ಕಾಳಿಂದೀ ವಾಸಿ ಕಾಳಿಂಗ ಮರ್ದನದ ಕಥೆ


ಪುರಾಣ ತಿಳಿಯೋಣ: ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
ಗರುಡ-ನಾಗ ನಡುವಿನ ಜಗಳದ ಕಥೆಯನ್ನು ಇಲ್ಲಿ ತಿಳಿದಿರಿ. ಹೀಗೆಯೇ ವರ್ಷಗಳು ಮಾತ್ರವಲ್ಲ ಯುಗಗಳು ಕೂಡಾ ಉರುಳಿದವು. ಕಾಳಿಂಗನು ರಮಣಕ ದ್ವೀಪಕ್ಕೆ ಅಧಿಪತಿಯಾದನು. ಆಗ ನಾಗಗಳು ಗರುಡನ ವಿಷಯವನ್ನು ಹೇಳಿ ತಿಂಗಳೊಂದಕ್ಕೆ ಒಂದೊಂದು ನಾಗನನ್ನು ಕಳೆದುಕೊಳ್ಳುವುದನ್ನು ತಪ್ಪಿಸುವಂತೆ ಕೇಳಿಕೊಂಡವು. ಆ ವಿಷಯವನ್ನು ನೆನಪಿಸಿಕೊಂಡ ಕಾಳಿಂಗನಿಗೆ ಕೋಪ ಉಕ್ಕೇರಿತು. ಗರುಡನಿಗೆ ಕೊಡುತ್ತಿರುವ ಬಲಿಕಪ್ಪವನ್ನು ಆತ ನಿಲ್ಲಿಸುವಂತೆ ಆಜ್ಞಾಪಿಸಿದನು.

ಇದರಿಂದ ಕೆರಳಿದ ಗರುಡನು ಕಾಳಿಂಗನೊಡನೆ ಯುದ್ಧಕ್ಕೆ ಬಂದನು. ಮಹಾವಿಷ್ಣುವಿನ ವಾಹನನಾದ ಮೇಲೆ ಗರುಡನ ವರ್ಚಸ್ಸು ಇನ್ನಷ್ಟು ಹೆಚ್ಚಿತ್ತು. ಅವನೊಡನೆ ಯುದ್ಧ ಮಾಡಿ ಗೆಲ್ಲುವುದಕ್ಕೆ ಈ ಕಾಳಿಂಗನಿಗೆ ಸಾಧ್ಯವೇ? ನಿರೀಕ್ಷೆಯಂತೆಯೇ ಕಾಳಿಂಗನು ಸೋತನು. ಗರುಡನು ತನ್ನನ್ನೇ ತಿನ್ನಲು ಬಂದಾಗ ಹೆದರಿದ ಕಾಳಿಂಗನು ತನ್ನ ನಾಗಿಣಿಯರೊಡನೆ ರಮಣಕ ದ್ವೀಪವನ್ನೇ ತೊರೆದು ಓಡಿ ಹೋದನು.

ಹಿಂದೆ ಒಮ್ಮೆ ಸೌಭರಿ ಮಹರ್ಷಿಗಳು ಯಮುನಾ ನದಿಯ ನೀರಿನಲ್ಲಿ ಮುಳುಗಿ ಧ್ಯಾನದಲ್ಲಿ ನಿರತರಾಗಿದ್ದಾಗ ಗರುಡನು ಅಲ್ಲಿಗೆ ಬಂದು ಮೀನುಗಳನ್ನು ಭಕ್ಷಿಸತೊಡಗಿದನು. ಇದರಿಂದ ಮುನಿಗಳ ಧ್ಯಾನಕ್ಕೆ ಭಂಗವಾಗಿದ್ದರಿಂದ ಅವರು ಗರುಡನನ್ನು "ಇನ್ನು ಮುಂದೆ ಮೀನು ತಿನ್ನಲು ಇಲ್ಲಿಗೆ ಬಂದರೆ ನೀನು ತಕ್ಷಣ ಸತ್ತುಹೋಗು" ಎಂದು ಶಪಿಸಿದರು. ಹೀಗಾಗಿ ಸೌಭರಿ ಮುನಿಗಳ ಶಾಪಕ್ಕೆ ಒಳಗಾಗಿದ್ದ ಗರುಡನಿಗೆ ಕಾಳಿಂದಿ ನದಿಯ ಆ ಮಡುವಿಗೆ ಪ್ರವೇಶ ಇರಲಿಲ್ಲ. ಈ ವಿಷಯವು ಕಾಳಿಂಗನಿಗೆ ತಿಳಿದಿತ್ತು. ಹೀಗಾಗಿ ಅವನು ತನ್ನ ನಾಗಿಣಿಯರೊಡನೆ ಯಮುನಾ ನದಿಯಲ್ಲಿ ಮುಳುಗಿ ಅಡಗಿ ಕುಳಿತುಕೊಂಡನು.

ಕಾಳಿಂಗ ಸರ್ಪವು ಯಮುನಾ ನದಿಯೊಳಗೆ ವಾಸ ಮಾಡುತ್ತಿದ್ದುದರಿಂದ ಅದರ ವಿಷದಿಂದಾಗಿ ಇಡೀ ಪ್ರದೇಶವೇ ಕಲ್ಮಷವಾಯಿತು. ನದಿಯ ನೀರಿನಿಂದ ಅವ್ಯಾಹತವಾಗಿ ವಿಷ ವಾಯು ಹೊರಹೊಮ್ಮತೊಡಗಿತು. ಆ ಪ್ರದೇಶದಲ್ಲಿ ಹಕ್ಕಿಗಳು ಹಾರಾಡಿದರೆ ಅವು ಪ್ರಜ್ಞೆ ತಪ್ಪಿ ಬೀಳತೊಡಗಿದವು ಅಥವಾ ಸಾಯತೊಡಗಿದವು. ನದಿಯ ಆಸುಪಾಸಿನ ಗಿಡ ಮರಗಳೂ ಕೂಡಾ ಒಣಗಿ ಹೋಗತೊಡಗಿದವು.

ಹೀಗಿರುವಾಗ ಒಮ್ಮೆ ಬಲರಾಮ-ಕೃಷ್ಣರು ಮಿತ್ರರೊಡಗೂಡಿ ಹಸುಗಳನ್ನು ಮೇಯಿಸಲು ಯಮುನಾ ತೀರಕ್ಕೆ ಹೋದರು. ನೀರಡಿಕೆಯಿಂದ ಹಸುಗಳು ನದಿ ನೀರು ಕುಡಿದಾಗ ವಿಷಪೂರಿತ ಜಲದಿಂದಾಗಿ ಪ್ರಜ್ಞೆ ತಪ್ಪಿ ಬಿದ್ದವು. ಹಸು ಮೇಯಿಸುತ್ತಿದ್ದ ಬಾಲಕರು ಸಹಾಯಕ್ಕಾಗಿ ಕೂಗತೊಡಗಿದರು. ಗಲಾಟೆ ಕೇಳಿ ಕೃಷ್ಣ ಅಲ್ಲಿಗೆ ಬಂದನು. ಹಸುಗಳು ಬಿದ್ದಿರುವುದನ್ನು ನೋಡಿ ಕೂಡಲೇ ತನ್ನ ವೇಣುವಾದನದಿಂದ ಅವುಗಳನ್ನು ಎಬ್ಬಿಸಿ ಆರೈಕೆ ಮಾಡಿದನು. ನಂತರ ನದಿಗೆ ಧುಮುಕಿದನು. ಇದರಿಂದ ಕಾಲೀಯನಿಗೆ ರೋಷ ಉಂಟಾಗಿ ಜೋರಾಗಿ ಶಬ್ದ ಮಾಡುತ್ತ ಕೃಷ್ಣನ ಮೇಲೆ ಎರಗಲು ಮುಂದಾದನು. ಇಬ್ಬರಿಗೂ ಯುದ್ಧವಾಯಿತು. ಯುದ್ಧದಲ್ಲಿ ಕಾಳಿಂಗನಿಗೆ ಸೋಲಾಯಿತು. ಕಾಳಿಂಗನ ಹೆಡೆಗಳ ಮೇಲೇರಿ ಕೃಷ್ಣನು ನರ್ತನ ಮಾಡತೊಡಗಿದನು. ಕಾಲೀಯನು ಸೋತು ಬಸವಳಿದು ಹೋದನು. ಆಗ ಅವನ ನಾಗಿಣಿಯರು ಬಂದು ತಮ್ಮ ಗಂಡನ ಪ್ರಾಣ ಉಳಿಸುವಂತೆ ಬೇಡಿಕೊಂಡರು.

ಪ್ರಸನ್ನನಾದ ಕೃಷ್ಣನು ಕಾಳಿಂಗನಿಗೆ "ಈ ಯಮುನೆಯನ್ನು ಬಿಟ್ಟು ಹೋಗು" ಎಂದು ಅಪ್ಪಣೆ ಮಾಡಿದನು. ಆಗ ಕಾಳಿಂಗನು "ಈ ಯಮುನೆಯಿಂದ ಹೊರಗೆ ಬಂದರೆ ಆ ಗರುಡನು ನನ್ನನ್ನು ಕೊಲ್ಲುತ್ತಾನೆ, ನನ್ನನ್ನು ಕಾಪಾಡು" ಎಂದನು. ಆಗ ಕೃಷ್ಣನು "ಭಯಪಡಬೇಡ. ನಿನ್ನ ಹೆಡೆಗಳ ಮೇಲೆ ಕುಣಿದಾಡಿದ್ದರಿಂದಾಗಿ ನನ್ನ ಕಾಲಿನ ಗುರುತುಗಳು ಅಲ್ಲಿ ಉಂಟಾಗಿವೆ, ಅವುಗಳನ್ನು ನೋಡಿದರೆ ಆ ಗರುಡನು ನಿನಗೆ ಏನೂ ಅಪಾಯ ಉಂಟು ಮಾಡಲಾರ" ಎಂದು ಸಾಂತ್ವನ ಹೇಳಿ ಕಾಳಿಂಗನನ್ನು ಪಾತಾಳಕ್ಕೆ ಕಳುಹಿಸಿಕೊಟ್ಟನು. ಅಂದಿನಿಂದ ಎಲ್ಲಾ ನಾಗಗಳು ಪಾತಾಳವಾಸಿಗಳಾದವು.

ಲೇಖನ: ಹರಿಕೃಷ್ಣ ಹೊಳ್ಳ, ಬ್ರಹ್ಮಾವರ

Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು