ವಾಗ್ದೇವಿಯ ವರಪುತ್ರ ಮಧೂರು ವಾಸುದೇವ ರಂಗ ಭಟ್ಟರು

ರಂಗದಲ್ಲಿ ವಾಸುದೇವ ರಂಗ ಭಟ್ಟರು

ತಾಳಮದ್ದಳೆ ಕಲೆಗೆ ಹೊಸ ಪ್ರೇಕ್ಷಕರನ್ನು ಸೆಳೆದು ತಂದವರಲ್ಲಿ ವಾಸುದೇವ ರಂಗ ಭಟ್ಟರು ಪ್ರಮುಖರು. ಅವರ ಜನ್ಮ ದಿನ ಇಂದು (ಜೂ.05). ಜನಮೆಚ್ಚಿದ ನೆಚ್ಚಿನ ಅರ್ಥದಾರಿ ವಾಸುದೇವ ರಂಗ ಭಟ್ಟರ ಕುರಿತು ಬರೆಯಲೇಬೇಕೆಂಬ ತುಡಿತ ಹೊಂದಿದ್ದ ಯಕ್ಷಪ್ರೇಮಿ ಸಂಕರ್ಷಣ ಉಪಾಧ್ಯಾಯ ಅವರು ತಮ್ಮ ಮನದ ಮಾತುಗಳನ್ನು ಅಕ್ಷರ ರೂಪಕ್ಕಿಳಿಸಿದ್ದಾರೆ.
ತಾಳಮದ್ದಳೆ ಕ್ಷೇತ್ರದಲ್ಲಿ ವಾಸುದೇವ ರಂಗ ಭಟ್ ಎಂಬ ಹೆಸರು ಮಿಂಚಿನ ಸಂಚಲನವನ್ನುಂಟು ಮಾಡುತ್ತದೆ. ಕಾರಣ ಅವರ ಅರ್ಥಗಾರಿಕೆಯಲ್ಲಿರುವ ಆಕರ್ಷಣಾತ್ಮಕ ಅಂಶಗಳು ಎನ್ನುವುದು ವಾಸ್ತವ ಸತ್ಯ.

1980ರ ಜೂನ್ 5ರಂದು ನಾರಾಯಣ ರಂಗ ಭಟ್ಟ-ಚಂದ್ರಾವತಿ ದಂಪತಿ ಪುತ್ರನಾಗಿ ವಾಸುದೇವ ರಂಗ ಭಟ್ಟರ ಜನನ. ಕಾಸರಗೋಡು ಜಿಲ್ಲೆಯ ಮಧೂರಿನ ಪ್ರಸಿದ್ಧ ಮಹಾಗಣಪತಿ ದೇವಾಲಯದ ಸಮೀಪವೇ ಇವರ ವಾಸ್ತವ್ಯ. ತಂದೆ ನಾರಾಯಣ ರಂಗ ಭಟ್ಟರು ಜ್ಯೋತಿಷ್ಯ ಶಾಸ್ತ್ರ ಪಾರಂಗತರು. ಜಿಲ್ಲೆ-ಪರಜಿಲ್ಲೆಗಳ ಪ್ರಸಿದ್ಧ ದೇವಾಲಯಗಳ ಅಷ್ಟಮಂಗಲ ಪ್ರಶ್ನೆಗಳಿಗೆ ಹೆಸರುವಾಸಿಯಾದ ಬದುಕು. ತಂದೆಯ ಹೆಸರಿಗೆ ಮುಕುಟ ಪ್ರಾಯರು ನಮ್ಮ ಹೆಮ್ಮೆಯ ವಾಸುದೇವ ರಂಗ ಭಟ್ಟರು. ನಾಮಧೇಯ 'ವಾಸುದೇವ' ಎಂದಾಗಿದ್ದರೂ 'ರಂಗ ಭಟ್' ಎಂಬ ಅಂಕಿತವು ಜನಾನುರಾಗಿತ್ವದ ಪ್ರತೀಕವಾಗಿ ಕಂಗೊಳಿಸುತ್ತಿದೆ.

ರಂಗ ಭಟ್ಪರ ಆಂತರ್ಯದಲ್ಲಿ ಹುದುಗಿದ್ದ ಅಮೂರ್ತ ರೂಪದ ಸುಪ್ತಾವಸ್ಥೆಯಲ್ಲಿದ್ದ ಪ್ರತಿಭೆಯನ್ನು ಮೂರ್ತ ರೂಪದ ಜಾಗೃತಾವಸ್ಥೆಗೆ ತಂದ ಶ್ರೇಯ ದಿವಾಣ ಶಿವಶಂಕರ ಭಟ್ಟರಿಗೆ ಸಲ್ಲುತ್ತದೆ. ಯಕ್ಷಗಾನದ ವೇಷಗಾರಿಕೆಯಲ್ಲಿ ಇವರ  ಕಲಾಪಯಣವು ಆರಂಭಗೊಳ್ಳುತ್ತದೆ. 4ನೇ ತರಗತಿಯ ವಿದ್ಯಾಭ್ಯಾಸದ ಸಮಯದಲ್ಲಿ ಶ್ರೀ ದಿವಾಣರಲ್ಲಿ ತೆಂಕುತಿಟ್ಟುವಿನ ನಾಟ್ಯಾಭ್ಯಾಸ ಮಾಡಿದ್ದ ರಂಗ ಭಟ್ಟರು, ತಾನು ಮಾಡುತ್ತಿದ್ದ ವೇಷಗಳಿಗೆ ಅವರಿಂದಲೇ ಪಾತ್ರಗಳ ಅರ್ಥ ಕೇಳಿ ತಿಳಿದುಕೊಂಡಿದ್ದರು.

ತನ್ನ 8ನೇ ವರ್ಷದಲ್ಲಿಯೇ 'ಲವ-ಕುಶ ಕಾಳಗ'ದ ಲವನಾಗಿ ಮಿಂಚಿದರು. ಬಳಿಕ ಮಧೂರು ಕ್ಷೇತ್ರದ ಜಾತ್ರೆಯಲ್ಲಿ ಇವರು ಮಾಡಿದ 'ವೀರಮಣಿ ಕಾಳಗ'ದ 'ಶುಭಾಂಗ' ಪಾತ್ರದ ಮಾತು ಕೇಳಿ ರವಿಶಂಕರ ಸಿ.ಎಚ್ ಎಂಬ ಹಿರಿಯ ಭಾಗವತರು ಇವರನ್ನು ಮಧೂರಿನ ಸಮೀಪದ ಉಳಿಯ ಶ್ರೀ ಧನ್ವಂತರೀ ಯಕ್ಷಗಾನ ಕಲಾಸಂಘದಲ್ಲಿ ವಾರದ ಅಭ್ಯಾಸ ಕೂಟದಲ್ಲಿ ಅರ್ಥ ಹೇಳಬೇಕೆಂದು ಉಳಿಯಕ್ಕೆ ಕರೆದೊಯ್ದಿದ್ದರು.

ಕೇವಲ 15ರ ಬಾಲಕನಾಗಿದ್ದ ಸಂದರ್ಭವದು. 'ಸೀತಾಪಹಾರ'ದ ಲಕ್ಷ್ಮಣನಾಗಿ ತಾಳಮದ್ದಳೆ ಎಂಬ ಅಪ್ರತಿಮ ಕಲಾ ಪ್ರಕಾರಕ್ಕೆ ಪ್ರವೇಶ ಪಡೆಯುತ್ತಾರೆ. "ಪಾತ್ರದ ಪದಗಳ ಪರಿಚಯವೂ ಇಲ್ಲದೆ, ತುಂಬಾ ಹೆದರಿಕೆಯಿಂದ ಅಲ್ಲಿ ಅರ್ಥವನ್ನು ಹೇಳಿದ್ದೆ" ಎಂದು ಮೆಲುಕು ಹಾಕುತ್ತಾರೆ. 50 ವರ್ಷಗಳಿಂದಲೂ ಅಲ್ಲಿ ಪ್ರತೀ ವಾರ ನಡೆಯುತ್ತಿದ್ದ ಅಭ್ಯಾಸ ಕೂಟಗಳಲ್ಲಿ ಇವರೂ ಸೇರಿಕೊಂಡು, ಸಹವರ್ತಿಗಳಾದ ಅನುಭವಿ ಅರ್ಥಧಾರಿಗಳ ಮೂಲಕವೂ ಅನುಭವಸಂಪನ್ನನಾದರು.

10 ನೇ ತರಗತಿಯ ಬಳಿಕ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉಡುಪಿಗೆ ಬಂದಾಗ ಇವರ ಕಲಾಸಕ್ತಿಗೆ ಉತ್ತೇಜನ ಲಭಿಸುತ್ತದೆ. ಅರ್ಥಗಾರಿಕೆ ಕ್ಷೇತ್ರದ ಉದ್ಧಾಮರೆಂದೆನಿಸಿದ್ದ ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟರ ಅರ್ಥಗಳನ್ನು ನಿಕಟವಾಗಿ, ಬೆರಗಿನಿಂದ ಕೇಳಿ ಗಮನಿಸತೊಡಗಿದ ಕಾಲವದು. ಶೇಣಿಯವರ ಅರ್ಥದಲ್ಲಿ ಯಾವುದೋ ಒಂದು ಸೆಳೆತ ಇವರನ್ನು ಆವರಿಸುತ್ತದೆ. ಬಳಿಕ ಅವರ ಒಡನಾಟ, ಸಾಮೀಪ್ಯ ಇವರನ್ನು ಅರ್ಥದ ಅಭ್ಯಾಸಿಯನ್ನಾಗಿ ರೂಪಿಸುತ್ತದೆ. "ಇಂದಿಗೂ ಪಾತ್ರಶಿಲ್ಪ, ಅರ್ಥ ವಿನ್ಯಾಸ, ನವೀನ ಚಿಂತನೆಗಳ ಅಳವಡಿಕೆ, ಮುಂತಾದ ಬಹುತೇಕ ಎಲ್ಲ ವಿಷಯಗಳಿಗೂ ಶೇಣಿಯವರ ಸ್ಮರಣೆಯೇ ನನಗೆ ಮಾರ್ಗದರ್ಶಕ" ಎಂದು ಸ್ಮರಿಸುತ್ತಾರೆ.

ಬಳಿಕ ಪರಿಚಿತರಾಗಿ ಪುತ್ರವಾತ್ಸಲ್ಯ ತೋರಿ ನಿಕಟರಾದ ದ್ವಿವೇದೀ ವಿದ್ವಾಂಸರಾದ, ಘನಪಾಠಿ ದಿ|ಶ್ರೀ ಕೊರ್ಗಿ ವೇಙ್ಕಟೇಶ್ವರ ಉಪಾಧ್ಯಾಯರು ಇವರ ಭಾಷೆಯನ್ನು ತಿದ್ದಿ ಅದರ ಹೊಳಪು ಹೆಚ್ಚಿಸಲು ಯತ್ನಿಸಿದರು. ಅರ್ಥದಲ್ಲಿನ ಬೇಕು-ಬೇಡಗಳಿಗೆ ಇವರ ಆಂತರ್ಯದಲ್ಲಿ ಸ್ಪಷ್ಟತೆ ಮೂಡಿದ್ದು ಕೊರ್ಗಿಯವರಿಂದಾಗಿ.

ಬಳಿಕ ಉಡುಪಿಯಲ್ಲಿ ಸಹವಾಸಿಯಾಗಿದ್ದ, ಹುಟ್ಟಿನಿಂದ ಬಂದ ಅಂಧತ್ವವನ್ನು ತನ್ನ ವೈಚಾರಿಕ ಬೆಳಕಿನಿಂದ ನೀಗಲು ಸತತ ಶ್ರಮಿಸುತ್ತಿದ್ದ ಸನ್ಮಿತ್ರ ಈಂದುಗುಳಿ ಗೋಪಾಲಕೃಷ್ಣ ಭಟ್ಟರ ಜೊತೆಗಿನ ವಾಗ್ವಾದಗಳು, ಹಿರಿಯ ಹಿತೈಷಿ ತಡಂಬೈಲು ರಮಾನಾಥ ರಾಯರು ಇವರ ಔನ್ನತ್ಯಕ್ಕಾಗಿ ಇವರೊಡನೆ ನಡೆಸುತ್ತಿದ್ದ ವಿಚಾರ ವಿನಿಮಯಗಳು ಅರ್ಥಧಾರಿಯೆನಿಸಲು ತುಂಬ ಉಪಯುಕ್ತವಾದುವು.

"ದಿವಾಣರನ್ನು ಹೊರತುಪಡಿಸಿದರೆ ಮೇಲೆ ಹೇಳಿದ ಯಾರೂ ತಮ್ಮನ್ನು ಗುರುವೆಂದು ತಿಳಿದು ನನಗೆ ಆ ನೆಲೆಯಲ್ಲಿ ಬೋಧಿಸಿದ್ದಿಲ್ಲ. ಆದರೆ ಅವರಿಂದ ಲಭ್ಯವಾದುದರಲ್ಲಿ ನನ್ನಿಂದ ಸಾಧ್ಯವಾದಷ್ಟನ್ನು ಶಿಷ್ಯಭಾವದಲ್ಲಿ ನಾನು ಸ್ವೀಕರಿಸಿದ್ದು ಸತ್ಯ" ಎಂದು ರಂಗ ಭಟ್ಟರು ಹೇಳುವುದು ಶಿಷ್ಯ ಎನಿಸಿಕೊಂಡವನ ಧರ್ಮ ಮತ್ತು ನಿಷ್ಠೆಯನ್ನು ಪ್ರಚುರಪಡಿಸುತ್ತದೆ.

ವಿಷ್ಣು, ಕೃಷ್ಣ, ರಾಮ, ಭೀಷ್ಮ, ರುಕ್ಮಾಂಗದ, ಮೋಹಿನಿ, ರುಕ್ಮ, ಅರ್ಜುನ, ಸಂಜಯ, ಶಲ್ಯ, ಕರ್ಣ, ಜಮದಗ್ನಿ, ಭಾರ್ಗವ, ಕಾರ್ತವೀರ್ಯ ಮುಂತಾದ ಸಾತ್ವಿಕ, ರಾಜಸ, ತಾಮಸ ಈ ಮೂರೂ ರೀತಿಯ ಪಾತ್ರಗಳಿಗೆ ಅರ್ಥ ಹೇಳಿರುವ ಇವರು "ನನ್ನ ಅಭಿವ್ಯಕ್ತಿಗೆ ಸಹಜವಾಗಿ ಒಗ್ಗುವ ರಾಮ, ಕೃಷ್ಣಾದಿ ಪಾತ್ರಗಳನ್ನೇ ಹೆಚ್ಚಾಗಿ ಆಟ-ಕೂಟಗಳಲ್ಲಿ ಮಾಡುತ್ತಾ ಬಂದಿದ್ದೇನೆ" ಎಂದು ಹೇಳುತ್ತಾರೆ.

ಅರ್ಥಗಾರಿಕೆ ಸತ್ವಪೂರ್ಣವಾಗಬೇಕೆಂದರೆ ಅದಕ್ಕೊಂದು ತೀಕ್ಷ್ಣತೆ, ತಾರ್ಕಿಕತೆ, ರಂಜಕತೆ, ವ್ಯಂಜಕತೆಗಳು ಇರಬೇಕು. ಇದನ್ನು ಅರಿತುಕೊಂಡು, ಅದಕ್ಕನುಗುಣವಾಗಿ ಇರಬೇಕಾದ ಅವಿಚ್ಛಿನ್ನವಾದ ಅಧ್ಯಯನಶೀಲತೆ, ಪ್ರತ್ಯುತ್ಪನ್ನಮತಿತ್ವ ಮುಂತಾದ ಗುಣಗಳನ್ನು ತನ್ನಲ್ಲಿ ಅಳವಡಿಸಿಕೊಂಡು, ಅರ್ಥರಸಿಕರಲ್ಲಿ ರಂಜನೀಯವಾದ ಅರ್ಥರಸಾಯನವನ್ನೀಯುವ ರಂಗ ಭಟ್ಟರ ಕಾರ್ಯವು ಶ್ಲಾಘನೀಯವಾದುದು.

ಸಿದ್ದಕಟ್ಟೆದ್ವಯರು, ಕುಂಬ್ಳೆ, ಪ್ರಭಾಕರ ಜೋಷಿ, ಶಂಭುಶರ್ಮ, ವಾಸುದೇವ ಸಾಮಗ, ಸುಣ್ಣಂಬಳ, ಹಿರಣ್ಯ, ಉಜಿರೆ, ಜಬ್ಬಾರ್, ಕಲ್ಚಾರ್, ಸಂಕದಗುಂಡಿ, ಪೆರ್ಮುದೆ ಮುಂತಾದ ಸುಪ್ರಸಿದ್ಧರೊಂದಿಗಿನ ವಾದ-ಪ್ರತಿವಾದಗಳು ಇವರ ಜನಪ್ರಿಯತೆಗೆ ಹಿಡಿದ ಕೈಗನ್ನಡಿ.

ವಾದ-ಸಂವಾದ, ಮಂಡನ-ಖಂಡನ, ಚರ್ಚೆ, ಪೀಠಿಕೆ, ಸ್ವಗತ ಹೀಗೇ ಎಲ್ಲಾ ವಿಭಾಗದಲ್ಲಿಯೂ ಪ್ರಬುದ್ಧವಾದ ಕನ್ನಡ ಸಾಹಿತ್ಯದ ಬಳಕೆ, ಭಾಷೆಯ ಮೇಲಿನ ಹಿಡಿತ, ಸುಸ್ಪಷ್ವವಾದ ಮಾತು, ಸಾಂದರ್ಭಿಕವಾಗಿ ಸಂಸ್ಕೃತದ ಬಳಕೆ,  ಪಾತ್ರ ಪ್ರಭುತ್ವ, ಪುನರಾವರ್ತನೆ ಇಲ್ಲದ ವಿಶಿಷ್ಟ ರೀತಿಯ ಚಿಂತನಾಪ್ರಸ್ತುತಿ, ಪ್ರಸಂಗದ ಕವಿಯ ಆಶಯಕ್ಕೆ ಅನುಗುಣವಾಗಿ ತನ್ನ ವೈಚಾರಿಕತೆಯ ಮಂಡನಾಶೈಲಿ... ಇವೆಲ್ಲವೂ ವಾಸುದೇವ ರಂಗ ಭಟ್ಟರ ಅರ್ಥಗಾರಿಕೆಯಲ್ಲಿ ಕಂಡುಬರುವ ವೈಶಿಷ್ಟ್ಯಗಳು.

ಇವರ ಅರ್ಥವನ್ನು ನಾನು ಹೆಚ್ಚು ಕೇಳಿದವನಲ್ಲವಾದರೂ ಕೇಳಿದ್ದರಲ್ಲೆಲ್ಲಾ ಈ ವೈಶಿಷ್ಟ್ಯವು ನನ್ನ ಗಮನಕ್ಕೆ ಬಂದದ್ದು ಸತ್ಯ. ಸಿದ್ಧಿ ಮತ್ತು ಪ್ರಸಿದ್ಧಿ ಎರಡನ್ನೂ ಗಳಿಸಿಕೊಂಡು ನಮ್ಮಂತಹ ಸಾಮಾನ್ಯ ಪ್ರೇಕ್ಷಕರನ್ನೂ ರಂಜಿಸುತ್ತಿರುವವರು ನಮ್ಮ ರಂಗ ಭಟ್ಟರು. ಹರೆಯದ ಹುಡುಗರಿಂದ ಹಿಡಿದು ವೃದ್ಧರವರೆಗಿನ ಶ್ರಾವಕರಲ್ಲಿಯೂ ತಾದಾತ್ಮ್ಯಚಿತ್ತತೆಯನ್ನು ಉಂಟು ಮಾಡುವವರು.

ಉಡುಪಿಯ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸಾಹಿತ್ಯ ತರಗತಿ ತನಕ ಕಲಿತು, ಪ್ರತಿಷ್ಠಿತ ವೈಕುಂಠ ಬಾಳಿಗ ಕಾನೂನು ಕಾಲೇಜಿನಲ್ಲಿ LLB ಪದವಿ ಪಡೆದಿದ್ದಾರೆ. ಪ್ರಕೃತ ಅನುಕೂಲತೆಗಾಗಿ ಉಡುಪಿಯಲ್ಲಿಯೂ ಮನೆ ಮಾಡಿಕೊಂಡು ಮಡದಿ ಪದ್ಮಿನಿಯೊಂದಿಗೆ ನೆಲೆಸಿದ್ದಾರೆ. ಅಪರೂಪಕ್ಕೆ ವೇಷವನ್ನೂ ಮಾಡುತ್ತಾ, ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ದಿಗ್ಗಜ ಕಲಾವಿದರನ್ನೊಳಗೊಂಡ ಹನುಮಗಿರಿ ಮೇಳದಲ್ಲಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಗಾನ ವೈಭವದ ನಿರೂಪಣೆಯಲ್ಲಿಯೂ ತೊಡಗಿಕೊಂಡವರು.

ಸ್ನಿಗ್ಧವಾದ ನಗುವಿನಿಂದ ಎಲ್ಲರಲ್ಲಿಯೂ ಮಾತನಾಡುವ ಸ್ವಭಾವ, ಹೃದಯ ವೈಶಾಲ್ಯದಿಂದ ಕೂಡಿದ, ಸದಾ ಹಸನ್ಮುಖಿಯಾಗಿರುವ ವಿರಾಟ್ ವ್ಯಕ್ತಿತ್ವ ಇವರದು.

ವಾಗ್ದೇವಿಯ ಪೂರ್ಣಾನುಗ್ರಹಕ್ಕೆ ಪಾತ್ರರಾಗಿರುವ ವಾಸುದೇವ ರಂಗ ಭಟ್ಟರ ಕೀರ್ತಿಯು ಮತ್ತಷ್ಟು ಪಸರಿಸಲಿ, ದೀಪ ಸದೃಶವಾದ ವ್ಯಕ್ತಿತ್ವವು ಪ್ರಜ್ವಲಿಸುವಂತೆ "ವಿಶ್ವಂಭರ" ನಾಮಕನಾದ ಮಧೂರು ಮಹಾಗಣಪತಿಯು ಅನುಗ್ರಹಿಸಲಿ ಎನ್ನುವ ಪ್ರಾರ್ಥನೆ.

ಲೇಖನ: ಸಂಕರ್ಷಣ ಉಪಾಧ್ಯಾಯ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು