ಡಿ.9: ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ 5ನೇ ವರ್ಷದ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ-2025

ಮೂಡುಬಿದಿರೆಯಲ್ಲಿ ಪ್ರಶಸ್ತಿ ಪ್ರದಾನ, ಲೀಲಾ ಸಂಸ್ಮರಣೆ, ಅಬ್ಬರತಾಳ, ಮಹಿಳಾ ಯಕ್ಷಗಾನ
ಮಂಗಳೂರು: ಯಕ್ಷಗಾನದ ಗುರು ದಂಪತಿ - ಲೀಲಾವತಿ ಬೈಪಾಡಿತ್ತಾಯ ಹಾಗೂ ಹರಿನಾರಾಯಣ ಬೈಪಾಡಿತ್ತಾಯ ಹೆಸರಿನಲ್ಲಿ ನೀಡಲಾಗುವ, 2025ನೇ ಸಾಲಿನ ಪ್ರತಿಷ್ಠಿತ ಶ್ರೀ ಹರಿಲೀಲಾ ಯಕ್ಷನಾದ ಪುರಸ್ಕಾರವನ್ನು ಹಿರಿಯ ಯಕ್ಷಗಾನದ ಮೇಲು ಮದ್ದಳೆಗಾರರಾಗಿರುವ ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ಯಕ್ಷಗಾನದ ಪ್ರಥಮ ಮಹಿಳಾ ಭಾಗವತರಾದ ಲೀಲಾವತಿ ಬೈಪಾಡಿತ್ತಾಯರ ಪ್ರಥಮ ವರ್ಷದ ಸಂಸ್ಮರಣೆಯೂ ನಡೆಯಲಿದೆ.

ಬೈಪಾಡಿತ್ತಾಯರು ಸ್ಥಾಪಿಸಿರುವ ಡಿಜಿ ಯಕ್ಷ ಫೌಂಡೇಶನ್ (ರಿ) ಸಹಯೋಗದಲ್ಲಿ, ಅವರ ಶಿಷ್ಯವೃಂದದವರ ಸಹಕಾರದಲ್ಲಿ ಡಿಸೆಂಬರ್ 09, 2025ರಂದು ಆಲಂಗಾರು ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಮೂಡುಬಿದಿರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಡಿಜಿ ಯಕ್ಷ ಫೌಂಡೇಶನ್ ನಿರ್ದೇಶಕ ಅವಿನಾಶ್ ಬೈಪಾಡಿತ್ತಾಯ ವಿವರಿಸಿದರು. ಪ್ರಶಸ್ತಿಯು ₹10,079 ನಗದು, ಬಿನ್ನವತ್ತಳೆ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ ಫಾಲೋ ಮಾಡಿ..   

2021ರಿಂದ ಆರಂಭವಾಗಿ ನಾಲ್ಕು ವರ್ಷಗಳಲ್ಲಿ ಇದುವರೆಗೆ ಯಕ್ಷಗಾನ ರಂಗದ ದಿಗ್ಗಜ ಹಿಮ್ಮೇಳವಾದಕರಾದ ಲಕ್ಷ್ಮೀಶ ಅಮ್ಮಣ್ಣಾಯ, ಪೆರುವಾಯಿ ನಾರಾಯಣ ಭಟ್, ಮಿಜಾರು ಮೋಹನ ಶೆಟ್ಟಿಗಾರ್ ಹಾಗೂ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ ಸಂದಿದೆ.

ಆದಿನ ಬೆಳಗ್ಗಿನಿಂದಲೇ ಬೈಪಾಡಿತ್ತಾಯರ ಶಿಷ್ಯರು ಹಾಗೂ ಅತಿಥಿ ಕಲಾವಿದರು ಲೀಲಾ ಅವರಿಗೆ ಯಕ್ಷಗಾನಾರ್ಚನೆ ನಡೆಸಿಕೊಡಲಿದ್ದಾರೆ. ಬಳಿಕ ಅಪರಾಹ್ನ 3.15ರಿಂದ ಬೈಪಾಡಿತ್ತಾಯ ಶಿಷ್ಯವೃಂದದಿಂದ ಚೆಂಡೆಗಳ ಜುಗಲ್ಬಂದಿ 'ಅಬ್ಬರತಾಳ', ಸಭಾ ಕಾರ್ಯಕ್ರಮ ನಡೆಯಲಿದೆ. ನಂತರ, ಪ್ರಥಮ ವ್ಯವಸಾಯಿ ಮಹಿಳಾ ಭಾಗವತರಾಗಿ, ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದ ಈಗ ನಮ್ಮನ್ನು ಅಗಲಿರುವ ಲೀಲಾ ಬೈಪಾಡಿತ್ತಾಯರಿಗೆ ವಿಶೇಷ ಗೌರವದ ರೀತಿಯಲ್ಲಿ ಸಂಪೂರ್ಣ ಮಹಿಳೆಯರೇ ಇರುವ 'ದಕ್ಷ ಯಜ್ಞ' ಯಕ್ಷಗಾನವು ಶ್ರೀಶ ಕಲಿಕಾ ಕೇಂದ್ರ, ತಲಕಳ ಇದರ ಕಲಾವಿದರಿಂದ ಜರುಗಲಿದೆ. 

ಯಕ್ಷಗಾನದ ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಅಧ್ಯಕ್ಷತೆಯಲ್ಲಿ ಆಲಂಗಾರು ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಈಶ್ವರ ಭಟ್ ಅವರು ದೀಪಪ್ರಜ್ವಲನೆ ಮಾಡುವರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣರು ಆಶೀರ್ವಚನ ನೀಡಲಿದ್ದು, ಹಿರಿಯ ವಿದ್ವಾಂಸ ಪ್ರೊ.ಎಂ.ಎಲ್.ಸಾಮಗರು ಲೀಲಾ ಬೈಪಾಡಿತ್ತಾಯರ ಸಂಸ್ಮರಣೆ ಮಾಡಲಿದ್ದಾರೆ. ಪ್ರಸಿದ್ಧ ಕಲಾವಿದ, ವಾಗ್ಮಿ ವಾಸುದೇವ ರಂಗಾಭಟ್ ಮಧೂರು ಅವರು 5ನೇ ವರ್ಷದ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪುರಸ್ಕೃತ ಪದ್ಯಾಣ ಶಂಕರನಾರಾಯಣ ಭಟ್ ಅವರನ್ನು ಅಭಿನಂದನಾ ನುಡಿಗಳಿಂದ ಗೌರವಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉದ್ಯಮಿ ಶ್ರೀಪತಿ ಭಟ್, ಮೂಡುಬಿದಿರೆ ಭಾಗವಹಿಸುವರು.

ಯಕ್ಷಗಾನದ ಪರಂಪರೆಯ ರಕ್ಷಣೆಯೊಂದಿಗೆ ಯಕ್ಷಗಾನ ಶಿಕ್ಷಣಕ್ಕೆ ಆದ್ಯತೆ ಹಾಗೂ ಕಲಾವಿದರನ್ನು ಗೌರವಿಸುವ ಈ ಕಾರ್ಯಕ್ಕೆ ಸಹೃದಯಿ ದಾನಿಗಳು ಕೈಜೋಡಿಸಬೇಕಾಗಿದೆ. ಡಿಜಿ ಯಕ್ಷ ಫೌಂಡೇಶನ್‌ಗೆ ನೀಡುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆಯ 80ಜಿ ಆಧಾರದಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ ಎಂದಿರುವ ಅವರು, ಎಲ್ಲ ಕಲಾಭಿಮಾನಿಗಳು ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪ್ರದಾನ ಸಮಿತಿಯ ಆನಂದ ಗುಡಿಗಾರ್, ನಾಗರಾಜ್ ಭಟ್ ನಕ್ರೆ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು