ಗಾಯನ, ವಾದನ, ನರ್ತನವೊಂದು ಮೇಳೈಸುವ ಬಗೆಯನ್ನು, ಅದು ಸೃಷ್ಟಿಸುವ ರಸೋತ್ಕರ್ಷವನ್ನು ಹೃದ್ಯವಾಗಿ ವಿವರಿಸುವ ಮೂಲಕ ಮದ್ದಳೆಗಾರ ಕೃಷ್ಣಪ್ರಕಾಶ ಉಳಿತ್ತಾಯರು, ಯಕ್ಷಗಾನದ ಮಹತ್ತನ್ನೂ ಇಲ್ಲಿ ಸೆಳೆದು ತೋರಿಸಿದ್ದಾರೆ.
ಕಾವ್ಯವಿರಲಿ ನಾಟ್ಯವಿರಲಿ, ಇವುಗಳ ಅಂತಿಮ ಲಕ್ಷ್ಯ ರಸ. ರಸಕ್ಕೆ ಪೋಷಕವಾಗಿಯೇ ಸಾಹಿತ್ಯ,, ಶಬ್ದಜಾಲ, ಶಬ್ದಗುಂಫನ, ಶಬ್ದಶಯ್ಯೆ, ಶಬ್ದ ಮೈತ್ರಿ, ನೃತ್ತ, ನೃತ್ಯ, ಗಾನ, ವಾದನ ಸಂಗೀತ, ಛಂದಸ್ಸು ಇವೆಲ್ಲವೂ ಇರುವುದಷ್ಟೇ. ನಾಟ್ಯಶಾಸ್ತ್ರವಿರಲಿ, ಸೌಂದರ್ಯ ಮೀಮಾಂಸೆಯಿರಲಿ, ಅವುಗಳ ಕೇಂದ್ರ ರಸವೇ ಸರಿ. ಭರತ ಆನಂದವರ್ಧನಾದಿ ಮೀಮಾಂಸಕರು ರಸಪಾರಮ್ಯವನ್ನು ಘಂಟಾಘೋಷವಾಗಿ ಸಾರಿದ್ದಾರೆ. ಭವದಿಂದ ಭಾವ; ಭಾವದಿಂದ ರಸ - ಇದೇ ಕಲೆಯ ಗರಿಷ್ಠತಮ ನೆಲೆ.
ಭಾವಗಳಲ್ಲಿ ಮನಸ್ಸಿನ ಲಹರಿಗಳ (ಅರಿಷಡ್ವರ್ಗಗಳ ಕಾಮಕ್ರೋಧಾದಿಗಳ) ಪರಿಣಾಮವಿದ್ದರೆ; ರಸವು ಈ ಭಾವಗಳ ಹಂಗನ್ನೂ ಕಳೆದುಕೊಂಡು ಪರಿಶುದ್ಧವಾಗಿ ಕೇವಲ ಆನಂದ ಸ್ವರೂಪಿಯಾಗಿ ಪರಿಣಮಿಸುತ್ತದೆ. ಭಾವ ಭವದ ಬಟ್ಟೆಯಾದರೆ; ರಸ ಆತ್ಮಸ್ವರೂಪಿ. ಶೃಂಗಾರ, ಹಾಸ್ಯ, ವೀರ, ಕರುಣ, ಬೀಭತ್ಸ, ಭಯಾನಕ, ಶಾಂತ ಮುಂತಾದ ಯಾವುದೇ ರಸವಿರಲಿ ಅದು ಅಭಿನಯ,ನಾಟ್ಯ,ಸಾಹಿತ್ಯದಲ್ಲಿ ಅಭಿವ್ಯಕ್ತವಾದಾಗ ತನ್ನ ಭಾವಗಳ ಬಟ್ಟೆಯನ್ನು ಹೊರತೆಗೆದು ವಿಶುದ್ಧವಾಗಿ ಅನುಭವಕ್ಕೆ ದಕ್ಕಿದರೆ ಮಾತ್ರ ಅಂಥ ಕಲಾಪ್ರಸ್ತುತಿ( ನಾಟ್ಯ, ಸಂಗೀತ, ಸಾಹಿತ್ಯ) ತನ್ನಲ್ಲೇ ತಾನು ಕೃತಕೃತ್ಯವಾಗುವುದು.
ಇಂತಹಾ ಕೃತಕೃತ್ಯ ಕಲಾವಂತಿಕೆ ಅಭಿಜ್ಞ ಯಕ್ಷಗಾನ ನಟರಾದ ಮಂಟಪ ಪ್ರಭಾಕರ ಉಪಾಧ್ಯರ ಜೈಮಿನಿ ಭಾರತದೊಳಗಣ ಸುಧನ್ವಾರ್ಜುನ ಕಾಳಗದ ಪ್ರಭಾವತಿ ಪಾತ್ರದ ಪ್ರವೇಶದ " ಸತಿಶಿರೋಮಣಿ ಪ್ರಭಾವತಿ…." ಎಂಬ ಈ ವಿಡಿಯೋದಲ್ಲಿನ ಪದ್ಯದಲ್ಲಿ ಕಾಣಬಹುದಾಗಿದೆ. ಪ್ರಾಯಶಃ ಇದು ಬೆಂಗಳೂರಲ್ಲಿ ನಡೆದ ಯಕ್ಷಗಾನ ಪ್ರದರ್ಶನ.
ಕಲಾವಿದರು: ಭಾಗವತರು: ವಿದ್ವಾನ್ ಗಣಪತಿ ಭಟ್, ಮದ್ದಳೆ: ಎ.ಪಿ.ಪಾಠಕ್, ಪ್ರಭಾವತಿ: ಮಂಟಪ ಪ್ರಭಾಕರ ಉಪಾಧ್ಯ.. ನೋಡಿ:
ರಸಲೋಕದ ಅಷ್ಟನಾಯಿಕೆಯರಲ್ಲಿ ಒಂದು ಪ್ರಕಾರವಾದ ಸ್ವಾಧೀನಪತಿಕೆ ಮತ್ತು ವಾಸಕಸಜ್ಜಿಕೆಯನ್ನು ಪ್ರಭಾವತಿಯ ಪಾತ್ರದಲ್ಲಿ ಕಾಣುತ್ತೇವೆ. ಆಕೆ ಸುಧನ್ವನಿಗಾಗಿ ಕಾತರಿಸಿ ತಾನು ಮತ್ತು ತನ್ನ ಪರಿಸರವನ್ನು ಸಿದ್ಧಪಡಿಸುವುದರಲ್ಲಿ ವಾಸಕಸಜ್ಜಿಕೆಯನ್ನು ಕಂಡರೆ; ತನ್ನನ್ನು ತಿರಸ್ಕರಿಸಿ ತನ್ನ ಮನದ ಬಯಕೆಯನ್ನು ತೀರಿಸದೇ ಸುಧನ್ವನನ್ನು ಯುದ್ಧಕ್ಕೆ ತೆರಳಲು ಬಿಡದಿರುವಾಕೆಯಾಗಿ ಸ್ವಾಧೀನಪತಿಕೆಯನ್ನು ಕಾಣಬಹುದು.
ಪ್ರಸ್ತುತ ಪದ್ಯದಲ್ಲಿ ವಾಸಕಸಜ್ಜಿಕೆಯೇ ಪ್ರಧಾನವಾಗಿ ಪ್ರಭಾವತಿಯಲ್ಲಿ ಕಾಣುತ್ತಾಳೆ. ಈ ಪದ್ಯ ರತಿ ಭಾವವನ್ನು ಹೊಂದಿದ ಶೃಂಗಾರ ರಸದ್ದು. ಅರ್ಜುನನೊಡನೆ ಯುದ್ದ ನಿಶ್ಚಿತವಾಗಿದೆ. ಸುಧನ್ವ ತನ್ನ ಮಡದಿಯಲ್ಲಿಗೆ ಯುದ್ಧಕ್ಕೆ ತೆರಳುವ ಮುನ್ನ ಹೇಳಿ ಹೋಗಲು ಅಂತಃಪುರಕ್ಕೆ ಬರುತ್ತಾನೆ. ಇತ್ತ ಪ್ರಭಾವತಿ ಪತಿಯನ್ನು ಸಂತಾನಾರ್ಥಿಯಾಗಿ ನಿರೀಕ್ಷಿಸುತ್ತಾಳೆ. ಪತಿಯ ಆಗಮನದ ಸಡಗರದಲ್ಲಿ ಸಿದ್ಧಗೊಂಡಿರುವ ಪ್ರಭಾವತಿಯ ಉತ್ಕಟ ರತಿ ಭಾವದ ವಾಸಕಸಜ್ಜಿಕೆಯಾದ ನಾಯಿಕೆಯ ಚಿತ್ರಣ ಈ ಪದ್ಯದ್ದು.
ಪದ್ಯದ ಸಾಹಿತ್ಯ ಅಭಿನಯದಲ್ಲಿ ಕೈಶಿಕೀ ಮತ್ತು ಸಾತ್ತ್ವತೀ ವೃತ್ತಿಗಳಿಂದಲೇ ಪ್ರಸ್ತುತಿಗೊಳ್ಳಬೇಕಾದ ತಾತ್ತ್ವಿಕ ದೃಷ್ಟಿಯುಳ್ಳದ್ದು. ಹಾಗಾಗಿ ಶೃಂಗಾರ ಪ್ರಧಾನವಾದ ಈ ಹಾಡಿಗೆ ಲಾಸ್ಯಪೂರ್ಣವಾದ ಕೈಶಿಕೀ ವೃತ್ತಿಯನ್ನೇ ಮಂಟಪರು ತಮ್ಮ ಅಭಿನಯದಲ್ಲಿ ಬಳಸಿದ್ದಾರೆ.
ಮತ್ತೂ ಮುಂದುವರಿದು ನೋಡಿದರೆ ಸಾತ್ತ್ವತಿ ಮತ್ತು ಕೈಶಿಕೀ ವೃತ್ತಿಗಳ ಸಮುಚಿತ ಮಿಶ್ರಣದ ಅಭಿವ್ಯಕ್ತಿ ಎಂದು ನಿರ್ಣಯಿಸಬಹುದು. ಶೃಂಗಾರ ರಸ ನಿರ್ವಹಣೆಯಲ್ಲಿ ಔಚಿತ್ಯಪ್ರಜ್ಞೆಗೆ ಎಲ್ಲಿಲ್ಲದ ಮಹತ್ತ್ವವಿದೆ. ಇಲ್ಲಿ ಔಚಿತ್ಯ ಹದ ತಪ್ಪದೆ ಸಾಗಿದೆ. ನೃತ್ತದಲ್ಲಿ ಕೋಮಲತೆ; ನಡುನಡುವೆ ಸತ್ತ್ವ (ರೋಮಾಂಚ, ಕಂಪನವೇ ಮೊದಲಾದ ಶೃಂಗಾರಕ್ಕೆ ಪೂರಕ)ವೂ ಸೇರಿ ರಸನಿರ್ವಹಣೆ ಅತ್ಯಂತ ಮೇಲ್ಮಟ್ಟದ್ದಾಗಿದೆ.
ಈ ಹಾಡು ರಚಿಸಲ್ಪಟ್ಟದ್ದು ಬೇಗಡೆ ತ್ರಿವುಡೆ ಎಂಬ ಛಂದೋಬಂಧದಲ್ಲಿ. ಅಂಶಗಣ ಮತ್ತು ಮಾತ್ರಾಗಣ ಸಂಮಿಶ್ರವಾಗಿ ವಿಳಂಬ- ಮಧ್ಯ ಮತ್ತು ದ್ರುತಗತಿಯಿಂದ ಹಾಡಲೂ ಅನುಕೂಲವಾಗಿರುವ ಭಾಗವತರು ನಿರೀಕ್ಷೆ ಇಡುವ ಹಾಡುಗಬ್ಬವಿದು.
ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿಗಳು ಕುಣಿತಕ್ಕೆ- ಅಭಿನಯಕ್ಕೆ ಅವಕಾಶವಿರುವ "ಪ್ರಭಾವತಿ" ಯ ಪಾತ್ರವನ್ನು ಸಹಜವಾಗಿಯೇ ಇಷ್ಟಪಡುತ್ತಾರೆ. ಕುಣಿತವನ್ನೂ ಮಾಡುತ್ತಾರೆ. ನೃತ್ತದಲ್ಲಿ ವೈವಿಧ್ಯವನ್ನೂ ತರುತ್ತಾರೆ. ತಾಳ- ಗತಿ ಭೇದ, ಸೂಕ್ಷ್ಮ ವಿನ್ಯಾಸ, ವಿಶೇಷ ಆಂಗಿಕ ಚಲನೆ ಇವನ್ನೆಲ್ಲವನ್ನೂ ಮಾಡುತ್ತಾರೆ. ಪದ್ಯಕ್ಕೂ ಒಳ್ಳೆಯ ಅವಕಾಶ ಇದೆ. ಮದ್ದಳೆ ನುಡಿಸಾಣಿಕೆಗೂ, ನೃತ್ಯವನ್ನು ಅನುಸರಿಸಿ ನುಡಿಸಲು ಅವಕಾಶವೂ ಇದ್ದು ಪ್ರೇಕ್ಷಕರಿಂದ ಕಿವಿಗಡಚಿಕ್ಕುವ ಚಪ್ಪಾಳೆಯನ್ನೇ ಪಡೆಯುತ್ತಾರೆ. ಇರಲಿ.
ಈ ಚಿತ್ರೀಕರಣದಲ್ಲೂ ಅಭಿನಯ ಇದೆ, ನೃತ್ತ ಇದೆ, ನೃತ್ಯ ಇದೆ- ಹೇಗಿದೆ? ಇದು ಮುಖ್ಯವಾಗಿ ಕಾಣತಕ್ಕದ್ದು. ರಸಕ್ಕೆ ಅಡಿಯಾಳಾಗಿ ಇವೆಲ್ಲವೂ ಇದೆ. ಮಂಟಪರ ಇಲ್ಲಿಯ ಅಭಿನಯ ಪ್ರತಿಭಾವಿಲಾಸ ಪದ್ಯದ ಸೊಲ್ಲು ಸೊಲ್ಲಿನ ಅಂತರ್ಯವನ್ನು ಮಥಿಸಿ ತೆಗೆದ ನವನೀತದಂಥಿದೆ. ಸಹೃದಯರು ಇದನ್ನು ಕಾಣಬೇಕು.
ಇನಿಯನಿಗಿದಿರಾಗುತ ಬಂದಳು ಕಾಮನಮದದಾನೆಯೊಲು
ಹೀಗೆಂದೇ ಕವಿ ಪ್ರಭಾವತಿಯ ಪಾತ್ರವನ್ನು ಅನಾವರಣ ಮಾಡಿದುದರಿಂದ ಮಂಟಪರ ಪಾತ್ರ ಶಿಲ್ಪದ ಅನಾವರಣ ಔಚಿತ್ಯದ ಎಲ್ಲೆಮೀರದೆ ಶೃಂಗಾರರಸದ ನಿರ್ವಹಣೆಗೆ ಪೂರಕವಾಗಿ ಮೆರೆದಿದೆ ಎಂಬುದನ್ನು ಕಾಣಬಹುದು.
ಕೈಯ್ಯಲ್ಲಿ ಸಂಪಗೆಯ ಹೂವಿನ ತಟ್ಟೆಯನ್ನು ಹಿಡಿದು ನಿಧಾನ ತ್ರಿವುಡೆ ತಾಳದ ಪದ್ಯದ ಎತ್ತುಗಡೆಯಾದ ಮೇಲಿನ ಬಿಡಿತಕ್ಕೆ ಅಂದರೆ ಎರಡಾವರ್ತದ ತ್ರಿವುಡೆ ತಾಳಕ್ಕೆ ಮದ್ದಳೆ ನುಡಿಸಿದ ಗಾನ- ನಾಟ್ಯ ಮನೋಧರ್ಮಿ ಮದ್ದಳೆವಾದಕರಾದ ಅನಂತಪಸ್ಮನಾಭ ಪಾಠಕರ ಏರು ಮದ್ದಳೆಯ "ಧಿಂತಾಂss.. ಧಿಂತಾಂss…" ಎಂಬ ಪಾಟಾಕ್ಷರಗಳ ಚಾಪು ಗುಂಪು, ಧಿಂ ಕಾರಗಳ ಸುಘಾತ ಸಮೂಹಗಳಿಗೆ, ಪಾದಗಳ ತುದಿಯನ್ನು ಮಾತ್ರವೇ ಬಳಸಿ ಕತ್ತರಿಯಾಕಾರದ ಕಿರು ಹೆಜ್ಜೆಗಳೊಡನೆ ಹಸ್ತದಲ್ಲಿ ಹೂವಿನ ಬಟ್ಟಲನ್ನು ಹಿಡಿದುಕೊಂಡ ರೀತಿಯ ಅಭಿನಯವನ್ನು ಮಾಡಿಕೊಂಡು ಪ್ರವೇಶಿಸಿದ ಪ್ರಭಾವತಿ (ಮಂಟಪರು) " ಸತಿ ಶಿರೋಮಣಿ ಪ್ರಭಾವತಿ ಸೊಬಗಿನಲಿ" ಎಂಬ ಸಾಹಿತ್ಯ ಮುಗಿದಲ್ಲಿಗೆ ತಟ್ಟೆಯಲ್ಲಿನ ಹೂವನ್ನು ಒಮ್ಮೆ ಕೈಯ್ಯಲ್ಲಿ ತೆಗೆದು ಆಘ್ರಾಣಿಸಿ ಮತ್ತೆ ತಟ್ಟೆಯಲ್ಲಿರಿಸಿ ತಟ್ಟೆಯನ್ನು ಕೆಳಗಿರಿಸಿದ ರೀತಿ ಈಕೆ "ಕಾಮನ ಮದದಾನೆ .." ಎಂದು ವರ್ಣಿಸಿದ ಕವಿಯ ಭಾವವನ್ನು ಮತ್ತೆ ಎತ್ತಿ ತೋರಿಸಿಕೊಟ್ಟಂತಾಗಿದೆ.
ಭಾಗವತ ವಿದ್ವಾನ್ ಗಣಪತಿ ಭಟ್ಟರ ಕಲ್ಯಾಣಿ ರಾಗದ ಗುಂಜನವೂ, ಪ್ರಭಾವತಿಯ ಅರೆಲಜ್ಜಾರೂಪದ- ತಲೆಯನ್ನು ಸ್ವಲ್ಪವೇ ಕೆಳಗು ಮಾಡಿ -ಕಿರುನಗೆಯಿಂದೊಡಗೂಡಿದ ಅಭಿನಯಪೂರ್ವಕ ಪ್ರವೇಶವೂ ಕಲ್ಯಾಣಿಯ ಸ್ವರತರಂಗಗಳು ಇಲ್ಲಿ ಹೆಣ್ಣಾಗಿ ಪ್ರತಿಫಲಿತವಾದಂತೆ ಸಹೃದಯರಿಗೆ ಕಂಡರಚ್ಚರಿಯೇನು?!.
ರತಿಯ ಸೋಲಿಪ ರೂಪಿನತಿ ಸೊಗಸಿನಲಿ"
ಕನ್ನಡಿಯಲ್ಲಿ ತನ್ನ ಮೊಗವನ್ನು ನೋಡಿ ತಾನೇ ನಾಚುವ ಈ ಅಭಿನಯ ನೋಡುಗರಿಗೆ ಪದ್ಯದ ಲಕ್ಷ್ಯಾರ್ಥವನ್ನು ಕಾಣಿಸುತ್ತದೆ. ಪಾತ್ರ ಪ್ರತಿಪದಾರ್ಥವನ್ನು ಅಭಿನಯಿಸದೆ, ವಾಕ್ಯಾರ್ಥವನ್ನು ಅಭಿನಯಿಸುವುದು ಚೆನ್ನ. ಅದಲ್ಲದೆ ಲಕ್ಷ್ಯಾರ್ಥವನ್ನು ಹೇಳುವುದು ಮತ್ತೂ ಒಳ್ಳೆಯದೇ. ಮುಂದುವರಿದು ಪಠ್ಯದ ಧ್ವನಿಯನ್ನು ಅಭಿನಯಿಸುವುದು ಶ್ರೇಷ್ಠವಾದರೆ; ರಸನಿಷ್ಠವಾಗಿ ಅಭಿವ್ಯಕ್ತವಾಗುವುದು ಸರ್ವಶ್ರೇಷ್ಠ. ಅಭಿನಯ ಬೀಜದಂತಿದ್ದು ಚಿಗುರೊಡೆದು ಗಿಡವಾಗಿ ವೃಕ್ಷವಾದಂತಿರಬೇಕಲ್ಲವೆ? ಇಲ್ಲಿ ಹೀಗಿದೆ. ಬೆಳೆದ ಮರವನ್ನು ಒಂದು ಕಡೆಯಿಂದ ಅಗೆದು ಮತ್ತೊಂದು ಕಡೆ ಬಗೆದು ನಟ್ಟಂತಿರಬಾರದಲ್ವಾ?
ಅರೇ! ಮದ್ದಳೆಯೇ ಇಲ್ಲಿ ಉದ್ದೀಪನಾ ವಿಭಾವವಾಯಿತೇ!!!
ಕಲ್ಯಾಣಿಯ ಮೃದು ಮಧುರ ಆಲಾಪದೊಡನೆ ಇದೇ ಮೇಲಿನ ಸೊಲ್ಲಾದ "ರತಿಯ ಸೋಲಿಪ…" ದ ನಂತರದ ಅಕಾರಯುಕ್ತ ಆಲಾಪಕ್ಕೆ ಕನ್ನಡಿಯ ಮುಂದೆ ನಿಂತ ಪ್ರಭಾವತಿ ತನ್ನ ಕೇಶರಾಶಿಗಳೆಡೆಗೆ ಎರಡೂ ಕೈಬೆರಳುಗಳನ್ನು ತುರುಕಿಸಿ ಸಿಕ್ಕು ಬಿಡಿಸುವ ಅಭಿನಯದಲ್ಲಿ ಸಿಕ್ಕೇ ಸಿಗದ ನೀಳವಾಗಿ (Straight hair) ಮಾಡಿಸಿದ ಕೇಶರಾಶಿಯ ಪರಿಣಾಮರಮಣೀಯ ದೃಶ್ಯಕ್ಕೆ ಪಾಟಕರ ಮದ್ದಳೆಯ ಹಸ್ತದ ಗಂಟುರುಳಿಕೆಯೇ ಉದ್ದೀಪನಾ ವಿಭಾವವಾಯ್ತಲ್ಲಾ !!
" ಪಾಟಕರು ಇಲ್ಲಿ ನುಡಿಸಿದ ಗಂಟುರುಳಿಕೆಯ ಸುನಾದಯುಕ್ತ " ದಿಗ್ಡ್ದಿ..ದಿಗ್ಡ್…" ನಾದವು ನಿಧಾನ ತ್ರಿವುಡೆಯ ಮೊದಲ ಏಳುಮಾತ್ರೆಗಳ ಗಣಕ್ಕೆ ನಿಂತಾಗ ಇದರ ಅಂತರ್ಯವನ್ನು ಗ್ರಹಿಸಿದ ಮಂಟಪರು ಪ್ರಭಾವತಿಯ ನೀಳವಾದ ಕೇಶಕ್ಕೆ , ಅವನ್ನು ಸರಿಪಡಿಸುವ ರೀತಿಯಂತೆ, ಹಸ್ತವಿರಿಸಿದರಲ್ಲಾ... ಇದು ಕಲೆಯ ಸಂದರ್ಭದಲ್ಲಾಗುವ ಕಲೆಯ ಊರ್ಧ್ವಪಾತ ( ಮೇಲೆಬೀಳುವಿಕೆ). ಇವರಿಬ್ಬರೂ ಪರಸ್ಪರ ಮೊದಲೇ ನಿಶ್ಚಯಿಸಿ ಮಾಡಿಕೊಂಡ ಒಪ್ಪಂದವಲ್ಲವಿದು- ಇದು ವಿಶುದ್ದ ಕಲೆ ಇವರಿಗೆ ತನ್ನನ್ನು ತೆರೆದು ತೋರಿದ ಬಗೆಯಷ್ಟೆ. ಕೇಶವನ್ನು ಹೆಣೆದು ಗಂಟಿಕ್ಕಿದಲ್ಲಿಗೆ ಈ ಸೊಗಸು ಬಂದು ನಿಂತಿತು.
ರತುನಾಭರಣಗಳದ್ಯುತಿಬೆಳಗುತಲಿ
ಆಭರಣಗಳನ್ನು ಪ್ರಭಾವತಿ ಈಕ್ಷಿಸುತ್ತಾಳೆ, ಅದರ ಪ್ರಭೆಗೆ ಕಣ್ಣನ್ನೊಮ್ಮೆ ಮುಚ್ಚಿತೆರೆಯುತ್ತಾಳೆ. ಬಳೆಯ ಅಳತೆ ನೋಡುತ್ತಾಳೆ. "ದ್ಯುತಿ ಬೆಳಗುತಲಿ" ಎಂಬ ಮಾತು ಯಾವೆಲ್ಲಾ ಬಗೆಯಲ್ಲಿ ಇಲ್ಲಿ ಬೆಳೆದಿದೆ ಅಂದರೆ ಆಭರಣಗಳೆಲ್ಲವೂ ಪ್ರಭಾವತಿಯ ತನುಕಾಂತಿಯನ್ನು ಇಮ್ಮಡಿಗೊಳಿಸುತ್ತಿದೆಯಲ್ಲಾ ಎನ್ನುವುದನ್ನು ಸಹೃದಯರಿಗೆ ಹೊಳೆಯಿಸುತ್ತದೆ.
ಅದೇ ಹೊತ್ತಿಗೆ ಗಣಪತಿ ಭಟ್ಟರ ಮಂದ್ರ ಸ್ಥಾಯಿಯ ಕಲ್ಯಾಣಿಯ ಸಂಚಾರ ಆಭರಣಗಳ ದ್ಯುತಿ ಪ್ರಭಾವತಿಯ ದೇಹನ್ನೆಲ್ಲಾ ವ್ಯಾಪಿಸಿ ಸುಧನ್ವನಿಗೆ ಇದನ್ನು ತೋರಲು ಮುಂದಾಗುತ್ತಿದೆಯೋ ಎನ್ನುವಂತಿದೆ. ಸಾಹಿತ್ಯ- ಗಾಯನ- ವಾದನ- ಅಭಿನಯ ಇವೆಲ್ಲಾ ರಸವನ್ನು ತೆಗೆಯಲು ಏಕನಿಷ್ಠೆಯಿಂದ ಮಥಿಸುವ ಕಾರ್ಯ ಇಲ್ಲಿ ಕಾಣಬಹುದು.
ಪ್ರತಿಮದಗಜದಂತೆಗತಿಯನಿಡುತಲಿ
ಆಭರಣಗಳನ್ನು ಧರಿಸಿದ ಪ್ರಭಾವತಿ ಮದಗಜದಂತೆ ಮೆಲ್ಲ ಮೆಲ್ಲನೆ ಬಳ್ಳಿಯ ಬಾಗಿನಂತೆ ತುದಿಗಾಲಿನಲ್ಲಿ ಧೀಂss ಧೀಂss ಎಂಬ ಹೆಜ್ಜೆಯಿರಿಸುತ್ತಾ ಅಲ್ಲೇ ನಾಚುವ ಅಭಿನಯ ಮಂಟಪರದ್ದಾದರೆ; ಮದಗಜದಂತೆ ಹೆಜ್ಜೆ ಇಡುವಾಗ ವಿದ್ವಾನರು " ಮದಗಜದಂತೆ" ಎಂಬ ಪದ್ಯದ ಸಾಹಿತ್ಯ ಖಂಡವನ್ನು ವಿಳಂಬಿತವಾಗಿ ವಿಷಮದಲ್ಲಿ ಹಾಡಿದ ಬಗೆಯಂತೂ ಮನೋಜ್ಞವಾಗಿದೆ. ಇಲ್ಲಿಗೆ ಸಣ್ಣ ನೃತ್ತ " ತೋಂ ತಾ ಕಿಟ ತರ್ಕಿಟಕಿಟತಕತಾಂ × 3 ಸಲ ಮತ್ತು ಮುಕ್ತಾಯದ ತೀರ್ಮಾನ ಸೊಲ್ಕಟ್ಟು.
ಕಸ್ತೂರಿತಿಲಕ ಭ್ರೂಲತೆಯಮಾನಿನಿ
ಎಂಬಲ್ಲಿ ಪ್ರಭಾವತಿ ಕಸ್ತೂರಿ ತಿಲಕ ಇರಿಸುವ ಸಂದರ್ಭದಲ್ಲಿ ಅದನ್ನು ನಾಸಿಕಾಗ್ರಕ್ಕೆ ತಂದು ಆಘ್ರಾಣಿಸುವ ರೀತಿಯಿಂದ ಆಕೆಯ ಶೃಂಗಾರದ ಉತ್ಕಟ ಭಾವಗಳ ಆಂದೋಲನ ನೋಡುಗನಿಗೆ ತೋರುವಂತಿದೆ. ಕಸ್ತೂರಿ ತಿಲಕವನ್ನು ಬೆರಳಿಂದ ಇಟ್ಟಾಗ ಮದ್ದಳೆಯ ಕರ್ಣಕ್ಕೆ ' ಟ'ಕಾರ ಪೂರ್ವಕ ಕಿರಿದಾದ ಬೆರಳಘಾತ ಅಭಿನಯಕ್ಕೆ ಜೀವಧಾತುವಿನಂತಿದೆ. ಮೂಗಿಗೆ ಬಿದ್ದ ಹುಡಿಯನ್ನು ಸರಿಸಿ ಮತ್ತೆ ಕನ್ನಡಿಯಲ್ಲಿ ಮೊಗನೋಡುವ ಸೊಬಗು ನಮ್ಮನ್ನು ಮೈಮರೆಯುವಂತೆ ಮಾಡಿದೆ.
ಪತಿಗೆ ಇದಿರಾಗುತ್ತ ಬಂದಳು
ಎಂಬ ಪದ್ಯದ ಸಂದರ್ಭ ಮಂಟಪರು ಸಿದ್ಧಳಾಗಿ ನಿಂದ ಪ್ರಭಾವತಿಯನ್ನು ಅಭಿನಯಿಸುವಾಗ ಕ್ವಚಿತ್ತಾಗಿ ಬಳಸಿದ ಆಂಗಿಕ (ಕಟಿಯ ಕೆಳಗಿನ ಭಾಗದ ಇಡೀ ಪಾದದ ಅಲ್ಪ ಬಾಗುವಿಕೆಯೊಡಗಿನ ಚಲನೆ) ಅನುಪಮವಾದದ್ದು. ಮತ್ತೆ ಪತಿಗೆ ಇದಿರಾಗುತ್ತ ಬಂದಳೆಂಬುವಲ್ಲಿ ಆತ ಬಂದಾಗ ತಾನು ಹೇಗೆ ಬರಮಾಡಿಕೊಳ್ಳುವೆನೆಂದು ಅಭಿನಯಿಸುವಂತೆಯೋ ಅಥವಾ ಸುಧನ್ವನೇ ಬಂದು ಇದಿರುಗೊಂಡನೆಂಬ ಭ್ರಮೆ ಪಟ್ಟು ಅನಂತರ ಇದು ಭ್ರಮೆಯೆಂದು ತಿಳಿದೊಡನೆಯೇ ಅಲ್ಲೇ ಬಾಗಿ ನಾಚಿ ನೀರಾಗುವ ಸಾತ್ತ್ವತೀ ವೃತ್ತಿ; ತದನಂತರ ಚಿಕ್ಕ ನೃತ್ತಕ್ಕೆ ತೊಡಗಿದ ಬಗೆಯಂತೂ ಅನ್ಯಾದೃಶ.
ಆ ನೃತ್ತದ ಕೊನೆಯಾಗುವುದು ಮೌನವಾದ ಮುಕ್ತಾಯದಲ್ಲಿ. ಮದ್ದಳೆಯ ನುಡಿತಗಳು ಮೆಲ್ಲ ಮೆಲ್ಲವಾಗುತ್ತಾ ಬಂದು ಮೌನದಲ್ಲಿ ಸ್ಥಾಪನೆಯಾಗುವುದು. ನೃತ್ತವೂ ರಸದಲ್ಲಿ ಕರಗುವಂತೆ ಪ್ರಭಾವತಿ ನಾಚಿಕೊಳ್ಳುವ ಅಭಿನಯದಲ್ಲಿ ನಿಲ್ಲುವುದು. ಇದು ಕೊಡುವ ರಸಾವೇಷಕ್ಕೆ ಎಣೆ ಇಲ್ಲ. ಪನ್ನೀರನ್ನು ಸಿಂಚನ ಮಾಡುವುದೋ ಮತ್ತಿನ ಜಾರುಗುಪ್ಪೆಯ ಲಾಸ್ಯಭರಿತ ನೃತ್ತವೋ ಪ್ರತಿಯೊಂದೂ ಕೇಂದ್ರ ರಸವಾದ ಶೃಂಗಾರಕ್ಕೆ ಪೋಷಕವಾಗಿ ಮೂಡಿದೆ. ಇದೊಂದು ಅಪೂರ್ವವಾದ ಗಾನ- ವಾದನ- ನಾಟ್ಯ ತ್ರಿಪುಟಿ. ಮೂವರೂ ಮೂವರ ತಪಸ್ಸಿಗೆ ಫಲರೂಪಿನಂತೆ ಸಿಕ್ಕ ಬಗೆಯಿದು.
ಶೃಂಗಾರರಸದ ಪಾರಮ್ಯವನ್ನು ಅಭಿನಯ- ವಾದನ - ಗಾಯನ ಅಭಿವ್ಯಕ್ತಿಸಿದರೂ ನೋಡುಗನಲ್ಲಿ ಇದು ಕೊಡುವುದು ಆನಂದದಾಯಿ ಉಪಶಾಂತಿ. ಅರಿಷಡ್ವರ್ಗಗಳ ಪರಿಣಾಮವಿಲ್ಲದ ಉಪಶಾಂತಿ. ರಸಗಳ ಅಂತಿಮ ನಿಲ್ದಾಣ ಶಾಂತಿಯೇನು? ಈ ಪ್ರಸ್ತುತಿಯನ್ನು ಅನುಭವಿಸಿದಾಗ ಅಲ್ಲಿನ ಭಾವಗಳು ನಮ್ಮನ್ನು ಕಾಡದೆ ಕೇವಲ ಭಾವಾತೀತ ಆನಂದ ಮಾತ್ರ ಹೃದಯದಲ್ಲಿ ನಲಿದಾಡಿದಂತಾಗುತ್ತದಲ್ಲಾ?
ರಸದ ನೆಲೆ ಉಪಶಾಂತಿಯೇನು?
ಇಲ್ಲಿ ಬಳಸಿದ ತಾಳಗಳು ನಿಧಾನ ತ್ರಿವುಡೆ, ಏಕ ಮತ್ತು ತಿತ್ತಿತ್ತೈ. ಬಳಸಿದ ಸಮಯ ಎಂಟು ನಿಮಿಷ ನಲವತ್ತು ಸೆಕೆಂಡುಗಳು. ಪಟ್ಟ ಸಂತೋಷ ಅಪಾರ.
ವಿಡಿಯೋ ಮಾಡಿದವರಿಗೆ ಅನಂತಾನಂತ ಧನ್ಯವಾದ. ಯಕ್ಷಗಾನ ಮಾಡಿಸಿದ ಆಯೋಜಕರಿಗೆ ವಂದನೆ. ಕಲಾವಿದರಿಗೆ ಪ್ರಣಾಮ.
-ಕೃಷ್ಣಪ್ರಕಾಶ ಉಳಿತ್ತಾಯ
ಈಶಾವಾಸ್ಯ, ಸದಾಶಿವ ದೇವಸ್ಥಾನದ ಬಳಿ, ಪೆರ್ಮಂಕಿ, ಮಂಗಳೂರು.574145.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ವಿಮರ್ಶೆ