![]() |
ಪ್ರಾತಿನಿಧಿಕ ಚಿತ್ರ ಕೃಪೆ: We Love Kateel Melas |
ಯಕ್ಷಗಾನಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -10 by ಸುರೇಂದ್ರ ಪಣಿಯೂರ್
ಯಕ್ಷಗಾನ ಕಲೆಯು ಆರಾಧನಾ ಕಲೆಯಾಗಿ ಹೇಗೆ ಗುರುತಿಸಿಕೊಂಡಿತು ಅನ್ನುವುದರ ಕುರಿತು ನೋಡಲಾಗಿ...
ಕ್ರಿಸ್ತ ಪೂರ್ವದಲ್ಲಿಯೇ ಯಕ್ಷಾರಾಧನೆ ನಡೆದುಕೊಂಡು ಬರುತ್ತಾ ಇತ್ತು ಅನ್ನುವುದು ವೇದಗಳಲ್ಲಿ ಬರುವ ಉಲ್ಲೇಖದಿಂದ ತಿಳಿದು ಬರುತ್ತದೆ. ಮೊದಲು ಬೌದ್ಧರು, ಆನಂತರ ವೈದಿಕರು ಹಾಗೂ ಜೈನರು ಯಕ್ಷಾರಾಧನೆಯನ್ನು ತಮ್ಮ ಅಂಕೆಗೆ ಒಳಪಡಿಸಿದರು.
ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ ಬೌದ್ಧರು ಯಕ್ಷ ಮಂದಿರ ಸ್ಥಾಪಕರು. ಜೈನರಿಗೆ ಸ್ವರೂಪಜ್ಞಾನ ಹಾಗೂ ವೈದಿಕರಿಗೆ ವೇದೋಕ್ತ ಯಾಜ್ಞಿಕ ಪೂಜೆಯೇ ಪ್ರಧಾನ.
ಕ್ರಿಸ್ತಶಕ 8ನೇ ಶತಮಾನದ ವೇಳೆಗೆ ಪೂಜ್ಯ ಶಂಕರ ಆಚಾರ್ಯರು ವೈದಿಕ ಮತವನ್ನು ಪುನರುತ್ಥಾನಗೊಳಿಸಲಾಗಿ 13ನೇ ಶತಮಾನದ ಕಾಲಕ್ಕೆ ಬೌದ್ಧಮತ ನಿರ್ನಾಮ ಹೊಂದಿ ಬೌದ್ಧರು ವೇದ ಪಾರಮ್ಯಕ್ಕೆ ನಿಷ್ಠಾಂತರಗೊಂಡರು.
ಶಂಕರಾಚಾರ್ಯರು ಉಲ್ಲೇಖಿಸಿದ್ದು ವಿಷ್ಣು ಪುರಾಣವೊಂದೇ. ಮುಂದೆ ಪೂಜ್ಯ ಮಧ್ವಾಚಾರ್ಯರ ಕಾಲಕ್ಕೆ ಅಷ್ಟಾದಶ ಪುರಾಣಗಳು ಸ್ಥಾಪಿತವಾದವು.
ಸಮಾಜದಲ್ಲಿ ಬೌದ್ಧ ನಿಷ್ಠೆ ಮಾಯವಾದರೂ, ಜೈನ ನಿಷ್ಠೆ ಉಳಿದುಕೊಂಡು ಜೈನರ ಪಾಲಿಗೆ ವೈದಿಕರು ಪೂಜಿಸುವ ಮೂರ್ತಿಗಳೆಲ್ಲವೂ ಯಕ್ಷರೆನಿಸಿಕೊಂಡವು. ಜೈನ ಆಳರಸರ ಪ್ರಾಬಲ್ಯ ಉಳಿದುಕೊಂಡು ಯಕ್ಷರೆಂಬ ಹೆಸರಲ್ಲಿ ಪುರಾಣ ವೈದಿಕ ದೇವತೆಗಳನ್ನು, ಕಥೆಯನ್ನು ಆಡಿ ತೋರಿಸುವ ಗಾನ ರಂಗಪ್ರಬಂಧಗಳು ಜೈನರ ಪಾಲಿಗೆ ಯಕ್ಷಗಾನಗಳಾದವು.
ಈ ದೇವಾಲಯದ ಮೂರ್ತಿ ಪೂಜೆಯ ಆರಾಧನೆಯಲ್ಲಿರುವ ನಿತ್ಯ ನೈಮಿತ್ತಿಕ ಅನುಷ್ಠಾನಗಳಲ್ಲಿ ಒಂದು ಅಂಶ ನಾಟ್ಯಸೇವೆ. ಇದಕ್ಕೆ ಬೇಕಾಗಿ ಬೌದ್ಧರ ಕಾಲದಲ್ಲಿ ದೇವಸ್ಥಾನದ ಪಕ್ಕಕ್ಕೆ ಹೊಂದಿಕೊಂಡಿದ್ದ ನೃತ್ಯಗಾತಿಯರು (ದೇವದಾಸಿಯರು, ಚಾಕ್ಕಿಯರ್ ಪಂಗಡ) ಉತ್ಸವಾದಿಗಳಲ್ಲಿ ದೇವಸ್ಥಾನದ ಒಳಸುತ್ತಿನಲ್ಲಿರುವ ವಿವಿಧ ದೇವರ ಪ್ರೀತ್ಯರ್ಥವಾಗಿ ನೃತ್ಯ ಸೇವೆ ಸಲ್ಲಿಸುತ್ತಾ ಇದ್ದರು. ಈ ಚಾಕ್ಕಿಯರ್ ಅಥವಾ ದೇವದಾಸಿಯರು 12ನೇ ಶತಮಾನದವರೆಗೂ ಕರಾವಳಿ ಜಿಲ್ಲೆಗಳಲ್ಲಿ ಇದ್ದರೆಂಬುದಕ್ಕೆ ಪಾಣೆ ಮಂಗಳೂರಿನ ಬಂಕೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಶಿಲಾಶಾಸನವಿದ್ದು ಅದನ್ನು ಮಂಗಳೂರು ಡೊಂಗರಕೇರಿಯ ಕೆನರಾ ಹೈಸ್ಕೂಲ್‌ನಲ್ಲಿ ರಕ್ಷಿಸಿ ಇಡಲಾಗಿದೆ. ಇದರ ಪ್ರಕಾರ, ಕೂತಾಡುವ ಬಾಕೆನಂಗೆಯರು ಅಂದರೆ ದೇವದಾಸಿಯರು ಎಂದು ತಿಳಿಸಿದವರು ಹಿರಿಯ ಇತಿಹಾಸಜ್ಞ ಎಂ.ಎಂ.ಪ್ರಭು ಅವರು.
ಯಕ್ಷ ಎಂಬ ಜಾನಪದ ದೈವಗಳನ್ನು ಮೂರ್ತಿ ರೂಪದಲ್ಲಿ ಆರಾಧಿಸಿಕೊಂಡು ಅವುಗಳ ಉತ್ಸವಾಚರಣೆ ಕಾಲದಲ್ಲಿ ನಾಟ್ಯವನ್ನು ಸೇವಾ ರೂಪದಲ್ಲಿ ನಡೆಸುತ್ತಿದ್ದರು. ದೇವರ ಮಹಿಮೆಯನ್ನು ಸಾರುವ ಕಥೆಗಳಲ್ಲಿ ದೇವರ ರೂಪದಲ್ಲಿ ವೇಷಧಾರಣೆ ಮಾಡಿ ಅಭಿನಯಿಸುವ ಪದ್ದತಿ ರೂಢಿಗೊಂಡಿತು.
ಈ ರೀತಿಯ ರಂಗ ಪ್ರದರ್ಶನದಲ್ಲಿ ಯಕ್ಷ ದೇವರನ್ನು ಹಾಡಿ ಹೊಗಳುವ ಗಾನಕ್ರಮಕ್ಕೆ #ಯಕ್ಷಗಾನ ಅಂತ ಕರೆಯಲಾಯಿತು. ಇಲ್ಲಿ ಹಾಡುವ ಗಾನಕ್ರಮ #ಗಾಂಧಾರ ಗ್ರಾಮಕ್ಕೆ ಸಂಬಂಧಿಸಿರಬೇಕು.
ನಾಟಕರಂಗಕ್ಕೆ ಸರಿ ಸಮಾನವಾಗಿದ್ದ ಶಾಸ್ತ್ರ ವಿರಹಿತವಾದ ರಂಗಭೂಮಿಯು ಇತ್ತೆಂಬುದು ಕ್ರಿಸ್ತ ಪೂರ್ವ ಒಂದನೇ ಶತಮಾನದಲ್ಲಿ ಕಾಳಿದಾಸ ಕವಿ ಉಲ್ಲೇಖಿಸಿದ್ದನ್ನು ಹೊರತುಪಡಿಸಿ, ಕ್ರಿ ಶ 600 -630ರಲ್ಲಿ ಆಳಿದ ಕಾಂಚಿಯ ಪಲ್ಲವರ ದೊರೆ ಮಹೇಂದ್ರ ವರ್ಮಾ ರಚಿಸಿದ ಸಂಸ್ಕೃತ ನಾಟಕ 'ಮತ್ತವಿಲಾಸ ಪ್ರಹಸನಂ'ದಲ್ಲಿಯೂ ಉಲ್ಲೇಖಗೊಂಡಿದೆ.
ಇದರಿಂದ ಯಕ್ಷಗಾನದಲ್ಲಿರುವಂತಹ ಅನೇಕ ಅಂಶಗಳು ಈ ಪ್ರಕಾರದ ರಂಗಭೂಮಿಯು, ಶಿಷ್ಟರಂಗ ಭೂಮಿಗೆ ಸಮಾನಾಂತರವಾಗಿ ಇತ್ತೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇದರಿಂದಲೇ ಮುಂದೆ ಯಕ್ಷಗಾನರಂಗ ವಿಕಸಿತಗೊಂಡಿದೆ ಅನ್ನಬಹುದು. ಆದರೆ ಇದೆಲ್ಲ ಊಹಾತ್ಮಕ ವಿಚಾರಗಳೇ ಹೊರತು ದಾಖಲೆಗಳೇನೂ ಖಂಡಿತಾ ಅಲ್ಲ.
ಹೀಗಿರಲಾಗಿ ಈಗಿನ ಯಕ್ಷಗಾನ ರಂಗಪ್ರಭೇದದ ಯಾವ ಸ್ವರೂಪವೂ ಕ್ರಿ ಶ 15ನೇ ಶತಮಾನಕ್ಕಿಂತ ಹಿಂದೆ ಇದ್ದ ದಾಖಲೆ ಸಿಗುವುದಿಲ್ಲ. ಇದ್ದುದರಲ್ಲಿ ಪ್ರಾಚೀನವಾದದ್ದು 11 ನೇ ಶತಮಾನದ ಬಿಲ್ವಮಂಗಳ ಸ್ವಾಮಿಗಳ ಕಾಲಕ್ಕೆ ಜೋಡಿತವಾದ ಕೃಷ್ಣನಾಟ್ಟಂ ಮಾತ್ರ. ಇದನ್ನು ಕಥಕ್ಕಳಿ ಹಾಗೂ ಚಾಕ್ಯಾರ್ ಕೂತ್ತ್ ನಡುವೆ ಇದ್ದ ಕಾಲಮಾನವಾಗಿ ಗುರುತಿಸಲಾಗುತ್ತದೆ .
ಈ ರೀತಿಯಾಗಿ ನೋಡಲು ಹೋಗುವಾಗ ಭಾರತದ ಪರಂಪರೆಯ ರಂಗಭೂಮಿಯಲ್ಲಿ ಕಾಣುವ ಯಕ್ಷಗಾನ ಹಾಗೂ ಕಥಕ್ಕಳಿ ಮುಂತಾದ ರಂಗ ವೇಷಗಳಿಗೂ ಆಫ್ರಿಕಾದ ಬುಡಕಟ್ಟು ಸಮುದಾಯದ ಜನರ ನಿತ್ಯ ಹಾಗೂ ವಿಶೇಷವಾದ ಉತ್ಸವಾಚರಣೆ ವೇಳೆಯಲ್ಲಿ ಹಾಕುವ ವೇಷಗಳಲ್ಲಿ ಬಳಸುವ ಮುಖವರ್ಣಿಕೆಗಳಲ್ಲಿ ನಾಮಗಳಲ್ಲಿ ಅಂಗಾಂಗ ಲೇಪನ, ಉಡುಗೆ, ತೊಡುಗೆ, ಪ್ರಸಾಧನಗಳಲ್ಲಿ ನಿಕಟ ಹೋಲಿಕೆ ಇರುವುದಕ್ಕೆ ಕಾರಣ ದಾಖಲಾತಿ ಪೂರ್ವದ ಸಂಬಂಧಗಳು ಎನ್ನಲಾಗುತ್ತದೆ.
ಇದೇ ರೀತಿಯಲ್ಲಿ ಯಕ್ಷಗಾನ ಬಿಂಬ ರಚನೆಯಲ್ಲಿ ಭೂತದಕೋಲ, ತೆಯ್ಯಂ, ಪಡೆಯಣಿ ಮುಂತಾದ ಆರಾಧನಾ ಆಚರಣೆಗಳಲ್ಲಿ ಕಂಡು ಬರುವ ವೇಷ ವಿಧಾನ ಹಾಗೂ ಕುಣಿತ ಗಾನದ ನೆರಳನ್ನು ಕಾಣಬಹುದು. ಹಾಗೂ ಇದರಲ್ಲಿ ಆದಿವಾಸಿ ಸಂಸ್ಕೃತಿಯ ಪಳೆಯುಳಿಕೆಗಳು ಗೋಚರವಾಗುತ್ತವೆ.
ಇದಕ್ಕೆಲ್ಲ ಆಫ್ರಿಕಾ ಖಂಡ ಹಾಗೂ ದಕ್ಷಿಣಭಾರತದ ನಡುವಿನ ಸಾಂಸ್ಕೃತಿಕ ಕೊಡುಕೊಳ್ಳುವಿಕೆಯೇ ಕಾರಣ ಎನ್ನಲಾಗುತ್ತದೆ.
ಇದು ಸಾಧ್ಯವಾದುದು ಸರ್ವೇ ಸಾಧಾರಣವಾಗಿ ಕ್ರಿಸ್ತ ಪೂರ್ವ ಒಂದು ಸಾವಿರ ವರ್ಷಗಳ ಹಿಂದೆಯೇ ಕೇರಳಕ್ಕೂ ಹಾಗೂ ಪಶ್ಚಿಮ ದೇಶಗಳ ನಡುವೆ ನಡೆಯುತ್ತಿದ್ದ ಸಂಬಾರ ಜಿನಸು ಸುಗಂಧ ವನೋತ್ಪತ್ತಿಗಳ ವ್ಯಾಪಾರದಿಂದಾಗಿ. ಇಷ್ಟೇ ಅಲ್ಲದೆ ಈ ಪರಿಣಾಮವಾಗಿ ಸಂಸ್ಕೃತಿಯ ಸಮ್ಮಿಲನದಿಂದಾಗಿ ಯಕ್ಷಾರಾಧನೆಯು ಯುರೋಪ್‌ನ ಬಾಲ್ಟ್‌ನಿಂದ ಪೂರ್ವದ ಮಲೇಷ್ಯಾದವರೆಗೆ, ಸಿಂಹಳದಿಂದ ಉತ್ತರ ಚೀನಾದವರೆಗೆ ಹಬ್ಬಿದ್ದು, ಕ್ರಿ.ಶ 5 ನೇ ಶತಮಾನದ ಗ್ರೀಕ್ ದೇವತೆಯ ಶಿಲ್ಪದಲ್ಲಿ ಬಡಗುತಿಟ್ಟಿನ ಕಿರೀಟವೇಷದ ಯಥಾ ಪ್ರತಿಯನ್ನು ಕಾಣಲು ಈ ತೆರದ ಸಾಂಸ್ಕೃತಿಕ ವಿನಿಮಯವೇ ಕಾರಣ ಎನ್ನಲಾಗುತ್ತಿದೆ. ಇದೇ ರೀತಿ ಚೀನಾ ಹಾಗೂ ಜಪಾನ್ ದೇಶದ ರಂಗಭೂಮಿಗೂ ಯಕ್ಷಗಾನದ ರಂಗಭೂಮಿಗೂ ಸ್ವಾಮ್ಯತೆಯನ್ನು ಕಾಣಬಹುದು. (ಸಶೇಷ).
ಈ ಮಾಹಿತಿಯ ಗ್ರಂಥ ಋಣ: ಹಿಮ್ಮೇಳ - ಲೇ ಡಾ| ಕೆ.ಎಂ. ರಾಘವ ನಂಬಿಯಾರ್, ಕುಕ್ಕಿಲ ಸಂಪುಟ, ರಂಗಸ್ಥಳ-ಪೊಳಲಿ ಶಾಸ್ತ್ರಿ ಸ್ಮಾರಕ ಸಮಿತಿ ಪ್ರಕಟಿತ.
-ಸುರೇಂದ್ರ ಪಣಿಯೂರ್
Tags:
ಲೇಖನ