ಮಂಗಳೂರು: ಯಕ್ಷಗಾನದಲ್ಲಿ ಸ್ತ್ರೀವೇಷಕ್ಕೆ ಮನ್ನಣೆಯೇ ಇಲ್ಲದ ಕಾಲದಲ್ಲಿ, ಶಿವರಾಮ ಕಾರಂತರ ಮಾತನ್ನು ಸವಾಲಾಗಿ ಸ್ವೀಕರಿಸಿ, ತೆಂಕು ಹಾಗೂ ಬಡಗುತಿಟ್ಟು ಯಕ್ಷಗಾನದ ಸ್ತ್ರೀವೇಷಗಳಿಗೆ ಹೊಸತನ ನೀಡಿ "ಯಕ್ಷ ಶಾಂತಲಾ" ಎಂದೇ ಖ್ಯಾತರಾಗಿದ್ದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ (92) ಅವರು ವಯೋಸಹಜ ಅನಾರೋಗ್ಯದಿಂದ ಶನಿವಾರ (19 ಜುಲೈ 2025) ನಿಧನರಾದರು.
ಅವರಿಗೆ ಇಬ್ಬರು ಪುತ್ರರಿದ್ದು, ಅಂಬಾ ಪ್ರಸಾದ ಪಾತಾಳರು ಯಶಸ್ವೀ ಸ್ತ್ರೀ ಪಾತ್ರಧಾರಿಯಾಗಿ ಹೆಸರು ಮಾಡಿದ್ದಾರೆ. ಪಾತಾಳರಿಗೆ ನಾಲ್ವರು ಪುತ್ರಿಯರೂ ಇದ್ದಾರೆ.
ಪಾತಾಳ ವೆಂಕಟ್ರಮಣ ಭಟ್ ಸಂಕ್ಷಿಪ್ತ ವ್ಯಕ್ತಿಚಿತ್ರ
ಹೆಸರು: ಪಾತಾಳ ವೆಂಕಟ್ರಮಣ ಭಟ್
ಪತ್ನಿ: ಶ್ರೀಮತಿ ಪರಮೇಶ್ವರಿ ಅಮ್ಮ . ವಿವಾಹ: 1960
ಜನನ: 1933 ನವಂಬರ್ 16.
ಜನ್ಮ ಸ್ಥಳ: ಪುತ್ತೂರಿನ ಸಮೀಪದ ಬೈಪದವು ಬಳಿಯ ಪಾತಾಳ
ತಂದೆ-ತಾಯಿ: ಶ್ರೀ ರಾಮ ಭಟ್ಟ ಹಾಗೂ ಶ್ರೀಮತಿ ಹೇಮಾವತಿ
ಯಕ್ಷಗಾನ ಗುರುಗಳು: ಪುತ್ತೂರು ಕೃಷ್ಣ ಭಟ್ಟರು, ಪೆರುವೊಡಿ ನಾರಾಯಣ ಭಟ್ (ತೆಂಕು), ಬಡಗು: ಸೌಕೂರು ಮೇಳದ ಸ್ತ್ರೀ ವೇಷಧಾರಿ ಉಳ್ತೂರು ಸೀತಾರಾಮ. ಅಲ್ಲದೆ ಕಡಾರು ನಾರಾಯಣ ಭಟ್ ಹಾಗೂ ಅಳಿಕೆ ರಾಮಯ್ಯ ರೈಗಳಿಂದಲೂ ಹೆಚ್ಚಿನ ನಾಟ್ಯಾಭ್ಯಾಸ
ರಂಗಾನುಭವ: ಕಾಂಚನ ಮೇಳ, ಸೌಕೂರು ಮೇಳ, 1954ರಲ್ಲಿ ಮೂಲ್ಕಿ ಮೇಳ, 1963ರಲ್ಲಿ ಧರ್ಮಸ್ಥಳ ಮೇಳ. 15 ವರ್ಷ ಧರ್ಮಸ್ಥಳ ಮೇಳ ತಿರುಗಾಟದಲ್ಲಿ ಪ್ರಸಿದ್ಧಿ
ಮಕ್ಕಳು: ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು
ಪ್ರಶಸ್ತಿ/ಅಭಿನಂದನೆ/ಸನ್ಮಾನಗಳು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಠಾನ ಪ್ರಶಸ್ತಿ, ಕುರಿಯ ಪ್ರಶಸ್ತಿ, ಶೇಣಿ ಪ್ರಶಸ್ತಿ, ವಿದ್ಯಾಮಾನ್ಯ ಪ್ರಶಸ್ತಿ, ಯಕ್ಷ ಕಲಾನಿಧಿ ಪ್ರಶಸ್ತಿ, ಅಗರಿ ಪ್ರಶಸ್ತಿ, ಡೋಗ್ರಾ ಪೂಜಾರಿ ಪ್ರಶಸ್ತಿ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಪ್ರಸಿದ್ಧಿಯ ಪರಾಕಾಷ್ಠೆಯಲ್ಲಿದ್ದಾಗಲೇ 50 ಹರೆಯದಲ್ಲಿ ಯಕ್ಷಗಾನದ ವೃತ್ತಿ ಜೀವನಕ್ಕೆ ನಿವೃತ್ತಿ ಹಾಡಿ, ಸ್ತ್ರೀಪಾತ್ರಗಳ ಅಧ್ಯಯನಕ್ಕೆ ಸಮಯ ಮೀಸಲಿಟ್ಟು, ಯಕ್ಷಗಾನ ರಂಗದಲ್ಲಿ ಸ್ತ್ರೀವೇಷಕ್ಕೆ ಹೆಚ್ಚು ಮನ್ನಣೆ ದೊರೆಯುವಂತೆ ಮಾಡಿದವರು ಪಾತಾಳ ವೆಂಕಟರಮಣ ಭಟ್ಟರು. ಜೊತೆಗೆ, ವಯಸ್ಸಾದ ಬಳಿಕ ಪಾತಾಳ ಪ್ರಶಸ್ತಿಯನ್ನು ಸ್ಥಾಪಿಸಿ, ಯಕ್ಷಗಾನದಿಂದ ದುಡಿದ ಹಣವನ್ನು ಯಕ್ಷಗಾನ ಕಲಾವಿದರಿಗಾಗಿಯೇ ಪ್ರಶಸ್ತಿಯ ಮೂಲಕ ನೀಡುತ್ತಾ ಮಾದರಿಯಾದವರು. 2021ರಲ್ಲಿ 30 ಕಲಾವಿದರಿಗೆ ಧರ್ಮಸ್ಥಳದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ.
ಪುರುಷ ವೇಷಗಳು ಯಕ್ಷರಂಗದಲ್ಲಿ ಮೆರೆಯಲು ಕಾರಣಗಳನ್ನೆಲ್ಲ ಅಧ್ಯಯನ ಮಾಡಿ, ಸ್ತ್ರೀವೇಷಗಳಿಗೆ ತಾವಾಗಿಯೇ ವಿವಿಧ ವೇಷಗಳ ಆಭರಣ ವಿನ್ಯಾಸಗಳನ್ನು ರೂಪಿಸಿದವರು. ಇದು ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಯಕ್ಷಗಾನಕ್ಕೂ ಅತ್ಯಂತ ಶ್ರೇಷ್ಠ ಕೊಡುಗೆ. ಈಗಿನ ಸ್ತ್ರೀವೇಷಗಳು ಮೆರೆಯುವಲ್ಲಿ ಇವರು ಹಾಕಿಕೊಟ್ಟ ದಾರಿಯ ಪ್ರಭಾವವೇ ಹೆಚ್ಚು. ಸ್ತ್ರೀವೇಷಗಳಿಗೆ ಬೇಕಾದ ತೋಳ್ಕಟ್ಟು, ಡಾಬು, ಕೈಕಟ್ಟು, ಕೊರಳ ಆಭರಣಗಳು, ಕಿರೀಟ (ಶಿರೋಭೂಷಣ), ಸೀರೆಯ ಬಳಕೆ - ಹೀಗೆ ಎಲ್ಲವನ್ನೂ ಮರುಸೃಷ್ಟಿಸಿದವರು ಪಾತಾಳರು.
ಸಣ್ಣಂದಿನಲ್ಲೇ ಯಕ್ಷಗಾನದ ಬಗ್ಗೆ ಅತೀವ ಆಸಕ್ತಿ ಇದ್ದ ಪಾತಾಳರು, ಆರಂಭದಲ್ಲಿ ಮೃದಂಗಾಭ್ಯಾಸ ಮಾಡಿದ್ದರು. ನಂತರ ವೇಷಧಾರಿಯಾದವರು. ಸೌಕೂರು ಮೇಳದ ಉಳ್ತೂರು ಸೀತಾರಾಮ ಅವರಿಂದ ಬಡಗು ನಾಟ್ಯ ಕಲಿತಿದ್ದರು. ಮಾಣಂಗಾಯಿ ಕೃಷ್ಣ ಭಟ್ಟರು, ಪೆರುವೊಡಿ ನಾರಾಯಣ ಹಾಸ್ಯಗಾರರಿಂದ ತೆಂಕಿನ ನಾಟ್ಯವನ್ನು ಕಲಿತವರು. ಆದರೆ, ಬಡಗಿನ ನಾಟ್ಯವನ್ನು ತೆಂಕಿನಲ್ಲಿ ಬೆರೆಸದೇ ಇರುವ ಮೂಲಕ ಆಯಾ ತಿಟ್ಟುಗಳ ಪಾವಿತ್ರ್ಯವನ್ನು ಉಳಿಸಿದವರು ಅವರು.
ದಿ.ಕುರಿಯ ವಿಠಲ ಶಾಸ್ತ್ರಿಗಳ ವೇಷಗಳ ಅಭಿಮಾನಿಯಾಗಿದ್ದು, ಅವರ ಅಭಿನಯ ನೋಡುತ್ತಲೇ ತಮ್ಮನ್ನು ತಾವು ಯಕ್ಷಗಾನಾಭಿನಯದಲ್ಲಿ ಅರಳಿಸಿಕೊಂಡವರು ಪಾತಾಳರು. ಹುಬ್ಬಿನ ಚಲನೆ, ಕಣ್ಣುಗಳ ಚಲನೆ, ಭಾವಪೂರ್ಣ ಅಭಿನಯ ಇವುಗಳನ್ನೆಲ್ಲ ನೋಡಿ ನೋಡಿಯೇ, ತಮ್ಮ ಪಾತ್ರಪೋಷಣೆಗೆ ಬೇಕಾದವುಗಳನ್ನೆಲ್ಲ ಕಲಿತುಕೊಂಡವರು.
ಸ್ತ್ರೀವೇಷಗಳಿಗೆ ಚೆಂಡೆಯ ಬಳಕೆಯ ಬಗ್ಗೆ ಅವರ ಖಚಿತ ಮಾತು ಎಂದರೆ, ವೀರ, ರೌದ್ರ, ಭಯಾನಕ ಮತ್ತು ಬೀಭತ್ಸ ರಸಗಳ ಪದ್ಯಗಳಿಗೆ ಮಾತ್ರ ಸ್ತ್ರೀವೇಷಕ್ಕೆ ಚೆಂಡೆ ಬಳಸಬೇಕೆಂಬುದು.
ಪುತ್ತೂರು ತಾಲೂಕು ಬೈಪದವು ರಾಮ ಭಟ್ ಮತ್ತು ಹೇಮಾವತಿ ಅಮ್ಮ ಅವರ ಪುತ್ರನಾಗಿ 1933ರ ನವೆಂಬರ್ 16ರಂದು ಜನಿಸಿದ ಪಾತಾಳ ವೆಂಕಟರಮಣ ಭಟ್ಟರು ಓದಿದ್ದು ಕೇವಲ 8ನೇ ತರಗತಿವರೆಗೆ. ಮಾಣಂಗಾಯಿ ಕೃಷ್ಣ ಭಟ್ಟರಿಂದ ತೆಂಕು ನಾಟ್ಯಾಭ್ಯಾಸ, ಮಂಗಳೂರಿನ ವಿಠಲ್ ಮಾಸ್ಟರ್ ಅವರಿಂದ ಭರತನಾಟ್ಯ ಹಾಗೂ ಕೃಷ್ಣ ಅಯ್ಯರ್ ಅವರಿಂದ ನೃತ್ಯ ತರಬೇತಿ ಪಡೆದವರು. ತಮ್ಮ16ನೇ ವಯಸ್ಸಿಗೆ ಕಾಂಚನ ಮೇಳದಲ್ಲಿ ತಿರುಗಾಟ ಆರಂಭಿಸಿ ಮೂಲ್ಕಿ, ಸೌಕೂರು, ಸುರತ್ಕಲ್, ಧರ್ಮಸ್ಥಳ ಮೇಳಗಳಲ್ಲಿ ಕಲಾ ವ್ಯವಸಾಯ ಮಾಡಿದ್ದಾರೆ. 50ರಿಂದ 70ರ ದಶಕದವರೆಗೂ ರಂಗವಾಳಿದ ಅವರು 1981ರಲ್ಲಿ ಯಕ್ಷಗಾನದ ವ್ಯವಸಾಯಿ ರಂಗದಿಂದ ನಿವೃತ್ತಿಯಾದರು.
ಊರ್ವಶಿ, ಮೇನಕೆ, ದ್ರೌಪದಿ, ಮೋಹಿನಿ, ಪ್ರಮೀಳೆ ಮುಂತಾದ ಸ್ತ್ರೀಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ಅದೇ ರೀತಿ, ಧರ್ಮರಾಯ, ಶ್ರೀರಾಮ, ವಿಷ್ಣು, ಅತಿಕಾಯ ಮುಂತಾದ ಪುರುಷ ಪಾತ್ರಗಳನ್ನೂ ಅವರು ನಿರ್ವಹಿಸಿ ಸೈ ಅನ್ನಿಸಿಕೊಂಡಿದ್ದಾರೆ. 18 ವರ್ಷಗಳ ಕಾಲ ಧರ್ಮಸ್ಥಳ ಮೇಳದಲ್ಲಿ ಸ್ತ್ರೀಪಾತ್ರಧಾರಿಯಾಗಿ ದುಡಿದವರು ಅವರು. ಮೂರು ದಶಕಕ್ಕೂ ಹೆಚ್ಚು ಕಾಲ ವ್ಯವಸಾಯ ಮಾಡಿ, ಬೇಡಿಕೆಯಲ್ಲಿದ್ದಾಗಲೇ ನಿವೃತ್ತಿ ತೆಗೆದುಕೊಂಡ ಪಾತಾಳರು, ಅಧ್ಯಯನಶೀಲರಾಗಿದ್ದಾರೆ. ಸ್ತ್ರೀಪಾತ್ರದ ಕುರಿತು ಸಂಶೋಧನೆಯನ್ನೇ ಮಾಡಿದ್ದಾರೆ. ಹಲವು ಕಡೆ ಯಕ್ಷಗಾನ ಪ್ರಾತ್ಯಕ್ಷಿಕೆಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ, ಸ್ತ್ರೀವೇಷ, ಬಣ್ಣಗಾರಿಕೆ, ಆಭರಣಗಳ ಕುರಿತು ಆಳವಾದ ಚಿಂತನೆ ನಡೆಸಿ, ಸ್ತ್ರೀವೇಷವನ್ನು ಪುರುಷವೇಷಕ್ಕೆ ಸಂವಾದಿಯಾಗಿ ರೂಪಿಸಿದವರು ಎಂದರೆ ತಪ್ಪಾಗಲಾರದು.
ಯಕ್ಷಗಾನದಲ್ಲಿ ಸ್ತ್ರೀಪಾತ್ರಗಳ ಕುರಿತಾಗಿ ಶಿವರಾಮ ಕಾರಂತರ ಮಾತಿನ್ನೇ ಸವಾಲಾಗಿ ಸ್ವೀಕರಿಸಿ, ಡಿವಿಜಿಯವರ "ಅಂತಃಪುರ ಗೀತೆ' ಪುಸ್ತಕವನ್ನು ಅಧ್ಯಯನ ಮಾಡಿ ಅದರಿಂದ ಯಕ್ಷಗಾನದ ಸ್ತ್ರೀಪಾತ್ರಕ್ಕೆ ಬೇಕಾದ ಅಂಶಗಳನ್ನೂ, ಬೇಲೂರು ಶಿಲಾ ಬಾಲಿಕೆ ಶಿಲ್ಪಗಳ ನಿಲುವು, ಆಹಾರ್ಯಗಳನ್ನೂ ಅಧ್ಯಯನ ಮಾಡಿ ಯಕ್ಷಗಾನದ ಸ್ತ್ರೀವೇಷಕ್ಕೆ ಅಳವಡಿಸಿದವರು ಅವರು.
ಪುತ್ತೂರು ತಾಲೂಕಿನ ಪಾತಾಳದವರಾದ ವೆಂಕಟರಮಣ ಭಟ್ಟರಿಗೆ ಅರ್ಹವಾಗಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ. ಜೊತೆಗೆ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ವಿಟ್ಲ ಗೋಪಾಲಕೃಷ್ಣ ಭಟ್ ಪ್ರತಿಷ್ಠಾನ ಪ್ರಶಸ್ತಿ, ಫಲಿಮಾರು ಮಠದ ವಿದ್ಯಾಮಾನ್ಯ ಪ್ರಶಸ್ತಿ ಮತ್ತು ಇತರ ಗೌರವಗಳು ದೊರೆತಿದ್ದು, ಅವರಿಗೆ 75 ತುಂಬಿದಾಗ "ಯಕ್ಷ ಶಾಂತಲಾ" ಅಭಿನಂದನ ಗ್ರಂಥವನ್ನು ಮುಳಿಯ ಶಂಕರ ಭಟ್ ಮತ್ತು ನಾ. ಕಾರಂತ ಪೆರಾಜೆ ಸಂಪಾದಕತ್ವದಲ್ಲಿ ಅರ್ಪಿಸಲಾಗಿದೆ. ಇದು ಸಂಗ್ರಹಯೋಗ್ಯ ಪುಸ್ತಕ.