ಪ್ರಸಂಗದ ಕಥೆ: ಇಂದ್ರಕೀಲಕ ಅಥವಾ ಕಿರಾತಾರ್ಜುನೀಯ

ಕಿರಾತಾರ್ಜುನ ಪ್ರಸಂಗದ ದೃಶ್ಯ
ಶಬರಾರ್ಜುನ, ಶಬರ ಶ೦ಕರ ವಿಲಾಸ, ಪಾಶುಪತಾಸ್ತ್ರ, ಕಿರಾತಾರ್ಜುನೀಯ - ಹೀಗೆ ನಾನಾ ಹೆಸರುಗಳಲ್ಲಿರುವ ಯಕ್ಷಗಾನ ಪ್ರಸಂಗಗಳಿವೆ. ಈ ಪೌರಾಣಿಕ ಕಥನದ ಕುರಿತು ಬ್ರಹ್ಮಾವರದ ಯಕ್ಷಗಾನ ಪ್ರೇಮಿ, ಹವ್ಯಾಸಿ ಕಲಾವಿದ ಹರಿಕೃಷ್ಣ ಹೊಳ್ಳರು ಮಾಹಿತಿ ನೀಡಿದ್ದಾರೆ. ಇದು ಭಾಗ-1.
ಕೌರವನೊಡನೆ ಆಡಿದ ದ್ಯೂತದಲ್ಲಿ ಸೋತಂತಹಾ ಧರ್ಮರಾಜನು ಮೊದಲೇ ಮಾಡಿಕೊಂಡ ಒಪ್ಪಂದದಂತೆ 12 ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಪೂರೈಸುವುದಕ್ಕಾಗಿ ಮಡದಿಯಾದ ದ್ರೌಪದಿಯನ್ನು ಹಾಗೂ ತಮ್ಮಂದಿರನ್ನು ಒಡಗೊಂಡು ಕಾಡಿಗೆ ತೆರಳುತ್ತಾನೆ. ಆಗ ಕುಲ ಪುರೋಹಿತರಾದ ಧೌಮ್ಯರ ಸಹಿತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಬ್ರಾಹ್ಮಣರು , ಪುರಜನರು ಹಾಗೂ ಪರಿಜನರು ಪಾಂಡವರನ್ನು ಹಿಂಬಾಲಿಸುತ್ತಾರೆ. ಧರ್ಮರಾಯನು ಹಿಂತಿರುಗುವಂತೆ ವಿನಂತಿಸಿಕೊಂಡಾಗ ನಾಗರಿಕರು ಹಾಗೂ ಅವರ ಪರಿವಾರದವರೆಲ್ಲ ಹಿಂದಕ್ಕೆ ಮರಳಿದರೂ ಧೌಮ್ಯರು, ಅವರ ಅನೇಕ ಶಿಷ್ಯರು ಹಾಗೂ ಸಾವಿರಾರು ಮಂದಿ ಬ್ರಾಹ್ಮಣರು ಮಾತ್ರ ಹಿಂದೆ ಹೋಗಲು ಒಪ್ಪಲಿಲ್ಲ. ಎಲ್ಲರೂ ಒಟ್ಟಿಗೆ ಕಾಮ್ಯಕಾವನವನ್ನು ಪ್ರವೇಶಿಸುತ್ತಾರೆ. ಅಲ್ಲಿ ಎಲ್ಲರೂ ಎಲೆಮನೆಗಳನ್ನು ರಚಿಸಿಕೊಂಡು ಅಲ್ಲೇ ವಾಸಮಾಡುತ್ತಾರೆ. 

ಸಹಸ್ರಾರು ಸಂಖ್ಯೆಯಲ್ಲಿರುವ ಪಾಂಡವರ ಅಂತಃಪುರದ ಪರಿಜನರು, ಧೌಮ್ಯರ ಶಿಷ್ಯವೃಂದದವರು ಹಾಗೂ ಇತರ ಬ್ರಾಹ್ಮಣ ಸಂದೋಹಕ್ಕೆ ವಸತಿ ಹಾಗೂ ರಕ್ಷಣೆಯನ್ನೇನೋ ಕೊಡಲಾಯಿತಾದರೂ ಅವರಿಗೆ ಆಹಾರವನ್ನು ಒದಗಿಸುವುದು ಧರ್ಮರಾಯನಿಗೆ ಕಷ್ಟವಾಯಿತು. ಇಂದ್ರಪ್ರಸ್ಥದಲ್ಲಿ ಪ್ರತಿನಿತ್ಯವೂ ಸಹಸ್ರಾರು ಬ್ರಾಹ್ಮಣರಿಗೆ ಅನ್ನಸಂತರ್ಪಣೆ ಮಾಡಿಕೊಂಡಿದ್ದ ಧರ್ಮರಾಜನಿಗೆ ಆಗ ಚಿಂತೆಯಾಗುತ್ತದೆ. ಅವನ ಚಿಂತೆಯನ್ನು ಅರ್ಥಮಾಡಿಕೊಂಡ ಧೌಮ್ಯರು ಸೂರ್ಯದೇವನನ್ನು ಪೂಜಿಸಿ ಒಲಿಸಿಕೊಂಡು ಅಕ್ಷಯ ಪಾತ್ರೆಯನ್ನು ಪಡೆದುಕೊಳ್ಳುವಂತೆ ಸಲಹೆ ನೀಡುತ್ತಾರೆ. ಕುಲಪುರೋಹಿತರ ಸಲಹೆಯಂತೆ ಧರ್ಮರಾಜನು ಸೂರ್ಯದೇವನನ್ನು ಭಜಿಸಿ ಮೆಚ್ಚಿಸಿಕೊಂಡು ಅವನಿಂದ ಅಕ್ಷಯ ಪಾತ್ರೆಯನ್ನು ಪಡೆದುಕೊಳ್ಳುತ್ತಾನೆ. ಆ ಅಕ್ಷಯ ಪಾತ್ರೆಯ ಸಹಾಯದಿಂದ ವನದಲ್ಲಿಯೂ ಕೂಡಾ ಧರ್ಮರಾಜನು ಪ್ರತಿನಿತ್ಯ ಸಾವಿರಾರು ಬ್ರಾಹ್ಮಣರಿಗೆ ಬಗೆ ಬಗೆಯ ಭಕ್ಷಗಳ ಸಹಿತವಾದ ಅನ್ನಸಂತರ್ಪಣೆಯನ್ನು ನೆರವೇರಿಸಿಕೊಂಡು ಸಂತೋಷದಿಂದ ಇರುತ್ತಾನೆ.

ಇದಾದ ಬಳಿಕ ಒಂದು ದಿನ ಆ ವನಕ್ಕೆ ಕಿಮ್ಮೀರನೆಂಬ ಒಬ್ಬ ರಕ್ಕಸನು ಬರುತ್ತಾನೆ. ಈ ಹಿಂದೆ ಹಿಡಿಂಬಾ ಪ್ರಕರಣವಾದ ನಂತರ ಏಕಚಕ್ರ ನಗರದಲ್ಲಿ ಬ್ರಾಹ್ಮಣ ವಟುಗಳನ್ನು ತಿಂದುಕೊಂಡಿದ್ದ ಈ ಕಿಮ್ಮೀರನ ತಮ್ಮನಾದ ಬಕಾಸುರನನ್ನು ಭೀಮಸೇನನು ಕೊಂದಿದ್ದನು. ಹೀಗಾಗಿ ಆ ಹಗೆಯನ್ನು ತೀರಿಸಿಕೊಳ್ಳುವ ಸಲುವಾಗಿ ಆತ ಭೀಮನನ್ನು ಹುಡುಕಿಕೊಂಡು ಕಾಮ್ಯಕಾವನಕ್ಕೆ ಬರುತ್ತಾನೆ. ಬಂದವನೇ ಪಾಂಡವರ ಆಶ್ರಯದಲ್ಲಿ ಇದ್ದ ಬ್ರಾಹ್ಮಣರನ್ನೆಲ್ಲ ಹಿಂಸಿಸಲು ತೊಡಗುತ್ತಾನೆ. ಇದನ್ನು ತಿಳಿದ ಅರ್ಜುನನು ತನ್ನ ಧನುಸ್ಸನ್ನು ಎತ್ತಿ ಒಮ್ಮೆ ಝೇಗೈಯುತ್ತಾನೆ. ಆಗ ಭೀಮಸೇನನು ಅವನನ್ನು ತಡೆದು ತಾನೇ ಕಿಮ್ಮೀರನನ್ನು ಕೊಲ್ಲಲು ಮುಂದಾಗುತ್ತಾನೆ. ಕಿಮ್ಮೀರನಿಗೂ ಭೀಮನಿಗೂ ಘೋರವಾದ ಕಾಳಗ ನಡೆಯುತ್ತದೆ. ಕೊನೆಯಲ್ಲಿ ಭೀಮನ ಮುಷ್ಟಿಯ ಆಘಾತವನ್ನು ತಾಳಲಾರದೇ ಕಿಮ್ಮೀರನು ಸತ್ತು ಬೀಳುತ್ತಾನೆ. ಆಗ ಧರ್ಮರಾಯನು ಬ್ರಾಹ್ಮಣರನ್ನು ಸಂತೈಸಿ "ಇನ್ನು ನಿಮಗೆ ಇಲ್ಲಿ ಯಾರ ಭಯವೂ ಇಲ್ಲ, ನಿಶ್ಚಿಂತೆಯಿಂದ ಇರಬಹುದು" ಎನ್ನುತ್ತಾನೆ. ಬ್ರಾಹ್ಮಣರೆಲ್ಲ ಭೀಮಸೇನನ ಪರಾಕ್ರಮವನ್ನು ಕೊಂಡಾಡುತ್ತಾ ಅವರವರ ಆಶ್ರಮಕ್ಕೆ ತೆರಳುತ್ತಾರೆ.

ಹೀಗಿರುವಾಗ ಮುಂದೆ ಒಂದು ದಿನ ಪಾಂಡವರ ಆಶ್ರಮಕ್ಕೆ ಭಗವಾನ್ ವೇದವ್ಯಾಸರು ಆಗಮಿಸುತ್ತಾರೆ. ಧರ್ಮರಾಜನು ಧೌಮ್ಯರನ್ನು ಮುಂದಿಟ್ಟುಕೊಂಡು ದ್ರೌಪದೀ ಸಮೇತನಾಗಿ ಬಂದಿರುವ ಮಹಾತ್ಮರನ್ನು ಯಥೋಚಿತವಾಗಿ ಉಪಚರಿಸುತ್ತಾನೆ. ಧರ್ಮರಾಜನ ಉಪಚಾರದಿಂದ ಪ್ರಸನ್ನರಾದ ಬಾದರಾಯಣರು ಆತನ ಮನದಲ್ಲಿನ ಖಿನ್ನತೆಯನ್ನು ಗಮನಿಸಿ "ಧರ್ಮರಾಜಾ , ದೀರ್ಘವಾದ ವನವಾಸ ಪ್ರಾಪ್ತಿಯಾಯಿತೆಂದು ಖಿನ್ನನಾಗಬೇಡ, ರಾತ್ರಿ ಕಳೆದ ನಂತರ ಹಗಲು ಬರುವ ಹಾಗೆ ಧರ್ಮಾತ್ಮರಾದವರಿಗೆ ಕಷ್ಟವು ಕಳೆದ ನಂತರ ಸುಖವು ಬಂದೇ ಬರುತ್ತದೆ. ನಿನ್ನ ತಮ್ಮನಾದ ಅರ್ಜುನನಿಂದ ಈ ಜಗತ್ತಿಗೆ ಭವಿಷ್ಯದಲ್ಲಿ ಬಹಳಷ್ಟು ಉಪಕಾರವಾಗಲಿಕ್ಕಿದೆ. ಆದರೆ ಅದಕ್ಕಾಗಿ ಆತನು ಕೆಲವು ಅರ್ಹತೆಗಳನ್ನು ಪ್ರಾಪ್ತಿಸಿಕೊಳ್ಳಬೇಕಾಗಿದೆ. ಮುಖ್ಯವಾಗಿ ಆತನಿಗೆ ಶಿವಾನುಗ್ರಹವಾಗಬೇಕು. ಪರಶಿವನನ್ನು ತಪಸ್ಸಿನಲ್ಲಿ ಒಲಿಸಿಕೊಂಡು ಅವನಿಂದ 'ಪಾಶುಪತ' ಎಂಬ ಅಸ್ತ್ರವನ್ನು ಪಡೆದುಕೊಂಡರೆ ಮುಂದೆ ಆತ ಅಪ್ರತಿಮ ವೀರನಾಗುತ್ತಾನೆ. ಇದರಿಂದ ಲೋಕಕ್ಕೂ ಹಿತವಾಗುತ್ತದೆ. ಪರಶಿವನನ್ನು ಒಲಿಸಿಕೊಳ್ಳುವ ಈಶ್ವರ ಬೀಜಮಂತ್ರವನ್ನು ನಿನಗೆ ಉಪದೇಶಿಸುತ್ತೇನೆ. ನೀನದನ್ನು ಮತ್ತೆ ನಿನ್ನ ತಮ್ಮನಿಗೆ ಉಪದೇಶಿಸಬಹುದು" ಎಂದು ಹೇಳಿ ಧರ್ಮರಾಜನನ್ನು ಪ್ರತ್ಯೇಕವಾಗಿ ಬದಿಗೆ ಕರೆದು ಆತನ ಕಿವಿಯಲ್ಲಿ ಈಶ್ವರ ಬೀಜಮಂತ್ರವನ್ನು ಉಪದೇಶಿಸಿ, "ನಾನು ಬಂದ ಕೆಲಸವಾಯಿತು, ನಾನಿನ್ನು ಬರುತ್ತೇನೆ" ಎಂದು ತೆರಳುತ್ತಾರೆ.

ವ್ಯಾಸ ಮಹರ್ಷಿಗಳು ತೆರಳಿದ ನಂತರ ಧರ್ಮರಾಜನು ಒಂದು ಒಳ್ಳೆಯ ಮುಹೂರ್ತವನ್ನು ನೋಡಿ ಆ ದಿನ ಅರ್ಜುನನಿಗೆ ವಿಧ್ಯುಕ್ತವಾಗಿ ಈಶ್ವರ ಬೀಜಮಂತ್ರವನ್ನು ಉಪದೇಶಿಸುತ್ತಾನೆ. ಪಾರ್ಥನು ಅದನ್ನು ಪರಿಗ್ರಹಿಸಿಕೊಂಡು ಹಿರಿಯರೆಲ್ಲರಿಗೂ ವಂದಿಸಿ, ಭಗವಾನ್ ಶ್ರೀಕೃಷ್ಣನನ್ನು ಧ್ಯಾನಿಸಿಕೊಂಡು, ಈಶ್ವರನ ಕುರಿತು ತಪಸ್ಸು ಮಾಡುವುದಕ್ಕೆ ಸೂಕ್ತ ಸ್ಥಳವಾದ ಇಂದ್ರಕೀಲವನ್ನು ಅರಸಿಕೊಂಡು ಹೊರಡುತ್ತಾನೆ. ತಪಸ್ವಿಗಳಿಗೆ ಪ್ರಶಸ್ತವಾದ ನಾರುಡೆಯನ್ನು ಉಟ್ಟು, ಕೃಷ್ಣಾಜಿನವನ್ನು ಧರಿಸಿ, ರಕ್ಷಣೆಗೆಂದು ಪವಿತ್ರ ಬಿಲ್ಲಾದ ಗಾಂಡೀವ, ಬತ್ತಳಿಕೆ ಹಾಗೂ ಖಡ್ಗಗಳನ್ನು ಧರಿಸಿ ಉತ್ತರಾಭಿಮುಖವಾಗಿ ಹೋಗುತ್ತಾನೆ. ಅವರಿವರಲ್ಲಿ ದಾರಿಯನ್ನು ಕೇಳಿ ತಿಳಿದುಕೊಳ್ಳುತ್ತಾ ಹಿಮಾಲಯ ಶ್ರೇಣಿಯಲ್ಲಿರುವ ಗಂಧಮಾದನ ಪರ್ವತವನ್ನು ದಾಟಿ ಇಂದ್ರಕೀಲ ಪರಿಸರವನ್ನು ತಲುಪುತ್ತಾನೆ. 

ಆಗ "ಪಾರ್ಥಾ ನಿಲ್ಲು, ಇದೇ ನೀನು ಹುಡುಕುತ್ತಿರುವ ಪವಿತ್ರವಾದ ಇಂದ್ರಕೀಲಕ ಎಂಬ ಪುಣ್ಯಕ್ಶೇತ್ರ" ಎಂಬುದಾಗಿ ಅಶರೀರವಾಣಿಯಾಗುತ್ತದೆ. ನಭೋವಾಣಿಯನ್ನು ಕೇಳಿದ ಅರ್ಜುನನಿಗೆ ತನಗೆ ದೈವಕೃಪೆ ಇದೆ ಎಂಬುದಾಗಿ ಸಂತೋಷವಾಗುತ್ತದೆ. ಅಲ್ಲಿಯೇ ಒಂದು ಸುಸ್ಥಳವನ್ನು ಆರಿಸಿಕೊಂಡು ಮಿಂದು ಶುಚಿರ್ಭೂತನಾಗಿ, ಪರಶಿವನನ್ನು ಧ್ಯಾನಿಸುತ್ತಾ, ಈಶ್ವರ ಬೀಜಮಂತ್ರವನ್ನು ಪಠಿಸುತ್ತಾ ತಪಸ್ಸಿಗೆ ತೊಡಗುತ್ತಾನೆ. ಕ್ಷತ್ರಿಯನಾದ ಆತ ಸೊಂಟದಲ್ಲಿ ಕಠಾರಿ, ಬಲ ಭುಜದಲ್ಲಿ ಗಾಂಡೀವ, ಬೆನ್ನಿನ ಎರಡೂ ಕಡೆಗಳಲ್ಲಿ ಬಾಣಗಳಿಂದ ತುಂಬಿರುವ ಬತ್ತಳಿಕೆಗಳನ್ನು ಧರಿಸಿಕೊಂಡು ಒಂಟಿ ಕಾಲಲ್ಲಿ ನಿಂತುಕೊಂಡೇ ತಪಸ್ಸಿಗೆ ತೊಡಗುತ್ತಾನೆ.

ಹೀಗೆ ಅರ್ಜುನನು ತಪಸ್ಸನ್ನು ಆಚರಿಸುತ್ತಿರುವಾಗ ಅಲ್ಲಿಗೆ ಮುದಿ ಬ್ರಾಹ್ಮಣನೋರ್ವ ಆಗಮಿಸುತ್ತಾನೆ. ಅರ್ಜುನನನ್ನು ನೋಡಿದ ಆತ ಅಪಹಾಸ್ಯದಿಂದ ನಗುತ್ತಾನೆ. "ಸೊಂಟದಲ್ಲಿ ಖಡ್ಗ, ಭುಜದಲ್ಲಿ ಧನುಸ್ಸು, ಬೆನ್ನಿನಲ್ಲಿ ಬಾಣದ ಬತ್ತಳಿಕೆ ಇವುಗಳನ್ನೆಲ್ಲ ಧರಿಸಿಕೊಂಡು ಏನು ಯುದ್ಧಕ್ಕೆ ಹೊರಟದ್ದೋ ನೀನು? ಈ ರೀತಿಯಲ್ಲಿ ದೇವರನ್ನು ಧ್ಯಾನಿಸುವ ನಾಟಕ ಏಕಯ್ಯಾ ನಿನಗೆ? ನಿನ್ನಂಥವರಿಗೆ ಈ ಪವಿತ್ರ ತಪೋಭೂಮಿಯಲ್ಲಿ ಏನು ಕೆಲಸ?" ಎಂದು ತಮಾಷೆ ಮಾಡುತ್ತಾ ಉಪೇಕ್ಷಿಸುವ ದನಿಯಲ್ಲಿ ಅರ್ಜುನನನ್ನು ನಿಂದಿಸುತ್ತಾನೆ. ಅದಕ್ಕೆ ಅರ್ಜುನನು "ಸ್ವಾಮೀ, ನಾನೋರ್ವ ಕ್ಷತ್ರಿಯ. ತಪಸ್ಸಿಗಾಗಿ ಬಂದಿದ್ದೇನೆ. ಕ್ಷತ್ರಿಯನಾದವನಿಗೆ ತಪಸ್ಸು ಕೂಡಾ ನಿಷಿದ್ಧವಲ್ಲ ಹಾಗೂ ಕ್ಷತ್ರಿಯರಾದವರಿಗೆ ಯಾವ ಸಂದರ್ಭದಲ್ಲೂ ಆಯುಧಗಳನ್ನು ಧರಿಸಿ ಇರುವುದು ಕೂಡಾ ನಿಷಿದ್ಧವಲ್ಲ. ನನ್ನಿಂದ ನಿಮಗಾಗಲೀ ಅಥವಾ ಇಲ್ಲಿನ ಇತರ ಋಷಿಗಳಿಗಾಗಲೀ ತೊಂದರೆಯಾಗದು. ನನ್ನನ್ನು ನಿಮ್ಮ ಸೇವಕನೆಂದು ತಿಳಿಯಿರಿ" ಎನ್ನುತ್ತಾನೆ.

ಇವನ ಉತ್ತರದಿಂದ ಸಂತೋಷಿತನಾದ ಬ್ರಾಹ್ಮಣನು ತನ್ನ ನಿಜ ರೂಪವನ್ನು ತೋರಿಸುತ್ತಾನೆ. ಆತನೇ ದೇವೇಂದ್ರ - ಅರ್ಜುನನ ನಿಜವಾದ ತಂದೆ. ತಂದೆಯನ್ನು ನೋಡಿದ ಅರ್ಜುನ ಸಂತೋಷದಿಂದ ಕಾಲಿಗೆರಗಿ ನಮಸ್ಕರಿಸುತ್ತಾನೆ. ಮಗನನ್ನು ಹಿಡಿದೆತ್ತಿದ ಆತ "ಮಗನೇ, ನಿನ್ನ ಮನಸ್ಸಿನ ದೃಢತೆಯನ್ನು ಪರೀಕ್ಷಿಸುವುದಕ್ಕಾಗಿ ಬಂದೆ. ನಿನಗೆ ಆ ಪರಮೆಶ್ವರನು ಒಲಿಯಲಿ. ನಿನ್ನ ಮನದ ಅಭೀಷ್ಟ ಈಡೇರಲಿ" ಎಂದು ಹರಸಿ ಅಂತರ್ಧಾನನಾಗುತ್ತಾನೆ. ಅರ್ಜುನನು ತನ್ನ ತಪಸ್ಸನ್ನು ಮುಂದುವರಿಸುತ್ತಾನೆ. (ಸಶೇಷ)

ಲೇಖನ: ಹರಿಕೃಷ್ಣ ಹೊಳ್ಳ , ಬ್ರಹ್ಮಾವರ

Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ ಇನ್‌ಸ್ಟಾಗ್ರಾಂ 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು