ಪುರಾಣದ ಅರಿವಿನ ಸರಣಿ By ದಾಮೋದರ ಶೆಟ್ಟಿ, ಇರುವೈಲ್
ನನಗೆ ತಿಳಿದಂತೆ, ಚಿತ್ರರಥ ಹೆಸರಿನ ಮೂವರ ಹೆಸರು ಪುರಾಣದಲ್ಲಿ ಬರುತ್ತದೆ. 1. ಕಶ್ಯಪ ಮುನಿಗೆ ಜನಿಸಿದ ಚಿತ್ರರಥ ದೇವಗಂಧರ್ವ. ಇವನಿಗೆ ಅಂಗಾರಪರ್ಣ ಎಂಬ ಹೆಸರೂ ಇದೆ. ಇವನ ಪತ್ನಿ ಕುಂಭೀನಸಿ.
ಈತ ಅರ್ಜುನನಿಂದ ಸೋತು ತನ್ನಲ್ಲಿದ್ದ "ಚಾಕ್ಷುಷೀ" ವಿದ್ಯೆಯನ್ನು ಅರ್ಜುನನಿಗೆ ಉಪದೇಶಿಸಿ ಪ್ರಾಣ ಉಳಿಸಿಕೊಂಡಿದ್ದನು. ಯುಧಿಷ್ಠಿರನ ರಾಜಸೂಯ ಯಾಗ ಕಾಲದಲ್ಲಿ ಪಾಂಡವರಿಗೆ ಅನೇಕ ದಿವ್ಯಾಸ್ತ್ರಗಳನ್ನೂ ಕೊಟ್ಟಿದ್ದನು.
2. ಪಾಂಚಾಲ ದೊರೆ ದ್ರುಪದನ ಔರಸ ಪುತ್ರನ ಹೆಸರೂ ಚಿತ್ರರಥ. ದೃಷ್ಟದ್ಯುಮ್ನನ ಸೋದರ. ಇವನ ರಥವು ಅತಿ ಅಪರೂಪದ ಚಿತ್ರಗಳಿಂದ ಅಲಂಕೃತವಾದ ವಿಶೇಷ ರಥವಾಗಿದ್ದುದರಿಂದ "ಚಿತ್ರರಥ"ಎಂಬ ಹೆಸರು ಇಟ್ಟುಕೊಂಡಿದ್ದನು. ಭಾರತ ಯುದ್ಧದಲ್ಲಿ ಇವನು ದ್ರೋಣನಿಂದ ಹತನಾದನು.
3. ಇನ್ನೊಬ್ಬ ಚಿತ್ರರಥ ಗಂಧರ್ವ. ತನ್ನ ಸ್ತ್ರೀಯರೊಡನೆ ನರ್ಮದಾ ನದಿಯಲ್ಲಿ ಜಲಕ್ರೀಡೆಯಾಡುತ್ತಿದ್ದಾಗ ನೀರಿಗೆಂದು ಬಂದ ಜಮದಗ್ನೀ ಋಷಿಪತ್ನಿ ರೇಣುಕೆಯು ಇವನ ರೂಪಕ್ಕೆ ಭ್ರಾಂತಳಾಗಿ ನೋಡುತ್ತ ನಿಂತಳು. ನೀರು ತರಲು ತಡವಾದುದರ ಕಾರಣ ತಿಳಿದ ಜಮದಗ್ನಿಯು ಕೋಪಗೊಂಡು ಪತ್ನಿಯನ್ನು ವಧಿಸುವಂತೆ ಮಗ ಪರಶುರಾಮನಿಗೆ ಆಜ್ಞಾಪಿಸಿದನು.
ಪರಶುರಾಮನು ಆಜ್ಞೆಯನ್ನು ಪಾಲಿಸಿ, ತಂದೆ ಕೊಟ್ಟ ವರದಿಂದ ತಾಯಿಯನ್ನು ಬದುಕಿಸಿಕೊಂಡು ಸ್ತ್ರೀ ಹತ್ಯಾ ದೋಷದಿಂದ ಪಾರಾದನು.
ಸಂ: ದಾಮೋದರ ಶೆಟ್ಟಿ, ಇರುವೈಲ್
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ
Tags:
ಪುರಾಣ