ಅದ್ಭುತ ಪ್ರದರ್ಶನ ನೀಡಿ, ಪಾತ್ರ ಮುಗಿದ ಬಳಿಕ ಹೃದಯಾಘಾತದಿಂದ ಮಹಿಷ ವೇಷಧಾರಿ ನಿಧನ

ಸೌಡದಲ್ಲಿ ಬುಧವಾರ ರಾತ್ರಿ ರಂಗಸ್ಥಳಕ್ಕೆ ಹೊರಡುವ ಮುನ್ನ ಅಭಿಮಾನಿಗಳೊಬ್ಬರು ತೆಗೆದ ಫೋಟೊಗೆ ಪೋಸ್ ಕೊಟ್ಟಿದ್ದ ಮಹಿಷ ಪಾತ್ರಧಾರಿ ಈಶ್ವರ ಗೌಡ ನೆಮ್ಮಾರ್

ಕುಂದಾಪುರ: ಪ್ರಸಿದ್ಧ ಯಕ್ಷಗಾನ ಕಲಾವಿದ, ಮಂದಾರ್ತಿ ಮೇಳದಲ್ಲಿ ದೇವೀಮಹಾತ್ಮ್ಯೆ ಆಖ್ಯಾನದಲ್ಲಿ ಮಹಿಷಾಸುರ ಪಾತ್ರ ನಿರ್ವಹಿಸುತ್ತಿದ್ದ ಈಶ್ವರ ಗೌಡ ನೆಮ್ಮಾರ್ ಅವರು ಮಹಿಷ ವಧೆಯ ಬಳಿಕ ವೇಷ ಕಳಚುವ ಸಂದರ್ಭದಲ್ಲಿ ಹೃದಯಾಘಾತಕ್ಕೀಡಾಗಿ ನಿಧನರಾಗಿದ್ದಾರೆ.
ಕುಂದಾಪುರ ಬಳಿಯ ಸೌಡ ಎಂಬಲ್ಲಿ ನ.19ರ ಬುಧವಾರ ರಾತ್ರಿ ಮಂದಾರ್ತಿ ಮೇಳದ 2ನೇ ಸೆಟ್‌ನ ಯಕ್ಷಗಾನ ಬಯಲಾಟವಿತ್ತು. ಬಣ್ಣದ ವೇಷಧಾರಿ ಈಶ್ವರ ಗೌಡ ಅವರು ಮಹಿಷಾಸುರನ ಪಾತ್ರವನ್ನು ಅದ್ಭುತವಾಗಿಯೇ ನಿರ್ವಹಿಸಿದ್ದರು. ಆದರೆ ಮಹಿಷ ವಧೆಯ ಸಂದರ್ಭದಲ್ಲಿ ಒಂದಿಷ್ಟು ಸುಸ್ತಾದಂತೆ ರಂಗದಲ್ಲಿ ಕಂಡುಬಂದಿತ್ತು. ವಧೆಯ ಬಳಿಕ ವೇಷ ಕಳಚುತ್ತಿದ್ದಾಗ ಹೃದಯಾಘಾತ ಸಂಭವಿಸಿದೆ. ಸಂಪೂರ್ಣ ವೇಷ ಕಳಚುವ ಮುನ್ನ ಈ ದುರಂತ ಸಂಭವಿಸಿದ್ದು, ತಕ್ಷಣವೇ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ವೇಷದಲ್ಲಿರುವಾಗಲೇ ಅವರು ಕಲಾಮಾತೆಯ ಪಾದವನ್ನೈದಿರುವುದು ಯಕ್ಷಗಾನದ ಅಭಿಮಾನಿಗಳನ್ನು ಆಘಾತಕ್ಕೀಡುಮಾಡಿದೆ.

ವೇಷ-ಭೂಷಣ ಕಳಚಿ, ಮೇಕಪ್ ತೆಗೆಯುತ್ತಿದ್ದಾಗ ಕೈ ಕಾಲು ತಣ್ಣಗಾಗಿ, ತೀವ್ರ ತೊಂದರೆ ಕಾಣಿಸಿಕೊಂಡಿದ್ದು, ವಾದ್ಯದವರ ಕಾರಿನಲ್ಲಿ ಹಾಲಾಡಿಗೆ ಕರೆದೊಯ್ಯಲಾಯಿತು. ಆದರೆ ಅವರು ಅವರು ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.

ಮೂಲತಃ ಶೃಂಗೇರಿ ಸಮೀಪದ ನೆಮ್ಮಾರ್ ನಿವಾಸಿಯಾಗಿರುವ ಈಶ್ವರ ಗೌಡ ಅವರು ಬಣ್ಣದ ವೇಷಧಾರಿಯಾಗಿ, ಎದುರು ವೇಷದ ಪಾತ್ರಗಳ ಮೂಲಕ ಜನಾನುರಾಗ ಗಳಿಸಿದ್ದರು. ಅವರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಈಶ್ವರ ಗೌಡರು (51) ಶಿವರಾಜಪುರ, ಮೇಗರವಳ್ಳಿ, ಮಡಾಮಕ್ಕಿ, ಅಮೃತೇಶ್ವರೀ, ಮಂದಾರ್ತಿ ಮೇಳಗಳಲ್ಲಿ ಸುಮಾರು ಮೂರು ದಶಕಗಳಿಂದ ಕಲಾಸೇವೆ ಮಾಡುತ್ತಾ ಬಂದಿದ್ದರು. ಪೌರಾಣಿಕ ಪುರುಷ ಪಾತ್ರಗಳನ್ನು ಸಮರ್ಥವಾಗಿ ರಂಗದಲ್ಲಿ ಪ್ರಸ್ತುತಗೊಳಿಸುವ ಕಲಾಸಿದ್ಧಿ ಪಡೆದಿದ್ದರು. ಅಂತ್ಯ ಸಂಸ್ಕಾರ ಇಂದು ಶೃಂಗೇರಿ ಸನಿಹದ ನೆಮ್ಮಾರು ಗ್ರಾಮದ ಬುಕ್ಡಿಬೈಲಿನಲ್ಲಿ ಜರುಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು