ಪುರಾಣ ತಿಳಿಯೋಣ: ಸಿಂಹಬಲನೆಂಬ ಕೀಚಕ ಜೊತೆಗೆ ಉಪಕೀಚಕರ ಸಂಹಾರ

Keechaka in Yakshagana


ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ ಶೆಟ್ಟಿ, ಇರುವೈಲು ಇವರಿಂದ ಮಾಹಿತಿ

ಕೀಚಕ ವಿರಾಟ ರಾಜ್ಯದ ಸೇನೆಯ ಸೈನ್ಯಾಧಿಪತಿ ಆಗಿದ್ದನು. ವಿರಾಟನ ರಾಣಿ ಸುದೇಷ್ಣೆಯ ಕಿರಿಯ ಸಹೋದರ. ಈತನಿಗೆ 105 ಮಂದಿ ಒಡಹುಟ್ಟಿದವರೂ, ಸುದೇಷ್ಣೆಯೆಂಬ ಸೋದರಿಯೂ ಇದ್ದರು. ಕೀಚಕನೂ, ತಮ್ಮಂದಿರಾದ 105 ಮಂದಿ ಉಪಕೀಚಕರೂ ವಿರಾಟರಾಜನ ಅರಮನೆಯಲ್ಲಿಯೇ ಇದ್ದರು.

ಮಹಾ ಬಲಶಾಲಿಯಾದ ಕೀಚಕನಿಗೆ  ಸಿಂಹಬಲನೆಂಬ ಬೇರೆಯ ಹೆಸರೂ ಇದ್ದಿತು. ಕೀಚಕನನ್ನು ಕಂಡು ಹೆದರಿದ ಕೌರವರು ವಿರಾಟನ ರಾಜ್ಯದ ಕಡೆಗೆ ತಲೆ ಮಾಡಿ ಮಲಗುವುದಿಲ್ಲವೆಂಬ ಅಂಶವನ್ನು ತಿಳಿದ ಪಾಂಡವರು, ವಿರಾಟ ರಾಜಧಾನಿಯಲ್ಲಿ ತಮ್ಮ ಅಜ್ಞಾತವಾಸದ ಅವಧಿಯನ್ನು ಕಳೆಯಲು ನಿರ್ಧರಿಸಿದ್ದರು.

ದ್ರೌಪದಿಯು ಸೈರಂಧ್ರಿಯಾಗಿ ಮಾಲಿನಿ ಎಂಬ ಹೆಸರಿನಲ್ಲಿ ರಾಣಿ ಸುದೇಷ್ಣೆಯ ಬಳಿ ಸೇವಕಿಯಾದಳು. 'ಇಲ್ಲಿಯ ಹೆಂಗಸರೂ ಇಲ್ಲಿ ಕಾಣುವ ಗಿಡಮರಗಳೂ ನಿನ್ನಲ್ಲಿ ಮೋಹಗೊಂಡಂತೆ ತೋರುತ್ತಿದೆ. ಇನ್ನು ಗಂಡಸರು ಕಂಡರೆ ಮೋಹಗೊಳ್ಳದೆ ಇರುತ್ತಾರೆಯೇ'? ಎಂಬ ಸುದೇಷ್ಣೆಯ ಮಾತುಗಳಿಂದ, ದ್ರೌಪದಿ ಮರೆವೇಷದಲ್ಲಿದ್ದರೂ ತನ್ನ ಸೌಂದರ್ಯವನ್ನು ಮುಚ್ಚಿಟ್ಟುಕೊಳ್ಳಲು ಅಸಮರ್ಥಳಾಗಿದ್ದಾಳೆಂಬುದು ಸ್ಪಷ್ಟ.


ಹೀಗೆ, ಅಕ್ಕನ ಅಂತಃಪುರದಲ್ಲಿ ಓಡಾಡುತ್ತಿದ್ದ ಸೈರಂಧ್ರಿಯನ್ನು ಕಂಡ ಕೀಚಕ, ಅವಳ ಪ್ರೇಮವನ್ನು ಯಾಚಿಸುತ್ತಾನೆ. ದ್ರೌಪದಿಯಿಂದ ತಿರಸ್ಕೃತನಾದಾಗ ಅಕ್ಕನ ನೆರವನ್ನು ಬೇಡುತ್ತಾನೆ. ಮಧುವನ್ನು ತರುವಂತೆ ಒತ್ತಾಯ ಮಾಡಿ ಸುದೇಷ್ಣೆ ಮಾಲಿನಿಯನ್ನು ಕೀಚಕನ ಅರಮನೆಗೆ ಕಳುಹಿಸುತ್ತಾಳೆ. ಅವಳನ್ನು ಕಂಡ ಕೀಚಕ ಕಾಮೋದ್ರೇಕದಿಂದ ಬಲಾತ್ಕರಿಸಲು ಮುಂದುವರಿಯುತ್ತಾನೆ.

ದ್ರೌಪದಿ ಅವನಿಂದ ತಪ್ಪಿಸಿಕೊಂಡು ಬಂದು ರಾಜಸಭೆಯನ್ನು ಪ್ರವೇಶಿಸುತ್ತಾಳೆ. ಕೀಚಕ ಬೆನ್ನಟ್ಟಿ ಬಂದು ತುಂಬಿದ ಸಭೆಯಲ್ಲಿ ಅವಳ ಜುಟ್ಟು ಹಿಡಿದು ವಿರಾಟರಾಜ, ವೇಷಾಂತರದಲ್ಲಿದ್ದ ಧರ್ಮರಾಯ ಮತ್ತು ಭೀಮಾದಿಗಳೆದುರಿಗೆ ಒದ್ದು ಕೆಡವುತ್ತಾನೆ. ಅಪಮಾನದಿಂದ ಜರ್ಝರಿತಳಾದ ದ್ರೌಪದಿಯು ಭೀಮನ ನೆರವನ್ನು ಬೇಡುತ್ತಾಳೆ.

ವಲಲ ಹೆಸರಿನಲ್ಲಿ ಬಾಣಸಿಗನಾಗಿ ಮಾರುವೇಷದಲ್ಲಿದ್ದ ಭೀಮನು ಭರವಸೆ ಕೊಟ್ಟ ಮೇಲೆ ದ್ರೌಪದಿಯು ಕೀಚಕನನ್ನು ರಾತ್ರಿ ನಾಟ್ಯಶಾಲೆಗೆ ಏಕಾಂಗಿಯಾಗಿ ಬರಲು ಆಹ್ವಾನ ಕೊಡುತ್ತಾಳೆ. ಇಚ್ಛಾಪೂರ್ಣತೆಯ ಭರವಸೆಯಿಂದ ಹಿಗ್ಗಿದ ಕೀಚಕ ರಾತ್ರಿ ನಾಟ್ಯಶಾಲೆಗೆ ಗೋಪ್ಯವಾಗಿ ಬರುತ್ತಾನೆ. ಮಾರುವೇಷದಲ್ಲಿದ್ದ ಭೀಮನಿಗೂ ಕೀಚಕನಿಗೂ ಮಲ್ಲಯುದ್ಧ ನಡೆದು ಕೀಚಕ ಸಾಯುತ್ತಾನೆ.

ಅಣ್ಣನ ದುರ್ಮರಣಕ್ಕೆ ಮಾಲಿನಿಯೇ ಕಾರಣಳೆಂದು ತಿಳಿದ ಉಪಕೀಚಕರು ಅವಳನ್ನು ಹಿಡಿದು ಶವರಥಕ್ಕೆ ಕಟ್ಟಿ ಸ್ಮಶಾನಕ್ಕೆಳೆದೊಯ್ಯುತ್ತಿರುತ್ತಾರೆ. ದ್ರೌಪದಿಯು ಪಾಂಡವರ ಗೋಪ್ಯ ನಾಮವನ್ನು ಹಿಡಿದು ಕೂಗುತ್ತಾಳೆ. ಇದನ್ನು ಕೇಳಿಸಿಕೊಂಡ ಭೀಮ ದೊಡ್ಡ ಮರವೊಂದನ್ನು ಕಿತ್ತು ತಂದು ಉಪಕೀಚಕರನ್ನು ಸವರಿ ಹಾಕಿ, ದ್ರೌಪದಿಯನ್ನು ಬಂಧಮುಕ್ತಳನ್ನಾಗಿಸುತ್ತಾನೆ. ಹೀಗೆ ಕೀಚಕ ಹಾಗೂ ಅವನ ದುಷ್ಟ ಸೋದರರು ನಾಶವಾಗುತ್ತಾರೆ.

ಸಂ.: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು