ದೇವರ ಪ್ರೀತ್ಯರ್ಥ ನಡೆಯುವ ರಂಗಭೋಗದಲ್ಲಿ ಸ್ಥಾನ ಪಡೆದ ಯಕ್ಷಗಾನ

ಪ್ರಾತಿನಿಧಿಕ ಚಿತ್ರ
ಯಕ್ಷಗಾನಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -8 by ಸುರೇಂದ್ರ ಪಣಿಯೂರ್

ದೇವರಿಗೆ ಷೋಡಶೋಪಚಾರ (16 ಬಗೆಯ ಉಪಚಾರ) ಪೂಜೆಯ ಅಂಗವಾಗಿ,
ಆಸನಂ ಸ್ವಾಗತಂಚಾರ್ಘ್ಯಂ ಪಾದ್ಯಮಾಚಮನೀಯಕಂ| ಮಧುಪರ್ಕಾರ್ಪಣಂ ಸ್ನಾನವಸನಾಭರಣಾನಿ ಚ|| ಸುಗಂಧಃ ಸುಮನೋ ಧೂಪೋ ದೀಪಮನ್ನೇನ ಭೋಜನಂ| ಮಾಲ್ಯಾನುಲೇಪನಂಚೈವ ನಮಸ್ಕಾರ ಇತಿಕ್ರಮಾತ್ || ಎಂಬ ಶಾಸ್ತ್ರವಿದೆ.

ಎಂದರೆ, 1.ಆಸನಂ 2.ಸ್ವಾಗತಂ, 3.ಅರ್ಘ್ಯಂ, 4.ಪಾದ್ಯಂ (ಆಚರಣೆಯಲ್ಲಿ ಪಾದ್ಯ ಆದ ಮೇಲೆ ಅರ್ಘ್ಯ), 5.ಆಚಮನೀಯಕಂ 6.ಮಧುಪರ್ಕಾರ್ಪಣಂ, 7.ಸ್ನಾನಂ, 8.ವಸನ, 9.ಆಭರಣಾನಿ, 10.ಸುಗಂಧಃ, 11.ಸುಮನೋ ಧೂಪೋ, 12.ದೀಪಂ, 13.ಅನ್ನೇನಭೋಜನಂ; 14.ಮಾಲ್ಯಾ 15. ಅನುಲೇಪನಂ ಚೈವ, 16.ನಮಸ್ಕಾರ ಇತಿಕ್ರಮಾತ್ ಈ ಹದಿನಾರು ಬಗೆಯ ಪೂಜೆಗಳಿರುತ್ತವೆ.

ಆದರೆ ರೂಢಿ ಪೂಜಾ ಕ್ರಮದಲ್ಲಿ ಬೇರೆ ರೀತಿ ಅನುಸರಣೆ ಇದೆ. 1.ಧ್ಯಾನ, 2. ಆವಾಹನ, 3 ಆಸನ, 4.ಪಾದ್ಯ 5.ಅರ್ಘ್ಯ, 6. ಆಚಮನ, 7. ಸ್ನಾನ (ಮಲಾಪಕರ್ಷಣ, ಪಂಚಾಮೃತ, ಮಹಾಭಿಷೇಕ ಮತ್ತು ಶುದ್ಧೋದಕ ಸ್ನಾನ) 8.ವಸ್ತ್ರ, 9. ಆಭರಣ 10. ಉಪವೀತ, 11.ಗಂಧ, 12. ಅಕ್ಷತಾ, 13.ಪುಷ್ಪ ಇವುಗಳ ಸಮರ್ಪಣೆ, 14. ದ್ವಾದಶ ನಾಮ ಪೂಜಾ, 15. ಧೂಪ, 16.ದೀಪ, 17. ನೈವೇದ್ಯ (ಭೋಜನ) 18.ಮಂಗಲ ನೀರಾಜನ, 19.ತಾಂಬೂಲ, 20. ಮಂತ್ರ ಪುಷ್ಪ, 21.ಪ್ರದಕ್ಷಿಣ 22. ನಮಸ್ಕಾರ, 23.ಪ್ರಸನ್ನಾರ್ಘ್ಯ, 24.ಪ್ರಾರ್ಥನೆ, 25.ವಿಸರ್ಜನ - ಹೀಗಿರುವುದಾಗಿ ಶಾಸ್ತ್ರಕಾರರು ಹೇಳುತ್ತಾರೆ.

ಮುಂದುವರಿದು...

ಕರ್ನಾಟಕದ ಶಾಸನಗಳಲ್ಲಿ ಅಂಗಭೋಗ ಮತ್ತು ರಂಗಭೋಗ ಎಂಬ ಮಾತುಗಳು ಬರುತ್ತವೆ. ವಿಗ್ರಹದ ದೇಹಕ್ಕೆ ಸಲ್ಲುವ ಭೋಗ, ಎಂದರೆ ಸ್ನಾನ, ಗಂಧಲೇಪನ, ಧೂಪ, ದೀಪ, ಪುಷ್ಪ ಇತ್ಯಾದಿಗಳು ಅಂಗಭೋಗಗಳು. ಗರ್ಭಗುಡಿಯ ಮುಂದಿನ ರಂಗದ ಮೇಲೆ ಎಂದರೆ ದೇವತಾ ಮೂರ್ತಿಯ ಮುಂದೆ ಸುಂದರಿಯರಿಂದ ನಡೆಯುವ ಗೀತ, ನೃತ್ಯಗಳೇ ರಂಗ ಭೋಗಗಳು. ದೇವದಾಸಿಯರು ರಂಗಭೋಗದ ಉಪಕರಣಗಳು ಎಂಬುದಾಗಿ ಎಂ. ಚಿದಾನಂದಮೂರ್ತಿಯವರು ಅಭಿಪ್ರಾಯಪಡುತ್ತಾರೆ.

ಈ ರಂಗಭೋಗದ ಅಂಗವೇ ನರ್ತನ ಸೇವೆಗಳು. ಈ ರಂಗಭೋಗಗಳು ದೇವರ ಪ್ರೀತ್ಯರ್ಥವಾಗಿ ನಡೆಯುವಂತದ್ದು. ಇದಕ್ಕಾಗಿ ಹಿಂದೆ ದೇವಸ್ಥಾನದಲ್ಲಿ ಆಶ್ರಯ ಪಡೆದ ದೇವದಾಸಿಯರು ಇದ್ದರು. ಮುಂದುವರಿದ ಭಾಗವಾಗಿ ಯಕ್ಷಗಾನವೂ ದೇವಸ್ಥಾನದಲ್ಲಿ ಆಶ್ರಯ ಪಡೆಯಿತು ಎಂಬ ಮಾತೂ ಇದೆ. ಇದು ಏನೇ ಇರಲಿ, ಯಕ್ಷಗಾನ ಕಲೆಯು ದೇವಸ್ಥಾನಗಳನ್ನು ಆಶ್ರಯಿಸಿದ್ದು ನಿಜ. ಈ ದೇವಸ್ಥಾನಗಳು ರಾಜಾಶ್ರಯದಲ್ಲಿದ್ದ ಕಾರಣ ಯಕ್ಷಗಾನವೂ ರಾಜಾಶ್ರಯದಲ್ಲಿ ಕಾರ್ಯನಿರ್ವಹಿಸಲು ತೊಡಗಿತು.

ಈ ಎಲ್ಲ ಕಾರಣಗಳಿಂದ ಬಹುತೇಕ ಯಕ್ಷಗಾನ ಮೇಳಗಳು ದೇವಸ್ಥಾನ ಮೂಲದಿಂದ ತಿರುಗಾಟಕ್ಕೆ ಹೊರಟವು. ಹಾಗಾಗಿ ಈ ಕಲೆಯಲ್ಲಿ ಆರಾಧನೆಯ ಭಾಗವೇ  ಪ್ರಧಾನ ಅಂಗವಾಯಿತು. (ಸಶೇಷ).

ಲೇಖನ: ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು