ಯಕ್ಷಾವಲೋಕನ: ಸಂಘಟನೆ, ಆಸ್ವಾದನೆಯ ಎಡನೀರು ಯಕ್ಷಗಾನ ತಾಳಮದ್ದಳೆ ಸಪ್ತಾಹ 2021


ಯಕ್ಷಗಾನ ತಾಳಮದ್ದಳೆ ಮಾಗಧ ವಧೆ
ಯಕ್ಷಗಾನ ತಾಳಮದ್ದಳೆ ಮಾಗಧ ವಧೆಯ ದೃಶ್ಯ

ಯಕ್ಷಗಾನದ ಪೋಷಕ ಕೇಂದ್ರಗಳಲ್ಲಿ ಪ್ರಮುಖವಾದ ಎಡನೀರು ಮಠದಲ್ಲಿ ನಡೆದ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಅವಲೋಕಿಸಿದ್ದಾರೆ ಯಕ್ಷಗಾನ ಪ್ರೇಮಿ ಕುಮಾರ ಸುಬ್ರಹ್ಮಣ್ಯ ಮುಳಿಯಾಲ.
ಬಹು ನಿರೀಕ್ಷೆಯ, "ಯಕ್ಷಾವತರಣ -3" ತಾಳಮದ್ದಳೆ ಸಪ್ತಾಹವು 26-07-2021ರಂದು ಶ್ರೀಮದೆಡನೀರು ಗುರುಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರಿಂದ ಉದ್ಘಾಟನೆಗೊ0ಡು, ಹಿರಿಯರಾದ ಮತ್ತು ಅರ್ಥದಾರಿಗಳೂ ಆದ ಡಾ.ರಮಾನಂದ ಬನಾರಿ ಮತ್ತು ಯಕ್ಷಗಾನ ದಶಾವತಾರಿ ಕೆ.ಗೋವಿಂದ ಭಟ್ಟರ ಉಪಸ್ಥಿತಿಯಲ್ಲಿ ಮುಂಡಾಜೆ ಕೆ.ಶ್ರೀಕರ ಭಟ್ಟರಿಗೆ ಸನ್ಮಾನ, ನಂತರ ತಾಳಮದ್ದಳೆಯೊಂದಿಗೆ ಶುಭಾರಂಭಗೊಂಡಿತು.

ಬ್ರಹ್ಮೈಕ್ಯ ಗುರುಗಳಾದ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮಿಗಳು ಸಂಕಲ್ಪಿಸಿದ ಕಾರ್ಯಕ್ರಮ ಅವರ ಪ್ರಥಮ ಆರಾಧನಾ ಸ್ಮೃತಿ ಗೌರವವಾಗಿ "ಯಕ್ಷಾವತರಣ- 3" ಹೆಸರಿನಲ್ಲಿ ಸಪ್ತಾಹವಾಗಿ ಸಮರ್ಪಿಸಲ್ಪಟ್ಟಿತು.

ಬಹುಶ್ರುತ ವಿದ್ವಾಂಸರು, ನುರಿತ ಅರ್ಥದಾರಿಗಳು ಸಿಗಬಹುದು. ಆದರೆ ಇವರನ್ನೆಲ್ಲ ಜೊತೆಗೂಡಿಸಿ ಕಾರ್ಯಕ್ರಮ ಮಾಡಿಸಲು ಸಮರ್ಥ ಸಂಯೋಜಕರು ಸಿಗುವುದು ಕಷ್ಟ. ಇಂತಹ ಸಂಧರ್ಭದಲ್ಲಿ, ಸ್ವತಃ ಅರ್ಥದಾರಿಯೂ, ಪುರಾಣ, ಪ್ರಸಂಗ ಜ್ಞಾನ ಇರುವ ಅತ್ಯುತ್ತಮ ಸಂಘಟನಾ ಚಾತುರ್ಯವಿರುವ ಉಜಿರೆ ಅಶೋಕ ಭಟ್ಟರು ಅತ್ಯಂತ ಸಂತುಲಿತವಾಗಿ ಈ ಕಾರ್ಯಕ್ರಮ ಸಂಘಟಿಸಿದ್ದಾರೆ.

ಕಲಾವಿದರ ಆಯ್ಕೆಯಲ್ಲಿ, ಪ್ರಸಂಗದ ಆಯ್ಕೆಯಲ್ಲಿ ಅತ್ಯಂತ ಕಾಳಜಿ ವಹಿಸಿ, ಏಕತಾನತೆಯ ಹೊರತಾದ ಪ್ರಸಂಗಗಳನ್ನೂ ಸೇರಿಸಿಕೊಂಡು, ಹಿರಿಯ ಕಿರಿಯ ಅರ್ಥದಾರಿಗಳನ್ನು ಸಮನಾಗಿ ಬಳಸಿಕೊಂಡು ಒಂದು ಸಮತೋಲಿತ ಕಾರ್ಯಕ್ರಮವನ್ನು ಮಾಡಿದ್ದಾರೆ. ಇದು ಇತರ ಸಂಘಟಕರಿಗೆ ಮಾದರಿಯೂ ಹೌದು.

1ನೆಯ ದಿನದ ತಾಳಮದ್ದಳೆ ಕೃಷ್ಣ ಸಾರಥ್ಯ 26-07-21
ಕೃಷ್ಣನ ಪ್ರಾಮಾಣಿಕವಾದ ಸದಾಶಯವನ್ನು ಪ್ರಕಟಪಡಿಸುವ, ಕೃಷ್ಣನು ಜಗಳಗಂಟನಲ್ಲ, ಯುದ್ಧಪ್ರಿಯನಲ್ಲ ಎಂಬುದನ್ನು ಪ್ರಸ್ತುತಪಡಿಸುವ ಸನ್ನಿವೇಶ ಇದಾಗಿದೆ. ಹೃದ್ಯವಾದ, ಮನಸ್ಸಿಗೆ ತಟ್ಟುವ ಪದ್ಯಗಳು ಈ ಪ್ರಸಂಗದಲ್ಲಿವೆ.

ಕೌರವನು ಪಾಂಡವರೊಂದಿಗೆ ಯುದ್ಧ ಮಾಡುವುದಾಗಿ ನಿಶ್ಚಯಿಸಿ ಶ್ರೀಕೃಷ್ಣನ ಸಹಾಯ ಬೇಡಲು ದ್ವಾರಕೆಗೆ ಹೋಗುತ್ತಾನೆ. ವಿಷಯ ತಿಳಿದ ಅರ್ಜುನನೂ ದ್ವಾರಕೆಗೆ ಬರುತ್ತಾನೆ. ಶ್ರೀಕೃಷ್ಣನು, "ನಾನೊಬ್ಬನೇ ಒಂದು ಕಡೆಗೆ, ಯಾದವ ಸೈನ್ಯ ಇನ್ನೊಂದು ಕಡೆಗೆ. ಇದರಲ್ಲಿ ನಿಮಗೆ ಏನು ಬೇಕೋ ಅದನ್ನು ಆರಿಸಿಕೊಳ್ಳಿರಿ" ಎನ್ನುತ್ತಾನೆ. ಭಗವದ್ಭಕ್ತನಾದ ಪಾರ್ಥನು ಶ್ರೀಕೃಷ್ಣನನ್ನೇ ಆರಿಸಿಕೊಳ್ಳುತ್ತಾನೆ. ಕೌರವ ಯಾದವ ಸೈನ್ಯವನ್ನೇ ಬಯಸುತ್ತಾನೆ. ಮುಪ್ಪಾಗಿ ಯೌವನದ ಬಲ ಇಲ್ಲದ ನಾನು ಶಸ್ತ್ರ ಹಿಡಿಯುವುದಿಲ್ಲ ಹೋಗು" ಎಂದು ವಚನ ಕೊಡುತ್ತಾನೆ. ಆದರೆ ಶ್ರೀಕೃಷ್ಣವಚನದ ಅರ್ಥವನ್ನು ತಿಳಿಯದ ಕೌರವ ಹಸ್ತಿನಾವತಿಗೆ ಸಂತೋಷದಿಂದಲೇ ಮರಳುತ್ತಾನೆ.

ಶ್ರೀಕೃಷ್ಣನೇ ಸಾರಥಿಯಾಗಿಬಿಟ್ಟರೆ ತನ್ನನ್ನು ಗೆಲ್ಲುವುದು ಅಸಾಧ್ಯ ಎಂದು ಅರಿತ ಅರ್ಜುನ
"ದೇವ ಮಾತ್ರವೆ ನೀವು ದೇವರ
ದೇವರೊಡೆಯರು ಹೊಗಳುವರೆ ವೇ
ದಾವಳಿಗಲಳವಲ್ಲ ಸಾಕಾಮಾತದಂತಿರಲಿ
ನಾವು ಭಕುತರು, ಭಕುತಭೃತ್ಯರು
ನೀವು ಸಾರಥಿಯಾಗಿ ಭೃತ್ಯನ
ಕಾವುದೆಂದರ್ಜುನನು ಹಣೆ ಚಾಚಿದನು ಹರಿಪದಕೆ"
ಹೀಗೆ ಶ್ರೀಕೃಷ್ಣನು ಧರ್ಮ ಪಕ್ಷಪಾತಿಗಳಾದ ಪಾಂಡವರ ಪಕ್ಷಕ್ಕೆ ಬರುತ್ತಾನೆ.

ಉದ್ಧಟತನದ, ಅಹಂಕಾರಿಯಾದ ಕೌರವನು ಬಲರಾಮನ ಬೆಂಬಲವನ್ನು ಪಡೆದು ಅಲ್ಪತೃಪ್ತಿಯೊಂದಿಗೆ ಹಿಂದಿರುಗುತ್ತಾನೆ. ಹೀಗೆ ಮಾತಿನ ಕೌಶಲದಲ್ಲಿ ಕೌರವನನ್ನು ದಾರಿತಪ್ಪಿಸುವ ಕೃಷ್ಣ, ಈ ಮೂಲಕ ಧರ್ಮ ಸಂಸ್ಥಾಪನೆಗೆ ಅಡಿಗಲ್ಲು ಹಾಕುವ ಕಥಾ ಹಂದರವನ್ನು ಹೊಂದಿದ ಪ್ರಸಂಗ ಇದಾಗಿದೆ.

ಡಾ.ರಮಾನಂದ ಬನಾರಿಯವರು ಕೃಷ್ಣನಾಗಿ ತಮ್ಮ ಅದ್ಭುತ ಜ್ಞಾನ ಮತ್ತು ವಿಶೇಷಾರ್ಥಗಳ ಮೂಲಕ ಕೃಷ್ಣನ ಪಾತ್ರವನ್ನು ನೆನಪಲ್ಲುಳಿಯುವಂತೆ ಮಾಡಿದರು. ಕೃಷ್ಣನ ಪ್ರಾಮಾಣಿಕವಾದ ಸದಾಶಯವನ್ನು ಪ್ರಕಟಪಡಿಸುವ ಕೃಷ್ಣನು ಜಗಳಗಂಟನಲ್ಲ, ಯುದ್ಧಪ್ರಿಯನಲ್ಲ ಎಂಬುದನ್ನು ಪ್ರಸ್ತುತಪಡಿಸುವ ಸನ್ನಿವೇಶ ಚೆನ್ನಾಗಿ ಮೂಡಿ ಬಂತು. ಹೃದ್ಯವಾಗಿ ಮನಸ್ಸಿಗೆ ತಟ್ಟುವ ಪದ್ಯಗಳು ಗಮನ ಸೆಳೆದವು. ಯಾವುದೇ ಪಾತ್ರವನ್ನು ಸಮರ್ಥವಾಗಿ ಮತ್ತು ಹೊಸ ಚಿಂತನೆಗಳೊಂದಿಗೆ ಪ್ರಸ್ತುತಪಡಿಸಬಲ್ಲ ಶಂಭು ಶರ್ಮರದು ಕೌರವನಾಗಿ ನಿರೀಕ್ಷೆಯಂತೆ ಉತ್ಕೃಷ್ಟ ಅರ್ಥದಾರಿಕೆ. ಕೃಷ್ಣ ಮತ್ತು ಕೌರವರ ಸಂಭಾಷಣೆ ರೋಚಕವಾಗಿತ್ತು. ಉಳಿದಂತೆ ಬಲರಾಮನಾಗಿ ಯಕ್ಷಗಾನದ ದಶಾವತಾರಿ ಕೆ.ಗೋವಿಂದ ಭಟ್ಟರು, ಅರ್ಜುನನಾಗಿ ಮತ್ತು ಕೆ.ಶ್ರೀಕರ ಭಟ್ಟರು ಕಾಣಿಸಿಕೊಂಡರು.

ಭಾಗವತರಾಗಿ ಅನುಭವೀ ಭಾಗವತ ಹಂಸ ಪುತ್ತಿಗೆ ರಘುರಾಮ ಹೊಳ್ಳರು, ಹಿರಿಯ ಅನುಭವಿಗಳಾದ ಪದ್ಯಾಣ ಶಂಕರನಾರಾಯಣ ಭಟ್ಟರು ಮತ್ತು ಲಕ್ಷ್ಮೀಶ ಅಮ್ಮಣ್ಣಾಯರು ಚೆಂಡೆ ಮದ್ದಳೆಯಲ್ಲಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿದರು.

2ನೆಯ ದಿನದ ತಾಳಮದ್ದಳೆ ಸೀತಾ ಪರಿತ್ಯಾಗ 27-07-21
"ಅಗಸ ಕ್ರೋಧನನಾಡಿದ ಮಾತನ್ನು ಭದ್ರನು ಶ್ರೀ ರಾಮನಲ್ಲಿ ಹೇಳುತ್ತಾನೆ. ಅಗಸನ ಮಾತಿಗೋಸುಗ (ಇದು ನಿಮಿತ್ತ) ಸೀತೆಯನ್ನು ಪರಿತ್ಯಜಿಸುವ, ರಾಮಾಯಣದ ಉತ್ತರಕಾಂಡದಲ್ಲಿ ಬರುವ ಕಥಾಭಾಗವನ್ನು ಅತ್ಯಂತ ಸುಂದರವಾಗಿ ಯಕ್ಷಗಾನೀಯವಾಗಿಸಿದರು ಕಲಾವಿದರು. ಅತ್ಯಂತ ಭಾವುಕತೆಯನ್ನು ತಟ್ಟುವ ಪ್ರಸಂಗ, ಶ್ರೀರಾಮನ ಅಂತರಂಗವನ್ನು ತೆರೆದಿಡಬಹುದಾದ, ಭದ್ರನ ಚಿಂತನೆಯನ್ನು (ಸಾಮಾನ್ಯರ ದೃಷ್ಟಿಕೋನದಿಂದ) ಒರೆಗಲ್ಲಿಗೆ ಹಚ್ಚಬಹುದಾದ, ಸೀತೆಗೂ ತನ್ನ ಅವಲೋಕನಕ್ಕೆ ಅವಕಾಶವೀಯುವ ಮತ್ತು ಸೀತಾ ಪರಿತ್ಯಾಗದೊಂದಿಗೆ ನಿಜವಾದ ಒಟ್ಟು ಆಶಯವನ್ನು ಮತ್ತು ಸಂದರ್ಭವನ್ನು ಅವಲೋಕಿಸಬಹುದಾದ ಅತ್ಯಂತ ಮಾರ್ಮಿಕವಾದ ಕಥಾ ಹಂದರವನ್ನು ಹೊಂದಿದ ಕಥಾಭಾಗ ಇದಾಗಿದೆ.

ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತ, ಶುದ್ಧ ರಾಗ ಮಾತು ತಾಳಜ್ಞಾನವಿರುವ ತನ್ನ ಭಾಗವತಿಕೆಯಿಂದ ಪ್ರಸಂಗವನ್ನೇ ಗೆಲ್ಲಿಸಿದ, ಯಕ್ಷಗಾನದ ಹಾಡನ್ನು ಗುನುಗುನಿಸುವಂತೆ, ಅನುರಣಿಸುವಂತೆ ಮಾಡಿದ ರಸರಾಗ ಚಕ್ರವರ್ತಿ, ಶ್ರೀ ದಿನೇಶ ಅಮ್ಮಣ್ಣಾಯರ ಭಾಗವತಿಕೆಯಲ್ಲಿ 2ನೇ ದಿನದ ತಾಳಮದ್ದಳೆಯಾಗಿ ಮೂಡಿ ಬಂತು "ಸೀತಾ ಪರಿತ್ಯಾಗ". ಬೊಟ್ಟಿಕೆರೆ ಪುರುಷೋತ್ತಮ ಪೂಂಜರ "ಮಾನಿಷಾದ" ಪ್ರಸಂಗದ ಉತ್ತರಾರ್ಧವನ್ನು ಇಲ್ಲಿ ಆಯ್ದುಕೊಂಡಿದ್ದರು. ಪೂಂಜರ ಚೆಂದದ ಪದ್ಯಗಳನ್ನು ಮತ್ತು ಪ್ರಸಂಗವನ್ನು ದಾಖಲೆಯಾಗಿಸಿದವರು ಅಮ್ಮಣ್ಣಾಯರು.

ಬಯಕೆಯಿಂತಿದೆ ಸಲಿಸುವೆಯ ನಲ್ಲ ಕೆಲಸಮಯವಾಯಿತು ಪಯಣವಿಲ್ಲದೆ ಮನಕೆ ಗೆಲವಿಲ್ಲ|
ನಯನ ಪುಣ್ಯಾಶ್ರಮದ ದರುಶನ ಬಯಸೆ ಕಿವಿಗಳು ಮಧುರ ವೇದಾಧ್ಯಯನ ನಾಸಿಕ ಹವಿಯ ಕಂಪನು ಬಯಸುತಿದೆ ನನ್ನಿಂದ್ರಿಯಂಗಳುII
ದಿಟವೇ ನಿನ್ನಯ ವಚನ ಸೌಮಿತ್ರಿ ಕೇಳ್ ಹಠಕೊಪ್ಪಿದನೇ ರಮಣ|
ಸಟೆಯಲ್ಲವಲ್ಲ ನಿಶ್ಚಟ ಶ್ರದ್ಧೆಯಿಂದಲೆ ಕಟಿಬದ್ಧನಾದೆಯೆ ಅಡವಿಗೆ ಒಯ್ವರೇII
ಜೊತೆಯೊಳಾರೈತಹರು ನಿನ್ನಯ ಸತಿಯೋ ಭರತನ ಭಾರ್ಯೆಯೋ ಎನಗತಿ ಸಲುಗೆಯಾ ತಂಗಿ ಶ್ರುತಕೀರ್ತಿಯಳೋ ಮಾತೆಯರೋ|
ಹಿತದಿ ಪೇಳ್ ಆ ಕಾನನದಿ ಮುನಿಸತಿಯರಿಗೆ ಕೊಡಲೇನ ಒಯ್ಯಲಿ ಕ್ಷಿತಿಯಧಿಪನೇನೆಂದ ಮಗನೇII

ಹೀಗೆ ಅದ್ಭುತ ರಸ ಸೃಷ್ಟಿಗೆ, ಭಾವುಕತೆಗೆ, ಆತ್ಮಾವಲೋಕನಕ್ಕೆ ಅಂತರಂಗದ ಮಾತುಗಳಿಗೆ ಧ್ವನಿಯಾಗಬಲ್ಲ, ಅರ್ಥಧಾರಿಗಳಿಗೆ ಸವಾಲಾಗಬಲ್ಲ ಪ್ರಸಂಗದಲ್ಲಿ ಮುಮ್ಮೇಳದಲ್ಲಿ ಯಕ್ಷಾವ್ಯಯನಿಧಿ ಭಾವಕ್ಕೆ ಮಾತನ್ನು ಪೋಣಿಸಬಲ್ಲ ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಶ್ರೀರಾಮನ ಪಾತ್ರವನ್ನು ನಿರ್ವಹಿಸಿದರು. ಅತಿ ದೀರ್ಘ ಪೀಠಿಕೆಯು ಸಮಯಮಿತಿಯ ಪ್ರದರ್ಶನಕ್ಕೆ ಹೊಂದಿಕೆಯಾಗಲಿಲ್ಲ.

ಸ್ತ್ರೀ ಪಾತ್ರಗಳಿಂದಲೇ ಪ್ರಸಿದ್ಧರಾದ ಪುರಾಣ ಜ್ಞಾನವುಳ್ಳ ಕುಂಬ್ಳೆ ಶ್ರೀಧರ ರಾಯರು, ಸೀತೆಯ ಪಾತ್ರದಲ್ಲಿ ಕಾಣಿಸಿಕೊಂಡರಾದರೂ ಪರಸ್ಪರ ಮಾತಿನಲ್ಲಿ ಭಾವಸ್ಫುರಣೆಯ ಕೊರತೆ ಕೇಳುಗರಿಗೆ ಬಾಧಿಸಿದ್ದಂತೂ ಸತ್ಯ. ಭಾವಕ್ಕೆ ಕಣ್ಣೀರಾಗಬಲ್ಲ ಪೆರ್ಮುದೆ ಜಯಪ್ರಕಾಶ ಶೆಟ್ಟರು ಲಕ್ಷ್ಮಣನಾಗಿ ಸಮಯದ ಕೊರತೆಯನ್ನು ಅನುಭವಿಸಬೇಕಾಯಿತು. ಹವ್ಯಾಸಿ ಅರ್ಥದಾರಿಗಳಾದ ರಾಜೇಂದ್ರ ಕಲ್ಲೂರಾಯ ಮತ್ತು ಶ್ರೀಪತಿ ಕಲ್ಲೂರಾಯರು ಪೂರಕ ಅರ್ಥದಾರಿಕೆ ಮಾಡಿದರು.

ಹಿಮ್ಮೇಳದಲ್ಲಿ ಕರುಣ ರಸವನ್ನು ಅನ್ಯಾದೃಶವಾಗಿ ಪ್ರಸ್ತುತಗೊಳಿಸಬಲ್ಲ ಏಕಮೇವಾದ್ವಿತೀಯ ರಸರಾಗ ಚಕ್ರವರ್ತಿ ದಿನೇಶ ಅಮ್ಮಣ್ಣಾಯರು ಚೆನ್ನಾಗಿ ಹಾಡಿದರಾದರೂ ಅವರ ಎಂದಿನ ಕ್ಲಾಸಿಕ್ ಪ್ರಸ್ತುತಿ ಬರಲಿಲ್ಲ. ಚೆಂಡೆ ಮದ್ದಳೆಯಲ್ಲಿ ಅನುಭವಿ ಮತ್ತು ಅದ್ಭುತ ಕಸುಬುಗಾರ ದೇಲಂತಮಜಲು ಸುಬ್ರಹ್ಮಣ್ಯ ಭಟ್ಟರು ಮತ್ತು ಐಲ ಲವಕುಮಾರ್ ಕಾಣಿಸಿಕೊಂಡರು. ಒಟ್ಟಿನಲ್ಲಿ ಎರಡನೇ ದಿನದ ಪ್ರದರ್ಶನ ನಿರೀಕ್ಷೆಯ ಮಟ್ಟಕ್ಕೆ ಬರಲಿಲ್ಲ.

3ನೆಯ ದಿನದ ತಾಳಮದ್ದಳೆ ತರಣಿ ಸೇನ ಕಾಳಗ 28-07-21
ರಾಮ ರಾವಣರ ಘನಘೋರ ಯುದ್ಧದಲ್ಲಿ ಬಂಧುಗಳು, ಆಪ್ತರು ಮಕ್ಕಳು ಅಗಲಿದ ಕಾಲಕ್ಕೆ ರಾವಣನು ಇಂದ್ರಜಿತುವಿನಷ್ಟೇ ಪ್ರೀತಿಸಿದ, ವಿಭೀಷಣನ ಮಗನಾದ ತರಣಿಸೇನ ಯುದ್ಧಕ್ಕೆ ಹೊರಡುತ್ತಾನೆ. ರಾಮ ಮತ್ತು ತರಣಿಸೇನನ ನಡುವೆ ಯುದ್ಧವಾದಾಗ ತರಣಿಸೇನನ ಯುದ್ಧವನ್ನು ಕಂಡು ರಾಮ ಅವನಾರೆಂದು ವಿಭೀಷಣನಲ್ಲಿ ಕೇಳಿದಾಗ, ತನ್ನ ಪುತ್ರನೆಂಬುದನ್ನು ಮರೆಮಾಚಿ ರಾವಣನ ಸಾಕುಮಗನೆಂದು ಹೇಳುತ್ತಾನೆ. ರಾಮನು ಯುದ್ಧದಲ್ಲಿ ತರಣಿಸೇನನನ್ನು ಕೊಂದಾಗ ವಿಭೀಷಣನ ದುಃಖಕ್ಕೆ ಕಾರಣವನ್ನು ಕೇಳಿದಾಗ ತರಣಿಸೇನನು ವಿಭೀಷಣನ ಮಗನೆಂದು ತಿಳಿಯುತ್ತದೆ. ವಿಭೀಷಣನ ಸ್ವಾಮಿನಿಷ್ಠೆಯನ್ನು ಮೆಚ್ಚಿದ ರಾಮ ಅವನಿಗೆ ಸಮಾಧಾನ ಹೇಳಿ ತರಣಿಸೇನನಿಗೆ ಮುಕ್ತಿಯನ್ನು ಕರುಣಿಸುತ್ತಾನೆ.

ಆಲೆಟ್ಟಿ ರಾಮಣ್ಣ ಶಗ್ರಿತ್ತಾಯರ ಈ ಯಕ್ಷಗಾನ ಪ್ರಸಂಗವು ತಾಳಮದ್ದಳೆಯಲ್ಲಿ ತೀರಾ ಅಪರೂಪ. ತರಣಿಸೇನ ಮತ್ತು ರಾಮನ ತಾರ್ಕಿಕ ಸಂವಾದಕ್ಕೆ ಎಡೆಮಾಡಿಕೊಡುವ ಪ್ರಸಂಗ ಇದಾಗಿದೆ.

"ನ್ಯಾಯವಂತನಾಗಿ ನೀನ I ನ್ಯಾಯದಿಂದ ವಾಲಿಯನ್ನುI 
ಸಾಯಬಡಿದುದೇತಕೆ ಸ I ಹಾಯಕಲ್ಲೇಲ II ೧ II 
ತಮ್ಮನರಸಿಯ ಕೂಡಿ I ಧರ್ಮ ಕೆಟ್ಟು ಸತ್ತರವನI 
ತಮ್ಮನನ್ನು ಪಾಲಿಸಿದುದು I ದೆಮ್ಮ ತಪ್ಪೇನುII ೨ II

ಹೀಗೆ ತಾಟಕಿ, ಶಂಭುಕನಿಂದ ತೊಡಗಿ ಲಂಕೆಯ ಪ್ರವೇಶದ ತನಕವೂ ರಾಮನನ್ನು ಪ್ರಶ್ನಿಸುವ ತರಣಿಸೇನನಿಗೆ ಸಮರ್ಪಕವಾದ ಉತ್ತರವನ್ನು ರಾಮ ಕೊಡಬೇಕಾಗುತ್ತದೆ.

ಸಂತುಲಿತ ಕಾರ್ಯಕ್ರಮ, ಹೇಗೆ ಯಶಸ್ವಿಯಾಗಬಹುದು ಎಂಬುದಕ್ಕೆ 28-07-21ರ ತರಣಿಸೇನ ಕಾಳಗ ಸಾಕ್ಷಿಯಾಯಿತು. ಸಮಯದ ಮಿತಿಯಲ್ಲಿ ಪನೆಯಾಲರ ರಾವಣ‌ ಮತ್ತು ಶಬ್ದಾಲಂಕಾರ ಭೂಷಿತವಾದ ಅಸ್ಖಲಿತವಾದ ಜಬ್ಬಾರರ ತರಣಿಸೇನ ಸಂಭಾಷಣೆ ಆಕರ್ಷಕವಾಗಿ ಮೂಡಿ ಬಂತು.

ರಾವಣನ ಹೃದಯದ ಭಾಷೆ, ತರಣಿಸೇನನ, ರಾಮನ ಜೊತೆಗಿರುವ ವಿಭೀಷಣನ ಕುರಿತಾದ ಚಿಂತನೆ ಮತ್ತು ರಾವಣನಲ್ಲಿರುವ ವಿಭೀಷಣನ ಹೆಂಡತಿ ಸರಮೆ ಮತ್ತು ಮಗನಾಗಿ ತರಣಿಸೇನನು ಇರುವುದರ ಕಾರಣದ ಪ್ರಸ್ತುತಿ ಚೆನ್ನಾಗಿತ್ತು. ವಿಭೀಷಣನಾಗಿ ಪೂಕಳರದ್ದು ಹೃದಯ ತಟ್ಟುವ ಅರ್ಥದಾರಿಕೆ. ರಾಮನಾಗಿ ಆಳ್ವರದ್ದು ಪ್ರಬುದ್ಧ ಅರ್ಥದಾರಿಕೆ. ರಾಮನ ಚಿತ್ರಣ ಚೆನ್ನಾಗಿ ಮತ್ತು ಸಮರ್ಥವಾಗಿ ಮೂಡಿ ಬಂತು.

ಜಬ್ಬಾರರು ತರಣಿಸೇನನಾಗಿ ರಾಮನಲ್ಲಿ ಸಕಾರಣವಾದ ಪ್ರಶ್ನೆಗಳನ್ನು ಪ್ರಸಂಗದ ಮಿತಿಯಲ್ಲಿ ಪ್ರಸ್ತುತಪಡಿಸಿದರೆ, ರಾಮನಾಗಿ ಸಮರ್ಥವಾಗಿ ಮತ್ತು ಕಾವ್ಯಮಯವಾಗಿ ಪಾತ್ರದ ಆಶಯದ ರೀತಿಯಲ್ಲಿ ನಿರ್ವಹಿಸಿ ಉತ್ತರವನ್ನು ಕೊಟ್ಟರು ಪನೆಯಾಲರು. ಇಬ್ಬರೂ ಅತ್ಯುತ್ತಮವಾಗಿ ಕರ್ಣಾನಂದಕರವಾಗಿ ಸಂಭಾಷಣೆಯನ್ನು ನಡೆಸಿಕೊಟ್ಟರು. ಸಾಕಷ್ಟು ವಾದಕ್ಕೆ ಅವಕಾಶ ಇದ್ದರೂ ಪ್ರಸಂಗದ ಮಿತಿಯಲ್ಲಿ ಮತಿಯರಿತು ವ್ಯವಹರಿಸಿದ್ದು ಒಟ್ಟಂದದಲ್ಲಿ ಪ್ರಸಂಗದ ಯಶಸ್ಸು. ಇಂದಿನದ್ದು ಸಮಯದ ಮಿತಿಯಲ್ಲಿ ಉತ್ಕೃಷ್ಟವಾಗಿ ನಡೆದ ಪ್ರದರ್ಶನ. ಜಬ್ಬಾರರ ಭಾವದ ಭಾಷೆ ಕೇಳುಗರ ಹೃದಯ ತಟ್ಟಿತು. ಹಿಮ್ಮೇಳದಲ್ಲಿ ಪುತ್ತೂರು ರಮೇಶ ಭಟ್ಟರು ಮತ್ತು ಪ್ರಫುಲ್ಲಚಂದ್ರ ನೆಲ್ಯಾಡಿ ಭಾಗವತರಾಗಿ, ಜಗನ್ನಿವಾಸ ರಾವ್ ಮತ್ತು ಐಲ ಲವಕುಮಾರ್ ಚೆಂಡೆ ಮದ್ದಳೆಗಳಲ್ಲಿ ಸಹಕರಿಸಿದರು.

4ನೆಯ ದಿನದ ತಾಳಮದ್ದಳೆ ಗಾಂಡೀವ ನಿಂದನೆ 29-07-2021
ಕರ್ಣನನ್ನು ವಧಿಸುವುದಕ್ಕೆ ಪೂರ್ವಪೀಠಿಕೆಯಾಗಿ, ಅರ್ಜುನನನ್ನು ಪ್ರೇರೇಪಿಸಿ ಗಟ್ಟಿಗನನ್ನಾಗಿ ಮಾಡುವುದಕ್ಕೆ ದೈವ ಸಂಕಲ್ಪಿತವಾಗಿ ಇರುವುದೇ ಗಾಂಡೀವ ನಿಂದನೆ ಎಂಬ ಪ್ರಸಂಗ. ಕೇವಲ ಅಧಿಕಾರ ಹಿಡಿಯುವುದರಿಂದ ಏನೂ ಸಾಧನೆಯಾಗುವುದಿಲ್ಲ, ಅದನ್ನು ಪಡೆಯುವಲ್ಲಿನ ಶ್ರಮವೂ ಪ್ರತಿಯೊಬ್ಬರ ಕೊಡುಗೆಯೂ ಮುಖ್ಯವಾಗುತ್ತದೆ ಎನ್ನುವ ಸುಪ್ತ ಸಂದೇಶವೂ ಪ್ರಧಾನವಾಗುತ್ತದೆ. ಅಪ್ರಕಟಿತವಾಗಿ ಎಲ್ಲರಿಗೂ ಒಂದು ಅನುಭವವನ್ನು, ಪಾಠವನ್ನು ಕಳಿಸುವುದು ಕೃಷ್ಣನ ಉದ್ದೇಶ ಮತ್ತು ಅರ್ಜುನನನ್ನು ಮಾನಸಿಕವಾಗಿ ಕರ್ಣನನ್ನು ಕೊಲ್ಲುವಲ್ಲಿ ಸದೃಢಗೊಳಿಸುವುದು ಪರಮ ಉದ್ದೇಶ. ಇದನ್ನು ಗಮನದಲ್ಲಿಟ್ಟು ಅರ್ಥದಾರಿಕೆಯನ್ನು ಮತ್ತು ಪಾತ್ರವನ್ನು ಕಲಾವಿದರು ಕಟ್ಟಿಕೊಡಬೇಕಾಗುತ್ತದೆ.

ಕರ್ಣನಿಂದ ಘಾಸಿಗೊಂಡ ಧರ್ಮರಾಯ ಶಿಬಿರದಲ್ಲಿರುತ್ತಾನೆ. ಅರ್ಜುನ ಹಾಗೂ ಕೃಷ್ಣರು ಜೊತೆಜೊತೆಯಾಗಿ ಶಿಬಿರಕ್ಕೆ ಬಂದು ಯುಧಿಷ್ಠಿರನು ಕಂಡಾಗ, ಪ್ರಾಯಶಃ ಅರ್ಜುನನು ಕರ್ಣನನ್ನು ಸಂಹರಿಸುವುದರ ಮೂಲಕ ಆತನನ್ನು ಸೋಲಿಸಿ ಪ್ರತೀಕಾರವನ್ನು ತೀರಿಸಿಕೊಂಡಿದ್ದಾನೆ ಎಂದೇ ಯುಧಿಷ್ಠಿರನು ಭಾವಿಸುತ್ತಾನೆ. ಅರ್ಜುನನು ಕರ್ಣನನ್ನು ಇನ್ನೂ ಸಂಹರಿಸಿಲ್ಲವೆಂದು ಯುಧಿಷ್ಠಿರನಿಗೆ ತಿಳಿದಾಗ ಅವನಂತೂ ತೀವ್ರವಾಗಿ ಸಿಡಿಮಿಡಿಗೊಂಡು ಅರ್ಜುನನನ್ನು ತರಾಟೆಗೆ ತೆಗೆದುಕೊಂಡು ಆತನನ್ನು ಅವನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತಹ ಶಬ್ದಗಳಿಂದ ನಿಂದಿಸತೊಡಗುತ್ತಾನೆ. ಅರ್ಜುನನ ಶಸ್ತ್ರಾಸ್ತ್ರಗಳನ್ನು, ಗಾಂಡೀವವನ್ನೂ ಬೇರೆ ಯಾರಿಗಾದರೂ ಒಪ್ಪಿಸಿಬಿಡುವಂತೆ ಅರ್ಜುನನಿಗೆ ಮೂದಲಿಸುತ್ತಾನೆ.

ಯುಧಿಷ್ಠಿರನ ಈ ಮಾತುಗಳನ್ನು ಆಲಿಸಿದ ಅರ್ಜುನನು ಕುಪಿತನಾಗಿ ತನ್ನ ಆಯುಧ (ಖಡ್ಗ) ವನ್ನು ಎತ್ತಿಕೊಂಡು ಯುಧಿಷ್ಠಿರನನ್ನೇ ಸಂಹರಿಸಲು ಮುಂದಾಗುತ್ತಾನೆ. "ಯಾರೇ ಆಗಲಿ, ಶಸ್ತ್ರಾಸ್ತ್ರಗಳನ್ನು ತ್ಯಾಗಮಾಡುವಂತೆ ನನ್ನನ್ನು ಅವಹೇಳನ ಮಾಡಿದಲ್ಲಿ ಅಂತಹವರ ಶಿರಚ್ಛೇದ ಮಾಡುವುದಾಗಿ ನಾನು ಶಪಥ ಮಾಡಿದ್ದೇನೆ" ಎಂದು ಕೃಷ್ಣನಲ್ಲಿ ಹೇಳುತ್ತಾನೆ.

ಅರ್ಜುನನ ಈ ಮಾತುಗಳನ್ನಾಲಿಸಿದ ಕೃಷ್ಣನು ಅರ್ಜುನನಿಗೆ ಧರ್ಮೋಪದೇಶವನ್ನು ಮಾಡುತ್ತಾ "ಎಲ್ಲಿಯವರೆಗೆ ವ್ಯಕ್ತಿಯೋರ್ವನಿಗೆ ಗೌರವವಿರುವುದೋ ಅಲ್ಲಿಯವರೆಗೆ ಮಾತ್ರವೇ ಆತನು ಜೀವಂತನಾಗಿರುತ್ತಾನೆ. ಆದ್ದರಿಂದ ನೀನೀಗ ಯುಧಿಷ್ಠಿರನನ್ನು ಅವಮಾನಿಸು. ಯುಧಿಷ್ಠಿರನನ್ನು ಗೌರವಪೂರ್ವಕವಾಗಿ ಸಂಬೋಧಿಸುವುದರ ಬದಲಾಗಿ, ಆತನು ನಿನ್ನ ಜ್ಯೇಷ್ಠ ಭ್ರಾತೃವಲ್ಲವೆಂಬ ರೀತಿಯಲ್ಲಿ ನೀನು ಆತನನ್ನು ಸಂಬೋಧಿಸು" ಎಂದು ಕೃಷ್ಣನು ಅರ್ಜುನನಿಗೆ ಸಲಹೆ ಮಾಡುತ್ತಾನೆ. ಏಕೆಂದರೆ, ಇದೊಂದು ರೀತಿಯಲ್ಲಿ ಧರ್ಮಬಾಹಿರ ನಡವಳಿಕೆಯಾಗಿದ್ದು ಇದರಿಂದ ಯುಧಿಷ್ಠಿರನು ತನ್ನ ಆತ್ಮಗೌರವವನ್ನು ಕಳೆದುಕೊಳ್ಳುವಂತಾಗುತ್ತದೆ. ಯುಧಿಷ್ಠಿರನ ಈ ತೇಜೋವಧೆಯು ಆತನನ್ನು ಸಂಹರಿಸಿದ್ದಕ್ಕೆ ಸಮಾನವಾಗಿರುತ್ತದೆ ಎಂದು ಕೃಷ್ಣನು ಅರ್ಜುನನಿಗೆ ತಿಳಿಸುತ್ತಾನೆ.

ಅರ್ಜುನನಿಗೆ ತನ್ನ ತಪ್ಪಿನ ಅರಿವಾದಾಗ, "ನಾನು ನನ್ನ ಅಣ್ಣನನ್ನು ಅವಮಾನಗೊಳಿಸಿದ್ದೇನೆ. ಅದಕ್ಕೆ ಶಿಕ್ಷೆಯ ರೂಪದಲ್ಲಿ ನಾನು ನನ್ನದೇ ಶಿರಚ್ಛೇದವನ್ನು ಮಾಡಿಕೊಳ್ಳುತ್ತೇನೆ" ಎಂಬುದಾಗಿ ಹೇಳುತ್ತಾನೆ. ಅದಕ್ಕೆ ಕೃಷ್ಣನು "ನಿನ್ನನ್ನು ನೀನು ಅತಿಯಾಗಿ ಹೊಗಳಿಕೋ. ಆತ್ಮಸ್ತುತಿಯು ಆತ್ಮಹತ್ಯೆಗೆ ಸಮಾನವಾದುದು" ಎಂಬುದಾಗಿ ಕೃಷ್ಣನು ಹೇಳುತ್ತಾನೆ.

ಅರ್ಜುನನು ಎಡೆಬಿಡದೇ ತನ್ನನ್ನು ತಾನೇ ತೀವ್ರವಾಗಿ ಹೊಗಳಿಕೊಳ್ಳುತ್ತಾ ತನ್ನ ಕೈಯಲ್ಲಿ ಹಿಡಿದಿದ್ದ ಶಸ್ತ್ರವನ್ನು ಬಿಸಾಡುತ್ತಾನೆ. ಆ ಬಳಿಕ ಅರ್ಜುನನು ಯುಧಿಷ್ಠಿರನ ಚರಣಗಳಲ್ಲಿ ತನ್ನ ಶಿರವನ್ನಿರಿಸಿ, ತನ್ನನ್ನು ಕ್ಷಮಿಸುವಂತೆ ಪ್ರಾರ್ಥಿಸಿಕೊಳ್ಳುತ್ತಾನೆ. ತದನಂತರ ಅರ್ಜುನನು ಸೂರ್ಯಾಸ್ತದೊಳಗೆ ಕರ್ಣನನ್ನು ಕೊಲ್ಲುತ್ತೇನೆ ಎಂದು ಪ್ರತಿಜ್ಞೆ ಮಾಡಿ ಯುದ್ಧಭೂಮಿಗೆ ತೆರಳಲು ಸಿದ್ಧನಾಗುತ್ತಾನೆ. ಇದು ಗಾಂಡೀವ ನಿಂದನೆ ಪ್ರಸಂಗದ ಕಥಾ ಸಾರ.

ವರ್ತಮಾನ ದಲ್ಲಿ ಯಕ್ಷಲೋಕದ ಮಾತಿನ ಮಾಂತ್ರಿಕ, ಯಕ್ಷಗಾನದ ಎನ್‌ಸೈಕ್ಲೋಪಿಡಿಯ, ಯಕ್ಷಗಾನ ರಂಗದ ಭೀಷ್ಮ, ವಸ್ತು ನಿಷ್ಠ ವಿಮರ್ಶಕ, ಲೇಖಕ, ಭಾಷಣಕಾರ, ಖ್ಯಾತ ಅರ್ಥದಾರಿ, ಡಾ .ಎಂ.ಪ್ರಭಾಕರ ಜೋಶಿಯವರದ್ದು ಕೇಳುಗರನ್ನು ಹಿಡಿದಿಟ್ಟುಕೊಳ್ಳಬಲ್ಲ ನಿರ್ವಹಣೆ. ಅರ್ಜುನನಾಗಿ ಜೋಷಿಯವರು ಕ್ಲಾಸ್ & ಮಾಸ್. ಸಮಯ ಹೋದದ್ದೇ ತಿಳಿಯಲಿಲ್ಲ!

"ಧರ್ಮದ ಮೂರ್ತ ಸ್ವರೂಪನಾದ ಧರ್ಮರಾಯನನ್ನು ಅವಮಾನಿಸಿ, ಕಥೆಯ ಪ್ರಸಂಗದ ಆಶಯದಂತೆ ಪ್ರಸ್ತುತ ಪಡಿಸುವುದು ಅರ್ಥದಾರಿಗೆ ಸವಾಲು. ಯಾಕೆಂದರೆ ಬಳಸುವ ಭಾಷೆ, ವಿಷಯ, ಅತ್ಯಂತ ಸಭ್ಯವಾಗಿರಬೇಕು. ಅದಕ್ಕೊಂದು ಸಕಾರಣ ಅಧಾರವನ್ನು ಹೇಳುತ್ತಾ ಪುಷ್ಟೀಕರಿಸಬೇಕು. ಕೇಳುವುದಕ್ಕೆ ರಂಜನೆಯಾದರೂ ಅದರ ಹಿಂದಿರುವ ಭಾವವೂ ಪ್ರಸ್ತುತಿಯಾಗಬೇಕು. ಈ ನಿಟ್ಟಿನಲ್ಲಿ ಜೋಷಿಯವರ ನಿರ್ವಹಣೆ ಉತ್ಕೃಷ್ಟ.

ಸರ್ಪಂಗಳ ಈಶ್ವರ ಭಟ್ಟರ ಕೃಷ್ಣ, ಸಂಭಾಷಣೆ ಕಟ್ಟಿದ ಪರಿ, ಅರ್ಜುನನನ್ನು‌ ಪ್ರೇರೇಪಿಸುವ ಕ್ರಮ, ಪರಸ್ಪರ ಸಂಭಾಷಣೆ... ಒಂದಕ್ಕೊಂದು ಪೂರಕವಾಗಿ ಮೂಡಿ ಬಂತು. ಪಾತ್ರೋಚಿತವಾಗಿ ಎಮ್.ಎಲ್.ಸಾಮಗರ ಧರ್ಮರಾಯ ಅಚ್ಚುಕಟ್ಟಾಗಿ ಮೂಡಿ ಬಂತು. ಮೂವರೂ ಅನುಭವಿ ಅರ್ಥದಾರಿಗಳ ಅನುಭವ ಪ್ರಸ್ತುತಿಯಲ್ಲಿ ವ್ಯಕ್ತವಾಗಿ ಮೂಡಿ ಬಂತು. ಪೂರಕ ಹಿಮ್ಮೇಳವೂ ಚೆನ್ನಾಗಿತ್ತು. ಹಿಮ್ಮೇಳದಲ್ಲಿ ತೆಂಕು ಬಡಗಿನ ಸವ್ಯಸಾಚಿ ಸತ್ಯನಾರಾಯಣ ಪುಣಿಚಿತ್ತಾಯ ಭಾಗವತರಾಗಿ, ಪಡ್ರೆ ಶ್ರೀಧರ ಮತ್ತು ಪಡ್ರೆ ಆನಂದರು ಚೆಂಡೆ ಮದ್ದಳೆಯಲ್ಲಿ ಸಹಕರಿಸಿದರು.

5ನೆಯ ದಿನದ ತಾಳಮದ್ದಳೆ ಮಾಗಧ ವಧೆ. 30-07-2021
"ಆ ಶಬ್ದಕಿಳೆಯದುರಲಿತ್ತ ನಡುವಿರಳಂ ಮಗ I ಧೇಶ ಕೈಗೊಂಡು ಯಾಗದಲಿII 
 ಭೂಸುರಾರ್ಚನೆಗಳಲಿ ದಾನಗಳ ಕೊಡುವೆಡೆಯೂ I ಳೀ ಶಬ್ದ ಕೇಳಿ ಬೆರಗಿನಲಿII

"ಹಾಂ ಏನು ಶಬ್ದವದು, ಭೂಗರ್ಭವೇ ಇಬ್ಭಾಗವಾಯಿತೋ, ಅಲ್ಲ ಅಲ್ಲ ಭೂಕಂಪನವೇ...?" ಪ್ರೇಕ್ಷಕರ ಕೇಳುಗರ ಎದೆಯನ್ನೇ ನಡುಗಿಸಿದ, ರೋಮಾಂಚನಗೊಳಿಸಿದ, ಧಿಗ್ಭ್ರಮೆಗೊಳಿಸಿದ, ಕುತೂಹಲಗೊಳಿಸಿದ ಮಾಗಧ ಎಂದಾಗ ನೆನಪಾಗುವುದು ಕೀರ್ತಿಶೇಷ ಶೇಣಿ ಗೋಪಾಲಕೃಷ್ಣ ಭಟ್ಟರನ್ನು. ಮಾಗಧನ ಪಾತ್ರವನ್ನು ಅವರು ಕಡೆದು ನಿಲ್ಲಿಸಿದ ರೀತಿಯೇ ಹಾಗೆ. ಪಾತ್ರವೊಂದು ಅವರ ಹೆಸರಿನೊಂದಿಗೆ ತಳಕು ಹಾಕಿಬಿಟ್ಟಿತು. ಯಕ್ಷಗಾನಕ್ಕೊಬ್ಬನೇ ಮಾಗಧ! ಅದು ಶೇಣಿ!

ಹಾಗಾಗಿಯೇ ಮುಂದಿನ ಪೀಳಿಗೆಯ ಅರ್ಥದಾರಿಗಳ ಅರ್ಥಗಳಲ್ಲಿ ಅವರ ಛಾಯೆ ಕಾಣದೆ ಇರದು. ಆ ನಡೆಯಲ್ಲಿ, ನುಡಿಯಲ್ಲಿ, ಮಟ್ಟಿನಲ್ಲಿ, ಶೇಣಿ ಛಾಯೆ ನಿರಂತರ. ಇದು ಅರ್ಥಧಾರಿಯ ಶಕ್ತಿಯೂ ಹೌದು ಪ್ರಸಂಗದ ಶಕ್ತಿಯೂ ಹೌದು. ಆ ಕಾರಣದಿಂದಲೇ ಇಂದಿಗೂ ಮಾಗಧನ‌ ಪಾತ್ರ ನಿರ್ವಹಿಸುವುದು ಅರ್ಥದಾರಿಗೊಂದು ಸವಾಲು.

ರಾಜಸೂಯಾಧ್ವರದ ಭಾಗ ಮಾಗಧ ವಧೆ 5ನೇ ದಿನದ ತಾಳಮದ್ದಳೆಯ ಪ್ರಸಂಗ. ಬೃಹದ್ರಥನಿಗೆ ಕಲಾವತಿ ಮತ್ತು ಭಾನುಮತಿಯರೆಂಬ ರಾಣಿಯರಲ್ಲಿ ಮಕ್ಕಳಿಲ್ಲದ ಕಾಲಕ್ಕೆ ರಾಜನು ಬೇಸರದಿಂದ ಕಾಡಿಗೆ ಹೋಗಲು, ಚಂಡಕೌಶಿಕರಿಂದ ಈಶ್ವರಾನುಗ್ರಹ ರೂಪವಾಗಿ ಸಿಕ್ಕಿದ ಹಣ್ಣನ್ನು ಎರಡು ಭಾಗ ಮಾಡಿ ರಾಣಿಯರಿಗೆ ಕೊಡುತ್ತಾನೆ. ಪರಿಣಾಮವಾಗಿ ಭಾಗವಾಗಿ ಹುಟ್ಟಿದ ಮಗುವನ್ನು ರಾಜನು ಅರಮನೆಯ ಹೊರವಲಯದಲ್ಲಿ ಎಸೆಯುತ್ತಾನೆ. ರಾತ್ರಿ ಸಂಚಾರ ಮಾಡುತ್ತಾ ಬಂದ ಜರೆಯೆನೆಂಬ ರಾಕ್ಷಸಿಯಿಂದ ಜೋಡಿಸಲ್ಪಟ್ಟ ಈ ಮಗು ಜೀವ ಪಡೆಯುತ್ತದೆ ಹಾಗೂ ರಾಜನಿಗೆ ಮಗುವನ್ನು ಹಸ್ತಾಂತರಿಸಿ ತನ್ನ ಹೆಸರನ್ನೇ ಇಡುವಂತೆ ಕೇಳಿಕೊಳ್ಳುತ್ತಾಳೆ. ಹಾಗಾಗಿಯೇ ಜರಾಸಂಧನೆಂದು ನಾಮಾಂಕಿತವಾಗುತ್ತದೆ. ಮುಂದೆ ಬಹು ಪರಾಕ್ರಮಿಯಾದ ಜರಾಸಂಧನು ರಾಜರುಗಳನ್ನೆಲ್ಲಾ ಸೋಲಿಸಿ ತನ್ನ ಸೆರೆಮನೆಯಲ್ಲಿಡುತ್ತಾನೆ. ಮುಂದೆ ಇವರ ಬಿಡುಗಡೆಗಾಗಿ ಕೃಷ್ಣ ಸಂಕಲ್ಪದಂತೆ ಭೀಮಾರ್ಜುನರೊಡಗೂಡಿ ಮಗಧಕ್ಕೆ ಬಂದು ಮಾಗಧನನ್ನು ವಧಿಸುವುದು ಕಥಾ ವಸ್ತು.


ಪ್ರಸಂಗದ ಸಾಧಾರಣ‌ ಸಿದ್ಧ ನಡೆಗಿಂತ ಭಿನ್ನವಾಗಿ ಅತ್ಯಾಕರ್ಷಕವಾಗಿ, 30-07-21ರ ಮಾಗಧ ವಧೆ ಪ್ರಸ್ತುತಗೊಂಡಿತು. ಯಾವುದೇ ಪಾತ್ರವನ್ನು ಪ್ರಸಂಗಾಶಯದಂತೆ ಕಡೆದು ನಿಲ್ಲಿಸಬಲ್ಲ, ಹೊಸದೃಷ್ಟಿಕೋನದೊಂದಿಗೆ, ಪಾತ್ರ ಚಿಂತನೆಯೊಂದಿಗೆ ಪಾತ್ರ ಪೋಷಣೆ ಮಾಡಬಲ್ಲ, ವರ್ತಮಾನದಲ್ಲಿ ಯಕ್ಷಲೋಕದ ಮಾತಿನ ಮಾಂತ್ರಿಕ, ಯಕ್ಷಗಾನದ ಎನ್‌ಸೈಕ್ಲೋಪಿಡಿಯ, ಯಕ್ಷಗಾನ ರಂಗದ ಭೀಷ್ಮ,, ವಸ್ತು ನಿಷ್ಠ ವಿಮರ್ಶಕ, ಲೇಖಕ, ಭಾಷಣಕಾರ, ಖ್ಯಾತ ಅರ್ಥದಾರಿ ಡಾ .ಎಂ.ಪ್ರಭಾಕರ ಜೋಶಿಯವರು ಮಾಗಧನಾಗಿ ಸಮರ್ಥ ನಿರ್ವಹಣ ತೋರಿದರು. ಪಾತ್ರಕ್ಕನುಗುಣವಾಗಿ ಶಾಸ್ತ್ರೀಯ, ಪೌರಾಣಿಕ ಆಧಾರದೊಂದಿಗೆ ಪಾತ್ರವನ್ನು ಕಟ್ಟಿಕೊಡಬಲ್ಲ, ಜನ ಮನ್ನಣೆಯ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ಟರು ಕೃಷ್ಣನಾಗಿಯೂ, ವಿನಯ ಆಚಾರ್ ಭೀಮನಾಗಿಯೂ ಕಾಣಿಸಿಕೊಂಡರು. ಮಾಗಧ ಮತ್ತು‌ ಕೃಷ್ಣ ಸಂವಾದ ಚೇತೋಹಾರಿಯಾಗಿತ್ತು.

ಮಗಧ ಪ್ರವೇಶಕ್ಕೆ ಮತ್ತು ಪ್ರವೇಶದ ರೀತಿಯ ಬಗ್ಗೆ ಕೃಷ್ಣನಾಗಿ ಹಿರಣ್ಯರ ಅರ್ಥಗಾರಿಕೆ ಕ್ಲಾಸಿಕ್ ಆಗಿತ್ತು. ಮಾಗಧನಾಗಿ ಕೃಷ್ಣನನ್ನು ವಿಚಾರಿಸುವ ಕ್ರಮ, ಶೈಲಿ, ವಿಷಯದ ವಿಸ್ತರಣೆ ಜೋಷಿಯವರದ್ದು ಸಿಗ್ನೇಚರ್ ಸ್ಟೈಲ್. ಅದು ಅವರ ಸಿದ್ಧಿ. ಯಜ್ಞದ ಬಗ್ಗೆ, ಯಾಗದ ಬಗ್ಗೆ, ನರಮೇಧದ ಬಗ್ಗೆ ಪರಸ್ಪರ ಮಂಡನೆ, ಖಂಡನೆ, ಸಂವಾದ ಸಮಯದ ಮಿತಿಯಲ್ಲಿ ಹೃಸ್ವವಾಯಿತೆಂದು ಕೇಳುಗನಾಗಿ‌ ಅನಿಸಿದ್ದು ಸತ್ಯ.

ಒಟ್ಟಂದದಲ್ಲಿ ವೇದ ವಿದ್ವಾಂಸರಾದ ಜ್ಞಾನದ ಖನಿ, ಹಿರಣ್ಯರ ಕೃಷ್ಣ ಮತ್ತು ಯಾವುದೇ ವಿಷಯದ ಬಗ್ಗೆ ಅಪಾರ ತಿಳಿವಳಿಕೆಯುಳ್ಳ ಬಹುಶ್ರುತ ವಿದ್ವಾಂಸ ಜೋಷಿಯವರ ಮಾಗಧ ಬಹುಕಾಲ‌ ನೆನಪಿನಲ್ಲಿ ಉಳಿಯುವಂತಹದ್ದು. ವಿನಯ ಆಚಾರ್ ಭೀಮನ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದರು. ನುರಿತ ಹಿಮ್ಮೇಳ‌ ಚೆನ್ನಾಗಿತ್ತು. ಹಿಮ್ಮೇಳದಲ್ಲಿ ಅನುಭವಿ ಹಿರಿಯ ಪುತ್ತಿಗೆ ರಘುರಾಮ ಹೊಳ್ಳರು ಭಾಗವತರಾಗಿ, ಪಡ್ರೆ ಶ್ರೀಧರ ಮತ್ತು ವಧ್ವ ರಾಮಪ್ರಸಾದರು ಚೆಂಡೆ ಮದ್ದಳೆಯಲ್ಲಿ ಸಹಕರಿಸಿದರು.

6ನೆಯ ದಿನದ ತಾಳಮದ್ದಳೆ ಅತಿಕಾಯ ಮೋಕ್ಷ (31-07-2021).
"ಇರಿತಕಂಬರವಳುಕುವುದೆ ನೊರ 
ಜುರಿಬಿಡದಗ್ನಿಗೆ ನೋವುತಾಗುವುದೇ॥
ಇರುವೆ ಕಚ್ಚಿದರೆ ಬೆಚ್ಚುವುದೇ ಸುರ 
ಗಿರಿಯು ನಿನ್ನಧಟು ರಾಘವನೊಳೊಪ್ಪುವುದೇ॥"

ಅತಿಕಾಯನ ಘನ ವ್ಯಕ್ತಿತ್ವವನ್ನು ಆಕರ್ಷಕ ಶಬ್ದದಲ್ಲಿ ಕಟ್ಟಿಕೊಡುವುದು ಅನನ್ಯ. ಹಟ್ಟಿಯಂಗಡಿ ರಾಮಭಟ್ಟರ ಈ ಕೃತಿ ತಾಳೆಮದ್ದಳೆಯಲ್ಲೂ ಬಹುಪ್ರಸಿದ್ಧವಾಗಿದೆ. ಈ ಪ್ರಸಂಗದ ಪದ್ಯಗಳು ಸರಳ ಮತ್ತು ಸುಮಧುರ. ಅತ್ಯಂತ ಕ್ಲಿಷ್ಟ ಆಧ್ಯಾತ್ಮಿಕ ವಿಷಯವನ್ನೂ ಬಹಳ ಸರಳತೆಯಿಂದ ಪ್ರಸ್ತುತಪಡಿಸಿದ ವಿಶಿಷ್ಟವಾದ ಕವಿತ್ವ ಹಟ್ಟಿಯಂಗಡಿ ರಾಮಭಟ್ಟರದ್ದು.

ಏತಕೆ ಮರುಳಾದೆ ತಾತ ರಘು
ನಾಥನೊಳ್ ಕಲಹವೆ ಲೋಕವಿಖ್ಯಾತ॥
ಸಕಲ ಲೋಕೈಕ ನಾಯಕನು ಸರ್ವಾ
ತ್ಮಕನು ಸರ್ವರ ರಕ್ಷಿಸುವ ದೈವನವನು॥
ಮುಕುತಿದಾಯಕನು ಶಾಶ್ವತನು ನಿನ್ನ
ಯುಕುತಿ ನಡೆಯದಾದಿ ವಸ್ತು ರಾಘವನು॥
ಕಡುಗಲಿ ಖರನೆಲ್ಲಿ ಪೋದ ಹಿಂದೆ
ಅಡವಿಯೊಳ್ ವೀರಾಧಿವೀರನೇನಾದ॥
ಬಿಡದೆ ಯೋಚಿಸಿ ನೀನು ನೋಡು ಜಗ
ದೊಡೆಯ ರಾಮನ ಕೆಣಕಲು ಬಂತು ಕೇಡು॥

ಹೀಗೆಯೇ 
ಬನ್ನಿರೈ ಸಂಸಾರ ಶರಧಿಯನು ದಾಟುವರು
ಬನ್ನಿರೈ ಮೋಕ್ಷಕಾಂಕ್ಷಿಗಳು॥
ಬನ್ನಿರೈ ಬಹಳ ಪದವಿಯನು ಬಯಸುವ ಸುಭಟ
ರೆನ್ನೊಡನೆ ನೀವೆನುತ ಕರೆದ॥

"ನೀವು ಜಗದಧಿದೈವವೆಂಬುದ ನಾವು ಬಲ್ಲೆವು ನಮ್ಮ ಕುಲದ ಸ್ವ 
ಭಾವವನು ನಾವ್ ಬಿಡಲು ಬಹುದೇ ಪೂರ್ವಪದ್ಧತಿಯ॥

ಹೀಗೆ ಅತ್ಯದ್ಭುತ ಪದ್ಯಗಳನ್ನು ಹೊಂದಿದ, ಸಾಕಷ್ಟು ಭಾವುಕತೆಗೆ ಮತ್ತು ಬೌದ್ಧಿಕ ಚಿಂತನೆಗೆ ಅವಕಾಶವೀಯುವ "ಅತಿಕಾಯ ಮೋಕ್ಷ" 31 -07 -2021ರ ತಾಳಮದ್ದಳೆಗೆ ಆಯ್ದುಕೊಂಡ ಕಥಾ ಭಾಗ.
 
ರಾವಣ ಮತ್ತು ಧಾನ್ಯಮಾಲಿನಿಯ ಪುತ್ರ ಅತಿಕಾಯ. ಧಾರ್ಮಿಕ ಪ್ರವೃತ್ತಿ ಮತ್ತು ಧರ್ಮ ಪರಾಯಣತೆ ಅತಿಕಾಯನಲ್ಲಿ ಹೃದ್ಗತವಾಗಿಯೇ ಬಂದದ್ದು. ಸೂಕ್ಷ್ಮ ಮನಸ್ಸಿನ ಅತಿಕಾಯನಿಗೆ ಅವನ ಮಾನಸಿಕ ವ್ಯಕ್ತಿತ್ವದ ಅತೀತವಾಗಿ ಅವನ ದೇಹದಾರ್ಢ್ಯವನ್ನು ನೋಡಿಯೇ ಅತಿಕಾಯನೆಂದು ಹೆಸರಿಟ್ಟಿರಬೇಕು.

ಅತಿಕಾಯನ ಪಾತ್ರ ಸಂಕೀರ್ಣವಾದದ್ದು. ಮಗನಾಗಿ ತಂದೆಗೆ, ತನ್ನಣ್ಣ ಹತನಾದಾಗ ಸಮಾಧಾನವನ್ನು ಹೇಳಿ, ಮುಂಬರುವ ಅಪಾಯವನ್ನು ಮನಗಾಣಿಸಿ, ರಾಮನ ನಡೆಯ ಬಗ್ಗೆ, ವ್ಯಕಿತ್ವದ ಬಗ್ಗೆ ತಿಳಿಹೇಳಿ ಸಾಧ್ಯವಾದರೆ ಸೀತೆಯನ್ನು ಒಪ್ಪಿಸಿ ಎಲ್ಲವನ್ನೂ ಸುಖಾಂತಗೊಳಿಸುವ ಅನಿಸಿಕೆಯನ್ನು ಅಪ್ಪನ ಮುಂದೆ ಮಂಡಿಸಬೇಕಾದ ಅನಿವಾರ್ಯತೆ. ಅಪ್ಪನ ನುಡಿಯನ್ನು ಉಲ್ಲಂಘಿಸುವುದು ಪಿತೃದ್ರೋಹ ಮತ್ತು ರಾಜನಾಗಿರುವ ಕಾರಣ ರಾಜದ್ರೋಹವೂ ಆಗುತ್ತದೆ. ಈ ದ್ವಂದ್ವವನ್ನು ನಿಭಾಯಿಸುತ್ತಾ ಪಾತ್ರವನ್ನು ಪ್ರಸ್ತುತಪಡಿಸಬೇಕಾಗಿದೆ. ಚಿಕ್ಕಪ್ಪ ವಿಭೀಷಣನ ಹಾದಿ ಅತಿಕಾಯನಿಗೆ ಸಹ್ಯವಾದುದಲ್ಲ ಎಂಬುದಕ್ಕೆ ಕಾರಣವನ್ನು ಕೊಡಬೇಕು. ರಾವಣ ಪಕ್ಷದಲ್ಲಿ ಅತಿಕಾಯನಂತಹಾ ಸಜ್ಜನರಿದ್ದಾರೆ, ಅವರ ನಂಬಿಕೆಗಳಿಗೆ ಮೂರ್ತರೂಪನಾಗಿ ಅತಿಕಾಯ ಪಾತ್ರದ ಚಿತ್ರಣ ಕೊಡಬೇಕು. ಅತ್ಯಂತ ಗಂಭೀರವಾಗಿ ರಾವಣ ಅತಿಕಾಯರ ಪಾತ್ರವನ್ನು ಪ್ರಸ್ತುತಿ ಮಾಡಬೇಕಾದ ಸವಾಲು ಅರ್ಥದಾರಿಗಳಿರುತ್ತದೆ.

ಪಾತ್ರದ ಅಂತರಂಗವನ್ನರಿತು, ಪ್ರಸಂಗಾಶಯದಂತೆ, ಪಾತ್ರವನ್ನು ಪ್ರಸ್ತುತಪಡಿಸಬಲ್ಲ ಪ್ರಬುದ್ಧ ಅರ್ಥದಾರಿ, ಸಂಘಟಕ, ಪ್ರವಚನಕಾರ ಉಜಿರೆ ಅಶೋಕ ಭಟ್ಟರು ಅತಿಕಾಯನಾಗಿಯೂ, ಶೇಣಿ ಮನೆತನದ ಕುಡಿ, ಶೇಣಿ ವೇಣುಗೋಪಾಲ ಭಟ್ಟರು ರಾವಣನಾಗಿಯೂ, ಒಳ್ಳೆಯ ಮಾತುಗಾರ ಡಾ.ಗಾಳಿಮನೆ ವಿನಾಯಕ ಭಟ್ಟರು ಲಕ್ಷ್ಮಣನಾಗಿಯೂ, ರಾಜೇಂದ್ರ ಕಲ್ಲೂರಾಯರು ರಾಮನಾಗಿಯೂ, ಶ್ರೀಶ ಪಂಜಿತ್ತಡ್ಕ ವಿಭೀಷಣನಾಗಿಯೂ ಕಾಣಿಸಿಕೊಂಡರು.

ಭಾವವನ್ನು ಭಾಷೆಯೊಂದಿಗೆ ಮಿಳಿತಗೊಳಿಸಿ, ಪಾತ್ರವನ್ನು ಕಥೆಯ ಆಶಯದೊಂದಿಗೆ ಸಮೀಕರಿಸಿ, ಜ್ಞಾನದ ಅನುಭವವನ್ನು ಮಾತಿನ ರೂಪದಲ್ಲಿ ಅನುಭವಿಸುತ್ತಾ ಕೇಳುಗರ ಚಿಂತನೆಯನ್ನು ಒರೆಗಲ್ಲಿಗೆ ಹಚ್ಚುವಂತೆ, ಕಥೆಯೊಳಗೆ ಪ್ರಸಂಗದೊಳಗೆ ಸೆಳೆಯುವ ಚಾಕಚಕ್ಯತೆ ಇಂದು ಅಶೋಕ‌ ಭಟ್ಟರ ಅರ್ಥದಲ್ಲಿ ಪ್ರಸ್ತುತಿಯಾಯಿತು.

ರಾಮನೆಂದರೆ ಯಾರು? ಎಂದು ಅನಾವರಣ ಮಾಡುತ್ತಾ, ಲೋಕ ರಾವಣನ ರಾಮ-ವಿರೋಧದ ಬದ್ಧತೆಗೆ, ಸಮಿಧೆಯಾಗುವ ಸಾತ್ವಿಕ ನಡೆಯ ಅತಿಕಾಯನ ಪಾತ್ರದ ಅನಾವರಣ ಚೆನ್ನಾಗಿ ಬಂತು. ಸಮಯದ ಮಿತಿಯಲ್ಲಿ ಸಾತ್ವಿಕ‌ ಸಂಘರ್ಷದ ಪಾತ್ರವನ್ನು ಜನಮಾನಸಕ್ಕೆ ಮುಟ್ಟುವಂತೆ ಪ್ರಸ್ತುತಪಡಿಸಿದ್ದು ಅಶೋಕ‌ಭಟ್ಟರ ಪ್ರಸಂಗಾನುಭವ ಮತ್ತು ಸಂಘಟನಾನುಭವವನ್ನು ಹೇಳುತ್ತದೆ.

ವೇಣುಗೋಪಾಲ ಶೇಣಿಯವರ ಗಮನ ಸೆಳೆಯುವ ರಾವಣ, ಆ ಅಧಟು, ಮಾತಿನಲ್ಲಿ ವ್ಯಕ್ತವಾಯಿತು. ರಾಮನಲ್ಲೇಕೆ ವಿರೋಧ ಎಂಬುದರ ಸ್ಪಷ್ಟನೆ ಚೆನ್ನಾಗಿ ಬಂತು. ಅತಿಕಾಯ ಮತ್ತು ರಾವಣ‌ ಈ ಅಪ್ಪ ಮಕ್ಕಳ‌ ಪರಸ್ಪರ ಸಾತ್ವಿಕ‌ ವಿರೋಧದ ಸಂಭಾಷಣ ಕ್ರಮ ಚೆನ್ನಾಗಿತ್ತಾದರೂ ರಾವಣ ಪ್ರತಿಪಾದನೆ ಇನ್ನೂ ಒಂದಿಷ್ಟು ವಿಸ್ಮೃತವಾಗಿಯೂ ಇರುತ್ತಿದ್ದರೆ ಚೆನ್ನಾಗಿತ್ತು ಎಂದೆನಿಸಿತು.

ಪಾತ್ರವರಿತು ಮಾತನಾಡಿದ ಗಾಳಿಮನೆಯವರ ಲಕ್ಷ್ಮಣ ಮತ್ತು ಉಜಿರೆಯವರ ಅತಿಕಾಯ ಸಂಭಾಷಣೆ ಪರಿಣಾಮಕಾರಿಯಾಗಿತ್ತು. ಅತಿಕಾಯನ ಆತ್ಮನಿವೇದನೆ ಕೇಳುಗರನ್ನೂ ಭಾವುಕರನ್ನಾಗಿ ಮಾಡಿತು. ಇತರ ಮುಮ್ಮೇಳದ ಕಲಾವಿದರು ಸಮಯ ಮಿತಿಯ ಪ್ರದರ್ಶನದ ಯಶಸ್ಸಿಗೆ ತಮ್ಮ ಕೊಡುಗೆಯನ್ನು ನೀಡಿದರು.

ಶ್ರವಣಸುಖವಾದ ಹಿಮ್ಮೇಳವಿತ್ತು. ಕಾವ್ಯಶ್ರೀಯವರ ಅನುಭವಿಸಿ ಹಾಡಿದ ಭಾಗವತಿಕೆ, ಸೀತಾರಾಮ ತೋಳ್ಪಡಿತ್ತಾಯ, ಜನಾರ್ದನ ತೋಳ್ಪಡಿತ್ತಾಯ, ಶ್ರೀಪತಿ ನಾಯಕ್ ಅಜೇರು ಹಿಮ್ಮೇಳದಲ್ಲಿ ಸಹಕರಿಸಿದರು. ಇಡೀ ರಾತ್ರೆಯ ತಾಳಮದ್ದಳೆಯ‌ ಪ್ರಸಂಗವನ್ನು 3 ತಾಸಿಗೆ ಅಳವಡಿಸುವ ಪ್ರಯತ್ನ ಮಾಡಿದರೂ ಸ್ವಲ್ಪ ಸಮಯ ಮೀರಿದ್ದು ಸತ್ಯ‌.

7ನೆಯ ದಿನ ಕುರಿಯ ಪ್ರಶಸ್ತಿ ಮತ್ತು ಗಂಗಾವತರಣ ತಾಳಮದ್ದಳೆ (01-08-2021)
ಪ್ರಶಸ್ತಿಯ ಮೌಲ್ಯ ಅಧಿಕವಾಗುವುದು ಸಲ್ಲಬೇಕಾದವರಿಗೆ, ಸಲ್ಲತಕ್ಕ ಸಮಯದಲ್ಲಿ ಸಂದಾಗ. ಈ ನಿಟ್ಟಿನಲ್ಲಿ ಈ ದಿನ ಕುರಿಯ ಪ್ರಶಸ್ತಿಯು ವಿದ್ವಾಂಸರಾದ ಹಿರಿಯರಾದ ಶ್ರೀ ಡಾ.ಶಾಂತಾರಾಮ‌ ಪ್ರಭು ನಿಟ್ಟೂರು ಇವರಿಗೆ ಸಂದಿತು. ಕಲಾಪ್ರಕಾರಕ್ಕೆ ಮೂರ್ತಸ್ವರೂಪನಾದ ದಕ್ಷಿಣಾಮೂರ್ತಿ ಗೋಪಾಲಕೃಷ್ಣದೇವರ ಸನ್ನಿಧಿಯಲ್ಲಿ ಕಲಾಶ್ರಯವನ್ನು ನೀಡುತ್ತಾ, ಪೋಷಿಸುತ್ತಾ ಬಂದ ಎಡನೀರು ಮಠದಲ್ಲಿ, ಬ್ರಹ್ಮೈಕ್ಯರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಆರಾಧನಾ ಸ್ಮೃತಿಯಾಗಿ, ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಪ್ರಥಮ‌ ಚಾತುರ್ಮಾಸ್ಯ ಗೌರವಾರ್ಪಣೆಯಾಗಿ, ಕುರಿಯ ಪ್ರತಿಷ್ಠಾನದವರು ಅರ್ಪಿಸುತ್ತಿರುವ ಯಕ್ಷಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು. ಈ ಪ್ರಕಾರವಾಗಿ ಕುರಿಯ ಪ್ರಶಸ್ತಿ ಇನ್ನಷ್ಟು ಮೌಲಿಕವಾಯಿತು.

ಗಂಗಾವತರಣ ತಾಳಮದ್ದಳೆ:
ಇಳಿದು ಬಾ ತಾಯಿ ಇಳಿದು ಬಾ
ಹರನ ಜಡೆಯಿಂದ
ಹರಿಯ ಅಡಿಯಿಂದ, 
ನುಸುಳಿ ಬಾ… ಈ ಹಾಡು ಕೇಳಿದಾಗಲೆಲ್ಲಾ ನೆನಪಾಗುವುದು ಭಗೀರಥನ ಕಥೆ. ಆಂಗ್ಲ ಭಾಷೆಯಲ್ಲಿ "ನೆವರ್ ಗಿವ್ ಅಪ್" ಎಂಬ ಮಾತೊಂದಿದೆ. ಅದಕ್ಕೆ ಮೂರ್ತರೂಪವೇ ಈ ಭಗೀರಥನ ಕಥೆ. 01-08-2021 ರಂದು ಸಪ್ತಾಹ ಸಮಾರೋಪದ ಪ್ರದರ್ಶನವಾಗಿ ಅಮೃತ ಸೋಮೇಶ್ವರರ "ಅಮರ ವಾಹಿನಿ" ಪ್ರಸಂಗದಿಂದಾಯ್ದ ಭಗೀರಥನ ಕಥಾ ಭಾಗ "ಗಂಗಾವತರಣ" ಪ್ರಸ್ತುತಗೊಂಡಿತು.

ಸೂರ್ಯ ವಂಶದ ಅಯೋಧ್ಯೆಯ ಸಗರ ಮಹಾರಾಜನಿಗೆ ಇಬ್ಬರು ಪತ್ನಿಯರು - ಕೇಶಿನಿ ಮತ್ತು ಸುಮತಿ. ಬಹಳ ಕಾಲ ಅವರಿಗೆ ಮಕ್ಕಳಾಗದೇ ಇದ್ದಾಗ, ಸಗರನ ತಪಸ್ಸಿಗೆ ಮೆಚ್ಚಿ ಭೃಗು ಮಹರ್ಷಿಗಳ ಕೃಪೆಯಿಂದ 'ಒಬ್ಬಳಿಗೆ ವಂಶೋದ್ಧಾರಕನಾದ ಒಬ್ಬ ಮಗನೂ, ಇನ್ನೊಬ್ಬಳಿಗೆ ಪರಾಕ್ರಮಶಾಲಿಗಳೂ, ಕೀರ್ತಿ ಪಡೆಯುವವರೂ ಆದ ಅರುವತ್ತು ಸಹಸ್ರ ಮಕ್ಕಳೂ ಹುಟ್ಟುತ್ತಾರೆ' ಎಂದು ಹರಸುತ್ತಾರೆ. ಮಹಾರಾಣಿಯರ ಬಯಕೆಯಂತೆ ಕೇಶಿನಿಗೆ ವಂಶೋದ್ಧಾರಕನಾದ ಒಬ್ಬ ಮಗ ಮತ್ತು ಸುಮತಿಗೆ 60 ಸಾವಿರ ಮಕ್ಕಳು ಹುಟ್ಟುತ್ತಾರೆ. ಕೇಶಿನಿಯ ಮಗನಿಗೆ ಅಸಮಂಜಸ ಎಂದು ಹೆಸರು, ಅಸಮಂಜಸನ ಮಗನೇ ಅಂಶುಮಂತ. ಅಂಶುಮಂತನ ಮಗ ದಿಲೀಪ, ದಿಲೀಪನಿಗೆ ವಸಿಷ್ಠನ ಕೃಪೆಯಿಂದ ನಂದಿನಿ ಧೇನುವಿನ ಪ್ರಸಾದದಿಂದ ಜನಿಸಿದವನೇ ಭಗೀರಥ.

ಸಗರನ ಅಶ್ವಮೇಧ ಯಾಗದ ಕುದುರೆ ಕಾಣೆಯಾದಾಗ ಅದನ್ನು ಹುಡುಕಿ ಹೋದ 60 ಸಾವಿರ ಮಕ್ಕಳು ಪಾತಾಳದಲ್ಲಿ ಮುನಿಯ ಕೋಪದಿಂದ ಸುಟ್ಟು ಭಸ್ಮವಾಗಿ ಸದ್ಗತಿಯಿಲ್ಲದೆ ಹೋಗುತ್ತಾರೆ. ಸ್ವರ್ಗದಿಂದ ಗಂಗೆಯೇ ಆ ಬೂದಿಯ ಮೇಲೆ ಹರಿದಾಗ ಮಾತ್ರ ಇವರಿಗೆ ಸದ್ಗತಿಯೆಂದು ತಿಳಿದು ಬರುತ್ತದೆ. ಬೇರಾರಿಂದಲೂ ಈ ಕೆಲಸ ಆಗುವುದೇ ಇಲ್ಲ.

ಆಗ ಭಗೀರಥನು ದೇವಗಂಗೆಯನ್ನು ಭೂಲೋಕಕ್ಕೆ ಕರೆತಂದು ಹಿರಿಯರಿಗೆ ಸದ್ಗತಿ ಕೊಡುಸುವ ಸಂಕಲ್ಪ ಮಾಡುತ್ತಾನೆ. ಹೀಗೆ ಹಿಮಾಲಯಕ್ಕೆ ಹೋಗಿ ಘೋರ ತಪಸ್ಸಿನಿಂದ ಬ್ರಹ್ಮನನ್ನು ಮೆಚ್ಚಿಸಿ, ಗಂಗೆಯನ್ನು ಕಳಿಸಿಕೊಡಲು ಹೇಳುತ್ತಾನೆ. ಗಂಗೆಯ ರಭಸವನ್ನು ತಡೆಯಲು ಈಶ್ವರನನ್ನು ಪ್ರಾರ್ಥಿಸಿ ಮೆಚ್ಚಿಸಿ ಒಪ್ಪಿಸುತ್ತಾನೆ. ಹಾಗೆ ಶಿವನ ಜಟೆಯಲ್ಲಿಳಿದು ಗಂಗೆ ಶಾಂತವಾಗಿ ಭೂಮಿಗೆ ಬರುತ್ತಾಳೆ. ಹಾಗೆ ಬರುತ್ತಾ ಜಹ್ನು ಮಹರ್ಷಿಯ ಆಶ್ರಮದಲ್ಲಿ ತುಂಟಾಟ ಮಾಡಿದಾಗ ಮಹರ್ಷಿಯು ಗಂಗೆಯನ್ನು ಆಪೋಶನ ತೆಗೆದುಕೊಳ್ಳುತ್ತಾನೆ. ಪುನಃ ಭಗೀರಥನ ಪ್ರಾರ್ಥನೆಯಿಂದ ತನ್ನ ಕಿವಿಯ ಮೂಲಕ ಗಂಗೆಯನ್ನು ಹೊರ ಬಿಡುತ್ತಾನೆ. ಹಾಗಾಗಿಯೇ ಗಂಗೆ ಜಾಹ್ನವಿಯಾದಳು. ಅಲ್ಲಿಂದ ಹೊರಟು ಪಾತಾಳ ಲೋಕಕ್ಕೆ ಹೋಗಿ ಆ ಬೂದಿಯ ಮೇಲೆ ಹರಿಯುತ್ತಾಳೆ. ಇದರಿಂದಲಾಗಿ ಭಗೀರಥನ ಹಿರಿಯರಿಗೆ ಸದ್ಗತಿ ದೊರೆಯುತ್ತದೆ. ಎಷ್ಟೇ ಅಡೆತಡೆ ಬಂದರೂ ಅದನ್ನೆಲ್ಲಾ ಎದುರಿಸಿ ಸ್ವರ್ಗದಿಂದ ಗಂಗೆಯನ್ನು ಧರೆಗಿಳಿಸಿದ ಪ್ರಯತ್ನವೇ "ಭಗೀರಥ ಪ್ರಯತ್ನ" ಎಂದು ಲೋಕದಲ್ಲಿ ಸ್ಥಾಪಿತವಾಯಿತು. ಭಗೀರಥನ ಕಾರಣದಿಂದ ಗಂಗೆಯು ತ್ರಿಪಥೆಯಾಗಿ ಭಾಗೀರಥಿಯಾಗಿ ಲೋಕ ವಿಖ್ಯಾತಳಾದಳು, ಅಮರ ವಾಹಿನಿಯಾಗಿ ಹರಿದಳು.

ಮುಮ್ಮೇಳದಲ್ಲಿ ಉಜಿರೆ ಅಶೋಕ ಭಟ್ಟರು ಭಗೀರಥನಾಗಿ, ಡಾ. ಶಾಂತಾರಾಮ ಪ್ರಭು ನಿಟ್ಟೂರು ಗಂಗೆಯಾಗಿ, ಸಿಬಂತಿ ಪದ್ಮನಾಭ ಜಹ್ನು ಮಹರ್ಷಿಯಾಗಿ, ಶಶಾಂಕ ಅರ್ನಾಡಿ ಈಶ್ವರನಾಗಿ ಪಾತ್ರವನ್ನು ನಿರ್ವಹಿಸಿದರು.

ತಾಳಮದ್ದಳೆಗೆ ತೀರಾ ಅಪರೂಪದ ಪ್ರಸಂಗವೊಂದನ್ನು ರಂಗದ ಮೇಲೆ ಪ್ರದರ್ಶಿಸಿ ಯಶಸ್ವಿಯಾಗಿಸುವುದಕ್ಕೆ ಕಲಾವಿದರಿಗೆ ಗ್ರಾಮ್ಯ ಭಾಷೆಯಲ್ಲಿ ಹೇಳುವುದಾದರೆ ಒಂದು ಧಮ್ಮು ಬೇಕು. ಇಂತಹ ಪ್ರಸಂಗವನ್ನು ಆಯೋಜಿಸುವುದಕ್ಕೆ ಗಟ್ಟಿತನ ಬೇಕು. ಏಕತಾನತೆಯಿಂದ ಭಿನ್ನವಾಗಿ ಯೋಚಿಸುವ ಮನೋಸ್ಥಿತಿ ಮತ್ತು ಧೈರ್ಯ ಬೇಕು. ಇದೆಲ್ಲದರಲ್ಲೂ ಉಜಿರೆ ಅಶೋಕ ಭಟ್ಟರು ಯಶಸ್ವಿಯಾಗಿದ್ದಾರೆ.

ಭಗೀರಥನಾಗಿ ತನ್ನ ಹಿನ್ನೆಲೆಯನ್ನು, ಪಿತೃ ಋಣವನ್ನು ತೀರಿಸಿ, ತನ್ನ ಪಿತೃಗಳಿಗೆ ಸದ್ಗತಿಯನ್ನು ಕೊಡಿಸುವುದಕ್ಕೆ ಕಾರಣನಾಗುವ ಸಕಾರಣವನ್ನು ವಿಸ್ಮೃತವಾಗಿಯೂ, ಸರಳವಾಗಿಯೂ, ಸುಂದರವಾಗಿಯೂ ತನ್ನ ಪೀಠಿಕೆಯಲ್ಲಿಯೇ ಕಟ್ಟಿ ಕೊಟ್ಟರು ಅಶೋಕ ಭಟ್ಟರು. ಶಾಂತಾರಾಮ‌ ಪ್ರಭುಗಳ ಗಂಗೆಯ ಪ್ರಸ್ತುತಿಯೂ ಚೆನ್ನಾಗಿ ಮೂಡಿ ಬಂತು.

ಯುವ ಅರ್ಥದಾರಿ ಶಶಾಂಕರ ಶಿವನ ಅರ್ಥದಾರಿಕೆ ಒಳ್ಳೆಯ ಶ್ರುತಿಬದ್ಧ ಸ್ವರ, ಒಳ್ಳೆಯ ಸಂಭಾಷಣೆಯಿಂದ ಗಮನ‌ ಸೆಳೆಯಿತು. ಜಹ್ನು ಮಹರ್ಷಿಯಾಗಿ ಸಿಬಂತಿ ಪದ್ಮನಾಭರ ಪ್ರಸ್ತುತಿ ಪಾತ್ರದ ಮಿತಿಯಲ್ಲಿ ಚೆನ್ನಾಗಿ ಮೂಡಿ ಬಂತು. ಇಡೀ ಪ್ರಸಂಗದ ಕಥೆಯ ಓಘ ಎಲ್ಲಿಯೂ ಕೇಳುಗರನ್ನು ನಿರಾಶೆಗೊಳಿಸಲಿಲ್ಲ. ಇಡೀ ಪ್ರಸಂಗದಲ್ಲಿ ಉಜಿರೆ ಅಶೋಕ ಭಟ್ಟರು ತನ್ನ ಅಸ್ಖಲಿತ, ಸುಲಲಿತ ಅರ್ಥದಾರಿಕೆಯಿಂದ ಆವರಿಸಿಕೊಂಡುಬಿಟ್ಟರು.

ಹಿಮ್ಮೇಳದಲ್ಲಿ ಭಾಗವತರಾಗಿ ಅಮ್ಮಣ್ಣಾಯರು ಮತ್ತು ಧಾರೇಶ್ವರರು ಕ್ಲಾಸಿಕ್. ಧಾರೇಶ್ವರರು ತೆಂಕಿನ ಹಿಮ್ಮೇಳದಲ್ಲಿ ಹಾಡಿದ್ದು ವಿಶೇಷವೂ, ಸುಶ್ರಾವ್ಯವೂ ಆಗಿತ್ತು. ನಾದವನ್ನು ನುಡಿತವಾಗಿಸಬಲ್ಲ ಕೃಷ್ಣಪ್ರಕಾಶ ಉಳಿತ್ತಾಯರ ಮದ್ದಳೆ ಗಮನ ಸೆಳೆಯಿತು. ರಾಯಿ ಸತ್ಯಜಿತ್ ರಾವ್ ಚೆಂಡೆಯಲ್ಲಿ ಸಹಕರಿಸಿದರು. ಒಟ್ಟಿನಲ್ಲಿ ಸಮಾರೋಪವು ಸಮೃದ್ಧವಾಗಿ, ಸುಂದರವಾಗಿ ಸುಮಧುರವಾಗಿ ಸಂಪನ್ನಗೊಂಡಿತು.

ಅರ್ಹತೆಗೆ ಅಹಂಕಾರ ಪಡದೆ ಅನುಭವದಲ್ಲಿ ಅನುಮಾನಕ್ಕೀಡುಮಾಡದೆ ಸಂಘಟನಾರ್ಹತೆ ಬಗ್ಗೆ ಸಂದೇಹವಿಲ್ಲದ ಸ್ಪಷ್ಟ ನಿಲುವಿನ ಪ್ರಯತ್ನಕ್ಕೆ ಉಜಿರೆ ಅಶೋಕ ಭಟ್ಟರಿಗೆ ಅರ್ಹವಾಗಿಯೇ ಪ್ರಾಮಾಣಿಕವಾಗಿ ಅಭಿಮಾನದ ಅಭಿನಂದನೆಯು ಯಾವುದೇ ಪೂರ್ವಾಗ್ರಹವಿಲ್ಲದೆ ಕೇವಲ ಒಂದಿಬ್ಬರಿಂದಲ್ಲ, ಸರ್ವರಿಂದಲೂ ಸಲ್ಲಬೇಕು.

ಹೀಗೆ ಕಲಾಪ್ರಕಾರಕ್ಕೆ ಮೂರ್ತಸ್ವರೂಪನಾದ ದಕ್ಷಿಣಾಮೂರ್ತಿ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಕಲಾಶ್ರಯವನ್ನು ನೀಡುತ್ತಾ, ಪೋಷಿಸುತ್ತಾ ಬಂದ ಎಡನೀರು ಮಠದಲ್ಲಿ, ಬ್ರಹ್ಮೈಕ್ಯರಾದ ಶ್ರೀ ಶ್ರೀ ಕೇಶವಾನಂದ ಭಾರತೀ ಆರಾಧನಾ ಸ್ಮೃತಿಯಾಗಿ, ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಪ್ರಥಮ‌ ಚಾತುರ್ಮಾಸ್ಯ ಗೌರವಾರ್ಪಣೆಯಾಗಿ, ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಹೆಸರಿನಲ್ಲಿ ಸಂಕಲ್ಪಿತ ಯಕ್ಷಗಾನ ಸಪ್ತಾಹ ಸಮರ್ಪಿತಗೊಂಡಿತು.

✍ ಅವಲೋಕನ: ಕುಮಾರ ಸುಬ್ರಹ್ಮಣ್ಯ ಮುಳಿಯಾಲ

"ತೃಪ್ತಿ" ಹಿಂದಾರು ಮನೆ
ಅಂಚೆ ಮತ್ತು ತಾಲೂಕು: ಮುಂಡೂರು
ಪುತ್ತೂರು, (ದ.ಕ.) 574202
ಚರವಾಣಿ:9632820915.
ಮಿಚಂಚೆ: muliyala@gmail.com
(ಲೇಖಕರು ಕಾಸರಗೋಡು ಜಿಲ್ಲೆ ಮಂಜೇಶ್ವರ ತಾಲೂಕು ಎಣ್ಮಕಜೆ ಗ್ರಾಮದ ಮುಳಿಯಾಲ ನಾರಾಯಣ ಭಟ್ಟರ ಹಿರಿಯ ಮಗನಾಗಿದ್ದು, ದ.ಕ.ಜಿಲ್ಲೆಯ ಪುತ್ತೂರಿನ ಮುಂಡೂರು ಗ್ರಾಮದ ಹಿಂದಾರು ಎಂಬಲ್ಲಿನ ನಿವಾಸಿ. ಪ್ರಸ್ತುತ ಬೆಂಗಳೂರಿನಲ್ಲಿ Biocrross Chem LLP ಎಂಬ ಅಲೋಪತಿ ಔಷಧ ಕಂಪೆನಿಯೊಂದರಲ್ಲಿ ನಿರ್ದೇಶಕರಾಗಿದ್ದಾರೆ.)

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು