ಯಕ್ಷಗಾನದಲ್ಲಿ ಮಹಿಳೆಯರು ಪಾರುಪತ್ಯ ಸಾಧಿಸಿ ಅದೆಷ್ಟೋ ಕಾಲವಾಯಿತು. ಭಾಗವತರಾದ ಲೀಲಾ ಬೈಪಾಡಿತ್ತಾಯರು ಮೇಳಗಳಲ್ಲಿ ತಿರುಗಾಟ ನಡೆಸಿ ತಿರುಗಾಟಕ್ಕೆ ಮಹಿಳಾ ಹೆಜ್ಜೆಯ ಮೈಲಿಗಲ್ಲು ಸ್ಥಾಪಿಸಿ ಹಲವರಿಗೆ ಪ್ರೇರಕರಾಗಿದ್ದರೆಂಬ ನೆನಪಿನೊಂದಿಗೆ, ಅವರ ಆಶೀರ್ವಾದದೊಂದಿಗೆ ಅವರದೇ ಊರಿನ ಅಂದರೆ ಬಜಪೆ ಸಮೀಪದ ಕೊಳಂಬೆ ಗ್ರಾಮದ ತಲಕಳ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರವು ಮಹಿಳೆಯೊಬ್ಬಳ ಮುಂದಾಳುತ್ವದಲ್ಲಿ ಚೆಂಡೆ-ಮದ್ದಳೆ-ಭಾಗವತಿಕೆ-ಚಕ್ರತಾಳದಿಂದ ಹಿಡಿದು, ರಂಗ ಸಹಾಯಕರವರೆಗೆ, ಎಲ್ಲದಕ್ಕೂ ಮಹಿಳೆಯರನ್ನೇ ಆಯ್ಕೆ ಮಾಡಿಕೊಂಡು ಐದು ದಿನಗಳ ಕಾಲ ಕಿಕ್ಕಿರಿದ ಸಭಾಂಗಣಗಳಲ್ಲಿ ಪ್ರದರ್ಶನ ನೀಡುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿ ಹಾಡಿದೆ.
2025 ಜೂನ್ 21ರಿಂದ ಜೂ.25ರವರೆಗೆ ಐದು ದಿನಗಳ ಕಾಲ, ಮುಂಬಯಿಯ ವಿವಿಧ ಭಾಗಗಳಲ್ಲಿ ನಡೆದ ಯಕ್ಷಗಾನದಲ್ಲಿ ಕೊನೆಯ ಮೂರು ದಿನ, ಅತ್ಯಂತ ಶ್ರಮವನ್ನೂ, ಕ್ಷಿಪ್ರ ಸ್ಪಂದನೆಯನ್ನೂ ಬೇಡುವ ಶ್ರೀದೇವಿ ಮಹಾತ್ಮೆ ಯಕ್ಷಗಾನವು ಊರಿನಲ್ಲಿರುವಂತೆಯೇ ಬ್ಯಾಂಡು-ವಾದ್ಯಗಳ ಹಿತಮಿತವಾದ ಬಳಕೆಯೊಂದಿಗೆ ಮೇಳೈಸಿದ್ದು ವಿಶೇಷ. ಪ್ರೇಕ್ಷಕರ ಪ್ರತಿಕ್ರಿಯೆಯಂತೂ (ನೇರವಾಗಿ ರಂಗಸ್ಥಳದ ಹಿಂದೆ ಬಂದು, ಚೌಕಿಗೆ ಬಂದು, ಸಭಾ ಕಾರ್ಯಕ್ರಮದಲ್ಲಿ ಮತ್ತು ಈಗಿನ ವಾಟ್ಸ್ಆ್ಯಪ್-ಮೆಸೆಂಜರ್ ಸಂದೇಶಗಳು, ಫೋನ್ ಕರೆಗಳ ಮೂಲಕ) ವರ್ಣಿಸಲಸದಳ. ಮುಂಬಯಿಯ ಯಕ್ಷಗಾನ ಪ್ರಿಯರು ತೋರಿದ ಪ್ರೀತಿ ಆದರಕ್ಕೆ ಎಣೆಯಿಲ್ಲ. ಅವರಿಗೆ ಸದಾ ಕೃತಜ್ಞ ಎನ್ನುತ್ತಾರೆ ತಂಡದ ನೇತೃತ್ವ ವಹಿಸಿದ್ದ ಯೋಗಾಕ್ಷಿ ಗಣೇಶ್, ತಲಕಳ.
ಯಕ್ಷಗಾನ.ಇನ್ ಅಪ್‌ಡೇಟ್ಸ್ ಪಡೆಯಲು ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ ಫಾಲೋ ಮಾಡಿ.
ಐದೂ ದಿನಗಳಿಗಾಗಿ ಈ ತಂಡಗಳ ಪ್ರಾಯೋಜಕತ್ವವನ್ನು ವಹಿಸಿದವರು ಯಕ್ಷಗಾನ ಪ್ರೀತಿಯುಳ್ಳ ಮುಂಬಯಿ ಉದ್ಯಮಿ, ಕಲಾ ಪೋಷಕ, ಸಂಘಟಕರಾದ ಅಜೆಕಾರು ಬಾಲಕೃಷ್ಣ ಶೆಟ್ಟಿ. ಅವರು ಅಜೆಕಾರು ಕಲಾಭಿಮಾನಿ ಬಳಗ (ರಿ) ಹೆಸರಿನಲ್ಲಿ ಕಳೆದ 24 ವರ್ಷಗಳಿಂದ ಮುಂಬಯಿಯಲ್ಲಿ ಯಕ್ಷಗಾನ ಮತ್ತು ಇತರ ಕಲೆಗಳನ್ನು ಪೋಷಿಸುತ್ತಾ ಬಂದಿದ್ದಾರೆ. ಅಷ್ಟೇನೂ ಖ್ಯಾತಿ ಪಡೆಯದ, ಎಲೆಮರೆಯ ಕಾಯಿಯಂತಿದ್ದ ಪ್ರತಿಭಾನ್ವಿತರ ತಂಡವನ್ನು ಕರೆಸಿ ಮುಂಬೈಯಲ್ಲಿ ಪ್ರದರ್ಶನ ಮಾಡಿಸಿ, ಗೆದ್ದಿದ್ದಾರೆ.
ಐದು ದಿನಗಳ ಜೈತ್ರ ಯಾತ್ರೆ
ಜೂ. 21ರಂದು ಮಹಿಳಾ ತಂಡದ ಅಭಿಯಾನದ ಮೊದಲ ಪ್ರದರ್ಶನ ಮೀರಾ ಭಾಯಂದರ್‌ನಲ್ಲಿರುವ ಸೈಂಟ್ ಆಗ್ನೆಸ್ ಹೈಸ್ಕೂಲ್ ಸಭಾಂಗಣದಲ್ಲಿ. ಆಯೋಜಿಸಿರುವುದು ಸುಮತಿ ರೈ ಎಜುಕೇಶನ್ ಟ್ರಸ್ಟ್ ಹಾಗೂ ಕರ್ನಾಟಕ ಮಹಾಮಂಡಳ ಮೀರಾ ಭಾಯಂದರ್ (ರಿ). ಪ್ರಸಂಗ ಕೃಷ್ಣ ಕೃಷ್ಣ ಶ್ರೀಕೃಷ್ಣ. ಸ್ಥಳೀಯ ತುಳು ಅಭಿಮಾನಿಗಳ ಮೇರೆಗೆ ಶ್ರೀಕೃಷ್ಣ ಪಾರಿಜಾತ, ನರಕಾಸುರ ವಧೆ ಹಾಗೂ ಗರುಡ ಗರ್ವಭಂಗ ಪ್ರಸಂಗಗಳ ಮಾತುಗಾರಿಕೆ ತುಳುವಿನಲ್ಲೇ ಸಾಗಿತು.
ಪೂರ್ವರಂಗದಿಂದ ಗಣಪತಿ ಕೌತುಕವನ್ನು ತೆಗೆದುಕೊಂಡು, ನಿಗದಿತ ಕಾಲಮಿತಿಯಲ್ಲಿ ಅಪರೂಪದ ಶ್ರೀಕೃಷ್ಣನ ಒಡ್ಡೋಲಗವನ್ನು ತಂಡದವರು ಅತ್ಯಂತ ಆಪ್ಯಾಯಮಾನವಾಗುವಂತೆ ಪ್ರಸ್ತುತಪಡಿಸಿದ್ದು ವಿಶೇಷವಾಗಿತ್ತು. ತೆರೆ ತೆಗೆದಾಕ್ಷಣ ಅಷ್ಟಮಾಂಗನೆಯರೊಂದಿಗೆ ಶ್ರೀಕೃಷ್ಣ ಪವಡಿಸಿದ ದೃಶ್ಯ ನೋಡಿ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ ಪ್ರೇಕ್ಷಕರು ಕೆಲವರು ಕೈಮುಗಿದರೆ, ಕೆಲವರಂತೂ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಅದೇ ರೀತಿ ಮುರಾಸುರ ಪಾತ್ರವು ಚಿಟ್ಟಿಯಿಟ್ಟ ಮುಖವರ್ಣಿಕೆಯೊಂದಿಗೆ ಕೇಶಾವರಿ ಕಿರೀಟದಲ್ಲಿ ರಂಗದಲ್ಲಿ ಗಮನ ಸೆಳೆಯಿತು.
ಜೂ.22ರಂದು ದೊಂಬಿವಿಲಿ ಪೂರ್ವದಲ್ಲಿರುವ ಪ್ಲಾಟಿನಂ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಂಬಯಿ ಪ್ರೇಕ್ಷಕರ ಕೋರಿಕೆಯ ಮೇರೆಗೆ ಅಪರೂಪದ ಮತ್ತು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸವಾಲು ಎನಿಸಿದ, ಅಮೃತ ಸೋಮೇಶ್ವರ ವಿರಚಿತ ಅಮರಶಿಲ್ಪಿ ವೀರ ಶಂಭು ಕಲ್ಕುಡ ಪ್ರಸಂಗ ಪ್ರದರ್ಶನಗೊಂಡಿತು. ಕಲ್ಲುರ್ಟಿ - ಕಲ್ಕುಡ ದೈವಗಳು ಸಭೆಯಿಂದ ಪ್ರವೇಶಿಸುವಾಗ ಪ್ರೇಕ್ಷಕರು ಭಕ್ತಿಭಾವಪರವಶರಾಗಿ ಕೈಮುಗಿದದ್ದು, ಎರಡೂ ವೇಷಗಳು ರಂಗದಲ್ಲಿ ವಿದ್ಯುತ್ ಸಂಚಾರ ಮೂಡಿಸಿದ್ದು ವಿಶೇಷ. ಅಂತೆಯೇ ಎಲ್ಲ ಪಾತ್ರಗಳ ಮನೋಜ್ಞವಾದ, ಭಾವಪೂರ್ಣ ಅಭಿನಯ ಈ ಪ್ರದರ್ಶನದ ಹೈಲೈಟ್.
ಹ್ಯಾಟ್ರಿಕ್ ದೇವಿ ಮಹಾತ್ಮೆ ಪ್ರಸಂಗಗಳು
ಜೂ.23ರಂದು ಮುರನಗರ ಆನಂದ ಬಂಗೇರ ಪ್ರಾಯೋಜಕತ್ವದಲ್ಲಿ ಮುಲುಂಡ್ ಚೆಕ್‌ನಾಕದಲ್ಲಿರುವ ನವೋದಯ ಜೂನಿಯರ್ ಕಾಲೇಜಿನ ಸಭಾಭವನದಲ್ಲಿ, ಜೂ.24ರಂದು -ಘನ್ಸೋಲಿಯ ಪ್ರಖ್ಯಾತ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ (ಅದ್ಯಪಾಡಿ ಬಾಲಕೃಷ್ಣ ಶೆಟ್ಟರ ಪ್ರಾಯೋಜಕತ್ವದಲ್ಲಿ) ಹಾಗೂ ಜೂ.25ರಂದು ಸನಾತನ ಧರ್ಮಜ್ಯೋತಿ ಪ್ರಾಯೋಜಕತ್ವದಲ್ಲಿ ಮುಲುಂಡ್ ಪಶ್ಚಿಮದಲ್ಲಿರುವ ಮಹಾರಾಷ್ಟ್ರ ಸೇವಾ ಸಂಘದ ಬ್ಯಾಂಕ್ವೆಟ್ ಹಾಲ್‌ನಲ್ಲಿ - ಹೀಗೆ ಮೂರೂ ದಿನ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನವು ಊರಿನಿಂದ ಇವುಗಳಿಗಾಗಿಯೇ ಆಗಮಿಸಿದ ಭಾಸ್ಕರ ನಿಡ್ಡೋಡಿ ಅವರ ಬ್ಯಾಂಡು-ವಾದ್ಯಗಳೊಂದಿಗೆ ಪ್ರಚಂಡವಾಗಿಯೇ ಪ್ರದರ್ಶನಗೊಂಡಿತು.
ವಂದನಾ ಮಾಲೆಂಕಿ ಚೆಂಡೆ ವಾದನದಲ್ಲಿ ಚಂಡ-ಮುಂಡರ ಪ್ರವೇಶದ ಲಿಂಕ್ ಇಲ್ಲಿದೆ
ದೇವಿ ಮಹಾತ್ಮೆ ಊರಿನಲ್ಲಿ ಅತೀ ಹೆಚ್ಚು ಪ್ರದರ್ಶನಗೊಳ್ಳುವ ಪ್ರಸಂಗವಾದರೂ, ಅದನ್ನು ನಿಭಾಯಿಸುವುದು ಮತ್ತು ಅಲ್ಲಿನ ಸಭಾ ಕಾರ್ಯಕ್ರಮದ ದೀರ್ಘತೆಗೆ ಅನುಗುಣವಾಗಿ ಕಿರಿದುಗೊಳಿಸಿ, ಸೂಕ್ತ ಸಮಯದಲ್ಲಿ ಮುಗಿಸುವುದು ದೊಡ್ಡ ಸವಾಲೇ ಸರಿ. ಅದರಲ್ಲಿ ಅಬ್ಬರವನ್ನೂ, ಬೇಕಾದಾಗಲೆಲ್ಲಾ ವೇಗವನ್ನೂ ಕಾಯ್ದುಕೊಳ್ಳಬೇಕು, ಪ್ರತಿಯೊಂದು ದೃಶ್ಯಕ್ಕೂ ಎಲ್ಲ ಕಲಾವಿದರ ಗಮನ ಇರಬೇಕಾಗುತ್ತದೆ. ಒಂದಾದ ಬಳಿಕ ಮತ್ತೊಂದು ದೃಶ್ಯಕ್ಕೆ ಸಿದ್ಧವಾಗುವುದು ಕೂಡ. ಇಂಥದ್ದನ್ನು ಮಹಿಳಾ ತಂಡದ ಭಾಗವತರು, ಚೆಂಡೆ-ಮದ್ದಳೆಯವರು ಹಾಗೂ ಮುಮ್ಮೇಳ ಕಲಾವಿದರು ಪರಸ್ಪರ ಹೊಂದಾಣಿಕೆಯೊಂದಿಗೆ ಸಮರ್ಥವಾಗಿ ನಿಭಾಯಿಸಿದರು. ದಿನದಿಂದ ದಿನಕ್ಕೆ ದೇವಿಮಹಾತ್ಮೆ ಪ್ರಸಂಗದ ಪ್ರದರ್ಶನವು ಪಕ್ವಗೊಳ್ಳುತ್ತಾ ಹೋಯಿತಲ್ಲದೆ, ಕೊನೆಯ ದಿನವಂತೂ ಅತ್ಯುತ್ತಮವಾಗಿ ಪ್ರದರ್ಶಿತವಾಗಿ, ಮುಂಬೈ ಪ್ರೇಕ್ಷಕರ ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಯಿತು.
ಕೆಲವೇ ನಿಮಿಷಗಳ ಕಾಲ ರಂಗದಲ್ಲಿ ವಿಜೃಂಭಿಸುವ ಶುಭ-ನಿಶುಂಭ ಪಾತ್ರಗಳಿಗೆ ಸಾಂಪ್ರದಾಯಿಕವಾಗಿ ಚಿಟ್ಟಿ ಇಟ್ಟು ಬಣ್ಣಗಾರಿಕೆ ಮಾಡಿದ್ದು ಗಮನಾರ್ಹ ಅಂಶ. ಅವೆರಡೂ ಪಾತ್ರಗಳ ನಿಧಾನಗತಿಯ ಒಡ್ಡೋಲಗವು ಊರಿನ ಆಟವನ್ನೇ ನೆನಪಿಸಿತು ಎಂದು ಸಭಿಕರು ಆನಂದತುಂದಿಲರಾಗಿ ಶ್ಲಾಘಿಸಿದರು. ಬ್ರಹ್ಮ-ವಿಷ್ಣು-ಮಹೇಶ್ವರರ ಕ್ಷಿಪ್ರ ಸಂವಾದ, ಮಧು-ಕೈಟಭರ ಉದ್ಭವ, ಮಾಲಿನಿಯ ಚುರುಕು ನಾಟ್ಯ, ಮಾಲಿನಿ ದೂತನ ಚುಟುಕು ಹಾಸ್ಯ, ಚಂಡ-ಮುಂಡರ ವೇಗ ಹಾಗೂ ಮಹಿಷಾಸುರನ ಅಬ್ಬರ, ದೇವೇಂದ್ರಾದಿ ಸುಮನಸರು ಮತ್ತು ರಕ್ಕಸ ಬಲಗಳು, ಯಕ್ಷರ ಕುಣಿತ-ಮಾತು, ಅಷ್ಟಭುಜೆಯ ವೀರಾವೇಶ, ಕೌಶಿಕೆಯ ಲಾಲಿತ್ಯಪೂರ್ಣ ನಾಟ್ಯ ಮತ್ತು ವೀರಾವೇಶ; ಸಿಂಹ, ರಕ್ತೇಶ್ವರಿ, ಕಾಳಿಯ ಅಬ್ಬರ, ವಿದ್ಯುನ್ಮಾಲಿ- ಧೂಮ್ರಾಕ್ಷರ ಗತ್ತು, ಸುಗ್ರೀವನ ಭಕ್ತಿ, ರಕ್ತಬೀಜನ ಮಾತು-ನಾಟ್ಯ ಮತ್ತು ವೀರಾವೇಶ ಇಡೀ ಪ್ರೇಕ್ಷಕರು ಸಭಾಂಗಣದಿಂದ ಕದಲದಂತೆ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾದ ಅಂಶಗಳು. ಇದರ ಜೊತೆಗೆ, ಕೊನೆಯಲ್ಲಿ ರಕ್ತೇಶ್ವರಿ ಪಾತ್ರಿಯ ಹಾಸ್ಯಲೇಪಿತ ನುಡಿಗಳಂತೂ ಮುಂಬೈ ಯಕ್ಷಗಾನಾಭಿಮಾನಿಗಳ ಮನ ಗೆದ್ದವು.
ಕೊನೆಯ ದಿನದ ಪ್ರದರ್ಶನದಲ್ಲಿ ರಕ್ತಬೀಜ ಆಖ್ಯಾನದ ಲಿಂಕ್ ಇಲ್ಲಿದೆ:
ಐದೂ ದಿನಗಳಲ್ಲಿ ನಡೆದ ಸಭಾ ಕಾರ್ಯಕ್ರಮಗಳಲ್ಲಿ ಕಲಾ ಪೋಷಕರ ಜೊತೆಗೆ, ತಂಡದ ಪ್ರಮುಖ ಕಲಾವಿದರನ್ನು ಕರೆದು ವೇದಿಕೆಯಲ್ಲಿ ಸನ್ಮಾನ ಮಾಡಲಾಯಿತು.
ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ ಮತ್ತು ಸಿಂಚನಾ ಮೂಡುಕೋಡಿ - ಇವರ ಸುಮಧುರವಾದ ಹಾಡುಗಾರಿಕೆಗೆ ಹಲವು ಸಂದರ್ಭಗಳಲ್ಲಿ ಪ್ರೇಕ್ಷಕರು ಹೊಣೆಯರಿತು ಚಪ್ಪಾಳೆ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲರ ಕೇಂದ್ರ ಬಿಂದು, ಈಗಷ್ಟೇ ಹತ್ತನೇ ತರಗತಿ ಪೂರ್ಣಗೊಳಿಸಿದ ಹಿಮ್ಮೇಳವಾದಕಿ ವಂದನಾ ಮಾಲೆಂಕಿ. ಕಿರಿ ವಯಸ್ಸಿನಲ್ಲೇ ಚೆಂಡೆ ವಾದನದ ಮೂಲಕ ಗಮನ ಸೆಳೆದಿದ್ದ ವಂದನಾ ಅವರು ಅತ್ಯುತ್ಸಾಹದಿಂದ ಲೀಲಾಜಾಲವಾಗಿ ಚೆಂಡೆ ನುಡಿಸುತ್ತಿದ್ದರೆ, ಪ್ರೇಕ್ಷಕರು ಮಂತ್ರಮುಗ್ಧರಾದಂತೆ ಆಟವನ್ನು ಆನಂದಿಸಿದರು. ನಂತರ ಮದ್ದಳೆಯಲ್ಲಿಯೂ ವಂದನಾ ಕೈಚಳಕ ತೋರಿಸಿದರು. ಇದರೊಂದಿಗೆ ಶ್ರಾವ್ಯ ತಲಕಳ ಹಾಗೂ ಮಹತಿ ಶೆಟ್ಟಿ ಅಂಡಾಲ ಅವರ ಮದ್ದಳೆ ವಾದನವು ಮುಂಬೈ ಪ್ರೇಕ್ಷಕರಿಂದ ಶಹಬ್ಬಾಸ್‌ಗಿರಿ ಪಡೆಯಿತು. ಶರಣ್ಯ ನೆತ್ತರಕೆರೆ, ಶಮಾ ತಲಕಳ ಅವರೂ ಚೆಂಡೆ-ಮದ್ದಳೆಯಲ್ಲಿ ಸಮರ್ಥ ಸಾಥ್ ನೀಡಿದರು. ಪ್ರಜ್ಞಾ ಆಚಾರ್ಯ ಹಾಗೂ ಸಮಯವಿದ್ದಾಗಲೆಲ್ಲಾ ತಂಡದ ಇತರ ಕಲಾವಿದರೂ ಚಕ್ರತಾಳ ನುಡಿಸಿ, ತಂಡ ಸ್ಫೂರ್ತಿ ಪ್ರಚುರಪಡಿಸಿದರು. ಭಾಗವತರಾದ ಶಾಲಿನಿ ಹೆಬ್ಬಾರ್ ಅವರು ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿ, ಆದಿಮಾಯೆಯಾಗಿ ಮಿಂಚಿದರೆ, ಮೈತ್ರಿ ಉಡುಪರೂ ದಿತಿ ಪಾತ್ರದ ಮೂಲಕ ಗಮನ ಸೆಳೆದರು. ತಂಡದ ಮುಖ್ಯಸ್ಥೆ ಯೋಗಾಕ್ಷಿ ಗಣೇಶ್ ಅವರೂ ಸುಗ್ರೀವನ ಪಾತ್ರದ ಮೂಲಕ ಪ್ರೇಕ್ಷಕರ ಬೇಡಿಕೆಗೆ ಸ್ಪಂದಿಸಿದರು.
ಚಕ್ರತಾಳ, ಪರದೆ ಹಿಡಿಯುವುದು, ದೊಂದಿ-ರಾಳ ಹಿಡಿಯುವುದು - ಇವನ್ನೂ ಮಹಿಳೆಯರೇ ನಿಭಾಯಿಸುವ ಮೂಲಕ, ರಂಗಸ್ಥಳದ ಎಲ್ಲ ಅಂಗಗಳಲ್ಲಿ ಮಹಿಳಾ ಪಾರುಪತ್ಯವನ್ನು ಕೆಲವು ವರ್ಷಗಳ ಹಿಂದೆ ಬಜಪೆಯ ಮುರನಗರದಲ್ಲಿ ತೋರಿಸಿ ದಾಖಲೆ ಬರೆದಿದ್ದ ಶ್ರೀಶ ಯಕ್ಷಗಾನ ಕಲಿಕಾ ಕೇಂದ್ರವು, ಪ್ರೇಕ್ಷಕರ ಬೇಡಿಕೆಯ ಮೇರೆಗೆ ಮುಂಬೈಯಲ್ಲೂ ಈ ನಿಟ್ಟಿನಲ್ಲಿ ಯಶಸ್ಸು ಸಾಧಿಸಿ ಹೊಸ ಇತಿಹಾಸ ಸೃಷ್ಟಿಸಿತು. ಮೈತ್ರಿ ಉಡುಪ ಕತ್ತಲ್‌ಸಾರ್ ಹಾಗೂ ಸುಮತಿ ಅದ್ಯಪಾಡಿ ಅವರು ಸರ್ವರೀತಿಯಲ್ಲೂ ಸಹಕರಿಸಿದರೆ, ಕೈಕಂಬದ ಸುಬ್ರಹ್ಮಣ್ಯೇಶ್ವರ ಕಲಾ ಆರ್ಟ್ಸ್ ಅವರ ವೇಷಭೂಷಣವಿತ್ತು. ಗಂಗಣ್ಣ, ಶರಣ್, ಭಾಸ್ಕರ, ಪವನ್, ಮಧುಸೂದನ್ ಅವರು ವೇಷಭೂಷಣಕ್ಕೆ ಸಹಕರಿಸಿದರು.
ಗಮನ ಸೆಳೆದ ಕೃಷ್ಣ, ಸತ್ಯಭಾಮೆಯರು - ಒಂದು ಹಾಡಿನ ಲಿಂಕ್ ಇಲ್ಲಿದೆ:
ಐದು ದಿನಗಳ ಈ ಯಶಸ್ವಿ ಯಕ್ಷಗಾನ ಯಾತ್ರೆಯ ಸವಿನೆನಪುಗಳೊಂದಿಗೆ ಯಕ್ಷಪ್ರಮೀಳೆಯರ ತಂಡವು ಊರಿಗೆ ಮರಳಿದೆ. ಎಲ್ಲರ ಒಗ್ಗಟ್ಟು, ಪ್ರಸಂಗದ ಬಗೆಗೆ ಮತ್ತು ತಮ್ಮ ಪಾತ್ರಗಳ ಬಗೆಗಿನ ಕಾಳಜಿ, ಹಗಲಿಡೀ ನಿನ್ನೆ ಹೀಗಾಗಿದೆ, ಇವತ್ತು ಸರಿಪಡಿಸಿಕೊಳ್ಳಬೇಕು ಅಂತ ಚರ್ಚಿಸಿದ್ದನ್ನು ರಂಗದಲ್ಲಿ ಜಾರಿಗೊಳಿಸಿದ ಪರಿ, ಈ ತಂಡದ ಯಶಸ್ವಿ ಪ್ರದರ್ಶನಕ್ಕೊಂದು ಆಧಾರ.
ಹಿಮ್ಮೇಳ
ಭಾಗವತರು: ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ, ಸಿಂಚನಾ ಮೂಡುಕೋಡಿ
ಚೆಂಡೆ-ಮದ್ದಳೆ: ಶ್ರಾವ್ಯಾ ತಲಕಳ, ಶಮಾ ತಲಕಳ, ಮಹತಿ ಶೆಟ್ಟಿ ಅಂಡಾಲ, ವಂದನಾ ಮಾಲೆಂಕಿ, ಶರಣ್ಯಾ ನೆತ್ತರಕೆರೆ
ಚಕ್ರತಾಳ: ಪ್ರಜ್ಞಾ ಆಚಾರ್ಯ ಮತ್ತು ಇತರ ಹಿಮ್ಮೇಳ-ಮುಮ್ಮೇಳ ಕಲಾವಿದರು
ಮುಮ್ಮೇಳದಲ್ಲಿ (ಮೊದಲ ದೇವಿ ಮಹಾತ್ಮೆಯ ಪಟ್ಟಿ ಹೀಗಿದೆ. ನಂತರದಲ್ಲಿ ಕೆಲವು ಪಾತ್ರಗಳಲ್ಲಿ ಸಣ್ಣಪುಟ್ಟ ಬದಲಾವಣೆಯಾಗಿವೆ)
ಆದಿಮಾಯೆ: ಶಾಲಿನಿ ಹೆಬ್ಬಾರ್
ಬ್ರಹ್ಮ: ವಿದ್ಯಾ ಆನಂದ್ ಭಟ್
ವಿಷ್ಣು: ವಸುಧಾ ಜಿ ಎನ್ ಬೋಳಂತೂರು
ಈಶ್ವರ: ಸಿಂಧೂರಿ ಮರಕಡ
ಮಧು: ಪುಷ್ಪಾ
ಕೈಟಭ: ಶಾಂಭವಿ
ದಿತಿ: ಮೈತ್ರಿ ಉಡುಪ
ಮಾಲಿನಿ: ಶ್ರಾವ್ಯ ತಲಕಳ
ಸುಪಾರ್ಶ್ವಕ: ದೀಕ್ಷಿತಾ
ವಿದ್ಯುನ್ಮಾಲಿ: ವೈಭವಿ ರಾವ್
ಪುರೋಹಿತ: ಪುಷ್ಪಾ
ಯಕ್ಷ: ದೀಕ್ಷಾ ಪೆರಾರ
ಮಾಲಿನಿ ದೂತ: ಪುಷ್ಪಾ
ಮಹಿಷಾಸುರ: ಶಮಾ ತಲಕಳ
ಶಂಖಾಸುರ: ಲತಾ
ದುರ್ಗಾಸುರ: ಯಶೋದಾ
ಬಿಡಲಾಸುರ: ಹರ್ಷಿತಾ
ದೇವೇಂದ್ರ: ಪಲ್ಲವಿ ಭಟ್
ದೇವಬಲ: ದೀಕ್ಷಾ, ದೀಕ್ಷಿತಾ
ಶ್ರೀದೇವಿ: ಅನನ್ಯಾ ಮುರನಗರ
ಸಿಂಹ: ಹರ್ಷಿತಾ
ಶುಂಭ: ಸ್ವಸ್ತಿಶ್ರೀ ಸಾಮಗ
ನಿಶುಂಭ: ಲತಾ ದೇವಾಡಿಗ ಪೊಳಲಿ
ಕೌಶಿಕೆ: ವೈಷ್ಣವಿ ರಾವ್
ಚಂಡ: ಶಾಂಭವಿ ದಡ್ಡಲಡ್ಕ
ಮುಂಡ: ದೀಕ್ಷಾ ಪೆರಾರ
ಧೂಮ್ರಾಕ್ಷ: ವೈಭವಿ ರಾವ್
ಕಾಳಿ: ಅನನ್ಯಾ ಮುರನಗರ
ರಕ್ತಬೀಜ: ಪೃಥ್ವಿ ಅನೀಶ್ ಆಚಾರ್ಯ
ಸಪ್ತಮಾತೃಕೆ: ವಸುಧಾ ದೀಕ್ಷಿತಾ ದೀಕ್ಷಾ
ಬೀಜಾದಿಗಳು: ಹರ್ಷಿತಾ, ವೈಭವಿ, ಪುಷ್ಪಾ, ಶಾಂಭವಿ, ಅನನ್ಯಾ
ರಕ್ತೇಶ್ವರಿ: ಶರ್ಮಿಳಾ ಪುರಂದರ
ಮೊದಲ ದೇವಿ ಮಹಾತ್ಮೆ ಪ್ರಸಂಗದ ಲಿಂಕ್ ಇಲ್ಲಿದೆ:
Tags:
ಲೇಖನ