ಯಕ್ಷಗಾನದ ಕುಣಿತಗಳೂ, ಅನ್ಯ ಕಲೆಗಳ ನೃತ್ಯದ ಪ್ರಭಾವವೂ

ಸಾಂಕೇತಿಕ ಚಿತ್ರ: ಮಧುಸೂದನ ಅಲೆವೂರಾಯ, ಕಲಾವಿದರು: ಸೂರಿಕುಮೇರು ಕೆ.ಗೋವಿಂದ ಭಟ್

ಯಕ್ಷಗಾನಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -9 ಸರಣಿ by ಸುರೇಂದ್ರ ಪಣಿಯೂರ್

ನೃತ್ಯಕಲೆಗೂ, ದೇವದಾಸಿಯರ ಉಗಮಕ್ಕೂ ನೇರ ಸಂಬಂಧವಿರುವುದರಿಂದ ಆ ಕುರಿತು ವಿಚಾರ ಮಾಡುವುದು ಮುಖ್ಯ. ನೃತ್ಯಕಲೆ ಶ್ರೇಷ್ಠವಾದ ಕಲೆ ಎಂದು ಪುರಾತನ ಕಾಲದಲ್ಲಿ ಪುರಸ್ಕಾರ ಪಡೆದಿತ್ತು. ನಮ್ಮ ದೇವಾಲಯಗಳ ಶಿಲ್ಪ , ಶಾಸನಗಳು ಇದಕ್ಕೆ ಪುರಾವೆ ಒದಗಿಸಿವೆ.

 ಷೋಡಶೋಪಚಾರಯುಕ್ತವಾದ ಪೂಜೆಯಲ್ಲಿ ‘ಗೀತಂ ಸಮರ್ಪಯಾಮಿ, ವಾದ್ಯಂ ಸಮರ್ಪಯಾಮಿ, ನೃತ್ಯಂ ಸಮರ್ಪಯಾಮಿ’ ಎಂದು ಮಂತ್ರಪೂರ್ವಕ ಪ್ರಾಯೋಗಿಕ ಆಚರಣೆಗಳು ದೇವರಿಗೆ ಅರ್ಪಿತವಾಗುತ್ತಿದ್ದವು. ಆ ಸಂದರ್ಭದಲ್ಲಿ ದೇವದಾಸಿಯರು ನೃತ್ಯ ಮಾಡಿ ತೆರಳುತ್ತಿದ್ದರು.

ದೇವರನ್ನು ಜೀವಂತವ್ಯಕ್ತಿ ಎಂದು ಭಾವಿಸಿದ ನಮ್ಮ ಜನರ ನಂಬಿಕೆಯಲ್ಲೇ ದೇವದಾಸಿ ಪದ್ಧತಿಯ ಮೂಲವಿದೆ. ಇದು ಕ್ರಿ.ಶ. ಮೂರನೇ ಶತಮಾನದಲ್ಲಿ ಆರಂಭವಾಗಿರಬಹುದೆಂದು ಡಾ|| ಆಲ್ಟೇಕರರು ಊಹಿಸುತ್ತಾರೆ. (ಕೃಪೆ: ಅನ್ಯ ಮೂಲದ  ಮಾಹಿತಿ)

ಅದೇನೇ ಇರಲಿ, ಯಕ್ಷಗಾನ ಕಲೆಯು ಈ ರೀತಿಯ ದೇವದಾಸಿ ನರ್ತಕಿಯರ ನರ್ತನ ಪ್ರಭಾವದಿಂದ ಒಂದಷ್ಟು ನರ್ತನಗಳನ್ನು ಎರವಲು ಪಡೆದುಕೊಂಡ ಬಗ್ಗೆ ಐತಿಹ್ಯ ಇದೆ. ಉದಾಹರಣೆಗೆ ಸಲಾಮು ಹೆಜ್ಜೆ, ಗುಬ್ಬಿಕುಣಿತ, ಕತ್ತರಿಕಾಲು ಕುಣಿತ ಇತ್ಯಾದಿ.

ಹೀಗೆ ಯಕ್ಷಗಾನ ಪ್ರಕಾರದಲ್ಲಿ ವಿವಿಧ ರೀತಿಯ ನರ್ತನ ವಿಧಾನಗಳಿವೆ. ಬೇಟೆನೃತ್ಯ, ಒಡ್ಡೋಲಗ, ಯುದ್ಧಕುಣಿತ, ಮಲ್ಲಯುದ್ದ, ಸೊಪ್ಪಿನ ಕಾಳಗ, ಕತ್ತಿಪಡೆ ಇತ್ಯಾದಿಗಳಲ್ಲಿ ಕೇರಳದ ಯುದ್ಧವಿದ್ಯೆಯಾದ ಕಳರಿಪಯಟ್ಟುವಿನ ಪ್ರಭಾವ ಕಾಣಬಹುದೇನೋ.

ಸ್ತ್ರೀವೇಷಗಳಲ್ಲಿ ಬಳಸುವ ಜಲಕೇಳಿ, ಪ್ರಯಾಣ, ಪ್ರವೇಶ ಕುಣಿತ ಹೀಗೆ ಹಲವು ವಿಧದ ಕುಣಿತಗಳಿವೆ ಹಾಗೂ ಕೆಲವೊಂದು ಸಮೂಹ ನೃತ್ಯಗಳೂ ಅನನ್ಯವಾಗಿವೆ. ಅದೇ ರೀತಿ ಪಾಂಡವರ ಒಡ್ಡೋಲಗ, ಜಲಕೇಳಿ, ಪ್ರಯಾಣ ಕುಣಿತ ಇತ್ಯಾದಿ. ಇವುಗಳು ಆಧುನಿಕ ರಂಗಕಲೆಗಳಿಗೂ ಒಗ್ಗಿಕೊಳ್ಳಬಹುದಾದ ನರ್ತನ ಕ್ರಮಗಳು. ಹೀಗೆ ಏನೆಲ್ಲ ನರ್ತನಗಳು ಇವೆಯೋ ಅವೆಲ್ಲವೂ ವಿವಿಧ ಭಾರತೀಯ ರಂಗಕಲೆಗಳ ಮುಖಾಂತರ ಇಲ್ಲಿಗೆ ಬಂದವುಗಳೋ ಅಥವಾ ಯಕ್ಷಗಾನ ಮೂಲದಿಂದ ಇತರ ಕಲೆಗಳು ಪ್ರೇರಣೆ ಪಡೆದವೋ ಎನ್ನುವ ಬಗ್ಗೆ ಅಧ್ಯಯನ ಅಗತ್ಯ.

ಈ ರೀತಿಯ ನರ್ತನಗಳಿಗೆ ಹಿನ್ನೆಲೆಯಲ್ಲಿ ಸಂಗೀತ ಬಳಸಿಕೊಳ್ಳಲಾಯಿತು. ಇದರ ಪ್ರಮುಖನೇ ಭಾಗವತ.  ಅವನಿಗೆ ಪಕ್ಕವಾದ್ಯಗಳಾಗಿ ಶ್ರುತಿ, ಮದ್ದಳೆ, ಚಂಡೆ, ಉಪಯೋಗಿಸಲ್ಪಟ್ಟಿತು. ಭಾಗವತ ಅನ್ನುವುದು ಭಗವಂತನ ಲೀಲೆಗಳ ಕುರಿತಾದ ಕಥೆಗಳ ನಿರೂಪಣೆಯ ನಿರೂಪಕ, ಸೂತ್ರಧಾರಿ. ಈತನೇ  ಪ್ರಧಾನ ಈ ಕಲೆಗೆ.

ಇಲ್ಲಿ ಬಳಸುವ ಶ್ರುತಿಯು ಕೂಡಾ ವಿಶಿಷ್ಟವಾದ ಪುಂಗಿ ಬುರುಡೆ ಹಾಗೂ ಅವನದ್ಧ ವಾದ್ಯಗಳಾದ ಮದ್ದಳೆ ಹಾಗೂ ಚಂಡೆಗಳು. ಈ ವಾದ್ಯಗಳು ಯಕ್ಷಗಾನ ಕಲೆಯ ನಿರ್ವಹಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತವೆ.

ಯಕ್ಷಗಾನ ಕಲೆಯಲ್ಲಿ ಪ್ರದರ್ಶನಗೊಳ್ಳುವ ಕಥೆಗಳೂ ಕೂಡ ನಮ್ಮದಾದ ಪುರಾಣಾಂತರ್ಗತ ಕಥೆಗಳು. ಆ ಕಥೆಗಳು ನಮಗೆ ನೀತಿಬೋಧಕವಾಗಿದ್ದವು. ಧರ್ಮಬೋಧಕವಾಗಿದ್ದವು. ಸಂಸ್ಕೃತಿ ಸಂಸ್ಕಾರದ ಅರಿವು ಮೂಡಿಸುವ ಸಾಧನಗಳಾಗಿದ್ದವು. (ಸಶೇಷ)

ಲೇಖನ: ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು