ಅಹಿರಾವಣ, ಮಹಿರಾವಣ ಕಾಳಗ ಮತ್ತು ವಜ್ರದುಂಬಿ

ಮಹಿರಾವಣ ಮತ್ತು ಹನೂಮಂತ
ಯಕ್ಷಗಾನದಲ್ಲಿ ಮಹಿರಾವಣ ಅಥವಾ ಮೈರಾವಣ ಕಾಳಗದ ಬಗ್ಗೆ ಮಾಹಿತಿ ನೀಡಿದ್ದಾರೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
ಪುಲಸ್ತ್ಯ ಮುನಿಯು ಬ್ರಹ್ಮನ ಮಾನಸ ಪುತ್ರನು. ಈ ಪುಲಸ್ತ್ಯ ಮುನಿಗೆ ತೃಣಬಿಂದು ಮುನಿಯ ಮಗಳು ಗೋ ಎಂಬಾಕೆಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಅವರಿಬ್ಬರಿಗೆ ಹುಟ್ಟಿದವನೇ ವಿಶ್ರವಸು. ಈ ವಿಶ್ರವಸು ಎಂಬಾತನಿಗೆ ಅನೇಕ ಮಂದಿ ಹೆಂಡಂದಿರು. ಹೀಗಾಗಿ ವಿಶ್ರವಸುವಿಗೆ ಅನೇಕ ಮಂದಿ ಮಕ್ಕಳಿದ್ದರು. ವಿಶ್ರವಸು ಮತ್ತು ಭಾರದ್ವಾಜರ ಮಗಳು ಇಳಾವಿದೆಯರಿಗೆ ಹುಟ್ಟಿದವನು ಕುಬೇರ.

ವಿಶ್ರವಸು ಮತ್ತು ಸುಮಾಲಿ ರಕ್ಕಸನ ಮಗಳು ಕೈಕಸೆಯರಿಗೆ ಹುಟ್ಟಿದವರು ರಾವಣ, ಕುಂಭಕರ್ಣ, ಶೂರ್ಪನಖಿ ಮತ್ತು ವಿಭೀಷಣ ಎಂಬ ನಾಲ್ವರು. ವಿಶ್ರವಸು ಮತ್ತು ರಾಖಾ ಎಂಬ ರಕ್ಕಸಿಗೆ ಹುಟ್ಟಿದವರು ಖರ ಮತ್ತು ದೂಷಣರೆಂಬ ರಕ್ಕಸರು. ಅದೇ ವಿಶ್ರವಸು ಮುನಿಯಿಂದ ಬೇರೊಬ್ಬ ಕನ್ಯೆಯಲ್ಲಿ ಜನಿಸಿದವರು ಅಹಿರಾವಣ ಮತ್ತು ಮಹಿರಾವಣ ಎಂಬವರು. ಹೀಗೆ ಕುಬೇರ, ರಾವಣ, ಕುಂಭಕರ್ಣ, ಶೂರ್ಪನಖಿ, ವಿಭೀಷಣ, ಖರ, ದೂಷಣ, ಅಹಿರಾವಣ, ಮಹಿರಾವಣ ಇವರೆಲ್ಲರೂ ವಿಶ್ರವಸುವಿನ ಮಕ್ಕಳಾಗಿರುವುದರಿಂದ ಒಡಹುಟ್ಟಿದವರೇ ಆಗಿದ್ದಾರೆ.

ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋದನಂತರ ನಡೆದ ಯುದ್ಧದಲ್ಲಿ ರಾವಣನ ಕಡೆಯವರೆಲ್ಲರೂ ಒಬ್ಬೊಬ್ಬರಾಗಿ ಮರಣವನ್ನಪ್ಪುತ್ತಾರೆ. ಕುಂಭಕರ್ಣ, ತ್ರಿಶಿರ, ನರಾಂತಕ, ಅತಿಕಾಯ, ಮಕರಾಕ್ಷ ಎಲ್ಲರೂ ಸಾಯುತ್ತಾರೆ. ಆಗ ರಾವಣನ ಪ್ರೀತಿಯ ಪುತ್ರ ಹಾಗೂ ಜ್ಯೇಷ್ಠ ಪುತ್ರನಾದ ಇಂದ್ರಜಿತುವು ಯುದ್ಧಕ್ಕೆ ತೆರಳುತ್ತಾನೆ. ಅವನನ್ನೂ ಕೂಡಾ ಲಕ್ಷ್ಮಣನು ಕೊಂದಾಗ ರಾವಣನು ಚಿಂತೆಗೀಡಾಗುತ್ತಾನೆ. ತನ್ನ ಸಹೋದರರಾದ ಮೈರಾವಣ (ಮಹಿರಾವಣ) ಮತ್ತು ಐರಾವಣರನ್ನು (ಅಹಿರಾವಣ) ನೆನೆದು ಸಹಾಯಕ್ಕಾಗಿ ಮೊರೆಯಿಡುತ್ತಾನೆ.

ಈ ಅಹಿರಾವಣ ಮತ್ತು ಮಹಿರಾವಣ ಎಂಬವರು ಪಾತಾಳ ಲೋಕವನ್ನು ಆಳಿಕೊಂಡಿದ್ದವರು. ಅವರು ಈ ಹಿಂದೆ ಎಂದೂ ಕೂಡಾ ರಾವಣನ ದುಷ್ಕೃತ್ಯಗಳನ್ನು ಬೆಂಬಲಿಸಿದವರಲ್ಲ. ಆದರೆ, ಈಗ ರಾವಣನು ಸಹಾಯಕ್ಕಾಗಿ ಕೂಗುತ್ತಿರುವುದನ್ನು ಕೇಳಿ ಮಹಿರಾವಣನು ಲಂಕೆಗೆ ಬರುತ್ತಾನೆ. ಆಗ ರಾವಣನು ನಡೆದ ಘಟನೆಗಳನ್ನೆಲ್ಲ ಸ್ವಲ್ಪ ತಿರುಚಿ ಮೈರಾವಣನ ಮನಸ್ಸಿಗೆ ನಾಟುವಂತೆ ಹೇಳುತ್ತಾನೆ.

ತಂಗಿಯಾದ ಶೂರ್ಪನಖಿಯ ಮಾನ ಭಂಗ ಮಾಡಿದ್ದರಿಂದಾಗಿಯೇ ಈಗ ಯುದ್ಧ ನಡೆಯುತ್ತಿದೆ, ತಾನು ಎಲ್ಲರನ್ನೂ ಕಳೆದುಕೊಂಡು ಸೋಲುತ್ತಿದ್ದೇನೆ, ಸಹಾಯ ಮಾಡು ಎನ್ನುತ್ತಾನೆ. ಆಗ ಕೆರಳಿದ ಮೈರಾವಣನು ಇಂದಿನ ರಾತ್ರಿಯೇ ರಾಮಲಕ್ಷ್ಮಣರನ್ನು ಕೊಂದು ಜಯವನ್ನು ತಂದುಕೊಡುತ್ತೇನೆ ಎಂದು ಭರವಸೆ ಇತ್ತು ತೆರಳುತ್ತಾನೆ.

ಮೈರಾವಣನು ಲಂಕೆಗೆ ಬಂದಿರುವುದನ್ನು ತಿಳಿದ ಸರಮೆಯು ಒಬ್ಬ ಗೂಢಚಾರನ ಮೂಲಕ ತನ್ನ ಗಂಡನಾದ ವಿಭೀಷಣನಿಗೆ ವಿಷಯವನ್ನು ಮುಟ್ಟಿಸಿ ಇಂದು ರಾತ್ರಿ ಎಚ್ಚರದಿಂದ ಇರುವಂತೆ ಹೇಳಿ ಕಳಿಸುತ್ತಾಳೆ. ವಿಭೀಷಣನು ಹನುಮಂತನಲ್ಲಿ ಈ ವಿಷಯವನ್ನು ತಿಳಿಸಿದಾಗ ಹನುಮಂತನು ತನ್ನ ಬಾಲವನ್ನೇ ಬೆಳೆಸಿ, ಅದರಿಂದ ಭೂಮಿಯ ಅಡಿಯ ಕೂರ್ಮ ಗಡಿಯಿಂದ ಮೇಲ್ಗಡೆ ಆಕಾಶದಲ್ಲಿ ಧ್ರುವ ನಕ್ಷತ್ರದವರೆಗೂ ಇರುವಷ್ಟು ಬೃಹತ್ತಾದ ಕೋಟೆಯನ್ನು ಕಟ್ಟಿ ಆ ಕೋಟೆಯ ಒಳಗಡೆ ರಾಮಲಕ್ಷ್ಮಣರನ್ನು ಪಲ್ಲಂಗದಲ್ಲಿ ಮಲಗಿಸಿ ಹಾಗೂ ಇತರ ಕಪಿಗಳನ್ನು ಕೂಡಾ ಕೋಟೆಯ ಒಳಗಡೆ ಇರಿಸುತ್ತಾನೆ. ತಾನೇ ದೈತ್ಯಾಕಾರವಾಗಿ ಬೆಳೆದು ಎರಡು ಕೈಗಳಲ್ಲಿ ಎರಡು ಪರ್ವತಗಳನ್ನು ಹಿಡಿದುಕೊಂಡು ಆ ಕೋಟೆಯ ಬಾಗಿಲಲ್ಲಿ ಕಾವಲು ನಿಲ್ಲುತ್ತಾನೆ. 

ಮೈರಾವಣನು ಬಂದು ದೂರದಿಂದಲೇ ಕೋಟೆಯನ್ನು ನೋಡುತ್ತಾನೆ. ಆ ಕೋಟೆಯ ಬಲವನ್ನು ಪರೀಕ್ಷಿಸಿ ಬರುವಂತೆ ದಧಿಮುಖ ಎಂಬ ರಕ್ಕಸನನ್ನು ಕಳಿಸುತ್ತಾನೆ. ಅವನು ಕೋಟೆಯನ್ನು ಪರೀಕ್ಷಿಸುವಾಗಲೇ ಹನುಮಂತನು ಅವನನ್ನು ಹೊಡೆದು ಓಡಿಸುತ್ತಾನೆ. ನಂತರ ಆ ಕೋಟೆಯನ್ನು ಒಡೆದು ಬರುವಂತೆ ಆದೇಶಿಸಿ ಸೂಚಿಮುಖ ಮತ್ತು ವಜ್ರದಂಷ್ಟ್ರ ಎಂಬ ಇಬ್ಬರು ರಕ್ಕಸರನ್ನು ಕಳಿಸುತ್ತಾನೆ. ಅವರಿಬ್ಬರನ್ನೂ ಹನುಮಂತ ಹೊಡೆದು ಓಡಿಸುತ್ತಾನೆ. ತನ್ನ ಬಲವಂತರಾದ ರಕ್ಕಸರೇ ಕೈಲಾಗದೇ ಹಿಂತಿರುಗಿದಾಗ, ಈ ಹನುಮಂತನನ್ನು ಶಕ್ತಿಯಿಂದ ಗೆಲ್ಲಲಾಗುವುದಿಲ್ಲ ಎಂಬುದು ಮೈರಾವಣನಿಗೆ ಮನವರಿಕೆಯಾಗುತ್ತದೆ. ಅದಕ್ಕಾಗಿ ಯುಕ್ತಿ ಪ್ರಯೋಗಕ್ಕೆ ಮುಂದಾಗುತ್ತಾನೆ.

ತಾನು ವಿಭೀಷಣನ ರೂಪವನ್ನು ತಾಳಿ ಹನುಮಂತನಲ್ಲಿಗೆ ಬರುತ್ತಾನೆ. ಅವನು ಹನುಮಂತನಲ್ಲಿ "ನೀನು ಅಣು ರೂಪದಿಂದ ದೂರದ ಆ ಮರದಡಿ ಇರು, ನಾನು ಇಲ್ಲಿ ಕಾವಲು ಇರುತ್ತೇನೆ, ಮೈರಾವಣ ಬಂದಾಗ ನಿನ್ನನ್ನು ಕರೆಯುತ್ತೇನೆ" ಎನ್ನುತ್ತಾನೆ. ಹನುಮಂತನು ಒಪ್ಪಿ ಕೋಟೆಯನ್ನು ಬಿಟ್ಟು ದೂರದಲ್ಲಿ ಕುಳಿತುಕೊಳ್ಳುತ್ತಾನೆ. ಕೂಡಲೇ ಮೈರಾವಣನು ಮಂತ್ರಿಸಿದ ಬೂದಿಯಿಂದ ಕಪಿಗಳೆಲ್ಲರನ್ನೂ ಮಂಕುಗೊಳಿಸಿ, ರಾಮಲಕ್ಷ್ಮಣರಿಗೆ ನಿದ್ದೆ ಬರುವಂತೆ ಮಾಡಿ ಅವರನ್ನು ಮಂಚ ಸಮೇತವಾಗಿ ಎತ್ತಿಕೊಂಡು ಪಾತಾಳಕ್ಕೆ ಹೋಗುತ್ತಾನೆ. ಬೆಳಗಾದ ಮೇಲೆ ಅವರಿಬ್ಬರನ್ನೂ ಮಹಾಮಾಯೆ ಕಾಳಿಕಾ ದೇವಿಗೆ ಬಲಿ ಕೊಡುವುದೆಂದು ತೀರ್ಮಾನಿಸಿ, ಅವರನ್ನು ಅರಮನೆಯ ತನ್ನ ಅಂತಃಪುರದಲ್ಲಿ ಇರಿಸುತ್ತಾನೆ.

ಇತ್ತ ಎಚ್ಚರಗೊಂಡ ಜಾಂಬವನು ರಾಮಲಕ್ಷ್ಮಣರನ್ನು ಕಾಣದೇ ಗಾಬರಿಯಾಗಿ ಹನುಮಂತನನ್ನು ಕರೆಯುತ್ತಾನೆ. ಹನುಮಂತನು ಇದೆಲ್ಲ ಆ ವಿಭೀಷಣನ ಮೋಸ ಎಂದುಕೊಂಡು ಅವನನ್ನು ಕೊಲ್ಲಲು ಮುಂದಾಗುತ್ತಾನೆ. ಆಗ ಜಾಂಬವ ಅವನನ್ನು ತಡೆದು ಸಮಾಧಾನಪಡಿಸಿ ವಿಭೀಷಣನನ್ನು ವಿಚಾರಿಸುತ್ತಾನೆ. ಆಗ ವಿಭೀಷಣನು "ನಾನು, ರಾವಣ, ಕುಂಭಕರ್ಣ ಮತ್ತು ಮೈರಾವಣ ನಾಲ್ವರೂ ಕೂಡಾ ಒಂದೇ ಗುರುವಿನಲ್ಲಿ ಅಭ್ಯಾಸ ಮಾಡಿದವರು. ನಮಗೆಲ್ಲರಿಗೂ ಇನ್ನೊಬ್ಬರಂತೆ ವೇಷ ಧರಿಸುವ ವಿದ್ಯೆ ಗೊತ್ತಿದೆ. ಇದು ಆ ಮೈರಾವಣನದ್ದೇ ಮೋಸ. ಬಹುಶಃ ಅವನು ನನ್ನ ವೇಷ ಧರಿಸಿ ಬಂದು ಹನುಮಂತನನ್ನು ಮೋಸಗೊಳಿಸಿರಬೇಕು. ನನ್ನದೇನೂ ತಪ್ಪಿಲ್ಲ" ಎನ್ನುತ್ತಾನೆ. ಆಗ ಹನುಮಂತನು "ಹಾಗಿದ್ದರೆ ನೀನೀಗ ಆ ಮೈರಾವಣನ ವೇಷತಾಳು ನೋಡೋಣ" ಎನ್ನುತ್ತಾನೆ. ವಿಭೀಷಣನು ಮೈರಾವಣನ ವೇಷ ತಾಳಿದಾಗ ಎಲ್ಲರಿಗೂ ಅವನ ಮೇಲೆ ವಿಶ್ವಾಸ ಮೂಡುತ್ತದೆ.

ವಿಭೀಷಣನು ಪಾತಾಳಕ್ಕೆ ಹೋಗುವ ದಾರಿಯನ್ನು ಹೇಳುತ್ತಾನೆ. ಅದರಂತೆ ಹನುಮಂತನು ಲಂಕೆಯ ದಕ್ಷಿಣ ದಿಕ್ಕಿನ ಕೊಳವೊಂದರಲ್ಲಿ ಇರುವ ಸ್ವರ್ಣ ಕಮಲದ ನಾಳದ ಮೂಲಕ ಇಳಿದು ಪಾತಾಳಕ್ಕೆ ಹೋಗುತ್ತಾನೆ. ಅಲ್ಲಿ ಹನುಮಂತನಂತೆಯೇ ಇರುವ ಮತ್ಸ್ಯವಾನರನೊಬ್ಬ ಹನುಮಂತನನ್ನು ತಡೆಯುತ್ತಾನೆ. ಅವನಲ್ಲಿ "ನೀನು ಯಾರು? ನನ್ನನ್ನು ಏಕೆ ತಡೆದೆ" ಎಂದು ಹನುಮಂತನು ಕೇಳುತ್ತಾನೆ. ಆಗ ಅವನು ತನ್ನ ಜನ್ಮವೃತ್ತಾಂತವನ್ನು ತಿಳಿಸುತ್ತಾನೆ. 

"ಹಿಂದೆ ಸೀತಾನ್ವೇಷಣೆಗಾಗಿ ಹನುಮಂತನು ಸಮುದ್ರೋಲ್ಲಂಘನ ಮಾಡುವಾಗ ಆತನ ಒಂದು ಹನಿ ಬೆವರು ಕೆಳಗೆ ಸಮುದ್ರಕ್ಕೆ ಬಿತ್ತಂತೆ. ಯಾರಿಂದಲೋ ಶಾಪಗ್ರಸ್ಥಳಾಗಿ ಮೀನಾಗಿದ್ದ ತಿಮಿ ಎಂಬ ಕನ್ನಿಕೆಯೋರ್ವಳು ಆ ಬೆವರನ್ನು ನುಂಗಿದಳಂತೆ. ಅದರಿಂದಾಗಿ ಆಕೆ ಗರ್ಭವತಿಯಾದಳಂತೆ. ಅಂತಹ ಗರ್ಭವತಿ ಮೀನನ್ನು ಬೆಸ್ತರು ಹಿಡಿದು ತಂದು ಮೈರಾವಣನಿಗೆ ಕೊಟ್ಟರಂತೆ. ಅವನ ಅಡುಗೆಯವರು ಆ ಮೀನನ್ನು ಕತ್ತರಿಸುವಾಗ ಅದರ ಹೊಟ್ಟೆಯಲ್ಲಿ ವಾನರಾಕಾರದ ಮಗುವೊಂದು ಇತ್ತಂತೆ. ಮತ್ಸ್ಯದ ಹೊಟ್ಟೆಯಲ್ಲಿ ಸಿಕ್ಕಿದ್ದರಿಂದ ಆ ಮಗುವಿಗೆ ಮತ್ಸ್ಯವಾನರ ಅಂತಲೇ ಕರೆಯುತ್ತಾ ಬಂದರಂತೆ. ಆ ಮತ್ಸ್ಯವಾನರನೇ ನಾನು. ಅದ್ರಿಕೆ ಎಂಬ ದೇವನಾರಿಯೇ ಒಂದು ದಿನ ಬಂದು ನನಗೆ ನನ್ನ ಈ ಜನ್ಮ ರಹಸ್ಯವನ್ನು ತಿಳಿಸಿದಳು. ಮೈರಾವಣನ ಆಣತಿಯಂತೆ ಇಲ್ಲಿ ಕಾಯುತ್ತಾ ಇದ್ದೇನೆ" ಎನ್ನುತ್ತಾನೆ.

ಆಗ ಹನುಮಂತನಿಗೆ ಇದು ತನ್ನ ಮಗನೇ ಎಂದು ತಿಳಿದು ಸಂತೋಷವಾಗುತ್ತದೆ. ಅವನು ಮಗನಲ್ಲಿ ತನ್ನ ಪರಿಚಯ ಮಾಡಿಕೊಳ್ಳುತ್ತಾನೆ. ಆದರೆ, ಹನುಮಂತನೆಂದರೆ ಬೃಹತ್ ಆಕಾರದವನು ಎಂದು ತಿಳಿದುಕೊಂಡಿದ್ದ ಮತ್ಸ್ಯವಾನರನಿಗೆ ಇವನನ್ನು ನೋಡಿ ನಂಬುಗೆ ಬಾರದೇ ಇದ್ದಾಗ ಹನುಮನು ತನ್ನ ಬೃಹತ್ ಆಕಾರವನ್ನು ತೋರಿಸಿ ಅವನಿಗೆ ನಂಬುಗೆ ಬರುವಂತೆ ಮಾಡುತ್ತಾನೆ. ಆಗ ಮಗನು ತಂದೆಗೆ ನಮಸ್ಕರಿಸಿ ತನ್ನಿಂದ ಏನಾಗಬೇಕು ಎಂದು ಕೇಳುತ್ತಾನೆ. ಹನುಮಂತನು ಮೈರಾವಣನ ವಿಷಯವನ್ನು ತಿಳಿಸಿ ಸಹಕರಿಸುವಂತೆ ಹೇಳುತ್ತಾನೆ. ಆಗ ಮತ್ಸ್ಯವಾನರನು ಕೆಲವು ಗುಟ್ಟಿನ ವಿಷಯಗಳನ್ನು ತನ್ನಪ್ಪನಿಗೆ ತಿಳಿಸಿ ಕಳುಹಿಸುತ್ತಾನೆ.

ಮಗನ ಸೂಚನೆಯಂತೆ ಹನುಮಂತನು ಪಾತಾಳದ ಮಹಾಮಾಯೆ ಕಾಳಿಕಾ ದೇವಾಲಯದ ಬಳಿಗೆ ಹೋಗಿ ಅದರ ಪಕ್ಕದ ವಟ ವೃಕ್ಷದಲ್ಲಿ ಅಡಗಿ ಕುಳಿತುಕೊಳ್ಳುತ್ತಾನೆ. ಮತ್ಸ್ಯವಾನರನು ತಿಳಿಸಿದಂತೆ ನಡುರಾತ್ರಿಯ ಸಮಯದಲ್ಲಿ ಮೈರಾವಣನ ತಂಗಿಯಾದ ದುರುದುಂಡಿ ಎಂಬವಳು ಏಕಾಂಗಿಯಾಗಿ ಆ ದೇವಾಲಯಕ್ಕೆ ಬರುತ್ತಾಳೆ. ಆಕೆ ದೇವಿಯನ್ನು ಪೂಜಿಸಿ ಹೊರಡುವಾಗ ಹನುಮಂತನು ಅವಳನ್ನು ಮಾತಾಡಿಸಿ ತನ್ನ ಪರಿಚಯ ಮಾಡಿಕೊಂಡು ತಾನು ಬಂದ ಉದ್ದೇಶವನ್ನು ತಿಳಿಸುತ್ತಾನೆ. ಇದರಿಂದ ಸಂತಸಗೊಂಡ ದುರುದುಂಡಿಯು ತನ್ನ ದುಃಖವನ್ನು ಹನುಮಂತನಲ್ಲಿ ಹೇಳಿಕೊಳ್ಳುತ್ತಾಳೆ. 

ಅವಳಿಗೆ ನೀಲಮೇಘಶ್ಯಾಮ ಎಂಬ ಒಬ್ಬ ಮಗನಿದ್ದನಂತೆ. ಆತ ಹುಟ್ಟಿದ ಕೂಡಲೇ ಮೈರಾವಣನು ಬ್ರಾಹ್ಮಣರನ್ನು ಕರೆಸಿ ಆತನ ಜಾತಕ ತೋರಿಸಿದನಂತೆ. ಮಗುವಿನ ಕುಂಡಲಿಯನ್ನು ನೋಡಿದ ಬ್ರಾಹ್ಮಣರು ಇವನು ಮುಂದೆ ಈ ಪಾತಾಳಕ್ಕೆ ಅಧಿಪತಿಯಾಗುತ್ತಾನೆ ಎಂದು ಭವಿಷ್ಯ ನುಡಿದರಂತೆ. ಇದರಿಂದ ಕೋಪಗೊಂಡ ಮೈರಾವಣನು ಇವನೇ ತನ್ನ ಶತ್ರು ಎಂದು ತಿಳಿದು ಆ ಮಗುವನ್ನು ಕೊಲ್ಲಲು ಮುಂದಾದನಂತೆ. ಆಗ ಮೈರಾವಣನ ಹೆಂಡತಿ ತನ್ನ ಗಂಡನನ್ನು ತಡೆದಳಂತೆ. ಹೆಂಡತಿಯ ಮಾತಿನಂತೆ ಆ ಮಗುವನ್ನು ಕೊಲ್ಲದೇ ಅಂದಿನಿಂದ ಇಂದಿನವರೆಗೂ ಅವನನ್ನು ಸೆರೆಮನೆಯಲ್ಲಿ ಇಟ್ಟಿದ್ದಾನಂತೆ. ಅಣ್ಣನನ್ನು ಕೊಂದು ತನ್ನ ಮಗನಿಗೆ ಪಟ್ಟ ಕಟ್ಟಿಸುವುದಾದರೆ ತಾನು ಸಹಾಯ ಮಾಡುವುದಾಗಿ ಆಕೆ ತಿಳಿಸುತ್ತಾಳೆ.

ಅದಕ್ಕೆ ಒಪ್ಪಿದ ಹನುಮಂತನು ಆಕೆಯೊಡನೆ ಹೊರಡುತ್ತಾನೆ. ಪುರದ ದ್ವಾರದಲ್ಲಿ ಕಾವಲಿನವರ ಕಣ್ಣು ತಪ್ಪಿಸುವುದಕ್ಕಾಗಿ ಹನುಮಂತನು ಅಣುರೂಪ ಧರಿಸಿ ದುರುದುಂಡಿ ಹಿಡಿದುಕೊಂಡಿರುವ ಕಲಶದಲ್ಲಿ ಅಡಗಿಕೊಳ್ಳುತ್ತಾನೆ. ಆದರೆ, ಆ ಕಾವಲಿನವನು ಹೋಗುವವರನ್ನೂ ಬರುವವರನ್ನೂ ತೂಕ ಮಾಡಿ ನೋಡಿ ಪರೀಕ್ಷಿಸಿ ಒಳಕ್ಕೆ ಬಿಡುತ್ತಿದ್ದ. ಅದರಂತೆ ದುರುದುಂಡಿಯನ್ನು ತೂಗಿದಾಗ ತೂಕದಲ್ಲಿ ವ್ಯತ್ಯಾಸ ಕಂಡು ಬಂದುದರಿಂದ ಅವಳನ್ನು ವಿಚಾರಿಸಿ ಹೊಡೆಯಲು ಮುಂದಾಗುತ್ತಾನೆ. ಆಗ ಹನುಮಂತನು ನಿಜರೂಪ ತಾಳಿ ಕಾವಲಿನವರನ್ನು ಬಡಿದು ಕೊಲ್ಲುತ್ತಾನೆ. ಮುಂದೆ ಹೋದಾಗ ದಧಿಮುಖ, ಸೂಚಿಮುಖ, ವಜ್ರದಂಷ್ಟ್ರ, ಅಹಿರಾವಣ ಎಲ್ಲರೂ ಇವರನ್ನು ತಡೆಯಲು ಬರುತ್ತಾರೆ. ಹನುಮಂತನು ಎಲ್ಲರನ್ನೂ ಕೊಲ್ಲುತ್ತಾನೆ. 

ಕೊನೆಯಲ್ಲಿ ಮೈರಾವಣನು ಇದಿರಾಗುತ್ತಾನೆ. ಮೈರಾವಣನಿಗೂ ಹನುಮಂತನಿಗೂ ಘೋರ ಯುದ್ಧವಾಗುತ್ತದೆ. ಬೆಳಗಾಗುವವರೆಗೂ ಕಾದಿದ್ದು ನಂತರ ಈ ಕಪಿಯನ್ನೂ ಆ ರಾಮಲಕ್ಷ್ಮಣರ ಜೊತೆಯಲ್ಲಿ ಕಾಳಿಕಾ ದೇವಿಗೆ ಬಲಿಕೊಡುತ್ತೇನೆ ಎಂದು ಆಲೋಚಿಸಿ, ಮೈರಾವಣನು ಕಾಲ ಯಾಪನೆಗೆ ತೊಡಗುತ್ತಾನೆ. ಮೊದಲು ವಿಭೀಷಣನಂತೆ ವೇಷಧರಿಸಿ ಬಂದು ಏನೇನೋ ಕಟ್ಟು ಕತೆಗಳನ್ನು ಹೇಳತೊಡಗುತ್ತಾನೆ. ಆಗ ದುರುದುಂಡಿಯು "ಅವನು ನಿಜವಾದ ವಿಭೀಷಣ ಅಲ್ಲ, ಅವನು ನನ್ನ ಅಣ್ಣ ಮೈರಾವಣ, ಹೊಡೆ ಅವನನ್ನು" ಎನ್ನುತ್ತಾಳೆ. ಹನುಮಂತನು ಮಾಯಾವಿಭೀಷಣನನ್ನು ಹೊಡೆದು ಕೊಲ್ಲುತ್ತಾನೆ. ನಂತರ ಮೈರಾವಣನು ಸುಗ್ರೀವನ ವೇಷ ಧರಿಸಿ ಬರುತ್ತಾನೆ, ಇನ್ನೊಮ್ಮೆ ಜಾಂಬವನ ವೇಷ ಧರಿಸಿ ಬರುತ್ತಾನೆ, ಮತ್ತೊಮ್ಮೆ ಗಾರುಡಿಗರ ವೇಷ ತಾಳಿ ಬಂದು ಹನುಮಂತನನ್ನು ಮೋಸಗೊಳಿಸಲು ಪ್ರಯತ್ನಿಸುತ್ತಾನೆ. ಹೀಗೆ ಬೆಳಗಿನವರೆಗೆ ಸಮಯ ಕಳೆಯುವ ಆಲೋಚನೆ ಮಾಡುತ್ತಾನೆ. ಪ್ರತಿ ಸಲವೂ ದುರುದುಂಡಿಯ ಸಮಯೋಚಿತ ಸಲಹೆಯಿಂದಾಗಿ ಹನುಮಂತನು ಆ ಎಲ್ಲ ಕಪಟ ವೇಷದವರನ್ನೂ ಬಡಿದು ಕೊಲ್ಲುತ್ತಾನೆ.

ಬೇರೆ ದಾರಿ ಕಾಣದೇ ಮೈರಾವಣನು ನಿಜರೂಪದಿಂದಲೇ ಯುದ್ಧಕ್ಕೆ ಬರುತ್ತಾನೆ. ಮೈರಾವಣನ ಹೊಡೆತ ತಾಳಲಾರದೇ ಹನುಮಂತ ಮೂರ್ಛೆ ಹೋಗುತ್ತಾನೆ. ಆಗ ಸ್ವತಃ ವಾಯುದೇವನೇ ಬಂದು ಹನುಮಂತನಿಗೆ ಪ್ರಾಣ(ವಾಯು)ವನ್ನು ನೀಡಿ ಬದುಕಿಸುತ್ತಾನೆ. ಯುದ್ಧದ ಮಧ್ಯೆ ದುರುದುಂಡಿಯು ಮೈರಾವಣನ ಪ್ರಾಣದ ರಹಸ್ಯವನ್ನು ಹನುಮಂತನಿಗೆ ತಿಳಿಸುತ್ತಾಳೆ. ಹಿಂದೆ ಮೈರಾವಣನು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಒಂದು ವಿಚಿತ್ರ ವರವನ್ನು ಪಡೆದಿದ್ದನಂತೆ. ಅದರ ಪ್ರಕಾರ ಅವನು ತನ್ನ ದೇಹದೊಳಗಿರಬೇಕಾದ ಪ್ರಾಣವನ್ನು ಹೊರಗಡೆ ಎಲ್ಲಿ ಬೇಕಿದ್ದರೂ ವಸ್ತುವಿನ ರೂಪದಲ್ಲಿ ಅಡಗಿಸಿ ಇಡಬಹುದಂತೆ. ಮೈರಾವಣನು "ಬೇಡ ಬೇಡ ಹೇಳಬೇಡ" ಎಂದು ತಂಗಿಯಲ್ಲಿ ಗೋಗರೆದರೂ ಕೂಡಾ ಈ ಗುಟ್ಟನ್ನು ಹೇಳಿದ ದುರುದುಂಡಿಯು "ಈಗ ನನ್ನ ಅಣ್ಣನು ಕಾಳಿಕಾಲಯದಲ್ಲಿ ದೇವಿಯ ಪಾದದ ಕೇಳಗಡೆ ಇರುವ ಪೀಠದಲ್ಲಿ ಒಂದು ಪೆಟ್ಟಿಗೆಯ ಒಳಗಡೆ ಐದು ವಜ್ರದ ದುಂಬಿಗಳ ರೂಪದಲ್ಲಿ ತನ್ನ ಪಂಚ ಪ್ರಾಣವನ್ನು ಇಟ್ಟಿದ್ದಾನೆ. ನೀನು ಅವುಗಳನ್ನು ನಾಶಪಡಿಸಿದಾಗ ಮಾತ್ರ ಅಣ್ಣ ಸಾಯುತ್ತಾನೆ" ಎನ್ನುತ್ತಾಳೆ.

ವಿಷಯ ತಿಳಿದ ಕೂಡಲೇ ಒಂದೇ ನೆಗೆತಕ್ಕೆ ಅಲ್ಲಿಗೆ ಹಾರಿದ ಹನುಮಂತನು ಆ ಪೆಟ್ಟಿಗೆಯನ್ನು ತರುತ್ತಾನೆ. ಅದರೊಳಗಿಂದ ಒಂದೊಂದೇ ವಜ್ರ ದುಂಬಿಯನ್ನು ಹೊರಗೆ ಹಾರಲು ಬಿಟ್ಟು ನಂತರ ಅದನ್ನು ಹಿಡಿದು ಹಿಸುಕಿ ಕೊಲ್ಲತೊಡಗುತ್ತಾನೆ. ಹೀಗೇ ಹನುಮಂತನು ಒಂದೊಂದೇ ವಜ್ರ ದುಂಬಿಯನ್ನು ಕೊಲ್ಲುತ್ತಾ ಹೋದಂತೆ ಮೈರಾವಣನ ಕೈಗಳು, ಕಾಲುಗಳೆಲ್ಲ ಒಂದೊಂದಾಗಿ ಮುರಿದು ಹೋಗುತ್ತವೆ. ಕೊನೆಯ ವಜ್ರದುಂಬಿಯನ್ನು ಕೊಂದಾಗ ಮೈರಾವಣ ಸಾಯುತ್ತಾನೆ. 

ನಂತರ ಹನುಮಂತನು ಮಹಿರಾವಣನ ಮಾಯೆಯಿಂದಾಗಿ ನಿದ್ದೆಯಲ್ಲಿರುವ ರಾಮಲಕ್ಷ್ಮಣರನ್ನು ಎಬ್ಬಿಸಿ ಕರೆದುಕೊಂಡು ಬರುತ್ತಾನೆ. ಅವರಿಗೆ ವಿಷಯಗಳನ್ನೆಲ್ಲಾ ತಿಳಿಸುತ್ತಾನೆ. ದುರುದುಂಡಿಯ ಮಗ ನೀಲಮೇಘಶ್ಯಾಮನಿಗೆ ಪಾತಾಳದ ಪಟ್ಟ ಕಟ್ಟುತ್ತಾನೆ. ಬೆಳಗಾಗುವುದರೊಳಗಾಗಿ ಮೂವರೂ ಮರಳಿ ಲಂಕೆಯನ್ನು ತಲುಪುತ್ತಾರೆ.

✍ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು