ಯಕ್ಷಗಾನ ಪರಂಪರೆ: ಪ್ರಶ್ನಿಸಬೇಕಿಲ್ಲ, ಬದಲಿಸುವುದೂ ಸಲ್ಲ; ಸುಧಾರಿಸಬಹುದು

ಪಾಂಡವರ ಪರಂಪರೆಯ ಒಡ್ಡೋಲಗ (ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ)
ಯಕ್ಷಗಾನ ಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -6 by ಸುರೇಂದ್ರ ಪಣಿಯೂರ್

ಸಂಪ್ರದಾಯ, ಪರಂಪರೆ ಅಂದರೆ ಏನು? ಅಂತ ನೋಡಿದರೆ... ಒಂದು ಪ್ರಕಾರವು ಆಚರಣೆಗೊಳ್ಳುವಾಗ ಅಥವಾ ಅಭಿವ್ಯಕ್ತಿ ಹೊಂದುವಾಗ ಅದರ ನಡೆಯ ಅನುಸರಣೆಯಲ್ಲಿ ನಮ್ಮ ಪೂರ್ವಜರಿಂದ ತಲೆ ತಲಾಂತರದಿಂದ ಆಚರಿಸಿಕೊಂಡು ಬಂದಿರುವ ನಡೆಗಳನ್ನು ಸಂಪ್ರದಾಯ ಅನ್ನುತ್ತಾರೆ.

ಹಾಗಂತ ಅವುಗಳೇನೂ ಮೂಢ ನಂಬಿಕೆಗಳಲ್ಲ. ಗೊಡ್ಡು ಸಂಪ್ರದಾಯಗಳೂ ಅಲ್ಲ. ಬದಲಿಗೆ ಆಚರಣೆಯಲ್ಲಿ ಗಟ್ಟಿಗೊಂಡ  ರೀತಿ ರಿವಾಜುಗಳು, ಶಿಸ್ತುಗಳು. ಅದು ಯಾಕೆ ಹಾಗೆ? ಅಂತ ಪ್ರಶ್ನೆ ಹಾಕಲಿಕ್ಕೂ ಇಲ್ಲ. ಅದಕ್ಕೊಂದು ಅಲಿಖಿತ ಕಾನೂನು… ನಂಬಿಕೆಗಳು ಇದ್ದವು. ಇದನ್ನು ಆದಿಮ ಸಂಸ್ಕೃತಿಯ ಪೂಜಾ ವಿಧಿವಿಧಾನಗಳಲ್ಲಿಯೂ ಭೂತಾರಾಧನೆಯಲ್ಲಿಯೂ, ಯಕ್ಷಗಾನದಲ್ಲಿಯೂ ವಿಪುಲವಾಗಿ ಕಾಣಬಹುದು. ಇದು ಜನಪದೀಯ.

ಉದಾಹರಣೆಗೆ ಆದಿಮ ಪೂಜಾ ವಿಧಿವಿಧಾನಗಳಾದ ಹೋಮ, ಆರತಿ, ಎಡೆ, ಕೋಲ, ದರ್ಶನ, ಇವೆಲ್ಲವೂ ನಿರ್ದಿಷ್ಟ ಸೂತ್ರಗಳನ್ನು ಪಾಲಿಸಿಕೊಂಡು ಜರಗುತ್ತವೆ. ಅದೇ ರೀತಿಯಲ್ಲಿ ಪ್ರತಿಯೊಂದು ಭೂತಗಳ ಸಂಧಿ, ಪಾಡ್ದನಗಳು, ಮುಖವರ್ಣಿಕೆ, ಕುಣಿತ, ಬಾರಣೆ.. ಇತ್ಯಾದಿ ಕೂಡಾ. ಆಯಾಯ ಭೂತಗಳಿಗೆ ಅದರದ್ದೇ ಆದ ಪ್ರತ್ಯೇಕವಾದ ಸಂಪ್ರದಾಯ ಇದೆ.

ಯಕ್ಷಗಾನದಲ್ಲಿಯೂ ಹಾಗೆ... ಪ್ರತಿಯೊಂದು ಗುಣದ ವೇಷಗಳಿಗೂ ಪ್ರತ್ಯೇಕವಾದ ಆಹಾರ್ಯ, ಕುಣಿತ, ನಡೆ ಇದೆ. ರಾಮನ ನಡೆಯೇ ಬೇರೆ, ಕೃಷ್ಣನ ನಡೆಯೇ ಬೇರೆ. ಎರಡನೇ ವೇಷಧಾರಿ ಪುಂಡು ವೇಷಧಾರಿಯ ಹಾಗೆ ಮಂಡಿ ಹಾಕುವಂತಿಲ್ಲ; ಅರ್ಜುನ ವೇಷ ನಡುತಿಟ್ಟಲ್ಲಿ ಕೇದಗೆ ಮುಂದಲೆ ಕಟ್ಟಿಯೇ ಸಂಪನ್ನಗೊಳ್ಳುವುದೇ ಹೊರತು ಕಿರೀಟ ಕಟ್ಟಬಾರದು. ಯಾಕಂದರೆ ಅದು ನಡುತಿಟ್ಟು ಯಕ್ಷಗಾನ ಸಂಪ್ರದಾಯ. ಯಾಕೆ? ಅಂತ ಕೇಳುವ ಹಾಗಿಲ್ಲ! ಕೇಳಬಾರದು!

ನಡುತಿಟ್ಟು ಶ್ರೀಕೃಷ್ಣ ವೇಷವು ನೆರಿ ಹಾಕಿ ಸೀರೆ ಉಟ್ಟು ಮುಖದಲ್ಲಿ ಮೀಸೆ ಇಡದೆ ಮಾಡುವ ವೇಷಗಾರಿಕೆಯೇ ಸಂಪ್ರದಾಯ. ಅದುಬಿಟ್ಟು ಪುಂಡುವೇಷದ ರೀತಿಯಲ್ಲಿ ಕಸೆ ಸೀರೆ ಕಚ್ಚೆ ಹಾಕಿ ಕೃಷ್ಣ ವೇಷ ಮಾಡಿದಲ್ಲಿ ಕೃಷ್ಣನಿಗೂ ಅಭಿಮನ್ಯುಗೂ ವ್ಯತ್ಯಾಸ ಹೇಗೆ ಕಂಡುಕೊಳ್ಳುವುದು?

ಒಂಟಿ ರಾಜವೇಷ, ಪಾಂಡವರು, ಶ್ರೀ ರಾಮ, ಶ್ರೀ ಕೃಷ್ಣ, ಬಣ್ಣದ ವೇಷ, ಹೆಣ್ಣು ಬಣ್ಣದ ವೇಷ, ಕಸೆ ಸ್ತ್ರೀವೇಷ, ಸ್ತ್ರೀ ವೇಷ... ಪ್ರತಿಯೊಂದು ಕೂಡ ಅದರದ್ದೇ ಅದ ಸಂಪ್ರದಾಯದ ನಡೆ, ಒಡ್ಡೋಲಗ ಹೊಂದಿದೆ. ಇವೆಲ್ಲವೂ ನಮ್ಮ ಹಿರಿಯರು ಮಾಡಿಟ್ಟ  ಸಾಂಪ್ರದಾಯಿಕ ನಡೆಗಳು. ಯಾಕೆ ಎಂದು ಕೇಳಬಾರದು.

ಹಾಗಂತ ಇವುಗಳು ಅಜ್ಜ ನೆಟ್ಟ ಗೋಳಿ ಮರ ಆಗಬೇಕೆಂದೇನೂ ಇಲ್ಲ. ಒಂದು ಕಲೆಯು ನಿಂತ ನೀರಾಗದೆ ಕಾಲ ಕಾಲಕ್ಕೆ ಸುಧಾರಣೆ ಆಗಿದ್ದು ಇದೆ. ಆಗಬೇಕು ಕೂಡಾ! ಆದರೆ ಹೇಗೆ? ಯಾಕೆ? ಎಂದು ನೋಡುವುದಾದರೆ ಸಂಸ್ಕಾರಗಳು, ಸಂಸ್ಕೃತಿಗಳು, ನಾಗರಿಕತೆಗಳು ಬೆಳೆದು ಸುಧಾರಣೆಗೊಂಡ ಹಾಗೆ, ಮನುಷ್ಯನೂ ಸುಧಾರಣೆಯತ್ತ ಧಾವಿಸುತ್ತಾನೆ, ಒಗ್ಗಿಕೊಳ್ಳುತ್ತಾನೆ. ಆವಾಗ ಹೊಸ ಪರಿಕಲ್ಪನೆಗಳು, ಸಾಧ್ಯತೆಗಳು ಗರಿಗೆದರಿ ಆಧುನಿಕ ಪರಿಕರಗಳೊಂದಿಗೆ ಸುಧಾರಣೆ ಹೊಂದುವುದರಲ್ಲೂ ತಪ್ಪಿಲ್ಲ.

ಆದರೆ ಅದರಲ್ಲಿ ಸಂಪ್ರದಾಯದ ಚೌಕಟ್ಟನ್ನು ಉಳಿಸಿಕೊಳ್ಳುವ ಬದ್ದತೆಯನ್ನು ಹೊಂದಿರುವ ಅಗತ್ಯ ಇದೆ. ಹಳೆ ಬೇರು ಕಡಿದು ಹೊಸ ಚಿಗುರು ಖಂಡಿತ ಸಾಧ್ಯ ಇಲ್ಲ, ಸಾಧುವೂ ಅಲ್ಲ. ಇದರಿಂದಾಗಿ ಕಲೆಯ ಪಾರಮ್ಯವನ್ನು ಉಳಿಸಿಕೊಂಡು ಬರಬಹುದು. ಅದು ನಮ್ಮ ಜವಾಬ್ದಾರಿ ಕೂಡಾ.

ಇವೆಲ್ಲವನ್ನೂ ಯಾಕೆ ಪ್ರಸ್ತಾವನೆ ಮಾಡಿದೆ ಅಂದರೆ, ನಮ್ಮ ಹಿರಿಯರು ಯಕ್ಷಗಾನ ಕಲೆಯನ್ನು ರೂಪಿಸುವಾಗ ಸಮಗ್ರವಾಗಿ ಯೋಚಿಸಿಯೇ ರೂಪಿಸಿದ್ದಾರೆ. ಅವುಗಳು ಅಲೌಕಿಕ ಜಗತ್ತಿನ ಪುಣ್ಯ ಪುರುಷರ ಕಥೆಗಳನ್ನು ನಮಗೆ ರಂಗದಲ್ಲಿ ಸಾದೃಶ್ಯವಾಗಿಸಲು  ನೆರವಾಗುತ್ತವೆ.

ಒಂದು ಶ್ರೀ ಕೃಷ್ಣ ವೇಷ ರಂಗಕ್ಕೆ  ಬರುವಾಗ ತನ್ನ ಹಣೆಯಲ್ಲಿ ತನ್ನ ಹೆಸರಿನ ಪಟ್ಟಿ ಧರಿಸಿಕೊಂಡು ಬರುವುದಿಲ್ಲ. ಆತನನ್ನು ನೋಡಿಯೇ ಗೊತ್ತಾಗುತ್ತದೆ - ಈತ ಶ್ರೀ ಕೃಷ್ಣ, ಈತ ರಾಮ, ಈತ ಭೀಮ, ಈತ ಕೌರವ ಎಂಬುದಾಗಿ. ಹಾಗಾಗಿ ಅದಕ್ಕೆ ತಕ್ಕ ಆಹಾರ್ಯ, ಮುಖವರ್ಣಿಕೆ ಎಲ್ಲವೂ ವ್ಯವಸ್ಥಿತವಾಗಿ ರೂಪುಗೊಳಿಸಿದ್ದಾರೆ.

ಚೌಕಿಯಲ್ಲಿ ಒಂದು ಅಟ್ಟಹಾಸ ಕೇಳಿ ಬಂದರೆ ಕೂಡಲೇ ಗೊತ್ತಾಗುತ್ತದೆ - ಒಂದು ರಾಕ್ಷಸ ವೇಷ ರಂಗ ಪ್ರವೇಶ ಮಾಡಲಿದೆ ಎಂದು. ಅಬ್ಬರದ ಧೀಂಗಿಣದಲ್ಲಿ ವೇಷವೊಂದು ಪ್ರವೇಶ ಮಾಡಿದರೆ ಅದು ಪುಂಡು ವೇಷ ಅಂತಲೇ ಗ್ರಹಿಸಬಹುದು. ಇದೆಲ್ಲವೂ ಯಕ್ಷಗಾನದಲ್ಲಿಯ ವಿಶೇಷತೆ. ಇದನ್ನು ತಿದ್ದುವ, ತೀಡುವ, ಬದಲಿಸುವ ಹಕ್ಕು ನಮಗೆಲ್ಲಿದೆ? ಯಾಕೆಂದರೆ ಅದು ಸಂಪ್ರದಾಯ. ಅದನ್ನು ಮೀರುವಂತಿಲ್ಲ. ಬತ್ತಿಕಟ್ಟು ದೀಪದೆಣ್ಣೆ ಮುಗಿಯಿತು ಅಂತ ದೈವ ದೇವರುಗಳಿಗೆ ಆರತಿಯನ್ನು ಬ್ಯಾಟರಿ ಟಾರ್ಚ್‌ನಲ್ಲಿ ಮಾಡಲಾಗುತ್ತದೆಯೇ? (ಸಶೇಷ)

ಲೇಖನ: ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು