(ವಿವಾಹಾನಂತರ ಹರಿನಾರಾಯಣ ಲೀಲಾ ಬೈಪಾಡಿತ್ತಾಯ ದಂಪತಿಗಳು ಕೊಲ್ಲೂರಿನಲ್ಲಿ) |
ಯಕ್ಷಗಾನ ಕಲಾ ದಂಪತಿಯೆಂದೇ ನಾಡಿನಲ್ಲಿ ಪ್ರಸಿದ್ಧಿ ಗಳಿಸಿದ ಹರಿನಾರಾಯಣ-ಲೀಲಾ ಬೈಪಾಡಿತ್ತಾಯರ ಯಕ್ಷ ದಾಂಪತ್ಯ ಐದು ದಶಕವೇ ಕಳೆದಿದೆ. ಹರಿನಾರಾಯಣರು ತಮ್ಮ ಮದುವೆಯ ವಿಶೇಷ ಸಂದರ್ಭವನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.
ಹೌದು. ಇದು ನಮ್ಮದೇ ಮದುವೆಯ ಕಥೆ. 1970ರ ದಶಕದ ಆರಂಭ. ನಾನಾಗ ಕುಂಡಾವು ಮೇಳ ಬಿಟ್ಟು ಕೂಡ್ಲು ಮೇಳದಲ್ಲಿ ವ್ಯವಸಾಯ ಮಾಡುತ್ತಿದ್ದೆ. ಮೊದಲ ವರ್ಷದ ತಿರುಗಾಟವದು. ಹೀಗೆಯೇ... ಹೋದಲ್ಲೆಲ್ಲಾ ಶಾಲೆಯೋ, ಗದ್ದೆಯೋ... ಈ ರೀತಿ ಆಟದ ಕ್ಯಾಂಪುಗಳಲ್ಲಿ ಮಲಗುವ ಮುಂಚೆ ಅಥವಾ ಸಂಜೆ ಚೌಕಿಯಲ್ಲಿ ನಾವು ಸಹ ಕಲಾವಿದರೆಲ್ಲಾ ಪಟ್ಟಾಂಗ ಹಾಕುತ್ತಿದ್ದೆವು. ಆಗ ನಾನಿನ್ನೂ ತರುಣ.
ಶೇಣಿಯವರು (ಗೋಪಾಲಕೃಷ್ಣ ಭಟ್), ಶಿವಣ್ಣಾಚಾರಿ ಮತ್ತಿತರ ಕಲಾವಿದರು ತಮಾಷೆ ಮಾತಾಡುತ್ತಾ ರೇಗಿಸುವುದು ಹೆಚ್ಚಾಗಿ ನಡೆಯುತ್ತಿತ್ತು. ಈ ಮಾಣಿಗೊಂದು ಜೇವು (ಹುಡುಗಿ) ಹುಡುಕಬೇಕಲ್ಲಾ ಅನ್ನುವ ಮಾತಿನಿಂದಲೇ ಹೆಚ್ಚಿನ ಪಟ್ಟಾಂಗಗಳು ಶುರುವಾಗುತ್ತಿದ್ದವು. ಅದೊಂದು ದಿನ ಇದೇ ಮಾತು ಬಂದಾಗ, ವೇಷಧಾರಿಯಾಗಿದ್ದ ಶಿವಣ್ಣಾಚಾರಿಯವರು ಹೇಳಿಯೇ ಬಿಟ್ಟರು - ಮುಡಿಪುವಿನಲ್ಲೊಂದು ಹುಡುಗಿ ಇದೆ, ಬೈಪಾಡಿತ್ತಾಯರಿಗೆ ಆಗಬಹುದು ಅಂತ.
ಇದನ್ನು ಕೇಳಿದಾಗ ಶೇಣಿಯವರಿಗೆ ಏನನ್ನಿಸಿತೋ ಏನೋ. ಶೇಣಿವರ ಅಣ್ಣನ ಮಗಳು ಮಧೂರಿನಲ್ಲಿದ್ದರು. (ಹೆಸರು ಈಗ ನೆನಪಿಲ್ಲ). ಆ ಹುಡುಗಿಗೆ ಮಧೂರಿನ ಪಡುಕಕ್ಕೆಪ್ಪಾಡಿ ಮನೆಯ ಶ್ರೀಗಂಗಾ ಎಂಬಾಕೆ ಸ್ನೇಹಿತೆಯಿದ್ದಳು. ಶೇಣಿಯವರ ಮನೆಯೂ ಅದೇ ಪರಿಸರವಾದುದರಿಂದ ಮತ್ತು ಸಂಬಂಧಿಕರೇ ಆಗಿದ್ದುದರಿಂದ ಶೇಣಿಯವರೂ ಅಣ್ಣನ ಮನೆಗೆ ಹೋಗಿದ್ದಾಗ, ಶ್ರೀಗಂಗಾಳನ್ನು ನೋಡಿದ, ತಿಳಿದ ನೆನಪಿತ್ತು.
ಶಿವಣ್ಣಾಚಾರಿಯ ಮಾತು ಕೇಳಿದ ಶೇಣಿಯವರು, ಈ ಮಾಣಿಗೆ ಬೇರೆಲ್ಲಾ ಹುಡುಗಿ ನೋಡಬೇಡ. ಬೇಕಿದ್ರೆ ಮಧೂರು ದೇವಸ್ಥಾನದ ಹೊಳೆಯಾಚೆಗಿರುವ ಪಡುಕಕ್ಕೆಪ್ಪಾಡಿ ಮನೆಯ ರಾಮಕೃಷ್ಣ ಕೇಕುಣ್ಣಾಯರ ಮನೆಯಲ್ಲೊಬ್ಬಳು ಹುಡುಗಿ ಇದ್ದಾಳೆ. ಹೆಸರು ಶ್ರೀಗಂಗಾ. ಈ ಬೈಪಾಡಿತ್ತಾಯರಿಗೆ ಆ ಹುಡುಗಿಯನ್ನೇ ಮಾತನಾಡಪ್ಪಾ ಅಂತ ಮೇಳದಲ್ಲಿದ್ದ ಮತ್ತೊಬ್ಬ ವೇಷಧಾರಿ ಮಧೂರು ಗಣಪತಿ ಭಟ್ಟರಿಗೆ ಹೇಳಿಯೇ ಬಿಟ್ಟರು. ಗಣಪತಿ ಭಟ್ರೋ... ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡರು. ನಂತರ ಒಂದು ದಿನ ಅವರು ಪಡುಕಕ್ಕೆಪ್ಪಾಡಿಗೆ ಹೋಗಿ ವಿಷಯ ತಿಳಿಸಿಬಿಟ್ಟರು. ನಮ್ಮಲ್ಲೊಬ್ಬ ಮಾಣಿ ಇದ್ದಾರೆ. ಒಳ್ಳೆಯ ಗುಣವಂತ. ನಿಮ್ಮ ಹುಡುಗಿಗೆ ಆಗಬಹುದೋ ನೋಡಿ ಅಂತ ಕೇಳಿದರು.
ಹೀಗೆ ಮದುವೆಯ ಮಾತುಕತೆಯೊಂದು ಚಿಗುರಿತು. ನಮಗಿಬ್ಬರಿಗೂ 24 ವರ್ಷ ಪ್ರಾಯ. 6 ತಿಂಗಳು ನಾನು ದೊಡ್ಡವ.
ಮುಂದೆ ಆ ವರ್ಷದ ಮೇಳದ ತಿರುಗಾಟ ಮುಗಿದು, ಮಳೆಗಾಲದ ಟೂರು ಶುರುವಾಗಿತ್ತು. ಕಾಸರಗೋಡು ರಾಮಚಂದ್ರ ಚವ್ಹಾಣ್ ಎಂಬವರು ಆ ಕಾಲದ ಬಲುದೊಡ್ಡ ಸಂಘಟಕ. ಕರಾವಳಿಯ ಮಳೆಗಾಲದಲ್ಲಿ ರಾಜ್ಯದಾದ್ಯಂತ ಮಾತ್ರವೇ ಅಲ್ಲದೆ ಹೊರ ರಾಜ್ಯಗಳಿಗೂ ಅವರು ಯಕ್ಷಗಾನ ಮೇಳವನ್ನು ಕೊಂಡೊಯ್ದಿದ್ದರು. ಅಂದರೆ, ಪುಣೆ, ಸಾಂಗ್ಲಿ, ಮದ್ರಾಸ್, ದೆಹಲಿ, ನಾಗ್ಪುರ ಮುಂತಾದ ಕಡೆಗೆ. ಹೆಚ್ಚಿನ ಊರುಗಳ ನೆನಪು ಈಗಿಲ್ಲ ನನಗೆ. ಅಂತೂ ಅದೊಂದು ದೊಡ್ಡ ದೊಡ್ಡ ಕಲಾವಿದರಿದ್ದ ವಿಶೇಷ ತಿರುಗಾಟವೆಂಬುದು ನೆನಪಿದೆ.
ಹೀಗೆ ಮಳೆಗಾಲದ ಟೂರಿನ ಆಟವು ಆ ದಿನ ಕಾಸರಗೋಡಿನಲ್ಲೇ ಇತ್ತು. ಮಳೆಗಾಲದ ಆಟವಾದುದರಿಂದ ಸಿನಿಮಾ ಟಾಕೀಸ್‌ನ ಒಳಗೆ ಕಾಲಮಿತಿಯ (3 ಗಂಟೆಯ) ಆಟ. ಪ್ರಸಂಗ ಭಸ್ಮಾಸುರ-ಮೋಹಿನಿ. ಆ ದಿನ ಶೇಣಿಯವರ ಸೂಚನೆಯಂತೆ ಮಧೂರು ಗಣಪತಿ ರಾವ್ ಅವರೊಂದಿಗೆ ಪಡುಕಕ್ಕೆಪ್ಪಾಡಿ ಮನೆಯಲ್ಲಿಯೇ ನಮಗೆ ಆತಿಥ್ಯ. ಅಂದರೆ ಆಟದವರಿಗೆ ಹಗಲು ನಿದ್ದೆ, ರಾತ್ರಿ ಕೆಲಸ ಅಲ್ವೇ? ಹೀಗೆ, ಹಗಲಿನ ನಿದ್ದೆಗೆ ಅಲ್ಲಿಗೆ ಹೋದೆವು.
ಅಲ್ಲಿ ಅದೂ-ಇದು ಮಾತನಾಡುತ್ತಾ, ಮದುವೆ ಪ್ರಸ್ತಾಪವೂ ಬಂತು. ಒಂದು ಹಂತದ ಒಪ್ಪಿಗೆಯೂ ಆಯಿತು. ಹುಡುಗಿ ಲಕ್ಷಣವಾಗಿದ್ದಾಳೆ. ಸಂಗೀತ ಕಲಿತಿದ್ದಾಳೆ ಎಂದಾಗ ಮನಸ್ಸಿನಲ್ಲೇನೋ ಹೊಸ ರಾಗದ ಸಂಚಾರವಾದಂತಾಯಿತು. ಶಾಲೆಗೆ ಹೋಗಿಲ್ಲ, ಆದರೆ ಕಷ್ಟ ಪಟ್ಟು ಓದು-ಬರಹ ಕಲಿತಿದ್ದಾಳೆ ಮತ್ತು 'ಹಿಂದಿ ವಿಶಾರದೆ' ಪೂರೈಸಿದ್ದಾಳೆ, ಕೆಲವರಿಗೆ ಹಿಂದಿ ಪಾಠ ಮಾಡುತ್ತಿದ್ದಾಳೆ ಎಂಬ ಮಾಹಿತಿಯೂ ಸಿಕ್ಕಿತು. ತಂದೆ ಪುಂಡರೀಕಾಕ್ಷ ಹೆಬ್ಬಾರ್ ಅವಳ ಚಿಕ್ಕಂದಿನಲ್ಲೇ ಕಾಲವಶರಾಗಿದ್ದರು. ತಾಯಿ ಮಹಾಲಕ್ಷ್ಮಿ ಈಗ ತಮ್ಮ ಅಣ್ಣ (ರಾಮಕೃಷ್ಣ ಕೇಕುಣ್ಣಾಯ) ಮನೆಯಲ್ಲಿದ್ದಾರೆ.
ಸಂಜೆ, ಪಡುಕಕ್ಕೆಪ್ಪಾಡಿ ಮನೆಯವರೆಲ್ಲರೂ ಆಟಕ್ಕೆ ಬಂದರು. ಅವರೆಲ್ಲರೂ ಟಿಕೆಟ್ ಪಡೆದುಕೊಂಡೇ ಆಟ ನೋಡಬೇಕಿತ್ತು. ಸೀಮಿತ ಆಸನವಾಗಿರುವುದರಿಂದ, ಆ ಕಾಲದಲ್ಲಿ ಇನ್‌ಫ್ಲುಯೆನ್ಸ್ ಎಲ್ಲ ಮಾಡುವಂತಿರಲಿಲ್ಲ. ಶ್ರೀಗಂಗಾಳ ಅಣ್ಣ ಕೆ.ವಿಷ್ಣು ಹೆಬ್ಬಾರ್ (ಇವರೀಗ ನಬಾರ್ಡ್ ಬ್ಯಾಂಕ್ ಅಧಿಕಾರಿಯಾಗಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಮತ್ತು ಅವರು ಹಿಂದಿ ಸಾಹಿತಿಯೂ ಹೌದು. ಹಿಂದಿ ಕವನಗಳನ್ನು, ಕನ್ನಡದಲ್ಲಿ ಕಥೆ-ಕವನಗಳನ್ನೂ ಬರೆಯುತ್ತಿದ್ದರು.) ಅವರಿಗೆ ಆ ದಿನ ಪುತ್ತೂರು ನಾರಾಯಣ ಹೆಗ್ಡೆಯವರ ಭಸ್ಮಾಸುರನ ಪಾತ್ರ ಪ್ರಸ್ತುತಿ ತುಂಬಾ ಇಷ್ಟವಾಯಿತು. ಆಟ ಮುಗಿಸಿ ಅವರು ಮನೆಗೆ, ನಾವು ಅಲ್ಲೇ ರಾತ್ರಿ ನಿದ್ದೆ ಮಾಡಿ, ನಂತರ ಮರುದಿನದ ಕ್ಯಾಂಪ್‌ಗೆ ತೆರಳಿದೆವು.
ಮುಂದಿನ ವರ್ಷದ ತಿರುಗಾಟದ ಸಂದರ್ಭದಲ್ಲಿ ಬಹುಶಃ ಏಪ್ರಿಲ್ ತಿಂಗಳ ಆಸುಪಾಸಿನಲ್ಲಿ ಕೂಡ್ಲು, ಮಧೂರು ಮತ್ತು ಎಡನೀರು - ಹೀಗೆ ಅಕ್ಕಪಕ್ಕದಲ್ಲೇ ಮೂರು ದಿನ ಮೇಳದ ಕ್ಯಾಂಪ್ ಇತ್ತು. ಮಧೂರಿನ ಸೇವೆಯಾಟದಂದು ನಾವು ಪಡುಕಕ್ಕೆಪ್ಪಾಡಿ ಮನೆಗೇ ಹಗಲು ನಿದ್ದೆ ಮಾಡಲು ಹೋದೆವು. ಮತ್ತೊಂದು ಹಂತದಲ್ಲಿ ಮಾತುಕತೆ ನಡೆಯಿತು. ಮೇ ತಿಂಗಳಲ್ಲಿ ಮೇಳ ಒಳಗೆ ಆಗುವುದು (ಅಂದರೆ ಗೆಜ್ಜೆ ಬಿಚ್ಚಿ ತಿರುಗಾಟಕ್ಕೆ ಅಂತ್ಯ ಹಾಡುವುದು). ನಂತರ ಬಹುಶಃ ಜೂನ್-ಜುಲೈ ತಿಂಗಳಲ್ಲಿ ಮದುವೆ ನಿಶ್ಚಯವೂ ಆಯಿತು.
ಅಷ್ಟೊತ್ತಿಗೆ ಮಳೆಗಾಲದ ತಿರುಗಾಟ ಆರಂಭವಾಗಿತ್ತು. ಇದರ ಮಧ್ಯೆ, ಮದುವೆಗೆ ದಿನ ಫಿಕ್ಸ್ ಮಾಡಲು ಪ್ರಯತ್ನಗಳು ನಡೆಯುತ್ತಲೇ ಇದ್ದವು. ಶ್ರೀಗಂಗಾಳಿಗೆ ಅಪ್ಪ ಇರಲಿಲ್ಲವಾದುದರಿಂದ ಅಣ್ಣನೇ ವ್ಯವಸ್ಥೆ ಮಾಡಬೇಕಿತ್ತು. ಅವರ ತಲೆಮಾರಿನ ಆಸ್ತಿಯಾಗಿದ್ದ ಒಂದು ಸಣ್ಣ ಕರಿಮೆಣಸಿನ ತೋಟ ಮಾರಿದ ಹಣವಿನ್ನೂ ಬರುವುದು ತಡವಾಯಿತು. ಮದುವೆ ಖರ್ಚಿಗೆ ಬೇಕಲ್ಲಾ... ಹೀಗೆ ಹಣ ಕೈಸೇರಿದಾಗ ತುಂಬಾ ತಡವಾಗಿತ್ತು. ಕೊನೆಗೆ, ಕನ್ಯಾ ಸಂಕ್ರಮಣ ದಾಟಿದರೆ, ಸಿಂಗೋಡೆ ಬರುತ್ತದೆ. ನಂತರ ಹತ್ತಿರದಲ್ಲೆಲ್ಲೂ ಮದುವೆಗೆ ಮುಹೂರ್ತ ಇರುವುದಿಲ್ಲ ಅಂತ ಅಲ್ಲಿನ ಪುರೋಹಿತರು ಹೇಳಿದರು.
ಮತ್ತೇನು ಮಾಡುವುದು? ಕೊನೆಗೆ, ಪುರೋಹಿತರು ಧೈರ್ಯ ಮಾಡಿ, ಕನ್ಯಾ ಸಂಕ್ರಮಣದ ದಿನದಲ್ಲಿ, ಕೊನೆಯ ಗೋಧೂಳಿ ಮುಹೂರ್ತದಲ್ಲಿಯೂ ಲಗ್ನಕ್ಕೆ ಸೂಕ್ತ ಮುಹೂರ್ತ ಸಿಗದಿದ್ದಾಗ, ಮದುವೆಗೊಂದು ಮುಹೂರ್ತ ಮಾಡಿಯೇಬಿಟ್ಟರು. ಹೀಗೆ, ಜ್ಯೋತಿಷ್ಯಶಾಸ್ತ್ರದಲ್ಲಿ ಏನೋ ಲೆಕ್ಕಾಚಾರ ಮಾಡಿ, ಕನ್ಯಾ ಸಂಕ್ರಮಣದ ಮಧ್ಯರಾತ್ರಿ ನಮ್ಮ ಮದುವೆ ಮುಹೂರ್ತ ಫಿಕ್ಸ್ ಆಯಿತು.
ಮಧ್ಯರಾತ್ರಿ ಮದುವೆಯಾಗುವುದು, ಮುಹೂರ್ತ ಇಲ್ಲದಿದ್ದರೂ ಮುಹೂರ್ತ ಮಾಡಿ ಮದುವೆಯಾಗಿದ್ದಕ್ಕೆ ನಮ್ಮ ಕಡೆಯಲ್ಲಿ ಇಷ್ಟವಿರಲಿಲ್ಲ. ಒಳ್ಳೆಯದಾಗುವುದಿಲ್ಲ ಎಂಬೊಂದು ಆತಂಕವಿತ್ತು. ಆಕ್ಷೇಪ ಬಂತು, ಒಳ್ಳೆಯ ದಿನ ನೋಡಿ ಮದುವೆಯಾಗುವುದಲ್ಲವೇ ಅಂತಲೂ ಕೆಲವರು ಕೇಳಿದರು.
ಅದಕ್ಕೂ ಮೊದಲು ಶ್ರೀಗಂಗಾಳಿಗೆ ಮದುವೆ ಬಗ್ಗೆ ಬೇರೆ ವರನ ಕುಟುಂಬದೊಂದಿಗೆ ಮಾತುಕತೆಯಾಗಿತ್ತು. ಬೇರೆಯವರೆಲ್ಲರೂ ಒಪ್ಪಿದ್ದರೂ ಅವಳಿಗೆ ಆ ಮಾಣಿ ಇಷ್ಟವಿರಲಿಲ್ಲ. ಅದು ಯಾವ ಪ್ರೇರಣೆಯೋ ಗೊತ್ತಿಲ್ಲ. ಬಹುಶಃ ಈ ವಧು ನನಗೇ ಅಂತ ವಿಧಿ ಬರೆದಿತ್ತೋ ಏನೋ!
ಅಂತೂ ಮದುವೆಗೆ ದಿನ ನಿರ್ಧರವಾಯಿತಲ್ಲಾ. ನಾವು, ನಮ್ಮ ಕುಟುಂಬದವರು ಐದು ಕಾರು ಮಾಡಿಕೊಂಡು ಮಧೂರಿಗೆ ಹೋದೆವು. ಸುಮಾರು ಮೂವತ್ತೈದು ಮಂದಿಯ ದಿಬ್ಬಣ ನಮ್ಮದು. ಒಂದು ಕಾರು ಬಾಡಿಗೆ ಹಣ ನೂರಿಪ್ಪತ್ತು ರೂಪಾಯಿ. ಅಂತೂ ಮಧೂರು ಮದನಂತೇಶ್ವರ ವಿನಾಯಕ ದೇವಸ್ಥಾನದ ಬಡಗು ಗೋಪುರದಲ್ಲಿ ಮಧ್ಯರಾತ್ರಿ ನಮ್ಮಿಬ್ಬರ ಮದುವೆಯಾಯಿತು. ಆಟದವನು ನಾನು. ರಾತ್ರಿಯಿಡೀ ರಂಗಸ್ಥಳದಲ್ಲಿಯೇ ಹಗಲು ನಮಗೆ. ಹೀಗೆ, ಮನೆಗೆ ಬರುವ ಮಹಾಲಕ್ಷ್ಮಿಯೂ ಮಧ್ಯರಾತ್ರಿ ನನ್ನನ್ನು ವರಿಸುವಂತಾದುದು ಕಾಕತಾಳೀಯವೇ.
ನಮ್ಮ ಬಂಧುಗಳೆಲ್ಲರಿಗೂ ಆಟ ನೋಡಿ ನಿದ್ದೆಗೆಟ್ಟ ಅನುಭವ. ರಾತ್ರಿಯಿಡೀ ಮದುವೆ ಸಂಭ್ರಮವಾದರೆ, ಮರುದಿನ ಎಲ್ಲರೂ ಕಣ್ಣು ಕೂರುತ್ತಿದ್ದರು (ತೂಕಡಿಸುತ್ತಿದ್ದರು). ಹೀಗೊಂದು ಆಟದವರ ಮದುವೆಗೆ ಬಂದವರಿಗೆ ಆಟವನ್ನೇ ನೋಡಿದ ಅನುಭವವಾಯಿತು!
ಮುಂದೆ, ವಧೂ ಗೃಹ ಪ್ರವೇಶಕ್ಕೂ ಬೇಗನೇ ಒಳ್ಳೆಯ ಮುಹೂರ್ತ ಸಿಕ್ಕಿರಲಿಲ್ಲ. ಮದುವೆಯಾದ 9 ದಿನದ ಬಳಿಕ ಶ್ರೀಗಂಗಾ ಎಂಬ ಮಧೂರಿನ ಹುಡುಗಿ, ಲೀಲಾ ಬೈಪಾಡಿತ್ತಾಯಳಾಗಿ ಕಡಬದ ನಮ್ಮ ಮನೆಗೆ ಕಾಲಿಡಬೇಕಾಗಿದ್ದು ಇತಿಹಾಸ.
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್ಸ್ಟಾಗ್ರಾಂ
Tags:
ಯಕ್ಷ ಮೆಲುಕು