ಗೌತಮರ ಪ್ರಿಯಶಿಷ್ಯ ಸತ್ಯಕಾಮ - ಜಾಬಾಲಿ

ತೆಲಂಗಾಣದಲ್ಲಿರುವ ಚಿಂದು ಯಕ್ಷಗಾನಂ ಎಂಬ ಕಲಾಪ್ರಕಾರದ ತುಣುಕು ಇದು (ಪ್ರಾತಿನಿಧಿಕ)

ಪುರಾಣ ತಿಳಿಯೋಣ ಸರಣಿ By ದಾಮೋದರ ಶೆಟ್ಟಿ, ಇರುವೈಲ್
ಇದು ಛಾಂದಗ್ಯೋಪನಿಷತ್ತಿನ ಕಥೆ. ಹಿಂದೆ ಜಾಬಾಲ ಎಂಬ ಒಬ್ಬ ಶೂದ್ರ ಹೆಂಗಸು ಬೇರೆಯವರ ಮನೆಕೆಲಸ ಮಾಡಿ ಕಾಲಯಾಪನೆ ಮಾಡುತ್ತಿದ್ದಳು. ಅವಳಿಗೆ ಸತ್ಯಕಾಮ ಎಂಬ ಮಗನಿದ್ದ. ಅವನಿಗೆ ಪ್ರಾಯ ತುಂಬಿದಾಗ ವಿದ್ಯಾಭ್ಯಾಸ ಮಾಡಬೇಕೆಂಬ ಇಚ್ಛೆಯಾಯಿತು.

ಅವನು ಹರಿದ್ರುಮತ ಗೌತಮರ ಆಶ್ರಮಕ್ಕೆ ಹೋಗಿ ತನ್ನನ್ನು ಶಿಷ್ಯನಾಗಿ ಸ್ವೀಕರಿಸಬೇಕೆಂದು ಕೇಳಿಕೊಳ್ಳುತ್ತಾನೆ. ಆಗ ಗೌತಮರು ಅವನ ಪ್ರವರವನ್ನು (ತಂದೆ ತಾಯಿ, ವಂಶ ಇತ್ಯಾದಿ) ವಿಚಾರಿಸುತ್ತಾರೆ. ಅದಾವುದನ್ನೂ ತಿಳಿಯದ ಬಾಲಕ ತನ್ನ ತಾಯಿಯ ಬಳಿ ಬಂದು ತನ್ನ ತಂದೆ ಯಾರೆಂದು ವಿಚಾರಿಸುತ್ತಾನೆ. ಆಗ ಅವನ ತಾಯಿ ಪ್ರಾಂಜಲವಾಗಿ ಹೀಗೆಂದು ಹೇಳುತ್ತಾಳೆ : "ನಾನು ಯೌವನದಲ್ಲಿ ಅನೇಕ ಕುಲೀನರ ಮನೆಯಲ್ಲಿ ಸೇವೆ ಮಾಡುತ್ತಿದ್ದೆ, ಆಗ ನೀನು ಹುಟ್ಟಿದೆ, ನಿನ್ನ ತಂದೆ ಯಾರೆಂದು ನನಗೂ ತಿಳಿದಿಲ್ಲ".

ಬಾಲಕ ಸತ್ಯಕಾಮ ಗೌತಮರಲ್ಲಿ ಹೋಗಿ ತಾಯಿ ಹೇಳಿದುದನ್ನು ಯಥಾವತ್ ಹೇಳುತ್ತಾನೆ. ಅವನ ಸತ್ಯಸಂಧತೆಯನ್ನು ಕಂಡು ಸಂತುಷ್ಟರಾದ ಗೌತಮರು, ಅವನನ್ನು ಬ್ರಾಹ್ಮಣನೆಂದು ಒಪ್ಪಿಕೊಂಡು ಅವನನ್ನು ಶಿಷ್ಯನಾಗಿ ಸ್ವೀಕರಿಸಿದರು.

ಒಮ್ಮೆ ಅವನಿಗೆ ನಾನೂರು ಗೋವುಗಳನ್ನು ಕೊಟ್ಟು ಅವನ್ನು ಕಾಡಿನಲ್ಲಿ ಮೇಯಿಸುತ್ತಾ ಅವುಗಳ ಸಂಖ್ಯೆ ಸಾವಿರವಾದಾಗ ಬರಬೇಕೆಂದು ಹೇಳುತ್ತಾರೆ. ಸತ್ಯಕಾಮನು ಹಾಗೆಯೇ ಮಾಡಿ ಗುರುಗಳು ಒಡ್ಡಿದ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಗುರುಗಳ ಪ್ರಿಯ ಶಿಷ್ಯನಾಗುತ್ತಾನೆ.

ಮುಂದೆ ಗುರುಗಳು ಅವನಿಗೆ ಸಂಪೂರ್ಣ ವೇದ ವಿದ್ಯೆಯನ್ನು ಧಾರೆಯೆರೆಯುತ್ತಾರೆ. ಅವನೇ ಮುಂದೆ ಸತ್ಯಕಾಮ ಜಾಬಾಲ ಎಂದು ಪ್ರಸಿದ್ಧನಾಗುತ್ತಾನೆ. ಮುಂದೆ ಅವನು ಜಾಬಾಲಿ ಉಪನಿಷತ್ ಎಂಬ ಗ್ರಂಥವನ್ನು ರಚಿಸುತ್ತಾನೆ.

ಸಂ: ದಾಮೋದರ ಶೆಟ್ಟಿ, ಇರುವೈಲು

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು