ಪುರಾಣ ತಿಳಿಯೋಣ by ದಾಮೋದರ ಶೆಟ್ಟಿ, ಇರುವೈಲು
ಪಾಂಡವರ ಕಾಲದಲ್ಲಿ ಪಾಂಡ್ಯ ದೇಶವನ್ನು ಚಿತ್ರಾಂಗದ ಎಂಬ ರಾಜನು ಆಳುತ್ತಿದ್ದನು. ಇವನನ್ನು ಮಲಯಧ್ವಜ, ಚಿತ್ರವಾಹನ, ಪ್ರವೀರ ಎಂದೆಲ್ಲಾ ಕರೆಯುತ್ತಿದ್ದರು.
ಮಣಿಪುರ (ಅಥವಾ ಮಣಲೂರು) ಪಾಂಡ್ಯ ದೇಶದ ರಾಜಧಾನಿಯಾಗಿತ್ತು. ಚಿತ್ರಾಂಗದನಿಗೆ ಚಿತ್ರಾಂಗದೆ ಎಂಬ ಹೆಣ್ಣು ಮಗಳಿದ್ದಳು. ಚಿತ್ರಾಂಗದನು ಮಗಳನ್ನು ಮಗನಂತೆಯೇ ಬೆಳೆಸಿ, ಅವಳಿಗೆ ಶಸ್ತ್ರಾಸ್ತ್ರ ವಿದ್ಯೆ ಸೇರಿದಂತೆ ಸಕಲ ವಿದ್ಯೆಗಳನ್ನೂ ಕಲಿಸಿದನು. ಚಿತ್ರಾಂಗದೆಯು ತಂದೆಯೊಂದಿಗೆ ನಿರಂತರವಾಗಿ ಇರುತ್ತಾ ರಾಜ್ಯವನ್ನಾಳುವ ಕ್ರಮವನ್ನೂ ಸಹ ಕಲಿತಳು.
ಒಮ್ಮೆ ಚಿತ್ರಾಂಗದೆಯು ಬೇಟೆಗಾಗಿ ಕಾಡಿಗೆ ಬಂದಿದ್ದಳು. ಅದೇ ಸಮಯಕ್ಕೆ ಸರಿಯಾಗಿ ತೀರ್ಥಯಾತ್ರೆಯನ್ನು ಮಾಡುತ್ತಿದ್ದ ಅರ್ಜುನನೂ ಅದೇ ಅರಣ್ಯಕ್ಕೆ ಬಂದನು. ಅರ್ಜುನನು ಚಿತ್ರಾಂಗದೆಯನ್ನು ನೋಡಿದನು. ಚಿತ್ರಾಂಗದೆಯು ಅರ್ಜುನನನ್ನು ನೋಡಿದಳು. ಇಬ್ಬರ ಕಣ್ಣುಗಳು ಕಲೆತವು, ಮನಸ್ಸುಗಳು ಮಾತನಾಡಿಕೊಂಡವು. ಇಬ್ಬರ ಹೃದಯಗಳಲ್ಲೂ ಪ್ರೇಮಾಂಕುರವಾಯಿತು.
ಅರ್ಜುನನು ಅವಳ ಬಳಿ ಹೋಗಿ, "ಸುಂದರಿ, ನೀನು ಯಾರು? ನಾನು ಮಧ್ಯಮ ಪಾಂಡವನಾದ ಅರ್ಜುನ. ನೀನು ಒಪ್ಪಿದರೆ ನಿನ್ನನ್ನು ಮದುವೆಯಾಗುತ್ತೇನೆ" ಎಂದು ನೇರವಾಗಿ ವಿಷಯಕ್ಕೇ ಬಂದುಬಿಟ್ಟನು. ಇದರಿಂದ ತಬ್ಬಿಬ್ಬಾದ ಚಿತ್ರಾಂಗದೆಯು "ನಮ್ಮ ತಂದೆಯವರು ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ" ಎಂದು ಹೇಳಿ ಅರ್ಜುನನನ್ನು ತನ್ನ ತಂದೆಯ ಬಳಿ ಕರೆದೊಯ್ದು ವಿಷಯವನ್ನು ತಂದೆಗೆ ತಿಳಿಸಿದಳು.
ಕುರು ವಂಶದ ಪ್ರತಿಷ್ಠೆಯ ಬಗ್ಗೆ ಕೇಳಿದ್ದರಿಂದ ಚಿತ್ರಾಂಗದನಿಗೆ ಪಾರ್ಥನ ವಿಷಯದಲ್ಲಿ ಆಲೋಚಿಸುವ ಕಾರಣವೇ ಇರಲಿಲ್ಲ. ಆಗ ಅವನು "ಅರ್ಜುನ, ನನ್ನ ಮಗಳ ಆಯ್ಕೆ ಪ್ರಶಸ್ತವಾಗಿದೆ. ಆದರೆ ನನಗೊಬ್ಬಳೇ ಮಗಳು. ನನಗೆ ಮಗಳಾದರೂ ಅವಳೇ, ಮಗನಾದರೂ ಅವಳೇ. ಅವಳೇ ನನ್ನ ವಂಶದ ಉದ್ಧಾರಕಳು. ನೀನು ಇವಳಲ್ಲಿ ಹುಟ್ಟುವ ಮಗನನ್ನು ಕನ್ಯಾಶುಲ್ಕ ರೂಪದಲ್ಲಿ ನನಗೆ ಕೊಡಲು ಒಪ್ಪಿದರೆ ನನ್ನದೇನೂ ಅಭ್ಯಂತರವಿಲ್ಲ" ಎಂದನು.
ಅರ್ಜುನನು ನಿಬಂಧನೆಗೆ ಒಪ್ಪಿ ಚಿತ್ರಾಂಗದೆಯನ್ನು ಮದುವೆಯಾದನು. ಅಲ್ಲಿ ಕೆಲಕಾಲವಿದ್ದ ಅರ್ಜುನನು ತನ್ನ ತೀರ್ಥಯಾತ್ರೆಯನ್ನು ಮುಂದುವರಿಸಿದನು. ಕಾಲಕ್ರಮದಲ್ಲಿ ಚಿತ್ರಾಂಗದೆಗೆ ಬಭ್ರುವಾಹನ ಎಂಬ ಪುತ್ರನು ಜನಿಸಿದನು.
ತಂದೆತಾಯಿಯರ ಶೌರ್ಯ ಧೈರ್ಯಗಳನ್ನು ಹುಟ್ಟಿನಿಂದಲೇ ಬಳುವಳಿಯಾಗಿ ಪಡೆದ ಬಭ್ರುವಾಹನನು ಸಹಜವಾಗಿಯೇ ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿ ಹೊಂದಿದನು. ಚಿತ್ರಾಂಗದೆಯೇ ಮಗನಿಗೆ ಯುದ್ಧ ವಿದ್ಯೆಯನ್ನು ಕಲಿಸಿದಳು. ತಾತನ ಮರಣದ ನಂತರ ಬಭ್ರುವಾಹನನೇ ಪಾಂಡ್ಯ ದೇಶಕ್ಕೆ ರಾಜನಾಗಿ ಧರ್ಮದಿಂದ ರಾಜ್ಯವನ್ನು ಪರಿಪಾಲಿಸುತ್ತಿದ್ದನು.
ಮಹಾಭಾರತ ಯುದ್ಧ ಮುಗಿದ ನಂತರ, ಯುಧಿಷ್ಠಿರನು ಚಕ್ರವರ್ತಿಯಾದ ಮೇಲೆ ಅಶ್ವಮೇಧ ಯಾಗವನ್ನು ಪ್ರಾರಂಭಿಸಿ, ಯಜ್ಞಾಶ್ವದ ರಕ್ಷಣೆಗಾಗಿ ಸೈನ್ಯದೊಂದಿಗೆ ಅರ್ಜುನ ಮತ್ತು ವೃಷಕೇತುರನ್ನು ಕಳುಹಿಸಿದನು. ಯಜ್ಞಾಶ್ವವು ತನ್ನ ಇಚ್ಛೆಯಂತೆ ಸಂಚರಿಸುತ್ತಾ ಮಾಹಿಷ್ಮತೀ ನಗರದ ಎಲ್ಲೆಗೆ ಬಂದು ನಿಂತಿತು.
ಆ ಸಮಯದಲ್ಲಿ ನೀಲಧ್ವಜನು ಮಾಹಿಷ್ಮತಿಗೆ ರಾಜನಾಗಿದ್ದನು. ನೀಲಧ್ವಜನು ಜ್ವಾಲಾ ಎಂಬ ಭಾರ್ಯೆಯಲ್ಲಿ ಪ್ರವೀರ ಎಂಬ ಪುತ್ರನನ್ನೂ, ಸ್ವಾಹಾ ಎಂಬ ಪುತ್ರಿಯನ್ನೂ ಪಡೆದಿದ್ದನು.
ಯಜ್ಞಾಶ್ವವು ನಗರದ ಎಲ್ಲೆಗೆ ಬಂದಿರುವುದನ್ನು ತಿಳಿದ ಜ್ವಾಲೆಯು ಅಶ್ವವನ್ನು ಬಂಧಿಸಲು ಪತಿಗೆ ಹೇಳಿದಳು. ನೀಲಧ್ವಜನು ಮೊದಮೊದಲು ನಿರಾಕರಿಸಿದರೂ, ಪತ್ನಿಯ ಒತ್ತಡಕ್ಕೆ ಮಣಿದು ಅಶ್ವವನ್ನು ಬಂಧಿಸಿ ಯುದ್ಧವನ್ನು ಪ್ರಾರಂಭಿಸಿದನು. ಯುದ್ಧದಲ್ಲಿ ಸೋತು ಮಗನಾದ ಪ್ರವೀರನನ್ನೂ ಕಳಕೊಂಡನು. ಇಷ್ಟೆಲ್ಲಾ ಅನರ್ಥಗಳಿಗೆ ತನ್ನ ಪತ್ನಿಯೇ ಕಾರಣಳೆಂದು ತಿಳಿದ ನೀಲಧ್ವಜನು ಪತ್ನಿಯನ್ನು ಪರಿತ್ಯಜಿಸಿದನು. ಅವಳು ಗಂಗಾ ತೀರಕ್ಕೆ ಹೋಗಿ ಗಂಗೆಯನ್ನು ನಿಂದಿಸಲು ಪ್ರಾರಂಭಿಸಿದಳು.
ಜ್ವಾಲೆಯ ಕಟು ನುಡಿಗಳನ್ನು ಕೇಳಲಾರದೆ ಗಂಗೆಯು ಬಂದು "ಹೀಗೇಕೆ ಮನಬಂದಂತೆ ನನ್ನನ್ನು ನಿಂದಿಸುತ್ತಿದ್ದೀಯೆ?" ಎಂದು ಕೇಳಿದಳು. ಆಗ ಜ್ವಾಲಾ ದೇವಿಯು "ನಿನ್ನ ಮಗ ಭೀಷ್ಮನನ್ನು ಮೋಸದಿಂದ ಕೊಂದವನನ್ನು (ಅರ್ಜುನ) ಶಿಕ್ಷಿಸದೆ ಸುಮ್ಮನೆ ಕುಳಿತಿರುವವಳನ್ನು ಹೊಗಳಲು ಸಾಧ್ಯವೇ?" ಎಂದಳು. ಆಗ ಗಂಗೆಗೂ ಸಹ ಕೋಪ ಬಂದು "ಇನ್ನು ಆರು ತಿಂಗಳ ಒಳಗಾಗಿ ಅರ್ಜುನನ ತಲೆಯನ್ನು ಮಗನೇ ಕತ್ತರಿಸಲಿ" ಎಂದು ಶಪಿಸಿದಳು.
ಇಷ್ಟಾದರೂ ಜ್ವಾಲೆಗೆ ಅರ್ಜುನನ ಮೇಲೆ ಸಿಟ್ಟು ಕಡಿಮೆಯಾಗದೆ ಅವಳು ಅಗ್ನಿ ಪ್ರವೇಶ ಮಾಡಿ ಒಂದು ಅಸ್ತ್ರವಾಗಿ ಬಭ್ರುವಾಹನನ ಬತ್ತಳಿಕೆಯನ್ನು ಸೇರಿದಳು. ಮಾಹಿಷ್ಮತಿಯ ರಾದ್ಧಾಂತ ಮುಗಿದ ಮೇಲೆ ಯಜ್ಞಾಶ್ವವು ಮಣಿಪುರದ ಎಲ್ಲೆಯನ್ನು ತಲುಪಿತು. ಬಭ್ರುವಾಹನನ ಆಜ್ಞೆಯಂತೆ ಸೈನಿಕರು ಯಜ್ಞಾಶ್ವವನ್ನು ಬಂಧಿಸಿದರು. ವಿಷಯ ತಿಳಿದ ಚಿತ್ರಾಂಗದೆಯು ಆಸ್ಥಾನಕ್ಕೆ ಬಂದು "ಮಗನೇ ಎಂತಹಾ ಕೆಲಸ ಮಾಡಿಬಿಟ್ಟೆ? ಅರ್ಜುನನಿಂದಲೇ ಜನಿಸಿ ಅವನ ಕುದುರೆಯನ್ನೇ ಕಟ್ಟಿ ಹಾಕಬಹುದೇ? ಅವನ ಪಾದಕ್ಕೆ ಮಣಿದು ಕ್ಷಮೆಯಾಚಿಸು" ಎಂದು ಹೇಳಿದಳು.
ತಾಯಿಯ ಮಾತಿನಂತೆ ಬಭ್ರುವಾಹನನು ಕಪ್ಪ ಕಾಣಿಕೆಗಳೊಂದಿಗೆ ಅರ್ಜುನನಲ್ಲಿಗೆ ಹೋಗಿ, ಸಾಷ್ಟಾಂಗ ನಮಸ್ಕಾರ ಮಾಡಿದನು. ಗಂಗೆಯ ಶಾಪದ ಪ್ರಭಾವದಿಂದ ಅರ್ಜುನನು ಸ್ಥಿಮಿತವನ್ನು ಕಳೆದುಕೊಂಡು ಬಭ್ರುವಾಹನನನ್ನು ನಿಂದಿಸುತ್ತಾ "ನೀನು ನನ್ನ ಮಗನೇ ಆಗಿದ್ದರೆ, ಅಶ್ವವನ್ನು ಬಂಧಿಸಿ ವೀರೋಚಿತವಾಗಿ ಯುದ್ಧವನ್ನು ಮಾಡುತ್ತಿದ್ದೆ. ನನ್ನಂತಹ ಸಿಂಹದ ಹೊಟ್ಟೆಯಲ್ಲಿ ನಿನ್ನಂತಹ ನರಿಯು ಹುಟ್ಟಲು ಸಾಧ್ಯವೇ ಇಲ್ಲ. ನೀನು ಜಾರಿಣಿಯ ಮಗನೇ ಆಗಿರಬೇಕು' ಎಂದು ಹೇಳಿದನು.
ಅರ್ಜುನನ ಕಠಿಣ ನಿಂದೋಕ್ತಿಗಳನ್ನು ಕೇಳಿದ ಬಭ್ರುವಾಹನನ ರಕ್ತ ಕುದಿಯಿತು. "ಅರ್ಜುನ, ನಾನು ಹೇಡಿಯಲ್ಲ. ತಾಯಿಯ ಮಾತನ್ನು ಗೌರವಿಸಲು ಹಾಗೂ ಪಿತೃ ಭಕ್ತಿಯನ್ನು ವ್ಯಕ್ತಪಡಿಸಲು ನಾನು ಯುದ್ಧವನ್ನು ಬಯಸಲಿಲ್ಲ. ನನ್ನ ಪಿತೃಭಕ್ತಿಯನ್ನೇ ತಪ್ಪಾಗಿ ತಿಳಿದು ನನ್ನ ತಾಯಿಯನ್ನು ನಿಂದಿಸಿದ ನಿನ್ನ ತಲೆಯನ್ನು ಕೆಳಕ್ಕೆ ಕೆಡವದಿದ್ದರೆ ನಾನು ಪತಿವ್ರತೆಯಾದ ಚಿತ್ರಾಂಗದೆಯ ಪುತ್ರನೇ ಅಲ್ಲ" ಎಂದು ಹೇಳಿ ಯುದ್ಧವನ್ನು ಪ್ರಾರಂಭಿಸಿದನು.
ಬಭ್ರುವಾಹನನ ಯುದ್ಧ ಪ್ರಖರತೆಗೆ ಅರ್ಜುನನೇ ತತ್ತರಿಸಿ ಹೋದನು. ವೃಷಕೇತುವು ತಂದೆಯಾದ ಕರ್ಣನ೦ತೆ ವೀರೋಚಿತವಾಗಿ ಕಾದಾಡಿ ಧರಾಶಾಯಿಯಾದನು. ಪ್ರತಿಜ್ಞೆಯಂತೆ ಅರ್ಜುನನ ಶಿರವನ್ನೂ ಕತ್ತರಿಸುತ್ತಾನೆ. ಕೊನೆಗೆ ಕೃಷ್ಣನೇ ಬಂದು ಎಲ್ಲವನ್ನೂ ಸುಖಾಂತವಾಗಿಸುತ್ತಾನೆ.
ಸೂಚನೆ 1: ಹೆಣ್ಣು ಮಕ್ಕಳೇ ಇರುವ ದಂಪತಿಗಳು ತಮ್ಮ ಹೆಣ್ಣು ಮಕ್ಕಳಲ್ಲಿ ಹುಟ್ಟುವ ಗಂಡು ಸಂತಾನವು ತಮ್ಮ ಪುತ್ರನಾಗಿ ತಮ್ಮ ಶ್ರಾದ್ಧಾದಿ ಕರ್ಮಗಳನ್ನು ಮಾಡಬೇಕೆಂಬ ನಿಬಂಧನೆಯೊಂದಿಗೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡುತ್ತಿದ್ದರು. ಈ ಪದ್ಧತಿಯನ್ನು ಪುತ್ರಿಕಾ ಧರ್ಮ ವಿವಾಹ ಎಂದು ಕರೆಯುತ್ತಾರೆ.
ಸೂಚನೆ 2: ಬಭ್ರುವಾಹನನ ಕಥೆಯು ವಿವಿಧ ಮೂಲಗಳಲ್ಲಿ ವಿಭಿನ್ನವಾಗಿದೆ. ನಾನು ಈ ಕಥೆಯನ್ನು ಜೈಮಿನೀ ಭಾರತದಿಂದ ತೆಗೆದುಕೊಂಡಿದ್ದೇನೆ.
✍️ ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪ್ರಸಂಗ