ಮಂಗಳೂರು: ಪರಂಪರೆಯ ಹಾಗೂ ಪ್ರಯೋಗಶೀಲ ಬಣ್ಣದ ವೇಷಧಾರಿಯಾಗಿ ನಾಡಿನ ಉದ್ದಗಲಕ್ಕೂ ಪ್ರೀತಿ ಸಂಪಾದಿಸಿದ್ದ ಯಕ್ಷಗಾನದ ಹಿರಿಯ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ (60) 2025 ಜುಲೈ 20ರ ಭಾನುವಾರ ಮಧ್ಯಾಹ್ನ ಅಲ್ಪಕಾಲದ ಅನಾರೋಗ್ಯದ ಬಳಿಕ ನಿಧನರಾಗಿದ್ದು, ಭಾನುವಾರ ರಾತ್ರಿ ಅವರ ಹುಟ್ಟೂರು ಸಿದ್ದಕಟ್ಟೆಯಲ್ಲಿ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಕಲ್ಲಡ್ಕ ಹಾಗೂ ಹಿಮ್ಮೇಳ ಕಲಾವಿದರು ಯಕ್ಷಗಾಯನ ಗೌರವ ಸಲ್ಲಿಸಿದರು. ಕಲಾವಿದರು, ಕಲಾಭಿಮಾನಿಗಳು, ವಿವಿಧ ಮೇಳಗಳ ಸಂಘಟಕರು, ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.
ನೇಪಥ್ಯ ಕಲಾವಿದನಾಗಿ ಸೇರಿ, ನಂತರ ಪ್ರಧಾನ ಪಾತ್ರಧಾರಿಯಾಗಿ ಅವರು ಬೆಳೆದ ಬಗೆ ಇದರ ಕಲಾವಿದರಿಗೆ ಮಾದರಿಯಾದುದು. ಜೊತೆಗೆ, ತಮ್ಮ ಸ್ವರ ಭಾರ, ಸ್ಪಷ್ಟ ಮಾತುಗಾರಿಕೆ, ರಾಕ್ಷಸ ವೇಷಕ್ಕೂ ಮಾತು ಅತ್ಯಂತ ಮುಖ್ಯ ಎಂದು ತೋರಿಸಿಕೊಟ್ಟ ಪಾತ್ರಚಿತ್ರಣಗಳ ಮೂಲಕವಾಗಿ ರಂಗದಲ್ಲಿ ಮತ್ತು ನಯ ವಿನಯ, ಕಿರಿಯರನ್ನು ತಿದ್ದುವ, ಹಿರಿಯರನ್ನು ಗೌರವಿಸುವ ಮೂಲಕ ರಂಗದ ಹೊರಗೆಯೂ ಅತ್ಯಂತ ಪ್ರೀತಿಪಾತ್ರ ರಾಕ್ಷಸ ವೇಷಧಾರಿಯಾಗಿ ಮೆರೆದವರು ಸದಾಶಿವ ಶೆಟ್ಟಿಗಾರರು. ತನ್ನ ಪತ್ನಿಯ ಅನಾರೋಗ್ಯದಿಂದ ಸಾಕಷ್ಟು ನೊಂದಿದ್ದ ಅವರು ಪತ್ನಿಯ ಆರೈಕೆಯ ಜತೆಗೆ ತನ್ನ ಅನಾರೋಗ್ಯದಿಂದಲೂ ಕುಗ್ಗಿ ಹೋಗಿದ್ದರೂ ಕಳೆದ ತಿರುಗಾಟವನ್ನು ಚ್ಯುತಿಯಿಲ್ಲದೆ ನಡೆಸಿದ್ದರು.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಸಿದ್ದಕಟ್ಟೆ ಮಂಚಕಲ್ಲು ನಿವಾಸಿಯಾಗಿದ್ದ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿವಿಧ ಮೇಳಗಳಲ್ಲಿ ತಿರುಗಾಟ ನಡೆಸಿದ್ದು, ಕಳೆದ ತಿರುಗಾಟದವರೆಗೂ ಹನುಮಗಿರಿ ಮೇಳದಲ್ಲಿ ಕಲಾಸೇವೆ ಮಾಡುತ್ತಿದ್ದರು. ಕೆಲವೇ ತಿಂಗಳ ಹಿಂದೆ ಅನಾರೋಗ್ಯದ ಕಾರಣದಿಂದಾಗಿ ರಂಗದಿಂದ ನಿವೃತ್ತಿ ಪ್ರಕಟಿಸಿದ್ದರು. ಅನಾರೋಗ್ಯದ ನಡುವೆಯೂ ಯಕ್ಷಗಾನದಲ್ಲಿ ತೊಡಗಿಸಿಕೊಂಡು, ರಾಕ್ಷಸ ಪಾತ್ರಗಳಿಗೆ ಜೀವ ತುಂಬಿದ್ದರು.
ತನ್ನ 18ನೇ ವಯಸ್ಸಿನಲ್ಲಿ ಕಲಾ ಸೇವೆ ಆರಂಭಿಸಿ, ಸುಮಾರು 10 ವರ್ಷ ಕಟೀಲು ಮೇಳ, 11 ವರ್ಷ ಧರ್ಮಸ್ಥಳ ಮೇಳ, ಬಳಿಕ ಹೊಸನಗರ 9 ವರ್ಷ, ಎಡನೀರು ಮೇಳದಲ್ಲಿ 1 ವರ್ಷ ಹಾಗೂ ಕೊನೆಯದಾಗಿ ಹನುಮಗಿರಿ ಮೇಳದಲ್ಲಿ 8 ವರ್ಷ ತಿರುಗಾಟ ಮಾಡಿದ್ದರು.
ಅನುಭವಿ ಹಿರಿಯ ಕಲಾವಿದರಾದ ಶೆಟ್ಟಿಗಾರರು ಓರ್ವ ಪ್ರಯೋಗಶೀಲ ಬಣ್ಣದ ವೇಷಧಾರಿಯೂ ಆಗಿ ಪರಂಪರೆಯ ಹಾಡಿನಲ್ಲಿ ಹೊಸ ಅವಿಷ್ಕಾರದೊಂದಿಗೆ ಜನಮನ ಗೆದ್ದವರು. ರಾವಣ, ಕುಂಭಕರ್ಣ, ಮಹಿಷಾಸುರ, ವರಾಹ, ಸಿಂಹ, ಗಜೇಂದ್ರ, ಕಾಕಾಸುರ ಮುಂತಾದ ಬಣ್ಣದ ವೇಷಗಳು, ಶೂರ್ಪನಖಿ, ಅಜಮುಖಿ, ಪೂತನಿ, ವೃತ್ರಜ್ವಾಲೆ ಮುಂತಾದ ಹೆಣ್ಣು ಬಣ್ಣ ಪಾತ್ರಗಳಿಗೆ ಜೀವ ತುಂಬಿದ್ದರು.
ಹಲವು ಪಾತ್ರಗಳಿಗೆ ಹೊಸತನದ ಮೆರುಗಿನ ಜತೆಗೆ ಸ್ಪಷ್ಟ ಮಾತುಗಾರಿಕೆಯ ಮೂಲಕ ಯಕ್ಷ ಪ್ರೇಮಿಗಳ ಮನಗೆದ್ದಿದ್ದ ಅವರು ಹಲವು ಶಿಷ್ಯ ವೃಂದವನ್ನೂ ಹೊಂದಿದ್ದರು. ವಿವಿಧ ರಾಜ್ಯಗಳ ಜತೆಗೆ ವಿದೇಶಗಳಲ್ಲೂ ಯಕ್ಷಗಾನ ಪ್ರದರ್ಶನ ನೀಡಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.
ಪ್ರಶಸ್ತಿ- ಸಂಮಾನಗಳು
ಅವರ ಯಕ್ಷ ಸೇವೆಯನ್ನು ಗುರುತಿಸಿ ಪೇಜಾವರ ಶ್ರೀಗಳ ಜನುಮದಿನದ ಶ್ರೀರಾಮ ವಿಠಲ ಪ್ರಶಸ್ತಿ, ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಪ್ರಶಸ್ತಿ, ಕೀಲಾರು ಗೋಪಾಲಕೃಷ್ಣಯ್ಯ ಪ್ರಶಸ್ತಿ ಮೊದಲಾದ ಪ್ರಶಸ್ತಿ ಸಮ್ಮಾನಗಳನ್ನು ನೀಡಿ ಗೌರವಿಸಲಾಗಿತ್ತು. ಮಂಗಳೂರಿನ ಭ್ರಾಮರಿ ಯಕ್ಷಮಿತ್ರರು ಬಳಗದಿಂದ ಕಳೆದ ವರ್ಷ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪಡೆದಿದ್ದ ಅವರು ಹತ್ತು ದಿನಗಳ ಹಿಂದಷ್ಟೇ ಮಂಗಳೂರು ವಿಶ್ವವಿದ್ಯಾನಿಲಯದ ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ವತಿಯಿಂದ ಯಕ್ಷಮಂಗಳ ಪ್ರಶಸ್ತಿ ಸ್ವೀಕರಿಸಿದ್ದರು.
ಸ್ವರ-ಭಾಷಾ ಶುದ್ಧಿಯಿಂದ ಪಾತ್ರಗಳಿಗೆ ಜೀವ ತುಂಬಿದ ಸದಾಶಿವ ಶೆಟ್ಟಿಗಾರ್
ಬಣ್ಣದ ಮಾಲಿಂಗ ಅವರ ಪರಂಪರೆಯನ್ನು ಮುಂದುವರಿಸಿಕೊಂಡು ಬಂದು, ಬಣ್ಣದ ವೇಷಕ್ಕೆ ಬೇಕಾದ ಸ್ವರಭಾರ, ಪರಂಪರೆಯ ಬಣ್ಣಗಾರಿಕೆ ಮಾತ್ರವಲ್ಲದೆ ಭಾಷಾಶುದ್ದಿಯಿಂದ ಪಾತ್ರಗಳಿಗೆ ಜೀವ ತುಂಬಿದ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಅದ್ಭುತ ಕಲಾವಿದ. ರಂಗದಲ್ಲಿ ಎಂದೂ ಹಿಮ್ಮೇಳವನ್ನು ಮೀರದೆ, ಅತೀವ ಗೌರವ ಕೊಟ್ಟು ಹೊಂದಿಕೊಂಡು ಹೋಗುವ ಅವರ ವ್ಯಕ್ತಿತ್ವ ಇಡೀ ಯಕ್ಷ ರಂಗಕ್ಕೆ ಮಾದರಿ. ಕೊನೆಯ ಕಾಲಘಟ್ಟದಲ್ಲಿ ಅನಾರೋಗ್ಯ ಕಾಡಿದರೂ ಆತ್ಮಸ್ಥೆರ್ಯವನ್ನು ಕಳೆದುಕೊಳ್ಳದೆ ಪಾತ್ರದ ಗುಣಮಟ್ಟಕ್ಕೆ ಕೊರತೆಯಾಗದಂತೆ ನೋಡಿಕೊಂಡ ಸ್ವಾಭಿಮಾನಿ ಕಲಾವಿದರಾಗಿ ಶೆಟ್ಟಿಗಾರ್ ಗುರುತಿಸಿಕೊಳ್ಳುತ್ತಾರೆ.
ಕಟೀಲು ಮೇಳದಲ್ಲಿ ಬಣ್ಣದ ಮಾಲಿಂಗನವರಿಗೆ ವೇಷ ಕಟ್ಟುತ್ತಲೇ, ಅವರ ವೇಷವನ್ನು ನೋಡುತ್ತಲೇ ಬೆಳೆದ ಸದಾಶಿವ ಶೆಟ್ಟಿಗಾರ್ ಎಂಬ ಹುಡುಗ, ಅದರಲ್ಲೇ ತಲ್ಲೀನರಾಗಿ ಅಭ್ಯಾಸ ಮಾಡಿಕೊಂಡು ಬೆಳೆದ ಬಗೆ ಅಚ್ಚರಿ. ರಾಕ್ಷಸ ವೇಷಕ್ಕೆ ಸಹಜವಾಗಿ ಲಭ್ಯವಿರುವ ಆಳಂಗ, ಸಹಜ ಸ್ವರ, ಕನ್ನಡ ಭಾಷೆಯ ಸ್ಪಷ್ಟನುಡಿಯ ಮೂಲಕ ವೇಷದ ಗಾಂಭೀರ್ಯವನ್ನು ಮತ್ತಷ್ಟು ಎತ್ತರಕ್ಕೇರಿಸಿದವರು ಶೆಟ್ಟಿಗಾರರು.
ಸದಾಶಿವರು ಹಿರಿಯರು ಹಾಕಿಕೊಟ್ಟ ಬಣ್ಣದ ವೇಷದ ಕ್ರಮವನ್ನು ಔದಾಸೀನ್ಯವಿಲ್ಲದೆ ಮುಂದುವರಿಸಿಕೊಂಡು ಬಂದ ಅವರ ಕ್ರಮವನ್ನೇ ಈಗ ಹೆಚ್ಚಿನ ಬಣ್ಣದ ವೇಷಧಾರಿಗಳು ಅನುಕರಿಸುತ್ತಿರುವುದು, ಅವರ ಪಾತ್ರಚಿತ್ರಣದ ಶ್ರೇಷ್ಠತೆಗೆ ಸಾಕ್ಷಿ.
ಇಂದ್ರಕೀಲಕದ ಕಿರಾತ, ಮಹಿರಾವಣ ಕಾಳಗದ ಮಹಿರಾವಣ, ರುದ್ರಭೀಮ ಮೊದಲಾದ ಪಾತ್ರಗಳ ಪರಂಪರೆಯ ನಡೆ, ಗತ್ತು ಗಾಂಭೀರ್ಯವು ಬಣ್ಣದ ಮಾಲಿಂಗನವರ ತಲೆಮಾರಿನ ಅನಂತರದ ಕಲಾವಿದರ ಪೈಕಿ ಗೇರುಕಟ್ಟೆ ಗಂಗಯ್ಯ ಶೆಟ್ಟರಂತೆ ಸದಾಶಿವ ಶೆಟ್ಟಿಗಾರರಲ್ಲಿಯೂ ಇತ್ತು. ವಿದ್ಯಾಭ್ಯಾಸ ಕಡಿಮೆಯಿದ್ದರೂ ಅವರ ಭಾಷಾ ಪ್ರೌಢಿಮೆ ಬಹಳ ಚೆನ್ನಾಗಿತ್ತು. ಅವರ ಸ್ವರ ಮತ್ತು ಪಾತ್ರಗಳಿಗೆ ತಕ್ಕಂತೆ ಅದನ್ನು ಬದಲಾಯಿಸುವ ಅವರ ಸಾಮರ್ಥ್ಯವೇ ರಾಕ್ಷಸ ವೇಷವನ್ನೂ ಪ್ರೀತಿಸುವಂತೆ ಮಾಡಿದ್ದವು ಎಂದರೆ ತಪ್ಪಾಗಲಾರದು.
ಕೆಲವು ಸಂದರ್ಭ ಪಾತ್ರಗಳ ನಡುವೆ ವಾಚಿಕ ತರ್ಕದ ಅಗತ್ಯ ಇದ್ದಾಗ ಔಚಿತ್ಯ ಮೀರದೆ ಅದನ್ನು ಮುಂದುವರಿಸುವ ಸಾಮರ್ಥ್ಯ ಸದಾಶಿವರಿಗಿತ್ತು ಮತ್ತು ಅವರು ಎಂದೂ ರಂಗದ ಸಂಪ್ರದಾಯ, ಕ್ರಮವನ್ನು ಮೀರಿ ಹೋಗುತ್ತಿರಲಿಲ್ಲ.
ಸದಾಶಿವ ಶೆಟ್ಟಿಗಾರ್ ದಂಪತಿಗೆ ಮೂವರು ಮಕ್ಕಳು (ಎರಡು ಗಂಡು ಮತ್ತು 1 ಹೆಣ್ಣು). ಹಿರಿಯ ಪುತ್ರ ದಿಲೀಪ್ ಕುಮಾರ್ ಮತ್ತು ಕಿರಿಯ ಪುತ್ರ ಪದ್ಮನಾಭ ಇಬ್ಬರೂ ಉದ್ಯೋಗಿಗಳು. ಪುತ್ರಿ ಕವಿತಾ ವಿವಾಹಿತೆ. ಅಳಿಯ ಯಶವಂತ ಉದ್ಯೋಗಿ. ಮೊಮ್ಮಗ ಹಾರ್ದಿಕ್. ಕೌಟುಂಬಿಕವಾಗಿ ಸಂತೃಪ್ತರಿದ್ದ ಶೆಟ್ಟಿಗಾರರು ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಯಲ್ಲಿ ವಾಸವಿದ್ದರು.
ಶ್ರದ್ಧಾಂಜಲಿ
ಬಣ್ಣದ ವೇಷಧಾರಿಗಳಿಗೆ ಕುಣಿತದಲ್ಲಿ ಇರಬೇಕಾದ ಹಿಡಿತ, ಮಾತಿನ ಓಘ ಮತ್ತು ಸ್ಪಷ್ಟತೆ, ನುಡಿ-ನಡೆಯಲ್ಲಿನ ಗತ್ತು-ಗಾಂಭೀರ್ಯ, ನಿಖರತೆ - ಜೊತೆಗೆ ಹಿಮ್ಮೇಳ-ಮುಮ್ಮೇಳದೊಂದಿಗಿನ ಹೊಂದಾಣಿಕೆ, ಪರಂಪರೆಯನ್ನು ಬಿಡದೆ, ಹೊಸತನದ ಸೇರ್ಪಡೆ - ಈ ಗುಣಗಳಿಂದಾಗಿ ಹೊಸ ತಲೆಮಾರಿನ ವೇಷಧಾರಿಗಳಿಗೆಲ್ಲರಿಗೂ ಮಾದರಿಯಾಗಿದ್ದುಕೊಂಡು, ಹೊಸ ಹಾದಿಯನ್ನು ಹಾಕಿಕೊಟ್ಟ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರರ ಅಗಲಿಕೆಯು ಯಕ್ಷಗಾನ ರಂಗಕ್ಕೆ ತುಂಬಲಾರದ ನಷ್ಟ. ಅವರ ರಂಗದ ಒಳಗೆ ಮತ್ತು ಹೊರಗಿನ ನಡತೆ, ನಡೆಗಳೆಲ್ಲವೂ ಮುಂದಿನ ಪೀಳಿಗೆಗೆ ದಾರಿ ದೀಪವಾಗಲಿ, ಇದರಿಂದಾಗಿ ಶೆಟ್ಟಿಗಾರರು ಯಕ್ಷಗಾನ ಪ್ರಪಂಚದಲ್ಲಿ ಸದಾ ಬೆಳಗುವ ಜ್ಯೋತಿಯಾಗಿರಲಿ ಎಂದು ಶ್ರದ್ಧಾಂಜಲಿ.