಮ ಕುಡ್ವ, ಮೂಡಬಿದಿರೆ.
ವಿಟ್ಲ ಶಂಭು ಶರ್ಮ ಎಂಬ ಹೆಸರು ಪ್ರಸಕ್ತ ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಚಿರಪರಿಚಿತ. ಉತ್ತಮ ಅರ್ಥಧಾರಿ, ಪ್ರಸಂಗದ ನಡೆ, ಪದ್ಯಗಳ ಮರ್ಮ ಅರಿತು ಅರ್ಥ ಹೇಳಬಲ್ಲ ಬೆರಳೆಣಿಕೆಯ ಕಲಾವಿದರಲ್ಲಿ ಓರ್ವರು. ಚರ್ವಿತ ಚರ್ವಣದ ಲೇಪವಿಲ್ಲದ, ಹೇಳಬೇಕಾದುದನ್ನು ಒಂದೂ ಬಿಡದ, ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಪಾತ್ರಗಳಿಗೊಂದು 'ಪಾತ್ರ' ಸೃಷ್ಟಿಸಬಲ್ಲ ಸಮರ್ಥ, ಹಿರಿಯ, ಅನುಭವೀ ಅರ್ಥಧಾರಿಗಳೂ ಹೌದು.
ಯಾವುದೇ ಪಾತ್ರ ಕೊಟ್ಟರೂ, ಲೀಲಾಜಾಲವಾಗಿ ನಿರ್ವಹಿಸಿ ಆ ಪಾತ್ರಕ್ಕೊಂದು ಗಟ್ಟಿಯ ನೆಲೆಗಟ್ಟನ್ನು ನಿರ್ಮಿಸಬಲ್ಲ ತಾಳಮದ್ದಳೆ ಕ್ಷೇತ್ರದ ಮುಮ್ಮೇಳದ ಸವ್ಯಸಾಚಿಗಳು ವಿಟ್ಲ ಶಂಭು ಶರ್ಮರು. ತಮ್ಮ ಅದ್ಭುತವಾದ ಮಂಡನೆ - ಖಂಡನೆ, ಸುಲಭವಾಗಿ ನಿರಾಕರಿಸಲಾಗದ ವಾದ ವೈಖರಿ, ಕಂಚಿನ ಕಂಠವಾದರೂ ಪಾತ್ರಗಳ ಸ್ವಭಾವ, ರಸಭಾವ ಲಕ್ಷಿಸಿ ಮಾತುಗಾರಿಕೆಯ ಏರಿಳಿತಗಳನ್ನು ಸಮರ್ಥವಾಗಿ ಬಿಂಬಿಸಬಲ್ಲ ಅಸಾಧಾರಣ ಕಲೆ ಶರ್ಮರನ್ನು ಇಂದು ಎತ್ತರಕ್ಕೆ ಏರಿಸಿದೆ ಎಂದರೆ ಅದು ಉತ್ಪೇಕ್ಷೆಯ ಮಾತಂತೂ ಖಂಡಿತವಾಗಿಯೂ ಅಲ್ಲ.
ಪ್ರಚಲಿತ ವಿದ್ಯಮಾನಗಳ ಹೋಲಿಕೆ, ಹಾಸ್ಯಪ್ರವೃತ್ತಿಯ ವಾಗ್ಝರಿ, ಶೃಂಗಾರರಸ, ಹೊಸತನವನ್ನು ಆನ್ವೇಷಿಸುವ ಮನೋಭಾವ, ಇವುಗಳನ್ನೆಲ್ಲಾ ತನ್ನ ಅರ್ಥಗಾರಿಕೆಯಲ್ಲಿ ಬಳಸುವ ಶಂಭು ಶರ್ಮರ ಅರ್ಥಗಾರಿಕೆಯ ಶೈಲಿ - ಇವೆಲ್ಲವೂ ಪ್ರೇಕ್ಷಕರ ಅಭಿಮಾನವನ್ನು ಸೆಳೆದ ಅಂಶಗಳು. ಮಲ್ಪೆ ಶಂಕರನಾರಾಯಣ ಸಾಮಗ, ಶೇಣಿ ಗೋಪಾಲಕೃಷ್ಣ ಭಟ್, ದೇರಾಜೆ ಸೀತಾರಾಮಯ್ಯ, ಪೆರ್ಲ ಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಮಟ್ಟಿ ಸುಬ್ಬರಾವ್, ಮಲ್ಪೆ ರಾಮದಾಸ ಸಾಮಗ, ಕುಂಬ್ಳೆ ಸುಂದರ ರಾವ್, ಕೊಳ್ಯೂರು ರಾಮಚಂದ್ರ ರಾವ್, ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಮಾರೂರು ಮಂಜುನಾಥ ಭಂಡಾರಿ, ಡಾ.ಪ್ರಭಾಕರ ಜೋಷಿ, ಮೇಲುಕೋಟೆ ಉಮಾಕಾಂತ ಭಟ್, ಮಲ್ಪೆ ವಾಸುದೇವ ಸಾಮಗ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ, ಎಂ.ಎ.ಹೆಗ್ಡೆ, ಗೋವಿಂದ ಭಟ್ ಮುಂತಾದ ಹಿರಿಯ ಕಲಾವಿದರೊಂದಿಗೆ ಮೆರೆದ ಶರ್ಮರು ಪ್ರಸ್ತುತ ಕೂಟಗಳಲ್ಲಿ ವ್ಯವಸಾಯ ಮಾಡುತ್ತಿರುವ ಹಲವಾರು ಈಗಿನ ಅರ್ಥಧಾರಿಗಳ ಜೊತೆಗಿನ ಕೊಂಡಿಯಾಗಿದ್ದು, ಈಗಲೂ ಬಹುಬೇಡಿಕೆಯ ಅರ್ಥಧಾರಿ.
ಶರ್ಮರ ಅರ್ಥಗಾರಿಕೆಯು ಬಲು ಸೊಗಸಾದುದು. ಯಾವುದೇ ಪಾತ್ರವನ್ನು ನಿರ್ವಹಿಸುವಾಗ ಪೀಠಿಕೆಯಲ್ಲಿ ಆ ಪಾತ್ರದ ಗುಣ- ಸ್ವಭಾವವನ್ನು ಪ್ರೇಕ್ಷಕರಿಗೆ ಮನದಟ್ಟು ಮಾಡಿಸುವ ವೈಖರಿ ಶರ್ಮರದ್ದು. ವಿನಾ ಕಾರಣ ಉದ್ದಕ್ಕೆ ಬೆಳೆಸದ, ಹೇಳಬೇಕಾದುದನ್ನು ಹೇಳಿಯೇ ಮುಗಿಸುವ ವಿಧಾನ ಶರ್ಮರದ್ದು. ಎದುರಾಳಿ ಪಾತ್ರಧಾರಿ ಅನಗತ್ಯ ವಾದಕ್ಕೆ ನಿಂತರೆ, ತಮ್ಮ ವಾದಮಂಡನೆಗೆ ಪುರಾಣಗಳ ಆಧಾರವನ್ನೇ ಮುಂದೆ ನಿಲ್ಲಿಸಿ, ಪಾತ್ರಕ್ಕೊಂದು ನ್ಯಾಯ ಒದಗಿಸುವ ಜಾಯಮಾನದವರು.
ಶರ್ಮರ ಅರ್ಥಗಾರಿಕೆಯಲ್ಲಿ ರಸಪೂರ್ಣ ಸಾಹಿತ್ಯ ಇರುವುದೇ ಹೊರತು, ಅನವಶ್ಯಕ ಜೊಳ್ಳು ಇಲ್ಲ ಎಂಬುದು ಪ್ರೇಕ್ಷಕರ ಅಭಿಪ್ರಾಯ ಸಾಧುವಾದುದೇ ಹೌದು. ಎಲ್ಲಾ ಪ್ರಸಂಗಗಳ ನಡೆ ಅರಿತಿರುವ ಶರ್ಮರು ಎಲ್ಲಾ ಪಾತ್ರಗಳ ಒಳಗನ್ನು ಅರಿತವರೂ ಹೌದು. ಪಾತ್ರಗಳ ಗುಣ, ಸ್ವಭಾವ, ಚಿತ್ರಣದ ವಿಧಾನವನ್ನು ಸಹ ಕಲಾವಿದರಿಗೆ ತಿಳಿಸಿ ಹೇಳುವಲ್ಲಿ ಶರ್ಮರಿಗೆ ಪ್ರದರ್ಶನದ ಯಶಸ್ಸಿನ ಬಗ್ಗೆ ಇರುವ ಕಾಳಜಿ ಉಲ್ಲೇಖನೀಯ. ಎದುರಾಳಿ ಪಾತ್ರಧಾರಿ ಎಲ್ಲಿಯಾದರೂ, ಪ್ರಸಂಗದ ನಡೆ ಮೀರಿ ವರ್ತಿಸಿದರೆ, ಕೆರಳುವ ಶರ್ಮರ ಅಂದಿನ ವಾದ ವೈಖರಿಯಂತೂ ಪ್ರೇಕ್ಷಕರಿಗೆ ರಸದೌತಣವೇ ಹೌದು.
ಭೀಷ್ಮನನ್ನು ವಿಚಾರಿಸುವ ಪರಶುರಾಮ, ಕರ್ಣನ ಬದ್ಧತೆಯನ್ನು ನೆನಪಿಸುವ ಶಲ್ಯ, ಅರ್ಧ ರಾಜ್ಯ ಕೊಡಲಾರೆನೆಂಬ ಛಲದ ಕೌರವ, ಅಂಬೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ತಿರಸ್ಕರಿಸುವ ಸಾಲ್ವ, ಕುಟಿಲತೆಯನ್ನೇ ಸಾಕಾರಗೊಳಿಸಿದ ಮಂಥರೆ, ಸೀತಾಪಹಾರ ಮಾಡಿದ್ದು ಸರಿಯೆಂದು ದರ್ಪದಿಂದ ಮೆರೆಯುವ ರಾವಣ, ಲೌಕಿಕತೆಯನ್ನು ಅಲೌಕಿಕತೆಯೊಂದಿಗೆ ಹೊಂದಿಸುವ ಚಾತುರ್ಯದ ಅರ್ಜುನ ಸನ್ಯಾಸಿ, ಭೋಳೇ ಸ್ವಭಾವವನ್ನು ಬಿಂಬಿಸುವ ಬಲರಾಮ, ತೆಳು ಹಾಸ್ಯ ಮಿಶ್ರಿತ ಸಂಭಾಷಣೆಗೈಯುವ ಸುಗ್ರೀವ ಮುಂತಾದ ಪಾತ್ರಗಳು ಶರ್ಮರ ಪ್ರತಿಭೆಯನ್ನು ಪ್ರಕಟವಾಗುವಂತೆ ಮಾಡಿದ ಪಾತ್ರಗಳು.
ವಿಟ್ಲ ಶಂಭುಶರ್ಮರು 13-10-1951ರಲ್ಲಿ ಕುಂಬಳೆ ಸೀಮೆಯ ಎಡನಾಡು ಗ್ರಾಮದ ಶೆಡಂಪಾಡಿ ಎಂಬಲ್ಲಿ ಹೆಡ್ ಮಾಸ್ಟರ್ ಆಗಿದ್ದ ದಿ| ಕೃಷ್ಣ ಭಟ್ - ಹೇಮಾವತಿ ಅಮ್ಮನವರ ಸುಪುತ್ರರಾಗಿ ಜನಿಸಿದರು. ವಿಟ್ಲದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿ ಪಡೆದರು. ಜೀವನೋಪಾಯಕ್ಕಾಗಿ 35 ವರ್ಷ ಬೇರೆ ಬೇರೆ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.
ಶರ್ಮರು ಯಕ್ಷಗಾನೀಯ ಹಿನ್ನೆಲೆಯಿಲ್ಲದ ಕುಟುಂಬದವರು. ಯಕ್ಷರಂಗದ ಭೀಷ್ಮ ಎನಿಸಿದ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ಶರ್ಮರ ತಂದೆಯವರ ಸಹಪಾಠಿಗಳು ಹಾಗೂ ಸಂಬಂಧಿಕರು ಎಂಬುದನ್ನು ಬಿಟ್ಟರೆ ಯಕ್ಷಗಾನದ ಯಾವುದೇ ಹಿನ್ನೆಲೆ ಇಲ್ಲ. ಆದರೆ, ಶಂಭುಶರ್ಮರು ಅನಿರೀಕ್ಷಿತ ಸಂದರ್ಭವೊಂದರಲ್ಲಿ ಯಕ್ಷಗಾನ ತಾಳಮದ್ದಳೆ ಕೂಟವೊಂದರಲ್ಲಿ ಅರ್ಥ ಹೇಳಿ, ಮುಂದಕ್ಕೆ ಅದರಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡರು.
ವಿಟ್ಲದಲ್ಲಿ ಯಾವಾಗಲೂ ಜರುಗುತ್ತಿದ್ದ ತಾಳಮದ್ದಳೆ ಕೂಟಕ್ಕೆ ಶರ್ಮರು ಪ್ರೇಕ್ಷಕರಾಗಿ ಹೋಗುತ್ತಿದ್ದರು. ಒಂದು ಬಾರಿ ಕೃಷ್ಣಸಂಧಾನ ಪ್ರಸಂಗದಲ್ಲಿ ಧರ್ಮರಾಯನ ಪಾತ್ರ ವಹಿಸಬೇಕಾಗಿದ್ದ ಕಲಾವಿದರು ಗೈರು ಹಾಜರಾದಾಗ, ಪ್ರೇಕ್ಷಕರಾಗಿ ಹೋಗಿದ್ದ ಶರ್ಮರಿಗೆ ಆ ಪಾತ್ರ ನಿರ್ವಹಿಸಲು ಸಂಘಟಕರು ಒತ್ತಾಯಿಸಿದರು. ಆದರೆ ಅಂದು ಶ್ರೀಕೃಷ್ಣನ ಪಾತ್ರ ಮಾಡಿದ ಕಲಾವಿದರಿಂದ ಶರ್ಮರಿಗೆ ಮುಖಭಂಗ ಆಯಿತು. ಈ ಪ್ರಕರಣವೇ ಶರ್ಮರನ್ನು ಹಠವಾದಿಯನ್ನಾಗಿ ಮಾಡಿ ತಾನೂ ಮುಂದಕ್ಕೆ ಅರ್ಥಧಾರಿ ಆಗಬೇಕೆಂಬ ಛಲ ಮೂಡಿತು.
ಪ್ರಸಿದ್ಧ ಅರ್ಥಧಾರಿ ದೇರಾಜೆ ಸೀತಾರಾಮಯ್ಯನವರಲ್ಲಿ ತೆರಳಿ ಅರ್ಥಗಾರಿಕೆ ಕಲಿಸಿಕೊಡುವಂತೆ ದುಂಬಾಲು ಬಿದ್ದರು. "ಅರ್ಥಗಾರಿಕೆ ಕಲಿಸಿ ಕೊಡುವಂಥದ್ದಲ್ಲ, ಪುರಾಣಗಳ ಓದುವಿಕೆಯಿಂದಾಗಿ ಸಿದ್ಧಿಸುವಂತದ್ದು" ಎಂದು ದೇರಾಜೆಯವರು ಹೇಳಿದಾಗ ಸತತ ಅಧ್ಯಯನ, ತಾಳಮದ್ದಳೆ ವೀಕ್ಷಿಸಿ ಅನುಭವ ಗಳಿಸಿದರು. ನಂತರ ದೇರಾಜೆಯವರಲ್ಲೇ ಶಿಷ್ಯತ್ವ ಭಾವ ಬೆಳೆಸಿ ಸಂಭಾಷಣೆಯ ಕೌಶಲ್ಯ ಮತ್ತು ಪಾತ್ರಗಳ ಸೂಕ್ಷ್ಮ ಚಿತ್ರಣಗಳ ಕಲೆಯನ್ನು ಕಲಿತರು.
ಸುಪ್ರಸಿದ್ಧ ಕಲಾವಿದರಾಗಿದ್ದ ಕರ್ಗಲ್ಲು ಸುಬ್ಬಣ್ಣ ಭಟ್ಟರು ಶಂಭು ಶರ್ಮರ ಆಸಕ್ತಿ ಗಮನಿಸಿ ತುಂಬಾ ಪ್ರೋತ್ಸಾಹವನ್ನು ಕೊಟ್ಟರು. ಅಂದಿನ ಕಾಲದಲ್ಲಿ ವಿಟ್ಲದ ಹಲವಾರು ಕೂಟಗಳಲ್ಲಿ ಹಿರಿಯ ಕಲಾವಿದರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗಳು, ಪೆರುವೋಡಿ ನಾರಾಯಣ ಭಟ್ಟರೇ ಮೊದಲಾದವರು ಭಾಗವಹಿಸುತ್ತಿದ್ದುದರಿಂದ ಶಂಭು ಶರ್ಮರು ಅವರೊಂದಿಗೆ ಅರ್ಥ ಹೇಳಿ ಅರ್ಥಧಾರಿಯಾಗಿ ಬೆಳೆಯಲು ಅನುಕೂಲವಾಯಿತು.
ಮುಂದೆ ಜೀವನೋಪಾಯಕ್ಕಾಗಿ ಉಪನ್ಯಾಸಕರಾಗಿ ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿ ಬಂದ ಕಾರಣ ಶಂಭು ಶರ್ಮರಿಗೆ ಸ್ವಲ್ಪ ಮಟ್ಟಿಗೆ ಯಕ್ಷಗಾನದ ನಂಟು ಕಡಿಮೆಯಾಯಿತು. 1975 ರಲ್ಲಿ ಭಾರತದಲ್ಲಿ ತುರ್ತುಪರಿಸ್ಥಿತಿ ಹೇರಲ್ಪಟ್ಟಾಗ, ಅದರ ವಿರುದ್ಧದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಕ್ಷಗಾನದಿಂದ ದೂರವಾಗಿದ್ದರು. ತುರ್ತುಪರಿಸ್ಥಿತಿಯ ನಂತರ ಮಂಗಳೂರಿನ ಗಣಪತಿ ಜೂನಿಯರ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಗೆ ಸೇರಿದ ನಂತರ ಪುನಃ ಯಕ್ಷಗಾನದಲ್ಲಿ ತೊಡಗಿಸಿಕೊಂಡರು.
ಬೆಸೆಂಟ್ ಸಂಜೆ ಕಾಲೇಜು, ಬೆಸೆಂಟ್ ಡೇ ಕಾಲೇಜು, ಫಿಶರೀಸ್ ಕಾಲೇಜು - ಹೀಗೆ ಹಲವು ಕಾಲೇಜುಗಳಲ್ಲಿ ವೃತ್ತಿ ಜೀವನ ಕೈಗೊಂಡು ರಾತ್ರಿ ಶ್ರೀಧರ ರಾಯರ ನೇತೃತ್ವದ ಯಕ್ಷಗಾನ ಬಯಲಾಟ, ತಾಳಮದ್ದಳೆ ಕೂಟಗಳಲ್ಲಿ ಭಾಗವಹಿಸುತ್ತಿದ್ದರು. ಈ ಅವಧಿಯಲ್ಲಿ ಶರ್ಮರ ವಾಕ್ಪಟುತ್ವ ಎದ್ದು ಕಂಡಿತು. ಆದರೆ, ಮುಂದೆ ಉದ್ಯೋಗಕ್ಕಾಗಿ ಮೂರ್ನಾಡು, ಸೋಮವಾರಪೇಟೆ ಮುಂತಾದ ಊರಿಗಳಿಗೆ ಹೋಗಬೇಕಾಗಿ ಬಂದ ಕಾರಣ ಯಕ್ಷಗಾನದ ಸಂಪರ್ಕ ಪುನಃ ಕಡಿಯಿತು. ಸೋಮವಾರಪೇಟೆಯಿಂದ ಮರಳಿ ಬಂದು ಮೂಲ್ಕಿ ವಿಜಯಾ ಕಾಲೇಜು, ನಿರಂಜನ ಸ್ವಾಮಿ ಕಾಲೇಜು ಸುಂಕದಕಟ್ಟೆ ಇಲ್ಲಿ ಉಪನ್ಯಾಸಕರಾಗಿ ವೃತ್ತಿ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಮಗದೊಮ್ಮೆ ಕೂಟಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಸುಪ್ರಸಿದ್ಧ ಅರ್ಥಧಾರಿಗಳಾಗಿ ಎದ್ದು ಕಂಡರು.
ವೇಷಧಾರಿಯಾಗಿ...
ಶಂಭು ಶರ್ಮರು ಕೇವಲ ಅರ್ಥಧಾರಿ ಎಂದು ಭಾವಿಸಿದರೆ ತಪ್ಪಾದೀತು. ಅವರು ಯಕ್ಷಗಾನ ವೇಷಧಾರಿಯೂ ಹೌದು ಎಂದರೆ, ಈಗಿನ ತಲೆಮಾರಿನ ಯಕ್ಷಗಾನ ಅಭಿಮಾನಿಗಳಿಗೆ ಅಚ್ಚರಿಯಾದೀತು. ಶರ್ಮರು ಕೆಲವು ವರ್ಷಗಳ ತಿರುಗಾಟ ಮಾಡಿದ್ದಾರೆ. ಕುಬಣೂರು ಶ್ರೀಧರ ರಾವ್ ರವರ ತಂಡದಲ್ಲಿ ಹಾಗೂ ಕರ್ನೂರು ಕೊರಗಪ್ಪ ರೈಗಳ ತಂಡದಲ್ಲಿ ಖಾಯಂ ವೇಷಧಾರಿಯಾಗಿದ್ದರು. ತಾವು ಉಪನ್ಯಾಸಕರಾಗಿ ಇರುವ ಅವಧಿಯಲ್ಲಿ, ಪ್ರತೀ ವರ್ಷ ಫೆಬ್ರವರಿ 28 ರ ನಂತರ ಕಾಲೇಜಿಗೆ ರಜಾ ಇರುವ ಸಮಯದಲ್ಲಿ ಎರಡು ತಿಂಗಳ ಕಾಲ ಸುಬ್ರಹ್ಮಣ್ಯ, ಕದ್ರಿ ಮುಂತಾದ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಭಾಗವಹಿಸುತ್ತಿದ್ದರು.
ಸುಮಾರು 1988 ರಲ್ಲಿ ಒಂದು ವರ್ಷ ಉದ್ಯೋಗಕ್ಕೆ ರಜೆ ಹಾಕಿ ಪೂರ್ಣಾವಧಿ ಕಲಾವಿದನಾಗಿ ನಾರಾಯಣ ಕಾಮತ್‌ರವರ ಬಪ್ಪನಾಡು ಮೇಳದಲ್ಲಿ ತಿರುಗಾಟ ಮಾಡಿದ್ದರು. ನಂತರ ದಿವಾಕರರ ಸಂಚಾಲಕತ್ವದ ಉಡುಪಿ ಮೇಳದಲ್ಲಿ ವೇಷಧಾರಿಯಾಗಿ ತಿರುಗಾಟ ಮಾಡಿದ್ದರು. ಆದರೆ ಈ ಅವಧಿಯಲ್ಲಿ ಅಪಘಾತವಾಗಿ ನಂತರದಲ್ಲಿ ವೇಷಭೂಷಣ ಕಟ್ಟಲು ಕಷ್ಟವಾದ ಕಾರಣ ಅತಿಥಿ ಕಲಾವಿದನಾಗಿ ಅಪರೂಪಕ್ಕೆ ವೇಷವನ್ನು ಆಗಾಗ ಮಾಡುತ್ತಿದ್ದರು. ಶಂಭು ಶರ್ಮರು ತಮ್ಮ 14ನೇ ವಯಸ್ಸಿನಲ್ಲಿ ಸೂರಂಬೈಲಿನಲ್ಲಿ ನಡೆದ ಭೀಷ್ಮಪರ್ವ ತಾಳಮದ್ದಳೆ ಕೂಟದಲ್ಲಿ ಮಲ್ಪೆ ಶಂಕರನಾರಾಯಣ ಸಾಮಗರ ಪಾತ್ರಕ್ಕೆದುರಾಗಿ ಅಭಿಮನ್ಯು ಪಾತ್ರ ಮಾಡಿದ್ದರು. ಸಾಮಗರು ಇವರ ಅರ್ಥವನ್ನು ಮೆಚ್ಚಿಕೊಂಡು ಪ್ರಶಂಸಿಸಿದ್ದರು.
ರಾಡ್ ಹಾಕಿಯೇ 100ಕ್ಕೂ ಹೆಚ್ಚು ತಾಳಮದ್ದಳೆ
ಶರ್ಮರು ದಿ.ವಾಸುದೇವ ಸಾಮಗರ ಸಂಯಮಂ ತಾಳಮದ್ದಳೆ ತಂಡದ ಪೂರ್ಣಾವಧಿ ಸದಸ್ಯರಾಗಿ ಹಲವಾರು ವರ್ಷಗಳ ಕಾಲ ತಿರುಗಾಟ ನಡೆಸಿದ್ದರು. ಈ ಸಮಯದಲ್ಲಿ ವಾ.ಸಾಮಗ × ಶಂಭು ಶರ್ಮ ಜೋಡಿಯು ತಾಳಮದ್ದಳೆ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಆದರೆ ಸಂಯಮಂ ತಂಡಕ್ಕೆ ಒದಗಿದ ಅನಿರೀಕ್ಷಿತ ಅಪಘಾತವೊಂದರಲ್ಲಿ ಶಂಭು ಶರ್ಮರ ಕೈ ಫ್ರಾಕ್ಚರ್ ಆಗಿ ಕೈಗೆ ರಾಡ್ ಹಾಕಿ ಕೊರಳಿಗೆ ನೇತಾಡಿಸುವ ಪರಿಸ್ಥಿತಿ ಒದಗಿ ಬಂತು. ಶರ್ಮರು ಈ ಕಾಲಘಟ್ಟದಲ್ಲಿ ಅರ್ಥ ಹೇಳುವುದನ್ನೇ ನಿಲ್ಲಿಸುವ ನಿರ್ಧಾರ ಮಾಡಿದ್ದರು.
ಆದರೆ, ಈಗಾಗಲೇ ತಾಳಮದ್ದಳೆ ಕೂಟಗಳ ಎ ಗ್ರೇಡ್ ಕಲಾವಿದರು ಎಂದು ಸಂಘಟಕರಿಂದ ಮಾನಿಸಲ್ಪಟ್ಟ ಕಾರಣ ಶರ್ಮರನ್ನು ಕೂಟಗಳಿಂದ ಬಿಡಲು ಸಂಘಟಕರು ಸಿದ್ಧರಿರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಕೈಗೆ ರಾಡ್ ಹಾಕಿದ ಸ್ಥಿತಿಯಲ್ಲಿಯೇ ಶಂಭು ಶರ್ಮರು ಸುಮಾರು 100 ಕ್ಕೂ ಮಿಕ್ಕಿ ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರು.
ಶಂಭುಶರ್ಮರು ಯಾವುದೇ ಪಾತ್ರಗಳನ್ನೂ ನಿರ್ವಹಿಸಬಲ್ಲ ಸಮರ್ಥರು. ನಾಯಕ, ಖಳ, ಪೋಷಕ, ಹಾಸ್ಯ, ಸ್ತ್ರೀ - ಹೀಗೆ ಎಲ್ಲಾ ಪಾತ್ರಗಳಲ್ಲೂ ವಿಜೃಂಭಿಸಿದವರು. ತಮಗೆ ದೈವದತ್ತವಾಗಿ ಬಂದ ಕಂಚಿನ ಕಂಠವು ಖಳ ಪಾತ್ರಗಳಿಗೆ ಸೂಕ್ತವಾದರೂ, ಆ ಕಂಠದ ಶ್ರುತಿಯನ್ನು ನಾಯಕ, ಸ್ತ್ರೀ ಪಾತ್ರಗಳಿಗೂ ಹೊಂದಿಸಿಕೊಳ್ಳಬಲ್ಲ ವಿಶಿಷ್ಟ ಕಲಾವಿದರು. ಎಲ್ಲರಿಂದಲೂ ಇದು ಸಾಧ್ಯವಾಗುವ ಕೆಲಸವಲ್ಲ.
ಯಾವುದೇ ಪಾತ್ರವನ್ನೂ ಲೀಲಾಜಾಲವಾಗಿ ನಿರ್ವಹಿಸಬಲ್ಲ ಸಾಮರ್ಥ್ಯದ ಶಂಭು ಶರ್ಮರು, ತಾವು ನಿರ್ವಹಿಸಬೇಕಾದ ಪಾತ್ರಗಳ ಗುಣ, ಸ್ವಭಾವ, ಮನಸ್ಥಿತಿ ಅರಿತೇ ಚಿತ್ರಣ ನೀಡುವುದರಲ್ಲಿ ಪರಿಣತರು. ರಾಮಾಯಣ, ಮಹಾಭಾರತ, ಪುರಾಣಗಳ ಆಳವಾದ ಜ್ಞಾನ ಹೊಂದಿದ್ದು ಸಾಹಿತ್ಯದಲ್ಲಿ ಅಧ್ಯಯನಶೀಲರಾಗಿರುವ ಶರ್ಮರ ಅರ್ಥಗಾರಿಕೆಯಲ್ಲಿ ಬಾರದ ವಿಚಾರಗಳಿಲ್ಲ. ಸಮಕಾಲೀನ ಸಾಹಿತ್ಯ, ಸುಭಾಷಿತ, ಒಗಟುಗಳು, ಆಧುನಿಕ ವಿಚಾರ ಎಲ್ಲವೂ ಶರ್ಮರ ಅರ್ಥಗಾರಿಕೆಯ ಸೊಗಸನ್ನು ಹೆಚ್ವಿಸಿವೆ.
ವೇದ, ಉಪನಿಷತ್ತು, ಪುರಾಣಗಳಲ್ಲಿ ಬರುವ ಸಂಸ್ಕೃತ ಶ್ಲೋಕಗಳನ್ನು ಮಾತ್ರ ಕಲಾವಿದರು ಪಾತ್ರಗಳಲ್ಲಿ ಬಳಸಬೇಕೇ ಹೊರತು, ಕಾವ್ಯಗಳಲ್ಲಿ ಬರುವ ಸಂಸ್ಕೃತ ಶ್ಲೋಕಗಳನ್ನು ಬಳಸಬಾರದು ಎನ್ನುವ ನಿಲುವು ಹೊಂದಿರುವ ಶರ್ಮರು ನೇರ, ದಿಟ್ಟ ಹಾಗೂ ಹರಿತವಾದ ವಿಚಾರಧಾರೆಯುಳ್ಳವರು. ಇನ್ನಷ್ಟು ಬೇಕು ಎಂದಾಗ ಅರ್ಥ ಮುಗಿಸುವ ಶರ್ಮರ ಅರ್ಥಗಾರಿಕೆಯ ಶೈಲಿಯಲ್ಲಿ ದೇರಾಜೆಯವರ ಆದರ್ಶವಿದೆ.
ಶಲ್ಯ, ಕರ್ಣ, ಕೌರವ, ರಾವಣ, ಶತ್ರುಪ್ರಸೂದನ, ಮಂಥರೆ, ಸಾಲ್ವ, ಪರಶುರಾಮ, ಭೀಷ್ಮ, ದೂರ್ವಾಸ, ಹನುಮಂತ, ವಾಲಿ, ಸುಗ್ರೀವ, ವೀರಮಣಿ, ಈಶ್ವರ, ಮಾಧವ ಭಟ್ಟ ಮುಂತಾದ ಪಾತ್ರಗಳು ಶರ್ಮರಿಗೆ ಪ್ರಸಿದ್ಧಿಯನ್ನು ತಂದು ಕೊಟ್ಟ ಪಾತ್ರಗಳು. ಅದರಲ್ಲೂ, ಶೇಣಿ - ಸಾಮಗರ ಕಾಲದಲ್ಲಿ ಶರ್ಮರ ಶಲ್ಯನ ಪಾತ್ರ ಅವರಿಗೆ ತುಂಬಾ ಪ್ರಸಿದ್ಧಿ ತಂದುಕೊಟ್ಟದಲ್ಲದೇ, ಕರ್ಣಾರ್ಜುನ ಪ್ರಸಂಗವಿದ್ದರೆ ಶಲ್ಯನ ಪಾತ್ರ ಶರ್ಮರಿಗೇ ಮೀಸಲಾಗಿತ್ತು. ಶರ್ಮರ ಶಲ್ಯನ ಪಾತ್ರ ಚಿತ್ರಣ ಅದೆಷ್ಟು ಗಟ್ಟಿಯೆಂದರೆ, ಯಾರೇ ಕರ್ಣನ ಪಾತ್ರ ಮಾಡಿದ್ದರೂ, ಶರ್ಮರ ಶಲ್ಯನ ಎದುರು, ತತ್ತರಗೊಳ್ಳುತ್ತಿದ್ದರು. ಶಲ್ಯನ ವಾದ ವೈಖರಿಯು ಒಂದು ಪ್ರದರ್ಶನದಿಂದ ಮಗದೊಂದು ಪ್ರದರ್ಶನಕ್ಕೆ ಬದಲಾಗುತ್ತಿದ್ದುದರಿಂದ ಪ್ರೇಕ್ಷಕರೂ ಶರ್ಮರ ಶಲ್ಯನ ಪಾತ್ರವನ್ನು ಮೆಚ್ಚುತ್ತಿದ್ದರು.
ಆಪದ್ಬಾಂಧವ ಕಲಾವಿದ
ನಮ್ಮ ಯಕ್ಷಸಂಗಮ - ಮೂಡುಬಿದಿರೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಶಂಭುಶರ್ಮರು ಅನಿವಾರ್ಯ ಕಲಾವಿದರು. ನಾನು ಈ ಹಿಂದೆ ಬರೆದ ಹಲವಾರು ಲೇಖನಗಳಲ್ಲಿ ಶಂಭುಶರ್ಮರನ್ನು ಆಪದ್ಬಾಂಧವರು ಎಂದೇ ಉಲ್ಲೇಖಿಸಿದ್ದೇನೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಮ್ಮ ಹಲವಾರು ಕಾರ್ಯಕ್ರಮಗಳಲ್ಲಿ ಯಾರಾದರೂ ಕಲಾವಿದರು ಅನಿವಾರ್ಯವಾಗಿ ಗೈರು ಹಾಜರಾದರೆ ಆ ಸ್ಥಾನವನ್ನು ತುಂಬಬಲ್ಲ ವಿರಳಾತಿವಿರಳ ಕಲಾವಿದರಲ್ಲಿ ಶರ್ಮರೇ ಮುಂಚೂಣಿಯಲ್ಲಿ ಒದಗಿಬರುವವರು.
ಮೇಲೆ ಬರೆದಂತೆ ಯಾವುದೇ ಪಾತ್ರಗಳನ್ನೂ ನಿರ್ವಹಿಸಬಲ್ಲ ಸಮರ್ಥರು ಶರ್ಮರಾದ ಕಾರಣ ಹಾಗೂ ಸಂಘಟಕರ ಮಾನವನ್ನು ಉಳಿಸುವಲ್ಲಿ ಸಂಘಟಕ ಸ್ನೇಹಿಯಾಗಿರುವ ಶರ್ಮರು ನನಗೆ ಸದಾ ಒದಗಿ ಬಂದವರು. ಇದಕ್ಕೊಂದು ಸಣ್ಣ ಉದಾಹರಣೆಯನ್ನೂ ಕೊಡುತ್ತೇನೆ. ನಮ್ಮ ಒಂದು ತಾಳಮದ್ದಳೆ ಕೂಟದಲ್ಲಿ ಶರ್ಮರಿಗೆ ಎರಡನೇ ಪ್ರಸಂಗದಲ್ಲಿ ಪಾತ್ರ ನಿಗದಿಯಾಗಿತ್ತು. ಆದರೆ, ಮೊದಲ ಪ್ರಸಂಗದ ಕಲಾವಿದರು ಅನಿವಾರ್ಯ ಕಾರಣದಿಂದಾಗಿ ಬರಲಾಗದಿದ್ದಾಗ ಶರ್ಮರು ತಮಗೆ ನಿಗದಿಯಾದ ಪಾತ್ರದೊಂದಿಗೆ ಮೊದಲ ಪ್ರಸಂಗದ ಪಾತ್ರವನ್ನೂ ಮಾಡಿ ನಮ್ಮ ಮಾನ ಉಳಿಸಿದ್ದರು.
ಇನ್ನೊಂದು ಸಂದರ್ಭದಲ್ಲಿ ನಮ್ಮ ತಾಳಮದ್ದಳೆ ಕೂಟವೊಂದರಲ್ಲಿ ಮಹಾಬ್ರಾಹ್ಮಣ ಪ್ರಸಂಗ ಆಯ್ದುಕೊಂಡಿದ್ದೆ. ಶರ್ಮರಿಗೆ ಆ ಸಮಯದಲ್ಲಿ ಅಪಘಾತದಿಂದಾಗಿ ಕೈನೋವಿನ ಸಮಸ್ಯೆ ಇದ್ದ ಕಾರಣ, ಪೂರ್ವಾರ್ಧದಲ್ಲೇ ಪಾತ್ರ ನೀಡಿದ್ದೆ. ಆದರೆ, ಪ್ರಸಂಗದ ಕೊನೆಯಲ್ಲಿ ಬರುವ ವಿಶ್ವಾಮಿತ್ರ ಮೇನಕೆಯ ಭಾಗದಲ್ಲಿ ಬರಬೇಕಾದ ಸಣ್ಣ ಪಾತ್ರವಾದ ನಾರದನನ್ನು ಕೈ ಬಿಟ್ಟಿದ್ದೆ. ಆದರೆ ಶರ್ಮರು, ಕುಡ್ವರೇ, ನಾರದನ ಪಾತ್ರ ತುಂಬಾ ಪ್ರಾಮುಖ್ಯವಾದುದು. ಅದನ್ನು ಬಿಡುವುದು ಸರಿಯಲ್ಲ, ಮನ್ಮಥನ ಪಾತ್ರ ಮಾಡುವ ತಾರಾನಾಥ ಬಲ್ಯಾಯರಿಂದಲಾದರೂ ಮಾಡಿಸಿ ಎಂದರು. ನಾನೂ ನೋಡುವಾ ಶರ್ಮರೇ ಎಂದು ಉತ್ತರಿಸಿದೆ. ಆದರೆ, ಶರ್ಮರು ಅಂದು ವಿಶ್ರಾಂತಿ ಪಡೆಯಲು ಹೋಗದೇ, ತಾವೇ ನಾರದನ ಪಾತ್ರವನ್ನು ಅಚ್ಚುಕಟ್ಟಾಗಿ ಮಾಡಿ, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಸಂಘಟಕರಿಗೆ ಸದಾ ಸ್ನೇಹಿಗಳು ಶರ್ಮರು ಎಂಬುದಕ್ಕಾಗಿ ಇದನ್ನು ಉಲ್ಲೇಖಿಸುತ್ತಿದ್ದೇನೆ.
ಶಂಭು ಶರ್ಮರು ತಮಗೆ ಇಂತಹುದೇ ಪಾತ್ರ ಬೇಕೆಂಬ ಬೇಡಿಕೆಯನ್ನು ಇಡುವವರಲ್ಲ. ಆದರೂ, ಅಪಘಾತಕ್ಕೀಡಾದ ಮೇಲೆ ತಮಗೆ ಮೊದಲ ಪ್ರಸಂಗದ ಪಾತ್ರ ಕೊಟ್ಟರೆ, ನಂತರದಲ್ಲಿ ತಮಗೆ ಸ್ವಲ್ಪ ವಿಶ್ರಾಂತಿ ಮಾಡಲು ಅನುಕೂಲ ಎಂದು ಸಂಘಟಕರಲ್ಲಿ ವಿನಮ್ರವಾಗಿಯೇ ವಿನಂತಿಸುತ್ತಿದ್ದರು. ನಾನು ಆ ನಂತರದಲ್ಲಿ ಶರ್ಮರು ನನ್ನಲ್ಲಿ ಹೇಳದಿದ್ದರೂ, ಶರ್ಮರಿಗೆ ಮೊದಲ ಪ್ರಸಂಗದಲ್ಲೇ ಪಾತ್ರ ನೀಡುತ್ತಿದ್ದೆ.
ನಮ್ಮ ಒಂದು ಕಾರ್ಯಕ್ರಮದಲ್ಲಿ ಮೊದಲ ಪ್ರಸಂಗ 'ವಿಭೀಷಣ ನೀತಿ'ಯಾಗಿತ್ತು. ಮೂಡಂಬೈಲು ಶಾಸ್ತ್ರಿಯವರ ಗಟ್ಟಿ ಚಿತ್ರಣದ ವಿಭೀಷಣನಿಗೆ ಮೇಲುಕೋಟೆ ಉಮಾಕಾಂತ ಭಟ್ಟರಿಗೆ ರಾವಣ ಪಾತ್ರ ಕೊಟ್ಟಿದ್ದೆ. ಈ ಪ್ರಸಂಗದಲ್ಲಿ ಮುಖ್ಯ ಪಾತ್ರ ಇವೆರಡು ಬಿಟ್ಟರೆ ಬೇರಿಲ್ಲ. ಆದರೂ, ಶರ್ಮರಿಗೆ ಮೊದಲ ಪ್ರಸಂಗದಲ್ಲೇ ಪಾತ್ರ ಕೊಡಬೇಕಾದ ಅನಿವಾರ್ಯತೆಯಲ್ಲಿ ಶರ್ಮರಿಗೆ ಕೈಕಸೆಯ ಪಾತ್ರ ನೀಡಿದೆ. ಅಂದಿನ ಶರ್ಮರ, ರಾವಣನಿಗೆ ನೀತಿ ಹೇಳುವ ಕೈಕಸೆಯ ಪಾತ್ರವಂತೂ ಅತ್ಯಂತ "ಸೂಪರ್ ಹಿಟ್" ಆಗಿತ್ತು.
ಪ್ರಸಂಗ ಮುಗಿದಾಕ್ಷಣ ರಾವಣ ಪಾತ್ರ ಮಾಡಿದ್ದ ಮೇಲುಕೋಟೆಯವರು ಶರ್ಮರನ್ನು ತಬ್ಬಿ ಹಿಡಿದು, ನಿಮ್ಮ ಇಂದಿನ ಕೈಕಸೆಯ ಪಾತ್ರವನ್ನು ಎಂದಿಗೂ ಮರೆಯಲಾರೆ. ನಿಮ್ಮ ವಿದ್ವತ್‌ಗೆ ಶರಣು ಎಂದಾಗ, ಅಲ್ಲೇ ನಿಂತಿದ್ದ ನನಗೂ ರೋಮಾಂಚನವಾಗಿತ್ತು.
ಮಂಥರೆಯ ಪಾತ್ರದ ನೆನಪು
ಸುಮಾರು 20 ವರ್ಷಗಳ ಹಿಂದೆ ಮೂಡುಬಿದಿರೆ ಸಮೀಪದ ಅಶ್ವತ್ಥಪುರದ ಸಂಘಟಕರಿಗಾಗಿ ನಾನು ಪಟ್ಟಾಭಿಷೇಕ ಪ್ರಸಂಗ ಸಂಯೋಜಿಸಿದ್ದೆ. ಘಟಾನುಘಟಿಗಳ ಕೂಡುವಿಕೆಯ ಆ ಕೂಟದಲ್ಲಿ ಶರ್ಮರಿಗೆ ಮಂಥರೆಯ ಪಾತ್ರ ನೀಡಿದ್ದೆ. ಬಹುಶಃ ಶರ್ಮರಿಗೆ ಇದು ಪ್ರಥಮವಾಗಿ ದೊರಕಿದ ಮಂಥರೆಯ ಪಾತ್ರವಿರಬೇಕು. ನಾನು ಶರ್ಮರಿಗೆ ಹಾಸ್ಯಗಾರರು ನಿರ್ವಹಿಸುವ ಮಂಥರೆ ಪಾತ್ರ ನೀಡಿದ್ದು ಕೆಲವರಿಗೆ ಅಸಮಾಧಾನ ಮೂಡಿಸಿ, ಅದನ್ನು ಬದಲಾಯಿಸಲು, ಕೂಟ ಆರಂಭವಾಗುವುದರ ಅರ್ಧ ಘಂಟೆ ಮೊದಲಿನವರೆಗೂ ನನ್ನ ಮೇಲೆ ಒತ್ತಡವನ್ನೂ ಹಾಕಿದ್ದರು.
ಶರ್ಮರ ಪ್ರತಿಭೆಯನ್ನು ಅರಿತಿದ್ದ ನಾನು ಎಲ್ಲರಲ್ಲೂ ಮಂಥರೆ ಹಾಸ್ಯ ಪಾತ್ರವಲ್ಲ, ತಾಳಮದ್ದಳೆ ಮುಗಿದ ಮೇಲೆ ನಿಮ್ಮ ಅಭಿಪ್ರಾಯ ತಿಳಿಸಿ ಎಂದಿದ್ದೆ. ಅಂದಿನ ಶರ್ಮರ ಮಂಥರೆಯ ಚಿತ್ರಣ ಅದೆಷ್ಟು ಅದ್ಭುತವಾಗಿತ್ತೆಂದರೆ ಅಂದಿನಿಂದ ಇಂದಿನವರೆಗೂ ಮಂಥರೆಯ ಪಾತ್ರ ಶಂಭು ಶರ್ಮರೇ ಮಾಡಬೇಕು ಎಂದು ಪ್ರೇಕ್ಷಕರು ಬಯಸುವಷ್ಟು. ಇವತ್ತಿಗೂ ಶಂಭು ಶರ್ಮರು ತಮಗೆ ಮಂಥರೆಯ ಪಾತ್ರ ದೊರಕುವಾಗ ನನ್ನ ಹೆಸರನ್ನು ಹೇಳುತ್ತಿರುವುದನ್ನು ಹಲವಾರು ಸಂಘಟಕರು ತಿಳಿಸುವಾಗ ನನಗೂ ಎದೆ ತುಂಬಿ ಬರುತ್ತಿರುವುದು ಸುಳ್ಳಲ್ಲ. ಪುಂಜಾಲುಕಟ್ಟೆಯ ಹವ್ಯಾಸಿ ಅರ್ಥಧಾರಿ ಹಾಗೂ ಸಂಘಟಕರಾದ ಸುರೇಶ ಶೆಟ್ಟರು ಯಾವಾಗಲೂ ಈ ಬಗ್ಗೆ ನನ್ನಲ್ಲಿ ಹೇಳುತ್ತಾ ಇರುತ್ತಾರೆ.
ಶಂಭು ಶರ್ಮರು ಅದ್ಭುತ ಸ್ಮರಣ ಶಕ್ತಿಯುಳ್ಳವರು. 20 ವರ್ಷಗಳ ಹಿಂದೆ ನಾನು ಮೂಡುಬಿದಿರೆಯಲ್ಲಿ, ಯಕ್ಷಗಾನದ ಪೋಷಕರಾದ ಹಾಗೂ ನನ್ನ ಗುರುಗಳಾದ ದಿ.ಆದಿರಾಜ ಶೆಟ್ಟರ ತಾಳಮದ್ದಳೆ ಕೂಟಕ್ಕೆ ಕಲಾವಿದರ ಸಂಯೋಜನೆ ಮಾಡಿದ್ದೆ. ತಾಳಮದ್ದಳೆಯ ದಿನ ಸಂಜೆ ಶಂಭುಶರ್ಮರು ನನ್ನ ಅಂಗಡಿಗೆ ಬಂದಾಗ, ನನ್ನ ಮಿತ್ರರಾದ ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರೂ ನನ್ನ ಅಂಗಡಿಯಲ್ಲಿದ್ದರು. ಚೆನ್ನಪ್ಪ ಶೆಟ್ಟರು, ಶರ್ಮರನ್ನು ನೋಡಿ ಶರ್ಮರೇ, ಹುಟ್ಟುಹಬ್ಬದ ಶುಭಾಶಯಗಳು ಎಂದು ಹಾರೈಸಿದಾಗಲೇ ನನಗೆ ಶರ್ಮರ ಹುಟ್ಟುಹಬ್ಬ ಅಂದು ಎಂದು ತಿಳಿದದ್ದು. ನಾನು ಅಂಗಡಿ ಮುಚ್ಚಿದ ನಂತರ ಬಟ್ಟೆ ಅಂಗಡಿಗೆ ಹೋಗಿ ಶರ್ಮರಿಗೆ ಹುಟ್ಟುಹಬ್ಬದ ಕಾಣಿಕೆಯಾಗಿ ವಸ್ತ್ರ ಖರೀದಿಸಿ, ತಾಳಮದ್ದಳೆ ಆರಂಭವಾಗುವ ಮೊದಲು ಶರ್ಮರಿಗೆ ಹುಟ್ಟುಹಬ್ಬದ ಕಾಣಿಕೆ ಸಲ್ಲಿಸಿದ್ದೆ ಹಾಗೂ ಇದನ್ನು ಮರೆತೂ ಬಿಟ್ಟಿದ್ದೆ.
ಈ ಘಟನೆ ಜರುಗಿದ ಹತ್ತು ವರ್ಷಗಳ ನಂತರ ಮೂಡುಬಿದಿರೆಯ ನಮ್ಮ ಯಕ್ಷ ಸಂಗಮ ಸಂಮಾನ ಶರ್ಮರಿಗೇ ನೀಡುವ ಸಂದರ್ಭ ಬಂತು. ಶರ್ಮರು ಅಂದಿನ ಸಂಮಾನದ ಸುಸಂದರ್ಭದಲ್ಲಿ ನಾನು ಹತ್ತು ವರ್ಷಗಳ ಹಿಂದೆ ಉಡುಗೊರೆಯಾಗಿ ನೀಡಿದ ಆ ವಸ್ತ್ರವನ್ನೇ ಮೊದಲ ಬಾರಿ ಧರಿಸಿ ಬಂದು ತಮ್ಮ ಸಂಮಾನದ ಉತ್ತರದಲ್ಲಿ ತಮ್ಮ ವಸ್ತ್ರದ ಬಗ್ಗೆ ಉಲ್ಲೇಖಿಸಿದಾಗ ನನಗೇ ರೋಮಾಂಚನವಾಗಿತ್ತು.
ಶರ್ಮರು ಸುಪ್ರಸಿದ್ಧ ಅರ್ಥಧಾರಿಗಳಾಗಿದ್ದರೂ, ಹವ್ಯಾಸೀ ಅರ್ಥಧಾರಿಗಳಿಗೆ ಹೊಂದಿಕೊಂಡು ಹೋಗಿ, ಹವ್ಯಾಸೀ ಅರ್ಥಧಾರಿಗಳೊಂದಿಗೆಯೂ ಅರ್ಥ ಹೇಳಿ ಪ್ರೋತ್ಸಾಹಿಸುವ ಗುಣಗ್ರಾಹಿಗಳೂ ಹೌದು. ಕಳೆದ ವರ್ಷ ನನ್ನ ಸಂಯೋಜನೆಯ ಪಟ್ಟಾಭಿಷೇಕ ಪ್ರಸಂಗದಲ್ಲಿ ಶರ್ಮರದ್ದು ದಶರಥನ ಪಾತ್ರ. ಆದರೆ, ಮಂಥರೆ ಪಾತ್ರವನ್ನು ಸಂಘಟಕರ ಅಪೇಕ್ಷೆಯಂತೆ ನಾನೇ ಮಾಡಬೇಕಾಯಿತು. ಆದರೂ, ಈಗಾಗಲೇ ಶರ್ಮರ ಮಂಥರೆ ಪಾತ್ರ ಸುಪ್ರಸಿದ್ಧ ಆಗಿರುವ ಕಾರಣ, ಅವರ ಸಮಕ್ಷಮದಲ್ಲಿ ಈ ಪಾತ್ರ ಮಾಡಲು ಹಾಗೂ ಸುಪ್ರಸಿದ್ಧ ಕಲಾವಿದರಾದ ತಾರಾನಾಥ ವರ್ಕಾಡಿಯವರದ್ದೇ ಕೈಕೇಯಿಯ ಪಾತ್ರವಾಗಿದ್ದ ಕಾರಣ ನನಗೇ ಹಿಂಜರಿಕೆಯಾದಾಗ, ಶರ್ಮರೇ ನನಗೆ ಧೈರ್ಯ ತುಂಬಿದ್ದರಲ್ಲದೇ ಆ ಪಾತ್ರವು ಯಶಸ್ವಿಯೂ ಆಗಿತ್ತು.
ನೂರಾರು ಕಡೆಗಳಲ್ಲಿ ಸಂಮಾನ ಸ್ವೀಕರಿಸಿದ ಶರ್ಮರಿಗೆ ಯಕ್ಷರಂಗ ಪ್ರಶಸ್ತಿ, ಪೆರ್ಲ ಕೃಷ್ಣ ಭಟ್ಟ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ, ಸಂಪಾಜೆಯ ಪುರಸ್ಕಾರ, ವಿಟ್ಲ ಜೋಷಿ ಪ್ರಶಸ್ತಿ, ಮುಂಬಯಿ ಅಜೆಕಾರು ಪ್ರಶಸ್ತಿ, ಮೂಡುಬಿದಿರೆಯ ಯಕ್ಷಸಂಗಮ ಪ್ರಶಸ್ತಿಗಳೇ ಮೊದಲಾದ ಹಲವಾರು ಪ್ರಶಸ್ತಿ, ಸನ್ಮಾನಗಳು ಸಂದಿವೆ. ಪತ್ನಿ ಶ್ರೀಮತಿ ಲಕ್ಷ್ಮೀ ಶರ್ಮ, ಮಗ ಕೃಷ್ಣರಾಜ, ಸೊಸೆ ವಿದ್ಯಾ, ಮೊಮ್ಮಗ ನಿಶ್ಚಲ್‌ರೊಂದಿಗೆ ಬಂಟ್ವಾಳ ತಾಲೂಕಿನ ಮೊಡಂಕಾಪಿನಲ್ಲಿ ಸಂತೃಪ್ತ ಜೀವನವನ್ನು ನಡೆಸುತ್ತಿರುವ ವಿಟ್ಲ ಶಂಭುಶರ್ಮರಿಗೆ ಸದಾ ಒಳಿತಾಗಲಿ. ಇನ್ನಷ್ಟು ಕಾಲ ಯಕ್ಷಗಾನ ಸೇವೆ ಮಾಡುವ ಭಾಗ್ಯ ದೊರಕಲಿ ಎಂದು ಹಾರೈಸುತ್ತೇನೆ.
✍ ಎಂ.ಶಾಂತರಾಮ ಕುಡ್ವ, ಮೂಡುಬಿದಿರೆ
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಕಲಾವಿದ