ಪ್ರಾಗ್ಜೋತಿಷಪುರದ ದಾನವ ನರಕಾಸುರನಿಗೆ ದೀಪಾವಳಿ ಸಂಬಂಧ

ಸ್ವರ್ಗಕ್ಕೆ ಮುತ್ತಿಗೆಹಾಕಿದ ನರಕಾಸುರ (ಪ್ರಾತಿನಿಧಿಕ ಚಿತ್ರ)
ಪ್ರಾಗ್ಜೋತಿಷಪುರದರಸು ನರಕಾಸುರ ಒಬ್ಬ ದಾನವ. ಮಹಾವಿಷ್ಣುವು ವರಾಹಾವತಾರ ಎತ್ತಿದಾಗ ಭೂದೇವಿಯಿಂದ ಜನಿಸಿದವನು. ಭೂಮಿಪುತ್ರನಾದುದರಿಂದ ಭೌಮಾಸುರ ಎಂಬ ಹೆಸರೂ ಇದೆ.

ಭೂದೇವಿಯು ವರಾಹಸ್ವಾಮಿಯನ್ನು ಪ್ರಾರ್ಥಿಸಿದಾಗ ಸ್ವಾಮಿಯು ತನ್ನ ದಾಡೆಯೊಂದನ್ನು ಕಿತ್ತು ಆಕೆಗೆ ನೀಡಿ ಇದು "ವೈಷ್ಣವಾಸ್ತ್ರ" ಎಂದು ಹೇಳಿದ್ದನು.

ನರಕಾಸುರನು ಮುಂದೆ ರಾಜನಾಗಿ ಲೋಕಕಂಟಕನಾಗಿ, ಅದಿತಿಯ ಕರ್ಣಾಭರಣ, ವರುಣನ ಶ್ವೇತಚ್ಛತ್ರ, ಮೇರು ಪರ್ವತದ ಮಹಾಮಣಿ ಎಂಬ ಶಿಖರ, ವೈಜಯಂತಿ ಮಾಲೆಗಳನ್ನು ಅಪಹರಿಸಿದನು. ಇವನ ದುಷ್ಕೃತ್ಯಗಳನ್ನು ಸಹಿಸಲಾಗದೆ ದೇವೇಂದ್ರನು ಕೃಷ್ಣನಲ್ಲಿ ದೂರಿದನು. ಶ್ರೀಕೃಷ್ಣನು ಭೂದೇವಿಯ ಅಂಶಸಂಭೂತೆಯಾದ ತನ್ನ ಪಟ್ಟದರಸಿ ಸತ್ಯಭಾಮೆಯೊಂದಿಗೆ ಪ್ರಾಗ್ಜೋತಿಷಪುರಕ್ಕೆ ಬಂದನು.

ನರಕನ ರಾಜ್ಯವನ್ನು ನಾಲ್ಕು ದಿಕ್ಕುಗಳಲ್ಲಿ ಹಯಗ್ರೀವ, ನಿಕುಂಭ, ಪಂಚಜನ ಮತ್ತು ಮುರಾಸುರ ಎಂಬವರು ಕಾಯುತ್ತಿದ್ದರು. ಶ್ರೀಕೃಷ್ಣನು ಅವರನ್ನೆಲ್ಲ ಸಂಹರಿಸಿ, ಪಟ್ಟಣ ರಕ್ಷಿಸುತ್ತಿದ್ದ ಗಿರಿದುರ್ಗ, ಜಲದುರ್ಗ, ವಾಯುದುರ್ಗ, ಅಗ್ನಿದುರ್ಗ ಮತ್ತು ಶಸ್ತ್ರದುರ್ಗಗಳನ್ನು ಭೇದಿಸಿ ಪಟ್ಟಣದೊಳಗೆ ನುಗ್ಗಿದನು.

ಪಟ್ಟಣವು ಮುರಾಸುರನ ಮಾಯಾವಿದ್ಯೆಯಿಂದ ರಚಿತವಾಗಿತ್ತು. ಸಮೀಪಿಸಿದವರನ್ನು ಸಾವಿರಾರು ಪಾಶಗಳು ಬಲವಾಗಿ ಸುತ್ತಿಕೊಂಡು ಕೆಡವಿ ಕೊಲ್ಲುತ್ತಿದ್ದವು. ಕೃಷ್ಣನು ಆ ಪಾಶಗಳನ್ನೆಲ್ಲ ತನ್ನ ಖಡ್ಗದಿಂದ ಕತ್ತರಿಸಿ ನಿಷ್ಕ್ರಿಯಗೊಳಿಸಿದನು. ಪಾಂಚಜನ್ಯದ ಧ್ವನಿಗೆ ಅಲ್ಲಿದ್ದ ರಕ್ಷಣಾಯಂತ್ರಗಳ ಕಟ್ಟುಗಳು ಸಡಿಲಗೊಂಡು ನಿರುಪಯುಕ್ತವಾದವು.

ಶಂಖಧ್ವನಿಗೆ ಜಲಶಯ್ಯೆಯಲ್ಲಿ ಮಲಗಿದ್ದ ಮುರಾಸುರನು ಎಚ್ಚರಗೊಂಡು ಕೃಷ್ಣನನ್ನೆದುರಿಸಿ ಅವನ ಚಕ್ರಾಯುಧಕ್ಕೆ ಬಲಿಯಾದನು. ನಂತರ ನರಕನ ಗಜ-ಅಶ್ವಸೈನ್ಯವನ್ನು ನಾಶಮಾಡಿದಾಗ ನರಕಾಸುರನೇ ಯುದ್ಧಕ್ಕೆ ಬಂದನು. ಈರ್ವರ ನಡುವೆ ಘೋರ ಕದನವೇರ್ಪಟ್ಟಿತು.  ನರಕನಿಗೆ ತಂದೆ-ತಾಯಿಯರು ಜೊತೆಯಾಗಿ ಬಂದಾಗ ಮರಣ ಎಂಬ ವರಬಲವಿರುತ್ತದೆ. ಅದರಂತೆ ಕೃಷ್ಣ-ಸತ್ಯಭಾಮೆಯರು ಜೊತೆಯಾಗಿ ಬಂದು, ಅಂತಿಮವಾಗಿ ಚಕ್ರಾಯುಧದಿಂದ ಕತ್ತರಿಸಿಲ್ಪಟ್ಟು ನರಕಾಸುರನು ಹತನಾದನು.

ನರಕಾಸುರನ ಸೆರೆಯಲ್ಲಿದ್ದ 16100 ಜನ ರಾಜಕುಮಾರಿಯರನ್ನು ಬಿಡುಗಡೆಗೊಳಿಸಿ ಅವರಿಚ್ಛೆಯಂತೆ ಅವರನ್ನೆಲ್ಲ ಕೃಷ್ಣನೇ ಮದುವೆಯಾಗಿ ದ್ವಾರಕೆಗೆ ಕರೆತಂದು ರಕ್ಷಿಸಿದನು. ನರಕನು ಅಪಹರಿಸಿದ್ದ ವಸ್ತುಗಳನ್ನೆಲ್ಲ ಅವರವರಿಗೆ ತಲುಪಿಸಿದನು.

ನರಕನ ನಂತರ ಕೃಷ್ಣನಿಂದ ಅಭಯ ಪಡೆದ ಭಗದತ್ತನು ರಾಜನಾಗಿದ್ದ ಸಂದರ್ಭದಲ್ಲಿ ನರಕನಲ್ಲಿದ್ದ ವೈಷ್ಣವಾಸ್ತ್ರವು ಅವನ ವಶಕ್ಕೆ ಬಂದಿತು. ಭಾರತ ಯುದ್ಧದಲ್ಲಿ ಭಗದತ್ತನು ಅದನ್ನು ಅರ್ಜುನನ ಮೇಲೆ ಪ್ರಯೋಗಿಸಿದಾಗ ಕೃಷ್ಣನೇ ಸ್ವತಃ ಸೆಳೆದು ನಿಷ್ಕ್ರಿಯಗೊಳಿಸಿ ಅರ್ಜುನನ್ನು ರಕ್ಷಿಸಿದನು.

ನರಕಾಸುರನ ವಧೆಯಾದುದು ಆಶ್ವಯುಜ ಬಹುಳ ಚತುರ್ದಶಿಯ ದಿನ. ದುಷ್ಟ ಸಂಹಾರದ ಖುಶಿಯನ್ನು ನಾವು ಅಂದು ಬೆಳಗಿನ ಜಾವ ಅಭ್ಯಂಜನ  ಮಾಡಿ ದೇವಪೂಜೆ ಮಾಡಿ, ಆಚರಿಸಿ ಸಂಭ್ರಮಿಸುತ್ತೇವೆ.

ಮರುದಿನವೇ ದೀಪಾವಳಿ ಬೆಳಕಿನ ಲಕ್ಷ್ಮೀ ಪೂಜೆಯ ಹಬ್ಬ. ಅಂದು ಬಲಿ ಚಕ್ರವರ್ತಿ ಭೂಮಿಯಲ್ಲಿನ ಪೈರು-ಪ್ರಜೆಗಳನ್ನು ನೋಡಲು ಭೂಮಿಗೆ ಬರುವನೆಂಬ ನಂಬಿಕೆ ತುಳುನಾಡಿನಲ್ಲಿ ಇದೆ.

ಲೇ: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು