ಶ್ರೀಪುರಂದರದಾಸರು ಬರೆದ ಯಕ್ಷಗಾನ ಪ್ರಸಂಗ ಅನಸೂಯಾ ಚರಿತ್ರೆ


‘ಕರ್ನಾಟಕ ಸಂಗೀತ ಪಿತಾಮಹ’ರೆನಿಸಿದ ಪುರಂದರದಾಸರು (1485-1565) ‘ಅನಸೂಯಾ ಚರಿತ್ರೆ’ ಎಂಬ ಯಕ್ಷಗಾನವನ್ನು ರಚಿಸಿದ್ದರೆಂಬ ಉಲ್ಲೇಖವಿದೆಯಾದರೂ ಇದುವರೆಗೆ ಅದು ದೊರೆತಿರಲಿಲ್ಲ. ಈಗ ಅದನ್ನು ಯಕ್ಷಗಾನದ ಹಿರಿಯ ಸಂಶೋಧಕರಾದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜರು ಸಂಶೋಧಿಸಿದ್ದು, ಕಾಸರಗೋಡಿನ ‘ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ’ವು ಪ್ರಕಟಿಸುತ್ತಿದೆ.

18 ಅಕ್ಟೋಬರ್ 2025ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಭವನದಲ್ಲಿ ಕೃತಿಬಿಡುಗಡೆಯ ಸಮಾರಂಭವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿದೆ.

ಈ ಕೃತಿಯ ಪ್ರಾಚೀನ ಪ್ರತಿಯೊಂದು ಶಿರಸಿಯ ಯಕ್ಷಗಾನ ಕಲಾವಿದೆ ಡಾ.ವಿಜಯನಳಿನಿ ರಮೇಶ್ ಅವರ ಮನೆಯಲ್ಲಿ ದೊರೆತಿದ್ದು ತುಂಬಾ ಜೀರ್ಣಸ್ಥಿತಿಯಲ್ಲಿತ್ತು. ಇದರಲ್ಲಿ ಒಂದು ನೂರು ಪದ್ಯಗಳಿದ್ದು, ಹತ್ತೊಂಬತ್ತು ರಾಗಗಳನ್ನು ಸೂಚಿಸಲಾಗಿದೆ. ಕಂದಪದ್ಯ ಮತ್ತು ವಚನಗಳು ಹೆಚ್ಚಾಗಿದ್ದು ಅನಸೂಯೆಯ ಕುರಿತಾದ ಪೌರಾಣಿಕ ಕಥಾವಸ್ತುವಿನಲ್ಲಿ ಜನಪದ ಸಂಗತಿಗಳು ಮಿಶ್ರಣಗೊಂಡಿರುವುದು ಇದರ ವಿಶೇಷ. ಪ್ರತಿಯೊಂದು ಪದ್ಯಗುಚ್ಛಗಳ ಕೊನೆಯಲ್ಲಿ ಕೀರ್ತನೆಗಳಂತೆ ‘ಪುರಂದರವಿಠಲ’ ಎಂಬ ಅಂಕಿತವಿರುವುದು ಇದರ ಇನ್ನೊಂದು ವಿಶೇಷತೆ.

ಪ್ರಸಂಗದ ಆರಂಭದಲ್ಲಿಯೇ ‘ಪುರಂದರದಾಸರಾಯರು ಪೇಳಿದ ಸಂಭ್ರಮವನ್ನು ಕೇಳಿ’ ಎಂಬ ವಾಕ್ಯವಿರುವುದರಿಂದ ಈ ಕೃತಿಯನ್ನು ರಚಿಸುವ ಹೊತ್ತಿಗಾಗಲೇ ಅವರಿಗೆ ದಾಸದೀಕ್ಷೆಯಾಗಿತ್ತು ಎಂದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಕೃತಿರಚನಾ ಕಾಲವನ್ನು ಸು. ಕ್ರಿ.ಶ.1520 ಎಂದು ತರ್ಕಿಸಬಹುದು. ಅಲ್ಲದೆ ಶ್ರೀಧರ್ಮಸ್ಥಳದ ಗ್ರಂಥಾಲಯದಲ್ಲಿರುವ ‘ಗುರುರಾಮವಿಠಲ’ರು (1850-1915) ರಚಿಸಿದ ಇನ್ನೊಂದು ‘ಅನಸೂಯಾ ಚರಿತ್ರೆ’ಯ ಕೊನೆಯಲ್ಲಿ “ಸೂತಪುರಾಣಿಕನು ನೈಮಿಷಾರಣ್ಯದೋಳ್ ಶೌನಕಾದಿ ಮುನಿಗಳಿಗೆ ನಾರದೀಯ ಪುರಾಣದೋಳ್ ಪೇಳಿದನೆಂಬರ್ಥವಂ ಪುರಂದರದಾಸರಿಂದ ಯಕ್ಷಗಾನದೋಳ್ ರಚಿಸಿರುವ ಚರಿತ್ರೆಯನನುಸರಿಸಿ ಗುರುರಾಮವಿಠಲ ಪೇಳಿಸಿದಂತೆ ಹಿರಿಯರನುಗ್ರಹದಿಂದ ನಾ ಪೇಳಿದೆಂ” ಎಂಬ ವಾಕ್ಯವಿರುವುದರಿಂದ ಪುರಂದರದಾಸರು ಹಿಂದೆಯೇ ಯಕ್ಷಗಾನವನ್ನು ರಚಿಸಿರುವುದು ಮತ್ತು ಗುರುರಾಮವಿಠಲರು ಅದನ್ನು ಅನುಸರಿಸಿ ಬರೆದಿರುವುದು ಸ್ಪಷ್ಟವಾಗುತ್ತದೆ.

ಡಾ.ಕಬ್ಬಿನಾಲೆ ವಸಂತ ಭಾರದ್ವಾಜರು ಸಂಪಾದಿಸಿರುವ ಈ ಕೃತಿಯಲ್ಲಿ ಅನಸೂಯಾಚರಿತ್ರೆಯ ಕಥಾವಸ್ತುವಿಕಾಸ, ಕಾವ್ಯದ ಚೆಲುವು, ಭಾಷಾಶೈಲಿ ಮತ್ತು ಅನುಬಂಧದಲ್ಲಿ ನೀಡಲಾದ ಪುರಂದರದಾಸರ ದೇಶಕಾಲವಿಚಾರ ಇತ್ಯಾದಿಗಳು ಗಮನಸೆಳೆಯುತ್ತವೆ. ಯಕ್ಷಗಾನ ಪ್ರಸಂಗೇತಿಹಾಸದ ಪ್ರಾಚೀನತೆಗೆ ಇದು ಮುಖ್ಯ ಆಕರವಾಗಿದ್ದು, ಪುರಂದರದಾಸರ ಜನ್ಮಸ್ಥಳದ ಕುರಿತಾಗಿರುವ ಅಸ್ಪಷ್ಟತೆ, ಅವರ ಮೇಲೆ ಯಕ್ಷಗಾನದ ಪ್ರಭಾವ ಮುಂತಾದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯದಲ್ಲಿಯೂ ಇದು ಪ್ರಮುಖ ಸಂಶೋಧನೆಯೆನಿಸಿದೆ.

ಈ ಮಹತ್ಕಾರ್ಯವೊಂದು ಸಿರಿಬಾಗಿಲು ಪ್ರತಿಷ್ಠಾನದ ಯೋಗ ಭಾಗ್ಯವೇ ಸರಿ. ಪಾರ್ತಿಸುಬ್ಬನ ಯಕ್ಷಗಾನ ಕೃತಿಗಳನ್ನು ಸಂಗ್ರಹಿಸಿದ ಗಡಿನಾಡು ಕಾಸರಗೋಡಿನ ಲೇಖಕರು, ಸಂಶೋಧಕರಾದ ಕೀರ್ತಿಶೇಷ ಸಿರಿಬಾಗಿಲು ವೆಂಕಪ್ಪಯ್ಯ ನವರಿಗೆ ಈ ಕೃತಿಯನ್ನು ಸಮರ್ಪಿಸುತ್ತಿದ್ದೇವೆ ಎಂದು ಪ್ರತಿಷ್ಠಾನದ ರೂವಾರಿ, ಧರ್ಮಸ್ಥಳ ಮೇಳದ ಪ್ರಧಾನ ಭಾಗವತರಾದ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು