5 ವರ್ಷಗಳ ಹಿಂದೆ ನಿಧನರಾದ ಸುಪ್ರಸಿದ್ಧ ಯಕ್ಷಗಾನ ಕಲಾವಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು ತಮ್ಮ ವಾಗ್ವೈಖರಿಯಿಂದ ತೆಂಕು-ಬಡಗು ಎರಡೂ ವಿಧದ ಯಕ್ಷಗಾನ ರಂಗಗಳಲ್ಲಿ ಜನಮನ್ನಣೆ ಗಳಿಸಿದವರು. 2016ರ ಜುಲೈ 1ರಂದು ನಮ್ಮನ್ನು ಅಗಲಿದ ಅವರನ್ನು ನೆನಪಿಸಿಕೊಂಡಿದ್ದಾರೆ ಎಂ.ಶಾಂತರಾಮ ಕುಡ್ವ, ಮೂಡಬಿದಿರೆ.
1955ರಲ್ಲಿ ಜನಿಸಿದ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು ತೆಂಕು - ಬಡಗು ತಿಟ್ಟಿನ ಸುಪ್ರಸಿದ್ಧ ವೇಷಧಾರಿ, ಅರ್ಥಧಾರಿ ಹಾಗೂ ಪ್ರಸಂಗಕರ್ತರು. ಅಸ್ಖಲಿತ ವಾಗ್ವೈಖರಿ, ಆಕರ್ಷಕ ಮಂಡನಾಕ್ರಮ, ಸುಂದರವಾದ ವಾದ ಸಂವಾದದ ಪ್ರಸ್ತುತಿ, ಸರಳ ಆದರೂ ಶುದ್ಧ ಭಾಷಾಪ್ರಯೋಗ... ಇವೆಲ್ಲಾ ಮೇಳೈಸಿರುವುದೇ ಶೆಟ್ಟಿಯವರ ಅರ್ಥಗಾರಿಕೆಯ ಹೆಚ್ಚುಗಾರಿಕೆ. ಪಿ.ಯು.ಸಿ. ಪೂರೈಸಿ, ಅಂದಿನ ಸುಪ್ರಸಿದ್ಧ ಸ್ತ್ರೀ ಪಾತ್ರಧಾರಿ ಕಾವೂರು ಕೇಶವರಲ್ಲಿ ಯಕ್ಷಗಾನದ ಪ್ರಾರಂಭಿಕ ಹೆಜ್ಜೆಗಳನ್ನು ಕಲಿತರು.
ಕಟೀಲು ಮೇಳದ ಮೂಲಕ ಯಕ್ಷಗಾನ ರಂಗಕ್ಕೆ ಬಂದ ವಿಶ್ವನಾಥ ಶೆಟ್ಟರು ಬಾಲ್ಯದಲ್ಲೇ ಯಕ್ಷಗಾನದತ್ತ ಆಕರ್ಷಿತರಾದವರು. ಮುಂದೆ 1982ರಲ್ಲಿ ಕರ್ನೂರು ಕೊರಗಪ್ಪ ರೈಗಳ ಕದ್ರಿ ಮೇಳ ಸೇರಿದರು. ಕದ್ರಿ ಮೇಳದ ತಿರುಗಾಟ ಶೆಟ್ಟರಿಗೆ ಯಕ್ಷಗಾನದ ಪಟ್ಟುಗಳನ್ನು ತಿಳಿಯುವ ವೇದಿಕೆಯಾಯಿತು. ಮೇಳದ ಲೆಕ್ಕಾಚಾರವನ್ನು ಬರೆಯುವ ಜವಾಬ್ದಾರಿ ಹೊಂದಿ, ವೇಷಗಳನ್ನೂ ನಿರ್ವಹಿಸುತ್ತಿದ್ದರು. ಕದ್ರಿಮೇಳದಲ್ಲಿ ಪ್ರದರ್ಶನಗೊಳ್ಳುತ್ತಿದ್ದ ಅವರೇ ರಚಿಸಿದ " ಬೊಳ್ಳಿದಂಡಿಗೆ "ಯ ಜಿಪುಣ ಶೆಟ್ಟಿಯ ಪಾತ್ರ,
ಪೂಂಜರ " ಗರುಡಕೇಂಜವೆ "ಯ "ದುಷ್ಟ ಮಂತ್ರಿ", ಡಿ. ಮನೋಹರ ಕುಮಾರರಿಂದ ರಚಿಸಲ್ಪಟ್ಟು ಯಕ್ಷರಂಗದಲ್ಲಿ ಕ್ರಾಂತಿ ಎಬ್ಬಿಸಿದ "ಗೆಜ್ಜೆದಪೂಜೆ" ಯ ನಿಷ್ಠಾವಂತ ಮಂತ್ರಿ, "ಕದ್ರಿಕ್ಷೇತ್ರ ಮಹಾತ್ಮೆ"ಯ ಗೋರಕ್ಷನಾಥ ಮಾತ್ರವಲ್ಲದೇ ಪೌರಾಣಿಕ ಪ್ರಸಂಗಗಳ ಶ್ರೀರಾಮ, ಶ್ರೀಕೃಷ್ಣ, ವಿದುರ, ಪರಶುರಾಮ, ಭೀಷ್ಮ ಮುಂತಾದ ಪಾತ್ರಗಳಲ್ಲಿ ಶೆಟ್ಟರು ಹೆಸರು ಗಳಿಸಿದರು. ಈ ಅವಧಿಯಲ್ಲೇ ಶೆಟ್ಟರು ಪ್ರಸಂಗಗಳನ್ನು ಬರೆಯಲಾರಂಭಿಸಿದ್ದರು. ಬೊಳ್ಳಿದಂಡಿಗೆ, ಗೆಂಡಸಂಪಿಗೆ, ರತ್ನರಾಧಿಕೆ ಮುಂತಾದ ತುಳು ಪ್ರಸಂಗಗಳೊಂದಿಗೇ ಪೌರಾಣಿಕ ಪ್ರಸಂಗವನ್ನೂ ಬರೆದಿದ್ದು, ಅವೆಲ್ಲಾ ರಂಗದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡವು.
ವಿಷಮ ಸಮರಂಗ, ಕನ್ಯಾಂತರಂಗ, ಚಾಣಾಕ್ಷ ಚಾಣಕ್ಯ, ವರ್ಣವೈಷಮ್ಯ, ಶಶಿವಂಶ ವಲ್ಲರಿ, ಜ್ವಾಲಾಜಾಹ್ನವೀ, ಶ್ರೀರಾಮಸೇತು ಮುಂತಾದ ಪೌರಾಣಿಕ ಪ್ರಸಂಗಗಳು ಶೆಟ್ಟರಿಂದಲೇ ರಚಿಸಲ್ಪಟ್ಟ ಕೃತಿಗಳು. ಶೆಟ್ಟರ ಪ್ರಸಂಗಗಳು ಉತ್ತಮ ಸಾಹಿತ್ಯದ ನೆಲೆಗಟ್ಟಲ್ಲಿ ರಚಿಸಿದ್ದವುಗಳು. ದಿ.ಕಾಳಿಂಗ ನಾವುಡರು ರಚಿಸಿ ಹಾಡಿದ "ನೀಲ ಗಗನದೊಳು", ಗಂಗಾಧರ ಶಾಸ್ತ್ರಿ ನಾಜಗಾರರಿಂದ ರಚಿಸಲ್ಪಟ್ಟು, ಧಾರೇಶ್ವರರು, ನಾವುಡರು ಹಾಡಿ ಪ್ರಸಿದ್ಧಿ ಹೊಂದಿದ "ಎಲ್ಲೆಲ್ಲೂ ಸೊಬಗಿದೆ" ಪದ್ಯಗಳ ಸಾಲಿನಲ್ಲೇ ಇಂದು ಜನಪ್ರಿಯವಾದ "ಯಾರು ನೀನು ಭುವನ ಮೋಹಿನಿ" ಪದ್ಯವು ವಿಶ್ವನಾಥ ಶೆಟ್ಟರು ರಚಿಸಿದ ವಿಷಮ ಸಮರಂಗ ಪ್ರಸಂಗದ ಹಾಡು ಎಂಬುದು ಉಲ್ಲೇಖನೀಯ ಹಾಗೂ ಇಂದಿಗೂ ಯಕ್ಷ ರಸಿಕರ ಮನ ಸೆಳೆದ ಹಾಡಾಗಿದೆ.
ಕದ್ರಿ ಮೇಳ ನಿಂತಾಗ ಶೆಟ್ಟರು ಕರ್ನಾಟಕ ಮೇಳ ಸೇರಿದರು. ಈ ಅವಧಿಯಲ್ಲೇ ಶೆಟ್ಟರ ಅದ್ಭುತ ಪ್ರತಿಭೆ ಹೊರಹೊಮ್ಮಿತು. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಶ್ರೇಷ್ಠ ಪ್ರಸಂಗ ಕೃತಿಯಾದ "ಮಾನಿಷಾದ" ದ ಪ್ರಧಾನ ಪಾತ್ರವಾದ "ವಾಲ್ಮೀಕಿ" ಶೆಟ್ಟರಿಗೆ ದೊರಕಿತು. ವಿಶ್ವನಾಥ ಶೆಟ್ಟರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡರು. ತಮ್ಮ ಅಸ್ಖಲಿತವಾದ ಮಾತುಗಾರಿಕೆ, ಭಾವಾಭಿನಯ ಹಾಗೂ ತಾವೇ ಸ್ವತಃ ಪ್ರಸಂಗಕರ್ತರಾದ ಕಾರಣ, ವಾಲ್ಮೀಕಿಯ ಮಾನಸಿಕ ತುಮುಲವನ್ನು ಚೆನ್ನಾಗಿ ಬಿಂಬಿಸಿದರು. ವಾಲ್ಮೀಕಿ ಪಾತ್ರ ಅತ್ಯಂತ ಜನಪ್ರಿಯತೆ ಗಳಿಸಿ ಶೆಟ್ಟರು ಪ್ರಸಿದ್ಧಿಯಾದರು.
ಮಾ ನಿಷಾದದ ಮೂಲಕ, ಉತ್ತಮ ಪ್ರಸಂಗಕರ್ತರಾಗಿ ಬೊಟ್ಟಿಕೆರೆಯವರು "ಅಭಿನವ ವಾಲ್ಮೀಕಿ" ಎನಿಸಿಕೊಂಡರೆ, ಶೆಟ್ಟರು ವಾಲ್ಮೀಕಿಯ ಪಾತ್ರನಿರ್ವಹಣೆಯಿಂದ "ಯಕ್ಷರಂಗದ ವಾಲ್ಮೀಕಿ" ಎನಿಸಿಕೊಂಡರು. ವಾಲ್ಮೀಕೀ ರಾಮಾಯಣದ ಶ್ಲೋಕ, ಅರ್ಥ, ಭಾವಾರ್ಥಗಳೆಲ್ಲವನ್ನೂ ತಮ್ಮ ಪಾತ್ರ ಪೋಷಣೆಗೆ ಸಮರ್ಥವಾಗಿ ಬಳಸಿದರು. ಪರಿಣಾಮವಾಗಿ ಶೆಟ್ಟರ ವಾಲ್ಮೀಕಿ ಜನಮಾನಸದಲ್ಲಿ ಪ್ರತಿಷ್ಠೆಗೊಂಡಿತು. ಮಾನಿಷಾದದ ಭರ್ಜರಿ ಯಶಸ್ಸಿಗೆ ವಾಲ್ಮೀಕಿಯ ಕೊಡುಗೆಯೂ ಸೇರಿಕೊಂಡಿತು.
ಇಂದಿಗೂ ಮಾನಿಷಾದ ಎಂದಾಗ ಶೆಟ್ಟರ ವಾಲ್ಮೀಕಿ ಪಾತ್ರವೇ ಕಣ್ಣಮುಂದೆ ನಿಲ್ಲುವಷ್ಟು ಆ ಪಾತ್ರವನ್ನು ಕಟೆದು ನಿಲ್ಲಿಸಿದ್ದರವರು. ಮುಂದೆ ಕರ್ನಾಟಕ ಮೇಳ ತನ್ನ ತಿರುಗಾಟ ನಿಲ್ಲಿಸುವ ಹಂತದಲ್ಲಿರುವಾಗ, ಶೆಟ್ಟರಿಗೆ ಬಡಗಿನ ಸಾಲಿಗ್ರಾಮ ಮೇಳದಿಂದ ಬೇಡಿಕೆ ಬಂತು. ಸಾಲಿಗ್ರಾಮ ಮೇಳಕ್ಕೆ "ಮಾತನಾಡುವ" ಕಲಾವಿದರ ಅನಿವಾರ್ಯತೆಯಿದ್ದಾಗ, ಮೇಳದ ಯಜಮಾನರಾದ ಕಿಶನ್ ಹೆಗ್ಡೆಯವರಿಗೆ ಹೊಳೆದದ್ದು ವಿಶ್ವನಾಥ ಶೆಟ್ಟರ ಹೆಸರು. ಕಿಶನ್ ಹೆಗ್ಡೆಯವರು ವಿಶ್ವನಾಥ ಶೆಟ್ಟರಿಗೆ ಈ ಬಗ್ಗೆ ಸಂಪರ್ಕಿಸಿದ ಸಂದರ್ಭದಲ್ಲಿ ಶೆಟ್ಟರು ನನ್ನ ಅಂಗಡಿಯಲ್ಲಿ ನನ್ನೊಂದಿಗೆ ಮಾತಾಡುತ್ತಾ ಇದ್ದರು. ನಾನೂ ಶೆಟ್ಟರಿಗೆ ಸಾಲಿಗ್ರಾಮ ಮೇಳ ಸೇರಲು ಒತ್ತಾಯಿಸಿದ್ದೆ. ಅಂತೂ ಶೆಟ್ಟರು, ಸಾಲಿಗ್ರಾಮ ಮೇಳ ಸೇರಿ, ಅಲ್ಲೂ ಮಾತುಗಾರಿಕೆಯಿಂದ ವಿಜೃಂಭಿಸಲಾರಂಭಿಸಿದರು.
ಪರಶುರಾಮ, ಶ್ರೀರಾಮ, ಶ್ರೀಕೃಷ್ಣ, ಭೀಷ್ಮ, ಹನೂಮಂತ, ಈಶ್ವರ ಮುಂತಾದ ಪಾತ್ರಗಳ ನಿರ್ವಹಣೆಯಿಂದ ಬಡಗಿನ ಅಭಿಮಾನಿಗಳ ಮನ ರಂಜಿಸಿದರು. ಕಾಲ್ಪನಿಕ ಪ್ರಸಂಗವಾದ "ಅಗ್ನಿನಕ್ಷತ್ರ" ದ ಮಂತ್ರಿಯ ಪಾತ್ರ, ಈಶ್ವರೀ ಪರಮೇಶ್ವರಿ, ರಂಗನಾಯಕಿ, ಧರ್ಮಸಂಕ್ರಾಂತಿ, ಸೂರ್ಯವಂಶಿ ಪ್ರಸಂಗಗಳ ಪಾತ್ರಗಳೆಲ್ಲಾ ಶೆಟ್ಟರಿಗೆ ಹೆಸರು ತಂದ ಪಾತ್ರಗಳು. ಈ ಅವಧಿಯಲ್ಲಿ ಶೆಟ್ಟರು ರಚಿಸಿದ "ವಿಷಮ ಸಮರಂಗ" ಪ್ರಸಂಗವು ಜಯಭೇರಿ ಬಾರಿಸಿತ್ತು.
ಈ ಪ್ರಸಂಗದಲ್ಲಿ ಸ್ವತಃ ಶೆಟ್ಟರೇ ನಿರ್ವಹಿಸಿದ್ದ ಶ್ರೀಕೃಷ್ಣನ ಅವತಾರ ಸಮಾಪ್ತಿಯ ಪಾತ್ರ ಅತ್ಯಂತ ಪರಿಣಾಮಕಾರಿಯಾಗಿ ಪ್ರಸ್ತುತಗೊಂಡು ರಸಿಕರ ಮನವನ್ನು ಆಕರ್ಷಿಸಿತ್ತು.ನಂತರ ಕಿಶನ್ ಹೆಗ್ಡೆಯವರ ಹಿರಿಯಡ್ಕ ಮೇಳದ ತಿರುಗಾಟದಲ್ಲೇ ಶೆಟ್ಟರು ಗಂಭೀರ ಸ್ಥಿತಿಯಲ್ಲಿ ಅನಾರೋಗ್ಯಕ್ಕೊಳಗಾದರು. ಇದೇ ಕಾರಣವಾಗಿ ಅವರ ನಿಧನಕ್ಕೆ ಕಾರಣವಾದುದು ಒಂದು ದುರಂತ.
ಮೂಡಬಿದಿರೆಗೆ ಬಂದಾಗಲೆಲ್ಲಾ ನನ್ನ ಅಂಗಡಿಗೆ ಬಂದು ನನ್ನನ್ನು ಮಾತಾಡಿಸಿಯೇ ಹೋಗುವ ಸ್ವಭಾವ ವಿಶ್ವನಾಥ ಶೆಟ್ಟರದು. ಅಂಗಡಿಗೆ ಬಂದರೆ, ಮೂರು ಗಂಟೆಗಳಷ್ಟು ಕಾಲ ನನ್ನೊಂದಿಗೆ ಮಾತಾಡುತ್ತಲೇ ಇರುತ್ತಿದ್ದರು. ಯಕ್ಷಗಾನ, ಪ್ರಸಂಗ, ರಾಜಕೀಯ, ಯಕ್ಷಗಾನದ ಸ್ವಾರಸ್ಯಕರ ಘಟನೆಗಳು ಹಾಗೂ ಇನ್ನಿತರ ವಿಷಯಗಳನ್ನು ಶೆಟ್ಟರಲ್ಲಿ ಮಾತಾಡುವುದೆಂದರೆ, ಅದೊಂದು ನನಗೆ ಉತ್ತಮ ಸಾಹಿತ್ಯದ ಲೋಕವನ್ನೇ ತೆರೆದಿಟ್ಟಂತಾಗುತ್ತಿತ್ತು. ಸುಪ್ರಸಿದ್ಧ ಲೇಖಕರಾದ ಪ್ರೊ.ಕೆ.ಎಸ್.ನಾರಾಯಣಾಚಾರ್ಯರಿಂದ ರಚಿಸಲ್ಪಟ್ಟ "ಚಾಣಕ್ಯ" ಕಾದಂಬರಿಯು ವಿಶ್ವನಾಥ ಶೆಟ್ಟರಿಂದ ಯಕ್ಷಗಾನ ಪ್ರಸಂಗವಾಗಿ "ಚಾಣಾಕ್ಷ ಚಾಣಕ್ಯ" ಪ್ರಸಂಗವಾಗಿಸಲು ಬೀಜಾಂಕುರವಾದುದು ನನ್ನ ಅಂಗಡಿಯಲ್ಲೇ, ನನ್ನದೇ ಸಲಹೆಯ ಮೇರೆಗೆ. ಸುಪ್ರಸಿದ್ಧ ವಾರ ಪತ್ರಿಕೆ "ತರಂಗ" ದಲ್ಲಿ ಪ್ರೊ.ಕೆ.ಎಸ್.ನಾರಾಯಣ ಆಚಾರ್ಯರು ಬರೆದ ಈ ಧಾರಾವಾಹಿಯನ್ನು ಸಂಗ್ರಹಿಸಿದ್ದ ನಾನು, ಶೆಟ್ಟರು ನನ್ನ ಅಂಗಡಿಗೆ ಬಂದ ಸಂದರ್ಭದಲ್ಲಿ "ಆಚಾರ್ಯರ ಈ ಕೃತಿ ಯಕ್ಷಗಾನ ಪ್ರಸಂಗಕ್ಕೆ ಹೊಂದಿಕೊಳ್ಳುವಂಥಹುದು. ಆದರೆ, ಚಾಣಕ್ಯನ ಪಾತ್ರವನ್ನು ಶೇಣಿ ಗೋಪಾಲಕೃಷ್ಣ ಭಟ್ಟರು ಮಾಡಿದರೆ ಮಾತ್ರ ಯಶಸ್ವಿಯಾದೀತು. ತಪ್ಪಿದರೆ, ವಾಸುದೇವ ಸಾಮಗರು ಮಾತ್ರ ಈ ಪಾತ್ರ ಮಾಡಬಲ್ಲ ಸಮರ್ಥರು" ಎಂದೆ. ಆಗ, ಶೆಟ್ಟರು, "ನಾನು ಆ ಪಾತ್ರ ಮಾಡಿದರೆ ಹೇಗೆ?" ಎಂದಾಗ, "ನಿಮ್ಮಿಂದ ಸಾಧ್ಯ" ಎಂದೆ. ತಕ್ಷಣವೇ ಅವರು ನನ್ನಿಂದ ಆ ಪ್ರತಿಗಳನ್ನು ಪಡೆದುಕೊಂಡು, ನಂತರ ಪ್ರಸಂಗವನ್ನು ರಚಿಸಿಯೇ ಬಿಟ್ಟರು. ನಾರಾಯಣ ಆಚಾರ್ಯರ ಮೂಲ ಕೃತಿಯನ್ನು ಪ್ರಸಂಗದಲ್ಲಿ ಬಳಸಲು, ಆಚಾರ್ಯರ ಒಪ್ಪಿಗೆ ಕೇಳಿದಾಗ, ಆಚಾರ್ಯರು ಕೂಡಲೇ "ನನ್ನ ಕೃತಿಯೊಂದು ಯಕ್ಷಗಾನದಲ್ಲಿ ಅಳವಡಿಸಿರುವುದು ತುಂಬಾ ಸಂತೋಷ" ಎಂಬ ಒಪ್ಪಿಗೆಯನ್ನು ಪತ್ರ ಮುಖೇನವಾಗಿ ನನಗೆ ನೀಡಿದ್ದು, ಆ ಪತ್ರ ಈಗಲೂ ನನ್ನ ಬಳಿಯಿದೆ. ( ಆ ಪ್ರಸಂಗ ಬಿಡುಗಡೆಯ ಸಂದರ್ಭದಲ್ಲಿ ವಿಶ್ವನಾಥ ಶೆಟ್ಟರು ಈ ಬಗ್ಗೆ ಉಲ್ಲೇಖಿಸಿದ್ದರು).
ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ಎಂದಾಕ್ಷಣ ಜನಸಾಮಾನ್ಯ ಪ್ರೇಕ್ಷಕರು ಇವರು ಯಕ್ಷರಂಗದ ಸುಪ್ರಸಿದ್ಧ ಕಲಾವಿದರಾದ ದಿ. ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಖಾಸಾ ತಮ್ಮ ಎಂದೇ ಭಾವಿಸಿದ್ದಾರೆ. ಇದಕ್ಕೆ ಕಾರಣ "ಸಿದ್ದಕಟ್ಟೆ" ಎಂಬ ಊರು ಎಂಬುದು ಮಾತ್ರ ಕಾರಣವಲ್ಲ, ಮಾತುಗಾರಿಕೆಯಲ್ಲೂ, ವಿಶ್ವನಾಥ ಶೆಟ್ಟರ ಪ್ರಬುದ್ಧತೆಯಿಂದಾಗಿ. ಆದರೆ, ವಿಶ್ವನಾಥ ಶೆಟ್ಟರು, ಚೆನ್ನಪ್ಪ ಶೆಟ್ಟರಿಗೆ ಸಂಬಂಧದಲ್ಲಿ ತಮ್ಮನೇ ಹೊರತು ಖಾಸಾ ತಮ್ಮನಲ್ಲ. ಆದರೂ, ಈ 'ಸಿದ್ದಕಟ್ಟೆ'ದ್ವಯರ ಅರ್ಥಗಾರಿಕೆಯಲ್ಲಿಯ ವ್ಯತ್ಯಾಸ ಗಮನಾರ್ಹ.
ನಾನು ಗಮನಿಸಿದಂತೆ ದಿ. ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆಯಲ್ಲಿ ಸ್ವಲ್ಪ ಮಟ್ಟಿನಲ್ಲಿ ಶೇಣಿಯವರ ಪ್ರಭಾವ ಗುರುತಿಸಬಹುದು. ಪದ್ಯಗಳಲ್ಲಿ ಬರುವ ಶಬ್ದಾರ್ಥಗಳನ್ನು ವಿಶ್ಲೇಷಿಸಿ, ತನ್ನ ಪಾತ್ರ ಪೋಷಣೆಯನ್ನು ಪೀಠಿಕೆಯಲ್ಲೇ ಮಂಡಿಸುವ ಶೇಣಿಯವರ ಅದ್ಭುತ ಕಲೆಯನ್ನು ಚೆನ್ನಪ್ಪ ಶೆಟ್ಟರ ಅರ್ಥಗಾರಿಕೆಯಲ್ಲೂ ಕಾಣಬಹುದಾಗಿತ್ತು. ಎದುರು ಪಾತ್ರಧಾರಿ ದಾರಿ ತಪ್ಪಿದರೆ, ಕೂಡಲೇ ಖಂಡಿಸುವುದು ಚೆನ್ನಪ್ಪ ಶೆಟ್ಟರ ಕ್ರಮ. (ದಿ. ಶೇಣಿಯವರ ಅರ್ಥದಲ್ಲೂ ಇದನ್ನು ಗಮನಿಸಬಹುದು). ಆದರೆ, ವಿಶ್ವನಾಥ ಶೆಟ್ಟರ ಅರ್ಥ ದಿ. ರಾಮದಾಸ ಸಾಮಗರ ಅರ್ಥವನ್ನು ಹೋಲುತ್ತದೆ. ಪೀಠಿಕೆ, ಮಂಡನೆ, ಖಂಡನೆ, ವಾದ, ಸಂವಾದಗಳಲ್ಲಿ "ಸಾಮಗಶೈಲಿ " ಕಾಣಬಹುದಾಗಿದ್ದರೂ, ಸಾಮಗರ ಅನುಕರಣೆಯಾಗಿರದೇ ಸ್ವಂತಿಕೆಯಿದೆ.
ಸರಳ ಭಾಷೆ, ಆಕರ್ಷಕವಾದ ಮಾತುಗಾರಿಕೆಯು ವಿಶ್ವನಾಥ ಶೆಟ್ಟರ ಅರ್ಥಗಾರಿಕೆಯ ಜೀವಾಳ. ಎದುರು ಪಾತ್ರಧಾರಿ ತಪ್ಪಿ ಮಾತಾಡಿದರೆ, ನಗುನಗುತ್ತಾ ಹಾಸ್ಯದಿಂದಲೇ ಮರುತ್ತರ ನೀಡುತ್ತಿದ್ದರು. ಶುದ್ಧ ತುಳು ಭಾಷೆಯನ್ನು ತುಳುಪ್ರಸಂಗಗಳಲ್ಲಿ ಪ್ರಸ್ತುತಪಡಿಸುವ ಕಲೆ ವಿಶ್ವನಾಥ ಶೆಟ್ಟರಿಗೆ ಸಿದ್ಧಿಸಿದ್ದು, ಶುದ್ಧ ತುಳುಭಾಷೆಯನ್ನು ರಂಗದಲ್ಲಿ ಪ್ರಸ್ತುತಪಡಿಸುವ ಬೆರಳೆಣಿಕೆಯ ಕಲಾವಿದರಲ್ಲಿ ವಿಶ್ವನಾಥ ಶೆಟ್ಟರೂ ಓರ್ವರು ಎಂಬುದು ಉಲ್ಲೇಖನೀಯ. ತುಳುಭಾಷೆಯ ಸಾಹಿತ್ಯ ಜ್ಞಾನದಿಂದಾಗಿ ತುಳು ಗಾದೆ, ಒಗಟುಗಳನ್ನು ಧಾರಾಳವಾಗಿ ತಮ್ಮ ಅರ್ಥಗಾರಿಕೆಯಲ್ಲಿ ಅಳವಡಿಸಿಕೊಳ್ಳುತ್ತಿದ್ದರು.
ಭಾಷಣ, ಅಭಿನಂದನಾ ನುಡಿಗಳನ್ನು ಶೆಟ್ಟರು ಅದ್ಭುತವಾಗಿ ನಿರ್ವಹಿಸುತ್ತಿದ್ದರು. ನಮ್ಮ "ಯಕ್ಷಸಂಗಮ" ದ ಐದನೇ ವರ್ಷದ ಕಾರ್ಯಕ್ರಮದಂದು ಮಿಜಾರು ಅಣ್ಣಪ್ಪರ ಸಹಕಲಾವಿದರಾಗಿದ್ದ ವಿಶ್ವನಾಥ ಶೆಟ್ಟರು, ಅಣ್ಣಪ್ಪರ ಅಭಿನಂದನಾ ಭಾಷಣ ಮಾಡಿ ಅವರಿಂದಲೇ ಮೆಚ್ಚುಗೆ ಗಳಿಸಿದ್ದರು. (ವಿಶ್ವನಾಥ ಶೆಟ್ಟರು ಇಷ್ಟೆಲ್ಲಾ ಹೇಳಿದ್ದು ನನ್ನ ಕುರಿತಾಗಿಯಾ? ಎಂದು ಅಣ್ಣಪ್ಪರು ಸಂಮಾನಿತರ ಭಾಷಣದಲ್ಲಿ ಕೇಳಿದ್ದರು).
ತಾಳಮದ್ದಳೆಯಲ್ಲೂ ತಮ್ಮ ಛಾಪನ್ನು ಒತ್ತಿದ ವಿಶ್ವನಾಥ ಶೆಟ್ಟರು ಶ್ರೀರಾಮ, ಶ್ರೀಕೃಷ್ಣ, ಸುಗ್ರೀವ, ಪರಶುರಾಮ, ಭೀಷ್ಮ, ದೇವವ್ರತ, ಶಂತನು, ಹನೂಮಂತ, ಸುಧನ್ವ ಮುಂತಾದ ಸಾತ್ವಿಕ ಪಾತ್ರಗಳಲ್ಲಿ ಮಿಂಚಿದಂತೆಯೇ, ಸಾಲ್ವ, ದುಷ್ಟಬುದ್ಧಿ, ಕೌರವನಂಥಹ ಖಳ ಪಾತ್ರಗಳನ್ನೂ ಸಮರ್ಥವಾಗಿ ನಿರ್ವಹಿಸುತ್ತಿದ್ದರು. ನಗುನಗುತ್ತಾ ಎದುರು ಪಾತ್ರಧಾರಿಗಳ ವಾದಗಳಿಗೆ ಪ್ರತ್ಯುತ್ತರ ಕೊಡುವ ಶೆಟ್ಟರ ಶೈಲಿ ಅಸದೃಶ. ಸಹ ಕಲಾವಿದರೊಂದಿಗೆ ಆತ್ಮೀಯರಾಗಿರುತ್ತಿದ್ದ ಶೆಟ್ಟರು, ಕಿರಿಯ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದರು.
ದಿ.ಮಲ್ಪೆ ವಾಸುದೇವ ಸಾಮಗರ "ಸಂಯಮಂ" ತಾಳಮದ್ದಳೆ ಸಂಸ್ಥೆಯಲ್ಲೂ ಹಲವಾರು ವರ್ಷಗಳ ಕಾಲ ತಿರುಗಾಟ ನಡೆಸಿದ್ದರು. ಆ ಕಾಲದಲ್ಲಿ ಸಾಮಗ × ಸಿದ್ದಕಟ್ಟೆ ಜೋಡಿಯು ತುಂಬಾ ಪ್ರಸಿದ್ದಿ ಗಳಿಸಿತ್ತು. ಸಾಮಗರ ನಿರ್ದೇಶನದಲ್ಲಿ ಹಲವಾರು ಹಳೆಯ ಪೌರಾಣಿಕ ಪ್ರಸಂಗಗಳನ್ನು ತಾಳಮದ್ದಳೆ ಕೂಟಗಳಿಗೆ ಅನುಕೂಲಕರವಾಗುವಂತೆ ಸಂಕಲನ ಮಾಡಿ, ಪ್ರದರ್ಶನಗೊಳ್ಳುವಲ್ಲಿ ಮುತುವರ್ಜಿ ವಹಿಸಿದ್ದರು. ವಿಶ್ವನಾಥ ಶೆಟ್ಟರ ಪುತ್ರ ಭರತ್ ರಾಜ್ ಶೆಟ್ಟರು ಯಕ್ಷಗಾನದ ಹಿಮ್ಮೇಳದಲ್ಲಿ ಆಸಕ್ತಿ ವಹಿಸಿ, ಭಾಗವತಿಕೆಯಲ್ಲಿ ಪಳಗಿದ್ದಾರೆ. ನಮ್ಮ ಮೂಡುಬಿದಿರೆಯ "ಯಕ್ಷೋಪಾಸನಂ" ವಾರದ ಕೂಟಗಳಲ್ಲಿ ಭಾಗವತರಾಗಿ ಭಾಗವಹಿಸುತ್ತಿದ್ದು, ಇದೀಗ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿರುವ ಕಾರಣ, ಭರತ್ ರಾಜರು ಬೆಂಗಳೂರಿನಲ್ಲಿ ಭಾಗವತಿಕೆಯ ಮೂಲಕ ಯಕ್ಷಗಾನದ ಆಸಕ್ತಿ ಬೆಳೆಸುತ್ತಿರುವುದು ಉತ್ತಮ ಬೆಳವಣಿಗೆ.
ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರ ಬಗ್ಗೆ ಅಪಾರ ಗೌರವ ಹೊಂದಿದ್ದ ವಿಶ್ವನಾಥ ಶೆಟ್ಟರು, ಚೆನ್ನಪ್ಪ ಶೆಟ್ಟರ ಅಕಾಲ ನಿಧನದಿಂದಾಗಿ ಸ್ವಲ್ಪ ಕಾಲ ಅಧೀರರಾಗಿದ್ದುದು ಸತ್ಯ. ಚೆನ್ನಪ್ಪ ಶೆಟ್ಟರ ಸಂಸ್ಮರಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗಲೆಲ್ಲಾ, ಚೆನ್ನಪ್ಪ ಶೆಟ್ಟರ ಬಗ್ಗೆ ಮಾತಾಡುವಾಗ ಅಳುತ್ತಿದ್ದರು. "ಚೆನ್ನಪ್ಪ ಶೆಟ್ಟಿಯವರಿರುವಾಗ ಕರಪತ್ರಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ "ಸಿದ್ದಕಟ್ಟೆದ್ವಯರು" ಎಂಬ ಶಬ್ದ ಇನ್ನು ಕಾಣಲಾಗದು" ಎಂದು ಕಂಬನಿ ಮಿಡಿದಿದ್ದರು. ( ಚೆ.ಶೆಟ್ಟಿ × ವಿ.ಶೆಟ್ಟಿ ಯವರನ್ನು ಒಟ್ಟಾಗಿ ಸಿದ್ದಕಟ್ಟೆದ್ವಯರು ಎಂದು ಕರಪತ್ರದಲ್ಲಿ ಬರೆಯುವ ರೂಢಿಯಿತ್ತು). ವಿಶ್ವನಾಥ ಶೆಟ್ಟರು ನಿಧನ ಹೊಂದುವ ಎರಡು ತಿಂಗಳ ಹಿಂದೆ ಶೆಟ್ಟರ ಆರೈಕೆ ನೋಡುತ್ತಿದ್ದ ಡಾ.ಪದ್ಯಾಣ ಸುಬ್ರಹ್ಮಣ್ಯರೊಂದಿಗೆ ನಾನು ಶೆಟ್ಟರ ಮನೆಗೆ ಹೋದಾಗ "ಕುಡ್ವರೇ, ನಾನು ಮರಳಿ ಅರ್ಥ ಹೇಳಲಾಗುತ್ತದೆಯಲ್ಲವೇ?" ಎಂದು ನನ್ನಲ್ಲಿ ಪ್ರಶ್ನಿಸಿದ್ದರು. ಮರಳಿ ಯಕ್ಷರಂಗಕ್ಕೆ ಬರಬೇಕೆಂಬ ಹಂಬಲ ಶೆಟ್ಟರಿಗಿತ್ತು. ಆದರೂ ವಿಧಿಯ ಎದುರು ಯಾರಾದರೂ ನಿಲ್ಲಬಲ್ಲರೇ?
ಆಟಕೂಟಗಳ ಸರದಾರ, ಪ್ರಸಂಗಕರ್ತ ಸಿದ್ದಕಟ್ಟೆ ವಿಶ್ವನಾಥ ಶೆಟ್ಟರು, ಇಂದು ಯಕ್ಷರಂಗವನ್ನು ಅಗಲಿದ್ದಾರೆ. ಆದರೆ, ಕಲಾಭಿಮಾನಿಗಳ ಮಾನಸದಲ್ಲಿ ಅವರಿನ್ನೂ ಜೀವಂತರಾಗಿಯೇ ಉಳಿದಿದ್ದಾರೆ.
✍ -ಎಂ.ಶಾಂತರಾಮ ಕುಡ್ವ, ಮೂಡಬಿದಿರೆ
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಕಲಾವಿದ