ಮಂಗಳೂರು: ಯಕ್ಷಗಾನ ರಂಗದಲ್ಲಿ ಸಂಗೀತಕ್ಕೆ ಪ್ರಾಧಾನ್ಯ ನೀಡಿ, ಭಾಗವತಿಕೆಯಲ್ಲಿ ಹೊಸ ಶಕೆಗೆ ಕಾರಣವಾದ ದಿ.ದಾಮೋದರ ಮಂಡೆಚ್ಚರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಅವರ ಶಿಷ್ಯ, ಹಿರಿಯ ಭಾಗವತರಾದ ದಿನೇಶ ಅಮ್ಮಣ್ಣಾಯರು ಆಯ್ಕೆಯಾಗಿದ್ದಾರೆ.
ದಿ.ದಾಮೋದರ ಮಂಡೆಚ್ಚ ಸಂಸ್ಮರಣಾ ಸಮಿತಿಯು ನೀಡುವ ಈ ಪ್ರಶಸ್ತಿಯು 10 ಸಾವಿರ ರೂ. ನಗದು ಹಾಗೂ ಸಂಮಾನ ಫಲಕವನ್ನು ಒಳಗೊಂಡಿದೆ. ಜು.10ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಹಕಾರದಲ್ಲಿ, ಸರಸ್ವತಿ ಸದನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಯಕ್ಷಗಾನ.ಇನ್ ಅಪ್ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ ಫಾಲೋ ಮಾಡಿ.
ಕಾರ್ಯಕ್ರಮದಲ್ಲಿ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಕಟೀಲು ವಾಸುದೇವ ಆಸ್ರಣ್ಣ, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ, ಕಟೀಲು ಹರಿನಾರಾಯಣದಾಸ ಆಸ್ರಣ್ಣ, ದೇವಿಪ್ರಸಾದ ಶೆಟ್ಟಿ ಕಲ್ಲಾಡಿ ಅವರು ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿ ನಮ್ಮನ್ನು ಅಗಲಿದ ಹಿರಿಯ ಭಾಗವತ ಪ್ರಮುಖರಾದ ಕುಬಣೂರು ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಹಾಗೂ ಬಲಿಪ ಪ್ರಸಾದ ಭಾಗವತರ ಸಂಸ್ಮರಣೆಯೂ ನಡೆಯಲಿದೆ.
ಜು.10 ಭಾನುವಾರ ಸಂದೆ 3.30ರಿಂದ ಕುಬಣೂರು ಹಾಗೂ ಪೂಂಜರ ಪ್ರಸಂಗಗಳಿಂದ ಆಯ್ದ ಹಾಡುಗಳ ಪ್ರಸ್ತುತಿಯನ್ನು ಭಾಗವತರಾದ ದಿನೇಶ ಅಮ್ಮಣ್ಣಾಯ, ದೇವಿಪ್ರಸಾದ ಆಳ್ವ ತಲಪಾಡಿ, ಭವ್ಯಶ್ರೀ ಮಂಡೆಕೋಲು, ಮಹೇಶ್ ಕನ್ಯಾಡಿ ನಡೆಸಿಕೊಡಲಿದ್ದಾರೆ. ಬಳಿಕ ಸಂಜೆ 6.30ರಿಂದ ಕುಬಣೂರು ಶ್ರೀಧರ ರಾವ್ ವಿರಚಿತ 'ಸಾರ್ವಭೌಮ ಸಂಕರ್ಷಣ' ಪ್ರಸಂಗವು ಬಯಲಾಟ ರೂಪದಲ್ಲಿ ಪ್ರದರ್ಶನಗೊಳ್ಳಲಿದೆ.
ದಿನೇಶ ಅಮ್ಮಣ್ಣಾಯರು
ವಿಷ್ಣು ಅಮ್ಮಣ್ಣಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ಅವರಿಂದ ಮೃದಂಗ ಕಲಿತಿದ್ದ ದಿನೇಶ ಅಮ್ಮಣ್ಣಾಯರು ಕರ್ನಾಟಕ ಮೇಳ ಸೇರಿದ ಬಳಿಕ, ಭಾಗವತಿಕೆಯನ್ನೂ ಅಭ್ಯಾಸ ಮಾಡಿ, ಮಂಡೆಚ್ಚರ ಶಿಷ್ಯರೆಂದು ಗುರುತಿಸಲ್ಪಟ್ಟವರು. ಮಂಡೆಚ್ಚರ ಜೊತೆಗೆ ಸುದೀರ್ಘ ಕಾಲ ತಿರುಗಾಟ ನಡೆಸಿದವರು. ಮಂಡೆಚ್ಚರ ಸಂಗೀತ ಶೈಲಿಯ ಪ್ರಾತಿನಿಧಿಕ ಭಾಗವತರಾಗಿ ಗುರುತಿಸಿಕೊಂಡವರು. ಕರ್ನಾಟಕ, ಕುಂಡಾವು, ಪುತ್ತೂರು, ಕದ್ರಿ, ಎಡನೀರು ಮುಂತಾದ ಮೇಳಗಳಲ್ಲಿ 40 ವರ್ಷಗಳ ಕಾಲ ಕಲಾಸೇವೆ ಮಾಡಿದ್ದಾರೆ. ವಿಶೇಷವಾಗಿ ತುಳು ಪ್ರಸಂಗಗಳಲ್ಲಿ ಹೆಸರುವಾಸಿಯಾಗಿರುವ ಇವರು, ಪೌರಾಣಿಕ ಕಥಾನಕಗಳನ್ನೂ ಸಮರ್ಥವಾಗಿ ನಿರ್ದೇಶಿಸಿ, ರಂಗದಲ್ಲಿ ಮೆರೆಸಿದ್ದಾರೆ.