ಮಂಗಳೂರು: ಯಕ್ಷಗಾನದ ತವರು ನೆಲವೆಂದೂ, ಯಕ್ಷಗಾನದ ಪಿತಾಮಹ ಕುಂಬಳೆ ಪಾರ್ತಿಸುಬ್ಬನ ಕಾರ್ಯಕ್ಷೇತ್ರವೆಂದೂ ನೆಗಳ್ತೆ ಪಡೆದಿರುವ ಕಾಸರಗೋಡು ಜಿಲ್ಲೆಯ ಯಕ್ಷಗಾನ, ನಾಟಕ, ಸಂಗೀತ ಕಲಾವಿದರೀಗ ಕೋವಿಡ್ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲಯಾಳಂ ರಾಜ್ಯದಲ್ಲಿದ್ದರೂ ಕನ್ನಡ ಉಳಿಸಿ ಬೆಳೆಸುವಲ್ಲಿ ಇಲ್ಲಿನ ಯಕ್ಷಗಾನ ಕಲಾವಿದರ ಕೊಡುಗೆ ಅಪಾರ. ಹೀಗಾಗಿ ಕರ್ನಾಟಕ ಸರ್ಕಾರವು ಈ ಕಲಾವಿದರ ಸಂಕಷ್ಟ ನಿವಾರಣೆಗೆ ಮುಂದಾಗಬೇಕೆಂಬುದು ಎಲ್ಲ ಕಲಾವಿದರ ಆಗ್ರಹ.
ಕಾಸರಗೋಡು ಜಿಲ್ಲೆಯು ಕೇರಳ ರಾಜ್ಯ ಸರ್ಕಾರದ ಅಧೀನದಲ್ಲಿರುವುದರಿಂದ, ಕೇರಳದಿಂದಲೂ ಪರಿಹಾರ ಸಿಗದೆ ಕಲಾವಿದರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತ ಕರ್ನಾಟಕ ಸರ್ಕಾರ ಕೊಡಮಾಡುವ ಕೋವಿಡ್ ಪರಿಹಾರಕ್ಕೂ ಈ ಕಲಾವಿದರು ಅರ್ಹರಲ್ಲ. ಇದಕ್ಕೆ ಕಾರಣವೆಂದರೆ, ಅವರು ಕೇರಳ ರಾಜ್ಯದವರು. ಬೇರೆ ರಾಜ್ಯದವರಿಗೆ ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಅರ್ಹತೆ ಇರುವುದಿಲ್ಲ. ಅವರ ಸೇವೆಯು ಕನ್ನಡದ ಉಳಿವಿಗಾಗಿ ಕರ್ನಾಟಕದ ಮೇಳಗಳಲ್ಲೇ ಆಗಿದ್ದರೂ, ಅವರ ವಾಸಸ್ಥಳವಿರುವುದು ಕಾಸರಗೋಡು ಜಿಲ್ಲೆಯಲ್ಲಿ. ಹೀಗಾಗಿ, ಪರಿಹಾರ ಪಡೆಯುವ ಸಂದರ್ಭದಲ್ಲಿ ವಿಳಾಸದ ಸಮಸ್ಯೆಗೆ ಅವರೀಗ ಸಿಲುಕಿದ್ದಾರೆ.
ಈ ಸಂದಿಗ್ಧ ಸ್ಥಿತಿಯಲ್ಲಿರುವ ಯಕ್ಷಗಾನ ಕಲಾವಿದರೀಗ ತಮ್ಮ ಮೊರೆಯು ನಾಡಿನ ದೊರೆಗೆ ಕೇಳೀತೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ತೆಂಕು ತಿಟ್ಟಿನ ಬಹುತೇಕ ಮೇಳಗಳಲ್ಲಿ ವ್ಯವಸಾಯ ಮಾಡುತ್ತಿರುವ ಸುಪ್ರಸಿದ್ಧ ಕಲಾವಿದರೆಲ್ಲರೂ ಕಾಸರಗೋಡು ಜಿಲ್ಲೆಯ ಮೂಲದವರೇ. ಜಿಲ್ಲೆಯ ವಿವಿಧೆಡೆ ಹಿಮ್ಮೇಳ-ಮುಮ್ಮೇಳ ಕಲಾವಿದರು, ಕಲಾ ಸಂಸ್ಥೆಗಳು, ಗುರುಗಳು ಮಾತ್ರವಲ್ಲದೆ ವೇಷಭೂಷಣ, ಚೆಂಡೆ-ಮದ್ದಳೆ ತಯಾರಕರು ಕೂಡ ಕಾಸರಗೋಡು ಜಿಲ್ಲೆಯ ವಿವಿಧೆಡೆ ಇದ್ದಾರೆ.
ಆದರೆ, ಕೇರಳ ಸರ್ಕಾರದ ನಿರ್ಲಕ್ಷ್ಯಕ್ಕೀಡಾಗಿರುವ ಈ ಕಲಾವಿದರ ಗುಂಪು, ಈಗ ಕರ್ನಾಟಕ ಸರ್ಕಾರದ ಕಣ್ಣಿಗೂ ಬೀಳುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳಾದರೂ ಎಚ್ಚೆತ್ತುಕೊಂಡು, ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರ ಕುಟುಂಬಕ್ಕೆ ನೆರವಾಗಬೇಕಿದೆ.
ಈ ಕುರಿತು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಈಗ ಧ್ವನಿಯೆತ್ತಿದೆ.
ಗಡಿನಾಡು ಕಾಸರಗೋಡಿನ ಕಲಾವಿದರ- ಕನ್ನಡಿಗರ ಸಂಕಷ್ಟ ಎಂಬ ಹೆಸರಿನಲ್ಲಿ ಹೇಳಿಕೆ ನೀಡಿರುವ ಈ ಸಂಸ್ಥೆಯು, ಭಾಷಾವಾರು ಪ್ರಾಂತ್ಯ ರಚನೆಯಾದಂದಿನಿಂದಲೂ ಈ ಗಡಿನಾಡಿನ ಜನರು ಎದುರಿಸುತ್ತಿರುವ ಸಂಕಷ್ಟಗಳ ಸರಮಾಲೆಯ ಗಮನ ಸೆಳೆದಿದೆ.
ಕೋವಿಡ್ ಸಮಯದಲ್ಲಿ ಗಡಿ ನಿರ್ಬಂಧದ ಪರಿಣಾಮ ಕರ್ನಾಟಕವನ್ನು ಆಶ್ರಯಿಸಿದ್ದ ಕನ್ನಡಿಗರ ಪಾಲಿಗೆ ಜೀವನ ಮತ್ತೂ ದುಸ್ತರವಾಗಿದೆ. ಕಳೆದ ವರ್ಷ ಕರ್ನಾಟಕ ಸರಕಾರ ಕಲಾವಿದರಿಗೆ ಘೋಷಿಸಿದ ಪರಿಹಾರ 2000 ರೂ. ಹಣವು ಯಕ್ಷಗಾನ ಅಕಾಡೆಮಿಯ ಮೂಲಕ ಬೆರಳೆಣಿಕೆಯ ಕಲಾವಿದರಿಗೆ ಲಭಿಸಿರುತ್ತದೆ. ಅಂದಾಜು ಇನ್ನೂರಷ್ಟು ಯಕ್ಷಗಾನ ಕಲಾವಿದರು ಹಾಗೂ ಹಲವು ನಾಟಕ ಕಲಾವಿದರು, ಇನ್ನಿತರರು ಪರಿಹಾರ ವಂಚಿತರಾಗಿದ್ದಾರೆ ಎಂದು ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
ಯಕ್ಷಗಾನದ ಹೆಚ್ಚಿನ ಮೇಳಗಳಲ್ಲಿ ಗಡಿನಾಡಿನ ಕಲಾವಿದರೇ ಹೆಚ್ಚು. ನಾಟಕದಲ್ಲಿಯೂ ಅಷ್ಟೇ. ಗಡಿನಾಡು ಕಾಸರಗೋಡಿನಲ್ಲೂ ಹಲವಾರು ಯಕ್ಷಗಾನ ಮೇಳಗಳಿದ್ದು, ಈ ಹಿಂದೆ ಹಲವು ಸ್ಥಗಿತಗೊಂಡಿವೆ. ಈ ಸಂದರ್ಭದಲ್ಲಿ ಬೆರಳೆಣಿಕೆಯಷ್ಟಿದ್ದ ಮೂರು ಮೇಳಗಳು ಪ್ರದರ್ಶನಗಳಿಲ್ಲದೆ ಏನೂ ಮಾಡಲಾಗದೆ ಯೋಚಿಸುವಂತಾಗಿದೆ.
ಕರ್ನಾಟಕ ಸರಕಾರ ಈ ವರ್ಷ ಘೋಷಿಸಿದ ಪರಿಹಾರ ಗಡಿನಾಡು ಕಲಾವಿದರಿಗೆ ದೊರಕಲಿಲ್ಲ. ಆನ್ಲೈನ್ ಅರ್ಜಿ ಆದ ಕಾರಣ ಕಾಸರಗೋಡಿನ ಹೆಸರನ್ನು ಸೂಚಿಸಲಾಗುವುದಿಲ್ಲ. ಅತ್ತ ಕೇರಳ ಸರಕಾರವೂ ಈ ಬಗ್ಗೆ ಯೋಚಿಸಿದಂತಿಲ್ಲ. ಉಭಯ ರಾಜ್ಯಗಳ ಮಧ್ಯೆ ಗಡಿನಾಡು ಕನ್ನಡಿಗರು- ಕಲಾವಿದರು ತ್ರಿಶಂಕು ಸ್ಥಿತಿಯಲ್ಲಿ ಜೀವನ ನಡೆಸುವಂತಾಗಿದೆ. ಉಭಯ ರಾಜ್ಯಗಳ ಸರಕಾರವು ಈ ಬಗ್ಗೆ ಕೂಡಲೇ ಗಮನಹರಿಸಬೇಕು ಎಂದು ಸಂಸ್ಥೆಯು ಒತ್ತಾಯಿಸಿದೆ.
ಜಿಲ್ಲೆಯಲ್ಲಿ ಯಕ್ಷಗಾನ ತಾಳಮದ್ದಳೆ ಮುಖೇನ ಕನ್ನಡವನ್ನೂ ಉಳಿಸಿ ಬೆಳೆಸುವ ಮೂಲಕ ಪುರಾಣಗಳ ಸಾರವನ್ನು ಮುಂದಿನ ಪೀಳಿಗೆಗಳಿಗೂ ತಲುಪಿಸುವ ಜವಾಬ್ದಾರಿ ಹೊಂದಿರುವ ಅಲ್ಲಿನ ಕಲಾವಿದರಿಗೆ ಕರ್ನಾಟಕ ರಾಜ್ಯವು ಕೋವಿಡ್‌ನ ಈ ಕಷ್ಟಕಾಲದಲ್ಲಿ ಸಹಾಯ ಮಾಡಬೇಕಿದೆ. ಕನ್ನಡ-ತುಳುವಿನ ಭಾಷೆಯ ಪ್ರದೇಶವೇ ಆಗಿದ್ದ ಕಾಸರಗೋಡಿನಲ್ಲಿ ಈಗ ಕನ್ನಡ ಭಾಷೆಯನ್ನು ಉಳಿಸುವ ಸಂಘಟನೆಗಳಿಗೆ ರಾಜ್ಯ ಸರ್ಕಾರ ಸಹಾಯ ಮಾಡುವುದಕ್ಕೆ ಯಾವುದೇ ಆಕ್ಷೇಪ ಇರಲಾರದು. ಆದರೆ ಕೇರಳಕ್ಕೆ ಸೇರಿದರೂ ಭಾಷೆಯ ಉಳಿಯುವಿಕೆಗೆ ಶ್ರಮಿಸುವ ಸಂಘ-ಸಂಸ್ಥೆಗಳಿಗೆ, ಪತ್ರಿಕೆಗಳಿಗೆ, ಕಲಾವಿದರಿಗೆ, ಕರ್ನಾಟಕ ಸರಕಾರ ಸಹಾಯ ಮಾಡಬೇಕು ಎಂದು ಮೂಡುಬಿದಿರೆಯ ಉದ್ಯಮಿ, ಯಕ್ಷಗಾನ ಸಂಘಟಕ ಸದಾಶಿವ ನೆಲ್ಲಿಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಭಾಷೆ ಕಾಸರಗೋಡಿನಲ್ಲಿ ಇನ್ನೂ ತನ್ನತನ ಉಳಿಸಿಕೊಂಡಿರುವುದರ ಹಿಂದೆ ಯಕ್ಷಗಾನ, ಯಕ್ಷಗಾನ ಕಲಾವಿದರ ಅಪಾರ ಕೊಡುಗೆಯಿದೆ. ಕಾಸರಗೋಡು ಜಿಲ್ಲೆಯಾದಂದಿನಿಂದ (ಹೆಚ್ಚಿನ ಅಧಿಕಾರಿವರ್ಗ ಕನ್ನಡೇತರರು) ಕನ್ನಡದ ಧ್ವನಿ ಕ್ಷೀಣವಾಗಿ ಬಂದಿರುವುದು ನಮ್ಮ ಅನುಭವ. ಈ ಕಾಲಘಟ್ಟದಲ್ಲಿ ತಾಂತ್ರಿಕ ಕಾರಣಗಳನ್ನೊಡ್ಡಿ ಕಾಸರಗೋಡು ನಿವಾಸಿಗಳಾದ ಯಕ್ಷಗಾನ ಕಲಾವಿದರನ್ನು ಕರ್ನಾಟಕ ಸರಕಾರವು ಸಹಾಯಧನ ನೀಡುವಲ್ಲಿ ಪರಿಗಣಿಸದಿರುವುದು ಬೇಸರದ ಸಂಗತಿ. ಯಕ್ಷಗಾನ ಕಲೆಗೆ ಕಾಸರಗೋಡು ಭಾಗದವರ ಕೊಡುಗೆ ನಾವೆಲ್ಲ ತಿಳಿದವರೇ. ಅದಕ್ಕೆ ಬೇರೆ ಸಾಕ್ಷ್ಯ ಅಗತ್ಯ ಬರದು. ಈ ಸಮಸ್ಯೆ ಆದಷ್ಟು ಬೇಗ ಪರಿಹಾರವಾಗಲಿ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಸ್.ಎನ್.ಭಟ್ ಬಾಯಾರು.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಸುದ್ದಿ