ಜು.10ರಂದು ವೇಣೂರು ಸುಂದರ ಆಚಾರ್ಯ ಸಂಸ್ಮರಣೆ: ಶಿವರಾಮ ಜೋಗಿಗೆ ಪ್ರಥಮ ಪ್ರಶಸ್ತಿ

ವೇಣೂರು ಸುಂದರ ಆಚಾರ್ಯ (ಎಡ ಚಿತ್ರ) ಹಾಗೂ ಶಿವರಾಮ ಜೋಗಿ (ಬಲ ಚಿತ್ರ).

ವೇಣೂರು: ಯಕ್ಷಗಾನ ರಂಗದಲ್ಲಿ ಹಾಸ್ಯಗಾರರಾಗಿ ಸಿದ್ಧಿ ಹಾಗೂ ಪ್ರಸಿದ್ಧಿ ಗಳಿಸಿದ್ದ ವೇಣೂರು ಸುಂದರ ಆಚಾರ್ಯ ಅವರ ಪ್ರಥಮ ಸಂಸ್ಮರಣಾ ಕಾರ್ಯಕ್ರಮವು ಜು.10ರಂದು ವೇಣೂರಿನ ಭರತೇಶ ಸಭಾ ಭವನದಲ್ಲಿ ನಡೆಯಲಿದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ವಾಟ್ಸ್ಆ್ಯಪ್ ಗ್ರೂಪ್ 5 ಸೇರಿಕೊಳ್ಳಿ ಅಥವಾ ಟೆಲಿಗ್ರಾಂನಲ್ಲಿ ಸೇರಿಕೊಳ್ಳಿ. ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ವೇಣೂರು ಸುಂದರ ಆಚಾರ್ಯರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪ್ರಥಮ ಸಂಸ್ಮರಣಾ ಪ್ರಶಸ್ತಿಗೆ ಹಿರಿಯ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಶಿವರಾಮ ಜೋಗಿ ಬಿ.ಸಿ.ರೋಡ್ ಅವರಿಗೆ ನೀಡಲಾಗುತ್ತದೆ. ಶಿವರಾಮ ಜೋಗಿ ಅವರು ಸುರತ್ಕಲ್ ಮೇಳದಲ್ಲಿ ಸುಂದರ ಆಚಾರ್ಯರೊಂದಿಗೆ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಯಕ್ಷಗಾನ ತಿರುಗಾಟ ಮಾಡಿದ್ದರು.

ಸಂಸ್ಮರಣೆ, ನುಡಿನಮನ, ತಾಳಮದ್ದಳೆ
ಜು.10ರ ಭಾನುವಾರ ನಡೆಯುವ ಕಾರ್ಯಕ್ರಮದಲ್ಲಿ ಸುಂದರ ಆಚಾರ್ಯ ಪ್ರಶಸ್ತಿ ಪ್ರದಾನ, ಸಂಸ್ಮರಣೆ, ತಾಳಮದ್ದಳೆ ಜೊತೆಗೆ, ಯಕ್ಷಗಾನ ಲೋಕವನ್ನು ಅಗಲಿದ ವೇಣೂರು ಸುಂದರ ಆಚಾರ್ಯರ ಪುತ್ರ ಭಾಸ್ಕರ ಆಚಾರ್ಯ ಹಾಗೂ ವೇಣೂರು ವಾಮನ ಕುಮಾರ್ ಅವರಿಗೆ ನುಡಿ ನಮನವನ್ನೂ ಸಲ್ಲಿಸಲಾಗುತ್ತದೆ.

ವೇಣೂರು ಸುಂದರ ಆಚಾರ್ಯರ ಕಿರಿಯ ಪುತ್ರ ಭಾಸ್ಕರ ಆಚಾರ್ಯರು ಸುರತ್ಕಲ್ ಮೇಳದಲ್ಲಿ ತಂದೆಯೊಂದಿಗೆ ತಿರುಗಾಟ ಆರಂಭಿಸಿ, ಪುಂಡುವೇಷ, ಸ್ತ್ರೀ ವೇಷ ಮತ್ತು ಹಾಸ್ಯ ಪಾತ್ರಗಳಿಂದಾಗಿ ಜನಪ್ರಿಯತೆ ಪಡೆದಿದ್ದರು. ಮುಂದೆ ಮಂಗಳಾದೇವಿ, ಪೆರ್ಡೂರು ಮೇಳದಲ್ಲಿಯೂ ತಿರುಗಾಟ ನಡೆಸಿ ಅಲ್ಪಕಾಲದ ಅಸೌಖ್ಯದಿಂದ 37ನೇ ವಯಸ್ಸಿನಲ್ಲಿ (2008) ನಿಧನರಾಗಿದ್ದರು.

ವೇಣೂರಿನ ಇನ್ನೋರ್ವ ಪ್ರತಿಭಾವಂತ ಕಲಾವಿದ ವಾಮನ ಕುಮಾರ್ ಅವರು ಇತ್ತೀಚೆಗೆ ನಡೆದ ಅಪಘಾತವೊಂದರಲ್ಲಿ ನಮ್ಮನ್ನು ಅಗಲಿದ್ದಾರೆ. ಧರ್ಮಸ್ಥಳ, ಕದ್ರಿ, ಮಂಗಳಾದೇವಿ ಮತ್ತು ಹಿರಿಯಡ್ಕ ಮೇಳಗಳಲ್ಲಿ 29 ವರ್ಷ ತಿರುಗಾಟ ನಡೆಸಿದ ಇವರು 2022ರ ಜನವರಿಯಲ್ಲಿ 47ರ ಹರೆಯದಲ್ಲಿ ವಾಹನ ಅಪಘಾತದಲ್ಲಿ ದೈವಾಧೀನರಾದರು. ಅಗಲಿದ ಈ ಕಲಾವಿದರಿಬ್ಬರಿಗೆ ನುಡಿ ನಮನವನ್ನು ಹಿರಿಯ ಕಲಾವಿದ ಪೂಕಳ ಲಕ್ಷ್ಮೀನಾರಾಯಣ ಭಟ್ ಸಲ್ಲಿಸಲಿದ್ದಾರೆ.

ಸಭಾ ಕಾರ್ಯಕ್ರಮ
ಸಂಜೆ 4 ಗಂಟೆಯಿಂದ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ ಮಂಗಳೂರು ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಎರಡನೇ ಮೊಕ್ತೇಸರ ಬೆಳುವಾಯಿ ಸುಂದರ ಆಚಾರ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಮೂಡುಬಿದಿರೆ ಉದ್ಯಮಿ ಶ್ರೀಪತಿ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷ ನೇಮಯ್ಯ ಕುಲಾಲ್, ಸಿ..ಎ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ, ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ರಾವ್, ಉದ್ಯಮಿ ಭಾಸ್ಕರ್ ಪೈ ವೇಣೂರು, ಸಂಸ್ಮರಣಾ ಸಮಿತಿ ಗೌರವಾಧ್ಯಕ್ಷ ರವೀಂದ್ರ ಆಚಾರ್ಯ ವೇಣೂರು ಮತ್ತು ಅಧ್ಯಕ್ಷ ಖಂಡಿಗ ಶ್ರೀಧರ ಆಚಾರ್ಯ ಉಪಸ್ಥಿತರಿರುತ್ತಾರೆ.

ರಾಜ್ಯಪ್ರಶಸ್ತಿ ಪುರಸ್ಕೃತ ಎಂ.ಕೆ.ರಮೇಶ ಆಚಾರ್ಯ ಅವರು ಸುಂದರ ಆಚಾರ್ಯರ ಸಂಸ್ಮರಣೆ ನಡೆಸಲಿದ್ದಾರೆ.

ತಾಳಮದ್ದಳೆ
ಸಭಾ ಕಾರ್ಯಕ್ರಮಕ್ಕೆ ಮೊದಲು ಮತ್ತು ಬಳಿಕ ‘ಕರ್ಣಾರ್ಜುನ’ ಹಾಗೂ ‘ವಾಲಿಮೋಕ್ಷ’ ತಾಳಮದ್ದಳೆ ಕೂಟಗಳು ಪ್ರಸಿದ್ಧ ಕಲಾವಿದರಿಂದ ಜರುಗಲಿವೆ. 2 ಗಂಟೆಯಿಂದ ನಡೆಯುವ ಕರ್ಣಾರ್ಜುನ ತಾಳಮದ್ದಳೆಯಲ್ಲಿ ಪೊಳಲಿ ದಿವಾಕರ ಆಚಾರ್ಯ, ಸುಧಾಸ್ ಕಾವೂರು, ಯೋಗೀಶ್ ಕುಂದಲ್ಕೋಡಿ ಹಿಮ್ಮೇಳದಲ್ಲಿ ಹಾಗೂ ಸತೀಶ ಆಚಾರ್ಯ ಮಾಣಿ, ಆಶೋಕ ಆಚಾರ್ಯ ವೇಣೂರು, ದಿನೇಶ ಶರ್ಮಾ ಕೊಯ್ಯೂರು, ಸದಾಶಿವ ಕುಲಾಲ್ ವೇಣೂರು, ಸದಾಶಿವ ಆಚಾರ್ಯ ವೇಣೂರು, ಬಂಟ್ವಾಳ ಜಯರಾಮ ಆಚಾರ್ಯ ಅವರು ಮುಮ್ಮೇಳದಲ್ಲಿ ಅರ್ಥ ಹೇಳಲಿದ್ದಾರೆ.

ಬಳಿಕ ನಡೆಯುವ ವಾಲಿ ಮೋಕ್ಷ ಕೂಟದಲ್ಲಿ, ರವಿಚಂದ್ರ ಕನ್ನಡಿಕಟ್ಟೆ, ಚಂದ್ರಶೇಖರ ಭಟ್ ಕೊಂಕಣಾಜೆ, ಯೋಗೀಶ ಆಚಾರ್ಯ ಉಳೆಪಾಡಿ ಹಿಮ್ಮೇಳದಲ್ಲಿ ಹಾಗೂ ಎಂ.ಕೆ.ರಮೇಶ ಆಚಾರ್ಯ, ಜಬ್ಬಾರ್ ಸಮೊ ಸಂಪಾಜೆ, ಪೂಕಳ ಲಕ್ಷ್ಮೀನಾರಾಯಣ ಭಟ್, ದಿವಾಕರ ಆಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ ರಂಗದಲ್ಲಿ ವಿಜೃಂಭಿಸಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು