ಅನಸೂಯಾ ದೇವಿಯ ಪಾತಿವ್ರತ್ಯದ ಮಹಿಮೆ

ಬ್ರಹ್ಮ-ವಿಷ್ಣು-ಮಹೇಶ್ವರ - ಪ್ರಾತಿನಿಧಿಕ ಚಿತ್ರ
ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ ಶೆಟ್ಟಿ ಇರುವೈಲ್ ಮಾಹಿತಿ
ಕರ್ದಮ ಮುನಿ-ದೇವಹೂತಿಯ ದಂಪತಿಯ 9ನೇ ಮಗಳಾಗಿ ಜನಿಸಿದವಳೇ ಅನಸೂಯಾ ದೇವಿ. ಆಕೆಯ ಪತಿ ಅತ್ರಿ ಮಹರ್ಷಿ. ಸಪ್ತಋಷಿಗಳಲ್ಲಿ ಒಬ್ಬರು. ಬ್ರಹ್ಮ ಮಾನಸಪುತ್ರ. ಅನಸೂಯ ಮಹಾ ಪತಿವ್ರತೆ.

ಒಮ್ಮೆ ಆಕೆಯ ಪತಿವ್ರತಾ ಧರ್ಮವನ್ನು ಪರೀಕ್ಷಿಸಲು ತ್ರಿಮೂರ್ತಿಗಳೇ ವೇಷ ಬದಲಿಸಿ ಬಂದರು. ಅನಸೂಯೆ ಅವರಿಗೆ ಭಿಕ್ಷೆ ಹಾಕಲು ಹೋದಾಗ, ನೀನು ವಿವಸ್ತ್ರಗಳಾಗಿ ಭಿಕ್ಷೆ ಹಾಕಿದರೆ ಮಾತ್ರಾ ತಾವು ಭಿಕ್ಷೆ ಸ್ವೀಕರಿಸುವುದಾಗಿ ಅವರು ಹೇಳುತ್ತಾರೆ.

ಆ ಕೂಡಲೆ ತನ್ನ ಪತಿಯ ಪಾದ ತೊಳೆದು ಆ ನೀರನ್ನು ಆ ತ್ರಿಮೂರ್ತಿಗಳ ಮೇಲೆ ಪ್ರೋಕ್ಷಣೆ ಮಾಡಿದಳು. ಆ ಕೂಡಲೇ ಅವರೆಲ್ಲ ಚಿಕ್ಕ ಮಕ್ಕಳಾದರು. ಆಗ ಅನಸೂಯಾ ಅವರನ್ನು ಎತ್ತಿಕೊಂಡು ವಿರ್ವಸ್ತ್ರಳಾಗಿ ತನ್ನ ಎದೆ ಹಾಲನ್ನೇ ಕೊಟ್ಟಳು.  ತ್ರಿಮೂರ್ತಿಗಳ ಪತ್ನಿಯರಾದ ಲಕ್ಷ್ಮೀ, ಸರಸ್ವತಿ, ಪಾರ್ವತಿಯರು ಬಂದು ಪತಿ ಭಿಕ್ಷೆ ಬೇಡಿದಾಗ ಸಣ್ಣ ಮಕ್ಕಳಾದ ತ್ರಿಮೂರ್ತಿಗಳನ್ನು ಮರಳಿ ಅವರಿಗೆ ಒಪ್ಪಿಸಿದಳು. ಆಕೆಗೆ ತ್ರಿಮೂರ್ತಿಗಳ ವರದಿಂದ ಜನಿಸಿದ ಮಕ್ಕಳೇ ದತ್ತಾತ್ರೇಯ, ಚಂದ್ರ ಹಾಗೂ ದೂರ್ವಾಸರು.

ಆಕೆಯ ತಂಗಿ ಸುಮತಿಯ ಕಥೆ
ಅನಸೂಯೆಯ ತಂಗಿ ಸುಮತಿಯ ಗಂಡ ಒಬ್ಬ ವೇಶ್ಯೆಯೊಂದಿಗೆ ಸಂಬಂಧ ಹೊಂದಿದ್ದ. ಕರ್ಮ ಧರ್ಮ ಸಂಯೋಗದಿಂದ ಅವನಿಗೆ ಕುಷ್ಠ ರೋಗ ಪ್ರಾಪ್ತವಾಯಿತು. ಆದರೆ ಅವನ ಹೆಂಡತಿ ಮಹಾನ್ ಪತಿವ್ರತೆ. ಒಂದಿಷ್ಟೂ ಬೇಸರಿಸದೆ ತ್ರಿಕರಣಪೂರ್ವಕವಾಗಿ ಅವನ ಸೇವೆ ಮಾಡುತ್ತಿದ್ದಳು.

ಒಮ್ಮೆ ತನಗೆ ವೇಶ್ಯೆಯ ಮನೆಗೆ ಹೋಗಲಿಕ್ಕೆ ಆಗುತ್ತಿಲ್ಲವೆಂದು ನೊಂದುಕೊಳ್ಳುತ್ತಿರುವಾಗ ಸುಮತಿಯು ಗಂಡನನ್ನು ಒಂದು ಬಿದಿರಿನ ಬುಟ್ಟಿಯಲ್ಲಿ ಹೊತ್ತುಕೊಂಡು ಹೋದಳು. ಹೀಗೆ ಬರುತ್ತಿರುವಾಗ ಕತ್ತಲಲ್ಲಿ ತಿಳಿಯದೆ ಆತನ ಕಾಲು, ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ಮಾಂಡವ್ಯ ಋಷಿಗಳಿಗೆ ತಗುಲಿತು. ಋಷಿಗಳು ಕೋಪದಲ್ಲಿ, 'ನನಗೆ ಒದೆದ ವ್ಯಕ್ತಿ ನಾಳೆ ಸೂರ್ಯೋದಯವಾದ ತಕ್ಷಣ ಮರಣ ಹೊಂದಲಿ' ಎಂದು ಶಾಪ ಕೊಟ್ಟರು.

ಇದನ್ನು ತಿಳಿದ ಸುಮತಿ ಸೂರ್ಯನಿಗೆ ಉದಯವಾಗಬಾರದೆಂದು ಅಪ್ಪಣೆ ಕೊಟ್ಟಳು. ಪತಿವ್ರತೆಯ ಶಾಪಕ್ಕೆ ಹೆದರಿ ಸೂರ್ಯನೇ ಉದಯಿಸಲಿಲ್ಲ. ಸೃಷ್ಟಿಯ ಎಲ್ಲಾ ಕಾರ್ಯಗಳು ನಿಂತು ಅಲ್ಲೋಲಕಲ್ಲೋಲವೇ ಆಯಿತು. ಆಗ ಎಲ್ಲಾ ದೇವತೆಗಳು ಅನಸೂಯೆಯ ಬಳಿ ಹೋಗಿ ಕೇಳಿಕೊಂಡಾಗ. ಅವಳು ತನ್ನ ತಂಗಿಯ ಮನ ಒಲಿಸಿ ಅವಳ ಗಂಡನಿಗೆ ಯಾವುದೇ ಪ್ರಾಣಾಪಾಯ ಆಗದ ಹಾಗೆ ಭರವಸೆ ನೀಡಿದಳು. ಆಗ ಸುಮತಿಯು ಸೂರ್ಯನು ಉದಯಿಸುವಂತೆ ಮಾಡಿ, ಜಗತ್ತು ಯಥಾಸ್ಥಿತಿಗೆ ಬರಲು ಅನುವು ಮಾಡಿಕೊಟ್ಟಳು.

ಸಂ: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು