ವರಮಹಾಲಕ್ಷ್ಮೀ ವ್ರತ ಅಥವಾ ಪೂಜೆ ಎಂದರೇನು? ಅಷ್ಟಲಕ್ಷ್ಮೀಯರು ಯಾರು? ಅಷ್ಟಲಕ್ಷ್ಮಿಯ ಮಹತ್ವವೇನು? ಕಾಲನೇಮಿಯ ಪೌರಾಣಿಕ ಕಥೆ ಏನು? ಹರಿಕೃಷ್ಣ ಹೊಳ್ಳ, ಬ್ರಹ್ಮಾವರ ಅವರು ವಿವರಿಸಿದ್ದಾರೆ.
ಮಹಾಲಕ್ಷ್ಮೀ ಅಂದರೆ ಶ್ರೀಮನ್ನಾರಾಯಣನ ಮಡದಿ. ತನ್ನನ್ನು ಪೂಜಿಸಿದವರಿಗೆ ಬೇಕಾದ ವರಗಳನ್ನು ನೀಡುವವಳೇ ವರಮಹಾಲಕ್ಷ್ಮೀ ಎಂದುಕೊಳ್ಳಬಹುದು. ‘ವರ’ ಅಂದರೆ ಶ್ರೇಷ್ಠ ಅಂತಲೂ ಅರ್ಥವಿದೆ. ಆದ್ದರಿಂದ ವರಮಹಾಲಕ್ಷ್ಮೀ ಅಂದರೆ ಶ್ರೇಷ್ಠಳಾದ ಮಹಾಲಕ್ಷ್ಮೀ ಎಂದೂ ಅರ್ಥವಾಗುತ್ತದೆ. ಇಂತಹಾ ಮಹಾಲಕ್ಷ್ಮಿಯು ಎಂಟು ರೂಪಗಳಲ್ಲಿ ಇರುತ್ತಾಳೆ ಎಂಬುದು ಪ್ರತೀತಿ. ಆದಿಲಕ್ಷ್ಮೀ, ಧನಲಕ್ಷ್ಮೀ, ಧಾನ್ಯಲಕ್ಷ್ಮೀ, ಗಜಲಕ್ಷ್ಮೀ, ಸಂತಾನಲಕ್ಷ್ಮೀ, ವೀರಲಕ್ಷ್ಮೀ, ವಿಜಯಲಕ್ಷ್ಮೀ ಮತ್ತು ವಿದ್ಯಾಲಕ್ಷ್ಮಿಯರೇ ಆ ಅಷ್ಟಲಕ್ಷ್ಮಿಯರು.
ಆದಿ ಲಕ್ಷ್ಮೀ ಯಾರು?
ಆದಿಲಕ್ಷ್ಮೀ ಅಂದರೆ ಹೆಸರೇ ಸೂಚಿಸುವಂತೆ ಮೂಲ ಪ್ರಕೃತಿಯಾದ ಲಕ್ಷ್ಮೀದೇವತೆ, ಆದಿಶಕ್ತಿ, ಜಗತ್ತನ್ನೆಲ್ಲ ಕಾಪಾಡುತ್ತಿರುವ ಶಕ್ತಿದೇವತೆ, ವೈಕುಂಠದಲ್ಲಿ ಶ್ರೀಮನ್ನಾರಾಯಣನ ತೊಡೆಯೇರಿ ಕುಳಿತು ರಾರಾಜಿಸುತ್ತಿರುವ ಚತುರ್ಭುಜಳಾದ ಲಕ್ಷ್ಮೀದೇವಿ.
ಧನಲಕ್ಷ್ಮೀ ಯಾರು?
ಧನಲಕ್ಷ್ಮೀ ಅಂದರೆ ಸಂಪತ್ತಿನ ಅಧಿದೇವತೆ, ಷಡ್ಭುಜೆಯಾದ ಈಕೆಯ ಒಂದು ಕೈಯಿಂದ ಚಿನ್ನದ ನಾಣ್ಯಗಳು ಹರಿಯುತ್ತಿರುತ್ತವೆ.
ಲಕ್ಷ್ಮೀ ಯಾರು?
ಧಾನ್ಯಲಕ್ಷ್ಮೀ ಅಂದರೆ ಧವಸ ಧಾನ್ಯಗಳ ಅಧಿದೇವತೆ, ಅಂದರೆ ಸಮೃದ್ಧವಾದ ಬೆಳೆಯನ್ನು ಕೊಡುವ ಅಷ್ಟಭುಜೆಯಾದ ಲಕ್ಷ್ಮೀದೇವಿ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಗಜಲಕ್ಷ್ಮೀ ಯಾರು?
ಗಜಲಕ್ಷ್ಮೀ ಅಂದರೆ ಅಧಿಕಾರ ಹಾಗೂ ಶ್ರೇಯಸ್ಸನ್ನು ಉಂಟುಮಾಡುವಾಕೆ. ಈಕೆಯ ಅಕ್ಕಪಕ್ಕದಲ್ಲಿರುವ ಎರಡು ಆನೆಗಳು ಈಕೆಯ ಮೇಲೆ ನೀರನ್ನು ಪ್ರೋಕ್ಷಿಸುತ್ತಾ ಇರುತ್ತವೆ.
ಸಂತಾನಲಕ್ಷ್ಮೀ ಯಾರು?
ಸಂತಾನಲಕ್ಷ್ಮೀ ಅಂದರೆ ಹೆಸರೇ ಸೂಚಿಸುವಂತೆ ಸಂತಾನ ಭಾಗ್ಯವನ್ನು ಕರುಣಿಸುವಾಕೆ, ಮನುಷ್ಯರಿಗೆ ದೀರ್ಘವಾದ ಆಯುಸ್ಸನ್ನು ಕರುಣಿಸಿ ಪುತ್ರ ಪೌತ್ರರನ್ನೆಲ್ಲಾ ನೀಡುವಾಕೆ. ಈಕೆಯ ಮಡಿಲಲ್ಲಿ ಸದಾ ಒಂದು ಮಗು ಇರುತ್ತದೆ.
ವೀರಲಕ್ಷ್ಮೀ ಯಾರು?
ವೀರಲಕ್ಷ್ಮೀ ಅಂದರೆ ಧೈರ್ಯಲಕ್ಷ್ಮೀ, ಮನುಷ್ಯರಿಗೆ ಧೈರ್ಯ ಹಾಗೂ ಶಕ್ತಿಗಳನ್ನು ನೀಡುವ ಅಷ್ಟಭುಜೆ ಲಕ್ಷ್ಮೀದೇವಿ.
ವಿಜಯಲಕ್ಷ್ಮೀ ಯಾರು?
ವಿಜಯಲಕ್ಷ್ಮೀ ಅಥವಾ ಜಯಲಕ್ಷ್ಮೀ ಅಂದರೆ ಮನುಷ್ಯರಿಗೆ ಅವರ ಸಕಲ ಕಾರ್ಯಗಳಲ್ಲಿ ಜಯವನ್ನು ಕರುಣಿಸುವ ಅಷ್ಟಭುಜೆ ಲಕ್ಷ್ಮೀದೇವಿ.
ವಿದ್ಯಾಲಕ್ಷ್ಮೀ ಯಾರು?
ವಿದ್ಯಾಲಕ್ಷ್ಮೀ ಅಂದರೆ ವಿದ್ಯೆ ಬುದ್ಧಿಗಳನ್ನು ನೀಡುವ ಅಧಿದೇವತೆ.
ಈ ಅಷ್ಟಲಕ್ಷ್ಮೀಯರನ್ನು ಪೂಜಿಸಿದರೆ ಅಷ್ಟ ದರಿದ್ರಗಳು ದೂರವಾಗಿ ಅಷ್ಟ ಸೌಭಾಗ್ಯಗಳು ಅಂದರೆ ಅಷ್ಟ ಐಶ್ವರ್ಯಗಳು ಲಭಿಸುತ್ತವೆ ಎಂಬುದು ನಂಬಿಕೆ.
ಅಷ್ಟದರಿದ್ರಗಳು ಯಾವುವು ? ಅಷ್ಟ ಐಶ್ವರ್ಯಗಳು ಯಾವುವು ? ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗದಿದ್ದರೂ ಧನ, ಧಾನ್ಯ, ಗೃಹ, ಆಯುಸ್ಸು, ಧೈರ್ಯ, ಶೌರ್ಯ, ಆರೋಗ್ಯ, ಸಂತಾನ, ವಿದ್ಯೆ, ಶಾಂತಿ, ಕೀರ್ತಿಗಳೇ ಮೊದಲಾದ ಸೌಭಾಗ್ಯಗಳು ಅಷ್ಟ ಐಶ್ವರ್ಯಗಳು ಎಂದುಕೊಳ್ಳಬಹುದು. ಅವುಗಳು ಇಲ್ಲದಿದ್ದರೆ ಅದೇ ಅಷ್ಟದಾರಿದ್ರ್ಯ ಎಂದುಕೊಳ್ಳಬಹುದು.
ಅಷ್ಟಲಕ್ಷ್ಮಿಯರ ಪೂಜಾ ಮಹತ್ವ: ಕಾಲನೇಮಿಯ ಕಥೆ ಏನು?
ಒಮ್ಮೆ ಕಾಲನೇಮಿ ಎಂಬ ಒಬ್ಬ ರಾಕ್ಷಸನು ತಪಸ್ಸಿನಲ್ಲಿ ಬ್ರಹ್ಮನನ್ನು ಮೆಚ್ಚಿಸಿ ಆತನಲ್ಲಿ ವಿಚಿತ್ರವಾದ ವರವೊಂದನ್ನು ಬೇಡುತ್ತಾನೆ. ತನಗೆ ಮರಣವೇ ಬರಬಾರದು ಮತ್ತು ಶ್ರೀಮನ್ನಾರಾಯಣನನ್ನು ಆಶ್ರಯಿಸಿ ಇದ್ದ ಆ ಅಷ್ಟಲಕ್ಷ್ಮಿಯರು ತನ್ನ ಮನೆಯಲ್ಲಿ ಬಂದು ನೆಲೆಸಬೇಕು ಎಂದು ಆತ ಬೇಡುತ್ತಾನೆ. ಅಂದರೆ ತಾನು ಚಿರಾಯುವಾಗಿದ್ದು ಅಷ್ಟ ಐಶ್ವರ್ಯಗಳಿಂದ ಕೂಡಿಕೊಂಡಿರಬೇಕು ಎಂದು ಆತ ಬಯಸುತ್ತಾನೆ. ಆಗ ಬ್ರಹ್ಮನು “ಜಾತಸ್ಯ ಮರಣಂ ಧ್ರುವಂ, ಅಂದರೆ ಹುಟ್ಟಿದವರೆಲ್ಲರೂ ಸಾಯಲೇಬೇಕು. ಆದ್ದರಿಂದ ಮರಣವೇ ಇಲ್ಲದಂತೆ ವರಕೊಡಲು ಸಾಧ್ಯವಿಲ್ಲ. ಆದರೆ ಆ ಅಷ್ಟ ಲಕ್ಷ್ಮಿಯರು ನಿನ್ನ ಮನೆಯಲ್ಲಿ ನೆಲೆಸುವಂತೆ ಮಾಡುತ್ತೇನೆ. ಅವರು ಎಲ್ಲಿಯ ತನಕ ನಿನ್ನ ಮನೆಯಲ್ಲಿ ನೆಲೆಸಿರುತ್ತಾರೋ ಅಲ್ಲಿಯ ತನಕ ನಿನಗೆ ಮರಣವಿಲ್ಲ” ಎಂಬ ವರವನ್ನು ನೀಡುತ್ತಾನೆ.
ಅಂತೆಯೇ ಅಷ್ಟಲಕ್ಷ್ಮಿಯರು ಕಾಲನೇಮಿಯ ಅರಮನೆಯಲ್ಲಿ ಹೋಗಿ ನೆಲೆಸುತ್ತಾರೆ. ಕಾಲನೇಮಿಯು ಪ್ರತಿನಿತ್ಯವೂ ಅಷ್ಟಲಕ್ಷ್ಮಿಯರನ್ನು ಭಕ್ತಿಯಿಂದ ಪೂಜಿಸುತ್ತಾ ಸಕಲ ಸೌಭಾಗ್ಯಗಳೊಂದಿಗೆ ಸುಖವಾಗಿರುತ್ತಾನೆ. ಇದರಿಂದಾಗಿ ಕಾಲಕ್ರಮೇಣ ಆತನಲ್ಲಿ ಅಹಂಕಾರ ಉದ್ಭವಿಸುತ್ತದೆ. ಹೀಗಾಗಿ ಆತನು ಲೋಕಕಂಟಕನಾಗುತ್ತಾನೆ. ಭೂಲೋಕದ ಜನರನ್ನೆಲ್ಲಾ ಹಿಂಸಿಸಿದ್ದು ಮಾತ್ರವಲ್ಲದೆ ದೇವಲೋಕದ ಮೇಲೂ ದಾಳಿ ಮಾಡಿ ದೇವೇಂದ್ರನನ್ನು ಯುದ್ಧದಲ್ಲಿ ಸೋಲಿಸುತ್ತಾನೆ. ಸೋತಂತಹಾ ದೇವೇಂದ್ರನು ಯಥಾಪ್ರಕಾರವಾಗಿ ಶ್ರೀಮನ್ನಾರಾಯಣನಲ್ಲಿಗೆ ಹೋಗಿ ದೂರುತ್ತಾನೆ. ಅಷ್ಟಲಕ್ಷ್ಮಿಯರು ಕಾಲನೇಮಿಯನ್ನು ತೊರೆಯದೇ ಇದ್ದಲ್ಲಿ ಆತನನ್ನು ಕೊಲ್ಲುವುದು ಸಾಧ್ಯವಿಲ್ಲ ಎಂಬುದನ್ನು ಅರಿತ ಶ್ರೀಮನ್ನಾರಾಯಣನು ಒಂದು ಉಪಾಯವನ್ನು ಮಾಡುತ್ತಾನೆ. ಕಾಲನೇಮಿಯು ತಾನಾಗಿ ಅಷ್ಟಲಕ್ಷ್ಮಿಯರನ್ನು ಒದ್ದು ಓಡಿಸುವಂತೆ ಮಾಡುತ್ತಾನೆ.
ಒಂದು ದಿನ ರಾತ್ರಿ ಕಾಲನೇಮಿಯು ಮಲಗಿ ಗಾಢವಾಗಿ ನಿದ್ರಿಸುತ್ತಿರುವಾಗ ಆತನಿಗೆ ಒಂದು ದುಃಸ್ವಪ್ನ ಬೀಳುತ್ತದೆ. ಆ ಕನಸಿನಲ್ಲಿ ಅಷ್ಟಲಕ್ಷ್ಮಿಯರು ಒಬ್ಬೊಬ್ಬರಾಗಿ ಆತನಲ್ಲಿಗೆ ಬಂದು ಆತನ ದುಷ್ಕೃತ್ಯಗಳನ್ನೆಲ್ಲ ಹೇಳಿ ಆತನಿಗೆ ಚೆನ್ನಾಗಿ ಬೈದು “ಅಹಂಕಾರದಿಂದ ಕೂಡಿರುವ ನಿನ್ನ ಮನೆಯಲ್ಲಿ ನಾನು ಇರುವುದಿಲ್ಲ, ಈ ಕ್ಷಣವೇ ನಾನು ಇಲ್ಲಿಂದ ತೆರಳುತ್ತೇನೆ” ಎನ್ನುತ್ತಾ ಪ್ರತಿಯೊಬ್ಬರೂ ತೆರಳುತ್ತಾರೆ. ಕೊನೆಯಲ್ಲಿ ವಿಕಾರ ರೂಪದ ಸ್ತ್ರೀಯೋರ್ವಳು ಬಂದು ವಿಕಟ ಅಟ್ಟಹಾಸಗೈಯುತ್ತಾ “ಕಾಲನೇಮೀ, ಇದೋ ನೋಡು ನಾನೇ ದರಿದ್ರ ಲಕ್ಷ್ಮೀ. ಆ ಅಷ್ಟಲಕ್ಷ್ಮಿಯರು ನಿನ್ನನ್ನು ತೊರೆದು ಹೋದರೆ ಹೋಗಲಿ, ನಿನ್ನೊಡನೆ ನಾನಿದ್ದೇನೆ. ನಾನು ನಿನ್ನ ಕೈಬಿಡುವುದಿಲ್ಲ” ಎನ್ನುತ್ತಾ ಆತನ ಸನಿಹಕ್ಕೆ ಬಂದು ಅವನ ಕೈಹಿಡಿಯಲು ಬರುತ್ತಾಳೆ.
ನಿದ್ದೆಯಲ್ಲಿರುವ ಕಾಲನೇಮಿಯು ಅವಳಿಂದ ತಪ್ಪಿಸಿಕೊಳ್ಳುತ್ತಾ “ಛೀ, ದರಿದ್ರವೇ, ಹತ್ತಿರ ಬರಬೇಡ, ತೊಲಗು” ಎನ್ನುತ್ತಾ ಆಕೆ ಹತ್ತಿರ ಬಂದಾಗಲೆಲ್ಲ ಆಕೆಯನ್ನು ಒದೆದು ಓಡಿಸುತ್ತಾನೆ. ಅಷ್ಟರಲ್ಲಿ ಅವನಿಗೆ ಎಚ್ಚರವಾಗುತ್ತದೆ. ಕಣ್ತೆರೆದು ನೋಡುತ್ತಾನೆ. ಆತನು ಒದೆದು ಓಡಿಸಿದ್ದು ಆ ದರಿದ್ರ ಲಕ್ಷ್ಮಿಯನ್ನಲ್ಲ; ಒದ್ದದ್ದು ಆ ಅಷ್ಟಲಕ್ಷ್ಮಿಯರನ್ನು! ಅವನಿಗೆ ಸರಿಯಾಗಿ ಎಚ್ಚರವಾಗುವುದರೊಳಗಾಗಿ ಅಷ್ಟಲಕ್ಷ್ಮಿಯರು ಅವನನ್ನು ತೊರೆದು ವೈಕುಂಠಕ್ಕೆ ಹೋಗಿ ಆಗಿತ್ತು. ತಾನೇ ನೇರವಾಗಿ ವೈಕುಂಠಕ್ಕೆ ಹೋಗಿ ಆ ಅಷ್ಟಲಕ್ಷ್ಮಿಯರನ್ನು ಪುನಃ ಕರೆತರುತ್ತೇನೆ ಎಂದುಕೊಂಡು ಕಾಲನೇಮಿಯು ತಾನೂ ವೈಕುಂಠಕ್ಕೆ ತೆರಳುತ್ತಾನೆ. ಅಲ್ಲಿ ಅಷ್ಟಲಕ್ಷ್ಮಿಯರನ್ನು ಕೈ ಹಿಡಿದು ಎಳೆದಾಗ ಶ್ರೀಹರಿಯು ಆತನನ್ನು ತಡೆಯುತ್ತಾನೆ. ಅವರಿಬ್ಬರಿಗೂ ಯುದ್ಧವಾಗುತ್ತದೆ. ಶ್ರೀಹರಿಯು ಕಾಲನೇಮಿಯನ್ನು ಕೊಲ್ಲುತ್ತಾನೆ. ಸಾಯುವಾಗ ಕಾಲನೇಮಿಗೆ ಇದೆಲ್ಲವೂ ಈ ಶ್ರೀಮನ್ನಾರಾಯಣನ ಕುತಂತ್ರ ಎಂಬುದು ಅರ್ಥವಾಗುತ್ತದೆ. ಹೀಗಾಗಿ “ನಾನು ಇನ್ನೂ ಮೂರು ಜನ್ಮಗಳನ್ನು ತಳೆದು ಬಂದು ನಿನ್ನೊಡನೆ ದ್ವೇಷ ಸಾಧಿಸುತ್ತೇನೆ” ಎಂದು ಶಪಥ ಮಾಡುತ್ತಾನೆ. ಅದರಂತೆ ಮುಂದೆ ಕಂಸ, ಅಭಿಮನ್ಯು ಮತ್ತು ಕೌಂಡ್ಲಿಕನಾಗಿ ಜನಿಸಿ ಬಂದು ಹರಿಯೊಡನೆ ಹಗೆತನ ಸಾಧಿಸಲು ಹೋಗಿ ಸಾವನ್ನಪ್ಪುತ್ತಾನೆ.
ಇದರಿಂದಾಗಿ ಅಷ್ಟಲಕ್ಷ್ಮಿಯರ ಪೂಜೆಯ ಮಹತ್ವ ಎಷ್ಟು ಎಂಬುದು ಅರಿವಾಗುತ್ತದೆ. ತಿಳಿಯದೆಯೂ ಕೂಡಾ ಧನವನ್ನಾಗಲೀ, ಧಾನ್ಯವನ್ನಾಗಲೀ, ಹೊಸ್ತಿಲನ್ನಾಗಲೀ, ಪುಸ್ತಕವನ್ನಾಗಲೀ, ಆಹಾರವನ್ನಾಗಲೀ ತುಳಿಯಬಾರದು. ಏಕೆಂದರೆ ಅವೆಲ್ಲವೂ ಲಕ್ಷ್ಮಿಯ ಪ್ರತೀಕಗಳಾಗಿವೆ.
ಹೀಗೆ ಈ ಅಷ್ಟ ಲಕ್ಷ್ಮಿಯರ ಬಗ್ಗೆ ಇನ್ನೂ ಅನೇಕ ಕಥೆಗಳು ಇವೆ. ಅವುಗಳಲ್ಲಿ ವಿದರ್ಭ ದೇಶದಲ್ಲಿನ ಬಡ ಗೃಹಿಣಿ ಚಾರುಮತಿಯು ವರಮಹಾಲಕ್ಷ್ಮೀ ವ್ರತವನ್ನು ಆಚರಿಸಿ ಸಕಲ ಐಶ್ವರ್ಯಗಳನ್ನು ಪಡೆದ ಕಥೆ ಮತ್ತು ಸಾಕ್ಷಾತ್ ಪರಮೇಶ್ವರನೇ ತನ್ನ ಮಡದಿ ಪಾರ್ವತಿಗೆ ವರಮಹಾಲಕ್ಷ್ಮೀ ವ್ರತದ ಪ್ರಾಮುಖ್ಯತೆಯನ್ನು ವಿವರಿಸಿದ ಕಥೆಗಳು ಹೆಚ್ಚು ಪ್ರಚಲಿತದಲ್ಲಿವೆ.
2025ರ ವರ ಮಹಾಲಕ್ಷ್ಮೀ ವ್ರತ ಯಾವಾಗ?
ಈ ವರಮಹಾಲಕ್ಷ್ಮೀ ವ್ರತವನ್ನು ಶ್ರಾವಣ ಹುಣ್ಣಿಮೆಯ ಹಿಂದಿನ ಶುಕ್ರವಾರದಂದು ಆಚರಿಸುವುದು ರೂಢಿಯಾಗಿದೆ. ಈ ವರ್ಷ ದಿನಾಂಕ 08-08-2025 ನೇ ಶುಕ್ರವಾರ ವರಮಹಾಲಕ್ಷ್ಮೀ ವ್ರತವನ್ನು ಆಚರಿಸಲಾಗುತ್ತಿದೆ. ಈ ವರಮಹಾಲಕ್ಷ್ಮೀ ವ್ರತದ ಆಚರಣೆಯ ವಿಧಿ ವಿಧಾನಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿವೆ. ಪ್ರತಿ ಮನೆಯಲ್ಲಿಯೂ ಆಚರಿಸುವ ಕ್ರಮವಿದೆ. ಸುಮಂಗಲಿಯರೆಲ್ಲ ಕೂಡಿ ಸಾಮೂಹಿಕವಾಗಿ ಆಚರಿಸುವ ಕ್ರಮವೂ ಇದೆ.
✒️ ಹರಿಕೃಷ್ಣ ಹೊಳ್ಳ , ಬ್ರಹ್ಮಾವರ