ಧರ್ಮವ್ಯಾಧನೆಂಬ ಕಟುಕ ಮಹಾಜ್ಞಾನಿ

ಪ್ರಾತಿನಿಧಿಕ ಚಿತ್ರ
ಪುರಾಣ ಅರಿಯೋಣ ಸರಣಿ by ದಾಮೋದರ ಶೆಟ್ಟಿ, ಇರುವೈಲ್
ಧರ್ಮವ್ಯಾಧನು ಒಬ್ಬ ಮಹಾಜ್ಞಾನಿಯಾದ ಕಟುಕ. ಪೂರ್ವ ಜನ್ಮದಲ್ಲಿ ಮಿಥಿಲಾನಗರದಲ್ಲಿದ್ದು ಶಸ್ತ್ರ-ಶಾಸ್ತ್ರ ಪಾರಂಗತನಾದ ಬ್ರಾಹ್ಮಣನಾಗಿದ್ದನು.

ಒಂದೊಮ್ಮೆ ರಾಜಪುತ್ರರೊಡನೆ ಬೇಟೆಗೆ ಹೋದಾಗ ಜಿಂಕೆ ಎಂದು ಭ್ರಮಿಸಿ ಮುನಿಯೊಬ್ಬನನ್ನು ಕೊಂದಿದ್ದನು. ಸಾಯುವ ಮುನ್ನ ಆ ಮುನಿಯು "ನೀನು ಬ್ರಾಹ್ಮಣನಾಗಿ ಜನಿಸಿದ್ದರೂ ತಪೋನುಷ್ಠಾನ ಮಾಡದೆ  ಕ್ಷತ್ರಿಯೋಚಿತವಾದ ಬೇಟೆಗೆ ಬಂದು ಕಟುಕನ ಕೃತ್ಯವನ್ನು ಮಾಡಿರುವುದರಿಂದ ಕಟುಕನಾಗಿ ಹುಟ್ಟು" ಎಂದು ಶಪಿಸಿದನು.

ಬಳಿಕ ಇವನು "ಧರ್ಮವ್ಯಾಧ"ನಾಗಿ ಜನಿಸಿ, ಮಾತಾ-ಪಿತೃಗಳನ್ನು ಬಹಳ ಭಕ್ತಿಯಿಂದ ಶುಶ್ರೂಷೆ ಮಾಡಿ ಋಷಿ-ಮುನಿಗಳಿಗೆ ಸಹಾಯ ಮಾಡುತ್ತಾ ಅವರಿಂದ ಧರ್ಮಸೂಕ್ಷ್ಮ, ನೀತಿಯನ್ನು ತಿಳಿದು ಜ್ಞಾನಿಯಾದನು.

ಇವನಿಗೆ ಅರ್ಜುನನೆಂಬ ಮಗನೂ, ಅರ್ಜುನಿಕಿ ಎಂಬ ಮಗಳೂ ಇದ್ದರು. ಮಗಳಿಗೆ ಸಕಲ ನೀತಿಶಾಸ್ತ್ರವನ್ನು ಕಲಿಸಿ ಮತಂಗ ಮುನಿಯ ಮಗ ಪ್ರಸನ್ನನಿಗೆ ಕೊಟ್ಟು ಮದುವೆ ಮಾಡಿದ್ದನು.

ಧರ್ಮವ್ಯಾಧ ಅನೇಕ ಧರ್ಮರಹಸ್ಯಗಳನ್ನು ಬಲ್ಲವನಾಗಿದ್ದನು. ಕೌಶಿಕನೆಂಬ ಮುನಿಗೆ ಧರ್ಮೋಪದೇಶ ಮಾಡಿದ್ದನು.

ಒಮ್ಮೆ ಕೌಶಿಕ ಋಷಿಯು ಮರದಡಿಯಲ್ಲಿ ಬಹಳ ಕಾಲದಿಂದ ತಪೋನಿರತನಾಗಿದ್ದಾಗ ಒಂದು ದಿನ ಮರದ ಮೇಲಿದ್ದ ಕೊಕ್ಕರೆಯೊಂದು ಇವನ ತಲೆಯ ಮೇಲೆ ಹಿಕ್ಕೆ ಹಾಕಿತು. ತಪಸ್ಸಿನಿಂದ ಬಹಿರ್ಮುಖನಾದ ಕೂಡಲೇ ಆ ಕೊಕ್ಕರೆಯನ್ನು ನೋಡಿದಾಗ ಅದು ಸುಟ್ಟು ಬೂದಿಯಾಯಿತು.

ಕೌಶಿಕ ತನ್ನ ತಪಸ್ಸು ಸಿದ್ಧಿಯಾಯಿತೆಂಬ ಹೆಮ್ಮೆಯಿಂದ ಭಿಕ್ಷಾರ್ಥಿಯಾಗಿ ಗ್ರಾಮವೊಂದರ ಮನೆಯ ಮುಂದೆ ನಿಂತು "ಭಿಕ್ಷಾಂ ದೇಹಿ" ಎಂದನು. ಆ ಮನೆಯ ಗೃಹಿಣಿ ಅದೇ ಸಮಯದಲ್ಲಿ ಪತಿಗೆ ಬಡಿಸುತ್ತಿದ್ದುದರಿಂದ ತಡವಾಗಿ ಭಿಕ್ಷೆ ತಂದಳು.

ಅವಳನ್ನು ಸಿಟ್ಟಿನಿಂದ ದುರದುರನೆ ನೋಡಿದಾಗ ಅವಳೆಂದಳು - "ಅಯ್ಯಾ ನಿನ್ನ ಸಿಟ್ಟಿಗೆ ಗುರಿಯಾಗಿ ಸುಟ್ಟು ಬೂದಿಯಾಗಲು ನಾನೇನು ಮರದ ಮೇಲಿನ ಕೊಕ್ಕರೆಯಲ್ಲ!!! " ಎಂದಾಗ  ಲಜ್ಜೆ-ಭಯ-ಆಶ್ಚರ್ಯದಿಂದ ಅವಳ ಕಾಲಿಗೆರಗಿದ ಆತ, "ಈಗ ತಾನೇ ಅರಣ್ಯದಲ್ಲಿ ನಡೆದ ವಿದ್ಯಮಾನವು ನಿನಗೆ ತಿಳಿದ ಬಗೆ ಹೇಗೆ ಅನುಗ್ರಹಿಸು" ಎಂದು ಕೇಳಿಕೊಂಡನು.

ಅವಳು ಕ್ರೋಧದ ಕೆಡುಕುಗಳನ್ನು, ಧರ್ಮದ ಕೆಲವು ರಹಸ್ಯಗಳನ್ನುಪದೇಶಿಸಿ, ಇನ್ನೂ ಹೆಚ್ಚು ತಿಳಿಯಬೇಕೆಂದಿದ್ದರೆ ಮಿಥಿಲಾ ನಗರದಲ್ಲಿರುವ ಧರ್ಮವ್ಯಾಧನಲ್ಲಿಗೆ ಹೋಗು ಎಂದಳು. ಅಂತೆಯೇ ಕೌಶಿಕನು ಅಲ್ಲಿಗೆ ಹೋಗಿ ಧರ್ಮವ್ಯಾಧನಿಂದ ಧರ್ಮೋಪದೇಶ ಪಡೆದನು.

ಸಂ: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು