ಯಕ್ಷಗಾನಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -12
✍ ಸುರೇಂದ್ರ ಪಣಿಯೂರ್
ನೃತ್ಯಕಲೆಗೆ ಸಂಬಂಧಿಸಿದ ಗ್ರಂಥ ಅಭಿನಯ ದರ್ಪಣ. ಇದರಲ್ಲಿ ಉಲ್ಲೇಖಿಸಿದಂತೆ ನೃತ್ತ, ನೃತ್ಯ, ನಾಟ್ಯ - ಇವುಗಳಲ್ಲಿ ವ್ಯತ್ಯಾಸವಿದೆ. ಇದನ್ನು ಗಮನಿಸಿದಾಗ ಕಂಡು ಬರುವ ಅಂಶಗಳು ಹೀಗಿವೆ:
ನೃತ್ತ: ಅಂಗಾಗಗಳನ್ನು, ತಾಳ, ಲಯಗಳನ್ನು ಆಶ್ರಯಿಸಿ ಕುಣಿಯುವುದು ನೃತ್ತವಾಗಿರುತ್ತದೆ. ಇಲ್ಲಿ ಯಾವುದೇ ರೀತಿಯ ಭಾವಾಭಿನಯ ಇಲ್ಲ.
ನೃತ್ಯ: ರಸಭಾವಗಳ ಜೊತೆಗೆ ಭಾವಾಭಿನಯ ಇದ್ದರೆ, ಅರ್ಥಾತ್ ಪದ ಹಾಗೂ ಅರ್ಥಗಳ ಅಭಿನಯದಿಂದ ಕೂಡಿದುದು ನೃತ್ಯವಾಗಿರುತ್ತದೆ.
ನಾಟ್ಯ: ಇದು ನಾಟಕ/ನಟನೆಯಿಂದ ಬಂದಿದ್ದು, ಪೂರ್ವಕಥೆಯಿಂದ ಕೂಡಿರುವುದಾಗಿದೆ ಹಾಗೂ ಪೂಜ್ಯನೀಯವಾದುದಾಗಿದೆ. ನಾಟ್ಯದ ಗುರಿ ರಸಪ್ರತಿಪಾದನೆಯಾಗಿರುತ್ತದೆ. ಈ ರಸೋತ್ಪತ್ತಿಗೆ ಬಳಸುವ ಸಾಮಾಗ್ರಿಗಳು ಅಭಿನಯದಲ್ಲಿ ಅಡಕವಾಗಿರುತ್ತದೆ.
ಇಂತಹ ಅಭಿನಯದಲ್ಲಿ ನಾಲ್ಕು ವಿಧಗಳು. ಅವುಗಳೆಂದರೆ ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ.
ಆಹಾರ್ಯವು ವೇಷಭೂಷಣ, ರಂಗಸಜ್ಜಿಕೆ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಆಂಗಿಕವು ಅಂಗಾಂಗಗಳ ಮೂಲಕ ಮಾಡುವ ಅಭಿನಯವಾಗಿರುತ್ತದೆ. ವಾಚಿಕವು ಮಾತಿನ ಮೂಲಕ ಮಾಡುವ ಅಭಿನಯವಾಗಿರುತ್ತದೆ. ಗೀತದ ಭಾವವನ್ನು ಶರೀರದ ಮೂಲಕ ಪ್ರಕಟಪಡಿಸುವುದಕ್ಕೆ ಸಾತ್ವಿಕ ಅನ್ನುತ್ತಾರೆ. ಉದಾಹರಣೆಗೆ, ಕಣ್ಣೀರು ರೋಮಾಂಚನ, ದುಃಖ, ಕೋಪ ಇತ್ಯಾದಿ.
ನಾಟ್ಯದಲ್ಲಿ ವಾಚಿಕ ಹಾಗೂ ಸಾತ್ವಿಕ ಅಭಿನಯಕ್ಕೆ ಪ್ರಾಧ್ಯಾನ್ಯ. ನೃತ್ಯವು ಮಂಗಳಕರವಾದುದು. ಆದುದರಿಂದ ಅದನ್ನು ಜಾತ್ರೆ, ವಿವಾಹ, ಪುರಪ್ರವೇಶ, ಗೃಹಪ್ರವೇಶ, ಪುತ್ರೋತ್ಸವ ಮುಂತಾದ ಸಂದರ್ಭದಲ್ಲಿ ಪ್ರದರ್ಶಿಸಬೇಕು. ರಾಜಸಭೆಯಲ್ಲಿ ಸದಾ ನೃತ್ಯವನ್ನು ಪ್ರದರ್ಶಿಸಬೇಕು ಅನ್ನುತ್ತಾರೆ.
ದೇವತಾ ಪ್ರಾರ್ಥನೆ ಇಲ್ಲದೆ ಮಾಡಿದ ನಾಟ್ಯವು ನೀಚ ನಾಟ್ಯವೆನಿಸುತ್ತದೆ. ಅಂತಹ ನಾಟ್ಯವನ್ನು ಮಾಡಬಾರದು, ನೋಡಬಾರದು. ನೋಡಿದವರು ಪುತ್ರಹೀನನಾಗುತ್ತಾರೆ, ಪಶುವರ್ಗದಲ್ಲಿ ಜನಿಸುತ್ತಾರೆ ಎಂದರೆಸ 'ಪುತ್ರಹೀನಾ ಭವಿಷ್ಯಂತಿ ಜಾಯಂತೇ ಪಶುಯೋನಿಷು' ಅನ್ನುತ್ತದೆ ಶಾಸ್ತ್ರ.
ನಾಟ್ಯ ಪದ್ಧತಿಯು ದೇಶದೆಲ್ಲೆಡೆ ಪಸರಿಸಿದಾಗ ಪ್ರಾದೇಶಿಕವಾದ ಅಂಶಗಳನ್ನು ಒಳಗೊಂಡು ಪ್ರತ್ಯೇಕ ಪ್ರಭೇದಗಳಾಗುವುದು ಸಹಜ. ಹಾಗೆಯೇ ಜಾನಪದ ಕಲೆಗಳು ಈ ನಾಟ್ಯ ಪದ್ಧತಿಗಳ ಮೇಲೆ ಪ್ರಭಾವ ಬೀರಿ, ಅದರಲ್ಲಿಯ ಕೆಲವು ಅಂಶಗಳು ಶಾಸ್ತ್ರೀಯ ನಾಟ್ಯ ಪದ್ಧತಿಯಲ್ಲಿ ಸೇರಿಹೋಗಿರಬಹುದು. ಅದೇ ರೀತಿಯಲ್ಲಿ ಜಾನಪದ ಪದ್ಧತಿಯಲ್ಲಿ ಕೂಡಾ ಶಾಸ್ತ್ರೀಯ ಅಂಶಗಳು ಸೇರಿ ಹೋಗಿರಬಹುದು.
ಇದೆಲ್ಲವನ್ನೂ ಪರಿಶೀಲಿಸುವಾಗ, ಯಕ್ಷಗಾನವೂ ಕೂಡ ಇದೇ ರೀತಿಯ ಶಾಸ್ತ್ರೀಯ ಅಂಶಗಳನ್ನು ಒಳಗೊಂಡಿದೆ ಅನ್ನುವುದು ಸುಸ್ಪಷ್ಟ. ಹಾಗಾಗಿ ಮೇಲೆ ತಿಳಿಸಿದ ಪ್ರತಿಯೊಂದು ಅಂಶಗಳೂ ಯಕ್ಷಗಾನ ಕಲೆಯಲ್ಲಿ ಇವೆ. ಆ ಪ್ರಕಾರವಾಗಿ ಯಕ್ಷಗಾನ ಕಲೆಯು ಪೂರ್ವರಂಗ ಆಚರಣೆಯ ಮೂಲಕ ಆರಾಧನಾ ಕಲೆಯಾಗಿ ಗುರುತಿಸಿಕೊಂಡಿದೆ.
ಇಂತಹ ಕಲೆಯಲ್ಲಿ ತೊಡಗಿಸಿಕೊಂಡವರು ಸಮಾಜದ ಸಾಮಾನ್ಯ ಜನರು. ಅವರಲ್ಲಿ ಹೆಚ್ಚಿನವರು ರೈತಾಪಿ ಜನರು. ಈ ರೈತಾಪಿ ಜನರು ಮಳೆಗಾಲದಲ್ಲಿ ಬೇಸಾಯದ ಕಸುಬನ್ನು ಮುಗಿಸಿದ ನಂತರ ಗದ್ದೆಯಲ್ಲಿ ಬೆಳೆದ ತಮ್ಮ ಫಸಲನ್ನು ಕೊಯ್ದು, ದೀಪಾವಳಿ ಹಬ್ಬದ ಮೂಲಕ ಭೂಮಿ, ಧಾನ್ಯ, ಪಶು ಸಂಪತ್ತನ್ನು ಪೂಜಿಸಿದಲ್ಲಿಗೆ, ಆತನ ಒಂದು ಹಂತದ ಬೇಸಾಯದ ಕೆಲಸ ಕಾರ್ಯಗಳ ಬಹುಪಾಲು ಮುಗಿದ ಹಾಗೆಯೇ. ಮತ್ತೇನಿದ್ದರೂ ಸಣ್ಣ ಪುಟ್ಟ ಕೆಲಸಗಳು.
ಹೀಗೆ ಮುಗಿದ ಬೇಸಾಯದ ಕೆಲಸ ಪುನಃ ಆರಂಭ ಆಗುವುದೇ ಹತ್ತನಾವಧಿ (ಪತ್ತನಾಜೆ) ಕಳೆದ ನಂತರ. ಅದಕ್ಕೆ ಮುಂಚಿನ ಅವಧಿಯಲ್ಲಿ ಊರಿನ ರೈತಾಪಿಯಾದಿಯಾಗಿ ಕೃಷಿ ಕಾರ್ಮಿಕರು, ಭೂಮಾಲೀಕರು ಎಲ್ಲರೂ ಬಿಡುವಿನ ವೇಳೆಯಲ್ಲಿ ಊರಲ್ಲಿಯ ಹಬ್ಬ, ಹರಿದಿನ, ಜಾತ್ರೆ, ಕೋಲ ಮುಂತಾದವುಗಳಲ್ಲಿ ತಮ್ಮ ಸಂತೋಷವನ್ನು ಆಚರಿಸಿದರೆ, ಸರ್ವ ವರ್ಗದ ಸಾಮಾನ್ಯ ಜನರ ಮನರಂಜನೆಯ ಸಿಂಹಪಾಲು ಯಕ್ಷಗಾನ ಕಲೆಗೆ ಸಲ್ಲುತ್ತದೆ.
ಈ ಯಕ್ಷಗಾನ ಪ್ರದರ್ಶನವು ಆಯಾಯ ಊರಿನಲ್ಲಿರುವ ದೇವಳದ ಎದುರು ಬಯಲು ಪ್ರದೇಶ ಅಥವಾ ಊರಲ್ಲಿ ಇದ್ದ ಬಯಲು ಪ್ರದೇಶದಲ್ಲಿ (ಅದು ಹೆಚ್ಚಾಗಿ ಗದ್ದೆ ಬಯಲಿನಲ್ಲೇ ) ಪ್ರದರ್ಶನಗೊಳ್ಳುತ್ತಿತ್ತು.
ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಈ ಬಯಲು ಭೂಮಿ ಊರಿನ ಮಧ್ಯದಲ್ಲೇ ಇದ್ದುದರಿಂದ ಊರಿನ ಸುತ್ತುಮುತ್ತಲಿನವರಿಗೆ ಒಟ್ಟು ಸೇರಲು ಅನುಕೂಲವಾಗುತ್ತಿತ್ತು. ಈ ಬಯಲಲ್ಲಿ ಪ್ರದರ್ಶನಗೊಳ್ಳುವ ಆಟ ಎನ್ನುವ ಕಾರಣಕ್ಕಾಗಿ ಬಯಲಾಟ ಅನ್ನುವ ಹೆಸರು ಬಂದಿರಲೂ ಸಾಕು. ಯಾಕೆಂದರೆ ಆದಿಯಿಂದಲೂ ಈ ಯಕ್ಷಗಾನ ಪ್ರದರ್ಶನವು ಮುಕ್ತ ಬಯಲುರಂಗದಲ್ಲಿಯೇ ಪ್ರದರ್ಶನಗೊಂಡ ಕಲೆ.
ಭರತನ ನಾಟ್ಯ ಶಾಸ್ತ್ರ ಪ್ರಕಾರ, ಒಂದು ರಂಗಭೂಮಿಯು ಹೇಗಿರಬೇಕೆಂದರೆ, ಎದುರು ಕುಳಿತ ಪ್ರೇಕ್ಷಕರಿಗೆ ರಂಗದಲ್ಲಿಯ ವಾಚಿಕದ ಶಬ್ಧವು ಸುಸ್ಪಷ್ಟವಾಗಿ ಕೇಳುವಂತಿರಬೇಕು. ರಂಗದಲ್ಲಿ ಕಲಾವಿದನು ಅಭಿನಯಿಸುವ ಆಯಾಯ ಪಾತ್ರಗಳ ಮನಸ್ಸಿನ ಭಾವನೆಗಳನ್ನು ಕಲಾವಿದನ ಮುಖದಲ್ಲಿ ಉಂಟಾಗುವ ಕಳೆಯಿಂದ ಪ್ರೇಕ್ಷಕರು ಸುಲಭವಾಗಿ ತಿಳಿಯುವಂತೆ ಹತ್ತಿರದಲ್ಲಿರಬೇಕು. ಇದೆಲ್ಲದಕ್ಕೆ ಯಾವುದೇ ರೀತಿಯ ಅಡ್ಡಿ-ಆತಂಕವಾಗದ ತೆರದಲ್ಲಿ ಯಕ್ಷಗಾನ ಪ್ರದರ್ಶನವು ಗದ್ದೆ ಬಯಲಲ್ಲಿ ಆಡುವಲ್ಲಿ ಹೆಚ್ಚು ಅನುಕೂಲವಾಗುತ್ತಿತ್ತು.
ಯಕ್ಷಗಾನ ಕಲೆಯು ಈಗಾಗಲೇ ಹೇಳಿರುವಂತೆ ಆರಾಧನಾ ಕಲೆಯಾಗಿ ಸಂಚಾರೀ ವ್ಯವಸ್ಥೆಯಲ್ಲಿ ಊರೂರು ತಿರುಗಾಟ ಮಾಡಲು ಆರಂಭ ಮಾಡಿದ ಕಾಲದಲ್ಲಿ ಇದರ ಪ್ರದರ್ಶನವು ರಾತ್ರಿ ಕಾಲದಲ್ಲೇ ಜರುಗುತಿತ್ತು. ಈ ರೀತಿಯ ಯಕ್ಷಗಾನ ಪ್ರದರ್ಶನಗಳು ಆರಂಭಗೊಳ್ಳುವುದೇ ಪೂರ್ವರಂಗದೊಂದಿಗೆ.
ನಾಟ್ಯ ಶಾಸ್ತ್ರಕಾರ ಭರತಮುನಿಯು ಪೂರ್ವ ರಂಗವನ್ನು ಹೀಗೆ ಹೇಳಿರುತ್ತಾನೆ - ನಾಟ್ಯದ ಮುಂಚೆ ರಂಗಸ್ಥಳದಲ್ಲಿ ದೇವತೆಗಳ ಮನಸ್ಸನ್ನು ಸಂಪ್ರೀತಗೊಳಿಸುವ ಪೂಜೆ ಇದಾಗಿದ್ದು, ಪ್ರಯೋಗಕ್ಕೆ ಯಶಸ್ಸನ್ನೂ ಹಾಗೂ ಆಯುಷ್ಯವನ್ನೂ ಕೊಡುವ ರಂಗಾರ್ಚನೆಯಾಗಿರುತ್ತದೆ. ಇದರಲ್ಲಿ ಹಲವಾರು ಅಂಗಗಳಿದ್ದು, ಆರಂಭ, ಅಶ್ರಾವಣಾ, ಬಹಿರ್ಗೀತ, ತ್ರಿಗತ ಹಾಗೂ ಪ್ರರೋಚನಾ ಅಂಗಗಳನ್ನು ಯಕ್ಷಗಾನದಲ್ಲಿಯೂ ನೋಡಬಹುದು. (ಸಶೇಷ).
- ಸುರೇಂದ್ರ ಪಣಿಯೂರ್
ಗ್ರಂಥ ಋಣ:
1) ನಾಟ್ಯ ಶಾಸ್ತ್ರ: ಕನ್ನಡ ಅನುವಾದ - ಆದ್ಯ ರಂಗಾಚಾರ್ಯ.
2) ನಂದಿಕೇಶ್ವರನ ಅಭಿನಯ ದರ್ಪಣ: ಕನ್ನಡ ಅನುವಾದ ಪ್ರೊ|ಎಂ. ಎ. ಹೆಗಡೆ.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಲೇಖನ