ಶಿವ ತಾಂಡವ ನೃತ್ಯದ ದೃಶ್ಯ (ಪ್ರಾತಿನಿಧಿಕ) |
ಭೂಮಿಯ ಮೇಲೆ ಅಘನಾಶಿನಿಯಾದ ಗಂಗೆಯ ಅವತರಣ ಹೇಗಾಯಿತು, ಇದರ ಹಿಂದೆ ಸಗರ, ಅಂಶುಮಂತ, ಭಗೀರಥ, ಈಶ್ವರ, ಜಹ್ನು ಇವರ ಪಾತ್ರಗಳೇನು ಎಂಬ ಮಾಹಿತಿ ನೀಡಿದ್ದಾರೆ ದಾಮೋದರ ಶೆಟ್ಟಿ ಇರುವೈಲ್.
ಸಜ್ಜನರನ್ನು ಬಾಧಿಸುತ್ತಿದ್ದ ರಾಜರನ್ನೆಲ್ಲಾ ಸೋಲಿಸಿ ಸಗರನೆಂಬ ರಾಜನು ಚಕ್ರವರ್ತಿಯಾದ. ತೊಂಬತ್ತೊಂಬತ್ತು ಅಶ್ವಮೇಧ ಯಾಗಗಳನ್ನು ಮಾಡಿದ. ಇನ್ನು ಒಂದು ಯಾಗ ಮಾಡಿದರೆ ಅವನು ಸ್ವರ್ಗದ ಒಡೆಯನಾಗಬಹುದೆಂದು ಹೆದರಿ ಇಂದ್ರನು ಯಾಗದ ಕುದುರೆಯನ್ನು ಅಪಹರಿಸಿ ಪಾತಾಳ ಲೋಕಕ್ಕೊಯ್ದು, ಅಲ್ಲಿ ತಪಸ್ಸು ಮಾಡುತ್ತಿದ್ದ ಕಪಿಲ ಮುನಿಯ ಆಶ್ರಮದ ಹಿಂಭಾಗದಲ್ಲಿ, ಕಟ್ಟಿ ಹಾಕಿದ. ಸದಾ ಧ್ಯಾನದಲ್ಲೇ ಮಗ್ನರಾಗಿದ್ದ ಕಪಿಲ ಋಷಿಗಳು ಇದನ್ನು ಗಮನಿಸಲಿಲ್ಲ. ಅವರು ಅನೇಕ ವರ್ಷಗಳವರೆಗೆ ಮೌನವಾಗಿ ಧ್ಯಾನ ಮಾಡುತ್ತಿದ್ದರು.
ಸಗರನಿಗೆ ಅರವತ್ತು ಸಾವಿರ ಮಂದಿ ಮಕ್ಕಳಿದ್ದರು. ಅವರೆಲ್ಲರಿಗೂ ಇಡೀ ಭೂಮಿಯಲ್ಲಿ ಹುಡುಕಿದರೂ ಯಾಗದ ಕುದುರೆ ಸಿಗದೆ, ಕೊನೆಗೆ ಪಾತಾಳಲೋಕಕ್ಕೆ ಹೋಗಿ, ಕುದುರೆಯನ್ನು ಕಂಡರು. ಆ ಕಪಿಲ ಮುನಿಯೇ ಕುದುರೆ ಕಳ್ಳನೆಂದು ಭಾವಿಸಿ ಅವನ ತಪಸ್ಸನ್ನು ಭಂಗ ಮಾಡಿದರು. ಕಪಿಲನು ಕಣ್ತೆರೆದಾಗ, ಕಣ್ಣುಗಳಲ್ಲಿಂದ ಸೂಸಿದ ಬೆಂಕಿಯಲ್ಲಿ ಆ ಆರವತ್ತು ಸಾವಿರ ಜನರೂ ಭಸ್ಮವಾದರು.
ಮುಂದೆ ಸಗರನ ಮೊಮ್ಮಗ ಅಂಶುಮಂತ. ಬಹುಕಾಲವಾದರೂ ಕುದುರೆಯನ್ನು ಹುಡುಕಲು ಹೋದ ತನ್ನ ಪೂರ್ವಜರು ಮರಳಿ ಬರಲಿಲ್ಲವೆಂದು ಅವನು ಹುಡುಕುತ್ತ ಪಾತಾಳ ಲೋಕವನ್ನು ತಲುಪಿದ. ಅಲ್ಲಿ ಕಪಿಲ ಮುನಿಯ ಆಶ್ರಮದ ಮುಂದಿರುವ ಬೂದಿರಾಶಿ, ಹಿಂದಿರುವ ಕುದುರೆ ಕಂಡು ಪರಿಸ್ಥಿತಿಯ ಅರಿವಾಯಿತು. ಬಹು ವಿಧದಿಂದ ಮುನಿಯನ್ನು ಕೊಂಡಾಡಿ ಪ್ರಸನ್ನಗೊಳಿಸಿದ. ಮುನಿಯು ಅವನನ್ನು ಅನುಗ್ರಹಿಸಿ, ಕುದುರೆಯನ್ನು ಅವನಿಗೊಪ್ಪಿಸಿದ. ಆದರೆ ಭಸ್ಮವಾದ ಸಗರ ಪುತ್ರರಿಗೆ ಮೋಕ್ಷ ಸಿಗಬೇಕಾದರೆ, ಆಕಾಶ ಗಂಗೆಯು ಇಲ್ಲಿಗೆ ಧುಮುಕಿ ಈ ಬೂದಿಯನ್ನು ಕೊಚ್ಚಿಕೊಂಡು ಹೋಗಬೇಕು. ದೇವ ಗಂಗೆಯನ್ನು ತಪಸ್ಸಿನಿಂದ ಒಲಿಸಿಕೊಳ್ಳಬೇಕೆಂದು ಹೇಳಿದ.
ಆಂಶುಮಂತನು ಕುದುರೆಯೊಂದಿಗೆ ಹಿಂದಿರುಗಿ ವಿಷಯವನ್ನು ಸಗರನಿಗೆ ತಿಳಿಸಿದ. ಯಾಗ ಮುಗಿಯಿತು. ಸಗರನು ತಪಸ್ಸಿಗಾಗಿ ಕಾಡಿಗೆ ಹೊರಟ. ತಂದೆಯ ಅಪೇಕ್ಷೆಯತೆಯೇ ಆಂಶುಮಂತನು ಸಿಂಹಾಸನವೇರದೆ, ತಪಸ್ಸಿಗಾಗಿ ಕಾಡಿಗೆ ಹೋದ. ಜೀವನವಿಡೀ ತಪೋನಿರತನಾದರೂ ಗಂಗೆ ಒಲಿಯಲಿಲ್ಲ. ನಂತರ ಈ ಹೊಣೆ ಹೊತ್ತ ಅಂಶುಮಂತನ ಮಗ ದಿಲೀಪನೂ ಸಫಲನಾಗದೇ, ತನ್ನ ಮಗ ಭಗೀರಥನಿಗೆ ಜವಾಬ್ದಾರಿ ಒಪ್ಪಿಸಿದ. ತನ್ನ ಪೂರ್ವಜರ ಆತ್ಮಗಳಿಗೆ ಚಿರಶಾಂತಿ ಕೊಡಿಸುವ ದೃಢ
ಸಂಕಲ್ಪದೊಂದಿಗೆ ಭಗೀರಥ ಕಠಿಣ ತಪಸ್ಸನ್ನಾಚರಿಸಿದನು.
ಭಗೀರಥನು ಮೊದಲು ಕೆಲವು ವರ್ಷಗಳವರೆಗೆ ಆಹಾರವನ್ನು ತ್ಯಜಿಸಿ ನೀರನ್ನು ಮಾತ್ರ ಕುಡಿಯುತ್ತಾ ತಪಸ್ಸಿಗೆ ತೊಡಗಿದ. ನಂತರದಲ್ಲಿ ನೀರನ್ನೂ ಸೇವಿಸಲಿಲ್ಲ. ಕಡೆಗೆ ಗಾಳಿಯ ಸೇವನೆಯನ್ನೂ ನಿಲ್ಲಿಸಿ ಉಗ್ರವಾದ ತಪಸ್ಸು ಮುಂದುವರಿಸಿದ. ಅವನ ತಪಸ್ಸಿನ ಬೆಂಕಿಯಿಂದ ಮೂರು ಲೋಕಗಳೂ ಸುಡಲಾರಂಭಿಸಿದವು. ಆಗ ಬ್ರಹ್ಮನು ಅವನೆದುರು ಪ್ರತ್ಯಕ್ಷನಾಗಿ ಗಂಗೆಯನ್ನು ಕಳುಹಿಸಿದ.
ಗಂಗೆಯು ಭಗೀರಥನ ಮುಂದೆ ಕಾಣಿಸಿಕೊಂಡಳು. ಆದರೆ ಅವನ ಕೋರಿಕೆ ಅವಳಿಗೆ ಇಷ್ಟವಾಗಲಿಲ್ಲ. "ನಾನು ಭೂಮಿಗೆ ಬಂದರೆ, ಪಾಪ ಮಾಡಿರುವ ಭೂಮಿಯ ಜನ ನನ್ನಲ್ಲಿ ಸ್ನಾನ ಮಾಡಿ, ಪಾಪ ಮುಕ್ತರಾಗುತ್ತಾರೆ. ಆಗ ನನಗಂಟಿದ ಪಾಪ ನಿವಾರಣೆಗೆ ಏನಿದೆ ದಾರಿ?" ಎಂದು ಕೇಳಿದಾಗ ಭಗೀರಥ "ನದಿಯಲ್ಲಿ ಮುಳುಗುವ ಪುಣ್ಯವಂತರ ಸ್ನಾನದಿಂದ ನಿನಗಂಟಿದ ಶಾಪ ಮುಕ್ತವಾಗುವುದೆಂದು" ಉತ್ತರಿಸಿದ. ಆದರೂ ಗಂಗೆಗೆ ಅವನ ಮಾತಿನಿಂದ ಸಮಾಧಾನವಾಗಲಿಲ್ಲ.
"ನನ್ನ ರಭಸಕ್ಕೆ ಭೂಮಿಯೇ ಕೊಚ್ಚಿ ಹೋಗಬಹುದು. ನನ್ನ ವೇಗವನ್ನು ತಡೆಯಲು ಸಮರ್ಥನಾದ ಶಿವನನ್ನು ತಪಸ್ಸು ಮಾಡಿ ಒಲಿಸಿಕೋ. ಅವನು ಜಟೆಯಲ್ಲಿ ನನ್ನನ್ನು ಧರಿಸಿದರೆ ನಿಧಾನವಾಗಿ ಭೂಮಿಗಿಳಿದು ನಿನ್ನ ಬಂಧುಗಳಿಗೆ ಮೋಕ್ಷ ನೀಡುತ್ತೇನೆ" ಎಂದಳು. ಛಲ ಬಿಡದ ಭಗೀರಥ ತಪಸ್ಸಿನಿಂದ ಶಿವನನ್ನು ಒಲಿಸಿಕೊಂಡ. ಆಕಾಶದಿಂದ ಧುಮುಕಿದ ಗಂಗೆಯನ್ನು ಶಿವನು ಭೂಮಿಯಲ್ಲಿ ನಿಂತು ತನ್ನ ಜಟೆಯಲ್ಲಿ ಧರಿಸಿದ.
ಆದರೂ ಗಂಗೆ ನೆಲಕ್ಕಿಳಿದ ರಭಸಕ್ಕೆ ಜಹ್ನು ಋಷಿಯ ಆಶ್ರಮ ಕೊಚ್ಚಿ ಹೋಯಿತು. ಶಕ್ತಿಶಾಲಿಯಾದ ಋಷಿಯು ಗಂಗೆಯನ್ನೆತ್ತಿ ಪೂರ್ಣವಾಗಿ ಕುಡಿದುಬಿಟ್ಟ. ಭಗೀರಥನ ಪ್ರಾರ್ಥನೆಯಂತೆ ಅವನು ಕಿವಿಗಳ ಮೂಲಕ ಗಂಗೆಯನ್ನು ಹೊರ ಚೆಲ್ಲಿದಾಗ, ಗಂಗೆಗೆ "ಜಾಹ್ನವಿ" ಎಂಬ ಹೆಸರಾಯಿತು. ಗಂಗೆ ಪಾತಾಳಲೋಕಕ್ಕೆ ಹರಿದು ಸಗರ ಪುತ್ರರ ದೇಹದ ಬೂದಿಯನ್ನು ತೊಳೆದು ಮೋಕ್ಷಕ್ಕೆ ಕಾರಣಳಾದಳು.
ಗಂಗೆಯು ಭೂಮಿಗೆ ಬರಲು ಭಗೀರಥ ಕಾರಣನಾದ. ಅದಕ್ಕಾಗಿಯೇ ಗಂಗೋತ್ರಿಯ ಮೂಲಕ ಹರಿಯುವ ಗಂಗಾ ನದಿಯ ಭಾಗವನ್ನು ಭಾಗೀರಥಿ ಎಂದು ಕರೆಯಲಾಗುತ್ತದೆ. ಮೂರೂ ಲೋಕಗಳಲ್ಲಿ ಆಕೆ ಹರಿದುದರಿಂದ ಆಕೆಯನ್ನು ತ್ರಿಪಥಗೆ ಎಂದೂ ಕರೆಯುತ್ತಾರೆ. ಸಗರನ ಮಕ್ಕಳು ನಿರ್ಮಿಸಿದ ಸುರಂಗದಲ್ಲಿ ನಿಂತ ನೀರಿನಿಂದಾಗಿ, ಅದಕ್ಕೆ ಸಾಗರವೆಂಬ ಹೆಸರು ಬಂತು.
ಗಂಗಾ ನದಿಯನ್ನು ಭಾರತದ ಅತ್ಯಂತ ಪವಿತ್ರ ನದಿ ಎಂದು ಪರಿಗಣಿಸಲಾಗಿದೆ ಮತ್ತು ಇದು ಗಂಗೋತ್ರಿ ಹಿಮನದಿಯ ಆಳದಿಂದ ಉದ್ಭವಿಸಿದೆ. ಗಂಗಾ ಎಂದೂ ಕರೆಯಲ್ಪಡುವ ಈ ನದಿಯು ಮಾನವ ಜೀವಕ್ಕೆ ಶುದ್ಧತೆಯನ್ನು ತರುತ್ತದೆ. ತನ್ನ ಪವಿತ್ರ ನೀರಿನಲ್ಲಿ ಸ್ನಾನ ಮಾಡುವ ಮೂಲಕ ಪ್ರತಿಯೊಬ್ಬರೂ ತಮ್ಮ ಅಸ್ತಿತ್ವದ ಮೂಲವನ್ನು ಶುದ್ಧೀಕರಿಸುತ್ತಾರೆ. ಗಂಗಾ ನದಿಯನ್ನು ಭೂಮಿಗೆ ತರುವಲ್ಲಿ ಭಗೀರಥನ ಮಹಾನ್ ಪ್ರಯತ್ನವನ್ನು "ಭಗೀರಥ ಪ್ರಯತ್ನ" ಎಂದೂ ಕರೆಯಲಾಗುತ್ತದೆ. ಈ ರೀತಿಯಾಗಿ ತನ್ನ ಕಠಿಣ ಪ್ರಯತ್ನದಿಂದ ಗಂಗೆಯನ್ನು ಭೂಮಿಗೆ ತಂದ ಭಗೀರಥನ ಹೆಸರು ಅಮರವಾಗಿ ಉಳಿಯಿತು.
ಸಂ: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ