ದೇವ ವೈದ್ಯ ಅಶ್ವಿನೀ ದೇವತೆಗಳು

ಯಕ್ಷಗಾನ ದೇವೇಂದ್ರ ಒಡ್ಡೋಲಗ
ದೇವೇಂದ್ರ ಒಡ್ಡೋಲಗ. ಚಿತ್ರಕೃಪೆ: ನವೀನ ಕೃಷ್ಣ ಭಟ್
ಪುರಾಣ ತಿಳಿಯೋಣ ಸರಣಿ
ಅಶ್ವಿನೀ ದೇವತೆಗಳು ದೇವತೆಗಳ ವೈದ್ಯರೆಂದೆನಿಸಿದ್ದಾರೆ. ಇವರಿಗೆ ಅಶ್ವಿನೀ ಕುಮಾರರೆಂದೂ ಹೆಸರಿದೆ.

ಸೂರ್ಯಪತ್ನಿಯಾದ ಸಂಜ್ಞಾದೇವಿ ಕುದುರೆಯ ರೂಪ ತಾಳಿದ್ದ ಸಮಯದಲ್ಲಿ  ಜನಿಸಿದವರಿವರು. ಒಮ್ಮೆ ಸೂರ್ಯನ ಪತ್ನಿಯಾದ ಸಂಜ್ಞಾದೇವಿ ಸೂರ್ಯನ ಉರಿಯನ್ನು ಸಹಿಸಲಾಗದೆ, ತನ್ನಂತೆಯೇ ಇರುವ ಛಾಯಾದೇವಿಯನ್ನು ಸೃಷ್ಟಿಸಿ ಅವಳನ್ನು ಸೂರ್ಯನ ಪತ್ನಿಯಾಗಿರುವಂತೆ ನೇಮಿಸಿ, ಹೊರಟು ಹೋಗುತ್ತಾಳೆ.

ಕೆಲ ಕಾಲದ ನಂತರ ಉತ್ತರ ಕುರುಭೂಮಿಯಲ್ಲಿ ಅಶ್ವರೂಪದಲ್ಲಿ ಮೇಯುತ್ತಿದ್ದ ಪತ್ನಿಯಾದ ಸಂಜ್ಞೆಯನ್ನು ಗುರುತಿಸಿದ ಸೂರ್ಯನು, ತಾನೂ ಅಶ್ವರೂಪ ತಾಳಿ ಆಕೆಯನ್ನು ಸೇರುತ್ತಾನೆ. ಸಂಜ್ಞೆ ಸೂರ್ಯನನ್ನು ಗುರುತಿಸಲಾಗದೆ ಪರಪುರುಷನೆಂದು ಭಾವಿಸಿ ಸೂರ್ಯನ ತೇಜಸ್ಸನ್ನು ಮೂಗಿನಿಂದ ಹೊರಗೆ ಬಿಡುತ್ತಾಳೆ. ಆ ತೇಜಸ್ಸಿನಿಂದ ಹುಟ್ಟಿದವರೇ ಅಶ್ವಿನೀ ದೇವತೆಗಳು. ಈ ಅವಳಿ ಮಕ್ಕಳಲ್ಲಿ ಹಿರಿಯ ಪುತ್ರನ ಹೆಸರು "ನಾಸತ್ಯ" ಹಾಗೂ ಎರಡನೆಯದಾಗಿ ಜನಿಸಿದವನು "ದಸ್ರ".  'ನಾಸತ್ಯ' ಆಯುರ್ವೇದ ನಿಪುಣನಾದರೆ, 'ದಸ್ರ' ಔಷಧೀಯ ಶಾಸ್ತ್ರದಲ್ಲಿ ಪಂಡಿತ. ನಂತರ ಸಂಜ್ಞೆಯು ಸೂರ್ಯನನ್ನು ಗುರುತಿಸಿ ಪತಿಯ ಸಂಗಡ ತೆರಳುತ್ತಾಳೆ. ಈ ವೃತ್ತಾಂತವು ಮತ್ಸ್ಯಪುರಾಣದಲ್ಲಿ ಬಂದಿದೆ.


ಅಶ್ವಿನೀ ದೇವತೆಗಳು ಮಹಾನ್ ರೂಪವಂತರೆಂದು ಮಹಾಭಾರತ, ಭಾಗವತ, ವಿಷ್ಣುಪುರಾಣಗಳು ಹೇಳುತ್ತವೆ.

ಇವರು ಚ್ಯವನ ಮುನಿಯ ಪತ್ನಿಯಾದ ಸುಕನ್ಯೆಯ ಪಾತಿವ್ರತ್ಯಕ್ಕೆ ಮೆಚ್ಚಿ, ಅವನಿಗೆ ಅವನ ದೃಷ್ಟಿ,  ಸೌಂದರ್ಯ ಹಾಗೂ ತಾರುಣ್ಯಗಳನ್ನು ಅನುಗ್ರಹಿಸುತ್ತಾರೆ.  ಪ್ರತಿಯಾಗಿ ಚ್ಯವನನ  ಮೂಲಕ ಶರ್ಯಾತಿ ಮಹಾರಾಜ ಮಾಡಿದ ಯಜ್ಞದಲ್ಲಿ ಇತರ ದೇವತೆಗಳಂತೆಯೇ ಇವರೂ ಹವಿರ್ಭಾಗವನ್ನು ಪಡೆದರು.

ಆಪೋದನೆಂಬ ಧೌಮ್ಯ ಮುನಿಯ ಅಂಧಶಿಷ್ಯನಾದ ಉಪಮನ್ಯುವು ಇವರನ್ನಾಶ್ರಯಿಸಿ, ಕಳೆದುಹೋದ ದೃಷ್ಟಿಯನ್ನು ಮರಳಿ ಪಡೆದಿದ್ದನು. ಪಾಂಡು ಮಹಾರಾಜನ ಎರಡನೆಯ ಹೆಂಡತಿ ಮಾದ್ರಿಯಲ್ಲಿ ಹುಟ್ಟಿದ ನಕುಲ ಸಹದೇವರು ಇವರ ವರಪ್ರಸಾದದಿಂದಲೇ ಜನಿಸಿದವರು.

ಅಶ್ವಿನೀ ದೇವತೆಗಳು ಸದಾ ಎಲ್ಲ ಕಡೆಯೂ ನೆಲೆಸಿ ಜನರಾಡುವ ಒಳ್ಳೆಯ, ಕೆಟ್ಟ ಮಾತುಗಳಿಗೆಲ್ಲಾ ಅಸ್ತು ಎನ್ನುತ್ತಾರೆಂದು ನಂಬಿಕೆಯಿದೆ. ಹಾಗಾಗಿ ಮನುಷ್ಯ ತನ್ನ ಜೀವನದುದ್ದಕ್ಕೂ ಒಳ್ಳೆಯ ಮಾತುಗಳನ್ನಾಡುತ್ತಾ ಆರೋಗ್ಯಕರವಾಗಿ ಬದುಕಬೇಕೆನ್ನುತ್ತಾರೆ.

ಸಂ.: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು