ಯಕ್ಷಗಾನ ಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -5 by ಸುರೇಂದ್ರ ಪಣಿಯೂರ್
ಯಕ್ಷಗಾನ ಕಲೆ ಈ ರೀತಿಯಾಗಿ ಆರಾಧನಾ ಕಲೆಯಾಗಿದ್ದೂ ಮನೋರಂಜನಾ ಕಲೆಯಾಗಿ ಗುರುತಿಸಿಕೊಂಡದ್ದು ತನ್ನ ಅತಿಯಾದ ರಂಜನಾಶೀಲ ಗುಣದಿಂದ ಹಾಗೂ ಹಳ್ಳಿಗರಿಗೆ ಅನ್ಯತ್ರ ಅಲಭ್ಯವಾದ ರಂಜನೆ ಯಕ್ಷಗಾನದಿಂದ ಸಿಕ್ಕಿರುವುದು; ಜೊತೆಗೆ ಯಕ್ಷಗಾನ ವೀಕ್ಷಣೆಯೇ ಒಂದು ಆರಾಧನಾ ಮಾರ್ಗ ಎಂಬ ಮನೋಭಾವದ ಕಾರಣದಿಂದಾಗಿ.
ಯಕ್ಷಗಾನ ಕಲೆಯು ಮೇಳದ ಪರಿಕಲ್ಪನೆಯಲ್ಲಿ ದೇವಸ್ಥಾನಗಳಿಂದ ಹೊರಟು ಊರು ಸಂಚಾರ ಮಾಡುತ್ತಾ ಕ್ಷೇತ್ರ ಪ್ರಚಾರ, ಧರ್ಮ ಪ್ರಚಾರ, ಸಂಸ್ಕೃತಿಯ ಪ್ರಚಾರದ ಜೊತೆಗೆ ಜನರಲ್ಲಿ ಭಕ್ತಿ ಹಾಗೂ ರಂಜನೆಯ ಭಾವವನ್ನೂ ಮೂಡಿಸಿತು. ಈ ದೆಸೆಯಲ್ಲಿ ಜನರು ತಮ್ಮ ಆರ್ಥಿಕ ಅನುಕೂಲಕ್ಕೆ ತಕ್ಕಂತೆ ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ, ದೇವರ ಪ್ರೀತ್ಯರ್ಥವಾಗಿ, ಯಕ್ಷಗಾನ ಬಯಲಾಟವನ್ನು ಹರಕೆ ರೂಪದಲ್ಲಿ ಆಡಿಸುವ ಕ್ರಮವನ್ನು ಆರಂಭಿಸಿದರು.
ಇನ್ನು ಕೆಲವರು ವರ್ಷದಲ್ಲಿ ಇಂತಹಾ ಕ್ಷೇತ್ರದ ಮೇಳದ ಇಂತಿಷ್ಟು ಯಕ್ಷಗಾನ ಬಯಲಾಟವನ್ನು ಈಕ್ಷಿಸುವುದಾಗಿ ಹರಕೆ ಹೊತ್ತರು. ಇದು ಯಕ್ಷಗಾನದ ಬೆಳವಣಿಗೆಯ ಸುದೀರ್ಘ ಕಾಲದಲ್ಲಿ ನಡೆದು ಬಂದ ಆಚರಣೆಯಾಯಿತು.
ಈ ರೀತಿಯಲ್ಲಿ ಆರಂಭದಲ್ಲಿ ಕೇವಲ ದೇವರ ಅರ್ಚನೆಗೆ ಸೀಮಿತವಾಗಿದ್ದ ಕಲೆ ಒಂದಷ್ಟು ಕಲಾವಿದರ ಸಂಘಟನೆ ಹಾಗೂ ವ್ಯವಸ್ಥೆಯೊಂದಿಗೆ ಮೇಳವಾಗಿ ಪರಿವರ್ತನೆಗೊಂಡ ಬೆಳವಣಿಗೆಯು, ಯಕ್ಷಗಾನ ಒಂದು ಉದ್ಯಮವಾಗಿ ಬೆಳೆಯಲು ಕಾರಣವಾಯಿತು. ಈ ರೀತಿಯಲ್ಲಿ ಉತ್ಪನ್ನಗೊಂಡ ಮೇಳಗಳಲ್ಲಿ ಕಲಾವಿದರ ಅಗತ್ಯ ಕಂಡು ಬಂತು. ಆಗ ಈ ಕಲೆಯಲ್ಲಿ ತೊಡಗಿಸಿಕೊಂಡ ಕಲಾವಿದರು ಯಾರು?
ಯಕ್ಷಗಾನ ಕಲಾವಿದರು
ಯಕ್ಷಗಾನ ಕಲಾವಿದ ರೂಪುಗೊಳ್ಳಲು ಇರಬೇಕಾದ ಅರ್ಹತೆ ಏನು? ಕಲಿಕೆ ಹೇಗೆ?
ಕಲೆ ಅನ್ನುವುದು ಮನುಷ್ಯನಲ್ಲಿ ಹೇಗೆ ಆವಿರ್ಭವಿಸುತ್ತದೆ ಅನ್ನಲು ಯಾವುದೇ ಮಾನದಂಡವಿಲ್ಲ. ಪ್ರತಿಯೊಬ್ಬರಲ್ಲೂ ಅಂತರ್ಗತವಾಗಿದ್ದ ಸುಪ್ತ ಪ್ರತಿಭೆಗೆ ಸೂಕ್ತ ಮಾರ್ಗದರ್ಶನ ಹಾಗೂ ವೇದಿಕೆ ದೊರೆತಾಗ ತಾನಾಗೇ ಪ್ರಕಟಗೊಳ್ಳುತ್ತದೆ.
ಮನುಷ್ಯ ಪ್ರಕೃತಿಯೊಂದಿಗೆ ಬೆಳೆದು ಬಂದವನು. ಜೊತೆಗೆ ಸಾಧಾರಣವಾಗಿ ಪ್ರಕೃತಿಯಿಂದಲೇ ತನ್ನೆಲ್ಲ ಅಭಿರುಚಿಗಳನ್ನು ರೂಢಿಸಿಕೊಂಡವನು. ಪ್ರಾಣಿಗಳ ಚಲನ ವಲನ, ಪ್ರಕೃತಿಯಲ್ಲಿರುವ ಬಣ್ಣಗಳು, ಪ್ರಾಣಿಪಕ್ಷಿಗಳ ಕೂಗು, ಗಾಳಿಯ ಮೊರೆತ, ಬೆಂಕಿಯ ಭೀಕರತೆ, ರೌದ್ರತೆ, ನೀರಿನ ಲಾಲಿತ್ಯ - ಇವೆಲ್ಲ ಪೃಕೃತಿಯ ವ್ಯವಹಾರಗಳು ಕಲೆಯ ಬೆಳವಣಿಗೆಗೆ ಪ್ರೇರಣೆ.
ಇದೇ ರೀತಿಯಲ್ಲಿ ರೈತಾಪಿ ಜನರು ತಮ್ಮ ದೈನಂದಿನ ಬೇಸಾಯದ ಗೈಮೆಗಳನ್ನು ನಿರ್ವಹಿಸುವ ಹೊತ್ತಿನಲ್ಲಿ, ಆಯಾಸ ಪರಿಹಾರಕ್ಕಾಗಿ ಹಾಡುವ ಪದಗಳು, ಪಾಡ್ದನಗಳು, ಕುಣಿವ ನೃತ್ಯಗಳು, ಸುಗ್ಗಿ ಕುಣಿತಗಳು, ಜಾನಪದವೆನಿಸಿಕೊಂಡವು. ಅದೇ ರೀತಿಯಲ್ಲಿ ಬೇಸಾಯದ ಕಸುಬು ಮುಗಿದ ಮೇಲೆ ತನ್ನ ವಿರಾಮದ ಕಾಲದಲ್ಲಿ ಅನುಭವಿಸಿ, ಅಭಿವ್ಯಕ್ತಿಗಾಗಿ ಆಯ್ದುಕೊಂಡ ಕಲೆ ಯಕ್ಷಗಾನ.
ಯಕ್ಷಗಾನ ಕಲೆಗೆ ನಿರ್ದಿಷ್ಟವಾದ ಸಂಗೀತವಿತ್ತು. ಆಹಾರ್ಯವನ್ನು ತನ್ನ ಕಲ್ಪನೆಗೆ ಅನುಸಾರವಾಗಿ ರೂಢಿಸಿಕೊಂಡು, ಅಭಿನಯಗಳನ್ನು ಭಾವಕ್ಕೆ ಅನುಗುಣವಾಗಿ ಮೇಳೈಸಿ, ವಾಚಿಕ ಹಾಗೂ ಕುಣಿತವನ್ನು ಅಭ್ಯಾಸ ಮಾಡಿ ಮೂಲತಃ ರಂಗಕ್ಕೆ ಅಳವಡಿಸಿದವರು ಈ ರೈತಾಪಿ ಜನರೇ. ಅವರು ಈ ಕುರಿತು ಆಳವಾಗಿ ಸತತವಾಗಿ ಅಭ್ಯಾಸ ಮಾಡಿಯೇ ಕರಗತ ಮಾಡಿಕೊಂಡಿದ್ದರು. ಆ ಕಾಲದಲ್ಲಿ ಇದನ್ನು ಐಗಳ ಮಠದಲ್ಲಿ ಕಲಿಯುತ್ತಿದ್ದರು ಅನ್ನುವುದು ಜನಪದೀಯ ದಾಖಲೆ.
ಯಕ್ಷಗಾನ ಕಲೆಯ ಪ್ರತಿಯೊಂದು ವಿಭಾಗವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ತಿಳಿದು ಬರುವ ಅಂಶ ಏನೆಂದರೆ, ಅಲ್ಲಿ ಸೂತ್ರಬದ್ದ ವಾದ ಶಾಸ್ತ್ರೀಯತೆ ಇದೆ. ಉದಾಹರಣೆಗೆ, ಸಂಗೀತದಲ್ಲಿ ತಾಳ ಲಯ ರಾಗ ಇದೆ. ಮುಖವರ್ಣಿಕೆಯಲ್ಲಿ ಬಳಸುವ ಬಣ್ಣ ಹಾಗೂ ರೇಖೆಗಳಲ್ಲಿ, ವೇಷಭೂಷಣಗಳಲ್ಲಿ, ಕುಣಿತದಲ್ಲಿ ನಿರ್ದಿಷ್ಟತೆ ಹಾಗೂ ನಿಖರತೆ ಇದೆ. ಈ ಎಲ್ಲ ಅಂಗಗಳಲ್ಲಿ ಏನಾದರೂ ಒಂದು ವ್ಯತ್ಯಾಸ ಅದಲ್ಲಿ ಅದು ಯಕ್ಷಗಾನ ಅನಿಸುವುದಿಲ್ಲ. ಅದೇ ಸಂಪ್ರದಾಯ ಅಥವಾ ಪರಂಪರೆ.
ಈ ಪರಂಪರೆಯನ್ನು ಅನೂಚಾನವಾಗಿ ಪಾಲಿಸಿಕೊಂಡು ಬಂದಿದ್ದರು ನಮ್ಮ ಪೂರ್ವಜರು. ಯಾಕೆಂದರೆ ಅದು ಅವರಿಗೆ ಮೂಲತಃ ಆರಾಧನೆಯಾಗಿತ್ತು. ಮತ್ತೆ ಮನರಂಜನೆಯ ಮಾಧ್ಯಮವಾಗಿತ್ತು. (ಸಶೇಷ)
ಲೇಖನ: ಸುರೇಂದ್ರ ಪಣಿಯೂರ್
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಲೇಖನ