ಶೂದ್ರ ತಪಸ್ವಿನಿ, ಸತಿ ಸೀಮಂತಿನಿ ಮುಂತಾದ ಪ್ರಸಂಗ ರಚನೆಕಾರ ಕಂದಾವರ ರಘುರಾಮ ಶೆಟ್ಟಿ ಇನ್ನಿಲ್ಲ


ಕುಂದಾಪುರ:
ಚೆಲುವೆ ಚಿತ್ರಾವತಿ, ಶೂದ್ರ ತಪಸ್ವಿನಿ ಮುಂತಾದ ಜನಪ್ರಿಯ ಸಾಮಾಜಿಕ ಕಥಾನಕಗಳ ಯಕ್ಷಗಾನ ಪ್ರಸಂಗ ರಚಿಸಿದ್ದ ಶಿಕ್ಷಕ, ಅರ್ಥಧಾರಿ ಪ್ರಸಂಗಕರ್ತ ಕಂದಾವರ ರಘುರಾಮ ಶೆಟ್ಟಿ (89) ಬುಧವಾರ  ನಿಧನರಾದರು.

ಕಂಡ್ಲೂರು ನೇತಾಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ-ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ 35 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದ ಅವರು, ಚೆಲುವೆ ಚಿತ್ರಾವತಿ, ರತಿ ರೇಖಾ, ಶ್ರೀ ದೇವಿ ಬನಶಂಕರಿ ಮತ್ತು ಶೂದ್ರ ತಪಸ್ವಿನಿ ಮುಂತಾದ ಪ್ರಸಂಗಗಳನ್ನು ರಚಿಸಿ ಜನಮಾನ್ಯರಾಗಿದ್ದರು.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ.

ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಕಂದಾವರರು, ಯಕ್ಷಗಾನ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಪ್ರಸಂಗ ಕರ್ತನಾಗಿ, ಅರ್ಥಧಾರಿಯಾಗಿ, ಹವ್ಯಾಸಿ ನಾಟಕ ಕಲಾವಿದನಾಗಿದ್ದ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ (ಈಗ ಉಡುಪಿ ಜಿಲ್ಲೆಯ) ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಕಂದಾವರ ಎಂಬಲ್ಲಿ 1936ರಲ್ಲಿ ಜನಿಸಿದರು. ಅವರ ತಂದೆ, ಕರ್ಕಿ ಸದಿಯಣ್ಣ ಶೆಟ್ಟಿ. ತಾಯಿ ಕಂದಾವರ ಪುಟ್ಟಮ್ಮನವರು. ರಘುರಾಮ ಶೆಟ್ಟರು ಪತ್ನಿ, ಮಕ್ಕಳು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಮಾದರಿ ಶಿಕ್ಷಕ ಪ್ರಶಸ್ತಿ ಪಡೆದಿರುವ ಅವರು, ಸಾಹಿತ್ಯ, ಸಂಗೀತ, ಯಕ್ಷಗಾನಗಳ ಬಗ್ಗೆ ಆಳವಾದ ಒಲವು ಹೊಂದಿದ್ದು, ವಿದ್ಯಾರ್ಥಿ ದೆಸೆಯಲ್ಲೇ ಮಕ್ಕಳ ಯಕ್ಷಗಾನಕ್ಕೆ ಭಾಗವತಿಕೆ ಮಾಡಿ ಬಾಲ ಭಾಗವತ ಎಂಬ ಹೆಸರು ಗಳಿಸಿದ್ದರು. ದಿವಂಗತ ಎಂ. ಎಂ. ಹೆಗ್ಡೆಯವರ ಕೂಟದಲ್ಲಿ ಹವ್ಯಾಸಿ ವೇಷಧಾರಿಯಾಗಿದ್ದರು.

ಡೇರೆ ಮೇಳಗಳಿಗೆ ಕಲೆಕ್ಷನ್ ಮಾಡಿಸಿಕೊಡಬಲ್ಲ ಪ್ರಸಂಗಗಳನ್ನು ಹೆಣೆಯುವ ಮೂಲಕ ಯಕ್ಷಗಾನದ ಸಾಹಿತ್ಯ ಲೋಕದಲ್ಲಿ ಹೊಸ ಸಂಚಲನವನ್ನು ಮೂಡಿಸಿದವರು ಅವರು. ಶೂದ್ರ ತಪಸ್ವಿನಿ, ಚೆಲುವೆ ಚಿತ್ರಾವತಿ, ಸತಿ ಸೀಮಂತಿನಿ, ರತಿರೇಖಾ, ಸೀತಾ ಪಾರಮ್ಯ ಹೀಗೆ 33 ಕ್ಕೂ ಹೆಚ್ಚು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದ ಇವರು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿಯೂ, ಪುರಾಣ ಪ್ರವಚನಗಳಲ್ಲಿ ಗಮಕಿಯಾಗಿ, ವ್ಯಾಖ್ಯಾನಕಾರರಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಕಲಾ ಸೇವೆಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಬಂದಿವೆ.

ಮೃತರ ಆತ್ಮಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಯಕ್ಷಗಾನ.ಇನ್ (Yakshagana.in) ಹಾರೈಸುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು