ಯಕ್ಷಗಾನಕ್ಕೆ ಪ್ರಕೃತಿಯೇ ಆಹಾರ್ಯ, ರಂಗವೇ ಪಾಠ ಶಾಲೆ, ಹಿರಿಯ ಕಲಾವಿದರೇ ಗುರುಗಳು

ಚಿತ್ರ: ಮಧುಸೂದನ ಅಲೆವೂರಾಯ

ಯಕ್ಷಗಾನಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -7 by ಸುರೇಂದ್ರ ಪಣಿಯೂರ್

ಕ್ಷಗಾನ ಕಲೆಯು ಪ್ರದರ್ಶನಕ್ಕೆ ಅಣಿಗೊಳ್ಳುವ ಸಮಯದಲ್ಲಿ ಆಹಾರ್ಯಕ್ಕಾಗಿ ಬಳಸಿಕೊಂಡದ್ದು  ಪ್ರಾದೇಶಿಕವಾಗಿ ಲಭ್ಯ ಇರುವ ಪರಿಕರಗಳನ್ನೇ. ಕಲಾವಿದನ ಕಲ್ಪನೆಯಲ್ಲಿ ಸೃಜನಾತ್ಮಕವಾಗಿ ಅರಳಿದ ಆಹಾರ್ಯಗಳು ಕಥೆಯಲ್ಲಿ ಬರುವ ಪಾತ್ರಗಳನ್ನು ರಂಗದಲ್ಲಿ ಸಮರ್ಥವಾಗಿ ಸಾದೃಶ್ಯಗೊಳಿಸಿದವು.

ಮುಖದ ವರ್ಣಿಕೆಯಲ್ಲಿ ಪ್ರಕೃತಿಯಲ್ಲಿ ಲಭ್ಯವಿದ್ದ ಬಣ್ಣಗಳನ್ನು ಬಳಸಿದರು (ಅರದಾಳ, ಎಣ್ಣೆಮಸಿ, ಕುಂಕುಮ, ಹಸುರು ಇತ್ಯಾದಿ). ಮರದ ತುಂಡನ್ನು ಕೊರೆದು ಅಭರಣವಾಗಿಸಿದರು. ಬೆರಗುಗೊಳಿಸುವಲ್ಲಿ ಗಾಜಿನ ಚೂರುಗಳು ಅಂಟಿಸಿ ಸೊಬಗಾಗಿಸಿದರು. ಬಟ್ಟೆ, ನಾರುಗಳನ್ನು ಉಪಯೋಗಿಸಿ ವಸ್ತ್ರವಿನ್ಯಾಸಗೊಳಿಸಿದರು. ಮರದಿಂದ ತಯಾರಿಸಿದ ಆಯುಧಗಳನ್ನು ಉಪಯೋಗಿಸಿದರು.

ಇವೆಲ್ಲವೂ ಅಲೌಕಿಕ ಜಗತ್ತಿನ ವಿಚಾರಗಳನ್ನು, ವ್ಯಕ್ತಿಗಳನ್ನು ಲೌಕಿಕ ಜಗತ್ತಿಗೆ ಪರಿಚಯಿಸುವಲ್ಲಿ ಅತಿಯಾಗಿ ಉಪಯೋಗವಾಯಿತು.

ಯಕ್ಷಗಾನದ್ದೇ ಆದ ವಿಶೇಷವಾದ ನೃತ್ತಗಳು, ಗೀತಗಳನ್ನು ಬಳಸಿಕೊಂಡು ನರ್ತನ, ಅಭಿನಯದ ಮೂಲಕ ನಾಟ್ಯವಾಗಿಸಿದರು. ಇದಕ್ಕಾಗಿ ನೂರಾರು ಗೇಯ ಪ್ರಬಂಧಗಳು ಪುರಾಣ ಕಥೆಗಳನ್ನು ಆಧರಿಸಿ ರಚನೆಯಾಗಿದ್ದವು. 

ಇದಕ್ಕನುಗುಣವಾದ ವಾಚಿಕವು ಸಂಭಾಷಣೆಯಾಯಿತು. ಬಹುತೇಕ ಯಕ್ಷಗಾನ ಕಲಾವಿದರು ಉನ್ನತ ಮಟ್ಟದ ವಿದ್ಯಾವಂತರಲ್ಲ. ಆದರೂ ಅವರ ವಾಚಿಕ ಪಾಂಡಿತ್ಯ ಅನುಪಮ. ಇದಕ್ಕೆ ನಿರಂತರ ಪರಿಶ್ರಮದ ಓದು, ಪಂಡಿತ ಜನರ ಸಾಂಗತ್ಯವೂ ಕಾರಣವಾಗಿತ್ತು. ಆಗಿನ ಕಲಾವಿದರಲ್ಲಿ ಕಲೆಯ ಕುರಿತಾದ ಸಮರ್ಪಣಾ ಭಾವವೂ ಇದಕ್ಕೆ ಕಾರಣ .

ಗೀತದ ಭಾವಕ್ಕೆ ಅನುಗುಣವಾಗಿ ಅಭಿನಯವೂ ಅನುಪಮವಾಗಿ ಮೂಡಿಬರಲು ಕಾರಣ ದೀರ್ಘಕಾಲದ ಪರಿಶ್ರಮ ಹಾಗೂ ಹಿರಿಯ ಕಲಾವಿದರ ಜೊತೆಗಿನ  ಅಭ್ಯಾಸ.

ಹಾಗಾಗಿ ಯಕ್ಷಗಾನಕ್ಕೆ ಬಂದವನು ಪರಿಪಕ್ವವಾಗಿ ಕಲಾವಿದನಾಗಿ ರಂಗದಲ್ಲಿ ರೂಪುಗೊಳ್ಳಲು ಭಕ್ತಿ ಭಾವದಿಂದ ಕೂಡಿದ ಆಸಕ್ತಿ, ಪರಿಶ್ರಮ, ಹಿರಿಯ ಕಲಾವಿದರ ಕುರಿತು ಗೌರವ, ಕಲೆಯ ಕುರಿತು ಆರಾಧನಾ ಭಾವ - ಎಲ್ಲವೂ ಬೇಕಿತ್ತು. ಆ ಕಾಲದಲ್ಲಿ ಯಕ್ಷಗಾನ ಕಲಿಕೆಗೆ ಪ್ರತ್ಯೇಕವಾದ ವಿಶ್ವವಿದ್ಯಾಲಯ ಇರಲಿಲ್ಲ. ರಂಗವೇ ಪಾಠಶಾಲೆ. ಹಿರಿಯ ಕಲಾವಿದರೇ ಗುರುಗಳು.

ಇದೆಲ್ಲದರ ಜೊತೆಗೆ, ಕಲಾವಿದನಾದವ ಕಲೆಯನ್ನು ತನ್ನ ಸ್ವಂತ ಬದುಕಿನಷ್ಟೇ ಪ್ರೀತಿಸುತ್ತಿದ್ದ. ತನ್ನನ್ನು ತಾನು ಕಲೆಗೆ ಸಮರ್ಪಿಸಿಕೊಂಡಿದ್ದ. ಅದರಿಂದ ಕಲೆಯ ಸ್ವಾದನೆಗೆ ಹೊರತಾದ ಸ್ವಾರ್ಥದ ಬಯಕೆ ಇರಲಿಲ್ಲ ಆತನಿಗೆ.
ಹಾಗಾಗಿ ಯಕ್ಷಗಾನ ಕಲೆ ಅಪಸವ್ಯಕ್ಕೆ ಒಳಗಾಗದೆ, ಸಂಕರಗೊಳ್ಳದೆ ತನ್ನ ಶ್ರೇಷ್ಠತೆಯನ್ನು ಮಡಿವಂತಿಕೆಯನ್ನು ಕಾಪಾಡಿಕೊಂಡು ತಲೆ ತಲಾಂತರವಾಗಿ ಜನರಿಂದ ಜನರಿಗೆ ಕೈದಾಟಿಕೊಂಡು ಬಂದಿತು. (ಸಶೇಷ)

ಲೇಖನ: ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು