ಹಳೆಯ, ಹೊಸ ಯಕ್ಷಗಾನದ ಆಡಿಯೋ, ವೀಡಿಯೊಗಳ ಭಂಡಾರ - ದಿನೇಶ್ ಉಪ್ಪೂರ


ದಿನೇಶ್ ಉಪ್ಪೂರರು ತಮ್ಮ ನೆಚ್ಚಿನ ಕಾಯಕದಲ್ಲಿ...
ಯಕ್ಷಗಾನದ ಹಳೆಯ ಆಡಿಯೋ-ವೀಡಿಯೊಗಳನ್ನು ಕೇಳುವುದು, ನೋಡುವುದೇ ಒಂದು ಆನಂದ. ಎಲ್ಲೆಲ್ಲಿಂದಲೋ ಕೇಳಿ, ಕೊಂಡು ತಂದು, ಧೂಳು ಹಿಡಿದ ಕ್ಯಾಸೆಟ್ಟುಗಳಿಂದಲೂ ಹೆಕ್ಕಿ, ಯಕ್ಷಗಾನ ಲೋಕದ ಅದ್ಭುತ ಧ್ವನಿ ಮತ್ತು ದೃಶ್ಯಗಳನ್ನು ಸೆರೆಹಿಡಿದಿದ್ದಾರೆ ದಿನೇಶ್ ಉಪ್ಪೂರ. ಅವರ ಯಕ್ಷಗಾನ ಕಾಯಕದ ಬಗ್ಗೆ ಮಾಹಿತಿ ನೀಡಿದ್ದಾರೆ ಬೆಂಗಳೂರಿನ ಹವ್ಯಾಸಿ ಕಲಾವಿದ, ಸಾಫ್ಟ್‌ವೇರ್ ಎಂಜಿಯರ್ ರವಿ ಮಡೋಡಿ.
ಲೆ ಅಥವಾ ಕಲೆಯ ಸಾಂಗತ್ಯ ಕೊಡುವ ಆಪ್ಯಾಯಮಾನತೆ ಅದು ಎಲ್ಲಕ್ಕಿಂತ ದೊಡ್ಡದು. ಒಮ್ಮೆ ಅದರ ಗೀಳು ಹತ್ತಿದರೆ ಸಾಕು, ಅದರಿಂದ ವಿಮುಖರಾಗಿ ಹೊರಬರುವುದು ಕಷ್ಟಸಾಧ್ಯ. ಇದು ಯಕ್ಷಗಾನಕ್ಕೂ ಹೊರತಾಗಿಲ್ಲ. ಕೆಲವರು ಕಲಾವಿದರಾಗಿ ತಮ್ಮ ಕಲೋಪಾಸನೆಯನ್ನು ಮಾಡಿದರೆ ಇನ್ನೂ ಕೆಲವರು ಕಲೆಯ ಒಳ/ಹೊರಗನ್ನು ತಿಳಿಯುವ, ಅದರ ಬಗ್ಗೆ ಅಧ್ಯಯನ, ಸಂಶೋಧನೆ ನಡೆಸುವ ಇತ್ಯಾದಿ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಇಲ್ಲೊಬ್ಬರು ತೀರಾ ವಿಭಿನ್ನವಾದ ಯಕ್ಷ ಕೈಂಕರ್ಯವನ್ನು ಹಲವು ವರುಷಗಳಿಂದ ಮಾಡುತ್ತಿದ್ದಾರೆ. ಯಕ್ಷಗಾನದ ಹಳೆಯ ಆಡಿಯೋ/ವಿಡಿಯೋಗಳನ್ನು ಸಂಗ್ರಹಿಸುತ್ತಾ ಯಕ್ಷಗಾನ ವಲಯಕ್ಕೆ ಅಮೂಲ್ಯ ದಾಖಲೆಗಳನ್ನು ಒದಗಿಸುತ್ತಿದ್ದಾರೆ. ಇವರೇ ಉಡುಪಿಯ ದಿನೇಶ್ ಉಪ್ಪೂರ.

ದಿನೇಶ್ ಉಪ್ಪೂರ ಅವರು ಬಡಗುತಿಟ್ಟು ಕಂಡ ಶ್ರೇಷ್ಠ ಭಾಗವತರಾದ ದಿವಗಂತ ಶ್ರೀ ನಾರಾಯಣಪ್ಪ ಉಪ್ಪೂರರ ಸುಪುತ್ರ.  ಸಹಜವಾಗಿಯೇ ಬಾಲ್ಯದಿಂದಲೇ ಯಕ್ಷಗಾನದ ಬಗ್ಗೆ ಆಸಕ್ತಿಯನ್ನು ಹೊಂದಿದ್ದ ದಿನೇಶ್ ಉಪ್ಪೂರರು ಹಲವು ವರುಷಗಳ ಕಾಲ ಸಾಲಿಗ್ರಾಮ ಮಕ್ಕಳ ಮೇಳದಲ್ಲಿ ಪಾತ್ರಗಳನ್ನು ನಿರ್ವಹಿಸಿದ್ದರು. ಮುಂದೆ ಅವರು ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯಲ್ಲಿ ಲೆಕ್ಕಾಧಿಕಾರಿಯಾಗಿ ವೃತ್ತಿಯನ್ನು ಆರಂಭಿಸಿದರು. ಆದರೂ ಯಕ್ಷಗಾನದ ಬಗೆಗಿನ ಆಸಕ್ತಿ ಮತ್ತು ಕುತೂಹಲ ಕಡಿಮೆಯಾಗಿರಲಿಲ್ಲ. 

20 ವರುಷ  ನಂತರ ಇದ್ದಕ್ಕಿದ್ದ ಹಾಗೆ ತಂದೆಯ ನೆನಪುಗಳು ತೀವ್ರವಾಗಿ ಬಾಧಿಸಲಾರಂಭಿಸಿದವು.  ಭೌತಿಕವಾಗಿ ಅವರು ಇಲ್ಲದೇ ಇದ್ದರೂ ಅವರ ಕಲಾವಂತಿಕೆಯನ್ನು ನೆನಪಿಸುವ ಆಡಿಯೋ/ವಿಡಿಯೋಗಳು ಯಕ್ಷಗಾನ ವಲಯದಲ್ಲಿ ಇರಬಹುದು ಎಂಬ ನಂಬಿಕೆ ಅವರಿಗಿತ್ತು. 2006ರ ಹೊತ್ತಿನಲ್ಲಿ ಅಂತಹ ದಾಖಲೆಗಳನ್ನು ಶೋಧಿಸಿ ಸಂಗ್ರಹಿಸುವ  ಕಾರ್ಯದಲ್ಲಿ ನಿರತರಾದರು.

ತಮ್ಮ ಸಂಗ್ರಹಣಾ ಕಾರ್ಯದ ಬಗ್ಗೆ ಬಂಧು ಬಾಂಧವರು, ಸ್ನೇಹಿತರಲ್ಲಿ ತಿಳಿಸಿ ಅವರ ಮೂಲಕವಾಗಿ ಒಂದಷ್ಟು ಸಂಗ್ರಹವನ್ನು ಮಾಡಿದರು. ಆದರೆ ಸಂಗ್ರಹಿಸುವ ಕಾರ್ಯ ಅಷ್ಟು ಸುಲಭವಾಗಿರಲಿಲ್ಲ. ಎಷ್ಟೋ ಹಳೆಯ ಟೇಪ್ ರೆಕಾರ್ಡ್ ಕ್ಯಾಸೆಟ್‌ಗಳು ಸಿಕ್ಕಿತಾದರೂ ಅದನ್ನು ಈಗಿನ ತಂತ್ರಜ್ಞಾನದಲ್ಲಿ ಬಳಸುವುದಕ್ಕೆ ಸಾಧ್ಯವಿರಲಿಲ್ಲ. ಕ್ಯಾಸೆಟ್ಟನ್ನು ಆಧುನಿಕ ತಂತ್ರಜ್ಞಾನಕ್ಕೆ (MP3) ಬದಲಾಯಿಸುವ ಅನಿವಾರ್ಯತೆ ಇತ್ತು. ಹೇಗೋ ಕಷ್ಟಪಟ್ಟು ಒಂದಷ್ಟು ಸಂಗ್ರಹಿಸಿ ಅದನ್ನು ಹೊಸ ತಂತ್ರಜ್ಞಾನಕ್ಕೆ ಬದಲಾಯಿಸಿ ಹಾರ್ಡ್‌ಡಿಸ್ಕ್‌ನಲ್ಲಿ ಸಂಗ್ರಹಿಸಿದ್ದರು. ಆದರೆ ಅವರ ದುರದೃಷ್ಟಕ್ಕೆ, ಸಂಗ್ರಹಿಸುತ್ತಿರುವ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಹಾಳಾಗಿ ಅವರ ಎಲ್ಲಾ ಸಂಗ್ರಹಗಳು ಒಮ್ಮೆಲೇ ಕಳೆದು ಹೋದಾಗ ಬೆಟ್ಟವೇ ತಲೆಯ ಮೇಲೆ ಕುಸಿದಂತಹಾ ಅನುಭವವಾಗಿ ವಿಚಲಿತರಾದರು.

ಆದರೂ ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ. ಈ ಹೊತ್ತಿನಲ್ಲಿ ಕೊಲ್ಲೂರಿನ ಸುದರ್ಶನ್ ಜೋಯ್ಸ್ ಅವರು ಪರಿಚಯವಾಗಿ ಈ  ಕಾರ್ಯದಲ್ಲಿ ಜೊತೆಯಾದರು. ಆಗ ಸಂಗ್ರಹದ ಕಾರ್ಯಕ್ಕೆ ಇನ್ನಷ್ಟು ವೇಗ ಮತ್ತು ಬಲ ಪ್ರಾಪ್ತವಾಯಿತು. ಮೊದಲು ನಾರಾಯಣಪ್ಪ ಉಪ್ಪೂರರ ರೆಕಾರ್ಡುಗಳನ್ನು ಮಾತ್ರ ಸಂಗ್ರಹಿಸುವ ಇಚ್ಛೆಯಿತ್ತಾದರೂ ನಂತರ ಎಲ್ಲಾ ಹಳೆಯ ದಾಖಲೆಗಳನ್ನು ಸಂಗ್ರಹಿಸುವ ಎಂಬ ಆಶಯವನ್ನು ಹೊಂದಿ ಆ ನಿಟ್ಟಿನಲ್ಲಿ ಇಬ್ಬರೂ ತೊಡಗಿಸಿಕೊಂಡರು.

ಸಂಗ್ರಹಿಸುವ ಕಾರ್ಯ ಅಂದುಕೊಂಡಂತೆ ಸುಲಭವಾಗಿರಲಿಲ್ಲ. ಮೊದಲು ಯಾರ ಯಾರ ಬಳಿ ಅಂತಹ ಸಂಗ್ರಹವಿದೆ ಎನ್ನುವುದನ್ನು ತಿಳಿಯಬೇಕಿತ್ತು. ಅದಕ್ಕಾಗಿ ಕಂಡಕಂಡವರಲ್ಲಿ ಆ ಬಗ್ಗೆ ಪ್ರಸ್ತಾವನೆಯನ್ನು ಮಾಡಿದರು. ಕೆಲವರು ಅವರ ಕಾರ್ಯಕ್ಕೆ ಬೆಂಬಲವನ್ನು ನೀಡಿದರೆ ಇನ್ನೂ ಕೆಲವರು ಅಸಡ್ಡೆಯ ಮಾತುಗಳನ್ನು ಆಡಿದರು. ಆದರೂ ತಲೆಕೆಡಿಸಿಕೊಳ್ಳದೇ ತಮ್ಮ ಕಾರ್ಯದತ್ತ ಲಕ್ಷ್ಯ ವಹಿಸಿದರು.

ಹಲವರ ಮೂಲಕವಾಗಿ ಬೇರೆ ಬೇರೆ ಕಡೆಗಳಲ್ಲಿ ಹಳೆಯ ಸಂಗ್ರಹಗಳು ಇರುವುದು ತಿಳಿಯಿತು. ಆದರೆ ಕೆಲವು ಸಮಸ್ಯೆಗಳು ಎದುರಾಗಿದ್ದವು. ಕೆಲವರಿಗೆ ಅದನ್ನು ಮುಕ್ತವಾಗಿ ಕೊಡುವುದಕ್ಕೆ ಮನಸ್ಸಿರಲಿಲ್ಲ. ಅಂಥವರ ಮನವನ್ನು ಒಲಿಸುವ ಸಾಹಸವನ್ನು ಮಾಡಬೇಕಿತ್ತು.  ಕೆಲವರಿಗೆ  ಕೊಡುವುದಕ್ಕೆ ಮನಸ್ಸಿದ್ದರೂ ಅವರ ಸಂಗ್ರಹದ ಹಳೆಯ ಕ್ಯಾಸೆಟ್‌ಗಳು  ಮನೆಯ ಅಟ್ಟವನ್ನು ಸೇರಿ ಫಂಗಸ್ ಹಿಡಿದು ಹಾಳಾಗಿ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿದ್ದವು. ಅಂತೂ ಅದರಲ್ಲಿ ಕೆಲವನ್ನು ಆಯ್ದು, ಧೂಳನ್ನು ಕೊಡವಿ ಮನೆಗೆ ತಂದರು.

ಆದರೆ ಅದನ್ನು ಮತ್ತೆ ಹೊಸ ತಂತ್ರಜ್ಞಾನಕ್ಕೆ ಪರಿವರ್ತಿಸುವುದಕ್ಕೆ  ಟೇಪ್ ರೆಕಾರ್ಡರ್, ವಿಸಿಪಿ ಬೇಕಿತ್ತು. ಆಗಲೇ ಟೇಪ್ ರೆಕಾರ್ಡರ್- ವಿಸಿಪಿಗಳು ಮಾರುಕಟ್ಟೆಯಿಂದ ಮರೆಯಾಗಿದ್ದರಿಂದ ಅದು ಯಾರಲ್ಲಿ ಇದೆ ಎಂಬುದನ್ನು ಶೋಧಿಸಬೇಕಿತ್ತು. ಹಲವು ಕಡೆಗಳಲ್ಲಿ ವಿಚಾರಿಸಿದ ಮೇಲೆ ಎಲ್ಲಿಯೋ ಹಾಳಾದ ಒಂದು ಟೇಪ್ ರೆಕಾರ್ಡರ್  ಸಿಕ್ಕಿತು. ಅದನ್ನು ರಿಪೇರಿ ಮಾಡಿಸುವುದಕ್ಕೆ ಮತ್ತೆ ಹರಸಾಹಸಪಟ್ಟರು. ಹೇಗೋ ಅದನ್ನು ರಿಪೇರಿ ಮಾಡಿಸಿ ಫಂಗಸ್ ತುಂಬಿ ಹಾಳಾಗಿದ್ದ ಟೇಪನ್ನು ಶುದ್ಧೀಕರಿಸಿ ಹೊಸ ತಂತ್ರಜ್ಞಾನಕ್ಕೆ ಬದಲಾಯಿಸುವಾಗ ಸಾಕುಸಾಕಾಗಿ ಹೋಗಿತ್ತು. ನೂರಾರು ಸಂಖ್ಯೆಯಲ್ಲಿ ನಿರ್ಜೀವವಾಗಿದ್ದ ಕ್ಯಾಸೆಟ್‌ಗಳನ್ನು ಶುದ್ಧೀಕರಿಸಿ ಹೊಸ ತಂತ್ರಜ್ಞಾನದ ಮೂಲಕವಾಗಿ ಮತ್ತೆ ಅದು ಜೀವ ತುಂಬಿ ಹಾಡುವಂತೆ ಮಾಡಿದರು. ಉಪಕಾರ ಸ್ಮರಣೆಗಾಗಿ ಕ್ಯಾಸೆಟ್‌ಗಳನ್ನು ತಂದಿದ್ದ  ಮನೆಯವರಿಗೂ ಪರಿವರ್ತನೆಯಾದ ಆಡಿಯೋ/ವಿಡಿಯೋ ಗಳನ್ನು ಕೊಟ್ಟು ಅದು ಮೌಲ್ಯಗೊಳ್ಳುವಂತೆ ಮಾಡಿದರು.

ಸಂಗ್ರಹಗಳು ಯಕ್ಷಗಾನ ವಲಯದಲ್ಲಿ ಬಿಡಿಬಿಡಿಯಾಗಿ ಅಜ್ಞಾತವಾಗಿದ್ದವು. ಈ ಸಂಗ್ರಹಕ್ಕಾಗಿ ಅವರುಗಳು ಸಂಚಾರಿಸದ ಪ್ರದೇಶಗಳಿಲ್ಲ. ಕಾಸರಗೋಡಿನಿಂದ ಯಲ್ಲಾಪುರದವರೆಗೆ ಎಲ್ಲಿ ಸಂಗ್ರಹವಿದೆ ಎಂಬ ಸಣ್ಣ ಸೂಚನೆ ಸಿಕ್ಕರೂ ಸಾಕು, ಅದನ್ನು ಬೆನ್ನಟ್ಟಿಕೊಂಡು ಹೋಗುತ್ತಿದ್ದರು. ಯಾವುದೇ ಫಲಾಪೇಕ್ಷೆಯಿಲ್ಲದೇ ಕೇವಲ ಸ್ವಸುಖಕ್ಕಾಗಿ ಈ ಅಲೆದಾಟವನ್ನು ಮಾಡುತ್ತಿದ್ದರು. ಯಾವಾಗ ಅವರ ಓಡಾಟ ಹೆಚ್ಚಾಯಿತೋ ಈ ಹವ್ಯಾಸಕ್ಕಾಗಿಯೇ ಉದ್ಯೋಗದಿಂದ ವಿಆರ್‌ಎಸ್ (ಸ್ವಯಂನಿವೃತ್ತಿ) ತೆಗೆದುಕೊಂಡು ಇನ್ನಷ್ಟು ಕಾರ್ಯಪ್ರವೃತ್ತರಾದರು. ಅವರು ಸಂಗ್ರಹಿಸುತ್ತಿದ್ದಾರೆ ಎಂಬ ವಾರ್ತೆಯನ್ನು ತಿಳಿದ ಮೇಲೆ ಅವರ ಕಾರ್ಯವನ್ನು ಬೆಂಬಲಿಸಿ ಅನೇಕರು ಇವರ ಸಂಗ್ರಹಕ್ಕೆ ತಮ್ಮ ಕೊಡುಗೆಗಳನ್ನೂ ಸೇರಿಸಿದ್ದಾರೆ. ಅವರಲ್ಲಿ ಪ್ರಮುಖವಾಗಿ ಚಂದಾವರ ಗಣೇಶ್ ಭಟ್, ಗಡಿಗೆಹೊಳೆ ಸುಬ್ರಾಯ ಭಟ್, ಮಂಟಪ ರತ್ನಾಕರ ಉಪಾಧ್ಯ, ಮಂಟಪ ಪ್ರಭಾಕರ ಉಪಾಧ್ಯ, ಪೆರ್ಲ ರಾಮಚಂದ್ರ ಭಟ್, ಎಡನೀರು ಸ್ವಾಮೀಜಿಯವರು, ನಾಗರಾಜ್ ಮತ್ತಿಗಾರ್, ಸುದೇಶ್ ಶೆಟ್ಟಿ, ಮನೋಹರ್ ಕುಂದರ್, ಎಸ್. ವಿ. ಭಟ್, ಡಾ ಶಿವಚಂದ್ರ ಭಟ್ ಮುಂತಾದವರು ಈ ಕಾರ್ಯದ ಸಹಭಾಗಿಗಳಾಗಿದ್ದಾರೆ.

ಕಳೆದ 12 ವರುಷದಲ್ಲಿ ಅವರು ಸಾಕಷ್ಟು ಹಳೆಯ ರೆಕಾರ್ಡುಗಳನ್ನು ಸಂಗ್ರಹಿಸಿದ್ದಾರೆ. ಇಲ್ಲಿಯವರೆಗೆ ಸುಮಾರು 15000 ಜಿಬಿ ಆಗುವಷ್ಟು  ಡೇಟಾವನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ 33000 ವಿಡಿಯೋ ಫೈಲ್‌ಗಳು, 25000 ಆಡಿಯೋ ಫೈಲ್‌ಗಳು ಇವೆ. ಸರಿಸುಮಾರು 13000 ಹೆಚ್ಚು ತಾಳಮದ್ದಳೆಗಳು ಅವರ ಬಳಿಯಿವೆ. ಇದರಲ್ಲಿ ತೆಂಕು, ಬಡಗಿನ ಆಟಗಳು, ತಾಳಮದ್ದಲೆಗಳು,  ಗಾನ ವೈವಿಧ್ಯ ಎಲ್ಲವೂ ಸೇರಿವೆ.

ಹಾರಾಡಿ ಕುಷ್ಟ, ವೀರಭದ್ರ ನಾಯ್ಕ್, ಕುಂಜಾಲು ಶೇಷಗಿರಿ ಭಾಗವತರು, ಜಾನುವಾರಕಟ್ಟೆ, ನೀಲಾವರ ರಾಮಕೃಷ್ಣಯ್ಯ, ಅಂಪಾರು ಕೃಷ್ಣ ವೈದ್ಯರು, ಐರೋಡಿ ರಾಮ ಗಾಣಿಗರು, ಹಾರಾಡಿ ಅಣ್ಣು ಗಾಣಿಗರು, ನೆಲ್ಲೂರು ಮರಿಯಪ್ಪ ಆಚಾರ್, ಘೋರ್ಪಾಡಿ ವಿಠ್ಠಲ ಕಾಮತರು, ದೊಡ್ಡ ಬಲಿಪರು, ಪುತ್ತಿಗೆ, ಜೋಯಿಸರು, ದಾಮೋದರ ಮಂಡೆಚ್ಚರು, ಅಗರಿಯವರು ಮುಂತಾದ ಹಿಂದಿನ ಕಲಾವಿದರ ಧ್ವನಿಗಳಿವೆ.

ಯಕ್ಷಗಾನದಲ್ಲಿ 70-90ರ ದಶಕವನ್ನು ಯಕ್ಷಗಾನದ ಸ್ವರ್ಣಯುಗವೆಂದು ಕರೆಯುತ್ತಾರೆ. ಆ ಸಮಯದಲ್ಲಿ ಬಂದ ಬಹುತೇಕ ಶ್ರೇಷ್ಠ ಕಲಾವಿದರ ಪ್ರದರ್ಶನಗಳು ಇವರ ಸಂಗ್ರಹದಲ್ಲಿವೆ. ಕೆರೆಮನೆ ಶಂಭು ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಶೇಣಿ ಗೋಪಾಲಕೃಷ್ಣ ಭಟ್, ಸಾಮಗದ್ವಯರು, ಚಿಟ್ಟಾಣಿ ರಾಮಚಂದ್ರ ಹೆಗಡೆ, ನಾರಾಯಣಪ್ಪ ಉಪ್ಪೂರ, ನೆಬ್ಬೂರು ನಾರಾಯಣ ಭಾಗವತರು, ಕಾಳಿಂಗ ನಾವಡ, ಸುಬ್ರಹ್ಮಣ್ಯ ಧಾರೇಶ್ವರ, ಕಡತೋಕ ಮಂಜುನಾಥ ಭಾಗವತ ಮುಂತಾದ ಅತಿರಥ ಮಹಾರಥ ಕಲಾವಿದರ ಕಲಾವಂತಿಕೆಗಳು ಸಂಗ್ರಹದಲ್ಲಿದೆ. ಕೇವಲ ಹಳೆಯ ಯಕ್ಷಗಾನಗಳು ಮಾತ್ರವಲ್ಲದೆ ಈಗಿನ ಎಲ್ಲಾ ಕಲಾವಿದರ ಧ್ವನಿಮುದ್ರಿಕೆಗಳಿವೆ.  ಜೊತೆಗೆ 1934 ರ 1958 ಕೆಲವು ರೆಕಾರ್ಡುಗಳು, ಶಿವರಾಮ ಕಾರಂತರ ಬ್ಯಾಲೆಗಳು, ತೆಂಕು-ಬಡಗಿನ ಒಡ್ಡೋಲಗಗಳು ಸೇರಿ ಅನೇಕ ಪಾರಂಪರಿಕ ದಾಖಲೆಗಳು ಅವರ ಸಂಗ್ರಹದಲ್ಲಿರುವುದು ವಿಶೇಷ.
ಇವರ ಸಂಗ್ರಹ ಕಾರ್ಯವನ್ನು ಮೆಚ್ಚಿ ಎನ್ಎರ್‌ಐ ಒಬ್ಬರು ಎಲ್ಲವನ್ನೂ ಒಂದು ಕಡೆಗೆ ಸಂಗ್ರಹಿಸುವ ಉದ್ದೇಶದಿಂದ ಬೆಲೆಬಾಳುವ ಸರ್ವರ್ ಒಂದನ್ನು ನೀಡಿದ್ದಾರೆ. ಇಂತಹಾ ಅಪೂರ್ವ ಸಂಗ್ರಹವನ್ನು ಶಾಶ್ವತವಾಗಿ ಕಾಪಿಡುವ ಹಾಗೂ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡುವ ಉದ್ದೇಶ ಅವರಿಗಿದ್ದರೂ ಕೆಲವು ಹಕ್ಕು ಸ್ವಾಮ್ಯದ ವಿಷಯದ ಕಾರಣದಿಂದ ಅದನ್ನು ಮುಕ್ತವಾಗಿಸಲು ಸಾಧ್ಯವಾಗುತ್ತಿಲ್ಲ.

ಆಕ್ಷೇಪಣೆಯಿಲ್ಲದ ಕೆಲವು ಆಡಿಯೋ/ವಿಡಿಯೋಗಳನ್ನು ಈಗಾಗಲೇ ಯೂಟ್ಯೂಬ್‌ನಲ್ಲಿ ಬಿತ್ತರಿಸುತ್ತಿದ್ದಾರೆ. ಜೊತೆಗೆ ನಿತ್ಯವೂ ಹಳೆಯ ಸೊಬಗನ್ನು ಯಕ್ಷಗಾನಾಸಕ್ತರಿಗೆ ತಲುಪಿಸುವುದಕ್ಕೆ  'ಗುರು ಶಿಷ್ಯರು' ಎನ್ನುವ ವಾಟ್ಸ್ಆ್ಯಪ್ ಮತ್ತು ಟೆಲಿಗ್ರಾಮ್ ಗ್ರೂಪ್‌ಗಳನ್ನು ಮಾಡಿ ಅದರಲ್ಲಿ ಹಂಚುತ್ತಿದ್ದಾರೆ. ಕಳೆದು ಹೋಗುತ್ತಿರುವ ಯಕ್ಷಗಾನದ ಅಂತಃಸತ್ವ ಮತ್ತು ಸೂಕ್ಷ್ಮತೆಯನ್ನು ತಿಳಿಸುವ ಇಂತಹ ಅಮೂಲ್ಯ ದಾಖಲೆಯನ್ನು ಮತ್ತೆ ಯಕ್ಷಗಾನ ವಲಯಕ್ಕೆ ಒದಗಿಸುತ್ತಿರುವ ದಿನೇಶ್ ಉಪ್ಪೂರ ಹಾಗೂ ಅವರ ಬಳಗದ ಕಾರ್ಯ ಶ್ಲಾಘನೀಯವಾಗಿದೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ ಅವರ ಕಾರ್ಯ ಇನ್ನಷ್ಟು ಯಶಸ್ಸನ್ನು ಪಡೆಯಲಿ ಎಂದು ಆಶಿಸೋಣ.

✍ ರವಿ ಮಡೋಡಿ, ಬೆಂಗಳೂರು
 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು