ಪಣಿಯೂರು ಯಕ್ಷಲೋಕ-4: ಆರಾಧನಾ ಕಲೆಯು ಮನರಂಜನಾ ಕಲೆಯಾದ ಬಗೆ


ಸುರೇಂದ್ರ ಪಣಿಯೂರು ಲೇಖನ ಸರಣಿ: ಯಕ್ಷಗಾನಕಲೆ- ಪ್ರೇಕ್ಷಕವರ್ಗ- ದೃಷ್ಟಿಕೋನ-4

ಯಕ್ಷಗಾನ ಕಲೆಯು ಆರಾಧನಾಕಲೆಯಾಗುವುದರ, ಜೊತೆಗೆ ಮನೋರಂಜನಾ ಕಲೆಯಾಗಿಯೂ ಗುರುತಿಸಿಕೊಂಡಿತು. ಕರಾವಳಿ ಪ್ರಾಂತ್ಯದಲ್ಲಿ ದೈವ, ನಾಗ ಹಾಗೂ ದೇವರುಗಳ ಆರಾಧನೆಯಲ್ಲಿ ನರ್ತನ ಸೇವೆಯನ್ನು ಕಾಣಬಹುದು. ಭೂತಾರಾದನೆಯಲ್ಲಿ ಕೋಲ, ನೇಮ, ನಾಗಾರಾಧನೆಯಲ್ಲಿ ದರ್ಶನ ಸೇವೆ, ನಾಗಮಂಡಲ, ವೈದ್ಯರ ಡಕ್ಕೆ ಕುಣಿತ ಹಾಗೂ ದೇವರಿಗೆ ಆಯನ, ರಥೋತ್ಸವ, ದರ್ಶನ ಸುತ್ತುಬಲಿ ಇತ್ಯಾದಿ ಸೇವೆಗಳು ಯಥೇಚ್ಛವಾಗಿದ್ದವು.

ಇವುಗಳು ಅಲ್ಲದೆ ಮಾದಿರ, ಕಂಗೀಲು, ಆಟಿಕಳೆಂಜ, ಕಾಲೆಕೋಲ, ಅನೇಕ ರೀತಿಯ ಭೂತಗಳ ಕೋಲ ಮುಂತಾದವುಗಳು ಸಂಪ್ರದಾಯಪೂರ್ಣ ಆಚರಣೆಯ ಜೊತೆಗೆ ಭಕ್ತ ಜನರ ಮನಸ್ಸಿಗೆ ಭಕ್ತಿಪೂರಿತ ರಂಜನೆಯ ಮಾಧ್ಯಮವೂ ಆಗಿದ್ದವು.

ಈ ಎಲ್ಲ ಆಚರಣೆಗಳು ಧಾರ್ಮಿಕವಾದ ನಂಬಿಕೆಗಳನ್ನು ಒಳಗೊಂಡಿದ್ದವು. ಆದರೆ ಇವುಗಳ ಪ್ರದರ್ಶನಾವಕಾಶ ಮಾತ್ರ ಸೀಮಿತವಾದ ಅವಧಿಗೆ ಒಳಪಟ್ಟಿತ್ತು. ಉದಾಹರಣೆಗೆ ದೇವರಿಗೆ ರಥೋತ್ಸವ, ಭೂತಗಳಿಗೆ ಕೋಲ, ನೇಮ ಇತ್ಯಾದಿ... ವರ್ಷಕ್ಕೆ ಒಂದೇ ಬಾರಿಯಾದರೆ, ನಾಗಮಂಡಲ ಸೇವೆಯಂತೂ ಅಪರೂಪವೇ ಆಗಿತ್ತು.

ಇದರ ನಡುವೆ ಯಕ್ಷಗಾನ ಪ್ರದರ್ಶನವು ವಿಪುಲವಾಗಿ ಹಿಗ್ಗಿಕೊಂಡಿತು. ಇದಕ್ಕೆ ಕಾರಣ ಅದು ಕೇವಲ ಆರಾಧನೆಗೆ ಮಾತ್ರ ಸೀಮಿತಗೊಳ್ಳದೆ ರಂಜನೆಯನ್ನೂ ಒಳಗೊಂಡಿತ್ತು. ಇದರಲ್ಲಿ ಆಹಾರ್ಯ, ಆಂಗಿಕ, ವಾಚಿಕ, ಸಾತ್ವಿಕ ಅಭಿನಯವನ್ನು ಒಳಗೊಂಡ ನವರಸಭರಿತ ಕಥಾನಕಗಳನ್ನು ಒಳಗೊಂಡು ಜನ ಸಾಮಾನ್ಯರಿಗೆ ರಮ್ಯಾದ್ಭುತ ಅಲೌಕಿಕ ಲೋಕವನ್ನು ಸಾದೃಶ್ಯಗೊಳಿಸುವ ಸಾಮರ್ಥ್ಯವಿತ್ತು.

ತಾವು ಕಥೆಯಲ್ಲಿ ಕೇಳಿದ ಪುರಾಣ ಪುಣ್ಯಪುರುಷರ ಯಥಾವತ್ ರೂಪವನ್ನು ರಂಗದಲ್ಲಿ ಕಂಡು ಧನ್ಯತೆಯನ್ನು ಹೊಂದುವ ಜೊತೆಗೆ ತಾವೂ ರಂಗದಲ್ಲಿ ಅಭಿವ್ಯಕ್ತಿ ಹೊಂದುವ ಅವಕಾಶ ಜನರಿಗೆ. ಇವೆಲ್ಲ ಗುಣಗಳು ಯಕ್ಷಗಾನ ಕಲೆಯು ಈ ರೀತಿಯಲ್ಲಿ ಪ್ರಧಾನ ಮನೋರಂಜನಾ ಮಾಧ್ಯಮವಾಗಿ ಬೆಳೆಯಲು ಕಾರಣವೂ ಆಗಿದೆ.

ಭೌಗೋಳಿಕವಾಗಿ ಕರಾವಳಿಯ ಪ್ರಾಂತ್ಯವನ್ನು ನೋಡುವಾಗ, ವರ್ಷದಲ್ಲಿ ಮೂರನೆಯ ಒಂದು ಭಾಗ ಜಡಿ ಮಳೆಯಲ್ಲಿ ಕಳೆದುಹೋಗುತ್ತಿತ್ತು. ಆ ಸಮಯದಲ್ಲಿ ಬೇಸಾಯದ ಕೆಲಸವೇ ಪ್ರಧಾನವಾಗಿತ್ತು. ಮಿಕ್ಕುಳಿದ ದಿನಗಳಲ್ಲಿ ಸಾಂಸ್ಕೃತಿಕವಾಗಿ ಕಂಪನಿ ನಾಟಕ, ಸಿನೆಮಾ ಮಾಧ್ಯಮಗಳು 19ನೆ ಶತಮಾನದ ಆದಿಯಲ್ಲಿ ಈ ಪ್ರಾಂತ್ಯದಲ್ಲಿ ಕಾಲಿಡಲೇ ಇಲ್ಲ.

ಇದಕ್ಕೂ ಕಾರಣ ಇಲ್ಲಿಯ ಆರ್ಥಿಕ ಸಂಪನ್ಮೂಲತೆ. ಕೇವಲ ಭತ್ತ, ಅಡಿಕೆ ಹಾಗೂ ತೆಂಗು ಬೆಳೆಯುತ್ತಾ ಇದ್ದ ಆ ಸಮಯದಲ್ಲಿ ಅದು ಆರ್ಥಿಕ ಬೆಳೆಯಾಗಿ ಗುರುತಿಸಿಕೊಂಡಿರಲಿಲ್ಲ. ಅಲ್ಲದೆ ಉಳಿದ ರೀತಿಯ ಆರ್ಥಿಕ ಬೆಳೆಯನ್ನು ಬೆಳೆಯಲು ಬೇಕಾದ ಫಲವತ್ತಾದ ಭೂಮಿಯೂ ನಮ್ಮದಲ್ಲ. ಇದಕ್ಕೆ ಕಾರಣ ಅತೀವರ್ಷದಿಂದಾಗುವ ನೆರೆಯಿಂದ ಭೂಮಿಯ  ಸಾರವೆಲ್ಲ ಕೊಚ್ಚಿಕೊಂಡು ಸವಕಳಿಯಾಗಿ ಭೂಮಿ ಬರಡಾಗುತ್ತಿತ್ತು.

ಜನರು ಕೇವಲ  ತಮ್ಮ ದೈನಂದಿನ ಆವಶ್ಯಕತೆಗಾಗಿ ಭತ್ತ, ತೆಂಗು, ಅಡಿಕೆ  ಬೆಳೆಯುತಿದ್ದರು. ಜೊತೆಗೆ ಮನೆ ಖರ್ಚಿಗೆ ಆಗುವ ಹಾಗಿನ ಒಂದಷ್ಟು ಧವಸ ಧಾನ್ಯಗಳನ್ನು ಬೆಳೆಯುತ್ತಿದ್ದರು. ಈ ಎಲ್ಲ ಕಾರಣದಿಂದ ಆರ್ಥಿಕ ಸಂಪಾದನೆ ಸಹಾಯ ನಿರೀಕ್ಷೆಯ ಸಿನೆಮಾ ಹಾಗೂ ನಾಟಕ ಕಂಪನಿಗಳು ಕೇವಲ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ನೆಲೆ ಕಂಡಿದ್ದವು. ತತ್ಫಲವಾಗಿ ಯಕ್ಷಗಾನವು ಅತೀ ಕಡಿಮೆ ಖರ್ಚಿನಲ್ಲಿ ರಮ್ಯವಾದ ಮನೋರಂಜನೆಯುಕ್ತ ಕಲೆಯಾಗಿ ಗುರುತಿಸಿಕೊಳ್ಳಲು ಸಹಕಾರಿಯಾಯ್ತು. (ಸಶೇಷ)

ಲೇಖನ: ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು