ಯಕ್ಷಗಾನ: ಚೌಕಿಯೊಂದಿಗೆ ರಂಗಸ್ಥಳದಲ್ಲಿಯೂ ಆರಾಧನೆಗೆ ನಾಂದಿ

ಬಡಗು ತಿಟ್ಟಿನ ಬಾಲ-ಗೋಪಾಲರಿಂದ ರಂಗದಲ್ಲಿ ದೇವರ ಗಾನ-ನಾಟ್ಯ ಅರ್ಚನೆ
ಯಕ್ಷಗಾನಕಲೆ- ಪ್ರೇಕ್ಷಕವರ್ಗ- ಬದಲಾದ ದೃಷ್ಟಿಕೋನ -11 ಸರಣಿ by ಸುರೇಂದ್ರ ಪಣಿಯೂರ್

ಯಕ್ಷಗಾನ ಕಲೆಯು ದೇವಸ್ಥಾನಗಳನ್ನು ಕೇಂದ್ರ ಸ್ಥಾನವಾಗಿರಿಸಿಕೊಂಡು ಆರಾಧನಾ ಕಲೆಯಾಗಿ ಮೇಳವೆಂಬ ಪರಿಕಲ್ಪನೆಯೊಂದಿಗೆ ತಿರುಗಾಟಕ್ಕೆ ಶುರುವಿಟ್ಟವು.. ಈ ಕಾರಣದಿಂದ ದೇವಸ್ಥಾನದ ದೇವರು ಹಾಗೂ ಕ್ಷೇತ್ರವು ಪ್ರಸಿದ್ದಿ ಹಾಗೂ ವಿಶೇಷ ಆಕರ್ಷಣೆಯನ್ನು ಗಳಿಸಿಕೊಂಡಿತು.

ಮೇಳ ತಿರುಗಾಟ ಆರಂಭಗೊಂಡ ದಿನಗಳಲ್ಲಿ ಯಕ್ಷಗಾನ ಮೇಳಗಳ ಪ್ರದರ್ಶನವು ಆಯಾಯ  ಊರಿನಲ್ಲಿರುವ ಜಮೀನ್ದಾರರ, ಅಭಿಮಾನಿಗಳ ಅಸರೆಯನ್ನು ಆಶ್ರಯಿಸಿತು. ಇಲ್ಲಿ ಅಭಿಮಾನಿಗಳು ಸಂಗ್ರಹಿಸಿಕೊಟ್ಟ ಆರ್ಥಿಕ ನೆರವು ಮೇಳದ ಸಂಪಾದನೆಯ ಮೂಲವಾಯಿತು.

ಮುಂದುವರಿದ ದಿನಗಳಲ್ಲಿ ಆಯಾಯ ದೇವಸ್ಥಾನಗಳಲ್ಲಿ ಆರಾಧಿಸಿಕೊಂಡು ಬರುವ ದೇವರಲ್ಲಿ  ಭಕ್ತಿಭಾವ ಇರಿಸಿಕೊಂಡ ಆರಾಧಿಸಿಕೊಂಡು ಭಕ್ತಾದಿಗಳು ತಮ್ಮ ಇಷ್ಟಾರ್ಥ ನೆರವೇರಿಕೆಗಾಗಿ ಈ ಮೇಳಗಳ ಆಟವನ್ನು ಆಡಿಸುವ ಹರಕೆ ಹೊತ್ತುಕೊಂಡರು.

ಇಲ್ಲಿ ನಂಬಿಕೆಗಳು ಪ್ರಧಾನವಾಗಿ ಹರಕೆಗಳು ನಾನಾ ರೂಪವನ್ನು ತಳೆದವು. ಇವುಗಳು ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಬಯಲು ಬೆಳಕಿನ ಸೇವೆಯಾಟದ ಹರಕೆ, ಮೇಳಗಳಲ್ಲಿ ಗೆಜ್ಜೆ ಕಟ್ಟಿ ಕುಣಿವ ಹರಕೆ, ಒಂದು ಮೇಳದ ಇಂತಿಷ್ಟು ಯಕ್ಷಗಾನ ಪ್ರದರ್ಶನವನ್ನು ಈಕ್ಷಿಸುವ ಹರಕೆ, ಮೇಳದ ತಿರುಗಾಟದ ವರ್ಷದಲ್ಲಿ ಇಂತಿಷ್ಟು ಇಂತಹ ಪ್ರಸಂಗ ನೋಡುತ್ತೇನೆ ಅನ್ನುವ ಹರಕೆ... ಇತ್ಯಾದಿಯಾಗಿ ಹಲವಾರು ನಮೂನೆಯ ಹರಕೆಗಳು ಹುಟ್ಟಿಕೊಂಡವು .

ಇವೆಲ್ಲವೂ ಭಕ್ತರ ನಂಬಿಕೆಯ ಮೇಲೆ ಹುಟ್ಟಿಕೊಂಡ ಹರಕೆಗಳು. ಇದರಲ್ಲಿ ಶ್ರೇಷ್ಠವಾದ ಹರಕೆ ಬಯಲು ಬೆಳಕಿನ ಸೇವೆಯಾಟ ಅಂದರೆ ಯಕ್ಷಗಾನ ಮೇಳದ ಬಯಲಾಟ ಪ್ರದರ್ಶನ ಏರ್ಪಡಿಸುವ ಹರಕೆ. ಭಕ್ತ ತನ್ನ ಕಷ್ಟ ಕಾಲಕ್ಕೆ ಹೇಳಿಕೊಂಡ ಹರಕೆ ಆಗಿರಬಹುದು. ಅಥವಾ ತನ್ನ ಸಂತೋಷದ ಕ್ಷಣಗಳ ಅಚರಣೆಗೆ ಹೇಳಿಕೊಂಡ ಹರಕೆಗಳೂ ಇರಬಹುದು. ಅಂತೂ ಇದರಿಂದ ಯಕ್ಷಗಾನವು ಪ್ರದರ್ಶನ ವಿಭಾಗಗಳಲ್ಲಿ ಸಮೃದ್ಧಿಯನ್ನು ಕಂಡಿತು.
 
ದೇವಸ್ಥಾನದ ವತಿಯಿಂದ ತಿರುಗಾಟಕ್ಕೆ ಹೊರಟ ಯಕ್ಷಗಾನ ಮೇಳಗಳಲ್ಲಿ ದೇವಸ್ಥಾನದಲ್ಲಿ ಪೂಜೆಗೊಳ್ಳುವ ಅಧಿದೇವತೆಗೂ ಕೂಡಾ ಯಕ್ಷಗಾನ ಮೇಳದಲ್ಲಿ ಪೂಜೆಗೊಳ್ಳುವ ಗಣಪನ ಜೊತೆಗೆ ಪೂಜೆಗೊಳ್ಳುವ ಅವಕಾಶದೊಂದಿಗೆ, ದೇವಸ್ಥಾನದ ಕಾರಣಿಕದ ಪ್ರಸಾರವೂ ಆಯಿತು.

ಮೇಳದಲ್ಲಿಯ ಪೂಜೆಯು ಯಾವುದೇ ರೀತಿಯ ವೈದಿಕ ವಿಧಿ ವಿಧಾನಗಳನ್ನು ಒಳಗೊಳ್ಳದೆ ಕೇವಲ ದೇವರನ್ನು ಸಾಂಕೇತಿಕವಾಗಿ  ಕಿರೀಟದ ರೂಪದಲ್ಲಿ ಹಾಗೂ ಸ್ವಸ್ತಿಕೆ ಇಟ್ಟು ಪೂಜೆ ಮಾಡುವುದು ರೂಢಿಗೆ ಬಂದಿತು.

ಯಕ್ಷಗಾನ ಮೇಳದಲ್ಲಿ  ಆರಾಧನೆಯ ಅಂಗವಾಗಿ ಪೂರ್ವರಂಗ ಅನ್ನುವ ವಿಭಾಗದಲ್ಲಿ ದೇವರನ್ನು ರಂಗದಲ್ಲಿ ಅರ್ಚನೆಯ ಜೊತೆಗೆ ಹಾಡಿ ಹೊಗಳುವ  ಕ್ರಿಯೆಗೆ ಚಾಲನೆ ದೊರೆಯಿತು.

ಇಲ್ಲಿ ಗಣಪ, ವಿಷ್ಣು, ಪರಮೇಶ್ವರ, ಭಗವತಿ, ದುರ್ಗಾ, ಷಣ್ಮುಖ, ಶ್ರೀರಾಮ, ಹನುಮಂತ ಮುಂತಾದ ದೇವರನ್ನು ಸ್ತುತಿಸಿ ಆರಾಧಿಸುವ ಕ್ರಮವಿದೆ. ಈ ಪೂರ್ವರಂಗವು ಕೊನೆಗೊಂಡಲ್ಲಿಗೆ ಮುಂದೆ ಕಥಾಭಾಗವು ಆರಂಭವಾಗುತ್ತದೆ. ಇಲ್ಲಿ ನಮ್ಮದಾದ ಪುರಾಣ ಪ್ರಸಂಗಗಳನ್ನು ಅಡಿ ತೋರಿಸುವ ಮೂಲಕ ಭಕ್ತಿಪಂಥವನ್ನು ಮೆರೆಸಲಾಗುತ್ತದೆ (ಸಶೇಷ).

ಲೇಖನ: ಸುರೇಂದ್ರ ಪಣಿಯೂರ್

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅಭಿಪ್ರಾಯ ತಿಳಿಸಿ

ನವೀನ ಹಳೆಯದು