ಮೋಸದಿಂದಲೇ ಜನಿಸಿದ ಕಂಸ; ಕುಲಬಂಧುವಿನಿಂದಲೇ ಅವಸಾನ

ಕಂಸನ ಪಾತ್ರ ಚಿತ್ರಣ
ಪುರಾಣ ತಿಳಿಯೋಣ - ಸರಣಿ by ದಾಮೋದರ ಶೆಟ್ಟಿ, ಇರುವೈಲ್
ಯದುವಂಶದ ರಾಜ ಮಧುರೆಯ ಅರಸ ಉಗ್ರಸೇನನ ಮಗನೇ ಕಂಸ. ಜರಾಸಂಧನ ಪುತ್ರಿಯರಾದ ಆಸ್ತಿ-ಪ್ರಾಸ್ತಿಯರು ಇವನ ಪತ್ನಿಯರು. ಈತ ಶ್ರೀಕೃಷ್ಣನ ಸೋದರಮಾವ. ಕೃಷ್ಣನ ಜನನಿ ದೇವಕಿ ಇವನ ತಂಗಿ.

ಉಗ್ರಸೇನನ ಪತ್ನಿ ಸಖಿಯರೊಡನೆ ಜಲಕ್ರೀಡೆಯಾಡುತ್ತ ಕಾಮಾಭಿಲಾಷೆಯಿಂದ ಪತಿಯನ್ನು ನೆನೆಸಿಕೊಂಡಾಗ ದ್ರುಮಿಳನೆಂಬ ಗಂಧರ್ವನು ಉಗ್ರಸೇನನ ರೂಪತಾಳಿ ಮೋಸದಿಂದ ಸಂಗಮಿಸಿದುದರಿಂದ ಜನಿಸಿದವನೇ ಕಂಸ.

ಸಂಭೋಗದಲ್ಲಿನ ಕ್ರಿಯೆಯಿಂದ ತನ್ನನ್ನು ಕೂಡಿದವನು ಪತಿಯಲ್ಲವೆಂದು ತಿಳಿದು ಆಕೆ ಕೋಪದಿಂದ "ನಿನ್ನ ದುರ್ಬೀಜದಿಂದ ಜನಿಸಿದವನು ಯದುವಂಶೀಯರಿಂದಲೇ ಕೊಲ್ಲಲ್ಪಡಲಿ" ಎಂದು ಶಾಪವಿತ್ತಳು.

ಕಂಸನಲ್ಲಿ ರಾಕ್ಷಸೀ ಗುಣಗಳೇ ಬಂದು ತಂದೆಯನ್ನು ಸೆರೆಯಲ್ಲಿಟ್ಟು ತಾನು ಸಿಂಹಾಸನವೇರಿದ್ದನು. ಈ ಶಾಪದ ಫಲವೆಂಬಂತೆ ಕಂಸನ ಮರಣವು ಶ್ರೀಕೃಷ್ಣನಿಂದಾಯಿತು.

ತಂಗಿ ದೇವಕಿಯನ್ನು ವಸುದೇವನಿಗ ಕೊಟ್ಟು ವಿವಾಹ ಮಾಡಿ ಅವಳ ಮೆರವಣಿಗೆ ಮಾಡಿಸಲು ತಾನೇ ಸಾರಥಿಯಾಗಿ ಕಂಸ ಹೋಗಿದ್ದನು. ಮಾರ್ಗಮಧ್ಯೆ, "ಎಲೈ ಕಂಸ, ಈ ನಿನ್ನ ಸೋದರಿಯ ಎಂಟನೆಯ ಪುತ್ರನಿಂದಲೇ ನಿನಗೆ ಮರಣ ಸಂಭವಿಸುವುದು, ತಿಳಿದುಕೋ" ಎಂದು ಅಶರೀರವಾಣಿ ಆಯಿತು.

ಆಗಲೇ ದೇವಕಿಯನ್ನು ಕೊಲ್ಲ ಹೊರಟ ಕಂಸನನ್ನು ವಸುದೇವನು ಅಂಗಲಾಚಿ "ಕೊಲ್ಲಬೇಡ, ಇವಳಿಗೆ ಜನಿಸುವ ಮಗುವನ್ನು ನಿನಗೆ ಒಪ್ಪಿಸುತ್ತೇವೆ" ಎಂದು ಕೇಳಿದಾಗ, ಸರಿ ಎಂದು ಅವರನ್ನು ಸೆರೆಮನೆಯಲ್ಲಿಟ್ಟು ಜನಿಸಿದ ಏಳು ಮಕ್ಕಳನ್ನೂ ಕೊಂದವನು ಈ ಕಂಸ. ವಸುದೇವ-ದೇವಕಿಗೆ ಎಂಟನೆಯ ಮಗು ಜನಿಸಿದಾಗ, ಕಾರಾಗೃಹದ ಬಾಗಿಲು ತೆರೆಯಿತು. ಭಗವಂತನ ಪ್ರೇರಣೆಯಂತೆ ವಸುದೇವನು ರಾತೋರಾತ್ರಿ ಕಾರಾಗೃಹದಿಂದ ಹೊರಬಂದು ಆ ಮಗುವನ್ನು ಗೋಕುಲದ ಯಶೋದೆಯ ಮಗ್ಗುಲಲ್ಲಿಟ್ಟು ಅವಳ ಹೆಣ್ಣು ಶಿಶುವನ್ನು ದೇವಕಿಯ ಬಳಿ ತಂದಿಟ್ಟನು.

ಕಂಸ ಕೊಲ್ಲಲೆಂದು ಮೇಲಕ್ಕೆಸೆದಾಗ "ನಿನ್ನನ್ನು ಕೊಲ್ಲುವವನು ಗೋಕುಲದಲ್ಲಿ ಬೆಳೆಯುತ್ತಿದ್ದಾನೆ" ಎಂದು ಹೇಳಿ ಮಗು ಅದೃಶ್ಯವಾಯಿತು. ಆ ಬಳಿಕ ಗೋಕುಲದಲ್ಲಿದ್ದ ಎಳೆ ಶಿಶುಗಳನ್ನೆಲ್ಲ ಹುಡುಕಿ ಕೊಲ್ಲಿಸಲು ಆರಂಭಿಸಿದ ಕಂಸ. ನಂದಗೋಪನ ಮನೆಯಲ್ಲಿದ್ದ ಕೃಷ್ಣನನ್ನು ಕೊಲ್ಲಲು ಕಂಸ ಕಳಿಸಿದ ಪೂತನಿ, ಶಕಟ, ಧೇನುಕ, ಬಕ, ಕೇಶಿ, ಅಘ, ತೃಣಾವರ್ತರೇ ಮೊದಲಾದವರು ಬಾಲಕೃಷ್ಣನಿಂದ ಮೃತರಾದಾಗ, ಕಂಸನು ಬಲರಾಮ-ಕೃಷ್ಣರನ್ನು ಅಕ್ರೂರನ ಮೂಲಕ ಮಧುರೆಗೆ ಕರೆಸಿ ಕೊಲ್ಲುವ ಸಂಚು ಹೂಡಿದನು.

ಕೃಷ್ಣನ ವಧೆಗಾಗಿ ನಿಯೋಜಿಸಿದ್ದ ಕುವಲಯಾಪೀಡ ಎಂಬ ಮದ್ದಾನೆಯನ್ನು, ಎದುರಾಗಿ ಬಂದ ಚಾಣೂರ-ಮುಷ್ಟಿಕ ಎಂಬ ಜಟ್ಟಿಗಳನ್ನು ಕೊಂದು, ಕೊನೆಯಲ್ಲಿ ಕಂಸನನ್ನೂ ಸಂಹರಿಸಿದ ಕೃಷ್ಣನು ಸೆರೆಯಲ್ಲಿದ್ದ ಉಗ್ರಸೇನ ಮಹಾರಾಜನನ್ನು ಬಿಡಿಸಿ ಮಥುರಾಧಿಪತಿಯಾಗಿ ಪಟ್ಟಾಭಿಷೇಕ ಮಾಡಿದನು.

ಸಂ: ದಾಮೋದರ ಶೆಟ್ಟಿ, ಇರುವೈಲ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು