ಕರ್ಣ ರಸಾಯನಮಲ್ತೇ ಭಾರತಮ್?: ಕರ್ಣ ವೃತ್ತಾಂತ

ಕರ್ಣನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ. ಚಿತ್ರ: ಅನಿಲ್ ಎಸ್.ಕರ್ಕೇರ
ಯಕ್ಷಗಾನದಲ್ಲಿ ವಿಶೇಷವಾಗಿ ಮಹಾಭಾರತದ ಪ್ರಸಂಗಗಳಲ್ಲಿ ಕರ್ಣನ ಪಾತ್ರ ಚಿತ್ರಣವೊಂದು ಸವಾಲು. ಅವನ ದುರದೃಷ್ಟ, ಅಧರ್ಮದ ಹಿಂದೆ ಬಿದ್ದಾತನ ದುರಂತ ಪತನದ ಕಥೆ ಇಲ್ಲಿದೆ. ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ ಶೆಟ್ಟಿ ಇರುವೈಲು ಬರಹ.
ಕರ್ಣನ ಬಗ್ಗೆ ಕೆಲವೊಮ್ಮೆ ಕನಿಕರ ಎನಿಸುತ್ತದೆ, ಹಾಗೆಯೇ ಮತ್ತೊಮ್ಮೆ ಅವನ ಬಗ್ಗೆ ಸಿಟ್ಟೂ ಬರುತ್ತದೆ. ಎಲ್ಲರಿಗೂ ಬೆಳಕನ್ನು ನೀಡುವ ಸೂರ್ಯ ಇವನ ತಂದೆ. ಶ್ರೀಕೃಷ್ಣನ ಸೋದರತ್ತೆಯಾದ ಕುಂತಿ ಇವನ ತಾಯಿ. ಮೇಲಾಗಿ ಹುಟ್ಟಿನಿಂದಲೇ ಬಂದ ಕವಚ ಕುಂಡಲಗಳು. "ಕೊಡುಗೈ ದಾನಿ" ಎಂಬ ಹೆಸರು ಬೇರೆ.

ಅರ್ಜುನನಷ್ಟೇ ಶ್ರೇಷ್ಠ ಬಿಲ್ಲುಗಾರನೀತ. ಆದರೆ ತಾಯಿಯ ಪ್ರೇಮ ಇವನಿಗೆ ಸಿಗಲೇ ಇಲ್ಲ. ಈತ ಪರಿಸ್ಥಿತಿಯ ಶಿಶುವಾಗಿ ಶ್ರೀಕೃಷ್ಣನ ನಾಟಕದಲ್ಲಿ ಒಂದು ಪಾತ್ರವಾಗಿ ಉಳಿದುಬಿಟ್ಟ.

ಗಂಗೆಯಲ್ಲಿ ತೇಲಿಬಂದ ಶಿಶುವನ್ನು ಅದಿರಥ ಎಂಬ ಸೂತನು ರಕ್ಷಿಸಿ ಪೋಷಿಸಿದನು. ಕವಚ ಕುಂಡಲಗಳೊಂದಿಗೆ ಹುಟ್ಟಿದ್ದರಿಂದ ಇವನಿಗೆ ವಸುಷೇಣ ಎಂಬ ಹೆಸರಾಯಿತು. ಕರ್ಣ ಕುಂಡಲಗಳೊಂದಿಗೆ ಜನಿಸಿದುದರಿಂದ ಅವನಿಗೆ ಕರ್ಣ ಎಂಬ ಹೆಸರಾಗಿ ಅದೇ ಸ್ಥಿರವಾಗಿ ಉಳಿಯಿತು. ವಿಕರ್ತನನ (ಸೂರ್ಯ) ಪುತ್ರನಾದ್ದರಿಂದ ವೈಕರ್ತನ ಎಂಬ ಹೆಸರಾಯಿತು.

ಸೂತನು ಬೆಳೆಸಿದ್ದರಿಂದ ಸೂತ ಪುತ್ರ ಎಂತಲೂ, ಅಂಗ ದೇಶದ ರಾಜನಾಗಿದ್ದರಿಂದ ಅಂಗ ರಾಜ ಎಂತಲೂ, ರಾಧೆಯ ಮುದ್ದು ಮಗನಾಗಿದ್ದರಿಂದ ರಾಧೇಯ ಎಂತಲೂ ಇವನಿಗೆ ಹೆಸರಿದೆ.

ಇವನ ಜೀವನವೆಲ್ಲಾ ದುರಂತಗಳಿಂದಲೇ ತುಂಬಿದ್ದು, ಇವನು ದುರಂತ ನಾಯಕನೆಂದೇ ನಮಗೆ ಗೋಚರಿಸುತ್ತಾನೆ. ಗ್ರಂಥದಲ್ಲಿ ವ್ಯಾಸರು ಇವನ ಒಳ್ಳೆಯ ಗುಣಗಳನ್ನು ಚಿತ್ರಿಸಿರುವಂತೆ, ಕೆಟ್ಟ ಗುಣಗಳನ್ನೂ ಚಿತ್ರಿಸಿದ್ದಾರೆ. ಇವನ ಸುಗುಣಗಳನ್ನೆಲ್ಲಾ ದುರ್ಗುಣಗಳು ನುಂಗಿ ಹಾಕಿದವು. ಇದಕ್ಕೆ ವಿಧಿಯು ಎಷ್ಟು ಕಾರಣವೋ ಅಷ್ಟೇ ಕಾರಣ ಸ್ವತಃ ಕರ್ಣನೇ ಆಗಿದ್ದಾನೆ.

ವ್ಯಾಸರು ದುರ್ಯೋಧನನನ್ನು ಅಧರ್ಮದ ವೃಕ್ಷವೆಂದು ಹೇಳಿ, ಕರ್ಣನನ್ನು ಅದರ ಕಾಂಡ ಎಂದೇ ಹೇಳಿದ್ದಾರೆ (ದುರ್ಯೋಧನೋ ಮನ್ಯುಮಯೋ ಮಹಾದ್ರುಮಃ! ಸ್ಕಂದಃ ಕರ್ಣಃ).
 
ಹಾಗೆ ನೋಡಿದರೆ ಹುಟ್ಟಿನಿಂದಲೇ ಇವನ ದುರಂತ ಕಥೆ ಪ್ರಾರಂಭವಾಯಿತು. ಕುಂತಿಗೆ ಮದುವೆಯಾದ ನಂತರ ಹುಟ್ಟಿದ್ದರೆ ಬಹುಶಃ ಇವನೇ ಕುರು ಸಾಮ್ರಾಜ್ಯದ ಚಕ್ರವರ್ತಿಯಾಗುತ್ತಿದ್ದನು. ಆಗ ಬಹುಶಃ ಯುದ್ಧವೂ ನಡೆಯುತ್ತಿರಲಿಲ್ಲ. ಏಕೆಂದರೆ ಇವನ ಪರಾಕ್ರಮ ಮತ್ತು ಸ್ವಾಮಿ ನಿಷ್ಠೆಯನ್ನು ನೆಚ್ಚಿಕೊಂಡೇ ದುರ್ಯೋಧನನು ಯುದ್ಧಕ್ಕೆ ಸಿದ್ಧನಾಗಿದ್ದು. ಆದರೆ ಅಧರ್ಮದ ಪರ ನಿಂತಿದ್ದರಿಂದ ಇವನಿಗೆ ದೈವವು ಒಲಿಯಲೇ ಇಲ್ಲ. ಸ್ನೇಹಕ್ಕೆ ಕಟ್ಟುಬಿದ್ದು ದುರ್ಯೋಧನನ ಅಧರ್ಮ ಕಾರ್ಯಗಳಿಗೆ ನೆರವಾಗಿ ಹೆಸರನ್ನು ಕೆಡಿಸಿಕೊಂಡನು. 

ಕೊನೆಗೆ ಧಣಿಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದನು. ಸೂರ್ಯನು ಎಚ್ಚರಿಸಿದರೂ ಬ್ರಾಹ್ಮಣ ವೇಷದಲ್ಲಿ ಬಂದ ಇಂದ್ರನಿಗೆ ಕವಚ ಕುಂಡಲಗಳನ್ನು ದಾನ ಮಾಡಿ ಆಪತ್ತನ್ನು ಬರಮಾಡಿಕೊಂಡನು. ಇಂದ್ರನಿಂದ ದೊರೆತ ಶಕ್ತ್ಯಾಯುಧವೂ ಸಹ ಫಲ ನೀಡಲಿಲ್ಲ. ಭಗವಂತನ ಪವಾಡದಿಂದ ಅವನ ಸರ್ಪಾಸ್ತ್ರವೂ ಗುರಿ ತಪ್ಪಿ ಅರ್ಜುನನು ಬದುಕಿ ಉಳಿದನು.

ಇಟ್ಟ ಗುರಿಯನ್ನು ಬದಲಾಯಿಸುವುದಿಲ್ಲ, ತೊಟ್ಟ ಬಾಣವನ್ನು ಮತ್ತೆ ತೊಡುವುದಿಲ್ಲ ಎಂಬುದು ಇವನ ಪ್ರತಿಜ್ಞೆಯಾಗಿತ್ತು.

ಕರ್ಣನಿಗೆ ಇಬ್ಬರು ಪತ್ನಿಯರಿದ್ದರು. ಸತ್ಯಸೇನನ ಪುತ್ರಿಯಾದ ವೈಶಾಲಿಯು (ವೃಷಾಲಿ) ಕರ್ಣನ ಜ್ಯೇಷ್ಠ ಪತ್ನಿ. ವೃಷಸೇನ ಮತ್ತು ವೃಷಕೇತು ವೈಶಾಲಿಯ ಪುತ್ರರು. ಕರ್ಣನು ತನ್ನ ಎರಡನೆಯ ಪತ್ನಿಯಾದ ಸುಪ್ರಿಯಾ ಎಂಬುವವಳಲ್ಲಿ ಚಿತ್ರಸೇನ, ಸತ್ಯಸೇನ, ಸುಶೇನ, ಶತ್ರುಜನ್ಯ, ದ್ವಿಪಾತ, ಬಾಣಸೇನ ಮತ್ತು ಪ್ರಸೇನ ಎಂಬ ಪುತ್ರರನ್ನು ಪಡೆದನು.

ಕರ್ಣನೂ ಸಹ ಕೌರವ ಪಾಂಡವರೊಂದಿಗೆ ದ್ರೋಣರಲ್ಲಿ ವಿದ್ಯೆಯನ್ನು ಕಲಿತನು. ಆದರೆ ದ್ರೋಣರು ಕರ್ಣನಿಗೆ ಬ್ರಹ್ಮಾಸ್ತ್ರವನ್ನು ಬೋಧಿಸಲಿಲ್ಲವಾದ್ದರಿಂದ ಅವನು ಮುನಿಸಿಕೊಂಡು ಪರಶುರಾಮನಲ್ಲಿಗೆ ಹೋಗಿ, ತಾನು ಬ್ರಾಹ್ಮಣನೆಂದು ಸುಳ್ಳು ಹೇಳಿ ವಿದ್ಯೆಯನ್ನು ಕಲಿತನು.

ಆದರೆ ಅಲ್ಲಿಯೂ ಸಹ ದುರದೃಷ್ಟ ಕರ್ಣನ ಬೆನ್ನು ಬಿಡಲಿಲ್ಲ. ಒಮ್ಮೆ ಪರಶುರಾಮನು ತನ್ನ ತಲೆಯನ್ನು ಕರ್ಣನ ತೊಡೆಯ ಮೇಲಿಟ್ಟು ಮಲಗಿ ನಿದ್ರೆ ಹೋದನು. ಆಗ ಇಂದ್ರನು ವಜ್ರ ದುಂಬಿಯಾಗಿ ಕರ್ಣನ ತೊಡೆಯನ್ನು ಕೊರೆಯಲಾರಂಭಿಸಿದಾಗ ರಕ್ತದ ಕೋಡಿಯೇ ಹರಿಯಿತು. ಗುರುವಿಗೆ ನಿದ್ರಾಭಂಗವಾಗಬಾರದೆಂಬ ಉದ್ದೇಶದಿಂದ ಕರ್ಣನು ನೋವನ್ನು ಸಹಿಸಿಕೊಂಡನು.

ಸ್ವಲ್ಪ ಸಮಯದ ನಂತರ ರಕ್ತದಿಂದ ಪರಶುರಾಮನ ಶಿರೋಭಾಗವು ಒದ್ದೆಯಾಗಿ ಅವರಿಗೆ ಎಚ್ಚರವಾಯಿತು. ಮೊದಲು ಪರಶುರಾಮನು ಕರ್ಣನ ಗುರುಭಕ್ತಿಗೆ ಪ್ರಸನ್ನನಾದರೂ, ನಂತರ ವಿಷಯವನ್ನು ತಿಳಿದು "ನೀನು ಸುಳ್ಳು ಹೇಳಿ ನನ್ನಲ್ಲಿ ವಿದ್ಯೆಯನ್ನು ಕಲಿತೆ. ಆದ್ದರಿಂದ ಆಪತ್ಕಾಲದಲ್ಲಿ ನಾನು ಕಲಿಸಿ ಕೊಟ್ಟ ವಿದ್ಯೆಯು ನಿನ್ನ ನೆನಪಿಗೆ ಬಾರದಿರಲಿ" ಎಂದು ಶಪಿಸಿದನು.

ಇದಾದ ಮೇಲೆ ಕರ್ಣನು ತಿಳಿಯದೆ ಒಮ್ಮೆ ಒಬ್ಬ ಋಷಿಯ ಹೋಮಧೇನುವನ್ನು ಸಂಹರಿಸಿದನು. ಇದರಿಂದ ಕುಪಿತಗೊಂಡ ಋಷಿಯು "ಆಪತ್ಕಾಲದಲ್ಲಿ ರಣರಂಗದಲ್ಲಿ ನಿನ್ನ ರಥದ  ಚಕ್ರವನ್ನು ಭೂದೇವಿಯು ನುಂಗಲಿ" ಎಂದು ಶಪಿಸಿದನು.

ಕೃಷ್ಣನು ರಾಯಭಾರಿಯಾಗಿ ಹಸ್ತಿನಾವತಿಗೆ ಬಂದಾಗ ಅವನು ಕರ್ಣನನ್ನು ಏಕಾಂತದಲ್ಲಿ ಸಂಧಿಸಿ "ಕರ್ಣ, ಪಾಂಡವರು ನಿನ್ನ ಸ್ವಂತ ಸೋದರರು. ನೀನು ಕೌಂತೇಯ. ನೀನು ಪಾಂಡವರಲ್ಲಿಗೆ ಬಂದು ಬಿಡು. ನೀನೇ ಚಕ್ರವರ್ತಿಯಾಗುತ್ತೀಯ" ಎಂದು ಹೇಳಿ ಕರ್ಣನ ಮನಸ್ಸನ್ನು ಕಲಕಿದನು.


ಆಗ ಕರ್ಣನು ಕೊಟ್ಟ ಉತ್ತರವು ಮಾರ್ಮಿಕವಾಗಿದೆ "ಕೃಷ್ಣ, ದಯವಿಟ್ಟು ಈ ರಹಸ್ಯವನ್ನು ಯಾರಿಗೂ ಹೇಳಬೇಡ. ಇದು ಯುಧಿಷ್ಠಿರನಿಗೆ ತಿಳಿದರೆ ಆ ಧರ್ಮಾತ್ಮನು ರಾಜ್ಯವನ್ನು ನನಗೆ ಒಪ್ಪಿಸಿಬಿಡುತ್ತಾನೆ. ನಾನು ಅದನ್ನು ದುರ್ಯೋಧನನಿಗೆ ಒಪ್ಪಿಸುತ್ತೇನೆ. ನಾನು ಸ್ವಾಮಿದ್ರೋಹ ಮಾಡಲಾರೆ".

ಕೃಷ್ಣನು ಹೋದ ಮೇಲೆ ಕರ್ಣನು "ಅಕಟಕಟಾ, ಕುರುಪತಿಗೆ ಕೇಡಾಯಿತು" ಎಂದು ಮಮ್ಮಲ ಮರುಗಿದನು.

ಇದಾದ ನಂತರ ಕುಂತಿಯು ಕರ್ಣನನ್ನು ಏಕಾಂತದಲ್ಲಿ ಸಂಧಿಸಿ, ವಿಷಯವನ್ನು ತಿಳಿಸಿ ತನ್ನ ಮಕ್ಕಳನ್ನು ಕಾಪಾಡುವಂತೆ ಕೇಳಿದಳು. ಆಗ ಕರ್ಣನು "ತಾಯಿ, ನೀನು ಕೇಳಬಾರದ್ದನ್ನು ಕೇಳುತ್ತಿದ್ದೀಯ. ಪಾಂಡವರ ನಿರ್ನಾಮಕ್ಕಾಗಿಯೇ ದುರ್ಯೋಧನನು ನನ್ನನ್ನು ಸಾಕುತ್ತಿದ್ದಾನೆ. ಆದರೂ ತಾಯಿಯ ಋಣವನ್ನು ತೀರಿಸಲು ಅರ್ಜುನನನ್ನು ಹೊರತುಪಡಿಸಿ ಮಿಕ್ಕ ಪಾಂಡವರನ್ನು ನಾನು ಕೊಲ್ಲುವುದಿಲ್ಲ" ಎಂದು ಹೇಳಿ ಕಳುಹಿಸಿದನು. ಹೀಗೆ ಕರ್ಣನ ಮನಸ್ಸಿನಲ್ಲಿ ದ್ವಂದ್ವವು ಪ್ರಾರಂಭವಾಗಿ ಪಾಂಡವರ ಬಗ್ಗೆ ಅವನ ಮನಸ್ಸು ಮೃದುವಾಯಿತು.

ಭಾರತ ಯುದ್ಧವು ನಿಶ್ಚಯವಾದಾಗ ಭೀಷ್ಮನ ಮೂದಲಿಕೆಯ ಮಾತುಗಳನ್ನು ಕೇಳಿ "ಈ ಮುದುಕ ರಣರಂಗದಲ್ಲಿ ಇರುವ ತನಕ ನಾನು ಯುದ್ಧ ಮಾಡುವುದಿಲ್ಲ" ಎಂದು ಹೇಳಿ ಹೊರಟು ಹೋದನು.

ಯುದ್ಧದ ಹದಿನಾರನೆಯ ದಿನ ಕರ್ಣನು ಪ್ರಧಾನ ಸೇನಾಧಿಪತಿಯಾಗಿ, ಅರಿವೀರ ಭಯಂಕರನಂತೆ ಯುದ್ಧ ಮಾಡಿ ಅರ್ಜುನನಿಂದ ಹತನಾದನು. ಕರ್ಣನು ವೀರಸ್ವರ್ಗಕ್ಕೆ ನಡೆಯಲು, ದುರ್ಯೋಧನನು ಬಿಕ್ಕಿ ಬಿಕ್ಕಿ ಅತ್ತನು. ಈ ಪ್ರಕಾರ ಕರ್ಣನು ಉಂಡ ಮನೆಯ ಋಣವನ್ನು ತೀರಿಸಿದನು.

ಸಂ.: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು