ಪ್ರಸಂಗ ಆಧಾರಿತ ಪುರಾಣ ಕಥೆ- ಇಂದ್ರಕೀಲಕ-ಭಾಗ -02 by ಹರಿಕೃಷ್ಣ ಹೊಳ್ಳ, ಬ್ರಹ್ಮಾವರ
ದೇವೇಂದ್ರನು ಬಂದು ಆಶೀರ್ವದಿಸಿ ಹೋದ ನಂತರ ಅರ್ಜುನನ ಮನೋಬಲವು ಇನ್ನಷ್ಟು ವೃದ್ಧಿಯಾಯಿತು. ಆತನು ಇನ್ನೂ ಹೆಚ್ಚು ದೃಢತೆಯಿಂದ ತಪಸ್ಸನ್ನು ಮುಂದುವರಿಸಿದನು. ವೇದವ್ಯಾಸರಿಂದ ಉಪದೇಶಿಸಲ್ಪಟ್ಟ ದೇವದೇವನಾದ ಪರಮೇಶ್ವರನ ಆ ದಿವ್ಯ ಮಂತ್ರವನ್ನು ನೆನಪಿಸಿಕೊಂಡು ಕ್ರಮವತ್ತಾಗಿ ಜಪಿಸತೊಡಗಿದನು. ಕರನ್ಯಾಸ, ಅಂಗನ್ಯಾಸಗಳಿಂದ ಆ ಪರಮ ಶಿವನನ್ನು ಧ್ಯಾನಿಸುತ್ತಾ, ನಿರಾಹಾರನಾಗಿ, ನಿಂತಲ್ಲಿಂದ ಕದಲದೇ ಉಗ್ರವಾದ ತಪಸ್ಸನ್ನು ಆಚರಿಸತೊಡಗಿದನು.
ಹೀಗೆ ಒಂದು ವರ್ಷ ಉರುಳುವಷ್ಟರಲ್ಲಿ ಅರ್ಜುನನ ಉಗ್ರವಾದ ತಪಸ್ಸಿನಿಂದ ಹೊರಟ ತೀಕ್ಷ್ಣವಾದ ಜ್ವಾಲೆಯು ಇಂದ್ರಕೀಲಕ ಪರಿಸರವನ್ನೆಲ್ಲಾ ಸುಡತೊಡಗಿತು. ಆಗ ಇಂದ್ರಕೀಲಕದಲ್ಲಿನ ಋಷಿ ಮುನಿಗಳೆಲ್ಲಾ ಒಂದಾಗಿ ಅರ್ಜುನ ಇರುವಲ್ಲಿಗೆ ಬಂದು ಅವನು ಯಾರು? ಅವನ ತಪಸ್ಸಿನ ಉದ್ದೇಶವೇನು? ಎಂಬುದನ್ನೆಲ್ಲಾ ತಿಳಿದುಕೊಳ್ಳುವ ಸಲುವಾಗಿ ಅವನನ್ನು ಮಾತನಾಡಿಸಲು ಪ್ರಯತ್ನಿಸುತ್ತಾರೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಅರ್ಜುನನು ಮಾತನಾಡುವುದಿರಲಿ, ಕಿಂಚಿತ್ತೂ ತಪಸ್ಸಿನಿಂದ ವಿಮುಖನಾಗುವುದೇ ಇಲ್ಲ. ಅವನ ಮನಸ್ಸಿನ ದೃಢತೆಯನ್ನು ಗಮನಿಸಿದ ಋಷಿ ಮುನಿಗಳೆಲ್ಲಾ ಆತನಿಂದ ದೂರ ಸರಿದರೂ ಉರಿಯನ್ನು ತಾಳಲಾರದೇ, ಎಲ್ಲರೂ ಒಂದಾಗಿ ಕೈಲಾಸಕ್ಕೆ ಹೋಗಿ ಪರಶಿವನಲ್ಲಿ ವಿನಂತಿಸಿಕೊಳ್ಳುತ್ತಾರೆ. “ಮಹಾದೇವಾ, ಸಾಧ್ಯವಾದಷ್ಟು ಬೇಗ ಅವನಿಗೆ ಮೈದೋರಿ ಅವನ ಇಚ್ಛೆಯನ್ನು ನೆರವೇರಿಸು, ಅವನ ತಪಸ್ಸನ್ನು ನಿಲ್ಲಿಸು, ಅವನ ತಪಸ್ಸಿನ ಜ್ವಾಲೆಯನ್ನು ತಾಳಲಾರೆವು, ಕೃಪೆದೋರು” ಎನ್ನುತ್ತಾರೆ. ಪರಮೇಶ್ವರನು ಅರ್ಜುನನನ್ನು ನೆನೆದು ಮುಗುಳ್ನಗುತ್ತಾ ಮುನಿಗಳಿಗೆ ಅಭಯವನ್ನು ನೀಡಿ ಹಿಂದೆ ಕಳುಹಿಸುತ್ತಾನೆ.
ಅದೇ ಇಂದ್ರಕೀಲಕ ಪ್ರದೇಶದಲ್ಲಿ ಮೂಕಾಸುರ ಎಂಬ ಒಬ್ಬ ರಕ್ಕಸನು ಕಾಡು ಹಂದಿಯ ರೂಪವನ್ನು ತಾಳಿ ಹಾವಳಿಯನ್ನು ಉಂಟುಮಾಡುತ್ತಿದ್ದನು. ಸಿಕ್ಕ ಸಿಕ್ಕ ಸಾಧು ಸಂತರನ್ನೆಲ್ಲ ತಿವಿದು ಘಾಸಿಗೊಳಿಸುತ್ತಿದ್ದನು. ಮೊದಮೊದಲು ಅದೊಂದು ಕಾಡ ಸೂಕರವೆಂದೇ ತಿಳಿದ ಋಷಿ ಮುನಿಗಳು, ನಂತರ ಮನುಷ್ಯರನ್ನು ತಿನ್ನುವ ಅದರ ವರ್ತನೆಯಿಂದ ಅದು ಕೇವಲ ಹಂದಿಯಲ್ಲ, ಅವನೊಬ್ಬ ರಕ್ಕಸನೇ ಎಂಬುದನ್ನು ಮನದಟ್ಟು ಮಾಡಿಕೊಂಡು ಪರಶಿವನಲ್ಲಿಗೆ ಹೋಗಿ ಅವನನ್ನು ನಿಗ್ರಹಿಸಿ ರಕ್ಷಿಸುವಂತೆ ಈ ಹಿಂದೆಯೇ ವಿನಂತಿಸಿಕೊಂಡಿದ್ದರು. ಅದನ್ನು ನೆನಪಿಸಿಕೊಂಡ ಪರಮೇಶನು ಆ ಮೂಕಾಸುರನನ್ನು ನಿಗ್ರಹಿಸುವುದು ಹಾಗೂ ಅರ್ಜುನನಿಗೆ ಅನುಗ್ರಹಿಸುವುದು ಈ ಎರಡೂ ಕೆಲಸಗಳನ್ನು ಒಟ್ಟಿಗೆ ಒಮ್ಮೆಲೇ ಮಾಡಬೇಕು ಎಂದು ಸಂಕಲ್ಪಿಸುತ್ತಾನೆ.
ಈಶ್ವರನು ಮಡದಿಯಾದ ಪಾರ್ವತಿಯನ್ನು ಕರೆದು ಅವಳಿಗೆ ತನ್ನ ಮನದ ಸಂಕಲ್ಪವನ್ನು ತಿಳಿಸಿ, ಅರ್ಜುನನಿಗೆ ಅನುಗ್ರಹಿಸುವ ಮೊದಲು ಆತನನ್ನು ಒಮ್ಮೆ ಪರೀಕ್ಷಿಸುವ ಮನಸ್ಸಾಗಿದೆ ನನಗೆ ಎನ್ನುತ್ತಾನೆ. ಆಗ ಪಾರ್ವತಿಯು “ಇದುವರೆಗೂ ಅರ್ಜುನನು ಯುದ್ಧದಲ್ಲಿ ಯಾರಿಗೂ ಸೋಲದವನಂತೆ, ಸೋತು ಯಾರಿಗೂ ಬೆನ್ನು ತೋರಿಸದೇ ಇರುವ ಅಂತಹ ವೀರ ಅರ್ಜುನನ ಬೆನ್ನು ನೋಡಬೇಕೆಂಬ ಆಸೆ ನನಗೆ” ಎನ್ನುತ್ತಾಳೆ. ಅದಕ್ಕೆ ಈಶ್ವರನು “ಹಾಗಿದ್ದರೆ ನನ್ನೊಡನೆ ನೀನೂ ಕೂಡಾ ಬಾ, ಮಾತ್ರವಲ್ಲದೇ ನಂದಿ, ಗುಹ, ಗಣಪ ಹಾಗೂ ಸಮಸ್ತ ಪ್ರಮಥಾದಿ ಗಣಗಳೂ ಹೊರಡಿ, ನಾವೆಲ್ಲರೂ ಬೇಟೆಗಾರರಂತೆ ವೇಷ ಧರಿಸಿಕೊಂಡು ಹೋಗೋಣ” ಎಂದು ಅಪ್ಪಣೆ ಮಾಡುತ್ತಾನೆ.
ಅಂತೆಯೇ ಶಿವ ಪಾರ್ವತಿಯರು ಶಬರ ದಂಪತಿಗಳಾಗುತ್ತಾರೆ, ಇತರ ಹರ ಗಣಗಳೆಲ್ಲ ನಂದಿಯ ನೇತೃತ್ವದಲ್ಲಿ ಬೇಟೆಯಾಡುವ ಶಬರ ಪಡೆಗಳಾಗುತ್ತಾರೆ. ಗುಹನೂ ಗಣಪನೂ ಶಬರ ಪಡೆಗಳ ನಡುವೆ ಶಬರರಾಗಿ ಸೇರಿಕೊಳ್ಳುತ್ತಾರೆ. ಎಲ್ಲರೂ ಬೇಟೆಗೆ ತಕ್ಕುದಾದ ಆಯುಧಗಳನ್ನು ಧರಿಸಿ ಬೇಟೆಯಾಡುತ್ತಾ ಹುಯಿಲೆಬ್ಬಿಸಿಕೊಂಡು ಇಂದ್ರಕೀಲಕಕ್ಕೆ ಬರುತ್ತಾರೆ. ಆಗ ಬಂದವರು ಸಾಮಾನ್ಯ ಬೇಡರೆಂದೇ ತಿಳಿದ ಮೂಕಾಸುರನು ಅವರನ್ನು ತಿವಿದು ಕೊಲ್ಲಲು ಮುಂದಾಗುತ್ತಾನೆ. ಇತರ ಶಬರರಿಗೆ ಆ ಸೂಕರವನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋದಾಗ ಸ್ವಯಂ ಶಬರ-ಶಂಕರನೇ ಆ ಹಂದಿಯನ್ನು ಬೆನ್ನಟ್ಟಿಕೊಂಡು ಹೋಗುತ್ತಾನೆ. ಶಬರನು ಉದ್ದೇಶಪೂರ್ವಕವಾಗಿಯೇ ಆ ಸೂಕರವನ್ನು ಅರ್ಜುನನಿದ್ದೆಡೆಗೆ ಅಟ್ಟುತ್ತಾನೆ.
ಬೇಟೆಗಾರರ ಗದ್ದಲದಿಂದಾಗಿ ಅರ್ಜುನನ ಏಕಾಗ್ರತೆಗೆ ಭಂಗವುಂಟಾಗಿ ಆತನಿಗೆ ಎಚ್ಚರವಾಗುತ್ತದೆ. ಆತ ಕಣ್ತೆರೆದು ನೋಡುವಾಗ ಭಾರೀ ಗಾತ್ರದ ಹಂದಿಯೊಂದು ತನ್ನೆಡೆಗೇ ಓಡಿ ಬರುತ್ತಿರುವುದು ಕಾಣಿಸುತ್ತದೆ. ಕೂಡಲೇ ಆತ ಬತ್ತಳಿಕೆಯಿಂದ ಬಾಣವೊಂದನ್ನು ತೆಗೆದು ಆ ಹಂದಿಗೆ ಗುರಿಯಿಟ್ಟು ಹೊಡೆಯುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಆ ಶಬರನೂ ಹಂದಿಗೆ ಬಾಣವೊಂದನ್ನು ಹೊಡೆಯುತ್ತಾನೆ. ಹೀಗೆ ಎರಡೆರಡು ಬಾಣಗಳನ್ನು ತನ್ನ ಮೈಯಲ್ಲಿ ಕೀಲಿಸಿಕೊಂಡು, ಹೊಡೆತದಿಂದ ಘಾಸಿಗೊಂಡ ಆ ಹಂದಿಯು ಅರ್ಜುನನ ಕಾಲ ಬುಡದಲ್ಲಿ ಬಂದು ಸತ್ತು ಬೀಳುತ್ತದೆ. ಈ ರೀತಿಯಲ್ಲಿ ಮೂಕಾಸುರನ ವಧೆಯಾಗುತ್ತದೆ. ಅರ್ಜುನನು ತನ್ನ ಒಂದು ಕಾಲನ್ನು ಸತ್ತು ಬಿದ್ದಿರುವ ಹಂದಿಯ ಮೇಲೆ ಇಟ್ಟುಕೊಂಡು ಪುನಃ ಧ್ಯಾನಕ್ಕೆ ತೊಡಗುತ್ತಾನೆ.
ಹಂದಿಯು ನೆಲಕ್ಕೆ ಬೀಳುತ್ತಲೇ ನಾಲ್ಕಾರು ಕಿರಾತರು ಓಡಿ ಬಂದು, ಅರ್ಜುನನನ್ನು ಲೆಕ್ಕಿಸದೇ ಆತನ ಕಾಲಿನ ಬುಡದಲ್ಲಿದ್ದ ಹಂದಿಯನ್ನು ಎಳೆದೊಯ್ಯಲು ಉದ್ಯುಕ್ತರಾಗುತ್ತಾರೆ. ತನ್ನನ್ನು ಲಕ್ಷಿಸದೇ ತನ್ನ ವಶದಲ್ಲಿರುವ ಹಂದಿಯನ್ನು ಎಳೆದೊಯ್ಯಲು ಮುಂದಾಗಿದ್ದರಿಂದ ಅರ್ಜುನನಿಗೆ ಕೋಪ ಬರುತ್ತದೆ. ಆತನು ಆ ಕಿರಾತರನ್ನು ಹೊಡೆದು ಓಡಿಸುತ್ತಾನೆ.
ಅರ್ಜುನನಿಂದ ಪೆಟ್ಟು ತಿಂದ ಅವರೆಲ್ಲಾ ಶಬರನಲ್ಲಿ ಹೋಗಿ ದೂರುತ್ತಾರೆ. ಶಬರನು ಅರ್ಜುನನ ಬಳಿ ಬಂದು “ಅದು ನಾನು ಹೊಡೆದ ಸೂಕರ, ನೋಡು, ಅದರ ಅಳ್ಳೆಯೊಳಗೆ ನಾನು ಹೊಡೆದ ಅಲಗು ನಾಟಿದೆ. ಅದೇ ಅದಕ್ಕೆ ಪುರಾವೆ, ಆದ್ದರಿಂದ ಅದು ನನ್ನ ಸ್ವತ್ತು” ಎನ್ನುತ್ತಾನೆ. ಅದಕ್ಕೆ ಪ್ರತಿಯಾಗಿ ಅರ್ಜುನನು ತಾನು ಹೊಡೆದ ಬಾಣವನ್ನು ತೋರಿಸಿ “ಇದು ನಾನು ಕೊಂದ ಹಂದಿ, ಇದನ್ನು ಇಲ್ಲಿಯೇ ಬಿಟ್ಟು ತೆರಳತ್ತ” ಎಂದು ಕೋಪದಿಂದ ಗದರಿಸುತ್ತಾನೆ.
ಆಗ ಶಬರನಿಗೂ ಕೋಪಬರುತ್ತದೆ. ಆತ “ಎಲಾ ಕಳ್ಳ ಮುನಿಯೇ, ನೀನೇನೂ ತಿನ್ನುವುದಕ್ಕಾಗಿ ಅದನ್ನು ಹೊಡೆದಿಲ್ಲ. ಕೇವಲ ಮೈಮೇಲೆ ಎಗರಿ ಬರುತ್ತಿದೆ ಎಂದು ರಕ್ಷಣೆಗೋಸುಗ ಹೊಡೆದವನು ಅಷ್ಟೇ. ಆದರೆ ನಾವು ಹಾಗಲ್ಲ, ಬಹಳಷ್ಟು ದೂರದಿಂದ ಅದನ್ನು ಅಟ್ಟಿಸಿಕೊಂಡು ಬಂದು ತಿನ್ನುವುದಕ್ಕೋಸ್ಕರವೇ ಹೊಡೆದವರು. ತಪಸ್ಸು ಮಾಡುವ ನಿನಗೆ ಈ ಸತ್ತಿರುವ ಹಂದಿ ಯಾಕೋ? ಹೋಗೋ ಹೋಗು, ಸುಮ್ಮನೇ ಜಪ ಮಾಡು ಹೋಗು” ಎಂದು ತಿರಸ್ಕಾರದಿಂದ ನುಡಿಯುತ್ತಾನೆ.
ಅರ್ಜುನನಿಗೂ ಕೋಪ ಉಕ್ಕೇರುತ್ತದೆ. ಅವನು “ಬೇಟೆಯ ಕ್ರಮ ಹಾಗೂ ನಿಯಮಗಳನ್ನು ಕ್ಷತ್ರಿಯನಾದ ನಾನು ಕಾಡ ಬೇಟೆಗಾರನಾದ ನಿನ್ನಿಂದ ಕಲಿಯಬೇಕಾಗಿಲ್ಲ, ನೀನು ಅದಕ್ಕೆ ಬಾಣ ಹೊಡೆದಿರಬಹುದು, ಆದರೆ ಅದು ನಿನ್ನ ಬಾಣದಿಂದ ಸತ್ತಿಲ್ಲ, ನಿನ್ನ ಬಾಣ ನಾಟಿದ ನಂತರವೂ ಅದು ಮತ್ತೂ ಮತ್ತೂ ಮುಂದೆ ಓಡಿ ಬಂದಿದೆ. ಆಗ ನಾನು ಬಾಣ ಹೊಡೆದು ಅದನ್ನು ಸಾಯಿಸಿದೆ. ಬೇಟೆಯ ನಿಯಮದಂತೆ ಸಿಕ್ಕಿದ ಬೇಟೆ ಎಂಬುದು ಕೊಂದವನ ಸೊತ್ತು. ಹೀಗಾಗಿ ಈಗ ಇದು ನನ್ನ ಸ್ವತ್ತು. ನಿನಗೆ ಬೇಕಿದ್ದರೆ ನನ್ನ ಕಾಲು ಹಿಡಿದು ಬೇಡು, ಕೊಡುತ್ತೇನೆ” ಎನ್ನುತ್ತಾನೆ.
ಹೀಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ನಂತರ ಯುದ್ಧವಾಗುತ್ತದೆ. ಪಾರ್ವತಿ, ಗುಹ, ಗಣಪ, ನಂದಿ ಹಾಗೂ ಪ್ರಮಥರೆಲ್ಲ ಶಬರಾರ್ಜುನರ ಯುದ್ಧಕ್ಕೆ ಸಾಕ್ಷಿಗಳಾಗುತ್ತಾರೆ. ಅರ್ಜುನನು ಬಿಟ್ಟ ಬಾಣಗಳೆಲ್ಲವನ್ನೂ ಶಬರನು ಅರ್ಧದಲ್ಲಿಯೇ ತುಂಡರಿಸಿದನು. ಇದರಿಂದ ಈ ಶಬರನು ಸಾಮಾನ್ಯದವನಲ್ಲ ಎಂದು ಬಗೆದ ಅರ್ಜುನನು ಮಂತ್ರಾಸ್ತ್ರಗಳನ್ನು ಶಿವನ ಮೇಲೆ ಪ್ರಯೋಗಿಸಿದನು. ಅವುಗಳೆಲ್ಲವನ್ನೂ ಶಬರನು ಪ್ರತಿ ಅಸ್ತ್ರಗಳಿಂದ ನಿಷ್ಕ್ರಿಯಗೊಳಿಸಿದನು. ಅರ್ಜುನನಲ್ಲಿರುವ ಅಕ್ಷಯ ಬಾಣಗಳೆಲ್ಲವೂ ಕ್ಷಯವಾಗಿ ಹೋದವು. ಇದರಿಂದಾಗಿ ಆತ ಖಡ್ಗವನ್ನೆತ್ತಿ ಹೋರಾಟಕ್ಕೆ ಇಳಿದನು. ಶಬರನು ಅವನ ಖಡ್ಗವನ್ನೂ ಕೂಡಾ ಅವನ ಕೈಯಿಂದ ಸೆಳೆದುಕೊಂಡನು. ನಿರಾಯುಧನಾದ ಅರ್ಜುನನು ತನ್ನ ಗಾಂಡೀವದಿಂದಲೇ ಶಬರನಿಗೆ ಹೊಡೆಯತೊಡಗಿದನು. ಶಬರನು ಅದನ್ನೂ ಕೂಡಾ ಕಸಿದು ದೂರಕ್ಕೆ ಬಿಸುಟನು.
ಆದರೂ ಸೋಲನ್ನು ಒಪ್ಪಿಕೊಳ್ಳದ ಅರ್ಜುನನು ಶಬರನೊಡನೆ ಮಲ್ಲಯುದ್ಧಕ್ಕೆ ನಿಂತನು. ಶಬರಾರ್ಜುನರ ನಡುವೆ ಸರಿ ಸಮನಾದ ಮಲ್ಲ ಯುದ್ಧವು ಕೆಲವು ಸಮಯದವರೆಗೆ ನಡೆಯುತ್ತದೆ. ಕೊನೆಗೆ ಶಬರನು ಅರ್ಜುನನನ್ನು ನೆಲಕ್ಕೆ ಬೀಳಿಸುತ್ತಾನೆ. ಬೋರಲಾಗಿ ಕವುಚಿ ಬಿದ್ದಿರುವ ಅರ್ಜುನನ ಬೆನ್ನಿನ ಮೇಲೆ ತನ್ನ ಕಾಲನ್ನು ಇಟ್ಟು ಒತ್ತುತ್ತಾನೆ. ಪರಶಿವನ ಪದಾಘಾತವನ್ನು ತಾಳಲಾರದೇ ಅರ್ಜುನನ ಬಾಯಿಯಿಂದ ರಕ್ತ ಒಸರಲಾರಂಭಿಸುತ್ತದೆ.
ಶಿವನು ಪಾರ್ವತಿಯನ್ನು ಬಳಿಗೆ ಕರೆದು “ನೋಡು, ನಿನ್ನ ಭಕ್ತನ ಬೆನ್ನನ್ನು ನೋಡು” ಎಂದು ಆಕೆಗೆ ಅರ್ಜುನನ ಬೆನ್ನನ್ನು ತೋರಿಸುತ್ತಾನೆ. ಬಾಯಿಯಿಂದ ರಕ್ತ ಒಸರುತ್ತಾ ಕವುಚಿ ಬಿದ್ದಿರುವ ಪಾರ್ಥನನ್ನು ಕಂಡು ಪಾರ್ವತಿಗೆ ಮರುಕವುಂಟಾಗುತ್ತದೆ. ಅವಳು “ಸಾಕು, ಇನ್ನು ಯುದ್ಧ ಸಾಕು. ನನ್ನಿಂದ ಈ ದೃಶ್ಯ ನೋಡಲಾಗುತ್ತಿಲ್ಲ” ಎನ್ನುತ್ತಾಳೆ. ಪರಶಿವನು ಕೂಡಲೇ ಪಾರ್ಥನ ಬೆನ್ನಿನ ಮೇಲೆ ಇಟ್ಟಿದ್ದ ಕಾಲನ್ನು ತೆಗೆದು ತಾತ್ಸಾರದಿಂದ “ಹೋಗು, ಬದುಕಿಕೋ ಹೋಗು” ಎನ್ನುತ್ತಾ ಬದಿಗೆ ಸರಿಯುತ್ತಾನೆ.
ಹೊರಟು ನಿಂತ ಶಬರನನ್ನು ತಡೆದು ನಿಲ್ಲಿಸಿದ ಅರ್ಜುನ “ಅಯ್ಯಾ ತೆರಳಬೇಡ ನಿಲ್ಲು , ನನಗೆ ಸ್ವಲ್ಪ ಸಮಯ ಕೊಡು. ನಾನು ಮರಳಿ ನಿನ್ನಲ್ಲಿ ಧುರವನ್ನು ಕೊಡಲಿದ್ದೇನೆ” ಎನ್ನುತ್ತಾನೆ. ಶಬರನು ಒಪ್ಪುತ್ತಾನೆ. ಶಿವ-ಪಾರ್ವತಿಯರು ಮರೆಯಲ್ಲಿ ನಿಂತು ಅರ್ಜುನ ಏನು ಮಾಡುತ್ತಾನೆ ಎಂಬುದನ್ನೆಲ್ಲಾ ನೋಡುತ್ತಾ ಇರುತ್ತಾರೆ.
ಪರಶಿವನ ಪೆಟ್ಟಿನ ಹೊಡೆತಗಳಿಂದ ಬಸವಳಿದ ಅರ್ಜುನನು ಮರುಗುತ್ತಾನೆ. “ಶಿವ ಶಿವಾ, ಇದುವರೆಗೂ ಸೋಲನ್ನೇ ಕಾಣದ ನಾನು ಈ ಕಾಡು ಕಿರಾತನಲ್ಲಿ ಸೋಲಬೇಕಾಯಿತಲ್ಲ. ಆ ಪರಶಿವನ ಧ್ಯಾನವನ್ನು ಬಿಟ್ಟು ಈ ಕಿರಾತನಲ್ಲಿ ಹೋರಾಟಕ್ಕೆ ತೊಡಗಿದ್ದೇ ತಪ್ಪಾಯಿತು. ಹೋರಾಟಕ್ಕೆ ತೊಡಗುವಾಗಲೂ ಕೂಡಾ ನಾನು ಆ ಪರಶಿವನನ್ನು ಧ್ಯಾನಿಸಿ ಯುದ್ಧವನ್ನು ಆರಂಭಿಸಲಿಲ್ಲ. ಅದಕ್ಕೇ ಈ ಸೋಲಾಯಿತೇನೋ. ಶಿವನೇ ಸರ್ವಥಾ ಅಪರಾಧವಾಯಿತು” ಎನ್ನುತ್ತಾ ಅರ್ಜುನನು ಸನಿಹದಲ್ಲೇ ಇರುವ ತೊರೆಯಲ್ಲಿ ಮಿಂದು ಶುಚಿರ್ಭೂತನಾಗಿ ಬಂದು, ಮಣ್ಣಿನಿಂದಲೇ ಶಿವಲಿಂಗವೊಂದನ್ನು ರಚಿಸುತ್ತಾನೆ. ಅಕ್ಕ ಪಕ್ಕದಲ್ಲೇ ಇರುವ ಬಿಲ್ವಪತ್ರೆ ಹಾಗೂ ಪುಷ್ಪಗಳನ್ನು ಕೊಯ್ದು ಮಾಲೆ ಮಾಡಿ ಅದನ್ನು ಆ ಶಿವಲಿಂಗಕ್ಕೆ ಅರ್ಪಿಸಿ ಪೂಜೆಯನ್ನು ಸಲ್ಲಿಸುತ್ತಾನೆ. “ಓ ಮಹಾದೇವ, ಶಂಭೋ ಶಂಕರಾ ನನಗೆ ಜಯವನ್ನು ಕರುಣಿಸು” ಎನ್ನುತ್ತಾ ಶಿವಲಿಂಗಕ್ಕೆ ಉದ್ದಂಡವಾಗಿ ಸಾಷ್ಟಾಂಗ ನಮಸ್ಕಾರ ಮಾಡುತ್ತಾನೆ.
ಆಗ ಪಕ್ಕದಲ್ಲೇ ನಿಂತಿದ್ದ ಶಬರ-ಶಬರಿಯರು ಕಿಲ ಕಿಲನೆ ನಗುತ್ತಾರೆ. ಇದರಿಂದ ಕೋಪೋದ್ರಿಕ್ತನಾದ ಅರ್ಜುನನು ಎದ್ದವನೇ ಮುಷ್ಟಿ ಬಿಗಿದು ಶಬರನ ಮೇಲೆ ಎರಗಲು ನೋಡುತ್ತಾನೆ. ಆಗಲೂ ಅವರಿಬ್ಬರು ನಸುನಗುತ್ತಲೇ ನಿಂತಿರುತ್ತಾರೆ. ಅರ್ಜುನನು ಇನ್ನೊಮ್ಮೆ ಅವರಿಬ್ಬರನ್ನು ನೋಡುತ್ತಾನೆ. ಆಗ ಅವನಿಗೆ ಆಶ್ಚರ್ಯವಾಗುತ್ತದೆ. ತಾನು ಶಿವಲಿಂಗಕ್ಕೆ ಸದ್ಭಕ್ತಿಯಿಂದ ಅರ್ಪಿಸಿದ ಪುಷ್ಪಗಳೆಲ್ಲವೂ ಆ ಶಬರನ ತಲೆಯ ಮೇಲೆ ಇವೆ. ತಾನು ಶಿವಲಿಂಗಕ್ಕೆ ಅರ್ಪಿಸಿದ ಬಿಲ್ವಪತ್ರೆ ಹಾಗೂ ಪುಷ್ಪಗಳನ್ನು ಪೋಣಿಸಿ ರಚಿಸಿದ ಹಾರವು ಶಬರನ ಕೊರಳಲ್ಲಿ ರಾರಾಜಿಸುತ್ತಾ ಇದೆ. ಶಿವಲಿಂಗವನ್ನೊಮ್ಮೆ ನೋಡುತ್ತಾನೆ. ಶಿವಲಿಂಗವು ಬರಿದಾಗಿದೆ. ಅರ್ಜುನನಿಗೆ ಏನೋ ಸಂದೇಹವಾಗುತ್ತದೆ. ಆತ ಇನ್ನೊಮ್ಮೆ ಪುಷ್ಪಗಳನ್ನು ಕೊಯ್ದು ತಂದು ಮಾಲೆ ಮಾಡಿ ಶಿವಲಿಂಗಕ್ಕೆ ಅರ್ಪಿಸಿ, ಪುನಹ ನಮಸ್ಕರಿಸುತ್ತಾನೆ. ಎದ್ದು ನೋಡುವಾಗ ಆ ಮಾಲೆಯು ಶಬರನ ಕೊರಳಲ್ಲಿರುವುದು ಕಂಡುಬರುತ್ತದೆ.
ಆಗ ಅರ್ಜುನನಿಗೆ ಇವನೇ ತಾನು ಪೂಜಿಸುತ್ತಿರುವ ಆರಾಧ್ಯ ದೈವ , ಇವನೇ ಸಾಕ್ಷಾತ್ ಪರಶಿವನು ಎಂಬುದು ಅರಿವಾಗುತ್ತದೆ. ತಕ್ಷಣವೇ “ದೇವಾ ಅಪರಾಧವಾಯಿತು, ನನ್ನನ್ನು ಕ್ಷಮಿಸು” ಎನ್ನುತ್ತಾ ಶಬರನ ಕಾಲಿಗೆ ಎರಗುತ್ತಾನೆ. ಇನ್ನು ಈತನನ್ನು ದಣಿಸುವುದು ತರವಲ್ಲ ಎಂದರಿತ ಶಿವ-ಪಾರ್ವತಿಯರು ಭಕ್ತನಿಗೆ ತಮ್ಮ ನಿಜ ರೂಪವನ್ನು ತೋರುತ್ತಾರೆ. ಪಾದಕ್ಕೆ ಎರಗಿದ್ದ ಅರ್ಜುನನ ತೋಳುಗಳನ್ನು ಹಿಡಿದು ಮೇಲಕ್ಕೆ ಎತ್ತಿ ತಬ್ಬಿಕೊಂಡು “ಅರ್ಜುನಾ, ನಿನ್ನದೇನೂ ಅಪರಾಧವಾಗಿಲ್ಲ. ನಿನ್ನನ್ನು ಪರೀಕ್ಷಿಸುವುದಕ್ಕಾಗಿಯೇ ನಾವು ಹೀಗೆ ಶಬರರ ವೆಷವನ್ನು ತಳೆದು ಬಂದವರು. ನಿನ್ನ ಭಕ್ತಿಗೆ ಮೆಚ್ಚಿದ್ದೇವೆ. ನಿನಗೆ ಏನು ಬೇಕು ಕೇಳು” ಎನ್ನುತ್ತಾರೆ.
ಆಗ ಅರ್ಜುನನು “ದೇವಾ , ನನ್ನ ಮೇಲೆ ನಿನಗೆ ಶರಣನೆಂಬ ಪ್ರೇಮ ಇರುವುದೇ ಹೌದಾದಲ್ಲಿ ನನಗೆ ಪಾಶುಪತಾಸ್ತ್ರವನ್ನು ಕೊಟ್ಟು ಆಶೀರ್ವದಿಸು” ಎನ್ನುತ್ತಾನೆ. ಆಗ ಪರಶಿವನು ಅರ್ಜುನನನ್ನು ಕುರಿತು “ಪಾರ್ಥಾ, ನನ್ನಿಂದ ಪಾಶುಪತವನ್ನು ಪಡೆಯುವುದಕ್ಕೆ ನಿನಗೆ ಪೂರ್ಣ ಅರ್ಹತೆ ಇದ್ದರೂ ಕೂಡಾ ಅದು ಲೋಕಮುಖಕ್ಕೆ ತಿಳಿಯಬೇಕಲ್ಲವೇ? ಮತ್ತು ನಾನೂ ಅದನ್ನು ಪ್ರತ್ಯಕ್ಷವಾಗಿ ಕಾಣಬೇಕು ಎಂದುಕೊಂಡು ನಿನಗೆ ಈ ಪರೀಕ್ಷೆಯನ್ನು ಒಡ್ಡಿದೆ. ಈ ಪರೀಕ್ಷೆಯಲ್ಲಿ ನೀನು ತೇರ್ಗಡೆಯಾದೆ. ನಿನ್ನ ಭಕ್ತಿಯನ್ನೂ ಶಕ್ತಿಯನ್ನೂ ಏಕಕಾಲದಲ್ಲಿ ಕಂಡು ನಾವು ಸಂಪ್ರೀತರಾಗಿದ್ದೇವೆ. ಇಗೋ ತೆಗೆದುಕೋ” ಎನ್ನುತ್ತಾ ಶಿವನು ತನ್ನ ಜಟೆಯಿಂದ ಪಾಶುಪತ ಅಸ್ತ್ರವನ್ನು ತೆಗೆದು ಅರ್ಜುನನಿಗೆ ಕೊಡುತ್ತಾನೆ. ಹಾಗೆಯೇ ಅದನ್ನು ಪ್ರಯೋಗಿಸುವಾಗ ಪಠಿಸಬೇಕಾದ ಮಂತ್ರವನ್ನೂ ಅದಕ್ಕೆ ಉಪಸಂಹಾರದ ಮಂತ್ರವನ್ನೂ ಉಪದೇಶಿಸುತ್ತಾನೆ.
ಪಾರ್ವತಿಯು ಅರ್ಜುನನನ್ನು ಬಳಿಗೆ ಕರೆದು “ಅರ್ಜುನಾ , ನೀನು ಶ್ರೀಕೃಷ್ಣನ ನೆಂಟನು. ಆತನು ಮಾಡುವ ಧರ್ಮೋದ್ಧಾರದ ಕಾರ್ಯಗಳಲ್ಲಿ ಆತನೊಂದಿಗೆ ಸಹಕರಿಸು. ಅದಕ್ಕೆ ಅನುಕೂಲವಾಗುವಂತೆ, ಈ ಹರನು ನೀಡಿದ ಪಾಶುಪತಕ್ಕೆ ಬಳುವಳಿಯಾಗಿ ನಾನು ನಿನಗೆ ಅಮೋಘವಾದ ಈ ಅಂಜನಾಸ್ತ್ರವನ್ನು ಅನುಗ್ರಹಿಸುತ್ತಿದ್ದೇನೆ, ಸ್ವೀಕರಿಸು” ಎನ್ನುತ್ತಾ ಅಂಜನಾಸ್ತ್ರವನ್ನು ನೀಡುತ್ತಾಳೆ. ಹರನ ಕುಮಾರರಾದ ಷಣ್ಮುಖ ಮತ್ತು ಗಣಪತಿಯರು ಕೂಡಾ ದಿವ್ಯವಾದ ಮಂತ್ರಾಸ್ತ್ರಗಳನ್ನು ಅರ್ಜುನನಿಗೆ ಅನುಗ್ರಹಿಸುತ್ತಾರೆ. ತದನಂತರ ಶಿವನು ಯುದ್ಧದ ಸಂದರ್ಭದಲ್ಲಿ ತಾನು ಸೆಳೆದುಕೊಂಡಿದ್ದ ಅರ್ಜುನನ ಗಾಂಡೀವ, ಅಕ್ಷಯಾಸ್ತ್ರ ಹಾಗೂ ಖಡ್ಗಗಳನ್ನು ಮರಳಿ ಅರ್ಜುನನಿಗೆ ನೀಡುತ್ತಾನೆ. ಅರ್ಜುನನು ಪುನಃ ಎಲ್ಲರಿಗೂ ವಂದಿಸುತ್ತಾನೆ. ಅವರೆಲ್ಲರೂ ಅರ್ಜುನನನ್ನು ಮತ್ತೊಮ್ಮೆ ಹರಸಿ ಅಂತರ್ಧಾನರಾಗುತ್ತಾರೆ.
ಲೇಖನ: ಹರಿಕೃಷ್ಣ ಹೊಳ್ಳ , ಬ್ರಹ್ಮಾವರ
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ