![]() |
ವಿಶ್ವಾಮಿತ್ರ-ಮೇನಕೆ ಪ್ರಸಂಗದ ಪ್ರಾತಿನಿಧಿಕ ದೃಶ್ಯ |
(ಪುರಾಣ ಅರಿಯಿರಿ ಸರಣಿಯಲ್ಲಿ ದಾಮೋದರ ಶೆಟ್ಟಿ, ಇರುವೈಲ್ ಲೇಖನ)
ವಿಶ್ವಾಮಿತ್ರನಲ್ಲಿ ಶುಕ್ಲ ಯಜುರ್ವೇದವನ್ನು ಸಾಂಗವಾಗಿ ಅಧ್ಯಯನ ಮಾಡಿದ ಒಬ್ಬ ಋಷಿ ಗಾಲವ. ಶಿಕ್ಷಣ ಮುಗಿಸಿ ಹೊರಡುವಾಗ, ನಾನು ಏನು ಗುರುದಕ್ಷಿಣೆ ಕೊಡಲಿ ಎಂದಾಗ ವಿಶ್ವಾಮಿತ್ರನು, ನಿನ್ನ ಸೇವೆಯಿಂದ ನಾನು ತೃಪ್ತನಾಗಿದ್ದೇನೆ, ನನಗೆ ಏನೂ ಬೇಡ ಅಂದರೂ ಕೇಳದೆ ಗಾಲವ ಮತ್ತೆ ಮತ್ತೆ ಒತ್ತಾಯಿಸಿದನು. ಆಗ "ಹಾಗಾದರೆ ಮೈಯೆಲ್ಲ ಬೆಳ್ಳಗೆ ಒಂದು ಕಿವಿ ಮಾತ್ರ ಕಪ್ಪಾಗಿರುವ 800 ಕುದುರೆಗಳನ್ನು" ತಂದೊಪ್ಪಿಸೆಂದನು.
ಕುದುರೆಗಳನ್ನು ಸಂಪಾದಿಸಲು ಪಡಬಾರದ ಕಷ್ಟ ಅನುಭವಿಸಿದ ಗಾಲವನು ವಿಷ್ಣುವನ್ನು ತಪಸ್ಸಿನಿಂದ ಮೆಚ್ಚಿಸಿದಾಗ, ಗರುಡನನ್ನು ಇವನ ಬಳಿ ಕಳುಹಿಸಿ ಇಷ್ಟಾರ್ಥ ಪೂರೈಸುವಂತೆ ತಿಳಿಸಿದನು.
ಗರುಡನು ಅವನ ಇಷ್ಟಾರ್ಥವನ್ನು ಕೇಳಿ ತಿಳಿದು, ತನ್ನ ಮಿತ್ರನೂ ಪ್ರತಿಷ್ಠಾನಪುರದ ರಾಜನೂ ಆದ ಯಯಾತಿಯಲ್ಲಿಗೆ ಕರೆದೊಯ್ದನು. ಯಯಾತಿಯು ತನ್ನ ಸುಗುಣಿ-ಸುಂದರಿ ಪುತ್ರಿ ಮಾಧವಿಯನ್ನು ಗಾಲವನಿಗೊಪ್ಪಿಸಿ, ಇವಳನ್ನು ಯಾವ ರಾಜನಿಗಾದರೂ ಕೊಟ್ಟು ಕುದುರೆಗಳನ್ನು ಸಂಪಾದಿಸುವಂತೆ ತಿಳಿಸಿ ಕಳುಹಿದನು.
ಗಾಲವನು ಇಕ್ಷ್ವಾಕು ರಾಜನಲ್ಲಿಗೆ ಹೋಗಿ ಮಾಧವಿಯನ್ನೊಪ್ಪಿಸಿ, 200 ಕುದುರೆಗಳನ್ನು ಪಡೆದನು. ಇಕ್ಷ್ವಾಕುವಿಗೆ ಮಾಧವಿಯಲ್ಲಿ "ವಸುಮಾನ" ಎಂಬ ಪುತ್ರನಾದ ಮೇಲೆ, ಮಾಧವಿಯನ್ನು ಕಾಶೀರಾಜನಾದ ದಿವೋದಾಸನಿಗೆ ಕೊಟ್ಟು 200 ಕುದುರೆ ಪಡೆದನು. ದಿವೋದಾಸನಿಂದ ಮಾಧವಿಯಲ್ಲಿ "ಪ್ರತರ್ದನ" ಎಂಬ ಮಗನಾದ ಬಳಿಕ ಮಾಧವಿಯನ್ನು ಕರೆದೊಯ್ದು ಭೋಜರಾಜನಾದ ಉಶೀನರನಿಗೆ ಕೊಟ್ಟು 200 ಕುದುರೆಗಳನ್ನು ಪಡೆದನು. ಉಶೀನರನಿಗೆ ಮಾಧವಿಯಲ್ಲಿ "ಶಿಬಿ"ಎಂಬ ಮಗನು ಜನಿಸಿದ ನಂತರ 600 ಕುದುರೆಗಳನ್ನುಕೊಟ್ಟು, 200 ಕುದುರೆಗಳಿಗೆ ಬದಲಾಗಿ ಮಾಧವಿಯನ್ನೇ ವಿಶ್ವಾಮಿತ್ರನಿಗೊಪ್ಪಿಸಿದನು.
ವಿಶ್ವಾಮಿತ್ರನು ಮಾಧವಿಯಲ್ಲಿ "ಅಷ್ಟಕ"ನೆಂಬ ಮಗನನ್ನು ಪಡೆದನು. ಈ ಗಾಲವ ಮುನಿಯ ಪುತ್ರ ಶೃಂಗವಂತ. ಕುಣಿಗಾರ್ಗ್ಯ ಎಂಬ ಋಷಿಗೆ "ಸುಲಭಾ ಮೈತ್ರೇಯೀ" ಎಂಬ ಮಗಳಿದ್ದಳು. ಇವಳು ವಿವಾಹವಾಗಲೊಲ್ಲದೆ ಬ್ರಹ್ಮಚಾರಿಣಿಯಾಗಿ ತಪಸ್ಸು ಮಾಡುತ್ತಾ ವೃದ್ಧಳಾದಳು.
ನಾರದರೊಮ್ಮೆ ಇವಳನ್ನು ಕಂಡು "ಸ್ತ್ರೀಗೆ ವಿವಾಹ ಸಂಸ್ಕಾರವಾಗದೆ ತಪಸ್ವಿನಿಯಾದರೂ ಸದ್ಗತಿ ದೊರೆಯಲಾರದು" ಎಂದಾಗ ತನ್ನನ್ನು ವಿವಾಹವಾಗುವವನಿಗೆ ತನ್ನ ಅರ್ಧತಪಸ್ಸಿನ ಫಲವನ್ನು, ಹೇರಳ ಐಶ್ವರ್ಯವನ್ನು ಕೊಡುವುದಾಗಿ ಹೇಳಿ ಬೇಡಿಕೊಂಡರೂ ಯಾರೂ ವಿವಾಹವಾಗಲು ಮುಂದೆ ಬರಲಿಲ್ಲ.
ಆಗ ಶೃಂಗವಂತನು ಒಪ್ಪಿ ಮದುವೆಯಾದನು. ಮದುವೆಯ ರಾತ್ರಿ ತನ್ನ ತಪಶ್ಶಕ್ತಿಯಿಂದ ಅತಿಸುಂದರಿಯಾದ ತರುಣಿಯಾಗಿ ಪತಿಯೊಂದಿಗೆ ಸುಖಿಸಿ ನಂತರ ದೇಹತ್ಯಾಗ ಮಾಡಿದಳು.
ಮತ್ತೊಂದು: ವಿಶ್ವಾಮಿತ್ರನಿಗೊಮ್ಮೆ ದೀರ್ಘಕ್ಷಾಮ ಕಾಲದಲ್ಲಿ ಪತ್ನೀ-ಪುತ್ರರನ್ನು ರಕ್ಷಿಸಲು ಕಷ್ಟವಾಗಿ ಅವರನ್ನು ಬಿಟ್ಟು ತಪಸ್ಸಿಗೆ ಹೋದಾಗ ಅವನ ಪತ್ನಿ ಕೌಶಿಕಿಯು ಮಗನ ಕೊರಳಿಗೆ ದರ್ಭೆಯ ಹಗ್ಗ ಹಾಕಿ ಮಾರಲು ಹೊರಟಾಗ ಹರಿಶ್ಚಂದ್ರ ರಾಜನ ತಂದೆ ಸತ್ಯವ್ರತನು (ತ್ರಿಶಂಕು) ಇವರನ್ನು ರಕ್ಷಿಸಿ ಸಲಹಿದನು. ಕೊರಳಿಗೆ (ಗಲ) ಹಗ್ಗ ಬಿಗಿಸಿಕೊಂಡಿದ್ದರಿಂದ ಇವನಿಗೆ " ಗಾಲವ " ಎಂದು ಹೆಸರಾಯಿತು.
ಸಂ: ದಾಮೋದರ ಶೆಟ್ಟಿ, ಇರುವೈಲ್
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಪುರಾಣ