![]() |
ಭೀಷ್ಮ-ಕೌರವ (ಪ್ರಾತಿನಿಧಿಕ ಚಿತ್ರ) |
ಪುರಾಣ ತಿಳಿಯೋಣ ಸರಣಿಯಲ್ಲಿ ದಾಮೋದರ್ ಶೆಟ್ಟಿ ಇರುವೈಲ್ ಲೇಖನ
ಒಮ್ಮೆ ಅಷ್ಟವಸುಗಳು ತಮ್ಮ ತಮ್ಮ ಪತ್ನಿಯರೊಡನೆ ಬ್ರಹ್ಮರ್ಷಿ ವಸಿಷ್ಠರ ಆಶ್ರಮಕ್ಕೆ ಹೋಗಿದ್ದರು. ವಸಿಷ್ಠರ ಆಶ್ರಮದಲ್ಲಿ ಬೇಡಿದ್ದನ್ನೆಲ್ಲ ಕ್ಷಣಾರ್ಧದಲ್ಲಿ ಒದಗಿಸಿಕೊಡಬಲ್ಲ ಕಾಮಧೇನುವಿತ್ತು. ಅಷ್ಟವಸುಗಳಲ್ಲಿ ಒಬ್ಬನಾದ ಪ್ರಭಾಸನ ಹೆಂಡತಿಗೆ ಈ ಕಾಮಧೇನುವಿನ ಮೇಲೆ ಆಸೆಹುಟ್ಟಿತು.
ಆಕೆ ತನ್ನ ಮನದಿಂಗಿತವನ್ನು ತನ್ನ ಗಂಡನಲ್ಲಿ ತೋಡಿಕೊಂಡಳು. ಪತ್ನಿಯ ಮೇಲಿನ ಅತೀವ ಪ್ರೀತಿಯಿಂದಾಗಿ ಪ್ರಭಾಸನು ಮಹರ್ಷಿಗಳ ಆಶ್ರಮದಿಂದ ಕಾಮಧೇನುವನ್ನು ಕದ್ದೊಯ್ಯಲು ತೀರ್ಮಾನಿಸಿದನು. ಉಳಿದ ವಸುಗಳೂ ಅವನಿಗೆ ಸಹಕಾರಿಗಳಾಗಲು ಸಮ್ಮತಿಸಿದರು ಮತ್ತು ಕಾರ್ಯೋನ್ಮುಖರಾದರು.
ಈ ಹಗರಣದ ಸಂಪೂರ್ಣ ವಿವರವನ್ನರಿತ ವಸಿಷ್ಠ ಮಹರ್ಷಿಗಳು ವ್ಯಗ್ರಗೊಂಡರು. ಅಷ್ಟವಸುಗಳಿಗೆ ʻʻಭೂಮಂಡಲದಲ್ಲಿ ಮಾನವರಾಗಿ ಜನಿಸಿʼʼ ಎಂದು ಶಪಿಸಿದರು. ಕೂಡಲೇ ಎಚ್ಚೆತ್ತ ವಸುಗಳು ಮಹರ್ಷಿಗಳ ಬಳಿ ಸಾರಿ ಕ್ಷಮೆಯಾಚಿಸಿದರು. ಶಾಪವನ್ನು ಹಿಂಪಡೆಯಬೇಕೆಂದು ದೈನ್ಯದಿಂದ ಬೇಡಿಕೊಂಡರು.
ಕನಿಕರಗೊಂಡ ಮಹರ್ಷಿಗಳು ಪ್ರಭಾಸನನ್ನು ಹೊರತುಪಡಿಸಿ ಇನ್ನುಳಿದ ಏಳು ವಸುಗಳ ಬೇಡಿಕೆಯನ್ನು ಮನ್ನಿಸಿದರು. ʻʻಪೂರ್ಣ ಶಾಪವನ್ನು ಹಿಂಪಡೆಯಲಾಗದಿದ್ದರೂ ಶಾಪದಲ್ಲಿ ವಿನಾಯಿತಿಯಾಗಿ ಮಾನವ ಜನ್ಮ ತಾಳಿದ ಕೂಡಲೇ ಮರಣವನ್ನಪ್ಪಿ ಮುಕ್ತಿ ಹೊಂದುವಿರಿʼʼ ಎಂದು ಸೂಚಿಸಿದರು.
ಆದರೆ ಹಗರಣಕ್ಕೆ ಪ್ರಮುಖ ಕಾರಣನಾದ ಪ್ರಭಾಸನ ಶಾಪವನ್ನು ಹಿಂಪಡೆಯಲು ಮಹರ್ಷಿಗಳು ನಿರಾಕರಿಸಿದರು. ಆದರೂ ಪ್ರಭಾಸನ ಅನೇಕ ಕೋರಿಕೆಗಳ ನಂತರ ಮೃದು ಧೋರಣೆ ತಳೆದ ಮಹರ್ಷಿಗಳು ʻʻಪ್ರಭಾಸಾ… ನೀನು ಮನುಷ್ಯನಾಗಿ ಸುದೀರ್ಘ ಜೀವನವನ್ನು ನಡೆಸಬೇಕು ಎಂಬುದು ಅನಿವಾರ್ಯ. ನಿನ್ನ ಕಾಲಘಟ್ಟದಲ್ಲಿ ನಿನ್ನನ್ನು ಸರಿಗಟ್ಟುವ ಮನುಷ್ಯರೇ ಇಲ್ಲದಂತಾಗಲಿ. ನೀನು ಹೆಸರಾಂತ ವ್ಯಕ್ತಿಯಾಗುವಂತೆ ಅನುಗ್ರಹಿಸುತ್ತೇನೆʼʼ ಎಂದರು. ಈ ಪ್ರಭಾಸನೇ ಮುಂದಿನ ಜನ್ಮದ ಭೀಷ್ಮಾಚಾರ್ಯ.
ಸಂ.: ದಾಮೋದರ ಶೆಟ್ಟಿ, ಇರುವೈಲು
Yakshagana.in ಸೇರಿಕೊಳ್ಳಿ: ವಾಟ್ಸ್ಆ್ಯಪ್ | ಟೆಲಿಗ್ರಾಂ | ಫೇಸ್‌ಬುಕ್ | ಟ್ವಿಟರ್ | ಯೂಟ್ಯೂಬ್ | ಇನ್‌ಸ್ಟಾಗ್ರಾಂ
Tags:
ಪುರಾಣ