ಇಂದ್ರಕೀಲಕ ಪ್ರಕರಣದ ಬಳಿಕ ಊರ್ವಶೀ ಶಾಪ, ನಿವಾತಕವಚ ಮತ್ತು ಕಾಲಕೇಯರ ಸಂಹಾರದ ಕಥಾನಕವನ್ನು ವಿವರಿಸಿದ್ದಾರೆ ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
ಶಿವ-ಪಾರ್ವತಿಯರು ಅರ್ಜುನನಿಗೆ ಪಾಶುಪತಾಸ್ತ್ರ ಮತ್ತು ಅಂಜನಾಸ್ತ್ರಗಳನ್ನು ಅನುಗ್ರಹಿಸಿ ಅಂತರ್ಧಾನರಾದ ಕೂಡಲೇ ಅಂತರಿಕ್ಷದಿಂದ ದೇವೇಂದ್ರನ ಸಾರಥಿಯಾದ ಮಾತಲಿಯು ರಥದೊಂದಿಗೆ ಕೆಳಗಿಳಿದು ಅರ್ಜುನನಲ್ಲಿಗೆ ಬರುತ್ತಾನೆ. ಅರ್ಜುನನು ಆತನಿಗೆ ನಮಸ್ಕರಿಸಿ ಗೌರವಿಸುತ್ತಾನೆ. ಆಗ ಮಾತಲಿಯು "ಅರ್ಜುನಾ, ಪರಶಿವಾನುಗ್ರಹದಿಂದ ಪುನೀತನಾದ ನಿನ್ನನ್ನು ಕೂಡಲೇ ಸ್ವರ್ಗದ ಅಮರಾವತಿಗೆ ಕರೆತರಬೇಕೆಂದು ದೇವೇಂದ್ರನ ಅಪ್ಪಣೆಯಾಗಿದೆ, ಏಳು ರಥವೇರು, ಹೋಗೋಣ" ಎನ್ನುತ್ತಾನೆ. ಅರ್ಜುನನು ಸಂತೋಷದಿಂದ ಸಮ್ಮತಿಸುತ್ತಾನೆ. ಪಾರ್ಥನು ಅಲ್ಲಿರುವ ಋಷಿಮುನಿಗಳೆಲ್ಲರ ಕಾಲಿಗೆರಗಿ ಅವರ ಆಶೀರ್ವಾದಗಳನ್ನು ಪಡೆಯುತ್ತಾನೆ. ಕೊನೆಯದಾಗಿ ಕಳೆದ ಒಂದು ವರ್ಷದ ಕಾಲ ತನಗೆ ಆಶ್ರಯವನ್ನಿತ್ತ ಪರಮ ಪವಿತ್ರವಾದ ಇಂದ್ರಕೀಲವನಕ್ಕೆ ಕೈಮುಗಿದು ಅಲ್ಲಿಂದ ಬೀಳ್ಗೊಳ್ಳುತ್ತಾನೆ. ದೇವೇಂದ್ರನ ದಿವ್ಯ ರಥವನ್ನು ಪಾರ್ಥನು ಏರುತ್ತಾನೆ, ಕ್ಷಣಾರ್ಧದಲ್ಲಿ ರಥವು ಮೇಲೇರಿ ಅಮರಾವತಿಯನ್ನು ತಲುಪುತ್ತದೆ.
ದೇವರಥವು ಸ್ವರ್ಗದ ಸುಧರ್ಮ ಸಭೆಯ ಮುಂಭಾಗದಲ್ಲಿಯೇ ಬಂದು ಇಳಿಯುತ್ತದೆ. ದೇವಕನ್ನಿಕೆಯರು ವೈಭವದ ಪೂರ್ಣ ಕುಂಭದ ಸ್ವಾಗತದೊಂದಿಗೆ ಅರ್ಜುನನನ್ನು ಉಪಚರಿಸಿ ಕರೆದೊಯ್ಯುತ್ತಾರೆ. ಅರ್ಜುನನು ಸುಧರ್ಮ ಸಭೆಯ ಮಹಾದ್ವಾರಕ್ಕೆ ಬಂದೊಡನೆ ಸಿಂಹಾಸನದಲ್ಲಿ ವಿರಾಜಮಾನನಾಗಿದ್ದ ದೇವೇಂದ್ರನು ಕೆಳಗಿಳಿದು ದ್ವಾರದೆಡೆಗೆ ಬರುತ್ತಾನೆ. ತಂದೆಯನ್ನು ನೋಡಿದೊಡನೆಯೇ ಅರ್ಜುನನು ಆತನ ಕಾಲಿಗೆರಗುತ್ತಾನೆ. ದೇವೇಂದ್ರನು ಮಗನನ್ನು ಆಶೀರ್ವದಿಸಿ ಬರ ಸೆಳೆದು ಬಿಗಿದಪ್ಪಿಕೊಳ್ಳುತ್ತಾನೆ. ಬಳಿಕ ಆತನನ್ನು ಕೈಹಿಡಿದು ಕರೆದುಕೊಂಡು ಹೋಗಿ ಸಿಂಹಾಸನದಲ್ಲಿ ತನ್ನ ಪಕ್ಕದಲ್ಲಿಯೇ ಕುಳ್ಳಿರಿಸಿಕೊಳ್ಳುತ್ತಾನೆ.
$ads={1}ಹಲವು ಬಗೆಯ ಸತ್ಕಾರ್ಯಗಳನ್ನು ಮಾಡಿ ಪುಣ್ಯ ಸಂಚಯಿಸಿಕೊಂಡವರಿಗೆ ಮಾತ್ರ ಮೃತರಾದ ಮೇಲೆ ತಮ್ಮ ಭೌತಿಕ ಶರೀರವನ್ನು ಬಿಟ್ಟು ಕೇವಲ ತೇಜೋರೂಪಿಯಾದ ಆತ್ಮದ ರೂಪದಲ್ಲಿ ಸ್ವರ್ಗವನ್ನೇರುವ ಅರ್ಹತೆ ಬರುತ್ತದೆ. ಇನ್ನು ನೂರು ಅಶ್ವಮೇಧ ಯಾಗಗಳನ್ನು ಮಾಡಿದವರಿಗೆ ಮಾತ್ರ ಅದರಿಂದ ಪ್ರಾಪ್ತಿಯಾದ ಪುಣ್ಯದ ಫಲದಿಂದ ಇಂದ್ರನ ಸಿಂಹಾಸನವನ್ನು ಏರುವ ಭಾಗ್ಯವು ದೊರೆಯುತ್ತದೆ. ಆದರೆ ಪರಮ ಶಿವನ ಅನುಗ್ರಹಕ್ಕೆ ಪಾತ್ರನಾದ ಪಾರ್ಥನಿಗೆ ಅದಾವುದೂ ಇಲ್ಲದೇ ಇದ್ದರೂ ಸಶರೀರಿಯಾಗಿ ಸ್ವರ್ಗಕ್ಕೆ ಹೋಗಿ ಇಂದ್ರನ ಪಕ್ಕದಲ್ಲಿ ಅವನ ಸಿಂಹಾಸನದಲ್ಲೇ ಆಸೀನನಾಗುವ ಭಾಗ್ಯ ದೊರೆಯಿತು.
ಅರ್ಜುನನು ದೇವೇಂದ್ರನ ಸಿಂಹಾಸನದಲ್ಲಿ ಆತನ ಪಕ್ಕದಲ್ಲಿಯೇ ಕುಳಿತುಕೊಂಡಿದ್ದರೂ ಅವನ ಕಣ್ಣುಗಳು ಮಾತ್ರ ಬೇರೆ ಯಾರನ್ನೋ ಹುಡುಕುವಂತಿದ್ದವು. ಇದನ್ನು ಗಮನಿಸಿದ ದೇವೇಂದ್ರನು ಆತನಲ್ಲಿ ಏನೆಂದು ಕೇಳುತ್ತಾನೆ. ಆಗ ಅರ್ಜುನನು "ದೇವಾ , ಪರಮಾತ್ಮನಾದ ಶ್ರೀಕೃಷ್ಣನ ನೆರವಿನಿಂದ ಕಳೆದ ವರ್ಷವಷ್ಟೇ ನಾವು ರಾಜಸೂಯ ಯಾಗವನ್ನು ಪೂರೈಸಿ ಅದರ ಪುಣ್ಯದ ಫಲದಿಂದ ಯಮಲೋಕದಲ್ಲಿ ಇದ್ದ ನಮ್ಮ ತಂದೆ ಪಾಂಡು ಚಕ್ರವರ್ತಿಗೆ ಸದ್ಗತಿ ದೊರಕಿಸಿ ಅವರನ್ನು ಸ್ವರ್ಗಕ್ಕೆ ಏರಿಸಿದ್ದೆವು. ಈಗ ಅವರೆಲ್ಲಿದ್ದಾರೆ? ಈ ಸಭೆಯಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲವಲ್ಲ?" ಎನ್ನುತ್ತಾನೆ. ಆಗ ದೇವೇಂದ್ರನು ಆಳುಗಳನ್ನು ಕಳುಹಿಸಿ ಪಾಂಡು ಚಕ್ರವರ್ತಿಗಳನ್ನು ಸಭೆಗೆ ಕರೆಸಿಕೊಳ್ಳುತ್ತಾನೆ. ತಂದೆಯನ್ನು ಕಂಡೊಡನೆ ಅರ್ಜುನನು ಸಂತೋಷದಿಂದ ಓಡೋಡಿ ಹೋಗಿ ತಂದೆಗೆ ನಮಸ್ಕರಿಸಿ, ಅವರ ಆಶೀರ್ವಾದವನ್ನು ಪಡೆದು ಸ್ವಲ್ಪ ಹೊತ್ತು ಅವರ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತಾನೆ.
ಇದಾದ ಬಳಿಕ ದೇವೇಂದ್ರನು ಅರ್ಜುನನನ್ನು ತನ್ನ ಸಿಂಹಾಸನದಲ್ಲಿ ಪುನಹ ಕುಳ್ಳಿರಿಸಿ, ಯಥೋಚಿತವಾಗಿ ಸಮ್ಮಾನಿಸುತ್ತಾನೆ. ಮಂಗಳಾಂಗಿಯರು ಅರ್ಜುನನಿಗೆ ಮಂಗಳಾರತಿ ಬೆಳಗಿ ಶುಭವನ್ನು ಕೋರುತ್ತಾರೆ. ಇದಾದ ಬಳಿಕ ಅರ್ಜುನನ ಗೌರವಾರ್ಥವಾಗಿ ಚಿತ್ರಸೇನನ ನೇತೃತ್ವದಲ್ಲಿ ಗಾಯನ ವಾದನ ಕಛೇರಿಯೇ ಏರ್ಪಡುತ್ತದೆ. ಚಿತ್ರಸೇನನ ಮೃದಂಗವಾದನಕ್ಕೆ ತಕ್ಕುದಾಗಿ ದೇವ ವಿಲಾಸಿನಿಯರಿಂದ ವೈಭವೋಪೇತವಾದ ನೃತ್ಯ ಪ್ರದರ್ಶನವು ಏರ್ಪಡುತ್ತದೆ. ರಂಭೆ, ಊರ್ವಶೀ, ಮೇನಕೆ, ತಿಲೋತ್ತಮೆ, ಘೃತಾಚಿ, ಮಂಜುಘೋಷೆ ಮೊದಲಾದ ಗಣಿಕಾಂಗನೆಯರು ಶೃಂಗಾರ ಲಾವಣ್ಯಗಳಿಂದ ಮಾದಕವಾಗಿ ನರ್ತಿಸುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಮೃದಂಗದ ನಿನಾದದ ಹಿನ್ನೆಲೆಯಲ್ಲಿ, ಮಾದಕ ಉಡುಗೆ ತೊಡುಗೆ ತೊಟ್ಟ ಅಪ್ಸರಾಂಗನೆಯರು ಗೆಜ್ಜೆಗಳನ್ನು ಝಲ್ಲೆನಿಸುತ್ತಾ, ಬಗೆ ಬಗೆಯ ಬೆಡಗು ಬಿನ್ನಾಣಗಳಿಂದ, ವಿವಿಧ ಭಾವ ಭಂಗಿಗಳಿಂದ, ಅಂಗಾಂಗಗಳನ್ನು ಛಂಗನೆ ಕುಣಿಸುತ್ತಾ ಒಬ್ಬರನ್ನೊಬ್ಬರು ಮೀರಿಸುವ ತೆರನಲ್ಲಿ ನರ್ತಿಸತೊಡಗಿದರು. ನರ್ತನವು ಸಾಗುತ್ತಿದ್ದಂತೆ ಎಲ್ಲರಿಗಿಂತ ಹೆಚ್ಚು ಮನಮೋಹಕವಾಗಿ ನರ್ತಿಸುತ್ತಿರುವ ಊರ್ವಶೀ ಎಂಬ ಅಪ್ಸರೆಯ ನೃತ್ಯವು ಅರ್ಜುನನಿಗೆ ಹೆಚ್ಚು ಇಷ್ಟವಾಗುತ್ತದೆ. ಹೀಗಾಗಿ ಆತ ಊರ್ವಶಿಯ ನೃತ್ಯವನ್ನೇ ಎವೆಯಿಕ್ಕದೇ ನೋಡುತ್ತಾ ಇರುತ್ತಾನೆ. ಮೈಮರೆತು ತನಗರಿವಿಲ್ಲದೇ "ವಾಹ್, ಭಳಿರೇ, ಶಹಭಾಸ್" ಎನ್ನುತ್ತಾ ಆಕೆಯನ್ನು ಹುರಿದುಂಬಿಸುತ್ತಾನೆ. ಆದರೆ ಕ್ಷಣದಲ್ಲೇ ಎಚ್ಚೆತ್ತು ಆಕಡೆ ಈಕಡೆ ಒಮ್ಮೆ ನೋಡಿ, ತನ್ನನ್ನು ಯಾರೂ ಗಮನಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ನೆಟ್ಟಗೆ ಕೂರುತ್ತಾನೆ. ಅರ್ಜುನನು ತನ್ನನ್ನು ಮೆಚ್ಚುತ್ತಿದ್ದಾನೆ, ಆತನ ಕಣ್ಣುಗಳು ತನ್ನನ್ನೇ ಅನುಸರಿಸುತ್ತಿವೆ ಎಂದು ತಿಳಿದ ಊರ್ವಶಿಯು ಇನ್ನಷ್ಟು ಹೆಚ್ಚು ಉತ್ಸಾಹದಿಂದ ನರ್ತಿಸುತ್ತಾಳೆ.
$ads={2}ಅರ್ಜುನನು ಊರ್ವಶಿಯ ನೃತ್ಯಕ್ಕೆ ಮನಸೋತುದನ್ನು ಬೇರೆ ಯಾರೂ ಗಮನಿಸದೇ ಹೋದರೂ, ಸಹಸ್ರಾಕ್ಷನಾದ ಇಂದ್ರನು ಮಾತ್ರ ಸೂಕ್ಷ್ಮವಾಗಿ ಗಮನಿಸುತ್ತಾನೆ. ಹೀಗಾಗಿ ಆತ ಅರ್ಜುನನನ್ನು ನೈತಿಕವಾಗಿ ಪರೀಕ್ಷಿಸುವುದಕ್ಕೆ ಇದೇ ಸುಸಮಯ ಎಂದುಕೊಂಡು, ನೃತ್ಯ ಮುಗಿದ ಕೂಡಲೇ ಚಿತ್ರಸೇನನನ್ನು ಗುಟ್ಟಿನಲ್ಲಿ ಕರೆದು "ಅರ್ಜುನನು ಊರ್ವಶಿಯನ್ನು ಮೆಚ್ಚಿಕೊಂಡಂತಿದೆ, ಹೀಗಾಗಿ ಆಕೆಯನ್ನು ಅರ್ಜುನನ ಶಯನಾಗಾರಕ್ಕೆ ಕಳುಹಿಸಿ" ಎಂದು ಅಪ್ಪಣೆ ಮಾಡುತ್ತಾನೆ. ಅದರಂತೆ ಚಿತ್ರಸೇನನು ಊರ್ವಶಿಯನ್ನು ಕರೆದು "ಅರ್ಜುನನನ್ನು ಓಲೈಸಿ ಸಂತೋಷಪಡಿಸಬೇಕೆಂದು ದೇವೇಂದ್ರನ ಅಪ್ಪಣೆಯಾಗಿದೆ" ಎನ್ನುತ್ತಾ ಅವಳನ್ನು ಅರ್ಜುನನ ಕೋಣೆಗೆ ಹೋಗುವಂತೆ ಹೇಳುತ್ತಾನೆ.
ಇದನ್ನು ಕೇಳಿದ ಊರ್ವಶಿಗೆ ಪರಮ ಸಂತೋಷವಾಗುತ್ತದೆ. ಹರನೊಡನೆ ಹೋರಾಡಿ ಪಾಶುಪತವನ್ನು ಪಡೆದ ಮಹಾವೀರನನ್ನು, ಪರಮೇಶನಿಂದ ಅನುಗ್ರಹೀತನಾಗಿ ಸಶರೀರಿಯಾಗಿ ಸ್ವರ್ಗಕ್ಕೆ ಬಂದಿರುವ ಇಂತಹ ಪರಮ ಪುಣ್ಯಾತ್ಮನನ್ನು, ದೇವೇಂದ್ರನ ಸುಧರ್ಮ ಸಭೆಯಲ್ಲಿ ಸಿಂಹಾಸನದ ಮೇಲೆ ಕುಳ್ಳಿರಿಸಿ ಸಮ್ಮಾನಿಸಲ್ಪಟ್ಟ ಗಣ್ಯಾತಿಗಣ್ಯನನ್ನು, ಎಲ್ಲಕ್ಕಿಂತಲೂ ಹೆಚ್ಚಾಗಿ ದೇವೇಂದ್ರನ ಮಗನೇ ಆದ ಅರ್ಜುನನನ್ನು ಓಲೈಸಿ ತೃಪ್ತಿಪಡಿಸುವ ಅವಕಾಶವು ದೇವೇಂದ್ರನಿಂದಲೇ ಆಜ್ಞಾಪಿಸಲ್ಪಟ್ಟು ಅಧಿಕೃತವಾಗಿ ದೊರೆತುದು ಆಕೆಗೆ ಹೆಮ್ಮೆ ಎನಿಸುತ್ತದೆ. ಹೀಗಾಗಿ ಆಕೆ ಎಂದಿಗಿಂತಲೂ ಸ್ವಲ್ಪ ಹೆಚ್ಚು ಸಿಂಗರಿಸಿಕೊಂಡು ಸುಗಂಧ ದ್ರವ್ಯಗಳನ್ನೆಲ್ಲಾ ಪೂಸಿಕೊಂಡು ಸ್ವಲ್ಪ ಗರ್ವದಿಂದಲೇ ಪಾರ್ಥನ ಭವನಕ್ಕೆ ಅಡಿಯಿಡುತ್ತಾಳೆ. ಆದರೆ, ಅಷ್ಟು ಹೊತ್ತಿಗೆ ಆತ ನಿದ್ರಾವಶನಾಗಿರುತ್ತಾನೆ. ವರ್ಷ ಪರ್ಯಂತ ಅನ್ನಾಹಾರಗಳನ್ನು ತೊರೆದು ತಪವನ್ನು ಗೈದುದರಿಂದ ದಣಿದ ಪಾರ್ಥನನ್ನು ಸಹಜವಾಗಿಯೇ ಗಾಢ ನಿದ್ದೆಯು ಆವರಿಸಿರುತ್ತದೆ.
ಪಾರ್ಥನು ತನ್ನ ಬರುವಿಕೆಗಾಗಿಯೇ ಕಾಯುತ್ತಿರಬಹುದು ಎಂದು ಯೋಚಿಸುತ್ತಿದ್ದ ಊರ್ವಶಿಗೆ ಅವನು ನಿದ್ದೆಯಲ್ಲಿದ್ದುದನ್ನು ಕಂಡು ತುಸು ನಿರಾಶೆಯಾಗುತ್ತದೆ. ಸಾಕ್ಷಾತ್ ಕಾಮಾರಿಯೊಡನೆಯೇ ಸೆಣಸಿದ ಈತ ತನ್ನೊಡನೆಯ ಕಾಮ ಯುದ್ಧಕ್ಕೆ ಅಂಜುವನೇ? ಏನೋ ಸ್ವಲ್ಪ ಬಳಲಿರಬಹುದು ಅದರಿಂದಾಗಿ ನಿದ್ದೆ ಹೋಗಿದ್ದಾನೆ. ನಾನೇ ಆತನನ್ನು ಎಬ್ಬಿಸುತ್ತೇನೆ ಎಂದು ಕಾಲ್ಗೆಜ್ಜೆ ಹಾಗೂ ಕೈಬಳೆಗಳಿಂದ ಸದ್ದು ಮಾಡಿ ಆತನನ್ನು ಎಬ್ಬಿಸುತ್ತಾಳೆ. ಕಣ್ಣುಗಳನ್ನು ಉಜ್ಜಿಕೊಳ್ಳುತ್ತಾ ನಿದ್ದೆಯಿಂದ ಎಚ್ಚೆತ್ತ ನರನು, ತನ್ನ ಶಯನಾಗಾರದಲ್ಲಿ ತನ್ನ ತಂದೆ ಸುರೇಶ್ವರನ ಮಾನಿನಿಯಾದ ಊರ್ವಶೀದೇವಿಯವರನ್ನು ಕಂಡೊಡನೆ, ಮಂಚದಿಂದಿಳಿದು ಬಂದು ಆಕೆಗೆ ವಂದಿಸುತ್ತಾ "ಅಮ್ಮಾ, ಇದೋ ನಿಮ್ಮ ಪಾದಗಳಿಗೆ ವಂದಿಸಿದ್ದೇನೆ. ತಾವು ಇಲ್ಲಿಗೆ ಬಂದ ಕಾರಣವನ್ನು ತಿಳಿಸಿ. ನನ್ನಿಂದ ಏನಾಗಬೇಕು ಹೇಳಿ. ನಿಮ್ಮ ಸೇವಕ ನಾನು" ಎನ್ನುತ್ತಾನೆ.
ಅರ್ಜುನನ ಬಾಯಿಯಿಂದ "ಅಮ್ಮಾ" ಎಂಬ ಶಬ್ದ ಕೇಳಿದೊಡನೆ ಊರ್ವಶಿಗೆ ಮುಖಭಂಗವಾದಂತಾಗುತ್ತದೆ. ಅರ್ಜುನನ ಇಂತಹ ವರ್ತನೆಯನ್ನು ನಿರೀಕ್ಷಿಸದೇ ಇದ್ದ ಆಕೆ ಸಂಪೂರ್ಣವಾಗಿ ಗಲಿಬಿಲಿಗೊಳ್ಳುತ್ತಾಳೆ. ಪಾದಕ್ಕೆರಗಿದವನನ್ನು ಆಶೀರ್ವದಿಸಿ ಮೇಲೆತ್ತಬೇಕೆಂಬ ಕನಿಷ್ಠ ಜ್ಞಾನವೂ ಆ ಕ್ಷಣದಲ್ಲಿ ಆಕೆಗೆ ಇಲ್ಲವಾಗಿ, ಏನು ಮಾಡಬೇಕೆಂಬುದೇ ಅರಿಯದೇ ಸ್ವಲ್ಪ ಹಿಂದೆ ಸರಿದು ನಿಲ್ಲುತ್ತಾಳೆ. ನಮಸ್ಕರಿಸಿ ಅವನಷ್ಟಕ್ಕೇ ಮೇಲಕ್ಕೆದ್ದ ಪಾರ್ಥನೊಡನೆ "ಎಲೈ ವೀರವರಾ, ಏನಿದು ನಿನ್ನ ವಿಚಿತ್ರ ವರ್ತನೆ? ಆಗ ಸುಧರ್ಮ ಸಭೆಯಲ್ಲಿ ನನ್ನ ನರ್ತನವನ್ನು ಕಂಡು ಮನಸಾರೆ ಮೆಚ್ಚಿಕೊಂಡವನು ನೀನು. ಹೀಗಾಗಿ ನಿನ್ನ ಮನದಿಂಗಿತವನ್ನು ಅರಿತ ಆ ದೇವೇಂದ್ರನೇ ಅಂತರಂಗವಾಗಿ ನಿನ್ನನ್ನು ಸಂತೋಷಪಡಿಸಿ ತೃಪ್ತಿಪಡಿಸಲೆಂದೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಸ್ವರ್ಗ ಸುಖದ ಸೌಭಾಗ್ಯವೇ ನಿನ್ನೆಡೆಗೆ ಒಲಿದು ಬಂದಿದೆ ಎಂದು ತಿಳಿದು, ಪೂರ್ಣ ಉಲ್ಲಾಸದಿಂದ ಒಲಿದು ನನ್ನನ್ನು ಅನುಭವಿಸು ಬಾ" ಎನ್ನುತ್ತಾ ಆತನ ಬಳಿಗೆ ಹೋಗುತ್ತಾಳೆ.
ಅರ್ಜುನನು ಅವಳಿಂದ ದೂರ ಸರಿಯುತ್ತಾ "ಹರ ಹರಾ ಇದೆಂತಹ ಮಾತು ತಾಯೀ, ನೀನು ನಮ್ಮ ವಂಶದ ಹಿರಿಯನಾದ ಪುರೂರವನ ಪತ್ನಿಯಾಗಿದ್ದವಳು. ನಿಮ್ಮಿಬ್ಬರಿಂದಲೇ ನಮ್ಮೀ ಚಂದ್ರವಂಶವು ಬೆಳೆದು ಬಂದಿದೆ. ನಾನು ನಿಮ್ಮ ವಂಶದಲ್ಲಿಯೇ ಹುಟ್ಟಿದವನು. ರಕ್ತ ಸಂಬಂಧವನ್ನು ಪರಿಗಣಿಸಿ ನೋಡಿದರೆ ನಾನು ನಿಮಗೆ ನಿಜವಾದ ಪ್ರಪೌತ್ರನೇ ಆಗಿರುವೆನು. ನಿನ್ನ ವಂಶದವನೇ ಆದ ಕಿರಿಯರಲ್ಲಿ ಅತಿ ಕಿರಿಯನಾದ ನನ್ನನ್ನು ಬಯಸುವುದು ಧರ್ಮವಲ್ಲ. ಆದ್ದರಿಂದ ಇಂತಹ ಮಾತನ್ನಾಡಬೇಡ. ನನ್ನನ್ನು ಆಶೀರ್ವದಿಸು" ಎನ್ನುತ್ತಾ ಪುನಹ ಕಾಲಿಗೆರಗುತ್ತಾನೆ.
ಆಗ ಊರ್ವಶಿಯು "ಎಲಾ ಮರುಳನೇ, ನಿನ್ನ ಭೂಲೋಕದ ಧರ್ಮಗಳಾವುವೂ ಇಲ್ಲಿ ಈ ಸ್ವರ್ಗದಲ್ಲಿ ನಡೆಯುವುದಿಲ್ಲ. ಇಲ್ಲಿ ದಿವ್ಯ ಭೋಗವೊಂದಲ್ಲದೇ ಬೇರೇನೂ ಇಲ್ಲ. ಅದನ್ನೇ ಸ್ವರ್ಗ ಸುಖ ಎನ್ನುವುದು. ನಾವು ಸ್ವರ್ಗದ ಗಣಿಕಾಂಗನೆಯರು ಇರುವುದೇ ಅದಕ್ಕೆ. ಇತರರಿಗೆ ಆ ಸ್ವರ್ಗ ಸುಖವನ್ನು ತೋರಿಸುವುದಕ್ಕೆ. ನಮಗೆ ಮುಪ್ಪು ಎಂಬುದೇ ಇಲ್ಲ. ನಾವೆಲ್ಲರೂ ಚಿರ ಯೌವನಿಗರು. ಹೀಗಾಗಿ ನಮಗೆ ಹಿರಿಯರು ಕಿರಿಯರೆಂಬ ಭೇದವಿಲ್ಲ. ಅಜ್ಜ, ಮೊಮ್ಮಗ, ಮರಿಮಗ ಎಂಬ ಯಾವ ಭೇದವೂ ನಮಗಿಲ್ಲ. ನಮಗೆ ಇಂದ್ರನೂ ಒಂದೇ ಅವನ ಮಗ ಜಯಂತನೂ ಒಂದೇ. ಇತರರಿಗೆ ಅಲಭ್ಯರಾಗಿರುವ ನಾವು ಇಲ್ಲಿನ ಎಲ್ಲಾ ದೇವತೆಗಳಿಗೂ ಮತ್ತು ಪುಣ್ಯಸಂಚಯನದಿಂದ ಇಲ್ಲಿಗೆ ಬರುವವರಿಗೂ ಅನುಭವಿಸುವುದಕ್ಕಾಗಿಯೇ ಇರುವವರು. ಹೀಗಾಗಿ ನಿನ್ನ ಭೂಲೋಕದ ಧರ್ಮವನ್ನೇ ನೆನಪಿಸಿಕೊಂಡು ಕುಗ್ಗಬೇಡ. ಉಲ್ಲಸಿತನಾಗು. ಬಾ ನನ್ನನ್ನು ಅನುಭವಿಸು" ಎನ್ನುತ್ತಾಳೆ.
ಅದಕ್ಕೆ ಪಾರ್ಥನು "ದೇವೀ, ನೀನು ಇಲ್ಲಿಯ ಧರ್ಮವನ್ನು ತಿಳಿಸಿದ್ದೀಯೆ. ಅದು ಸರಿಯೇ. ನೀನು ಹೇಳಿದ ಮಾತನ್ನು ಒಪ್ಪುತ್ತೇನೆ. ಮೃತರಾದ ನಂತರ ಪುಣ್ಯಸಂಚಯನದ ಫಲವಾಗಿ, ತನ್ನ ಭೌತಿಕ ದೇಹವನ್ನು ಕಳೆದು ಕೇವಲ ತೇಜಃಸ್ವರೂಪದ ಆತ್ಮರೂಪಿಯಾಗಿ ಇಲ್ಲಿಗೆ ಬಂದು ನಂತರ ಇಲ್ಲಿಯೇ ನೆಲೆಸುವವರಿಗೆ ನಿನ್ನ ಮಾತು ಅನ್ವಯಿಸುತ್ತದೆ. ಆದರೆ ನಾನು ಹಾಗಲ್ಲವಲ್ಲ. ನಾನು ಸಶರೀರಿಯಾಗಿ ಇಲ್ಲಿಗೆ ಬಂದವನು. ನಾನು ಕೇವಲ ಇಲ್ಲಿಗೆ ಭೇಟಿ ಇತ್ತವನಷ್ಟೇ ವಿನಹ ಇಲ್ಲಿ ನೆಲೆಸಲು ಬಂದವನಲ್ಲ. ನಾನು ಭೂಲೋಕದವನೇ ಆಗಿರುವುದರಿಂದ ನನಗೆ ಭೂಲೋಕದ ಧರ್ಮವೇ ಅನ್ವಯವಾಗುತ್ತದೆ. ನಿನ್ನ ದೇವಲೋಕದ ಧರ್ಮವು ನನಗೆ ಅನ್ವಯಿಸುವುದಿಲ್ಲ. ನನಗೆ ಅದು ಅಧರ್ಮವಾಗುತ್ತದೆ" ಎನ್ನುತ್ತಾನೆ.
ಅದಕ್ಕವಳು ತನ್ನ ತಲೆಯನ್ನು ತಾನೇ ಚಚ್ಚಿಕೊಳ್ಳುತ್ತಾ "ಹರ ಹರಾ, ನಿನ್ನ ಭೂಲೋಕದ ಧರ್ಮದಲ್ಲಿ ಎಷ್ಟು ಹುರುಳಿದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ನೀವು ಐದು ಮಂದಿ ಸಹೋದರರು ದ್ರೌಪದಿ ಓರ್ವಳನ್ನೇ ಮದುವೆಯಾಗಿಲ್ಲವೇ? ಅಲ್ಲಿ ನಿನ್ನ ಅಣ್ಣನಿಗೋ ಅಥವಾ ತಮ್ಮನಿಗೋ ಹೆಂಡತಿಯಾದ ಅವಳನ್ನು ನೀನು ಭೋಗಿಸುತ್ತಿಲ್ಲವೇ? ಇಲ್ಲಿ ಮಾತ್ರ ನಾನು ನಿನಗೆ ತಾಯಿ ಸಮಾನಳಾಗುತ್ತೇನೆ ಅಲ್ಲವೇ? ಇದೆಂತಹ ಧರ್ಮ ನಿನ್ನದು?" ಎಂದು ಕೆಣಕುತ್ತಾಳೆ.
ಅವಳ ಮಾತಿನಿಂದ ಕುಪಿತನಾದ ಅರ್ಜುನನು "ತಾಯಿಯ ಮಾತಿಗೆ ಕಟ್ಟು ಬಿದ್ದ ನಾವು ಒಂದು ವಿಶೇಷ ಧರ್ಮಕ್ಕೆ ಒಳಪಟ್ಟು ಐದು ಮಂದಿಯೂ ದ್ರೌಪದಿಯನ್ನು ವರಿಸಬೇಕಾಗಿ ಬಂತು. ಭಗವಾನ್ ವೇದವ್ಯಾಸರೇ ಕೂಲಂಕಷವಾಗಿ ವಿವೇಚಿಸಿ ಇದೊಂದು ವಿಶೇಷ ಧರ್ಮ ಎಂದು ಸಮ್ಮತಿಸಿದ ಮೇಲೆಯೇ ನಾವು ಐವರು ಅವಳನ್ನು ವಿವಾಹವಾಗಿದ್ದು. ಪಾಂಡವರನ್ನುಳಿದು ಬೇರೆ ಯಾರಿಗೂ ಇದು ಅನುಸರಣೀಯವಲ್ಲ ಎಂದು ಪೂಜ್ಯರಾದ ವ್ಯಾಸರೂ, ಧೌಮ್ಯರೂ ಹಾಗೂ ಶತಾನಂದರೂ ಅಂದೇ ಸಾರಿದ್ದಾರೆ. ಹೀಗೆ ಶಾಸ್ತ್ರವೇತಾರರಿಂದ ನೀತಿ ನಿಯಮಗಳು ನಿರೂಪಿತವಾದ ನಂತರವೇ ದ್ರೌಪದಿಯು ಪಂಚವಲ್ಲಭೆಯಾಗಿರುವುದೇ ವಿನಹ ಕೇವಲ ದೈಹಿಕ ಸುಖಕ್ಕಾಗಿ ಅಲ್ಲ" ಎನ್ನುತ್ತಾನೆ.
ಅದಕ್ಕವಳು "ಅಂದು ತಾಯಿಯ ಮಾತನ್ನು ನೆರವೇರಿಸುವುದಕ್ಕಾಗಿ ಐವರೂ ದ್ರೌಪದಿಯನ್ನು ಮದುವೆಯಾದಿರಲ್ಲವೇ? ಹಾಗಾದರೆ ಇಂದು ತಂದೆಯ ಮಾತನ್ನು ನೆರವೇರಿಸುವುದಕ್ಕಾಗಿ ನನ್ನೊಡನೆ ಸುಖಿಸು ಬಾ. ನಾನು ನರ್ತಿಸುವಾಗ ನನ್ನನ್ನೇ ತದೇಕ ಚಿತ್ತದಿಂದ ನೋಡಿದ್ದು ಯಾಕೆ? ನನ್ನನ್ನು ಮೆಚ್ಚಿದ್ದು ಯಾಕೆ? ನೀನು ನನ್ನನ್ನು ಮೆಚ್ಚಿದ್ದರಿಂದಾಗಿ ದೇವೇಂದ್ರನು ನನ್ನನ್ನು ಇಲ್ಲಿಗೆ ಕಳುಹಿಸಿದ್ದು. ಈಗ ಅವನ ಮಾತನ್ನು ನೆರವೇರಿಸು" ಎನ್ನುತ್ತಾಳೆ.
ಊರ್ವಶಿಯ ಮಾತುಗಳಿಂದ ಅರ್ಜುನನಿಗೆ ಅವಳ ಮೇಲೆ ಜಿಗುಪ್ಸೆ ಹುಟ್ಟುತ್ತದೆ. "ನಾನು ತದೇಕಚಿತ್ತದಿಂದ ನೋಡಿದ್ದಾಗಲೀ ಮೆಚ್ಚಿದ್ದಾಗಲೀ ಇದ್ದರೆ ಅದು ನಿನ್ನ ನೃತ್ಯವನ್ನು ವಿನಹ ನಿನ್ನನ್ನಲ್ಲ ಅಥವಾ ನಿನ್ನ ದೇಹವನ್ನಲ್ಲ. ಒಂದುವೇಳೆ ನಾನು ನಿನ್ನನ್ನೇ ನೋಡಿದ್ದರೂ ಅದು ತಪ್ಪಲ್ಲ. ಮರಿ ಮಗನೊಬ್ಬ ತನ್ನ ಮುತ್ತಜ್ಜಿಯನ್ನು ನೋಡಿದಂತೆ ಬಿಟ್ಟರೆ ಅದಕ್ಕೆ ಬೇರೆ ವಿಶೇಷ ಅರ್ಥವೇನೂ ಇಲ್ಲ. ಇದನ್ನು ಅರ್ಥಮಾಡಿಕೋ. ಮತ್ತೆ ಶಿವಾನುಗ್ರಹದಿಂದಾಗಿ ನಾನು ಇಲ್ಲಿಗೆ ಬಂದುದೇನೋ ನಿಜ. ಆದರೆ ಇಲ್ಲಿಗೆ ಬಂದವನು ಯಾವುದೇ ಸುಖ ಭೋಗವನ್ನು ಅನುಭವಿಸುವಂತಿಲ್ಲ. ಏಕೆಂದರೆ ನಾವು ಐವರೂ ಈಗ ವನವಾಸದ ದೀಕ್ಷೆಯನ್ನು ತೊಟ್ಟು ಕಾಡನ್ನು ಸೇರಿದವರು. ವ್ರತಸ್ಥರಾಗಿರುವುದರಿಂದ ಬ್ರಹ್ಮಚರ್ಯವನ್ನು ಪಾಲಿಸಬೇಕಾದುದು ನಮ್ಮ ಕರ್ತವ್ಯ. ಆದ್ದರಿಂದ ನನ್ನನ್ನು ಕಾಡಬೇಡ. ಅಂತೆಯೇ ನೀನು ಇಲ್ಲಿಗೆ ನನ್ನ ಭವನಕ್ಕೆ ಬಂದುದೂ ತಪ್ಪಲ್ಲ. ಒಬ್ಬಳು ಮುತ್ತಜ್ಜಿ ತನ್ನ ಮರಿಮಗನ ಶಯನಾಗಾರಕ್ಕೆ ಬರಬಾರದೆಂದೇನೂ ಇಲ್ಲವಲ್ಲ. ಹೇಗೂ ಬಂದಿದ್ದೀಯಲ್ಲವೇ? ನನ್ನನ್ನು ಆಶೀರ್ವದಿಸಿ ಹೋಗು" ಎನ್ನುತ್ತಾ ಪುನಹ ಕಾಲಿಗೆರಗುತ್ತಾನೆ.
ಈಗಲೂ ಕೂಡಾ ಕಾಲಿಗೆರಗಿದವನನ್ನು ಊರ್ವಶಿಯು ಹರಸಲೂ ಇಲ್ಲ, ಮೇಲೆತ್ತಿ ಆದರಿಸಲೂ ಇಲ್ಲ. ಬದಲಿಗೆ ಅವಳಿಗೆ ಕೋಪ ತಾಪಗಳು ಉಕ್ಕೇರುತ್ತವೆ. ಆಕೆ ತನ್ನಷ್ಟಕ್ಕೇ ಮಾತಾಡಿಕೊಳ್ಳುತ್ತಾ "ಈ ಹಿಂದೆ ದೇವೇಂದ್ರನ ಅಪ್ಪಣೆಯಂತೆ ನಾನು ಅದೆಷ್ಟು ಜನ ಜಿತೇಂದ್ರಿಯರಾದ ಋಷಿಗಳ ಮನಸ್ಸನ್ನು ಕೆಡಿಸಿ, ಅವರ ತಪೋಭಂಗ ಮಾಡಿಲ್ಲ. ಈಗ ಕೇವಲ ಈ ಅಲ್ಪ ಮಾನವನೊಬ್ಬನಲ್ಲಿ ನಾನು ಮಾನವನ್ನೇ ಕಳೆದುಕೊಳ್ಳುವಂತಾಯಿತು. ಅರ್ಜುನನನ್ನು ಓಲೈಸು ಎಂದ ಚಿತ್ರಸೇನನು ಆಜ್ಞೆಯನ್ನು ಪಾಲಿಸಲಿಲ್ಲ ಏಕೆ? ಎಂದು ಕೇಳಿದರೆ ಅವನಿಗೆ ನಾನು ಏನು ಹೇಳಲಿ? ಅಥವಾ ಸ್ವತಹ ದೇವೇಂದ್ರನೇ ಕೇಳಿದರೆ ಏನೆನ್ನಲಿ? ನಾನು ಕೈಲಾಗದವಳು ಎಂದು ಆತ ತೀರ್ಮಾನಿಸಲಿಕ್ಕಿಲ್ಲವೇ? ಮುಂದೆ ಇಂತಹ ಕೆಲಸಕ್ಕೆ ನನ್ನನ್ನು ಕರೆದಾನೆಯೇ? ಹೊರಗಡೆ ಬಾಗಿಲಲ್ಲಿ ದಾಸಿಯರಿದ್ದಾರೆ. ಅವರಿಗೆಲ್ಲಾ ನಾನು ಅರ್ಜುನನಿಂದ ತಿರಸ್ಕೃತಳಾದ ಕೈಲಾಗದವಳು ಎಂಬ ವಿಷಯ ತಿಳಿದರೆ ಏನು ಗತಿ? ರಂಭೆ ಮೇನಕೆ ಮೊದಲಾದವರಿಗೆಲ್ಲಾ ಗೊತ್ತಾದರೆ ಸ್ವರ್ಗದಲ್ಲಿ ಮುಂದೆ ತಲೆ ಎತ್ತುವುದೆಂತು? ಅಯ್ಯೋ ನನ್ನ ಗತಿಯೇ, ಇಷ್ಟಕ್ಕೆಲ್ಲಾ ಕಾರಣ ಯಾರು? ಈ ಷಂಡ ಅರ್ಜುನ" ಎನ್ನುತ್ತಾ ಅರ್ಜುನನೆಡೆಗೆ ತಿರುಗುತ್ತಾಳೆ.
ಸಿಟ್ಟಿನಿಂದ "ಎಲಾ ಅರ್ಜುನ, ನಿನ್ನಿಂದಾಗಿಯೇ ನಾನು ನಿಷ್ಪ್ರಯೋಜಕಳು ಎನ್ನಿಸಿಕೊಳ್ಳುವಂತಾಯಿತು. ಕೊನೆಗೂ ನೀನು ನಿನ್ನ ಹಠವನ್ನೇ ಸಾಧಿಸಿಬಿಟ್ಟೆ ಅಲ್ಲವೇ? ನಿನ್ನೆಡೆಗೆ ಬಂದ ನನ್ನನ್ನು ಕಡೆಗಣಿಸಿ ಬಿಟ್ಟೆ ಅಲ್ಲವೇ? ನಾನು ಯಾರು, ನನ್ನ ಶಕ್ತಿ ಏನು ಎಂಬುದು ನಿನಗಿನ್ನೂ ಸರಿಯಾಗಿ ಗೊತ್ತಿಲ್ಲ. ತನು ಸುಖವನ್ನು ಕೊಡುವೆನೆಂದು ನಾನಾಗಿ ಒಲಿದು ಬಂದರೂ ಷಂಡನಂತೆ ನನ್ನನ್ನು ಧಿಕ್ಕರಿಸಿದೆ ಅಲ್ಲವೇ? ಅದಕ್ಕನುಗುಣವಾಗಿ ವರುಷವೊಂದರ ಕಾಲ ನೀನು ಷಂಡನೇ ಆಗು. ಇದು ನಾನು ನಿನಗೆ ಕೊಡುತ್ತಿರುವ ಶಾಪ. ಈ ಶಾಪವನ್ನು ಹರಿ ಹರ ಬ್ರಹ್ಮಾದಿಗಳಿಂದಲೂ ಬದಲಿಸಲು ಸಾಧ್ಯವಾಗದೇ ಹೋಗಲಿ, ಅನುಭವಿಸು ಷಂಡ" ಎಂದು ಶಾಪವನ್ನಿತ್ತು ತೆರಳುತ್ತಾಳೆ.
ನಾನು ಯಾವ ತಪ್ಪನ್ನೂ ಮಾಡದೇ ಇದ್ದರೂ ಈಕೆ ನನ್ನನ್ನು ಶಪಿಸಿ ಹೋದಳಲ್ಲ ಎಂದು ಅರ್ಜುನನು ದುಃಖಿಸುತ್ತಾನೆ. ಆಗ ಅಲ್ಲಿಗೆ ಬಂದ ದೇವೇಂದ್ರನು ಆತನನ್ನು ಸಂತೈಸುತ್ತಾ "ಮಗೂ , ಆಗುವುದೆಲ್ಲವೂ ಒಳ್ಳೇದಕ್ಕೇ ಎಂದು ತಿಳಿದುಕೋ. ಆಕೆ ಶಪಿಸಿದಳೆಂದು ಮರುಗಬೇಡ. ಮುಂದೆ ಅಜ್ಞಾತವಾಸದ ಕಾಲದ ಇವಳ ಈ ಶಾಪವೇ ನಿನಗೆ ವರವಾಗಿ ಪರಿಣಮಿಸಲಿದೆ. ಅವಳು ಶಪಿಸಿದ ಮಾತ್ರಕ್ಕೆ ಈಗಿಂದೀಗಲೇ ನೀನು ನಪುಂಸಕನಾಗುವುದಿಲ್ಲ. ನಿನಗೆ ಯಾವಾಗ ಬೇಕೋ ಆವಾಗ ಕೇವಲ ಒಂದು ವರ್ಷ ಕಾಲ ಮಾತ್ರ, ನೀನೇ ಬಯಸಿ ಈ ನಪುಂಸಕತ್ವವನ್ನು ಪಡೆದುಕೊಳ್ಳುವಂತೆ ನಾನು ನಿನಗೆ ಅನುಗ್ರಹಿಸುತ್ತೇನೆ. ಅರ್ಜುನಾ, ಚಿಂತಿಸಬೇಡ. ಇದು ನಾನೇ ನಿನಗಾಗಿ ನಡೆಸಿದ ನೈತಿಕ ಪರೀಕ್ಷೆ. ನನ್ನ ಈ ಪರೀಕ್ಷೆಯಲ್ಲಿಯೂ ನೀನು ಉತ್ತೀರ್ಣನಾಗಿ 'ಜಿತೇಂದ್ರಿಯ' ಎಂದು ಪ್ರಖ್ಯಾತನಾದೆ. ಆದ್ದರಿಂದ ಖಿನ್ನನಾಗಬೇಡ" ಎನ್ನುತ್ತಾನೆ.
ಮತ್ತೂ ಮುಂದುವರಿದು ಮಾತನಾಡಿದ ಇಂದ್ರನು, "ಅರ್ಜುನಾ, ನಾನು ಈ ರೀತಿ ನಿನ್ನನ್ನು ಪರೀಕ್ಷೆಗೆ ಗುರಿಪಡಿಸುವುದಕ್ಕೂ ಕಾರಣವಿದೆ. ಪ್ರಹ್ಲಾದನ ತಮ್ಮ ಸಂಹ್ಲಾದನ ಪುತ್ರನಾದ ಪಂಚಜನ ಎಂಬ ರಕ್ಕಸನನ್ನು ಶ್ರೀಕೃಷ್ಣನು ಕೊಂದಿರುವನಷ್ಟೇ. ಆ ಪಂಚಜನ ಎಂಬವನಿಗೆ ಸಹಸ್ರಾರು ಮಂದಿ ತಮ್ಮಂದಿರಿದ್ದಾರೆ. ಅವರೇ ನಿವಾತಕವಚರೆಂಬ ರಕ್ಕಸರು. ಸಮುದ್ರದಲ್ಲಿ ಹಿರಣ್ಯಕಪುರವೆಂಬ ನಗರವನ್ನು ರಚಿಸಿಕೊಂಡು ಅಲ್ಲಿ ಅಡಗಿಕೊಂಡಿದ್ದು, ಆಗಾಗ ಬಂದು ನಮ್ಮ ಸ್ವರ್ಗದ ಮೇಲೆ ಕಳ್ಳರಂತೆ ದಾಳಿ ಮಾಡುತ್ತಾರೆ. ಇನ್ನು ಅವರಿಗೆ ಸಹಾಯಕರಾಗಿ ಅವರ ಮಿತ್ರರಾದ ಕಾಲಕೇಯರೆಂಬ ರಕ್ಕಸರೂ ಅಲ್ಲಿದ್ದಾರೆ. ಅವರೂ ಕೂಡಾ ಸಹಸ್ರಾರು ಸಂಖ್ಯೆಯಲ್ಲಿದ್ದು ಅವರೆಲ್ಲರಿಗೂ 'ಜಿತೇಂದ್ರಿಯನಿಂದ ಮಾತ್ರ ಮರಣ' ಎಂಬ ಬ್ರಹ್ಮನ ವರವಿದೆ. ಭೋಗಾಸಕ್ತರಾದ ನಾವು ಯಾರೂ ಜಿತೇಂದ್ರಿಯರಲ್ಲ. ಹೀಗಾಗಿ ನಾವು ಅಸಹಾಯಕರಾಗಿದ್ದೇವೆ. ಆದ್ದರಿಂದ ಜಿತೇಂದ್ರಿಯನಾದ ನೀನು ಅವರನ್ನೆಲ್ಲಾ ಸಂಹರಿಸಿ ನಮಗೆ ಉಪಕಾರ ಮಾಡಬೇಕು" ಎನ್ನುತ್ತಾನೆ.
ಅರ್ಜುನನು ಒಪ್ಪುತ್ತಾನೆ. ದೇವತೆಗಳೆಲ್ಲರೂ ತಮ್ಮಲ್ಲಿರುವ ವಿಶೇಷವಾದ ಮಂತ್ರಾಸ್ತ್ರಗಳನ್ನು ಅರ್ಜುನನಿಗೆ ನೀಡಿ ಅನುಗ್ರಹಿಸುತ್ತಾರೆ. ಜೊತೆಯಲ್ಲಿ ಸಕಲ ದೇವ ಸೈನ್ಯವೂ ಅರ್ಜುನನಿಗೆ ಸಹಾಯಕವಾಗಿ ಹೊರಡುತ್ತದೆ. ಅರ್ಜುನನು ಮೊದಲು ಹಿರಣ್ಯಕಪುರವನ್ನು ಮುತ್ತಿ ಅಲ್ಲಿರುವ ನಿವಾತಕವಚರನ್ನೆಲ್ಲಾ ತನ್ನ ಅಕ್ಷಯಾಸ್ತ್ರಗಳಿಂದ ಕೊಲ್ಲುತ್ತಾನೆ. ತದನಂತರ ವಿಷಯ ತಿಳಿದು ಯುದ್ಧಕ್ಕೆ ಬಂದ ಕಾಲಕೇಯರೆಲ್ಲರನ್ನೂ ಅರ್ಜುನನು ಕೊಲ್ಲುತ್ತಾನೆ.
ನಿವಾತಕವಚರು ಹಾಗೂ ಕಾಲಕೇಯರೆಲ್ಲರನ್ನೂ ನಿಗ್ರಹಿಸಿ ಬಂದ ಪಾರ್ಥನನ್ನು ಸ್ವರ್ಗಲೋಕದಲ್ಲಿ ಅದ್ದೂರಿಯಾಗಿ ಸ್ವಾಗತಿಸುತ್ತಾರೆ. ದೇವೇಂದ್ರನು ಪುನಹ ಅವನನ್ನು ತನ್ನ ಸಿಂಹಾಸನದ ಮೇಲೆ ಕುಳ್ಳಿರಿಸಿ, ವಿಶೇಷವಾದ ರತ್ನಖಚಿತವಾದ ಪ್ರಭಾವಳಿಯ ದಿವ್ಯ ಕಿರೀಟವೊಂದನ್ನು ಅವನಿಗೆ ತೊಡಿಸಿ ಗೌರವಿಸುತ್ತಾನೆ. ಇಂದಿನಿಂದ ನೀನು "ಕಿರೀಟಿ" ಎಂದೇ ಪ್ರಖ್ಯಾತನಾಗು ಎಂದು ಅಶೀರ್ವದಿಸುತ್ತಾನೆ. ಹೀಗಾಗಿ ಅರ್ಜುನನ ದಶನಾಮಾವಳಿಯಲ್ಲಿ "ಕಿರೀಟಿ" ಎಂಬ ಹೆಸರೂ ಸೇರಿಕೊಂಡಿತು.
ಇದಾದ ಬಳಿಕ ದೇವೇಂದ್ರನು ಮತ್ತೂ ಕೆಲವು ದಿನ ಅರ್ಜುನನನ್ನು ಒತ್ತಾಯಪೂರ್ವಕವಾಗಿ ಸ್ವರ್ಗದಲ್ಲಿ ಉಳಿಸಿಕೊಳ್ಳುತ್ತಾನೆ. ಆ ಸಂದರ್ಭದಲ್ಲಿ ಅರ್ಜುನನಿಗೆ ಚಿತ್ರಸೇನನು ನಾಟ್ಯಶಾಸ್ತ್ರವನ್ನು ಬೋಧಿಸುತ್ತಾನೆ. ಚಿತ್ರಸೇನನು "ಈ ನಾಟ್ಯವಿದ್ಯೆಯು ಮುಂದೆ ಅಜ್ಞಾತವಾಸದ ಸಂದರ್ಭದಲ್ಲಿ ನಿನಗೆ ಉಪಯೋಗವಾಗುತ್ತದೆ, ಆದ್ದರಿಂದ ಇದನ್ನು ಶ್ರದ್ಧೆಯಿಂದ ಕಲಿತುಕೋ" ಎನ್ನುತ್ತಾನೆ. ಹೀಗಾಗಿ ಅರ್ಜುನನು ನಾಟ್ಯ ವಿದ್ಯೆಯನ್ನು ಶಾಸ್ತ್ರೀಯವಾಗಿಯೂ ಮತ್ತು ಪ್ರಾಯೋಗಿಕವಾಗಿಯೂ ಚಿತ್ರಸೇನನ ಮೂಲಕ ಅಭ್ಯಾಸಮಾಡುತ್ತಾನೆ.
ಮುಂದೊಂದು ದಿನ ದೇವೇಂದ್ರನು ವಿಜೃಂಭಣೆಯಿಂದ ವಿಧ್ಯುಕ್ತವಾಗಿ ಅರ್ಜುನನನ್ನು ಬೀಳ್ಕೊಡುತ್ತಾನೆ. ಇಂದ್ರನ ಸಾರಥಿಯಾದ ಮಾತಲಿಯು ಅರ್ಜುನನನ್ನು ಇಂದ್ರನ ರಥದಲ್ಲಿಯೇ ಕುಳ್ಳಿರಿಸಿಕೊಂಡು ಕಾಮ್ಯಕಾವನಕ್ಕೆ ತಂದು ಬಿಡುತ್ತಾನೆ.
ಲೇಖನ: ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
Tags:
ಪುರಾಣ